ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಪಾಳಿ ನಿರ್ಬಂಧ ತೆರವು ಪ್ರಗತಿಗೆ ಪೂರಕ

Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಆರ್ಥಿಕ ಬೆಳವಣಿಗೆ ಹಾಗೂ ಮಹಿಳೆಯರ ವಿಮೋಚನೆ ಸಮಸಮವಾಗಿ ಸಾಗುತ್ತವೆ ಎಂಬುದು ಚಾಲ್ತಿಯಲ್ಲಿರುವ ನಂಬಿಕೆ. ಆದರೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಓ) ಕಲೆ ಹಾಕಿರುವ ಮಾಹಿತಿ, ಭಾರತಕ್ಕೆ ಸಂಬಂಧಿಸಿದಂತೆ ಬೇರೆಯದೇ ಕಥೆ ಹೇಳುತ್ತದೆ.

ಇದು ವಿಚಿತ್ರ. 2004ರಿಂದ 2011ರವರೆಗೆ ಸರಾಸರಿ ಶೇ 7ರ ಆರೋಗ್ಯಕರ ವೃದ್ಧಿದರದೊಂದಿಗೆ ಭಾರತದ ಆರ್ಥಿಕತೆ ಬೆಳವಣಿಗೆ ಸಾಧಿಸಿತು. ಆದರೆ ರಾಷ್ಟ್ರದ ಔದ್ಯೋಗಿಕ ವಲಯದಲ್ಲಿ ಮಾತ್ರ ಮಹಿಳೆಯರ ಪಾಲ್ಗೊಳ್ಳುವಿಕೆ ಸುಮಾರು ಶೇ 35ರಿಂದ ಶೇ 25ಕ್ಕೆ ಇಳಿಮುಖವಾಯಿತು. ಇದೊಂದು ದೊಡ್ಡ ಒಗಟು.

ಕಳೆದ ಕೆಲವು ದಶಕಗಳಲ್ಲಿ ಮಹಿಳೆಯರ ಶಿಕ್ಷಣ ಮಟ್ಟ ಸುಧಾರಿಸಿದೆ. ಹೀಗಿದ್ದೂ ಉದ್ಯೋಗಗಳಿಂದ ಮಹಿಳೆ ದೂರ ಉಳಿಯುತ್ತಿದ್ದಾಳೆಯೆ? ಇದಕ್ಕೆ ಕಾರಣ ಏನು? ಭಾರತೀಯ ಸಮಾಜದಲ್ಲಿ ಬೇರೂರಿರುವ ಲಿಂಗತ್ವ ಪೂರ್ವಗ್ರಹಗಳೇ ಮುಖ್ಯ ಕಾರಣ ಎನ್ನಲಾಗುತ್ತದೆ.

ಪುರುಷ ಉದ್ಯೋಗಿಗಳಲ್ಲಿ ಸಂಪಾದನೆಯ ಹೆಚ್ಚಳ, ಮಹಿಳೆಯ ಆರ್ಥಿಕ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವುದಿಲ್ಲ. ಅದರಲ್ಲೂ ಮಹಿಳೆಗೆ ಸೂಕ್ತವಲ್ಲ ಎಂಬಂಥ ಧೋರಣೆಗಳು ಕೆಲವು ಉದ್ಯೋಗಗಳ ಬಗ್ಗೆ ಇದ್ದೇ ಇವೆ. ಹೀಗಾದಾಗ ಸಹಜವಾಗಿಯೇ ಮಹಿಳಾ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಅನುವಾಗುವಂತೆ ಕರ್ನಾಟಕ ಸರ್ಕಾರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವುದು ಸಕಾರಾತ್ಮಕವಾದದ್ದು.

ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ವಿಸ್ತರಿಸುವುದಲ್ಲದೆ ಮಹಿಳೆಯರ ವಿರುದ್ಧದ ತಾರತಮ್ಯ ಅಂತ್ಯಕ್ಕೆ ಇಂತಹದೊಂದು ನೀತಿ ದೀರ್ಘಾವಧಿಯಲ್ಲಿ ಸಹಾಯಕ.ಕರ್ನಾಟಕ ಅಂಗಡಿ ಹಾಗೂ ವಾಣಿಜ್ಯ ಮುಂಗಟ್ಟು ಕಾಯಿದೆ, 1961 ಹಾಗೂ 1948ರ ಕಾರ್ಖಾನೆ ಕಾಯಿದೆ ಪ್ರಕಾರ ರಾತ್ರಿ 8ರಿಂದ ಬೆಳಗಿನ ಜಾವ 6ರವರೆಗೆ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ಇಲ್ಲ.

ಸುಮಾರು 10 ವರ್ಷಗಳ ಹಿಂದೆ ಐಟಿ ಹಾಗೂ ಐಟಿ ಆಧರಿತ ಸೇವಾ ವಲಯಗಳಲ್ಲಿ ರಾತ್ರಿ ಪಾಳಿಗಳಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶವಾಗುವಂತೆ ಈ ಕಾನೂನುಗಳಿಗೆ ಕರ್ನಾಟಕ ಸರ್ಕಾರ ತಿದ್ದುಪಡಿ ತಂದಿತು. ಈಗ ತಯಾರಿಕಾ ವಲಯಗಳಲ್ಲೂ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ಕಲ್ಪಿಸುವ ಮೂಲಕ ಕರ್ನಾಟಕ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ. ಈಗಾಗಲೇ ರಾಜಸ್ತಾನ ಹಾಗೂ ಮಹಾರಾಷ್ಟ್ರ ಸರ್ಕಾರಗಳೂ ಈ ನಿಟ್ಟಿನಲ್ಲಿ ಅಡಿ ಇರಿಸಿವೆ ಎಂಬುದನ್ನೂ ಮರೆಯುವಂತಿಲ್ಲ.

ಹಣ ಹೂಡಿಕೆಯ ತಾಣ ಎಂಬಂತಹ ವರ್ಚಸ್ಸು ಇದರಿಂದ ಕರ್ನಾಟಕಕ್ಕೆ ದಕ್ಕಲಿದೆ. ಉದ್ಯಮಶೀಲತೆ ಬೆಳವಣಿಗೆಗೂ ಪರೋಕ್ಷವಾಗಿ ದಾರಿಯಾಗಲಿದೆ. ಗಾರ್ಮೆಂಟ್ ಉದ್ಯಮದಲ್ಲಿ ಕಾರ್ಮಿಕ ಶಕ್ತಿಯ ಶೇ 60ರಷ್ಟು ಮಹಿಳೆಯರಿದ್ದಾರೆ. ಜವಳಿ ಉದ್ಯಮದಲ್ಲಿ ಶೇ 50ರಷ್ಟಿದ್ದಾರೆ. ರಾತ್ರಿ ಪಾಳಿಗಳಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವುದು ಇನ್ನು ಮುಂದೆ ಈ ಸಂಸ್ಥೆಗಳಿಗೆ ಸಾಧ್ಯವಾಗುವುದರಿಂದ ಈ ಕೈಗಾರಿಕೋದ್ಯಮಗಳಲ್ಲಿ ಉತ್ಪಾದಕತೆ ಹೆಚ್ಚಾಗಬಹುದು. ರೀಟೇಲ್, ಆತಿಥ್ಯ ಹಾಗೂ ಫಾರ್ಮಾ ಕ್ಷೇತ್ರಗಳಿಗೂ ಅನುಕೂಲವಾಗಲಿದೆ. 

ಮಹಿಳಾ ಸುರಕ್ಷತೆ ಸಮಸ್ಯೆ ಹಾಗೂ ಸಾಂಸ್ಕೃತಿಕ ಪೂರ್ವಗ್ರಹಗಳಿಂದಾಗಿ ಮಹಿಳೆಯರಿಗೆ ರಾತ್ರಿ ಪಾಳಿ ಅವಕಾಶ ನೀಡುವ ವಿಚಾರದಿಂದ ಸರ್ಕಾರಗಳು ಹಿಂದೆ ಸರಿದಿದ್ದವು.ಆದರೆ ಇದು ಮಹಿಳೆಯರ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡಿಬಿಡುತ್ತದೆ. ಹೀಗಾಗಿ ಮಹಿಳೆಯರು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕಾದ ಪರಿಸ್ಥಿತಿಗಳನ್ನು ಸೃಷ್ಟಿಸಬೇಕಾದದ್ದು ಅವಶ್ಯ. ಕರ್ನಾಟಕ ಈ ದಿಸೆಯಲ್ಲಿ ಕಡೆಗೂ ಹೆಜ್ಜೆ ಇಟ್ಟಿದೆ.

ಉದ್ಯಮಗಳಲ್ಲಿ ರಾತ್ರಿ ಪಾಳಿಗಳಲ್ಲಿ ಮಹಿಳೆಯರ ನಿಯೋಜನೆಗೆ ಉದ್ಯೋಗದಾತರಿಗೆ ಆಯ್ಕೆಯನ್ನು ನೀಡಿರುವುದಲ್ಲದೆ ಮಹಿಳೆಯರ ಹಿತರಕ್ಷಣೆಗೆ 15 ಷರತ್ತುಗಳನ್ನೂ ಕಾರ್ಮಿಕ ಇಲಾಖೆ ವಿಧಿಸಿದೆ. ಈ ಸಂಬಂಧದಲ್ಲಿ ಗುತ್ತಿಗೆ ಕಾರ್ಮಿಕರ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲಾಗಿದೆ. ರಾತ್ರಿ ಪಾಳಿ ನಿಯೋಜನೆಗೆ ಮಹಿಳೆಯ ಒಪ್ಪಿಗೆ ಪಡೆಯುವುದು, ರಾತ್ರಿ ಪಾಳಿಯಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿರುವಂತೆ ನೋಡಿಕೊಳ್ಳುವುದು, ಸಾರಿಗೆ ವ್ಯವಸ್ಥೆ, ಶಿಶುಪಾಲನಾ ಸೌಲಭ್ಯ, ಸೂಕ್ತ ಭದ್ರತಾ ಸಿಬ್ಬಂದಿ ನಿಯೋಜನೆ ಇತ್ಯಾದಿ 15 ಷರತ್ತುಗಳ ಉಲ್ಲಂಘನೆ ಉದ್ಯಮದ ಲೈಸೆನ್ಸ್ ಹಿಂತೆಗೆತಕ್ಕೂ ಕಾರಣವಾಗಬಹುದು.

ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಸುಧಾರಣೆಯ ಯೋಜನೆಯ ಭಾಗವಾಗಿ ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲು ಮಹಿಳೆಯರಿಗೆ ಅವಕಾಶ ನೀಡುವ ಉಪಕ್ರಮಗಳನ್ನು ರಾಜ್ಯಗಳು ಕೈಗೊಳ್ಳಬೇಕೆಂಬುದು ಕೇಂದ್ರ ಸರ್ಕಾರದ ಆಶಯವೂ ಆಗಿದೆ.

ಈ ಪ್ರಯತ್ನದ ಅಂಗವಾಗಿ ರಾತ್ರಿ ಪಾಳಿಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸಲು ಅವಕಾಶವಾಗುವಂತೆ ರಾಜ್ಯ ಕಾನೂನುಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕೆಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಇತ್ತೀಚೆಗೆ ಎಲ್ಲಾ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನೂ ಬರೆದಿತ್ತು.

ಏಕೆಂದರೆ ಮಹಿಳೆಗೆ ರಾತ್ರಿ ಪಾಳಿ ಅವಕಾಶ ನೀಡುವ ಕೇಂದ್ರದ ಕಾರ್ಖಾನೆಗಳ ತಿದ್ದುಪಡಿ ಮಸೂದೆ ಎರಡು ವರ್ಷಗಳಿಂದಲೂ ನನೆಗುದಿಗೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಸಂಖ್ಯೆ ಕಡಿಮೆ ಇರುವ ಬಗ್ಗೆ 2015-16ರ ಆರ್ಥಿಕ ಸಮೀಕ್ಷೆ ಕೂಡ ಆತಂಕ ವ್ಯಕ್ತಪಡಿಸಿದ್ದಲ್ಲದೆ ಈ ಪರಿಸ್ಥಿತಿ ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿತ್ತು ಎಂಬುದನ್ನು ಮರೆಯುವಂತಿಲ್ಲ.

ಬದಲಾದ ಸಾಮಾಜಿಕ ಆರ್ಥಿಕ ಪರಿಸ್ಥಿತಿಯಲ್ಲಿ, ಕಾಯಿದೆಗಳಲ್ಲಿ ಈಗಿರುವ ಅವಕಾಶಗಳು ಹೊಸ ವಾಸ್ತವಗಳೊಂದಿಗೆ ಹೊಂದಿಕೆಯಾಗಬೇಕಾದುದು ಅವಶ್ಯ. ಹೀಗಾಗಿಯೇ 1948ರ ಫ್ಯಾಕ್ಟರಿಗಳ ಕಾಯಿದೆಯ 66ನೇ ಸೆಕ್ಷನ್‌ಗೆ ತಿದ್ದುಪಡಿ ತಂದು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿ ನಿರ್ವಹಿಸಲು ಮಹಿಳೆಗೆ ಅವಕಾಶ ಕಲ್ಪಿಸುವುದಕ್ಕಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೂ 2005ರಲ್ಲೇ ಸಂಸತ್‌ನಲ್ಲಿ ಮಸೂದೆ ಮಂಡಿಸಿತ್ತು.

ಆನಂತರ, 2006ರಲ್ಲಿ ‘ಮಹಿಳೆಗೆ ರಾತ್ರಿ ಪಾಳಿ: ಬೆಳವಣಿಗೆ ಹಾಗೂ ಅವಕಾಶಗಳು’ ಎಂಬ ವಿಷಯ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಯನ­­ವೊಂದನ್ನು ಪ್ರಾಯೋಜಿಸಿತ್ತು. ಈ ಅಧ್ಯಯನ ಕಾರ್ಯದಲ್ಲಿ ಪಾಲ್ಗೊಂಡ ‘ಅಸೋಚಾಮ್’ (ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಘ) ಸಮೀಕ್ಷಾ ವರದಿಯನ್ನೂ ಬಿಡುಗಡೆ ಮಾಡಿದೆ.

ಮಹಿಳೆಯರ ಮೇಲೆ ರಾತ್ರಿ ಪಾಳಿ ಬೀರ­ಬಹುದಾದ ಪರಿಣಾಮಗಳು ಹಾಗೂ ವಿವಿಧ ವಲಯಗಳಲ್ಲಿ  ಬೆಳವಣಿಗೆಗೆ ಅವರಿಗಿರುವ ಅವಕಾಶಗಳನ್ನು ಈ ಸಮೀಕ್ಷೆ ಅಧ್ಯಯನ­ಕ್ಕೊಳ­­ಪಡಿ­ಸಿತ್ತು. ರಾತ್ರಿ ಪಾಳಿಗಳಲ್ಲಿ ಮಹಿಳೆ­ಯರ ದುಡಿಮೆ ಯಶಸ್ವಿಯಾಗಲು ಹಾಗೂ ಸಾಮಾ­ಜಿಕ­ವಾಗಿಯೂ ಅನುಮೋದನೆ ಗಳಿಸಿ­ಕೊಳ್ಳಲು ಅವರಿಗೆ ಸೂಕ್ತ ಭದ್ರತೆ, ಹಣಕಾಸು ಪರಿಹಾರ ಹಾಗೂ ಮತ್ತೊಂದಿಷ್ಟು ಹೆಚ್ಚುವರಿ ಸೌಲಭ್ಯ­ಗಳಿರುವ ಅನುಕೂಲಕರ ವಾತಾವರಣ ಅವಶ್ಯ ಎಂಬ ಅಭಿಪ್ರಾಯವನ್ನು‘ಅಸೋ­ಚಾಮ್’ ವ್ಯಕ್ತ­ಪಡಿಸಿತ್ತು.

ಮಹಿಳೆಯರಿಗೆ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವ ಅವಕಾಶ ನೀಡಬೇಕು ಎಂದು ಅನೇಕ ನ್ಯಾಯಾಲಯಗಳು ಈ ಹಿಂದಿ­ನಿಂ­ದಲೂ ಅನೇಕ ತೀರ್ಪುಗಳನ್ನು ನೀಡಿವೆ.ಸಾಂತಾಕ್ರೂಜ್ ಎಲೆ­ಕ್ಟ್ರಾನಿಕ್ ಎಕ್ಸ್‌ಪೋರ್ಟ್ ಪ್ರೋಸೆಸಿಂಗ್ ಜೋನ್‌ನಲ್ಲಿ  (ಎಸ್ಇಇಪಿಝಡ್) ರಾತ್ರಿ ಪಾಳಿಯಲ್ಲಿ ಮಹಿಳೆಯರ ನಿಯೋಜನೆಗೆ ಅವಕಾಶ ಕಲ್ಪಿಸು­ವಂತಹ ಮಧ್ಯಂತರ ಆದೇಶವನ್ನು 1999ರ ಜೂನ್ 10ರಂದು ಮುಂಬೈ  ಹೈಕೋರ್ಟ್ ನೀಡಿತ್ತು.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಜವಳಿ ಗಿರಣಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಆರ್.ವಸಂತ ಅವರ ಹಕ್ಕನ್ನು ಮದ್ರಾಸ್ ಹೈಕೋರ್ಟ್ 2000ದಲ್ಲಿ ಎತ್ತಿ ಹಿಡಿದಿತ್ತು. ಆದರೆ ಈ ಮಹಿಳಾ ಕಾರ್ಮಿಕಳಿಗೆ ಕಾರ್ಖಾನೆಯಲ್ಲಿ ಸುರಕ್ಷತೆ ಹಾಗೂ ಭದ್ರತೆ ಒದಗಿಸಬೇಕಲ್ಲದೆ ಕೆಲಸ ಸ್ಥಳದಿಂದ ಮನೆಗೆ ಹೋಗಿ ಬರಲು ಸೂಕ್ತ ಸಾರಿಗೆ ವ್ಯವಸ್ಥೆ ನೀಡಬೇಕು ಎಂಬ ಷರತ್ತನ್ನೂ ಕೋರ್ಟ್ ವಿಧಿಸಿತ್ತು.

ಮಹಿಳೆಗೆ ರಾತ್ರಿ ಪಾಳಿ ನಿಷೇಧಿಸುವುದು ಸಾಂವಿಧಾನಿಕವಾಗಿ ಮಹಿಳೆ­ಯ­ರಿಗೆ ನೀಡಲಾದ ಸಮಾನತೆಯ ಮೂಲ­ಭೂತ  ಹಕ್ಕಿನ ಉಲ್ಲಂಘನೆ ಎಂದೂ ಮದ್ರಾಸ್ ಹೈಕೋರ್ಟ್ ಹೇಳಿತ್ತು. ಲಿಂಗದ ಆಧಾರದ ಮೇಲೆ ಮಹಿಳೆಯರ ವಿರುದ್ಧ ನಡೆಸುವ ತಾರತಮ್ಯ­ವಿದು; ಇಂತಹ ಪ್ರವೃತ್ತಿ ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಅಥವಾ ಉದ್ಯಮ ಕೈಗೊಳ್ಳಲು ಇರುವ ಮೂಲಭೂತ ಹಕ್ಕುಗಳಿಗೆ ಭಂಗ ತರುತ್ತದೆ ಎಂದೂ   ಮದ್ರಾಸ್ ಹೈಕೋರ್ಟ್ ಹೇಳಿದೆ. ಮಹಿಳಾ ನೌಕರರಿಗೆ ರಾತ್ರಿ ಪಾಳಿ ನಿಷೇಧ ತೆರವುಗೊಳಿಸುವುದರ ವಿರುದ್ಧ ಸಮಾಜದಲ್ಲಿ ಇರುವ ಅನೇಕ ವಾದ­ಗಳನ್ನೂ  ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡುವ ಸಂದರ್ಭ­ದಲ್ಲಿ ಗಮನದಲ್ಲಿ ಇರಿಸಿಕೊಂಡಿತ್ತು.

ಹೀಗಾ­ಗಿಯೇ ಮಹಿಳೆಯ ಸುರಕ್ಷತೆ, ಭದ್ರತೆ­ಗಳಲ್ಲದೆ ಘನತೆ, ಗೌರವ ಕಾಪಾಡಿ­ಕೊಳ್ಳಲು ಅಗತ್ಯ­ವಾದ ಅನೇಕ ನಿಬಂಧನೆ ಗಳನ್ನೂ ತೀರ್ಪಿನಲ್ಲಿ ಅದು ವಿಧಿಸಿತ್ತು.
‘ಅಸೋಚಾಮ್’ ನಡೆಸಿದ್ದ ಸಮೀಕ್ಷೆಯ ಪ್ರಕಾರ, ಶೇಕಡ 83ರಷ್ಟು ಮಹಿಳೆಯರು ರಾತ್ರಿ ಪಾಳಿ ಉದ್ಯೋಗದ ಬಗ್ಗೆ ತೃಪ್ತಿ ವ್ಯಕ್ತ­ಪಡಿಸಿ­ದ್ದಾರೆ. ಹಾಗೆಯೇ ಸೇವಾ ವಲಯ ದಲ್ಲಿರುವ­ವ­ರಿಗಿಂತ  ಸ್ಥಳೀಯ ಉದ್ಯಮಸಂಸ್ಥೆಗಳಲ್ಲಿ ರಾತ್ರಿ ಪಾಳಿ ಮಾಡುವ  ಮಹಿಳೆಯರು ಹೆಚ್ಚಿನ ಅಭದ್ರತೆ ಅನುಭವಿಸುತ್ತಿದ್ದರೆಂಬುದು ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು.

ಸೇವಾ ವಲ­ಯ­ದಲ್ಲಿರುವವರಿಗೆ ಹೋಲಿಸಿದರೆ ಅವರಿಗೆ ಸರಿಯಾದ ಸಾರಿಗೆ ವ್ಯವಸ್ಥೆಯೂ ಇಲ್ಲ ಎಂಬುದನ್ನು ಈ ವರದಿ ತೋರಿಸಿತ್ತು. ತೊಗಲಿನ ಉದ್ಯಮದಲ್ಲಿ ಶೇ 45 ಹಾಗೂ ಜವಳಿ ಉದ್ಯಮದಲ್ಲಿ ಶೇ 34ರಷ್ಟು  ನೌಕರರು ಕೆಲಸದಲ್ಲಿ ಅಭದ್ರತೆ ಭಾವವನ್ನು ಅನು­ಭವಿಸು­ವುದಾಗಿ ಹೇಳಿಕೊಂಡಿದ್ದರು. ಆದರೆ ಬಿಪಿಓ ನೌಕ­ರ­ರಲ್ಲಿ ಈ ಭಾವನೆ ಶೇ 8 ಹಾಗೂ ಆಸ್ಪತ್ರೆ ನರ್ಸ್‌ಗಳಲ್ಲಿ ಇದು ಶೇ 14ರಷ್ಟಿದೆ ಎಂಬುದೂ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು. ಆದರೆ ‘ಅಸೋಚಾಮ್‌’ನ ಈ ಸಮೀಕ್ಷೆ­ಯಲ್ಲಿ ಪಾಲ್ಗೊಂಡಿದ್ದ ಶೇ 95ರಷ್ಟು ಉದ್ಯೋಗ ದಾತರು ತಾವು ಸುರಕ್ಷಿತ ಉದ್ಯೋಗ ತಾಣಗ­ಳನ್ನು ಕಲ್ಪಿಸಿರುವುದಾಗಿಯೇ ಹೇಳಿ­ಕೊಂಡಿದ್ದರು.

ಒಟ್ಟಾರೆ, ರಾತ್ರಿ ಪಾಳಿಯಲ್ಲಿ ಅಸುರಕ್ಷತೆಯ ಭಾವನೆಯೇನೂ ಕಂಡು ಬರುವುದಿಲ್ಲ ಎಂಬುದು ಬಹುತೇಕ ಮಹಿಳೆಯರ ಅಭಿ­ಪ್ರಾಯ­ವಾಗಿತ್ತು. ಆದರೆ ಹಗಲಿನಲ್ಲಿ ಮನೆ­ಗೆಲಸದ ಒತ್ತಡ­ದಿಂದಾಗಿ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು ಮಾತ್ರ ತಮ್ಮನ್ನು ಕಾಡುತ್ತಿರುವು­ದಾಗಿ ಈ ಮಹಿಳೆಯರು ಹೇಳಿಕೊಂಡಿದ್ದರು. ಬೆಂಗಳೂರಿನಲ್ಲಿ 2005ರಲ್ಲಿ ಐಟಿ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣ, ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳೆಯರ ಸುರಕ್ಷತೆ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತ್ತು.

ವಾಸ್ತವವಾಗಿ ಮಹಿಳೆಯರ ಮೇಲಿನ ಅಪ­ರಾಧಗಳನ್ನು ಕಾನೂನು ಸುವ್ಯವಸ್ಥೆ ಸಮಸ್ಯೆ­­­ಯಾಗಿ ಸರ್ಕಾರ ಪರಿಗಣಿಸಬೇಕೆಂಬುದು ಮುಖ್ಯ. ಆದರೆ ಸುರಕ್ಷತೆ ನೆಪದಲ್ಲಿ ಆಕೆಯ ಚಲನಶೀಲತೆಯನ್ನೇ ನಿರ್ಬಂಧಿಸುವ ಪಿತೃ­ಪ್ರಧಾನ ಧೋರಣೆಗಳು ಈಗಿನ  ಬದ­ಲಾ­ಗು­ತ್ತಿರುವ ಕಾಲದಲ್ಲಿ ಅಪ್ರಸ್ತುತ. ಏಕೆಂದರೆ ಆಧು­ನಿಕ ಆರ್ಥಿಕತೆ­ಯಲ್ಲಿ ಮಹಿಳೆಯ ಪಾಲ್ಗೊಳ್ಳು­ವಿಕೆ ಈಗ ಹಿಂದೆಂದಿ­ಗಿಂತಲೂ ಹೆಚ್ಚಾಗಿದೆ.

ಪುರುಷರಷ್ಟೇ ಪ್ರಮಾಣದಲ್ಲಿ ಮಹಿಳೆಯರೂ ಉದ್ಯೋಗ ಕ್ಷೇತ್ರದಲ್ಲಿ ಪಾಲ್ಗೊಂಡಲ್ಲಿ  ಜಿಡಿಪಿಗೆ ಶೇ 16ರಷ್ಟು ಅಂಶಗಳನ್ನು ಇನ್ನು 10 ವರ್ಷಗಳಲ್ಲಿ ಭಾರತ ಸೇರಿಸಬಹುದು ಎಂದು ಮೆಕಿನ್ಸಿ ಜಾಗತಿಕ ಸಂಸ್ಥೆ ಅಂದಾಜು ಮಾಡಿದೆ. ಹಾಗೆಯೇ ಪುರುಷರಷ್ಟೇ ಪ್ರಮಾಣದಲ್ಲಿ ಮಹಿಳೆಯರೂ ಉದ್ಯೋಗದಲ್ಲಿ ಪಾಲ್ಗೊಂಡಲ್ಲಿ ಅಮೆರಿಕದಲ್ಲಿ ಶೇ 5, ಜಪಾನ್‌ನಲ್ಲಿ ಶೇ 9 ಹಾಗೂ ಭಾರತದಲ್ಲಿ ಶೇ 27ರಷ್ಟು ಜಿಡಿಪಿ ವೃದ್ಧಿಯಾಗಲಿದೆ ಎಂದು ಜಿ 20 ರಾಷ್ಟ್ರಗಳ ತಂಡ ಅದಾಜು ಮಾಡಿದೆ. ಈ ದೃಷ್ಟಿಯಿಂದಲೂ ಮಹಿಳೆ ಕೆಲಸದ ಅವಧಿಯನ್ನು ಸೀಮಿತಗೊಳಿಸುವ ಕಾನೂನುಗಳನ್ನು ಬದಲಿಸುವುದು ಮುಖ್ಯ.

ಮಹಿಳೆಯರು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುವಾಗುವಂತಹ, ಅಭಿವೃದ್ಧಿಗೆ ಪೂರಕವಾಗುವಂತಹ ಆರ್ಥಿಕ, ಸಾಮಾಜಿಕ ನೀತಿಗಳ ಮೂಲಕ ಸಕಾರಾತ್ಮಕವಾದ ಪರಿಸರ ಸೃಷ್ಟಿ ಸರ್ಕಾರದ ಕರ್ತವ್ಯ. ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರ ಅಂಗೀಕರಿಸಿರುವ ನೀತಿಯ ಪ್ರಕಾರ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜೆಂಡರ್ ದೃಷ್ಟಿಯನ್ನು ಮುಖ್ಯವಾಹಿನಿಗೆ ತರುವುದೂ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT