ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ ಮುಂದೆ ಸಣ್ಣವನಾದೆ

Last Updated 12 ಜನವರಿ 2013, 19:59 IST
ಅಕ್ಷರ ಗಾತ್ರ

ಮದ್ರಾಸ್‌ನ ಚೋಳ ಹೋಟೆಲ್‌ನಲ್ಲಿ ಫಿರೋಜ್ ಖಾನ್ ಸಿನಿಮಾ ಪಾರ್ಟಿ ಇತ್ತು. ಆಹ್ವಾನಿತರಲ್ಲಿ ನಾನೂ ಇದ್ದೆ. ಅವರು ತಮ್ಮ ಚಿತ್ರಕ್ಕೆ ಲಂಡನ್‌ನಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ ಸಂಗತಿ ಹೇಳಿಕೊಂಡರು. ಬಪ್ಪಿ ಲಹರಿ ಆ ಚಿತ್ರಕ್ಕೆ ಅಲ್ಲಿ ಹಾಡುಗಳನ್ನು ಮಾಡಿದ್ದ ಸಂಗೀತ ನಿರ್ದೇಶಕ. ಅವರನ್ನು ಅಲ್ಲಿ ಭೇಟಿಯಾಗುವ ಅವಕಾಶ ನನ್ನದಾಯಿತು. `ಆಫ್ರಿಕಾದಲ್ಲಿ ಶೀಲಾ' ಚಿತ್ರದ ಹಾಡುಗಳನ್ನು ಲಂಡನ್‌ನಲ್ಲಿಯೇ ಮಾಡಬಹುದಲ್ಲ ಎಂದು ಹೇಳುವ ಮೂಲಕ ಬಪ್ಪಿ ನನ್ನ ತಲೆಯಲ್ಲಿ ಇನ್ನೊಂದು ಹುಳ ಬಿಟ್ಟರು. ಎಲ್ಲಾ ಸರಿಯಾಗಿಯೇ ಇದ್ದಿದ್ದರೆ ರಜನೀಕಾಂತ್ ಆ ಚಿತ್ರಕ್ಕೂ ನಾಯಕರಾಗುತ್ತಿದ್ದನೋ ಏನೋ. ಆದರೆ ಅವನು ನನ್ನಿಂದ ದೂರಾಗಿದ್ದ. ಮುಂಬೈನಲ್ಲಿ ನಾಯಕನಿಗಾಗಿ ಹುಡುಕಾಟ ನಡೆಸಿದೆವು.

`ಉತ್ತಮ್' ಚಿತ್ರದಲ್ಲಿ ಆಗ ಅಭಿನಯಿಸಿದ್ದ ಶೇಖರ್ ಕಪೂರ್ ಕೂಡ ನಮ್ಮ ಬಳಿ ಪಾತ್ರ ಕೇಳಿಕೊಂಡು ಆಗ ಬಂದಿದ್ದರು. ತಮಿಳು, ತೆಲುಗು, ಹಿಂದಿ ಹಾಗೂ ನಮ್ಮ ಕನ್ನಡ ಭಾಷೆ ಎಲ್ಲಕ್ಕೂ ಹೊಂದುವಂಥ ನಾಯಕನ ಹುಡುಕಾಟದಲ್ಲಿ ನಾವಿದ್ದೆವು. ಚರಣ್‌ರಾಜ್ ಅಭಿನಯಿಸಿದ್ದ `ಪ್ರತಿಜ್ಞಾ' ಎಂಬ ಹಿಂದಿ ಚಿತ್ರ ಸೂಪರ್‌ಹಿಟ್ ಆಗಿತ್ತು. ಕನ್ನಡ, ತಮಿಳು, ತೆಲುಗು ಜನರಿಗೂ ಪರಿಚಯವಿದ್ದ ಮುಖ ಅವನದ್ದು. ಅವನೇ ನನ್ನ ಚಿತ್ರಕ್ಕೆ ಸೂಕ್ತ ನಾಯಕ ಎನ್ನಿಸಿತು.

ನಾಯಕಿಯ ಪಾತ್ರಕ್ಕೆ ಅನೇಕರನ್ನು ನೋಡಿದೆ. ಈಗ ಸಂಜಯ್ ದತ್ ಪತ್ನಿ ಆಗಿರುವ ರಿಚಾ ಶರ್ಮ ಕೂಡ ನಟಿಸಲು ಉತ್ಸಾಹ ತೋರಿದ್ದರು. ಸಂಭಾವನೆಯ ವಿಷಯದಲ್ಲಿ ನಾವು ಅಂದುಕೊಂಡಂತೆ ಆಗದ ಕಾರಣ ಅವರನ್ನು ನಾಯಕಿಯಾಗಿ ಗೊತ್ತುಪಡಿಸಲು ಆಗಲಿಲ್ಲ. ಆಮೇಲೆ ಕಂಡವಳೇ ಶಹೀಲಾ ಚೆಡ್ಡಾ. ಅವಳ ಠೀವಿ, ಎತ್ತರ, ನಿಲುವು, ನಡಿಗೆ ನೋಡಿ ಇವಳೇ ಪಾತ್ರಕ್ಕೆ ಸರಿ ಎನ್ನಿಸಿತ್ತು. ಆದರೆ ದಕ್ಷಿಣ ಆಫ್ರಿಕಾಗೆ ಹೋದಮೇಲೆ ಅವಳ ಆಯ್ಕೆ ತಂದೊಡ್ಡಿದ್ದ ಕಷ್ಟದ ಅರಿವಾಯಿತು.

ಮತ್ತೆ ಸಿನಿಮಾಗಳ ಯೋಚನೆ ಮಾಡತೊಡಗಿದರೂ ಮನಸ್ಸು ಯಾಕೋ ಸರಿ ಇರಲಿಲ್ಲ. ವಿಷ್ಣು, ರಜನಿ ದೂರಾಗಿದ್ದು ಕಾಡುತ್ತಲೇ ಇತ್ತು. ಯಾರು ಇರಲಿ ಬಿಡಲಿ, ಶೋ ಮಸ್ಟ್ ಗೋ ಆನ್ ಎಂಬ ನಂಬಿಕೆಯಿಂದ ಇನ್ನೊಬ್ಬ ನಾಯಕನನ್ನು ತಯಾರು ಮಾಡುತ್ತೇನೆ ಎಂದೆಲ್ಲಾ ಅಂದುಕೊಂಡೆ. ಆಮೇಲೆ ಗೊತ್ತಾಯಿತು, ಅದು ತಪ್ಪು ಎಂದು. ಗೊತ್ತಿಲ್ಲದೆ ನಾನು, ವಿಷ್ಣು ದೂರವಾಗಿದ್ದೆವು. ವಿಮಾನ ನಿಲ್ದಾಣದಲ್ಲಿ ಅವನು ಆಗಾಗ ಸಿಗುತ್ತಿದ್ದ. ಆದರೆ ಮಾತಾಡದೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದ. ಒಂದೇ ವಿಮಾನ ಹತ್ತಿದರೂ ಅವನು ಎಲ್ಲೋ ಕೂರುತ್ತಿದ್ದ, ನಾನು ಇನ್ನೆಲ್ಲೋ ಕೂರುತ್ತಿದ್ದೆ. ಲಿಫ್ಟ್‌ಗೆ ನಾನು ಕಾಯುತ್ತಾ ನಿಂತಿದ್ದಾಗ ಬಂದರೂ ಅವನು ಅಲ್ಲಿಂದ ಬೇರೆಡೆಗೆ ಹೋಗಿಬಿಡುತ್ತಿದ್ದ.

ಮದ್ರಾಸ್‌ನಿಂದ ಬೆಂಗಳೂರಿಗೆ ಅವನಿಗಾಗಿ ಬಂದು ಎಷ್ಟೋ ಸಲ ಅಶೋಕಾ ಹೋಟೆಲ್‌ನಲ್ಲಿ ನಾನು ಉಳಿದುಕೊಂಡದ್ದು ಇದೆ. ಆದರೆ ನಾವಿಬ್ಬರೂ ಮಾತು ಬಿಟ್ಟ ಮೇಲೆ ಆ ಹೋಟೆಲ್‌ಗೆ ಹೋದಾಗ ಸಂಕಟವಾಗುತ್ತಿತ್ತು. ಅಲ್ಲೇ ಅವನು ಇರುತ್ತಿದ್ದ. ಆದರೆ ಹತ್ತಿರ ಬರುತ್ತಿರಲಿಲ್ಲ. ಹಿಂದೆ ಅದೇ ಜಾಗದಲ್ಲಿ `ವಿಷ್ಣು ಇಲ್ಲದೆ ನಾನಿಲ್ಲ' ಎಂದು ನಾನು ಅಂದುಕೊಂಡಿದ್ದೆ. `ದ್ವಾರ್ಕಿ ಇಲ್ಲದೆ ನಾನಿಲ್ಲ' ಎಂದು ಅವನೂ ಹೇಳಿದ ದಿನಗಳಿದ್ದವು. ಹಾಗೆ ಇದ್ದ ನಮ್ಮ ಬಾಳು ಒಡೆದ ಕನ್ನಡಿ ಆಯಿತಲ್ಲ ಎಂದು ಎಷ್ಟೋ ಸಲ ನೊಂದುಕೊಂಡೆ. ಅಶೋಕಾ ಹೋಟೆಲ್‌ನ ಕಾಫಿ ಹೌಸ್‌ಗೋ, ಹೆಲ್ತ್ ಕ್ಲಬ್‌ಗೋ, ಈಜುಕೊಳಕ್ಕೋ ಅವನು ಬಂದಾಗ ನನ್ನನ್ನು ಕಂಡರೆ ತಕ್ಷಣ ಅಲ್ಲಿಂದ ಹೊರಟುಬಿಡುತ್ತಿದ್ದ.

ವಿಷ್ಣು ಹಾಗೂ ನನ್ನ ನಡುವಿನ ಕಲಹವನ್ನು ಮುದ್ರಣ ಮಾಧ್ಯಮ ಜೋರಾಗಿಯೇ ಬಿಂಬಿಸಿತು. ಆಗ ಮದ್ರಾಸ್‌ನಲ್ಲಿದ್ದ ನನ್ನ ಮನೆಗೆ ಪತ್ರಿಕಾಮಿತ್ರರು ವ್ಯಾನ್ ಮಾಡಿಕೊಂಡು ಬಂದಿದ್ದರು. ನನಗೆ ತಿಳಿದಹಾಗೆ ಅಷ್ಟೊಂದು ವರದಿಗಾರರು ಒಟ್ಟೊಟ್ಟಿಗೆ ನನ್ನ ಮನೆಗೆ ಹಿಂದೆಂದೂ ಬಂದೇ ಇರಲಿಲ್ಲ. ಎಲ್ಲರೂ ಬಂದು, `ಯಾಕೆ ಈ ತರಹ ಆಯಿತು? ಕಾರಣ ಏನು?' ಎಂದೆಲ್ಲಾ ಕೇಳಿದರು. `ನೀವಿಬ್ಬರೂ ಮತ್ತೆ ಒಂದಾಗಬೇಕು' ಎಂದು ಪ್ರೀತಿಪೂರ್ವಕ ಒತ್ತಾಯವನ್ನೂ ಮಾಡಿದರು.

ನನ್ನ ಮನೆಗೆ ಬಂದಿದ್ದ ಅವರು ಮದ್ರಾಸ್‌ನಲ್ಲೇ ಇದ್ದ ವಿಷ್ಣು ಮನೆಗೂ ಹೋಗಿದ್ದರು. ಅಲ್ಲಿಯೂ ಅದೇ ರೀತಿ ಪ್ರೀತಿಪೂರ್ವಕ ಒತ್ತಾಯ ಮಾಡಿದ್ದರು ಎನ್ನಿಸುತ್ತದೆ. ಕೊನೆಗೆ ಅವರೆಲ್ಲ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೋಗಿದ್ದರು. ನಾನು, ವಿಷ್ಣು ದೂರವಾಗಿ ಆರೇಳು ತಿಂಗಳಾದ ಮೇಲೆ ಅಷ್ಟು ಪ್ರೀತಿಯಿಂದ ಪತ್ರಿಕಾಮಿತ್ರರು ಕೇಳಿಕೊಂಡ ಆ ದಿನವನ್ನು ನಾನು ಮರೆಯಲಾರೆ.

ಮೊದಲೇ ನಾನು ಹೇಳಿದಂತೆ ಡಿಸೆಂಬರ್ 1985ರ ಮನೆಯ ಪಾರ್ಟಿ ಅದ್ದೂರಿಯಾಗಿತ್ತು. ತಮಿಳುನಾಡಿನ ಸ್ಟಾರ್‌ಗಳೆಲ್ಲಾ ಅಲ್ಲಿದ್ದರು. ಆದರೆ 1986ನೇ ಡಿಸೆಂಬರ್ ಕೊನೆಯ ದಿನ ನಮ್ಮ ಮನೆ ಬಿಕೋ ಎನ್ನುತ್ತಿತ್ತು. 100-120 ಜನ ಇದ್ದ ಸಮಾರಂಭವನ್ನು ಹಿಂದಿನ ವರ್ಷ ಕಂಡಿದ್ದ ನಾನು ಎಂಟೇ ಜನರಿದ್ದ ಮನೆಯನ್ನು ಕಂಡು ನೊಂದುಕೊಂಡೆ. ಪಾರ್ಟಿ ಮಾಡಿ ಅಭ್ಯಾಸವಿದ್ದ ನನಗೆ ಜನರಿಲ್ಲದ ಮನೆಯನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ನನ್ನ ಮಕ್ಕಳು, ಅಂಬುಜಾ ಸಮಾಧಾನ ಹೇಳಿದರು. ಆ ಸಮಯದಲ್ಲಿ ರಾಘವೇಂದ್ರ ಸ್ವಾಮಿಗೆ ಪ್ರಶ್ನೆ ಹಾಕಿದೆ: `ಯಾಕೆ ಹೀಗಾಯಿತು? ಹೋದ ವರ್ಷವೇ ಎಚ್ಚರಿಕೆ ಕೊಟ್ಟಿದ್ದೆಯಲ್ಲ. ಯಾವ ನಟನೂ ನನ್ನ ಮನೆಯಲ್ಲಿ ಇಲ್ಲವಲ್ಲ'.

ಇದ್ದಕ್ಕಿದ್ದ ಹಾಗೆ ಯಾರೋ ಬಂದು, ಮನೆ ಹತ್ತಿರದಲ್ಲೇ ಇದ್ದ ಚಿ.ಉದಯ ಶಂಕರ್ ಮನೆಗೆ ರಾಜಕುಮಾರ್ ಬಂದಿರುವ ವಿಷಯ ತಿಳಿಸಿದರು. ಉದಯ ಶಂಕರ್‌ನನ್ನು ನಾನು ಶಂಕರ ಎಂದೇ ಕರೆಯುತ್ತಿದ್ದೆ. ನನ್ನ ಮಕ್ಕಳು ಅವನ ಮನೆಗೆ ಹೋಗಿ ಬಂದು ಮಾಡುತ್ತಿದ್ದರು. ರಾಜಕುಮಾರ್ ಹಾಗೂ ಪಾರ್ವತಮ್ಮನವರು ಆಗಾಗ ಶಂಕರನ ಮನೆಗೆ ಬರುತ್ತಿದ್ದರು. ಆಗ ಅಕಸ್ಮಾತ್ತಾಗಿ ನನ್ನ ಮಕ್ಕಳನ್ನು ರಾಜಣ್ಣ ಅಲ್ಲಿ ನೋಡಿದರೆ, `ಹ್ಯಾಗಿದ್ದಾರೆ ನಿಮ್ಮಪ್ಪ... ಚೆನ್ನಾಗಿದಾರಾ?' ಎಂದು ಕೇಳುತ್ತಿದ್ದರಂತೆ.

ಶಂಕರನ ಮಗ ರವಿ ಎಂಬುವನಿದ್ದ. ಆಜಾನುಬಾಹು. ಅವನು ನನ್ನ ಐದೂ ಮಕ್ಕಳನ್ನು ಸೈಕಲ್ ಮೇಲೆ ಕೂರಿಸಿಕೊಂಡು ತುಳಿಯುತ್ತಿದ್ದ. ಅದನ್ನು ಕಂಡವರೆಲ್ಲಾ, `ತಂದೆ, ಮಕ್ಕಳು ಹೇಗಿದ್ದಾರೆ ನೋಡಿ' ಎನ್ನುತ್ತಿದ್ದರು. ಒಬ್ಬ ತಂದೆಗೆ ಇರಬೇಕಾಗಿದ್ದ ಮೈಕಟ್ಟು ಆಗಲೇ ರವಿಗೆ ಇತ್ತು. ಅಪಘಾತವೊಂದರಲ್ಲಿ ರವಿ ಹೋಗಿಬಿಟ್ಟ.

ಆ ದಿನ ರಾತ್ರಿ ರಾಜಣ್ಣ ಬಂದದ್ದನ್ನು ತಿಳಿದ ತಕ್ಷಣ ಅವರನ್ನು ಕರೆದುಕೊಂಡು ಬರುವಂತೆ ನನ್ನ ಮಗನನ್ನು ಕಳುಹಿಸಿದೆ. ನನ್ನ ಅಹಂ ಅಡಗಿರಲಿಲ್ಲವೇನೋ. ನಾನೇ ಹೋಗುವುದನ್ನು ಬಿಟ್ಟು ಮಗನನ್ನು ಕಳುಹಿಸಿಬಿಟ್ಟೆ. ಅಲ್ಲಿ ಹೋಗಿ, ಮಗ ರಾಜಣ್ಣನವರನ್ನು ಕರೆದ. ಅದನ್ನು ಕೇಳಿದ್ದೇ ಶಂಕರನಿಗೆ ಕೋಪ ಬಂತು. `ಎಂಥ ದುರಹಂಕಾರ ಅವನಿಗೆ. ತಾನು ಬರುವುದು ಬಿಟ್ಟು ಮಗನನ್ನು ಕಳುಹಿಸಿದ್ದಾನೆ' ಎಂದು ಶಂಕರ ರೇಗಿದನಂತೆ. ಆದರೆ ರಾಜಣ್ಣ, `ನಮ್ಮ ದ್ವಾರಕೀಶ್ ಅಲ್ಲವೇ, ನಡೀ ಮರಿ, ಬರ‌್ತೀನಿ' ಎಂದರಂತೆ. ಶಂಕರ ಎಷ್ಟೇ ಬೇಡವೆಂದರೂ ಕೇಳದೆ ಅವರು ಹೊರಟರಂತೆ.

ರಾತ್ರಿ 12 ಗಂಟೆ. ವರನಟ, ಕನ್ನಡದ ಕಣ್ಮಣಿ, ನನ್ನ ಹೃದಯದ ರಾಜಣ್ಣ ಮನೆಗೆ ಬಂದೇಬಂದರು. ಪಾರ್ಟಿ ಅವರಿಗೆ ಇಷ್ಟವಾಗುವುದಿಲ್ಲ. ಆದರೂ ನನ್ನ ಮೇಲಿನ ಪ್ರೀತಿಯಿಂದ ಬಂದರು. ಶಂಕರ ಕೂಡ ಅವರ ಜೊತೆ ಬಂದ. ಮಂಕಾಗಿದ್ದ ನನ್ನ ಮನೆಗೆ ಬೆಳಕು ಬಂದಹಾಗಾಯಿತು. ನನ್ನಲ್ಲಿ ಚೈತನ್ಯ. ಅವರು ಇದ್ದದ್ದು 15 ನಿಮಿಷವೇ ಆದರೂ 15 ಗಂಟೆ ಇದ್ದಷ್ಟು ಖುಷಿಯಾಯಿತು. ಯಾವ ನಟ ನನ್ನ ಮನೆಯಲ್ಲಿ ಇರದಿದ್ದರೇನಂತೆ, ಆ ಕಾಲದಲ್ಲಿ ಮೂರು ಕೋಟಿ ಕನ್ನಡಿಗರ ಆರಾಧ್ಯ ದೈವವಾಗಿದ್ದ ರಾಜಣ್ಣ ನನ್ನ ಮನೆಯಲ್ಲಿದ್ದರು.

ಆ ದಿನ ಜೀವನದ ಅತ್ಯಂತ ಸೊಗಸಾದ ದಿನವಾಯಿತು. ಅವರು ಅಂದು ಹೇಳಿದ `ಹ್ಯಾಪಿ ನ್ಯೂ ಇಯರ್' ನನಗೆ ಆಶೀರ್ವಾದವಾಯಿತು. 1987ರಲ್ಲಿ ಮತ್ತೆ ನಾನು ಚಿತ್ರಗಳನ್ನು ಮಾಡಲು ಸ್ಫೂರ್ತಿ ತಂದಿತು. ಮಾರನೆಯ ದಿನ ಅವರನ್ನು ನಾನೇ ಕರೆಯಬೇಕಿತ್ತು ಎನಿಸಿತು. ರಾಜಣ್ಣ ದೊಡ್ಡವರಾದರು, ನಾನು ಚಿಕ್ಕವನಾದೆ! 

ಮುಂದಿನ ವಾರ: `ಆಫ್ರಿಕಾದಲ್ಲಿ ಶೀಲಾ' ಹಾಡುಗಳ ರೆಕಾರ್ಡಿಂಗ್ ಲಂಡನ್‌ನಲ್ಲಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT