ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ತರಹ ‘ರಿಸ್ಕ್’ ತೆಗೆದುಕೊಳ್ಳಿ

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇತಿಹಾಸದಲ್ಲಿ ಚುನಾವಣೆಯೊಂದರಲ್ಲಿ ತಾನಾಗಿಯೇ ಗೆಲುವು ತಂದುಕೊಟ್ಟ ಏಕೈಕ ‘ಗನ್’ ಬೊಫೋರ್ಸ್. ಯಂತ್ರದ ಹಿಂದಿನ ಮನುಷ್ಯ ಮುಖ್ಯ ಎಂದು ಹೇಳುತ್ತೇವಲ್ಲ; ಆ ಕಾಲಘಟ್ಟದಲ್ಲಿ ಗನ್ ಸೈಟ್‌ನಲ್ಲಿ ಇದ್ದವರು ವಿ.ಪಿ. ಸಿಂಗ್. 1988ರಲ್ಲಿ ಅಲಹಾಬಾದ್ ಉಪ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅವರನ್ನು ಸರ್ವನಾಶ ಮಾಡುವುದಾಗಿ ಅವರು ಸವಾಲು ಹಾಕಿದ್ದರು.

ಅಲಹಾಬಾದ್‌ನಲ್ಲಿ ಹೊತ್ತಿ ಉರಿದಿದ್ದ ಹಳ್ಳಿಗಳಿಗೆಲ್ಲ ಮೋಟಾರ್ ಸೈಕಲ್‌ನಲ್ಲಿ ಸಂಚರಿಸಿದ ಸಿಂಗ್, ಅಲ್ಲಲ್ಲಿ ನಿಂತು ಚುಟುಕಾಗಿ ಭಾಷಣ ಮಾಡಿ ಮುಂದೆ ಸಾಗುತ್ತಿದ್ದರು. ಅದು ಪಕ್ಕಾ ‘ಶೂಟ್ ಅಂಡ್ ಸ್ಕೂಟ್’ ಪ್ರಚಾರ ವೈಖರಿಯಾಗಿತ್ತು.

ಅವರು ಸಾರಿದ ಸಂದೇಶ ಸರಳವಾಗಿತ್ತು: ‘ನಿಮ್ಮ ಮನೆಗಳನ್ನೆಲ್ಲ ಲೂಟಿ ಮಾಡಲಾಗಿದೆ. ಹೇಗೆ ಗೊತ್ತೆ? ನೀವು ಒಂದು ಬೀಡಿಕಟ್ಟನ್ನೋ ಬೆಂಕಿಪೊಟ್ಟಣವನ್ನೋ ಕೊಂಡರೆ, ಕೊಡುವ ನಾಲ್ಕಾಣೆ ಅಥವಾ ಎಂಟಾಣೆಯ ಒಂದಿಷ್ಟು ಭಾಗ ಸರ್ಕಾರಕ್ಕೆ ತೆರಿಗೆಯಾಗಿ ಹೋಗುತ್ತದೆ. ಆ ತೆರಿಗೆ ಹಣದಲ್ಲಿ ಸರ್ಕಾರ ಆಸ್ಪತ್ರೆ, ಶಾಲೆಗಳನ್ನು ನಡೆಸುತ್ತದೆ. ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತದೆ. ಹೀಗಾಗಿ ನಿಮ್ಮ ಹಣದ ಭಾಗವನ್ನು ಯಾರಾದರೂ ಕದ್ದರೆ ಅದು ನಿಮ್ಮ ಮನೆಯಲ್ಲೇ ಆದ ಲೂಟಿಗೆ ಸಮವಲ್ಲವೇ?’

ವಿ.ಪಿ. ಸಿಂಗ್ ಇದಿಷ್ಟನ್ನೇ ಹೇಳಿದ್ದರೆ ಅದು ಅವರ ಜಾಣ್ಮೆ ಎನ್ನಬಹುದಾಗಿತ್ತು. ಅವರು ಇನ್ನೂ ಎರಡು ಅಂಶಗಳನ್ನು ಸೇರಿಸಿದರು. ಸಾಮಾನ್ಯವಾಗಿ ಎಲ್ಲ ರಾಜಕಾರಣಿಗಳು ಹೇಳುವಂತೆ, ‘ನನ್ನ ಜೇಬಿನಲ್ಲಿನ ಚೀಟಿಯಲ್ಲಿ ಬೊಫೋರ್ಸ್ ಚೋರರ ಹೆಸರುಗಳಿವೆ. ನಾನು ಅಧಿಕಾರಕ್ಕೆ ಬರುವವರೆಗೆ ಕಾಯಿರಿ; ಆಮೇಲೆ ಅವರನ್ನೆಲ್ಲ ಬಯಲಿಗೆಳೆಯುವೆ’ ಎಂದರು. ಇದು ಒಂದು ಅಂಶ.

‘ತಮಗೆ ಕೊಟ್ಟಿರುವ ಬಂದೂಕುಗಳು ಉಲ್ಟಾ ಗುಂಡುಹಾರಿಸಲಿವೆ. ಶತ್ರುಗಳ ಬದಲಿಗೆ ತಮ್ಮ ಎದೆಯನ್ನೇ ಸೀಳಲಿವೆ ಎಂದು ಗೊತ್ತಾದದ್ದೇ ಯೋಧರೆಲ್ಲ ಬೆಚ್ಚಿದ್ದಾರೆ’- ಇದು ಅವರು ಸೇರಿಸಿದ ಎರಡನೇ ಅಂಶ. ಹೀಗೆ ಹೇಳುವ ಮೂಲಕ ಜನರನ್ನು ದಡ್ಡರನ್ನಾಗಿಸಲಂತೂ ಸಾಧ್ಯವಾಗಲಿಲ್ಲ. ಆದರೆ, ಅದೇ ಜನರಿಗೆ ಒಂದಿಷ್ಟು ವಿನೋದ ಸಿಕ್ಕಿತಷ್ಟೆ.

ಮೂವತ್ತು ವರ್ಷಗಳಾದವು. ಬೊಫೋರ್ಸ್ ಹಗರಣದಲ್ಲಿ ಯಾರನ್ನೂ ಹಿಡಿಯಲು ಅಥವಾ ಶಿಕ್ಷಿಸಲು ಆಗಲಿಲ್ಲ. ಆಗ ಆರೋಪ ಹೊತ್ತವರೆಲ್ಲ ಒಂದೋ ವಿಚಾರಣೆ ಎದುರಿಸುತ್ತಿದ್ದಾರೆ ಅಥವಾ ಮೃತಪಟ್ಟಿದ್ದಾರೆ. ಬಂದೂಕಿನ ಪ್ರದರ್ಶನ ಉತ್ತಮವಾಗಿಯೇ ಇದೆ. ಕಾರ್ಗಿಲ್‌ನಲ್ಲಿ ಅದು ಗೆದ್ದು ಬಂದದ್ದು ಹಿಮ್ಮುಖವಾಗಿ ಗುಂಡು ಉಗುಳಿದ ಕಾರಣಕ್ಕಲ್ಲ. ಶಸ್ತ್ರಾಗಾರದಲ್ಲಿ ಅದು ಮುಖ್ಯ ಅಸ್ತ್ರವಾಗಿಯೇ ಉಳಿದುಕೊಂಡಿದೆ.

ಆ ಹಗರಣದ ಧ್ವನಿ ಕೇಳಿ 30 ವರ್ಷಗಳಾಗಿವೆ. ಆನಂತರ ಮತ್ತೊಂದು ಬೊಫೋರ್ಸ್‌ಗೆ ‘ಆರ್ಡರ್’ ಮಾಡಲಿಲ್ಲ. ಅದನ್ನೇ ಹೋಲುವ ‘ಧನುಷ್’ ಅನ್ನು ಪ್ರಯೋಗಕ್ಕೆ ಒಳಪಡಿಸಲಾಯಿತಷ್ಟೆ. ಬೊಫೋರ್ಸ್ ಅಪಕೀರ್ತಿ ಎಷ್ಟರ ಮಟ್ಟಿಗೆ ಇತ್ತೆಂದರೆ, ಇನ್ನೊಮ್ಮೆ ಅದರ ಬಿಡಿಭಾಗಗಳನ್ನು ಖರೀದಿಸಲಿಲ್ಲ. ಹೊಸ ಬಂದೂಕುಗಳನ್ನು ಕೊಳ್ಳುವ ಮಾತಂತೂ ಇಲ್ಲವೇ ಇಲ್ಲ. ಅಕ್ರಮವಾಗಿ ಅದನ್ನು ಬಳಸಿದ ಯಾರನ್ನೂ ವಶಪಡಿಸಿಕೊಂಡು ಜೈಲಿಗೆ ಕಳುಹಿಸಲೂ ಇಲ್ಲ.

ಭಾರತದ ಸೇನಾ ಖರೀದಿ ವ್ಯವಹಾರವು ಹಳ್ಳಿಯಲ್ಲಿ ಈರುಳ್ಳಿ ಕದ್ದು ಸಿಕ್ಕ ಕಳ್ಳನ ಕಥೆಯಂತಾಯಿತು. ‘ನೂರು ಬೂಟಿನ ಏಟು ತಿನ್ನಬೇಕು ಅಥವಾ ನೂರು ಈರುಳ್ಳಿ ತಿನ್ನಬೇಕು. ಯಾವ ಶಿಕ್ಷೆ ಬೇಕೋ ಆರಿಸಿಕೋ’ ಎಂದು ಪಂಚಾಯ್ತಿಯು ಈರುಳ್ಳಿ ಕಳ್ಳನಿಗೆ ಆದೇಶಿಸಿತು. ‘ಈರುಳ್ಳಿ ತಿನ್ನುವ ಶಿಕ್ಷೆಯೇ ಇರಲಿ’ ಎಂದು ಅವನು ಆರಿಸಿಕೊಂಡ. ಹತ್ತು ಈರುಳ್ಳಿ ತಿಂದು ಸುಸ್ತಾದದ್ದೇ ‘ಬೂಟಿನ ಏಟೇ ವಾಸಿ’ ಎಂಬ ತೀರ್ಮಾನಕ್ಕೆ ಬಂದ. ಹತ್ತು ಬೂಟೇಟು ಬಿದ್ದ ಮೇಲೆ, ಮತ್ತೆ ಈರುಳ್ಳಿ ತಿನ್ನುವ ಆಯ್ಕೆ. ಹೀಗೇ ಶಿಕ್ಷೆಯನ್ನು ಬದಲಾಯಿಸಿಕೊಳ್ಳುವ ಚಾಳಿಗೆ ಬಿದ್ದ. ಕೊನೆಗೆ ಎರಡೂ ಶಿಕ್ಷೆ ಅನುಭವಿಸಿದ.

1977ರ ನಂತರ ಸೇನಾ ಶಸ್ತ್ರಾಸ್ತ್ರಗಳ ಖರೀದಿಯನ್ನು ಭಾರತ ನಿರ್ವಹಿಸಿದ ರೀತಿಗೆ ಈ ಕಥೆಯೇ ಕನ್ನಡಿ ಹಿಡಿಯಬಲ್ಲದು. 1977ನೇ ಇಸವಿಯಲ್ಲಿ ಭಾರತ ಮೊದಲ ಸಲ ಕಾಂಗ್ರೆಸ್ಸೇತರ ಸರ್ಕಾರ ಕಂಡಿತು. ಸೋವಿಯತ್ ರಾಷ್ಟ್ರಗಳಿಂದ ಸೇನಾ ಪರಿಕರಗಳನ್ನು ಕೊಳ್ಳುವ ಪ್ರಕ್ರಿಯೆಯಿಂದ ವಿಮುಖವಾದ ವರ್ಷವೂ ಅದೇ.

ಜನತಾ ಸರ್ಕಾರ ಮೊದಲು ಅನಾವರಣಗೊಳಿಸಿದ ವ್ಯವಸ್ಥೆ ಆಂಗ್ಲೊ-ಫ್ರೆಂಚ್ ಜಾಗ್ವಾರ್. ತಕ್ಷಣವೇ ಅದೂ ವಿವಾದದ ಸೊಲ್ಲೆಬ್ಬಿಸಿತು. ವಿರೋಧಿ ಏಜೆಂಟರು ಪತ್ರಕರ್ತರಿಂದ ಪ್ರತಿರೋಧದ ಸುದ್ದಿಗಳನ್ನು ಪ್ರಕಟಿಸಲು ಯತ್ನಿಸಿದರು. ಇದೇ ‘ಗ್ರೀನ್ ಹೌಸ್ ಜರ್ನಲಿಸಂ’ನ ಪ್ರಕ್ರಿಯೆಗೆ ನಾಂದಿ ಹಾಡಿತು. ರಕ್ಷಣಾ ಕ್ಷೇತ್ರದ ಖರೀದಿಗಳ ಕುರಿತು ವರದಿ ಮಾಡುವ ಪತ್ರಿಕೋದ್ಯಮ ಇದು.

ಜಾಗ್ವಾರ್ ಕೂಡ ವಿವಾದಕ್ಕೆ ಈಡಾಯಿತು. ಕಲ್ಪಿತ ಸಾಮರ್ಥ್ಯದ ಮಟ್ಟವನ್ನು ಅದು ತಲುಪಲೇ ಇಲ್ಲ. ಅದು ಎಷ್ಟು ಉತ್ತಮ, ಸಮರ್ಥ ಎನ್ನುವ ಮಾತು ಹಾಗಿರಲಿ. ಈಗಲೂ, 40 ವರ್ಷಗಳ ನಂತರವೂ ಭಾರತೀಯ ವಾಯುಪಡೆಯಲ್ಲಿ 100ಕ್ಕೂ ಹೆಚ್ಚು ಜಾಗ್ವಾರ್‌ಗಳಿವೆ.

ಇದಾದ ನಂತರ ಇಂದಿರಾ ಗಾಂಧಿ ಸೋವಿಯತ್ ರಾಷ್ಟ್ರಗಳಿಂದಲೇ ರಕ್ಷಣಾ ಪರಿಕರಗಳ ಖರೀದಿಗೆ ಮುಂದಾದರು. ರಾಜೀವ್ ಗಾಂಧಿ ಈ ಲೆಕ್ಕಾಚಾರವನ್ನು ತೀವ್ರವಾಗಿ ಬದಲಿಸುವವರೆಗೆ ಇದು ಮುಂದುವರಿಯಿತು. ಈ ದಿನಮಾನದಲ್ಲಿ ಬೊಫೋರ್ಸ್ ಹಗರಣದ ಹಿನ್ನೆಲೆಯ ಆಕ್ರೋಶವನ್ನು ಕೆದಕಿ, ಬೇರೆ ರೀತಿ ಹೇಳುವುದು ಜನಪ್ರಿಯವಲ್ಲ ಎನ್ನುವುದು ನನಗೆ ಗೊತ್ತಿದೆ. ಆದರೂ ಆ ಅಪಾಯ ಮೈಮೇಲೆ ಎಳೆದುಕೊಂಡೇ ಹೇಳುತ್ತೇನೆ- ನಮ್ಮ ಇತಿಹಾಸದಲ್ಲಿ ನಿಜವಾದ ತ್ರಿ-ಸೇವಾ ಆಧುನೀಕರಣ (Tri- Service modernisation) ಆದದ್ದು ಇಂದಿರಾ-ರಾಜೀವ್ ಶಕೆಯಲ್ಲಿ. ದೇಶದ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4ಕ್ಕೂ ಹೆಚ್ಚು ಮೊತ್ತವನ್ನು ರಕ್ಷಣಾ ಬಜೆಟ್‌ಗೆ ತೆಗೆದಿರಿಸಲಾಯಿತು. ಅದಕ್ಕೂ ಮೊದಲು ಶೇ 2 ಅಥವಾ ಅದಕ್ಕಿಂತ ಕಡಿಮೆ ಮೊತ್ತವನ್ನು ಮಾತ್ರ ರಕ್ಷಣಾ ಕ್ಷೇತ್ರಕ್ಕೆ ಮೀಸಲಿರಿಸಲಾ

ಗುತ್ತಿತ್ತು. ಫ್ರಾನ್ಸ್‌ನಿಂದ ಮಿರಾಜ್-2000 ಅನ್ನು, ಸ್ವೀಡನ್‌ನಿಂದ ಬೊಫೋರ್ಸ್ ಅನ್ನು, ಫ್ರಾನ್ಸ್ ನಿಂದಲೇ ಮಿಲನ್ ಹಾಗೂ ಮಾತ್ರಾ ಕ್ಷಿಪಣಿಗಳನ್ನು ಹಾಗೂ ಜರ್ಮನಿಯಿಂದ ಟೈಪ್-209 ಜಲಾಂತರ್ಗಾಮಿಗಳನ್ನು ರಾಜೀವ್ ಖರೀದಿಸಿದರು. ಪ್ರತಿವ್ಯವಹಾರದಲ್ಲೂ ಹಗರಣದ ಹೊಗೆಯಾಡಿತು ಅಥವಾ ಹೊಗೆ ಆಡುವಂತೆ ಮಾಡಲಾಯಿತು. ಹೀಗಾಗಿ ಪ್ರತಿ ವ್ಯವಸ್ಥೆಯೂ ಮೊದಲ ಖರೀದಿ ಪ್ರಕ್ರಿಯೆಯ ಹಂತದಲ್ಲೇ ನಿಂತುಹೋಯಿತು. ವಾಸ್ತವದಲ್ಲಿ ತಂತ್ರಜ್ಞಾನದ ಹಸ್ತಾಂತರ ಆಗಲಿಲ್ಲ. ಸಹ ಉತ್ಪಾದನೆಯಿಂದ ಅನುಕೂಲಕರ ಮಟ್ಟಕ್ಕೆ ರಕ್ಷಣಾ ವ್ಯವಸ್ಥೆಯನ್ನು ಏರಿಸಲು ಸಾಧ್ಯವಾಗಲೇ ಇಲ್ಲ.

ರಾಜೀವ್, ಸೋವಿಯತ್ ಪರಿಕರಗಳನ್ನು ದೊಡ್ಡ ಪ್ರಮಾಣದಲ್ಲಿಯೇ ಖರೀದಿಸಿದರು. ಬಿಎಂಪಿ ಶಸ್ತ್ರಸಜ್ಜಿತ ಯುದ್ಧ ವಾಹನಗಳು, ಹೊಸ ಕಿಲೊ ಜಲಾಂತರ್ಗಾಮಿಗಳು ಇವುಗಳಲ್ಲಿ ಮುಖ್ಯವಾದವು. ಇವಷ್ಟೇ ಅಲ್ಲದೆ, ಮೊದಲ ‘ಚಕ್ರ’ ಹೆಸರಿನ ಪರಮಾಣು ಜಲಾಂತರ್ಗಾಮಿಯನ್ನು ಭೋಗ್ಯಕ್ಕೆ ಪಡೆದುಕೊಂಡರು.ಇವೆಲ್ಲಕ್ಕೂ ಹಣ ನೀಡಲು ಹೋಗಿ, ಅವರು ತಮ್ಮ ಅಧಿಕಾರವನ್ನೇ ಕಳೆದುಕೊಳ್ಳಬೇಕಾಯಿತು.

ವಿವಾದಗಳು ಅಕ್ರಮ ವ್ಯವಹಾರಗಳ ಆರೋಪಗಳೇನೇ ಇರಲಿ, ನಾನು ಸವಾಲು ಹಾಕುತ್ತೇನೆ; ಅಕಸ್ಮಾತ್ ಈಗ ಭಾರತ ಯಾರದ್ದಾದರೂ ಮೇಲೆ ಯುದ್ಧ ಸಾರಿದರೆ ಸಮರಭೂಮಿಯಲ್ಲಿ ಕಾಣುವ ಶಸ್ತ್ರಾಸ್ತ್ರಗಳಲ್ಲಿ ಬಹುಪಾಲು ಇಂದಿರಾ- ರಾಜೀವ್ ಕಾಲದಲ್ಲಿ ಕೊಂಡಂಥವೇ ಆಗಿರುತ್ತವೆ ಅಥವಾ ಆಮೇಲೆ ನರಸಿಂಹ ರಾವ್ ಮುಂದುವರಿಸಿದ ವ್ಯವಹಾರದಿಂದ ಬಂದಂಥವೇ ಆಗಿರುತ್ತವೆ. ಇದು ಕಠೋರ ಸತ್ಯ.

ಈ ವಿಷಯ ಬಹುತೇಕರಿಗೆ ಕಹಿ ಎನ್ನಿಸಬಹುದು. ಆದರೆ, ರಕ್ಷಣಾ ಪರಿಕರಗಳನ್ನು ಕೊಳ್ಳುವ ವಿಷಯದಲ್ಲಿ ಬಿಜೆಪಿ ಸರ್ಕಾರದ ದಾಖಲೆಗಳು ನಿರುತ್ಸಾಹದಾಯಕ. ಶವಪೆಟ್ಟಿಗೆ ಹಗರಣ (ಅದು ಕಪೋಲಕಲ್ಪಿತ ಹಗರಣವೇ ಸರಿ) ವಾಜಪೇಯಿ ಅವರಿಗೆ ಹೊಡೆತ ಕೊಟ್ಟಿತು. ಯುದ್ಧ ಕಾಲದ ಕೆಲವು ಅಗತ್ಯ ಪರಿಕರಗಳನ್ನು ಬಿಟ್ಟರೆ ಅವರು ಖರೀದಿಸಿದ್ದೇ ಕಡಿಮೆ. ಮೋದಿ ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿತ್ತು. 36 ರಫೆಲ್ ಯುದ್ಧ ವಿಮಾನಗಳನ್ನಷ್ಟೆ ಅವರಿಗೆ ಖರೀದಿಸಲು ಆದದ್ದು.

ಯುಪಿಎ ಸರ್ಕಾರ 126 ವಿಮಾನಗಳಿಗೆ ಒಪ್ಪಂದ ಮಾಡಿಕೊಂಡಿತ್ತಾದರೂ ಮೋದಿ ಸರ್ಕಾರ ಆ ಸಂಖ್ಯೆಯನ್ನು ಕಡಿತಗೊಳಿಸಿತು. ಉಳಿದಂತೆ ನಡೆಯುತ್ತಿರುವುದು ಹಿಂದಿನ ಸರ್ಕಾರದ ಆದೇಶಗಳನ್ನೇ ಮುಂದುವರಿಸುವ ರಕ್ಷಣಾ ವ್ಯವಹಾರಗಳಷ್ಟೆ. ರಕ್ಷಣಾ ವ್ಯವಹಾರದಲ್ಲಿ ಎ.ಕೆ. ಆ್ಯಂಟನಿ ಅವರ ಧೋರಣೆಯನ್ನು ‘ಹೊಸ ಪದರದಲ್ಲಿ ಸುತ್ತಿದ ಹಳೆ ಖರೀದಿ’ ಎನ್ನಹುದೇನೋ? ‘ಮೇಕ್ ಇಂಡಿಯಾ’ ಹಾಗೆ ಹೀಗೆ ಎಂದೆಲ್ಲ ಸಾಕಷ್ಟು ಬಿಸಿ ಬಿಸಿ ಮಾತುಕತೆಗಳು ಈಗ ನಡೆಯುತ್ತಿವೆ. ತಮಾಷೆಯೆಂದರೆ, ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಬೊಫೋರ್ಸ್ ಫೋಬಿಯಾ ಹೊತ್ತುಕೊಂಡಿರುವುದು ಬಿಜೆಪಿ.

‘ರಕ್ಷಣಾ ವ್ಯವಸ್ಥೆಯ ವಿಷಯದಲ್ಲಿ ರಾಜಿಯೇ ಇಲ್ಲ, ಅಗತ್ಯ ಪರಿಕರಗಳನ್ನು ವ್ಯವಸ್ಥೆಗೆ ಸೇರಿಸುವುದಕ್ಕೂ ಒತ್ತುನೀಡಲಾಗುವುದು’ ಎಂದು ನರೇಂದ್ರ ಮೋದಿ ಹೇಳಿದ್ದು ಬಲವಾದ ಚುನಾವಣಾ ತಂತ್ರದ ಮಾತಾಗಿ ಅಷ್ಟೇ ಉಳಿದುಬಿಟ್ಟಿತು. ಮೂರೂವರೆ ವರ್ಷದ ‘ಬ್ಯಾಲೆನ್ಸ್ ಶೀಟ್’ ನೋಡಿದರೆ ಕಾಣುವುದು ಖಾಲಿ ಖಾಲಿ.

ರಕ್ಷಣಾ ಕ್ಷೇತ್ರದ ವಿಷಯದಲ್ಲಿ ಭಯ, ನಿರ್ಧಾರ ತೆಗೆದುಕೊಳ್ಳದೇ ಹೋದದ್ದು ಹಾಗೂ ಲಕ್ಷ್ಯದ ಕೊರತೆ ಮೋದಿ ಸರ್ಕಾರದಲ್ಲಿ ಎದ್ದುಕಾಣುತ್ತದೆ. ನಾಲ್ವರು ರಕ್ಷಣಾ ಸಚಿವರು ಈಗಾಗಲೇ ಕುರ್ಚಿ ಅಲಂಕರಿಸಿದ್ದೂ ಇದಕ್ಕೆ ಪುಷ್ಟಿ ಕೊಡುತ್ತದೆ. ಮನೋಹರ ಪರಿಕ್ಕರ್, ನಿರ್ಮಲಾ ಸೀತಾರಾಮನ್ ಹಾಗೂ ಎರಡು ಹಂತದಲ್ಲಿ ಅರುಣ್ ಜೇಟ್ಲಿ ಕಾರ್ಯನಿರ್ವಹಿಸಿದ್ದನ್ನು ಕಂಡಿದ್ದೇವೆ.

ಸರ್ಕಾರ ಸಹಿ ಹಾಕಿದ ರಫೆಲ್ ಯುದ್ಧ ವಿಮಾನ ಖರೀದಿ ಯೋಜನೆ ಈಗ ವಾಗ್ದಾಳಿ ಎದುರಿಸುತ್ತಿದೆ. ಇದು ಮೋದಿ ಅವರ ಕ್ಷಮತೆಯನ್ನು ಪರೀಕ್ಷೆಗೆ ಒಡ್ಡುವುದಂತೂ ನಿಜ. ‘ನಾನು ಹಾಗೂ ನನ್ನ ಸರ್ಕಾರ (‘ನಾನಾಗಲೀ, ನನ್ನ ಕುಟುಂಬದವರಾಗಲೀ’ ಎಂದು ರಾಜೀವ್ ಹೇಳುತ್ತಿದ್ದ ರೀತಿಗಿಂತ ಬೇರೆಯಾಗಿ) ಯಾವುದೇ ತಪ್ಪು ಮಾಡಿಲ್ಲ. ಖರೀದಿಯ ವಿಷಯದಲ್ಲಿ ಮುಂದಿಟ್ಟ ಹೆಜ್ಜೆ ಹಿಂದೆ ತೆಗೆಯುವುದಿಲ್ಲ. ಅದನ್ನು ವಿಸ್ತರಿಸುತ್ತೇವೆ’ ಎಂದು ಮೋದಿ ಹೇಳಬಲ್ಲರೇ? ಇಲ್ಲವಾದರೆ, ಭಾರತೀಯ ವಾಯುಪಡೆಯ ಬಲ ಸೀಮಿತಗೊಂಡಂತಾಗುತ್ತದೆ.

ಎಸ್‌ಯು-30 ವಿಮಾನಗಳೂ 20 ವರ್ಷದಷ್ಟು ಹಳೆಯದಾಗಿವೆ. ಭೂಸೇನೆ ಹಾಗೂ ನೌಕಾಪಡೆಯ ಬಲ ವರ್ಧಿಸುವತ್ತಲೂ ಅವರು ಒತ್ತುನೀಡಬೇಕು. ಇಲ್ಲವಾದರೆ ಕೊಟ್ಟ ಮಾತಿಗೆ ಅವರು ತಪ್ಪಿದರು ಎಂದೇ ಜನ ದೂರಲಿದ್ದಾರೆ. ರಫೆಲ್ ಕುರಿತ ಚರ್ಚೆ ಹಳೆಯ ಪದಪುಂಜಗಳು ಹಾಗೂ ಮಂತ್ರಗಳನ್ನು ಹೊರಗೆಳೆದಿದೆ. ಅದರಲ್ಲಿ ಅರ್ಥಹೀನ ಎನಿಸುವ ಮಂತ್ರವೆಂದರೆ ‘ತಂತ್ರಜ್ಞಾನದ ಹಸ್ತಾಂತರ’.

ಆರು ದಶಕಗಳ ಕಾಲ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಎಚ್ಎಎಲ್ ಹಾಗೂ ಇತರ ಸಾರ್ವಜನಿಕ ವಲಯದ ಉದ್ದಿಮೆಗಳು ಆಮದು ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಇದನ್ನು ನೋಡಿದರೆ ತಂತ್ರಜ್ಞಾನದ ಹಸ್ತಾಂತರ ಸಾಕಷ್ಟು ಆಗಿರುವುದು ಸ್ಪಷ್ಟ. ಹೀಗಿದ್ದೂ ಹೆಲಿಕಾಪ್ಟರ್ ಒಂದನ್ನು ಹೊರತುಪಡಿಸಿ ಅತಿ ನಿಪುಣ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ತಂತ್ರಜ್ಞಾನದ ‘ಪಡೆದ ಜಾಣತನ’ (ಟಿಒಟಿ) ಬಳಕೆಯಾಗಿಲ್ಲ. ರೈಫಲ್‌ಗಳಿಗೆ, ಶೋಲ್ಡರ್ ಫೈರ್ಡ್ ಅಥವಾ ಮ್ಯಾನ್ ಪ್ಯಾಡ್ ಕ್ಷಿಪಣಿಗಳಿಗೆ, ಫ್ಲ್ಯಾಕ್ ಜಾಕೆಟ್ ಹಾಗೂ ಮೂಲ ಸಲಕರಣೆಗಳ ಖರೀದಿಗೆ ಈಗಲೂ ಆರ್ಡರ್ ಮಾಡುವುದು, ಅದನ್ನು ರದ್ದು ಪಡಿಸುವುದು, ಮರು ಆರ್ಡರ್ ಮಾಡುವುದು ಮುಂದುವರಿದಿದೆ.

ಟಿಒಟಿ ಎನ್ನುವುದು ದಶಕಗಳಿಂದ ಬಳಕೆಯಾಗುತ್ತಿದೆ. ನನಗೆ ಅದು boll**** ಎಂಬ ಇಂಗ್ಲಿಷ್‌ ಪದಕ್ಕಿಂತ ಮೀರಿ ಏನನ್ನೂ ಧ್ವನಿಸುತ್ತಿಲ್ಲ. ಈ ಪದದ ಕೊನೆಯ ನಾಲ್ಕು ಅಕ್ಷರಗಳನ್ನು ಸಾಂಪ್ರದಾಯಿಕ ಪತ್ರಿಕೋದ್ಯಮದಲ್ಲಿ ಬಳಸುವುದಿಲ್ಲವಾದ್ದರಿಂದ ನಾನು ಹಾಗೆಯೇ ಬಿಟ್ಟಿದ್ದೇನೆ. ಭಾರತಕ್ಕೆ ಬೇಕಿರುವುದನ್ನು ಖರೀದಿಸಿಯೇ ತೀರುತ್ತೇವೆ ಎಂದು ಮೋದಿ ಆಶ್ವಾಸನೆ ಕೊಡಬಲ್ಲರೇ? ‘ಬನಾನಾ ರಿಪಬ್ಲಿಕ್’ (ಹಮ್ ಕೊ ಯೇ ಭಿ ಬನಾನಾ ಹೈ) ತರಹದ ಪದಗಳನ್ನು ಊಹಿಸುವ ಜಾಣ್ಮೆಯಿಂದ ಹೊರಬರುವರೇ?

ರಾಜೀವ್, ಮೈಮೇಲೆ ಅಪಾಯ ಎಳೆದುಕೊಂಡಂತೆ ರಕ್ಷಣಾ ಆಧುನೀಕರಣಕ್ಕೆ ಮೋದಿ ಒತ್ತುನೀಡಬೇಕು. ಇಲ್ಲವಾದರೆ, ಸೇನೆಗಳ ಸಾಮರ್ಥ್ಯ ಕುಂದುತ್ತಿರುವುದರಿಂದ ಕ್ಸಿ ಜಿನ್ ಪಿಂಗ್ ಹಾಗೂ ಜನರಲ್ ಕಮರ್ ಬಾಜ್ವಾ ಇಬ್ಬರನ್ನೂ ಆಹ್ವಾನಿಸಿ, ಕಾಶ್ಮೀರ ಹಾಗೂ ಅರುಣಾಚಲ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ.

ಅಮೆರಿಕನ್ನರು– ನ್ಯಾಟೊ ಜತೆ ಒಪ್ಪಂದಕ್ಕೆ ಸಹಿ ಹಾಕಿ, ಭಾರತವನ್ನು ರಕ್ಷಿಸುವಂತೆ ಕೇಳಿಕೊಳ್ಳಬೇಕಾಗುತ್ತದೆ. ಎರಡನೇ ವಿಶ್ವಯುದ್ಧದ ನಂತರ ಜಪಾನ್ ಮಾಡಿದಂತೆ ಭಾರತವೂ ರಕ್ಷಣಾ ಬಜೆಟ್ ಅನ್ನು ಜಿಡಿಪಿಯ ಶೇ 1ಕ್ಕೆ ಕಡಿತಗೊಳಿಸಬೇಕಾಗುತ್ತದೆ. ಬರೀ ಶೇ 1 ಆದರೂ ಯಾಕೆ ಬೇಕು ಎನಿಸುತ್ತದಲ್ಲವೇ? ಯಾಕೆಂದರೆ, ನಮ್ಮಲ್ಲೇ ಇರುವ ಮಾವೋವಾದಿಗಳ ವಿರುದ್ಧ ಹೋರಾಡಲು ಕೆಲವರಾದರೂ ಬೇಕಲ್ಲ. ಗಣರಾಜ್ಯೋತ್ಸವದಲ್ಲಿ ಪರೇಡ್ ಮಾಡಲು ಹಾಗೂ ಸಚಿವರು ವಾರಾಂತ್ಯದಲ್ಲಿ ಪೋಸ್ ಕೊಟ್ಟು, ಸೇನಾ ನೆಲೆಗಳಲ್ಲಿ ಫೋಟೊ ತೆಗೆಸಿಕೊಳ್ಳಲಾದರೂ ಕೆಲ ಯೋಧರಾದರೂ ಇರಲೇಬೇಕಲ್ಲ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT