ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗದ ಬಂಡಾಯ: ಚರಿತ್ರೆಯ ಪಾಠಗಳು

Last Updated 16 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿರುವ ನನ್ನ ಹಿರಿಯ ಮಿತ್ರರಾದ ಪ್ರೊ. ಚಿಕ್ಕನರಗುಂದ ಅವರು, ತಮ್ಮೂರ ಕಾಲೇಜಿನ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಬರಬೇಕೆಂದು ಕರೆದರು. ನಾನು ರಾಮದುರ್ಗ ಸೀಮೆಯ ಭಟಕುರ್ಕಿ, ಸಿರಸಂಗಿ, ಸುರೇಬಾನ ಮುಂತಾದ ಹಳ್ಳಿಗಳಿಗೆ ನಾನಾ ನಿಮಿತ್ತದಿಂದ ಹೋದವನೇ; ಆದರೂ ರಾಮದುರ್ಗದ ಸಂಸ್ಥಾನಿಕರ ಅರಮನೆ (ವಾಡೆ)ಯನ್ನು ನೋಡಲು ಆಗಿರಲಿಲ್ಲ. ಈ ಸಲ ವಾಡೆ ನೋಡಬೇಕೆಂದು ಗಟ್ಟಿಮಾಡಿಕೊಂಡು, ಮಿತ್ರರ ಆಹ್ವಾನವನ್ನೊಪ್ಪಿ ಹೋದೆ.

ಕಾರ್ಯಕ್ರಮಕ್ಕೆಂದು ನಾನು ಹೋದ ಕಾಲೇಜು ಮತ್ತು ನೋಡಬೇಕೆಂದಿದ್ದ ವಾಡೆ, ಎದುರು ಬದುರೇ ಇದ್ದವು. ಮಾತ್ರವಲ್ಲ, ವಾಡೆಯ ಬಹುಭಾಗವನ್ನು ಕಾಲೇಜಿನ ತರಗತಿ, ಲ್ಯಾಬು ಮತ್ತು ಕಚೇರಿಗಳು ಆವರಿಸಿಕೊಂಡಿದ್ದವು. ಕಾಲೇಜಿನ ಮುಂದೆ, ವಾಡೆಗೆ ಮುಖಮಾಡಿ, ಒಂದು ಪ್ರತಿಮೆ ಸ್ಥಾಪಿಸಲಾಗಿತ್ತು. ವಿಚಾರಿಸಲಾಗಿ ಅದು ವಾಡೆಯ ವಿರುದ್ಧ ನಡೆದ ಬಂಡಾಯದ ನಾಯಕತ್ವ ವಹಿಸಿದ್ದ ಬಸಪ್ಪ ಮುನವಳ್ಳಿಯವರದೆಂದು ತಿಳಿಯಿತು. ಪ್ರತಿಮೆಯ ಮೊಗದಲ್ಲಿ ಇನ್ನೂ ಹೋರಾಟದ ಕೆಚ್ಚು ಉಳಿದಿರುವಂತೆ ತೋರಿತು.

ಕಾಲೇಜು ಬೆಂಬಳಗಿ ಮತ್ತು ರಾಠಿ ಎಂಬುವರ ಹೆಸರಲ್ಲಿ ಸ್ಥಾಪನೆಯಾಗಿದ್ದು, ಅವರು ಸಹ ಬಂಡಾಯದಲ್ಲಿ ಪಾಲ್ಗೊಂಡವರೇ ಆಗಿದ್ದರು. ಚರಿತ್ರೆಯ ಈ ನಾಟಕೀಯ ಮುಖಾಮುಖಿ ಕುತೂಹಲ ಹುಟ್ಟಿಸಿತು. ಅರಿಯುತ್ತ ಹೋದೆ. ಆತನಕ ನನಗೆ ಗೊತ್ತಿರದಿದ್ದ ಕರ್ನಾಟಕದ ಜನಹೋರಾಟದ ಅಧ್ಯಾಯವೊಂದು ನೆಲದ ಮರೆಯ ನಿಧಾನದಂತೆ ಗೋಚರಿಸತೊಡಗಿತು.

ಈಗಿನ ಬೆಳಗಾವಿ ಜಿಲ್ಲೆಯ ತಾಲೂಕು ಪಟ್ಟಣವಾದ ರಾಮದುರ್ಗವು ಮಲಪ್ರಭಾ ಹೊಳೆಯ ಕಣಿವೆಯಲ್ಲಿದೆ. ಸವದತ್ತಿ ಹಾದಿಯಲ್ಲಿರುವ ಮುಳ್ಳೂರ ಬೆಟ್ಟದ ಮೇಲಿಂದ ನೋಡಿದರೆ, ವಿಶಾಲವಾದ ಬಯಲೊಳಗೆ ಹರಿವ ಮಲಪ್ರಭೆಯೂ ಅದರ ಆಸುಪಾಸಿನಲ್ಲಿ ಹರಡಿರುವ ತೋಟಗಳೂ, ಹಚ್ಚನೆಯ ಪಯಿರುಗಳೂ ಅವುಗಳ ನಟ್ಟನಡುವೆ ರಾಮದುರ್ಗ ಪಟ್ಟಣವೂ ಕಾಣುತ್ತವೆ. ಪಟ್ಟಣದ ನಡುವೆ ದಿಬ್ಬದ ಮೇಲೆ ಕೆಂಗಲ್ಲಿನಿಂದ ಕಟ್ಟಿದ ಕೋಟೆಯಿದ್ದು, ಅದು ಮುಸ್ಸಂಜೆ ಬೆಳಕಿನಲ್ಲಿ ಮತ್ತಷ್ಟು ಕೆಂಪಾಗಿ, ಬೆಟ್ಟದ ದಂತಪಂಕ್ತಿಯಂತೆ ಕಾಣುವುದು.

ಕರ್ನಾಟಕದ ಬಹುತೇಕ ವಾಡೆಗಳು ಹೊಳೆ ಬದಿಯಲ್ಲೊ ದಿಬ್ಬದ ಮೇಲೊ ಇವೆ. ಚಲಿಸದ ದಿಬ್ಬ ಅಧಿಕಾರಸ್ಥರ ನೆಲೆಯಂತೆಯೂ ಕೆಳಗೆ ತೆವಳುತ್ತ ಹರಿವ ಹೊಳೆ ಜನಪ್ರವಾಹದಂತೆಯೂ ತೋರುವುವು. ಅಧಿಕಾರಸ್ಥರನ್ನು ಜನರಿಂದ ಬೇರ್ಪಡಿಸುವ ದಿಬ್ಬ, ಆ ದಿಬ್ಬವನ್ನು ತನ್ನ ಪ್ರವಾಹದಲ್ಲಿ ಮುಳುಗಿಸಲೆತ್ನಿಸುವ ಹೊಳೆ, ಇವುಗಳ ನಡುವೆ ಅರಮನೆ, ಕೋಟೆ, ಊರು ಬದಲುತ್ತ ಬದುಕು ತೆಗೆಯುತ್ತವೆ. ರಾಮದುರ್ಗದ ವಾಡೆಯು ಜನ ಪ್ರತಿರೋಧದ ಪ್ರವಾಹವನ್ನು ಎದುರಿಸಿ ಮತ್ತು ಸೋತ ಘಟನೆಯು ಸ್ವಾರಸ್ಯಕರವಾಗಿದೆ.

ರಾಮದುರ್ಗವು ಕನ್ನಡ ಪ್ರದೇಶಗಳನ್ನು ಆಳುತ್ತಿದ್ದ ಜಮಖಂಡಿ, ಸಾಂಗಲಿ, ಮೀರಜ, ಕುರುಂದವಾಡ ಮುಂತಾದ ಮರಾಠಿ ಸಂಸ್ಥಾನಗಳ ಪೈಕಿ ಒಂದಾಗಿತ್ತು. 1 ಲಕ್ಷ 20 ಸಾವಿರ ರೂಪಾಯಿ ಉತ್ಪತ್ತಿಯಿದ್ದ 33 ಹಳ್ಳಿಗಳ ಈ ಪುಟ್ಟ ಸಂಸ್ಥಾನವನ್ನು ಶಿವಾಜಿಯು ಕೊಂಕಣಸ್ಥ ಬ್ರಾಹ್ಮಣರಾದ ಭಾವೆಯವರ ಮನೆತನಕ್ಕೆ ಕೊಟ್ಟಿದ್ದನು. ಇದು ಮೂಲತಃ ನರಗುಂದ ಸಂಸ್ಥಾನದ ಒಂದು ಶಾಖೆಯೇ. ವೈರುಧ್ಯವೆಂದರೆ, ನರಗುಂದದ ಬಾಬಾಸಾಹೇಬನು ಬ್ರಿಟೀಷರ ವಿರುದ್ಧ ಹೋರಾಡಿ ನಡುಬೀದಿಯಲ್ಲಿ ನೇಣಿಗೇರಿದರೆ; ರಾಮದುರ್ಗ ಸಂಸ್ಥಾನವು ಬ್ರಿಟೀಷರ ಕಣ್ಸನ್ನೆಗೆ ಅನುಸಾರವಾಗಿ ಹುಕುಮತ್ತು ಮಾಡುತ್ತ ಹೋರಾಟಗಾರರನ್ನು ನೇಣಿಗೆ ಏರಿಸಿತು.   

ರಾಮದುರ್ಗದ ಬಂಡಾಯ ಶುರುವಾಗಿದ್ದು ಒಂದು ಚಿಕ್ಕ ಬೇಡಿಕೆಯಿಂದ. 1937ರಲ್ಲಿ ಬಿದ್ದ ಬರಕ್ಕೆ ಕಂಗಾಲಾಗಿದ್ದ ರೈತರು, ಈ ಸಲದ ಕಂದಾಯ ಮಾಫಿ  ಮಾಡಬೇಕೆಂದು ಕೋರಿಕೆ ಸಲ್ಲಿಸಿದರು. ಆದರೆ ಸಂಸ್ಥಾನಿಕರಾದ ಮೆಬರಬಾನ್ ರಾಜೇಸಾಹೇಬ ರಾಮರಾವ ಭಾವೆ ಅದನ್ನು ತಿರಸ್ಕರಿಸಿದರು. ಮಾತ್ರವಲ್ಲ, ಬಲಾತ್ಕಾರದ ಕಂದಾಯ ವಸೂಲಿ ಆರಂಭಿಸಿದರು.
 
ಸಂಸ್ಥಾನದಲ್ಲಿ ತಿಪ್ಪೆಗೂ ಹಿತ್ತಲಿಗೂ ಹುಲ್ಲುಬನ್ನಿಯೆಂಬ ಹೆಸರಲ್ಲಿ ಆಡುಕುರಿಗೂ ತೆರಿಗೆಗಳಿದ್ದವು. ಕಂದಾಯ ಕೊಡದವರ ಎಮ್ಮೆಗಳನ್ನು ಲಿಲಾವು ಮಾಡಲಾಗುತ್ತಿತ್ತು. ಕನ್ನಡ ಅರ್ಜಿಯನ್ನು ನಿರಾಕರಿಸಲಾಗುತ್ತಿತ್ತು. ಜನರು ರಾಜನ ದಬ್ಬಾಳಿಕೆ ವಿರುದ್ಧ ಮೆರವಣಿಗೆ ತೆಗೆದರು. ಅವರ ಮೇಲೆ ಲಾಠಿಚಾರ್ಜು ನಡೆಯಿತು. ರೊಚ್ಚಿಗೆದ್ದ ಜನರು ಸಂಸ್ಥಾನಿಕರನ್ನು ಎದುರಿಸಲು ಪ್ರಜಾಸಂಘವನ್ನು ಸ್ಥಾಪಿಸಿದರು. ಅದಕ್ಕೆ ಅಧ್ಯಕ್ಷರಾಗಿ ವಕೀಲರಾದ ಮುನವಳ್ಳಿಯವರೂ ಕಾರ್ಯದರ್ಶಿಗಳಾಗಿ ಲಿಂಗನಗೌಡರೂ ಆಯ್ಕೆಯಾದರು. 

ಸರಿ, ಕರ ನಿರಾಕರಣಾ ಚಳವಳಿ ಸುರುವಾಯಿತು. ಅಧಿಕಾರಿಗಳು ಗ್ರಾಮ ಪ್ರವೇಶ ಮಾಡದಂತೆ ತಡೆಯಲಾಯಿತು. ಚಳವಳಿಗಾರರು ದರ್ಬಾರದ ಮತ್ತು ಕೋರ್ಟಿನ ಭಾಷೆ ಮರಾಠಿಗೆ ಬದಲು, ಕನ್ನಡವಾಗಬೇಕು ಎಂದು ಹೇಳಿ, ಮರಾಠಿ ನೋಟಿಸುಗಳನ್ನು ತಿರಸ್ಕರಿಸಿದರು. ಸಂಸ್ಥಾನದಲ್ಲಿ ಎಲ್ಲ ಉಚ್ಚ ಅಧಿಕಾರಗಳು ಪುಣೆ ಕಡೆಯಿಂದ ಬರುತ್ತಿದ್ದ ಉಚ್ಚಜಾತಿಯವರ ಕೈಯಲ್ಲಿದ್ದ ಕಾರಣ, ಆಡಳಿತದಲ್ಲಿ ಸ್ಥಳೀಯರಿಗೂ ಸಮಪಾಲು ಸಿಗಬೇಕು ಎಂದು ಹಕ್ಕೊತ್ತಾಯ ಮಾಡಿದರು. ಈ ಚಳವಳಿಗೆ ಮೊದಲ ಹಂತದಲ್ಲಿ ಪ್ರಾಂತೀಯ ಕಾಂಗ್ರೆಸ್ಸು ಕೂಡ ಬೆಂಬಲಿಸಿತು.

ಆದರೆ ಸರ್ಕಾರ ಪ್ರಜಾಸಂಘವನ್ನು ನಿಷೇಧಿಸಿ, ಮುನವಳ್ಳಿ ಅವರನ್ನು ಬಂಧಿಸಿ ಜೈಲಿಗೆ ಹಾಕಿತು. ತಮ್ಮ ನಾಯಕನನ್ನು ಬಿಡುಗಡೆ ಮಾಡಬೇಕೆಂದು ಜನರು ಜೈಲಿಗೆ ಮುತ್ತಿಗೆ ಹಾಕಿದರು (1939). ಜೈಲು ಸುಟ್ಟು ಧ್ವಂಸವಾಯಿತು. 8 ಜನ ಪೊಲೀಸರನ್ನು ಕೈದಿಗಳು ಕೊಚ್ಚಿಹಾಕಿದರು. ಸರ್ಕಾರ ಗೋಲಿಬಾರ್ ಮಾಡಿತು. 4 ಜನ ಚಳವಳಿಗಾರರು ಕೊಲ್ಲಲ್ಪಟ್ಟರು. ಕೊಲ್ಲಾಪುರದಿಂದ ಸೈನ್ಯವನ್ನು ಕರೆಸಲಾಯಿತು. ವಿಚಾರಣೆ ಏರ್ಪಟ್ಟು 8 ಜನಕ್ಕೆ ಫಾಸಿ ಶಿಕ್ಷೆಯಾಯಿತು. ಅನೇಕರಿಗೆ ಜೀವಾವಧಿ ಶಿಕ್ಷೆಯಾಯಿತು. ಕಂಡಲ್ಲಿ ಕೊಲ್ಲುವ ಶಿಕ್ಷೆ ಪಡೆದ ಮಹದೇವಪ್ಪ ಪಟ್ಟಣ ಮುಂತಾದ ನಾಯಕರು ಭೂಗತರಾದರು.

ಆದರೆ ಹೋರಾಟ ತಣ್ಣಗಾಗಲಿಲ್ಲ. ಸಂಸ್ಥಾನಿಕರು ಚಳವಳಿಗೆ ಮಣಿದರು. ಮರಾಠಿಯ ಬದಲಿಗೆ ಕನ್ನಡ ದರ್ಬಾರದ ಭಾಷೆಯಾಯಿತು. ಸ್ಥಳೀಕರನ್ನು ಆಡಳಿತದಲ್ಲಿ ಸೇರಿಸಿಕೊಳ್ಳಲಾಯಿತು. ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ವಾರಂಟುಗಳನ್ನು ಹಿಂಪಡೆಯಲಾಯಿತು. ಆದರೂ ಜನರಲ್ಲಿ ಗೋಲಿಬಾರಿಗೂ ಗಲ್ಲುಶಿಕ್ಷೆಗೂ ಈಡಾಗಿ ಪ್ರಾಣಾರ್ಪಣೆ ಮಾಡಿದ ಹನ್ನೆರಡು ಜನರ ಸಾವಿನ ದುಗುಡವು ಇನ್ನೂ ಹಸಿಯಾಗೇ ಇತ್ತು.
ಅಷ್ಟರಲ್ಲಿ ಬ್ರಿಟೀಷರು ಕಾಂಗ್ರೆಸ್ಸಿನವರಿಗೆ ಅಧಿಕಾರ ಹಸ್ತಾಂತರ ಮಾಡಿ (1947) ತೆರಳಿದರು. ಆದರೆ ರಾಮದುರ್ಗವು ಸ್ವತಂತ್ರ ಭಾರತದ ಒಕ್ಕೂಟದಲ್ಲಿ ವಿಲೀನವಾಗಲಿಲ್ಲ. ಇದರಿಂದ ನಿಂತಿದ್ದ ಚಳವಳಿ, ರಾಮದುರ್ಗ ಸಂಸ್ಥಾನವನ್ನು ಕರ್ನಾಟದಲ್ಲಿ ವಿಲೀನಗೊಳಿಸುವ ಏಕೀಕರಣ ಚಳವಳಿಯ ಹೋರಾಟವಾಗಿ ಮತ್ತೆ ಪುಟಿದೆದ್ದಿತು.

1948ರಲ್ಲಿ ರಾಮದುರ್ಗದ ವಿಲೀನಕ್ಕೆ ರಾಜೇಸಾಹೇಬ ಸಹಿ ಮಾಡಬೇಕಾಯಿತು. ಹೀಗೆ ಕಂದಾಯ ಮನ್ನಾ ವಿನಂತಿಯಾಗಿ ಶುರುವಾದ ಚಳವಳಿಯು ಕನ್ನಡ ಭಾಷೆಯನ್ನು ಜಾರಿಗೆ ತರುವ, ಆಡಳಿತದಲ್ಲಿ ಸ್ಥಳೀಯರಿಗೆ  ಮೀಸಲಾತಿ ಕೇಳುವ, ಕಡೆಗೆ ಸಂಸ್ಥಾನವನ್ನು ಕರ್ನಾಟಕದಲ್ಲಿ ವಿಲೀನಗೊಳಿಸುವ ಚಳವಳಿಯಾಗಿ ರೂಪಾಂತರಗೊಂಡು, ಮುಕ್ತಾಯ ಕಂಡಿತು. ರಾಮದುರ್ಗದ ಈ ವಿಶಿಷ್ಟ ಬಂಡಾಯವನ್ನು ಈಗ ಹೊರಳಿ ನೋಡುವಾಗ, ವರ್ತಮಾನಕ್ಕೆ ಬೇಕಾದ ಚರಿತ್ರೆಯ ಅನೇಕ ಪಾಠಗಳಿರುವುದು ತಿಳಿಯುತ್ತದೆ:

1. ಎಲ್ಲ ದೊಡ್ಡ ಕ್ರಾಂತಿಗಳು ಜನರ ಸಣ್ಣಪುಟ್ಟ ಬೇಡಿಕೆಗಳಿಂದ ಮನವಿಗಳ ಮೂಲಕವೇ ಶುರುವಾಗುತ್ತವೆ; ಅವುಗಳ ನ್ಯಾಯಬದ್ಧ ಮನವಿಗಳನ್ನು, ಪ್ರಜಾಪ್ರಭುತ್ವೀಯ ಹಕ್ಕೊತ್ತಾಯಗಳನ್ನು ಅಧಿಕಾರಸ್ಥರು ನಿರ್ದಯವಾಗಿ ತಿರಸ್ಕರಿಸಿದ ಬಳಿಕವೇ, ಅವು ಅನಿವಾರ್ಯವಾಗಿ ರಕ್ತಪಾತದ ಹಾದಿಯನ್ನು ಹಿಡಿಯುತ್ತವೆ. 

2. ಭೂಕಂದಾಯ ಕಟ್ಟಲು ನಿರಾಕರಿಸುವ ಮೂಲಕ ಆರಂಭವಾದ ರಾಮದುರ್ಗದ ಚಳವಳಿಯಲ್ಲಿ ಸಹಜವಾಗಿ ಭೂಮಿಯುಳ್ಳ ಜಮೀನುದಾರರು ಹಾಗೂ ವ್ಯಾಪಾರಿಗಳು ಮುಂಚೂಣಿಯಲ್ಲಿದ್ದರು ನಿಜ. ಆದರೂ ಇದರೊಳಗೆ  ಸಂಸ್ಥಾನದಲ್ಲಿ ಲಾಭದಾಯಕ ಸ್ಥಾನದಲ್ಲಿದ್ದ ಬ್ರಾಹ್ಮಣರೂ ಮುಸ್ಲಿಮರೂ ಮರಾಠರೂ ಸೇರಿಕೊಂಡರು. ಬಹುಶಃ ಸಾಮುದಾಯಕ ಚಳವಳಿಗಳಿಗೆ ಒಂದು ಜಾತಿ ಇಲ್ಲವೇ ವರ್ಗದ ಆಯಾಮವಿದ್ದರೂ, ಅದರ ಬೇಡಿಕೆಯ ನ್ಯಾಯಬದ್ಧತೆಯು ಪ್ರಭುತ್ವಗಳ ವಿರುದ್ಧ ಜನರನ್ನು ಜಾತ್ಯತೀತವಾಗಿ ಒಗ್ಗೂಡಿಸಬಲ್ಲದು. ಇಷ್ಟಾದರೂ ಜಮೀನ್ದಾರರಲ್ಲಿ ಕೂಲಿ ಮತ್ತು ಜೀತ ಮಾಡಿಕೊಂಡಿದ್ದ ದಲಿತರು, ಇಡೀ ಬಂಡಾಯದಲ್ಲಿ ಯಾವ ಪಾತ್ರ ವಹಿಸಿದರು? ಇದೊಂದು ಪ್ರಶ್ನೆಯಾಗಿಯೇ ಉಳಿಯುತ್ತದೆ. ತಮ್ಮ ನಿತ್ಯ ಕಷ್ಟಗಳಿಂದ ಬಿಡುಗಡೆಗೊಳಿಸದ ಚಳವಳಿಯನ್ನು ಅವರು ತಮ್ಮದೆಂದು ಹೇಗೆ ಭಾವಿಸಬೇಕು?

3. ಮೈಸೂರು, ಸೊಂಡೂರು, ಜಮಖಂಡಿ, ಸವಣೂರು ಮುಂತಾದ ಬ್ರಿಟೀಷರ ಹುಕುಮತ್ತಿನಲ್ಲಿದ್ದ ‘ಸ್ವಂತಂತ್ರ’ ಸಂಸ್ಥಾನಗಳು, ಜನಪರವಾದ ಕೆಲವು  ಕೆಲಸಗಳನ್ನು ಎಷ್ಟೇ ಮಾಡಿದ್ದರೂ, ವಸಾಹತುಶಾಹಿ ವಿರೋಧಿ ಚಳವಳಿಯನ್ನು ದಮನ ಮಾಡಿದವು; ಹೋರಾಟಗಾರರನ್ನು ಗಲ್ಲಿಗೇರಿಸಿದವು ಎಂಬ ಕಳಂಕದಿಂದ ಪಾರಾಗುವುದು ಸಾಧ್ಯವಿಲ್ಲ.

4. ಜನರ ಆರ್ಥಿಕ - ರಾಜಕೀಯ ಹೋರಾಟಗಳಲ್ಲಿ ಜನ ಭಾಷೆಯ ಸಂಗತಿಯೂ ಹೇಗೋ ಸೇರಿಕೊಳ್ಳುತ್ತದೆ; ಪಾಕಿಸ್ತಾನದಿಂದ ವಿಮೋಚನೆ ಪಡೆಯುವುದಕ್ಕೆ ಮಾಡಿದ ಚಳವಳಿಯಲ್ಲಿ ಬಾಂಗ್ಲಾ ಜನರು ಉರ್ದು ಹೇರಿಕೆಯನ್ನು ವಿರೋಧಿಸಿ, ಬಂಗಾಳಿಯ ಹಕ್ಕನ್ನು ಹೀಗೆ ಮಂಡಿಸಿದ್ದರು. ಜನರನ್ನು ಒಗ್ಗೂಡಿಸುವಲ್ಲಿ ಕೆಲವೊಮ್ಮೆ ಧರ್ಮಕ್ಕಿಂತ ಮಿಗಿಲಾದ ಪಾತ್ರವನ್ನು ಭಾಷೆ ಮಾಡಬಲ್ಲದು.     

5. ಕೆಲವು ಉಚ್ಚಜಾತಿಯ ಕಾಂಗ್ರೆಸ್ಸಿಗರು, ಒಳಗೇ ಸಂಸ್ಥಾನಿಕರ ಪರವಾಗಿದ್ದು, ಕಳಿಸಿದ ನೇತ್ಯಾತ್ಮಕ ವರದಿಯ ಪರಿಣಾಮ, ಗಾಂಧೀಜಿ, ರಾಮದುರ್ಗದ ‘ಹಿಂಸಾತ್ಮಕ’ ಚಳವಳಿ ಖಂಡಿಸಿ ಹೇಳಿಕೆ ಕೊಟ್ಟರು. ಆದರೆ ರಾಮದುರ್ಗದ ನಿಯೋಗವನ್ನು ಭೇಟಿ ಮಾಡಿದ ಬಳಿಕ ತಮ್ಮ ನಿಲುವನ್ನು ಬದಲಿಸಿಕೊಂಡರು. ರಾಷ್ಟ್ರದ ನಾಯಕರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ, ಅವರು ಎಲ್ಲೋ ಕುಳಿತು ಹೊರಡಿಸುವ ಸಂದೇಶ ಯಾ ಆದೇಶಗಳಿಗೆ ಅನುಸಾರ ಜನರ ಹೋರಾಟಗಳು ನಡೆಯುವುದಿಲ್ಲ. ಅವು ಸ್ಥಳೀಯ ಒತ್ತಡಗಳಿಗೆ ಅನುಸಾರವಾಗಿ ಹುಟ್ಟಿ ಜರುಗುತ್ತವೆ. ಶಿವಮೊಗ್ಗ ಸೀಮೆಯ ಈಸೂರಿನಲ್ಲಿ ಬ್ರಿಟೀಷರ ವಿರುದ್ಧದ  ಹೋರಾಟವು (1942) ಕೂಡ ಹೀಗೇ ಗಾಂಧೀಜಿಯ ಆಶಯಕ್ಕೆ ವಿರುದ್ಧವಾಗಿಯೇ ನಡೆಯಿತು.

6. ಚಳವಳಿಗಳು ಕೆಲವು ದೊಡ್ಡ ನಾಯಕರನ್ನು ಹೊಮ್ಮಿಸುತ್ತವೆ, ಅವರ ಮಹತ್ವವಿದ್ದೇ ಇದೆ, ನಿಜ. ಆದರೆ, ಚಳವಳಿಯಲ್ಲಿ ಪ್ರಾಣತ್ಯಾಗ ಮಾಡಿದ ಅನೇಕ ಅನಾಮಿಕರು ನಾಯಕರ ಪ್ರಭಾವಳಿಯಲ್ಲಿ ಕ್ರಮೇಣ ಹಿನ್ನೆಲೆಗೆ ಸರಿಯುತ್ತಾರೆ. ರಾಮದುರ್ಗದಲ್ಲಿ ಫಾಸಿಶಿಕ್ಷೆ ಅನುಭವಿಸಿದವರು ಮತ್ತು ಗೋಲಿಬಾರಿನಲ್ಲಿ ಪ್ರಾಣ ಕಳೆದುಕೊಂಡವರು ಮರೆವಿಗೆ ಸಂದಂತೆ ಕಾಣುತ್ತದೆ.

7. ರಾಮದುರ್ಗದ ದಂಗೆಯ ಪ್ರಕರಣ ಕುರಿತು ವಿಚಾರಣೆ ನಡೆಸಲು ಮುಂಬೈ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದ ದಾವರ್ ಅಧ್ಯಕ್ಷತೆಯಲ್ಲಿ ಆಯೋಗ ನೇಮಕವಾಗಿತ್ತು. ಅನೇಕ ಸ್ವಾರಸ್ಯಕರ ಸಂಗತಿಗಳಿರುವ ಈ ದಾವರ್ ವರದಿ ಕನ್ನಡದಲ್ಲೂ ಪ್ರಕಟವಾಗಿದೆ. ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ, ಕತೆ - ಕಾದಂಬರಿಗಳು ಮಾತ್ರವಲ್ಲ, ಇವೂ ಮಹತ್ವದ ಆಕರಗಳೇ. ಮರಾಠಿ, ಫಾರಸಿ ಮಿಶ್ರಿತವಾದ ಕನ್ನಡ ಭಾಷೆಯಲ್ಲಿ ಸಿದ್ಧವಾಗಿರುವ ಸದರಿ ವರದಿಯಲ್ಲಿ ಪ್ರಜಾಸಂಘದ ಮೇಲಿನ ಆಪಾದನೆಯೊಂದು ಹೀಗಿದೆ: ಸಂಘದವರು ‘ರಾಜೇಸಾಹೇಬರ ಬಗಿ ಹೋಗುವ ಮಾರ್ಗವನ್ನು ಕಟ್ಟಿದರು ಮತ್ತು ಹೋಳಿಹುಣ್ಣಿಮೆಯ ಶಬ್ದಗಳನ್ನು ಪ್ರಯೋಗಿಸಿದರು’. ರಾಜೇಸಾಹೇಬರ ಪರವಾಗಿದ್ದ ಈ ವರದಿ, ಹೇಗೆ ಸರ್ಕಾರಗಳು ಬಲಿಪಶುಗಳನ್ನೇ ಅಪರಾಧಿಗಳನ್ನಾಗಿ ಮಾಡಲು ವಿಚಾರಣಾ ಆಯೋಗಗಳನ್ನು ಉಪಕರಣವಾಗಿ ಬಳಸುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

8. ಚಳವಳಿಯ ನಾಯಕತ್ವ ವಹಿಸಿದ್ದ ಮುನವಳ್ಳಿಯವರು ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಭೆಯ ಸದಸ್ಯರಾಗಿಯೂ ಕೆಲಸ ಮಾಡಿದರು. ಆದರೆ ದೊಡ್ಡ ನಾಯಕರ ಕೊನೆಯ ದಿನಗಳು ಕಷ್ಟಕರವಾಗಿದ್ದವು. ರಾಮದುರ್ಗದ ಚಳವಳಿಗಾರರನ್ನು ಜನ ಚುನಾವಣೆಗಳಲ್ಲಿ ಸೋಲಿಸಿದರು. ಚರಿತ್ರೆ ವಿಚಿತ್ರವಾಗಿ ತಿರುವು ಪಡೆಯುತ್ತದೆ. 

9. ರಾಮದುರ್ಗದ ಬಂಡಾಯದ ಹಾಗೆಯೇ, ಕರ್ನಾಟಕದಲ್ಲಿರುವ ಅನೇಕ ಜನಪರ ಹೋರಾಟಗಳು ಸ್ಥಳೀಯ ಮಟ್ಟದಲ್ಲಿ ನಡೆದಿವೆ. ಅವು ಸರಿಯಾಗಿ ದಾಖಲಾಗಿಲ್ಲ. ಉದಾಹರಣೆಗೆ, ಉತ್ತರ ಕನ್ನಡದಲ್ಲಿ 40ರ ದಶಕದಲ್ಲಿ ನಡೆದ ಕರನಿರಾಕರಣೆ ಚಳವಳಿ ಹಾಗೂ ಅದರ ನಾಯಕರಾದ ಪಿಕಳೆ ಮಾಸ್ತರರ ಧೀಮಂತ ವ್ಯಕ್ತಿತ್ವ; 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧಾರವಾಡದಲ್ಲಿ ಪ್ರಾಣತೆತ್ತ ಅನಾಮಿಕರು; ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿ ಗಲ್ಲಿಗೇರಿದ 26 ಜನ ರೈತಾಪಿ ವೀರರು; ಬ್ರಿಟೀಷರ ವಿರುದ್ಧ ನಡೆದ ಅಮರಸುಳ್ಯದ ಬಂಡಾಯ- ಇತ್ಯಾದಿ. ಈಗಿನ ಕರ್ನಾಟಕವು ಇಂತಹ ನೂರಾರು ಹೋರಾಟಗಳಿಂದಲೂ ರೂಪುಗೊಂಡಿದೆ.

ಇವೆಲ್ಲವೂ ರಾಜಪ್ರಭುತ್ವದಲ್ಲಿ ಅಥವಾ ಪರಕೀಯರೆನಿಸಿಕೊಂಡ ಬ್ರಿಟೀಷರು ಆಳುವಾಗ ನಡೆದ ಹೋರಾಟಗಳು. ಆದರೆ ‘ಸ್ವತಂತ್ರ’ ಭಾರತದಲ್ಲಿ, ಪ್ರಜೆಗಳಿಂದ ಆಯ್ಕೆಯಾದ ಎನ್ನಲಾಗುವ ನಮ್ಮ ಪ್ರಭುತ್ವಗಳು ರೈತರನ್ನು ಹೇಗೆ ನಡೆಸಿಕೊಳ್ಳುತ್ತಿವೆ? ಹೋದ ವಾರ, ಕೊಪ್ಪಳದಲ್ಲಿ ಮಾಡಿದ ಕೆಲಸಕ್ಕೆ ಕೂಲಿಕೇಳಲು ಹೋದ ರೈತರ ಮೇಲೆ ನಡೆದ ಲಾಠಿಚಾರ್ಜು ನೋಡುವಾಗ, ಸಂಸ್ಥಾನಿಕರು ಕೊಟ್ಟ ಕಿರುಕುಳ ಏನೂ ಅಲ್ಲ ಅನಿಸುತ್ತದೆ.

ಸ್ಥಿತಿ ಏನು ಬದಲಾಗಿದೆ? ಭಾರತದ ಪ್ರಭುತ್ವಗಳು ಉದ್ಯಮಗಳ ಮತ್ತು ಬಂಡವಾಳಿಗರ ಪರವಾಗಿ ಕೆಲಸ ಮಾಡುತ್ತ, ರೈತರ ಜಮೀನನ್ನು ಅವರಿಗೆ ಕಿತ್ತು ಹಂಚುತ್ತ, ಕಂಠಮಟ್ಟ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತ, ಲಕ್ಷಾಂತರ ರೈತರ ವಲಸೆಗೂ ಆತ್ಮಹತ್ಯೆಗೂ ಕಾರಣವಾಗುತ್ತಿವೆ. ಇಂತಹ ಹೊತ್ತಲ್ಲಿ ಹುಟ್ಟುವ ಪ್ರಶ್ನೆ: ರಾಜಪ್ರಭುತ್ವಗಳಲ್ಲಿ ಕೆಟ್ಟಕಾನೂನುಗಳ ವಿರುದ್ಧ ಹೋರಾಟ ಮಾಡಿದ ಜನ, ಪ್ರಜಾಪ್ರಭುತ್ವದಲ್ಲೇಕೆ ಹೋರಾಡುವ ಕೆಚ್ಚನ್ನೇ ಕಳೆದುಕೊಂಡಂತಿದ್ದಾರೆ? ಉತ್ತರ: ಸಾಮೂಹಿಕ ಕಾರಣಕ್ಕೆ ಒಗ್ಗೂಡುವ ಚೈತನ್ಯವನ್ನೇ ಜನ ಕಳೆದುಕೊಂಡಿದ್ದಾರೆಯೊ, ಅವರನ್ನು ಒಗ್ಗೂಡಿಸುವ ಮುನವಳ್ಳಿಯವರಂತಹ ನಾಯಕರಿಲ್ಲವೊ ಅಥವಾ ರಾಮದುರ್ಗದ ಬಂಡಾಯದಂತಹ ಘಟನೆ ಮರುಕಳಿಸಲು ತಕ್ಕ ಸಮಯಕ್ಕಾಗಿ ಕಾಯುತ್ತಿದೆಯೊ?

ವರ್ಷದ ಕಂದಾಯ ಮನ್ನಾ ಮಾಡಬೇಕೆಂದು ವಿನಂತಿ ಮಾಡಲು ಬಂದ ಜನರ ಮೇಲೆ ಲಾಠಿ ಬೀಸಿದ, ಗುಂಡು ಹಾರಿಸಿದ ರಾಮದುರ್ಗದ ವಾಡೆ ಗತದರ್ಪವನ್ನು ಬಿಟ್ಟು ಮಂಕಾಗಿ ಹಿನ್ನೆಲೆಗೆ ಸರಿದಿದೆ; ರಾಮದುರ್ಗ ಸೀಮೆಯ ಸಮಸ್ತ ಜಾತಿ, ವರ್ಗ, ಧರ್ಮಗಳಿಗೆ ಸೇರಿದ ತರುಣ ತರುಣಿಯರು ಶಿಕ್ಷಣ ಪಡೆಯುವ ಕಾಲೇಜಾಗಿಯೂ ಬದಲಾಗುತ್ತಿದೆ. ಇದು ಚರಿತ್ರೆ ಬರೆದ ಅಪೂರ್ವ ಕಥನ.

ವಾಡೆಯನ್ನೆಲ್ಲ ನೋಡಿ ಹೊರಡುವಾಗ ಸಂಜೆಯಾಗುತ್ತಿತ್ತು. ಸಂಜೆಯ ಬೆಳಕು ಬಿದ್ದ ಮುನವಳ್ಳಿಯವರ ಪ್ರತಿಮೆಯ ಮುಖವನ್ನು ನಿಟ್ಟಿಸಿದೆ. ಅಲ್ಲಿ ಅರ್ಥಪೂರ್ಣವಾದ ಮುಗುಳ್ನಗೆ ಕಂಡಿತು.

(ಕೃತಜ್ಞತೆ: ಪುಸ್ತಕ ಮತ್ತು ದಾಖಲೆ ಒದಗಿಸಿದ ಶ್ರೀ ಎ.ಬಿ.ವಗ್ಗರ್, ಡಾ. ವೈ.ಬಿ. ಕುಲಗೋಡ, ಮೃಣಾಲಿನಿ ಹಾಗೂ ಚೇತನ್ ಕುಲಕರ್ಣಿ ಅವರಿಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT