ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಆತ್ಮಗೌರವಕ್ಕೆ ಬೇಕು ಕನ್ನಡದ ದನಿ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಟಾಳ್ ನಾಗರಾಜ್ ತರಹದವರು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಇದ್ದಿದ್ದರೆ ಎಂಥ ಚಂದ ಇರುತ್ತಿತ್ತು ಅಂತ ನಾನು ಎಷ್ಟೋ ಸಲ ಅಂದುಕೊಂಡಿದ್ದಿದೆ. ಅದು, ನದಿ ನೀರು ಹಂಚಿಕೆ ವಿವಾದವೇ ಇರಲಿ, ಹಿಂದಿ ಹೇರಿಕೆಯೇ ಇರಲಿ, ಬೆಳಗಾವಿ ಗದ್ದಲವೇ ಇರಲಿ... ಸಂಸತ್ತಿನಲ್ಲಿ ಕನ್ನಡದ ದನಿಯಂತೂ ಮೊಳಗುತ್ತಿತ್ತು. ವಿಚಿತ್ರ, ವಿಶಿಷ್ಟ, ವಿನೂತನ ಪ್ರತಿಭಟನೆಗಳ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಸುದ್ದಿ ಮಾಡುವ ನಿಷ್ಣಾತ ವಾಟಾಳ್. ಎಲ್ಲ ಪೂರ್ವಗ್ರಹ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈಗ ವಾಟಾಳ್ ಇಲ್ಲದ ವಿಧಾನಸಭೆಯನ್ನೇ ಕಲ್ಪಿಸಿಕೊಳ್ಳಿ. ವಿಧಾನಮಂಡಲ ಅಧಿವೇಶನದಲ್ಲಿ ವಜುಭಾಯಿ ವಾಲಾ ತರಹದ ರಾಜ್ಯಪಾಲರು ಹಿಂದಿ ಭಾಷಣ ಮಾಡುತ್ತಿದ್ದುದನ್ನು ಕೇಳಿಕೊಂಡು ವಾಟಾಳ್ ಸುಮ್ಮನಿರುತ್ತಿದ್ದರೇ? ಇತರೆಲ್ಲ ಪಕ್ಷಗಳ ಸದಸ್ಯರೂ ಮೌನವ್ರತಕ್ಕೆ ಶರಣಾದರೂ ವಾಟಾಳ್ ಬಾಯಿ ಮುಚ್ಚಿಸುವುದಂತೂ ಸಾಧ್ಯವೇ ಇರುತ್ತಿರಲಿಲ್ಲ. ಎಷ್ಟೆಂದರೂ ಕನ್ನಡಕ್ಕೊಬ್ಬರೇ ವಾಟಾಳ್.

ಆದರೆ ಅವರದೇ ರಾಜಕೀಯ ಪಕ್ಷ ಇರುವುದರಿಂದ ಇತರ ರಾಜಕೀಯ ಪಕ್ಷಗಳು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಪ್ರಶ್ನೆಯೇ ಇಲ್ಲ. ವಾಟಾಳರ ಪಕ್ಷಕ್ಕೆ ದೆಹಲಿಗೆ ವಿಸ್ತರಿಸುವಂಥ ತಳಹದಿಯೂ ಇಲ್ಲ. ವಾಟಾಳರಂತೆ ಕನ್ನಡದ ದನಿಯಾಗುವ ಇನ್ನೋರ್ವ ರಾಜಕಾರಣಿ ಇಲ್ಲದಿರುವುದರಿಂದ ಅವರ ಹೆಸರನ್ನು ಒಂದು ಉದಾಹರಣೆಯಾಗಿ ಪ್ರಸ್ತಾಪಿಸಿದ್ದೇನೆಯೇ ಹೊರತು ಅವರೇ ಪರಮಾರ್ಹರು ಎನ್ನುವುದಲ್ಲ.

‘ವಾಟಾಳರಂಥವರನ್ನು’ ರಾಜ್ಯಸಭೆಗೆ ಆಯ್ಕೆ ಮಾಡುವುದಕ್ಕೆ ಇತರ ರಾಜಕೀಯ ಪಕ್ಷಗಳ ‘ಅನಿವಾರ್ಯ ಅಸಹಾಯಕತೆ’ ಇದ್ದರೂ ಪರಭಾಷಿಕರು, ಉದ್ಯಮಿಗಳು, ಚಲನಚಿತ್ರ ತಾರೆಯರು, ಮುಖವೇ ಇಲ್ಲದವರು ತಮ್ಮ ಮತಗಳ ಮೂಲಕವೇ ರಾಜ್ಯಸಭೆಗೆ ಆಯ್ಕೆಯಾಗುವುದಕ್ಕೆ ಇವರ‍್ಯಾರದೂ ತಕರಾರು ಇರುವುದಿಲ್ಲ. ಅಷ್ಟೇ ಅಲ್ಲ. ಕನ್ನಡದ ಸಾಕ್ಷಿಪ್ರಜ್ಞೆಗೆ ಸವಾಲು ಹಾಕಿದವರೂ ಕರುನಾಡ ನೆಲದಲ್ಲೇ ಕನ್ನಡ ಜನಪ್ರತಿನಿಧಿಗಳ ಮತ ಪಡೆದು ರಾಜ್ಯಸಭೆ ಪ್ರವೇಶಿಸುತ್ತಾರೆ. ಈಗೇನಿದ್ದರೂ ಕುದುರೆ ವ್ಯಾಪಾರ! ದೆಹಲಿ ಮಟ್ಟದಲ್ಲಿ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಬೇಕೆಂಬ ಉದ್ಯಮಿಗಳು ರಾಜ್ಯಸಭೆಯತ್ತ ಹನುಮದ್ವಿಕಾಸ ತೋರುತ್ತಿದ್ದಾರೆ. ಇವರ‍್ಯಾರಿಗೂ ಗಡಿ, ಭಾಷೆ, ನೆಲ, ಜಲ, ಸಂಸ್ಕೃತಿ, ಬದ್ಧತೆಗಳ ಹಂಗಿಲ್ಲ. ವ್ಯಾಪಾರ ವಿಸ್ತರಣೆಗಷ್ಟೇ ರಾಜ್ಯಸಭೆಯ ಸದಸ್ಯರೆಂಬ ವಿಸಿಟಿಂಗ್ ಕಾರ್ಡ್. ಅದೇ ಅವರ ಆಯುಧ. ಖಡ್ಗವೂ ಹೌದು, ಗುರಾಣಿಯೂ ಹೌದು. ತಮಿಳು ಭಾಷಿಕ ಎಂ.ಎ.ಎಂ.ರಾಮಸ್ವಾಮಿ ಎಂಬ ಕುದುರೆ ಜೂಜು ಉದ್ಯಮಿಯನ್ನು ಜೆಡಿಎಸ್ ಆಯ್ಕೆ ಮಾಡಿದರೆ, ಇದೇ ಜೆಡಿಎಸ್ ಮತ್ತು ಬಿಜೆಪಿ ಬೆಂಬಲದಿಂದ ಮಲಯಾಳಿ ಉದ್ಯಮಿ ರಾಜೀವ್ ಚಂದ್ರಶೇಖರ್ ಪಕ್ಷೇತರರಾಗಿ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ವಿದೇಶಕ್ಕೆ ಪಲಾಯನ ಮಾಡಿದ ಬ್ಯಾಂಕ್ ದೋಖಾ ಕುಖ್ಯಾತಿಯ ವಿಜಯ್ ಮಲ್ಯ ಎಂಬ ಮದ್ಯದ ಉದ್ಯಮಿ ಕೂಡ ಎರಡು ಸಲ ಪಕ್ಷೇತರರಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. 2002ರಲ್ಲಿ ಮೊದಲ ಸಲ ಪಕ್ಷೇತರರಾಗಿ ಸ್ಪರ್ಧಿಸಿದಾಗ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮಲ್ಯ ಬೆಂಬಲಕ್ಕಿತ್ತು. ಅಚ್ಚರಿಯ ಸಂಗತಿ ಎಂದರೆ ವಿವಿಧ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಈ ಉದ್ಯಮಿಗಳು ಒಂದಲ್ಲ ಒಂದು ಸಲ ಗಳಿಸಿರುವುದು. ಇವರೆಲ್ಲರ ಆಯ್ಕೆಯ ಶಕ್ತಿ ಏನೆಂಬುದು ಗುಟ್ಟಾಗಿ ಉಳಿದಿಲ್ಲ. ಸಿರಿವಂತಿಕೆಯ ಫಲವಾಗಿ ಮತಗಳ ಖರೀದಿ ಬಿಟ್ಟರೆ ಈ ಮಹಾಪುರುಷರು ಆಯ್ಕೆಯಾಗಲೇಬೇಕಾದ ವಿಶೇಷ ಕಾರಣಗಳಾದರೂ ಏನಿದ್ದವು?

ಕನ್ನಡಿಗರ ದೌರ್ಭಾಗ್ಯ ನೋಡಿ. 2006ರಲ್ಲಿ ರಾಜ್ಯದಿಂದ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕನ್ನಡದ ಸಾಕ್ಷಿಪ್ರಜ್ಞೆಯಂತಿದ್ದ ಯು.ಆರ್.ಅನಂತಮೂರ್ತಿ ಸೋಲನುಭವಿಸಿದ್ದು ಆಡಳಿತಾರೂಢ ಜೆಡಿಎಸ್-ಬಿಜೆಪಿ ಬೆಂಬಲಿತ ಮಲಯಾಳಿ ಉದ್ಯಮಿ ರಾಜೀವ್ ಚಂದ್ರಶೇಖರ್ ವಿರುದ್ಧ. 2011ರಲ್ಲಿ ನಡೆದ ಚುನಾವಣೆಯಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಕನ್ನಡದ ಹಿರಿಯ ಸಾಹಿತಿ, ಚಿಂತಕ ಕೆ.ಮರುಳಸಿದ್ದಪ್ಪ ಸೋತಿದ್ದು ಬಿಜೆಪಿಯ ಅಧಿಕೃತ ಅಭ್ಯರ್ಥಿ, ಹಿಂದಿ ಚಿತ್ರನಟಿ ಹೇಮಾಮಾಲಿನಿ ವಿರುದ್ಧ. ಗೆಲುವು ಖಾತ್ರಿ ಇಲ್ಲದ ಸಾಂಕೇತಿಕ ಹೋರಾಟಕ್ಕೆ ಮಾತ್ರ ಬುದ್ಧಿಜೀವಿ ಅಭ್ಯರ್ಥಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.

ಇತ್ತೀಚೆಗಂತೂ ರಾಜ್ಯದಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಅಥವಾ ಉಪಚುನಾವಣೆಗಳಲ್ಲಿ ಬಿಜೆಪಿ ಹೊರರಾಜ್ಯದವರಿಗೆ ಮಣೆ ಹಾಕುವುದನ್ನೇ ತನ್ನ ಪರಮಪವಿತ್ರ ಕರ್ತವ್ಯ ಎಂದು ಭಾವಿಸಿದಂತಿದೆ. ಆಂಧ್ರಪ್ರದೇಶದಲ್ಲಿ ನೆಲೆ ಇಲ್ಲದ ಬಿಜೆಪಿ ತನ್ನ ‘ರೈಮಿಂಗ್ ಸ್ಟಾರ್’ ಎಂ.ವೆಂಕಯ್ಯ ನಾಯ್ಡುಗೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ತೆಲುಗರಿಗೆ ಕನ್ನಡ ಕಲಿಯುವುದು ಸುಲಭವಾದರೂ ವೆಂಕಯ್ಯ ನಾಯ್ಡು ಮೂರು ಅವಧಿ ಕರ್ನಾಟಕವನ್ನು ಪ್ರತಿನಿಧಿಸಿದ್ದರೂ ರಾಷ್ಟ್ರೀಯ ಸ್ವಹಿತಾಸಕ್ತಿಗೆ ಮನ್ನಣೆ ನೀಡಿ ಹಿಂದಿ ಕಲಿಯುವಲ್ಲಿ ತೋರಿದ ಉತ್ಸಾಹವನ್ನು ಕನ್ನಡ ಕಲಿಯುವಲ್ಲಿ ತೋರಲಿಲ್ಲ. ಅಷ್ಟೇ ಏಕೆ? ಕನ್ನಡ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಪ್ರಮುಖ ವಿಚಾರವನ್ನೂ ರಾಜ್ಯಸಭೆಯಲ್ಲಿ ಗಟ್ಟಿದನಿಯಲ್ಲಿ ಎತ್ತಿದ ಉದಾಹರಣೆ ಇಲ್ಲ. ಕೊನೆಕೊನೆಗೆ ‘ವೆಂಕಯ್ಯ ಸಾಕಯ್ಯ’ ಆನ್‍ಲೈನ್ ಅಭಿಯಾನದ ನಂತರ ವೆಂಕಯ್ಯ ನಾಯ್ಡು ಅವರಿಂದ ಕನ್ನಡಿಗರಿಗೆ ಮುಕ್ತಿಯೇನೋ ಸಿಕ್ಕಿತು. ಆದರೆ ಪರಭಾಷಿಕರ ಹಾವಳಿ ಮಾತ್ರ ತಪ್ಪಲಿಲ್ಲ.

2016ರಲ್ಲಿ ರಾಜ್ಯದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕೃಪೆಯಿಂದ ಕನ್ನಡ ನೆಲಕ್ಕೆ ವಕ್ಕರಿಸಿದ್ದು ನಿರ್ಮಲಾ ಸೀತಾರಾಮನ್ ಎಂಬ ತಮಿಳುನಾಡಿನ ರಾಜಕಾರಣಿ. ಅವರು ಆಂಧ್ರಪ್ರದೇಶದಿಂದ 2014 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ 2016ರಲ್ಲಿ ಅವಧಿ ಮುಗಿದ ನಂತರ ಕರ್ನಾಟಕಕ್ಕೆ ವರ್ಗಾವಣೆ ಪಡೆದುಕೊಂಡರು. ಆದರೂ ಅವರ ಪರ ಇರುವವರು ಹೇಳುತ್ತಾರೆ ಅವರ ತಂದೆ ತಾಯಿ ಬೆಂಗಳೂರಿನಲ್ಲೇ ನೆಲಸಿದ್ದರೆಂದು. ಆದರೆ ಅವರಿಗೆ ಕನ್ನಡ ಭಾಷೆಯ ಗಂಧಗಾಳಿ ಇಲ್ಲ. ತೆಲುಗನ್ನು ಕಲಿತರೋ ಗೊತ್ತಿಲ್ಲ. ಅದರಲ್ಲೂ 2004ರ ರಾಜ್ಯಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಬಿಜೆಪಿ ನೀಡಿದ ನೋವು, ಮಾಡಿದ ಅವಮಾನ ಅಕ್ಷಮ್ಯ. ಎರಡನೇ ಅವಧಿಗೆ ರಾಜ್ಯದಿಂದ ಸ್ಪರ್ಧಿಸಿದ್ದ ವೆಂಕಯ್ಯ ನಾಯ್ಡು ಬಿಜೆಪಿಯ ಮೊದಲ ಅಭ್ಯರ್ಥಿ. ಸಹಜವಾಗಿಯೇ ಅವರ ಗೆಲುವು ಖಾತ್ರಿಯಾಗುವಷ್ಟು ಮತಗಳಿದ್ದವು. ಎರಡನೇ ಅಭ್ಯರ್ಥಿ ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ. ಅವರ ಗೆಲುವಿಗೆ ಅಗತ್ಯ ಮತಗಳಿರಲಿಲ್ಲ. ಕನ್ನಡಿಗರೇ ಆದ ಶಕುಂತಲಾ ಸೋತು ತೀವ್ರ ನೋವನುಭವಿಸಿದರು. ಅವರು ಆಯ್ಕೆಯಾಗಲೇಬೇಕೆನ್ನುವುದು ಬಿಜೆಪಿಯ ಪರಮೋದ್ದೇಶವಾಗಿದ್ದರೆ ಶಕುಂತಲಾ ಅವರನ್ನೇ ಮೊದಲ ಅಭ್ಯರ್ಥಿಯಾಗಿಸಬೇಕಿತ್ತು. ಬಿಜೆಪಿಗೆ ಹೆಗಡೆ ಹೆಸರು ಬಳಕೆಯಿಂದ ಬರುವ ಮತಗಳು ಬೇಕಿತ್ತೇ ಹೊರತು ಶಕುಂತಲಾ ಹೆಗಡೆಯ ಆಯ್ಕೆಯಲ್ಲ.

ರಾಜ್ಯಸಭೆಗೆ ಪರಭಾಷಿಕರನ್ನು, ಹೊರ ರಾಜ್ಯದವರನ್ನು ಆಯ್ಕೆ ಮಾಡಿ ಕಳಿಸುವ (ಯಾಕೆಂದರೆ ಅವರು ಹೊರರಾಜ್ಯದವರಾದ ಕಾರಣ, ಆಯ್ಕೆಯಾದ ನಂತರ ಕರ್ನಾಟಕದಲ್ಲಿ ಉಳಿಯುವ ಪ್ರಶ್ನೆಯೇ ಇರುವುದಿಲ್ಲ) ಕೈಂಕರ್ಯವನ್ನು 1988ರಲ್ಲಿ ರಾಮ್‍ ಜೇಠ್ಮಲಾನಿ ಮೂಲಕ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೇ ಮಾಡಿ ಕೃತಾರ್ಥರಾಗಿದ್ದರು. ವಿವಿಧ ಹಗರಣಗಳಲ್ಲಿ ಸಿಲುಕಿದ ಹೆಗಡೆ ಅವರಿಗೆ ವಕೀಲರಾಗಿ ಸೇವೆ ಸಲ್ಲಿಸಿದ್ದ ಜೇಠ್ಮಲಾನಿ ಅವರ ಋಣವನ್ನು ಹೆಗಡೆ ಈ ರೀತಿ ತೀರಿಸಿದ್ದರು. ಕನ್ನಡದ ಪ್ರಾತಿನಿಧ್ಯ ಎಂದರೆ ರಾಜಕಾರಣಿಗಳ ಆಸ್ತಿಯೂ ಅಲ್ಲ, ಅವರ ಯಜಮಾನಿಕೆಗೂ ಅವಕಾಶ ಇರಕೂಡದು. ರಾಜ್ಯವನ್ನು ಕನ್ನಡಿಗರೇ ಪ್ರತಿನಿಧಿಸುವ ಅವಕಾಶ ಕಿತ್ತುಕೊಳ್ಳುವ ಅಧಿಕಾರ ರಾಜಕೀಯ ಮುಖಂಡರಿಗೆ ಕೊಟ್ಟವರ‍್ಯಾರು? ನಮ್ಮ ಮೌನ ಅವರಿಗೆ ಹಸಿರು ನಿಶಾನೆಯಾಗಿಬಿಟ್ಟಿದೆ. ಪರಭಾಷಿಕರಿಗೆ ಮಣೆ ಹಾಕಬೇಕೆನ್ನುವುದು ಯಾವತ್ತೂ ಕನ್ನಡಿಗರ ಒಕ್ಕೊರಲ ಅಪೇಕ್ಷೆಯಾಗಿರ
ಲಿಲ್ಲ. ಅದು ರಾಜಕೀಯ ಮುಖಂಡರ ವ್ಯಾವಹಾರಿಕ ಅನುಕೂಲಸಿಂಧು ರಾಜಕಾರಣದ ಲೆಕ್ಕಾಚಾರವನ್ನು ಅವಲಂಬಿಸಿದ ಅಪೇಕ್ಷೆಯಾಗಿರುತ್ತಿತ್ತು.

ಹೊರ ರಾಜ್ಯದವರನ್ನು ಕನ್ನಡ ನೆಲದಲ್ಲಿ ಕಣಕ್ಕಿಳಿಸುವ ಕಾಯಿಲೆ ಕಾಂಗ್ರೆಸ್ಸಿಗರಿಂದಲೇ ಶುರುವಾಗಿದೆ. 1962ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಉತ್ತರಪ್ರದೇಶದ ಅಂದಿನ ಕಾಂಗ್ರೆಸ್ ಮುಖಂಡ, 1952 ರಲ್ಲಿ ಜವಾಹರಲಾಲ್ ನೆಹರೂ ಸಂಪುಟದಲ್ಲಿ ಸಚಿವರಾಗಿದ್ದ ಅಜಿತ್ ಪ್ರಸಾದ್ ಜೈನ್, 1978ರಲ್ಲಿ ಚಿಕ್ಕಮಗಳೂರಿನಿಂದ  ಇಂದಿರಾ ಗಾಂಧಿ, 1980 ರಲ್ಲಿ ಕಲಬುರ್ಗಿಯಿಂದ ನೆಹರೂ ಕುಟುಂಬದ ಭಂಟ ಸಿ.ಎಂ.ಸ್ಟೀಫನ್ ಆಯ್ಕೆಯಾಗಿದ್ದರು.

ಅದೇನೇ ಇರಲಿ. ರಾಜ್ಯಸಭೆ ಅಥವಾ ವಿಧಾನಪರಿಷತ್ ಎಂದರೆ ಒಂದರ್ಥದಲ್ಲಿ ಚಿಂತಕರ ಚಾವಡಿ. ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರನ್ನು ಗುರುತಿಸಿ ಮಾರ್ಗದರ್ಶನಕ್ಕೆ ಬಳಸಿಕೊಳ್ಳಬೇಕೆನ್ನುವುದು ಈ ಎರಡೂ ಮನೆಗಳ ಮೂಲ ಆಶಯ. ಯಾಕೆಂದರೆ ಬಹುತೇಕ ರಾಜಕಾರಣಿಗಳಿಗೆ ಸದಭಿರುಚಿಯ ಕೊರತೆ ಇದೆ. ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಾಡುವ ನಾಮಕರಣದಲ್ಲಿ ಎಲ್ಲ ರಾಜ್ಯಗಳ ಅಪೂರ್ವ ಪ್ರತಿಭೆಗಳು, ಕ್ರಿಯಾಶೀಲರು ಸ್ಥಾನ ಪಡೆಯುವುದು ಸಾಧ್ಯವೇ ಇಲ್ಲ. ಹೀಗಾಗಿ ದೇಶದ ದೈತ್ಯ ಪ್ರತಿಭೆಗಳ ಚಿಂತನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ವಾತಾವರಣ ರೂಪಿಸುವ ಜವಾಬ್ದಾರಿ ರಾಜಕಾರಣಿಗಳ ಮೇಲಿದೆ. ಭಾಷಾ ಬಾಂಧವ್ಯಕ್ಕೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವವರು, ಕೋಮು ಸಾಮರಸ್ಯಕ್ಕೆ ಶ್ರಮಿಸುತ್ತಿರುವವರು, ಜಾಗತಿಕ ಮನ್ನಣೆ ಪಡೆದ ವಿಜ್ಞಾನಿ, ಅರ್ಥಶಾಸ್ತ್ರಜ್ಞ, ಸಮಾಜವಿಜ್ಞಾನಿಗಳು ಈ ದೇಶದ ಮುನ್ನಡೆಗೆ ಕೊಡುಗೆಯಾಗುತ್ತಾರೆಂದರೆ ಅವರು ಪರಭಾಷಿಕರೋ, ಅನ್ಯ ರಾಜ್ಯದವರೋ ಅನ್ನುವುದೂ ಮುಖ್ಯವಾಗುವುದಿಲ್ಲ. ಅಂಥವರ ಆಯ್ಕೆ ಒಂದು ನಾಡಿನ ಹೆಮ್ಮೆಯಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದೇನೂ ಕಾನೂನುಬಾಹಿರವಲ್ಲವಾದರೂ ಕೇವಲ ರಾಜಕೀಯ ಲೆಕ್ಕಾಚಾರಗಳಿಂದ ಯಾರ‍್ಯಾರನ್ನೋ ಇನ್ನೊಂದು ರಾಜ್ಯದಿಂದ ಕಣಕ್ಕಿಳಿಸುವುದು ಆ ರಾಜ್ಯದ ಜನರಿಗೆ ಮಾಡುವ ಅವಮಾನ.

ಬರುವ ಏಪ್ರಿಲ್ 2 ರಂದು ರಾಜ್ಯದ ನಾಲ್ವರು ಸದಸ್ಯರು ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿದ್ದು ಅದರಲ್ಲಿ ಇಬ್ಬರು ಬಿಜೆಪಿ, ಓರ್ವ ಕಾಂಗ್ರೆಸ್ ಮತ್ತು ಓರ್ವ ಪಕ್ಷೇತರ ವೇಷ ತೊಟ್ಟ ಬಿಜೆಪಿ ಅತ್ಮದ ಸದಸ್ಯರಿದ್ದಾರೆ. ಈಗಿನ ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್ ಸುಲಭವಾಗಿ ಇಬ್ಬರು ಅಭ್ಯರ್ಥಿಗಳನ್ನು ಮತ್ತು ಸ್ವಲ್ಪ ಪ್ರಯತ್ನಿಸಿದರೆ ಮೂರನೇ ಅಭ್ಯರ್ಥಿಯನ್ನೂ ಗೆಲ್ಲಿಸುವ ಸಾಮರ್ಥ್ಯ ಹೊಂದಿದೆ. ಬಿಜೆಪಿ ಮತ್ತು ಜೆಡಿಎಸ್ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯು ನಾಲ್ಕನೇ ಸ್ಥಾನದ ಗೆಲುವನ್ನು ನಿರ್ಧರಿಸಬಹುದು. ಸಂಖ್ಯಾಬಲ ಕುರಿತ ವಿಸ್ತೃತ ಚರ್ಚೆಗೆ ನಾನು ಹೋಗುವುದಿಲ್ಲ. ಅದೀಗ ನನ್ನ ಉದ್ದೇಶವೂ ಅಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಗೆಲುವಿನ ಖಾತ್ರಿ ಇಲ್ಲದ ಸಂದರ್ಭಗಳಲ್ಲಿ ಸಾಂಕೇತಿಕ ಹೋರಾಟಕ್ಕೆ ಇಳಿಸುವ ಪಕ್ಷಾತೀತ ಚಿಂತಕರಿಗೆ ಈಗಲಾದರೂ ಗೆಲುವನ್ನು ಖಾತ್ರಿಪಡಿಸಬೇಕು. ಸಾಮಾನ್ಯವಾಗಿ ಪ್ರಬಲ ಮತ್ತು ಪ್ರಭಾವಿ ಜಾತಿಗಳಿಗೇ ಅವಕಾಶ ನೀಡುವ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಯಾವುದೇ ಇರಲಿ ಈ ಸಲವಾದರೂ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ರಾಜಕೀಯ ಪ್ರಾತಿನಿಧ್ಯವೇ ಇಲ್ಲದ ನಿರ್ಲಕ್ಷಿತ ಅತಿ ಸಣ್ಣ ಜಾತಿಗಳಿಗೆ ಸೇರಿದ ಪ್ರತಿಭೆಗಳತ್ತ ಕಣ್ಣು ಹಾಯಿಸಿ ಕನ್ನಡದ ಜೀವಂತ ದನಿಯೊಂದು ರಾಜ್ಯಸಭೆಯಲ್ಲಿ ಮೊಳಗುವಂತೆ ಮಾಡಬೇಕು. ಕನ್ನಡ ದನಿ ಎಂದರೆ ಅದು ಕೇವಲ ಕನ್ನಡ ಹೋರಾಟಗಾರರೆಂಬುದಲ್ಲ. ಕನ್ನಡದ ದನಿ ಎಂದರೆ ಕನ್ನಡ ಪರಂಪರೆಯನ್ನು ಶಕ್ತವಾಗಿ ಪ್ರತಿಧ್ವನಿಸುವಂತೆ ಮಾಡುವ ಸ್ವಾಭಿಮಾನದ ದನಿ; ವರ್ತಮಾನದ ಆಗುಹೋಗುಗಳಲ್ಲಿ ಕನ್ನಡಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವ ದನಿ. ಈ ಮೂಲಕ ಪಕ್ಷಾತೀತ ಪ್ರತಿಭೆಗಳು ರಾಜ್ಯಸಭೆಯಲ್ಲಿ ಕನ್ನಡ ದೀವಿಗೆಯ ಬೆಳಕು ಚೆಲ್ಲಬೇಕು. ಮತ್ತೆ ಉದ್ಯಮಿಗಳನ್ನೋ, ಪರಭಾಷಿಕರನ್ನೋ ಕರೆತಂದರೆ ಕನ್ನಡಿಗರೇ ನಮ್ಮ ನಾಡಿನ ನಾಯಕರಿಗೆ ಪಾಠ ಕಲಿಸಲು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT