ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ನಾಯಕರ ನೀಡಯ್ಯಾ ತಂದೆ...

Last Updated 19 ಜೂನ್ 2016, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜಕೀಯ ಒಬ್ಬ ನಾಯಕನಿಗಾಗಿ ಕಾಯುತ್ತಿದೆ. ಹೋದ ಲೋಕಸಭಾ ಚುನಾವಣೆಗೆ ಮುನ್ನ ಇಡೀ ದೇಶ ಒಬ್ಬ ನಾಯಕನಿಗಾಗಿ ಎದುರು ನೋಡುತ್ತಿತ್ತಲ್ಲಾ, ಹಾಗೆ.

ನರೇಂದ್ರ ಮೋದಿ ಗೆಲುವಿನೊಂದಿಗೆ  ದೇಶಕ್ಕೊ೦ದು ನಾಯಕತ್ವ ಸಿಕ್ಕಿದೆ ಎ೦ದು ಅವರಿಗೆ ಮತ ನೀಡಿದವರಾದರೂ ಅ೦ದುಕೊಂಡಿದ್ದಾರೆ. ಅದನ್ನು ಎಲ್ಲರೂ ಒಪ್ಪುತ್ತಾರೋ ಬಿಡುತ್ತಾರೋ ಎನ್ನುವುದು ಬೇರೆ ವಿಷಯ. ಕರ್ನಾಟಕದ ಕತೆ ಹಾಗಿಲ್ಲ. ಒ೦ದೆರಡು ದಶಕಗಳಿಂದೀಚೆಗೆ ಇಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆದವರೂ ನಾಯಕರಾಗಿ ಬೆಳೆಯುತ್ತಿಲ್ಲ; ಕೇವಲ ರಾಜಕಾರಣಿಗಳಾಗಿಯೇ ಕಳೆದುಹೋಗುತ್ತಿದ್ದಾರೆ.

ಇಡೀ ರಾಷ್ಟ್ರದ ಗಮನ ಸೆಳೆಯುವ ನಾಯಕರಾಗಿ ಬೆಳೆಯುವ ಮಾತು ಹಾಗಿರಲಿ, ಈ ರಾಜ್ಯದ ಪರಿಧಿಯೊಳಗಾದರೂ ಜನ ಸ್ಪಷ್ಟವಾಗಿ ನಾಯಕನೆಂದು ಗುರುತಿಸುವ  ಮಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ಯಾರೊಬ್ಬರೂ ಬೆಳೆದಿಲ್ಲ.  ಕೆಲವರ ಹೆಸರು ಮತ್ತು ಮುಖ ಅವರು ಹೊಂದಿದ ಹುದ್ದೆಯ ಪ್ರಾಮುಖ್ಯತೆಯಿಂದಾಗಿ ಜನರಿಗೆ ರಾಜ್ಯದಾದ್ಯಂತ ಪರಿಚಿತವಾಗಿರಬಹುದೇ  ಹೊರತು ನಾಯಕತ್ವದ ಕಾರಣಕ್ಕಲ್ಲ. ಅದ್ಯಾಕೋ ಕರ್ನಾಟಕದ ಮಣ್ಣು ರಾಜಕೀಯ ನಾಯಕತ್ವವನ್ನು ಪೋಷಿಸಿ ಬೆಳೆಸುವ ಗುಣವನ್ನು ಕಳೆದುಕೊಳ್ಳುತ್ತಿರುವ ಹಾಗಿದೆ.

ಕರ್ನಾಟಕದ ಒ೦ದು ವಿಶೇಷ ಗಮನಿಸಿ. ಇದು ಅತ್ಯ೦ತ ಹೆಚ್ಚು ಮಾಜಿ ಮುಖ್ಯಮ೦ತ್ರಿಗಳನ್ನು ಹೊ೦ದಿದ ರಾಜ್ಯ. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಎ೦ಟು ಮ೦ದಿ ಇದ್ದಾರೆ.

ನೆರೆಯ ಕೇರಳದಲ್ಲಿ ಜೀವಿಸಿರುವುದು ಕೇವಲ ಮೂವರು ಮಾಜಿ  ಮುಖ್ಯಮಂತ್ರಿಗಳು, ಆ೦ಧ್ರ ಪ್ರದೇಶದಲ್ಲಿ (ತೆಲಂಗಾಣ ಸೇರಿ) ಇರುವುದು ಮೂವರು, ಅವರಲ್ಲಿ ಒಬ್ಬರು ಕೇವಲ ಒ೦ದು ತಿ೦ಗಳಷ್ಟೇ ಅಧಿಕಾರದಲ್ಲಿದ್ದದ್ದು ಎ೦ಬ ಕಾರಣಕ್ಕಾಗಿ ಲೆಕ್ಕಕ್ಕಿಲ್ಲ. ತಮಿಳುನಾಡಿನಲ್ಲಿರುವುದು ಇಬ್ಬರು- ಅವರಲ್ಲಿ ಒಬ್ಬರು ಡಮ್ಮಿ. ಕರ್ನಾಟಕದ ಅಷ್ಟೂ ಮ೦ದಿ ಮಾಜಿಗಳಲ್ಲಿ ಹೆಚ್ಚುಕಡಿಮೆ ಎಲ್ಲರೂ ರಾಜಕಾರಣದಲ್ಲಿ ಈಗಲೂ ಸಕ್ರಿಯರು. ಅವರಲ್ಲಿ ಒಬ್ಬರು ಮಾಜಿ ಪ್ರಧಾನಿ.

ಇನ್ನೊಬ್ಬರು ವಿದೇಶಾಂಗ ಖಾತೆಯ ಮಾಜಿ ಸಚಿವರು. ಒಬ್ಬರು ಕೇಂದ್ರ ಕಾನೂನು/ಪೆಟ್ರೋಲಿಯಂ ಖಾತೆಯ ಮಾಜಿ ಸಚಿವರು. ಒಬ್ಬರು ಕೇಂದ್ರದ  ಹಾಲಿ ಕಾನೂನು ಸಚಿವರು. ಇಷ್ಟೆಲ್ಲ ಅನುಭವ ಹೆಗಲಿಗೇರಿಸಿಕೊಂಡಿರುವ ರಾಜಕಾರಣಿಗಳ ಗಣವೇ ರಾಜ್ಯದಲ್ಲಿರುವಾಗ ಇಲ್ಲಿಯ ರಾಜಕೀಯದ ರ೦ಗು ಮತ್ತು ಜೀವಂತಿಕೆ ಇಡೀ ದೇಶದಲ್ಲೆ ಹೆಸರು ಮಾಡಬೇಕಿತ್ತು. ಇಲ್ಲಿ ಅದ್ಭುತ ರಾಜಕೀಯ ಯೋಚನೆಗಳು ಹುಟ್ಟಬೇಕಿತ್ತು, ಅರ್ಥಪೂರ್ಣ ಹೋರಾಟಗಳು ನಡೆಯಬೇಕಿತ್ತು.

ಸಹಜವಾಗಿ ಇರಿಸಿಕೊಳ್ಳಬಹುದಾದ ಈ ಎಲ್ಲಾ ನಿರೀಕ್ಷೆಗಳಿಗೂ ವ್ಯತಿರಿಕ್ತವಾಗಿ ರಾಜ್ಯದಲ್ಲಿ ನಾವು ಕಾಣುವುದು ಇಡೀ ದಕ್ಷಿಣ ಭಾರತದ ಅತ್ಯಂತ ಸಪ್ಪೆ ರಾಜಕೀಯ- ಹೋರಾಟದ ರಾಜಕೀಯವಾದರೂ ಅಷ್ಟೆ; ಆಡಳಿತದ ರಾಜಕೀಯವಾದರೂ ಅಷ್ಟೆ.  ಯಾಕೆ ಹೀಗೆ ಎ೦ದು ಕೇಳಿದರೆ ಮತ್ತೆ ನಾಯಕತ್ವದ ಕಡೆಗೆ ನೋಡಬೇಕಾಗುತ್ತದೆ.

ಮಾಜಿ ಮುಖ್ಯಮಂತ್ರಿಗಳ ಪೈಕಿ ಇಬ್ಬರಿಗೆ ಎಂಬತ್ತು ದಾಟಿದೆ. ಹೆಚ್ಚುಕಡಿಮೆ ನೇಪಥ್ಯಕ್ಕೆ ಸರಿದವರು. ಅವರನ್ನು ಮತ್ತು ಅವರ ತಲೆಮಾರಿನವರನ್ನು ಬದಿಗಿರಿಸೋಣ. ಉಳಿದ ಆರು ಮಂದಿ ಇದ್ದಾರಲ್ಲಾ ಅವರ ಸುತ್ತ ರಾಜ್ಯದ ಎರಡು ತಲೆಮಾರುಗಳ ರಾಜಕಾರಣಿಗಳು ಬೆಳೆದು ನಿಂತಿದ್ದಾರೆ. ಇವರೆಲ್ಲರ ಮಧ್ಯೆ ಒಬ್ಬನೇ ಒಬ್ಬ ಸಮರ್ಥ ನಾಯಕಇರುತ್ತಿದ್ದರೆ ಮತದಾರರ ಮುಂದೆ ಆಯ್ಕೆಯೇ ಇಲ್ಲದಿರುವ ಇಂದಿನ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಹೋದ ಚುನಾವಣೆಯಲ್ಲೇ ಮತದಾರನನ್ನು ಕಾಡಿದ ‘ಆಯ್ಕೆಯ ಬರ’ ಅಷ್ಟಿಷ್ಟಲ್ಲ. ಮು೦ದಿನ ಚುನಾವಣೆ ಹೊತ್ತಿಗೆ ಈ ಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಕೊನೆಗೆ ಅಳಿದೂರಿನಲ್ಲಿ ಉಳಿದವನನ್ನೇ ನಾಯಕ ಎ೦ದು ಜನ ಒಬ್ಬರನ್ನು ಸ್ವೀಕರಿಸುತ್ತಾರೆ. ಅದು ಹೇಗೂ ಇದ್ದೇ ಇದೆ ಬಿಡಿ...

ಈಗಿನ ಮುಖ್ಯಮಂತ್ರಿ ಮತ್ತು ಬಿಜೆಪಿಯ ಒಬ್ಬ ಮಾಜಿ ಮುಖ್ಯಮಂತ್ರಿಯವರನ್ನು  ಅದ್ಭುತ ಹೋರಾಟಗಾರರು ಮತ್ತು ಪರಿಪಕ್ವ ನಾಯಕರು ಮುಂತಾಗಿ ಮಾಧ್ಯಮಗಳು ಬಣ್ಣಿಸಿದ್ದುಂಟು. ಸ್ವಲ್ಪ ಮೇಲ್ಮೈಯನ್ನು ಕೆದಕಿ ನೋಡಿದಾಗ ಸಿಗುವ ಚಿತ್ರಣವೇ ಬೇರೆ. ಇವರಿಬ್ಬರೂ ಅವರವರ ಪಕ್ಷಗಳಿಗೆ ಅನಿವಾರ್ಯವಾಗಿರುವುದು ಅವರ ಜಾತಿಯ ಕಾರಣದಿಂದ. ಈರ್ವರೂ ಅವರವರ ಜಾತಿಗೆ ನಾಯಕರು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳಾದವರು.

ಈರ್ವರೂ ಜಾತಿಯನ್ನು ಮೀರಿದ ನಾಯಕರಾಗಿ ಈ ತನಕ ಕಾಣಿಸಿಕೊಂಡಿಲ್ಲ. ಮುಂದೆ ಆಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಆದರೆ ಪಕ್ಷದ ನಾಯಕರಾದವರನ್ನೆಲ್ಲಾ ರಾಜ್ಯದ ನಾಯಕರು ಎನ್ನುವ ಹಾಗಿಲ್ಲ. ನಾಯಕತ್ವವನ್ನು ಗುರುತಿಸಲು ಮಾಧ್ಯಮಗಳು ಬಳಸುವ ಮಾಪನಗಳೇ ವಿಚಿತ್ರವಾಗಿವೆ. ಇದು ನಾಯಕತ್ವಕ್ಕೆ ಒ೦ದು ಅರ್ಥಪೂರ್ಣ ಮಾದರಿ ಇಲ್ಲದೆ ಹೋದುದರ ಪರಿಣಾಮ ಇರಬೇಕು.

ಹೋರಾಟ ಎನ್ನುವ ಪದ ಅರ್ಥ ಕಳೆದುಕೊಂಡಿದೆ. ಒ೦ದೆರಡು ಜಾಥಾ ನಡೆಸಿದವರೆಲ್ಲರೂ ಹೋರಾಟಗಾರರು. ಆಳುವ ಪಕ್ಷವನ್ನು ಬಿಡುಬೀಸಾಗಿ ಬಯ್ದಾಡಿದವರು ಅನನ್ಯ ಸಂಸದೀಯ ಪಟುಗಳು. ರಾಜಕೀಯ ಸಮಾರಂಭಗಳಿಗೆ ಜನ ಸೇರಿಸಬಲ್ಲವ ನಾಯಕ, ಪಕ್ಷ ರಾಜಕೀಯಕ್ಕೆ ಬೇಕಾದ ಹಣ ವಸೂಲಿ ಮಾಡಿ ನೀಡುವವ ನಾಯಕ ಎ೦ಬಿತ್ಯಾದಿ ಅಧಿಕಾರ ರಾಜಕಾರಣದ ಗ್ರಹೀತಗಳನ್ನು  ಮಾಧ್ಯಮಗಳು ಪ್ರಶ್ನಿಸದೆ ಸ್ವೀಕರಿಸಿವೆ. ಇ೦ತಹ ನಾಯಕತ್ವ ಮಾಧ್ಯಮಗಳಲ್ಲಿ ಹುಟ್ಟುತ್ತದೆ. ಮಾಧ್ಯಮಗಳಲ್ಲೇ ಸಾಯುತ್ತದೆ.

ಇತರ ರಾಜ್ಯಗಳಂತೆ ಕರ್ನಾಟಕದಲ್ಲೂ ಚುನಾವಣೆಯನ್ನು ಅತ್ಯದ್ಭುತ ರೀತಿಯಲ್ಲಿ ಗೆಲ್ಲಬಲ್ಲ ಪರಿಣತ ರಾಜಕಾರಣಿಗಳಿದ್ದಾರೆ. ಒ೦ದೇ ಕ್ಷೇತ್ರದಿಂದ ಏಳೆಂಟು ಬಾರಿ ಗೆದ್ದವರಿದ್ದಾರೆ. ಕೆಲವರಂತೂ ಯಾರ ಬೆಂಬಲವೂ ಇಲ್ಲದೆ ಈ ಸಾಧನೆ ಮಾಡಿದ್ದಾರೆ ಎನ್ನುವುದು ಅಚ್ಚರಿ ಪಡಬೇಕಾದ ವಿಚಾರವೆ. ಆದರೆ ಹೀಗೆ ಗೆಲ್ಲಬಲ್ಲವರೆಲ್ಲ ನಾಯಕರಾಗುವುದಿಲ್ಲ ಎನ್ನುವುದಕ್ಕೆ ಕರ್ನಾಟಕದ ರಾಜಕಾರಣವೇ ಸಾಕ್ಷಿ. ಇಲ್ಲಿ ಹಲವು ಬಾರಿ ಗೆದ್ದ ರಾಜಕಾರಣಿಗಳು ಅವರ ಕ್ಷೇತ್ರ ಅಥವಾ ಪ್ರದೇಶದಾಚೆಗೆ ಗುರುತಿಸಲಾಗುವ ನಾಯಕರಾಗಲಿಲ್ಲ.

ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಇರುವ ಈ ಹಲವರು ಅವರವರ ಪಕ್ಷದಲ್ಲಿ ರಾಷ್ಟ್ರಮಟ್ಟದ ಹುದ್ದೆಗಳನ್ನು ಪಡೆದಿದ್ದಾರೆ. ಆದರೆ ಅವರಲ್ಲಿ ಯಾರೊಬ್ಬರೂ ರಾಜ್ಯದ ಗಡಿಯಾಚೆಗೆ ಪ್ರಭಾವಿಗಳಾಗಿ ಗುರುತಿಸಿಕೊಂಡಿದ್ದು ಕಾಣುವುದಿಲ್ಲ. ರಾಜ್ಯದಲ್ಲಿ ಸಚಿವರಾದವರು ತಮ್ಮ ತಮ್ಮ ಕ್ಷೇತ್ರಗಳ ಪರಿಧಿಯೊಳಗೆ ಮಾತ್ರ ನಾಯಕರು. ಅದರಾಚೆಗೆ ಬರೀ ಸಚಿವರು.

ಕರ್ನಾಟಕದಿಂದ ಹೋಗಿ ಕೇಂದ್ರ ಸಚಿವರಾದವರೂ ಮಾಡುವುದು ರಾಜ್ಯ ರಾಜಕೀಯವನ್ನು. ರಾಜ್ಯದಿಂದ ಒಬ್ಬರು ಪ್ರಧಾನ ಮಂತ್ರಿ ಆದದ್ದೂ ಅವರೇ ಹೇಳುವಂತೆ ಆಕಸ್ಮಿಕವಾಗಿ. ಅವರು ಆ ಅವಕಾಶವನ್ನು ಬಳಸಿ ಒಬ್ಬ ರಾಷ್ಟ್ರೀಯ ನಾಯಕರಾಗುತ್ತಿದ್ದರೋ ಏನೋ? ಆದರೆ ಚರಿತ್ರೆ ಅವರಿಗೆ ಆ ಅವಕಾಶ ನೀಡಲಿಲ್ಲ. ಪ್ರಧಾನಿ ಹುದ್ದೆಯಿಂದ ಅಲ್ಪಾವಧಿಯಲ್ಲೇ ನಿರ್ಗಮಿಸಬೇಕಾಯಿತು. ಅದೇನೇ ಇರಲಿ. ರಾಷ್ಟ್ರ ಮಟ್ಟದ ಅನುಭವ ಹೊತ್ತು ಹಿ೦ತಿರುಗಿದ ಮೇಲೆ ಅವರು ರಾಜ್ಯದಲ್ಲಿ ಮಾಡಿದ ರಾಜಕೀಯ ಎಂಥದ್ದು ಎಂದರೆ, ಅದು ನಾಯಕತ್ವ ಕುಸಿದರೆ ಯಾವ ಮಟ್ಟಕ್ಕೆ ಕುಸಿಯಬಹುದು ಎನ್ನುವುದನ್ನು ತೋರಿಸಿತು.

ಕರ್ನಾಟಕದಲ್ಲಿ 1999ರಿಂದೀಚೆಗೆ ಭಿನ್ನಮತ ತಲೆ ಎತ್ತುತ್ತಿಲ್ಲ ಎನ್ನುವುದು ರಾಜ್ಯದ ರಾಜಕೀಯ ನಾಯಕತ್ವ ಸೊರಗಿ ಸುಸ್ತಾಗಿರುವುದಕ್ಕೆ ಉದಾಹರಣೆ. ರಾಜ್ಯದ ಅಧಿಕಾರ ರಾಜಕೀಯದ ಚರಿತ್ರೆಯಲ್ಲೇ ಇಷ್ಟೊಂದು ದೀರ್ಘಾವಧಿಗೆ ಭಿನ್ನಮತ ತಲೆ ಎತ್ತದೆ ಇದ್ದದ್ದು ಇದೇ ಮೊದಲು. ರಾಜಕೀಯದಲ್ಲಿ ಭಿನ್ನಮತ ಅಸ್ಥಿರತೆಗೆ ಕಾರಣವಾಗಬಹುದು.

ಆದರೆ ಅದು ರಾಜಕೀಯ ನಾಯಕತ್ವದ ಜೀವಂತಿಕೆಯ ಕುರುಹು ಕೂಡಾ. ಯಾವ ಕಾರಣಕ್ಕೆ, ಯಾವ ಉದ್ದೇಶಕ್ಕೆ ಭಿನ್ನಮತ ಹುಟ್ಟಿಕೊ೦ಡಿತು ಎನ್ನುವುದು ಅದರ ಒಳಿತು ಮತ್ತು ಕೆಡುಕನ್ನು ನಿರ್ಧರಿಸುತ್ತದೆ. ಬಿಜೆಪಿ ಅಧಿಕಾರಾವಧಿಯಲ್ಲಿ  (2008- 2013)  ಭರ್ಜರಿ ಭಿನ್ನಮತ ನಡೆದಿತ್ತಲ್ಲಾ, ಮುಖ್ಯಮಂತ್ರಿ ಬದಲಾವಣೆಗಾಗಿ ರೆಸಾರ್ಟ್ ರಾಜಕಾರಣ ನಡೆದಿತ್ತಲ್ಲಾ ಎನ್ನುವ ಪ್ರಶ್ನೆ ಬರಬಹುದು. ಬಿಜೆಪಿ ಕಾಲದಲ್ಲಿ ಆಗಿದ್ದೇ  ಬೇರೆ.

ಅದು ಭಿನ್ನಮತವಲ್ಲ. ನಾಯಕತ್ವ ಎನ್ನುವುದು ಎಂತೆಂಥದ್ದೋ ಮರ್ಜಿಯಲ್ಲಿದ್ದ ಕಾಲವದು. ಅಸಲಿಗೆ ಬಿಜೆಪಿ ಸರ್ಕಾರ ಒ೦ದು ಪಕ್ಷದ ಸರ್ಕಾರವಾಗಿರಲಿಲ್ಲ. ಅದು ಒ೦ದು ಪಕ್ಷದ ಹೆಸರಿನಲ್ಲಿ ಕಾಣಿಸಿಕೊಂಡ ಹಲವು ಗು೦ಪುಗಳ ಸಮ್ಮಿಶ್ರ ಸರ್ಕಾರವಾಗಿತ್ತು. ಅದರಲ್ಲಿ ಒ೦ದು ಗು೦ಪು ತನ್ನ ಹಣಬಲದಿಂದ ಮೊದಲ ಮುಖ್ಯಮಂತ್ರಿಗೆ ‘ಬ್ಲ್ಯಾಕ್‌ಮೇಲ್’ ಮಾಡುತ್ತಿದ್ದುದನ್ನು ಮಾಧ್ಯಮಗಳು ಭಿನ್ನಮತ ಎ೦ದು ತಪ್ಪಾಗಿ ಕರೆದಿರಬಹುದು.

ಬಿಜೆಪಿಯ ಎರಡನೇ ಮುಖ್ಯಮಂತ್ರಿ ಬದಲಾದದ್ದರ ಹಿ೦ದೆ ಕೂಡಾ ಭಿನ್ನಮತ ಇತ್ತು ಎನ್ನುವ ಹಾಗಿಲ್ಲ. ಆಗ ಆ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಿದವರೇ ಅವರ ಬದಲಾವಣೆ ಬಯಸಿದ್ದು. ಆಗಿನ ಒಟ್ಟು ಘಟನಾವಳಿಗಳು ಸ್ಪಷ್ಟಪಡಿಸಿದ್ದು ಎ೦ದರೆ ನಾಯಕನೆಂದು ಕರೆಸಿಕೊಳ್ಳುವುದಕ್ಕೂ, ಭಿನ್ನಮತೀಯ ನಾಯಕ ಎ೦ದು ಕರೆಸಿಕೊಳ್ಳುವುದಕ್ಕೂ ಆ ಪಕ್ಷದಲ್ಲಿ ಇರುವುದು ಒಬ್ಬನೇ ಒಬ್ಬ ವ್ಯಕ್ತಿ ಎನ್ನುವ ಸತ್ಯವನ್ನು.

ನಾಯಕತ್ವ ಎ೦ದರೆ ನಿಷ್ಠುರ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ. ನಾಯಕತ್ವ ಎಂದರೆ ಜನಪರವಾದದ್ದು ಏನು ಎನ್ನುವುದನ್ನು ವಿವೇಚಿಸುವ ಪ್ರಬುದ್ಧತೆ.ಇವಿಷ್ಟು ಇದ್ದಾಗ ಮಾತ್ರ ಒಬ್ಬ ರಾಜಕಾರಣಿಗೆ ಜನರಲ್ಲಿ ಭರವಸೆ ಹುಟ್ಟಿಸುವಂತಹ ಒ೦ದು ರಾಜಕೀಯ ನುಡಿಗಟ್ಟನ್ನು ರೂಢಿಸಿಕೊಳ್ಳಲು ಸಾಧ್ಯ. ಕರ್ನಾಟಕದ ನಾಯಕತ್ವ ಮತ್ತೆ ಮತ್ತೆ ಸೋಲುತ್ತಿರುವುದು ಇಂತಹ ವಿಚಾರಗಳಲ್ಲಿ.

ನಿವೃತ್ತ ಅರಣ್ಯಾಧಿಕಾರಿ ಅ.ನ. ಯಲ್ಲಪ್ಪ ರೆಡ್ಡಿ ತಮ್ಮ ‘ಅರಸು ಯುಗದ ಅರಣ್ಯಪರ್ವ’ ಪುಸ್ತಕದಲ್ಲಿ ಒ೦ದು ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ. ದೇವರಾಜ ಅರಸು ಅರಣ್ಯ ಸ೦ರಕ್ಷಣೆಗಾಗಿ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗ ಸ್ವತಃ ಅವರ ಕ್ಷೇತ್ರದ ಜನ ಮತ್ತು ಅವರ ಪಕ್ಷದ ಮ೦ದಿ ಸರ್ಕಾರದ ವಿರುದ್ಧ ತಿರುಗಿಬಿದ್ದರಂತೆ. ವಿರೋಧ ತಾರಕಕ್ಕೇರಿದಾಗ ಒ೦ದು ಬಹಿರಂಗ ಸಭೆಯಲ್ಲಿ ಅರಸು ಅವರು ಸರ್ಕಾರ ಯಾಕೆ ಈ ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು ಎ೦ದು ವಿವರಿಸುತ್ತಾರೆ.

ಆ ನ೦ತರ ಒ೦ದು ಮಾತು ಹೇಳುತ್ತಾರೆ: ‘ಯಾರು ಏನೇ ಮಾಡಿದರೂ ನಾನು ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಈ ಕಾರಣಕ್ಕಾಗಿ ನನ್ನ ಮುಖ್ಯಮಂತ್ರಿ ಪದವಿ ಹೋದರೆ ಹೋಗಲಿ,  ಕತ್ತೆಬಾಲ’. ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾಯಕರು ಬೇಕಿಲ್ಲ. ಅದನ್ನು ರಾಜಕಾರಣಿಗಳೂ ಮಾಡಬಹುದು. ಜನಪರವಾದ ಅಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಬ್ಬ ನಾಯಕನಿಗೆ ಮಾತ್ರ ಸಾಧ್ಯ.

ಪದವಿ ಕಳೆದುಕೊಳ್ಳುವ, ಚುನಾವಣೆಯಲ್ಲಿ ಸೋಲುವ ಭಯದಿ೦ದ ಸಣ್ಣ ನಿಷ್ಠುರ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಅಧಿಕಾರಸ್ಥರು ಅಂಜುವ ಕಾಲ ಇದು. ಒಬ್ಬ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಿದರೂ ಆತನ ಜಾತಿ ತನ್ನ ವಿರುದ್ಧ ತಿರುಗಿ ಬೀಳಬಹುದು ಎಂದು ಯೋಚಿಸುವವರು ನಾಯಕರಾಗಿ ಬೆಳೆಯಲು ಸಾಧ್ಯವಿಲ್ಲ. ಇಲ್ಲಿ ಒ೦ದು ವಿಷಯ ಗಮನಿಸಬೇಕು.

ಎಲ್ಲರನ್ನೂ ಸ೦ಪ್ರೀತಗೊಳಿಸಲು ಹೋಗಿ ಯಾವ ನಿರ್ಧಾರವನ್ನೂ ಕೈಗೊಳ್ಳದ ಸರ್ಕಾರಗಳೂ ಚುನಾವಣೆಯಲ್ಲಿ ಸೋತಿವೆ. ಹಾಗಿರುವಾಗ ನಿಷ್ಠುರವಾಗಿ ನಡೆದುಕೊಳ್ಳುವುದರಿಂದ ರಾಜಕೀಯವಾಗಿ ಲಾಭವೇ ಆಗಬಹುದು. ಆದರೆ ಇದನ್ನು ಪರೀಕ್ಷಿಸುವಷ್ಟು ರಿಸ್ಕ್ ತೆಗೆದುಕೊಳ್ಳುವ ಧೈರ್ಯ ರಾಜ್ಯದ ರಾಜಕೀಯದಲ್ಲಿ ಯಾರಿಗಾದರೂ ಇದೆ ಎಂದು ಅನಿಸುವುದಿಲ್ಲ.

ಬಸ್ಸುಗಳಿಗೆ ಕಲ್ಲು ಹೊಡೆದು ಕನ್ನಡ ಉಳಿಸಲು ಸಾಧ್ಯವಿಲ್ಲ ಎ೦ಬ ಸತ್ಯವನ್ನು ಹಿ೦ದೊಮ್ಮೆ ಗಲಭೆಯ ಸ೦ದರ್ಭದಲ್ಲಿ ಒಬ್ಬ ಮಾಜಿ ಭೂಗತ ದೊರೆ ಹೇಳಿದ್ದು೦ಟು. ಇ೦ತಹ ಸರಳವಾದ ಅಪ್ರಿಯ ಸತ್ಯಗಳನ್ನೂ ‘ಬಾದಿಪ್ಪ ಕಲಿಗೆ ಕಲಿಯುಗ ವಿಪರೀತರ’ ನಾಡಿನಲ್ಲಿ ಒಬ್ಬ ಅಧಿಕಾರಸ್ಥ ರಾಜಕಾರಣಿ ಧೈರ್ಯದಿಂದ ಹೇಳಿದ್ದು ಕೇಳಿ ಎಷ್ಟೋ ಕಾಲವಾಗಿದೆ.

ಮತ್ತೆ ಈಗ ಯಾರನ್ನೋ ಮಂತ್ರಿ ಮಾಡಿಲ್ಲ ಎಂದು ಬಸ್ ಸುಡುತ್ತಿರುವವರಿಗೆ ‘ಮಂತ್ರಿಯಾಗುವುದು ಯಾರ ಜನ್ಮಸಿದ್ಧ ಹಕ್ಕೂ ಅಲ್ಲ’ ಎಂದು ಹೇಳುವವರು ಯಾರು?

ನಾಯಕತ್ವ ದುರ್ಬಲ ಮತ್ತು ದುರ್ಲಭ ಆಗುತ್ತಿರುವುದು ಕರ್ನಾಟಕದಲ್ಲಿ ಮಾತ್ರವಲ್ಲ. ಅದೊಂದು ಜಾಗತಿಕ ವಿದ್ಯಮಾನ. ಆದರೆ ಇಲ್ಲಿ ಈ ಸಮಸ್ಯೆ ಉಳಿದ ರಾಜ್ಯಗಳಿಗಿಂತ ಹೆಚ್ಚೇ ಇದ್ದ ಹಾಗಿದೆ.

ನೆರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಉದ್ದಗಲಕ್ಕೆ ದಟ್ಟ ಪ್ರಭಾವ ಹೊಂದಿರುವ ನಾಯಕರಾದರೂ ಕಾಣಿಸಿಕೊಳ್ಳುತ್ತಾರೆ.  ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು, ಕೇರಳದ ಅಚ್ಯುತಾನಂದನ್ ಅಥವಾ ಪಿಣರಾಯಿ ವಿಜಯನ್, ತಮಿಳುನಾಡಿನ ಜಯಲಲಿತಾ ಮುಂತಾದ ನಾಯಕರು ತಮ್ಮ ತಮ್ಮ ರಾಜ್ಯಗಳಲ್ಲಿ ಬೆಳೆಸಿಕೊಂಡಷ್ಟು ಮಟ್ಟದ ನಾಯಕತ್ವ ಕೂಡಾ ಕರ್ನಾಟಕದಲ್ಲಿ ಕಂಡು ಬರುತ್ತಿಲ್ಲ. ಎಲ್ಲ ರಾಜ್ಯಗಳ ರಾಜಕೀಯದಲ್ಲೂ ಜಾತಿ ಇದೆ. ಆದರೆ ರಾಜಕೀಯ ನಾಯಕತ್ವ ಜಾತಿಯೊಳಗೆ ಸಿಲುಕಿಕೊಂಡಿರುವುದು ಕರ್ನಾಟಕದಲ್ಲಿ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT