ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಜಿ ಎಂಬ ಬರಿಗಾಲ ಅಜ್ಜನ ಉದಾತ್ತ ಕನಸು!

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ಇದೊಂದು ವಿಚಿತ್ರವಾದ ಉದಾತ್ತ ಕನಸಿನ ಕಥೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಮುದಗಲ್‌ ಸಮೀಪವಿರುವ ಆಶಿಹಾಳ ತಾಂಡಾಕ್ಕೆ ಸುಮಾರು 175 ವರ್ಷಗಳ ಇತಿಹಾಸವಿದೆ. ರಾಜಸ್ಥಾನದಿಂದ ಬಂದ ಭೀಕಾ ನಾಯಕ್ ಈ ತಾಂಡಾದ ಮೂಲ ಪುರುಷ.

ಬುದ್ಧಿವಂತಿಕೆಯಿಂದ ಆಸ್ತಿಯನ್ನು ಗಳಿಸಿದರು. ಇವರಿಗೆ ಐದು ಜನ ಮಕ್ಕಳು. ಅವರಲ್ಲಿ ಒಬ್ಬರು ‘ಬುದ್ಧಿವಂತ ನಾಯಕ್‌’. ಮೆಟ್ರಿಕ್ ಕಲಿತಿದ್ದ ಇವರಿಗೆ ನಿಜಾಮರ ಆಳ್ವಿಕೆಯಲ್ಲಿ ‘ಕುಲಕರ್ಣಿ’ ಕೆಲಸ ಸಿಕ್ಕಿತು. ಹೀಗಾಗಿ ಇವರ ಹೆಸರಿನೊಂದಿಗೆ ‘ಕುಲಕರ್ಣಿ’ ಎನ್ನುವ ಅಡ್ಡ ಹೆಸರು ಸೇರಿಕೊಂಡಿದೆ.
ಬುದ್ಧಿವಂತ ನಾಯಕ್‌ ಕುಲಕರ್ಣಿಯ ನಂತರ ರಾಮಜಿ ನಾಯಕ್‌ ಶಿಕ್ಷಣ ಪಡೆದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದರು. ರಾಜಕಾರಣಿಗಳ ಜೊತೆ ಸ್ನೇಹ ಹೊಂದಿದ್ದರು. ಸಮಾಜಸೇವೆ ಇವರ ಪ್ರೀತಿಯ ಕಾಯಕ.

ರಾಮಜಿ ನಾಯಕ್‌ಗೆ ಉದಾತ್ತ ಕನಸಿತ್ತು. ಆ ಕನಸು ದಿನೇದಿನೇ ದೊಡ್ಡದಾಗುತ್ತಲೇ ಇತ್ತು. ಆ ಕನಸಿನ ಹಾದಿ ಬಲುದೂರ. ಆದರೂ ಆ ದಾರಿಯಲ್ಲಿ ನಡೆಯುವುದನ್ನು ಮಾತ್ರ ನಿಲ್ಲಿಸಲಿಲ್ಲ. ತಮ್ಮ ತಾಂಡಾಕ್ಕೆ ‘ನಿವಾಸಿ ಶಾಲೆ’ (ವಸತಿ ಶಾಲೆ) ಬರಬೇಕು. ಅಲ್ಲಿ ಮಕ್ಕಳು ಕಲಿಯಬೇಕು. ದೊಡ್ಡ ದೊಡ್ಡ ನೌಕರಿ ಹಿಡಿಯಬೇಕು. ಅವರ ಬಾಳು ಹಸನಾಗಬೇಕು ಎನ್ನುವುದೇ ಆ ಕನಸು.

ಬಿಸಿಲು–ಮಳೆ, ಕಲ್ಲು–ಮುಳ್ಳು, ಕೆಸರು ಯಾವುವೂ ಇವರನ್ನು ತಮ್ಮ ಮಕ್ಕಳು ಅವಿದ್ಯಾವಂತರಾಗಿ ಇರುವಷ್ಟು ನೋಯಿಸಲಿಲ್ಲ. ಅಂದೇ ಶಿಕ್ಷಣದ ಮಹತ್ವ ಅರಿವಾಗಿತ್ತು. ತಾಂಡಾಕ್ಕೆ ‘ನಿವಾಸಿ ಶಾಲೆ’ಯನ್ನು ತರಬೇಕು ಎಂದು ನಿಶ್ಚಯಿಸಿದರು. ಆದರೆ, ಚಪ್ಪಲಿ ಸವೆಸದೆ ಸರ್ಕಾರದಿಂದ ಯಾವ ಕೆಲಸವೂ ಆಗುವುದಿಲ್ಲ. ಆದ್ದರಿಂದಲೇ ರಾಮಜಿ ನಾಯಕ್‌ ‘ನಿವಾಸಿ ಶಾಲೆ ಸಿಗುವ ತನಕ ಚಪ್ಪಲಿ ಧರಿಸುವುದಿಲ್ಲ’ ಎನ್ನುವ ಶಪಥ ಮಾಡಿದರು. ತಮಗೆ ಇದ್ದ ರಾಜಕಾರಣಿಗಳ ಒಡನಾಟವನ್ನು ಬಳಸಿಕೊಂಡು 1956 ರಲ್ಲಿ ತಾಂಡಾಕ್ಕೆ ‘ನಿವಾಸಿ ಶಾಲೆ’ಯನ್ನು ತರುವಲ್ಲಿ ಯಶಸ್ವಿಯಾದರು.

‘ನಿವಾಸಿ ಶಾಲೆ’ ಆರಂಭಕ್ಕೂ ಮುನ್ನವೇ ಶಿಕ್ಷಣ ಪಡೆದಿದ್ದ ಟಿ.ಆರ್.ನಾಯಕ್, ಬಿ.ಜಿ.ನಾಯಕ್, ಆರ್.ಡಿ.ನಾಯಕ್, ಬಿ.ಆರ್.ನಾಯಕ್ ಅವರು ಈ ತಾಂಡಾದ ಹೊಸ ತಲೆಮಾರಿನ ಮೊದಲ ವಿದ್ಯಾವಂತರು. ಇವರ ಅಜ್ಜಿ ಹೊರಗಿನಿಂದ ಗವಾಟಿ (ಖಾಸಗಿ) ಶಿಕ್ಷಕನನ್ನು ಕರೆಸಿಕೊಂಡು ಈ ನಾಲ್ಕು ಮಂದಿಗೆ ಪ್ರಾಥಮಿಕ ಹಂತದ ಶಿಕ್ಷಣವನ್ನು ತಾಂಡಾದಲ್ಲೇ ಕೊಡಿಸಿದರು. ಪ್ರೌಢ ಶಿಕ್ಷಣಕ್ಕಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳಕ್ಕೆ ಕಳುಹಿಸಿದರು. ಇಷ್ಟೂ ಮಂದಿ ಎಸ್ಎಸ್ಎಲ್‌ಸಿ ಪಾಸು ಮಾಡಿ ನೌಕರಿ ಹಿಡಿದರು. ಅವರಲ್ಲಿ ನಿವೃತ್ತ ಡಿಐಜಿ (ವೈರ್‌ಲೆಸ್‌) ಟಿ.ಆರ್.ನಾಯಕ್‌ ಒಬ್ಬರು.

‘ಆ ದಿನಗಳಲ್ಲಿ ವಾಹನಗಳ ಸೌಲಭ್ಯ ಇರಲಿಲ್ಲ. ಆದ್ದರಿಂದ ಬುದ್ಧಿವಂತ ನಾಯಕ್‌ ಕುಲಕರ್ಣಿ ತಮ್ಮ ಮೊಮ್ಮಗನನ್ನು ಕುದುರೆ ಮೇಲೆ ಕರೆದುಕೊಂಡು ಬಂದು ಮುದಗಲ್ ಶಾಲೆಗೆ ಬಿಡುತ್ತಿದ್ದರು’ ಎಂದು ಕಿರಾಣಿ ವ್ಯಾಪಾರಿ ಗುರುಬಸಪ್ಪ ಸಜ್ಜನ ನೆನಪಿಸಿಕೊಳ್ಳುತ್ತಾರೆ.
ತಾಂಡಾದಲ್ಲಿ ಅಕ್ಷರ ಸಂಸ್ಕೃತಿಯನ್ನು ಬಿತ್ತಿದ ರಾಮಜಿ ನಾಯಕ್‌ ಅವರ ಮಗ ನವದೆಹಲಿಯಲ್ಲಿ ಐಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದಾಗ ಅಪಘಾತದಲ್ಲಿ ತೀರಿಕೊಂಡರು.

ಈ ತಾಂಡಾದ ಪೋಷಕರು ಬುದ್ಧಿವಂತರು. ಪ್ರಾಥಮಿಕ ಹಂತ ಮುಗಿಯುತ್ತಿದ್ದಂತೆಯೇ ಮಕ್ಕಳನ್ನು ದೂರದ ಊರಿಗೆ ಕಳುಹಿಸಿ, ಅಲ್ಲೇ ಇರಿಸಿ ಓದಿಸುತ್ತಾರೆ. ಏಕೆಂದರೆ ಮಕ್ಕಳು ಚಿಕ್ಕ ವಯಸ್ಸಿಗೇ ಸ್ವತಂತ್ರರಾಗಬೇಕು. ಶಿಸ್ತು ಕಲಿಯಬೇಕು. ಎಲ್ಲ ಜಾತಿ-ಜನಾಂಗದವರೊಂದಿಗೆ ಬೆರೆತು ಅವರಲ್ಲಿನ ಒಳ್ಳೆಯ ಗುಣಗಳನ್ನು ಕಲಿಯಬೇಕು ಎನ್ನುವ ಸದುದ್ದೇಶದಿಂದ. ಹೀಗಾಗಿ ಇಲ್ಲಿನ ಮಕ್ಕಳು ಬೆಂಗಳೂರು, ತಿಪಟೂರು, ಮಂಗಳೂರು, ಧಾರವಾಡದಲ್ಲಿ ಕಲಿಯುತ್ತಿವೆ.

ಈ ತಾಂಡಾದಲ್ಲಿ ವಿದ್ಯಾವಂತರು ಹಾಗೂ ನೌಕರರು ಇಲ್ಲದ ಮನೆಯೇ ಇಲ್ಲ! ಶಿಕ್ಷಣದ ವಿಷಯದಲ್ಲಿ ಹೆಣ್ಣು –ಗಂಡು ಎನ್ನುವ ಭೇದವನ್ನು ಎಣಿಸಿದವರೂ ಅಲ್ಲ. ತಾಂಡಾದಲ್ಲಿ ಸುತ್ತಾಡುವಾಗ ನಗರ ಪ್ರದೇಶದ ಯಾವುದೋ ‘ಬಡಾವಣೆ’ಯಲ್ಲಿ ಇದ್ದೇನೆ ಅನಿಸಿತು. ಜೊತೆಗಿದ್ದ ಟಿ.ಆರ್.ನಾಯಕ್ ಅವರು ‘ಆ ಮನೆಯಲ್ಲಿ ಇಬ್ಬರು, ಈ ಮನೆಯಲ್ಲಿ ಮೂವರು, ಅಲ್ಲಿ ಕಾಣಿಸುತ್ತಿರುವ ಮನೆಯಲ್ಲೂ ಮೂವರು’ ಎಂದು ನೌಕರರು ಇರುವ ಮನೆಗಳನ್ನು ಪರಿಚಯಿಸುತ್ತಿದ್ದರು.

‘ನಮ್ಮ ತಾಂಡಾದವರೇ ಇಪ್ಪತ್ತು ಮಂದಿ ಡಾಕ್ಟರ್‌ಗಳು ಇದ್ದಾರೆ’.
‘ಹೌದಾ?!‘.
‘ಆಶ್ಚರ್ಯ ಏಕೆ? ನಮ್ಮ ಮನೆಯಲ್ಲಿ ಮೂವರು ಮಕ್ಕಳು, ಸೊಸೆ ಸೇರಿ ನಾಲ್ಕು ಮಂದಿ ಡಾಕ್ಟರ್‌ ಇದ್ದಾರೆ’.
‘ಆರು ಮಂದಿ ಐಎಎಸ್ ಶ್ರೇಣಿಯ ಅಧಿಕಾರಿಗಳು, 30 ಮಂದಿ ಕೆಎಎಸ್ ದರ್ಜೆಯ ಅಧಿಕಾರಿಗಳು, ಇಷ್ಟೇ ಸಂಖ್ಯೆಯ ಎಂಜಿನಿಯರ್‌ಗಳು ಇದ್ದಾರೆ’ ಎಂದು ಲೆಕ್ಕವನ್ನು ಮುಂದಿಟ್ಟರು. ‘ಒಬ್ಬರು ನ್ಯಾಯಾಧೀಶರು, ಇಪ್ಪತ್ತು ಮಂದಿ ವಕೀಲರು ಇದ್ದಾರೆ’ ಎಂದು ವಕೀಲ ದೇವೀಂದ್ರ ನಾಯಕ್‌ ನೆನಪಿಸಿದರು.

‘ಪೊಲೀಸ್‌ ಅಧಿಕಾರಿಗಳು, ಕಾನ್‌ಸ್ಟೆಬಲ್‌ಗಳು, ಉಪನ್ಯಾಸಕರು, ಶಿಕ್ಷಕರು, ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್, ಕಂಡಕ್ಟರ್‌ಗಳೂ ಇದ್ದಾರೆ. ಎಲ್ಲ ಸೇರಿ ನಾಲ್ಕು ನೂರು ಮಂದಿ ಆಗಬಹುದು’ ಎಂದು ಟಿ.ಆರ್.ನಾಯಕ್ ಹೇಳಿದರು. ‘ಸಂಖ್ಯೆ ಇನ್ನೂ ಹೆಚ್ಚಿದೆ. ಮೊನ್ನೆ ಲಗ್ನಕ್ಕೆ ಕರೆಯಲು ಪಟ್ಟಿ ಮಾಡಿದ್ದೆ. ಎಲ್ಲ ಸೇರಿ ನಾಲ್ಕು ನೂರ ಐವತ್ತು ಮೀರುತ್ತದೆ’ ಎಂದರು ದೇವೀಂದ್ರ ನಾಯಕ್‌.

ನಾಲ್ಕು ನೂರು ಕುಟುಂಬಗಳು ಇರುವ ಈ ತಾಂಡಾದ ಎಲ್ಲರೂ ಶಿಕ್ಷಣವನ್ನೇ ಧ್ಯಾನಿಸುತ್ತಾರೆ. ಆದ್ದರಿಂದಲೇ ಪೋಷಕರು ಹೊಲದಲ್ಲಿ ದುಡಿಯುತ್ತಾ ಮಕ್ಕಳನ್ನು ಹೊರಗೆ ಕಲಿಯಲು ಕಳುಹಿಸುತ್ತಾರೆ. ಕುರಿ ಮಂದೆಯೊಂದಿಗೆ ಹೋಗುತ್ತಿದ್ದ ವ್ಯಕ್ತಿಯನ್ನು ತೋರಿಸುತ್ತಾ ‘ಆತನು ಮಗನನ್ನು ತಿಪಟೂರಿನ ಬಸವೇಶ್ವರ ಕಾಲೇಜಿಗೆ ಸೇರಿಸಿದ್ದನು. ಹುಡುಗ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 95 ಅಂಕಗಳನ್ನು ಪಡೆದಿದ್ದಾನೆ’ ಎಂದು ಟಿ.ಆರ್‌.ನಾಯಕ್‌ ತಿಳಿಸಿದರು.

ಈ ತಾಂಡಾ ಇಷ್ಟೊಂದು ಹೆಸರು ಗಳಿಸಲು ಮುಖ್ಯ ಕಾರಣ ಮದ್ಯ ಸೇವನೆಯಿಂದ ದೂರ ಇರುವುದು ಹಾಗೂ ಶಿಕ್ಷಣಕ್ಕಾಗಿ ಉಪವಾಸ ಇರಲೂ ಸಿದ್ಧರಾಗಿರುವುದು! ಆದರೆ, ಈ ತಾಂಡಾದ ಸಮೀಪ ಇರುವ ತಾಂಡಾಗಳಲ್ಲಿ ಮಾತ್ರ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ! ಇತ್ತೀಚಿಗೆ ಕೆಲವರು ಬದಲಾಗುವ ಮನಸ್ಸು ಮಾಡುತ್ತಿದ್ದಾರೆ.

ನಾನು ಹೈದರಾಬಾದ್‌ ಕರ್ನಾಟಕ ಪ್ರದೇಶದ ಹಲವು ತಾಂಡಾಗಳಲ್ಲಿ ಸುತ್ತಾಡಿದ್ದೇನೆ. ಅಲ್ಲೆಲ್ಲ ಮನೆ ತುಂಬ ಮಕ್ಕಳು.  ಆದರೆ, ಇಲ್ಲಿ ಹಾಗೆ ಕಾಣಿಸಲೇ ಇಲ್ಲ. ಆಶ್ಚರ್ಯದಿಂದ ಕೇಳಿದಾಗ ‘ನಮ್ಮಲ್ಲಿ ಸಂತಾನ ನಿಯಂತ್ರಣಕ್ಕೂ ಮಹತ್ವ ನೀಡಿದ್ದೇವೆ. ಹೆಣ್ಣು–ಗಂಡು ಯಾವುದೇ ಇರಲಿ, ಎರಡು ಸಾಕು. ಕೆಲವರು ಮಾತ್ರ ಮೂರು ಮಾಡಿಕೊಂಡಿರಬಹುದು ಅಷ್ಟೆ’ ಎನ್ನುತ್ತಾ ಯುವಕನೊಬ್ಬ ನಕ್ಕನು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅಕ್ಷರಕ್ಕೆ ಇರುವ ಮೌಲ್ಯ ಮತ್ತು ಶಕ್ತಿ ಚೆನ್ನಾಗಿ ತಿಳಿದಿತ್ತು. ತುಳಿತಕ್ಕೆ ಒಳಗಾದವರು, ಶೋಷಿತರು, ಬಡವರು ತಮ್ಮ ಎಲ್ಲ ಕಷ್ಟಗಳನ್ನು ಶಿಕ್ಷಣದ ಮೂಲಕವೇ ಹೊಡೆದು ಓಡಿಸಲು ಸಾಧ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದರು. ಇದು ರಾಮಜಿ ನಾಯಕ್‌ ಅವರಿಗೆ ಚೆನ್ನಾಗಿ ಮನದಟ್ಟಾಗಿತ್ತು. ಕನಸು ಎಲ್ಲರಿಗೂ ಇರುತ್ತವೆ. ಆದರೆ, ಅವುಗಳನ್ನು ಬೆನ್ನತ್ತಿ ಹೋಗುವವರು ತೀರಾ ವಿರಳ. ಹೀಗಾಗಿಯೇ ರಾಮಜಿ ನಾಯಕ್ ಇತಿಹಾಸವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT