ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಯಣವೆಂಬುದು ಎಡಪಂಥ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ ವಾಲ್ಮೀಕಿ ಒಬ್ಬ ಬದ್ಧ ಲೇಖಕ. ‘ರಾಮಾಯಣ’ ಒಂದು ಬದ್ಧ ಕಲಾಕೃತಿ. ಎಡಪಂಥೀಯರು ಬಯಸುವ ಅನೇಕ ಆಶಯಗಳು ಅಂತರ್ಗತವಾಗಿರುವ ಕೃತಿಯಿದು. ಹಾಗಂತ ಭಿನ್ನತೆಯ ಅಂಶಗಳೂ ಇಲ್ಲದಿಲ್ಲ ಇಲ್ಲಿ. ಶ್ರೀರಾಮ ತತ್ವ ಹಾಗೂ ಸಮಾಜವಾದ ಇವುಗಳ ನಡುವೆ ಇರುವ ಸಮಾನತೆ ಹಾಗೂ ಭಿನ್ನತೆ ಎರಡನ್ನೂ ಹುಡುಕಬೇಕಾದದ್ದು ರಾಮಾಯಣದ ತುಂಬ ತುಂಬಿಕೊಂಡಿರುವ ಕಾಡುಗಳಲ್ಲಿ. ಅಲ್ಲಿಂದಲೇ ಲೇಖನವನ್ನು ಆರಂಭಿಸುತ್ತೇನೆ.

ಹೌದು; ರಾಮಾಯಣದ ಸುಂದರ ಭಾಗಗಳೆಲ್ಲ ಇರುವುದು ಕಾಡೊಳಗೆ. ಅದರ ಅಸಾಧಾರಣ ಕವಿತ್ವ ಪ್ರಕಟವಾಗುವುದು ಕಾಡಿನ ವರ್ಣನೆಯೊಳಗೆ. ಕಾಡಿರದೆ ರಾಮಾಯಣದ ಕತೆಗೆ ಸ್ವಾರಸ್ಯವೇ ಇಲ್ಲ. ಗ್ರೀಕರ ಮಹಾಕಾವ್ಯಗಳಲ್ಲಿ ಹೇಗೆ ಸಮುದ್ರವು ಪ್ರಮುಖ ಪಾತ್ರ ವಹಿಸುತ್ತದೆಯೋ ಹಾಗೆಯೇ ರಾಮಾಯಣದಲ್ಲಿ ಕಾಡು ಪ್ರಮುಖ ಪಾತ್ರ ವಹಿಸುತ್ತದೆ.

ಹಾಗಂತ ರಾಮಾಯಣವು ಕಾಡಿನ ಕತೆಯೇನಲ್ಲ. ನಾಡಿನ ಕತೆಯದು, ಸಭ್ಯತೆಯ ಕತೆ, ರಾಮನ ಕತೆ. ಸಭ್ಯತೆಯ ಕತೆಯೊಂದನ್ನು ಕವಿಯು ಹೀಗೆ ಕಾಡೊಳಗೆ ಅದ್ದಿ ಇರಿಸಿರುವುದಕ್ಕೆ ಬಲವಾದ ಕಾರಣಗಳಿವೆ. ಸಭ್ಯತೆಗೆ ಪ್ರಕೃತಿಯೊಟ್ಟಿಗಿನ ಸಖ್ಯ ಅತ್ಯಗತ್ಯ ಎಂದು ಸಾರಬೇಕಿದೆ ಮಹಾಕವಿಗೆ.

ಕಾಡಿನ ಸಖ್ಯ ಕಳಚಿದಾಗ ಸಭ್ಯತೆಗಳು ಅತಿರೇಕದ ರೋಗಕ್ಕೆ ಪಕ್ಕಾಗುತ್ತವೆ, ಅತಿಯಾಗಿ ಕಟ್ಟಲ್ಪಡುತ್ತವೆ; ಸ್ಥಾವರಗಳು ಅತಿಯಾಗಿ ಬೆಳೆಯತೊಡಗುತ್ತವೆ, ಕಾನೂನುಗಳು ಅತಿಯಾಗಿ ಬೆಳೆಯತೊಡಗುತ್ತವೆ, ಶಿಷ್ಟಾಚಾರಗಳು ಅತಿಯಾಗಿ ಬೆಳೆಯತೊಡಗುತ್ತವೆ, ಮಂದಿರಗಳು ಅತಿಯಾಗಿ ಬೆಳೆಯತೊಡಗುತ್ತವೆ, ಹಿಂಸೆ ಅತಿಯಾಗಿ ಬೆಳೆಯತೊಡಗುತ್ತದೆ, ಸಭ್ಯತೆಯೇ ಒಂದು ರೋಗವಾಗಿ ಪರಿಣಮಿಸುತ್ತದೆ ಎಂದು ಸೂಚಿಸುತ್ತಿದೆ ರಾಮಾಯಣ. ಲಂಕಾನಗರಿ ಹಾಗೂ ಲಂಕಾಧಿಪತಿ ರಾವಣನ ಮೂಲಕ ಹೀಗೆ ಸೂಚಿಸುತ್ತದೆ.

ಲಂಕಾನಗರಿ ಹಾಗೂ ಲಂಕಾಧಿಪತಿ ರಾವಣರು ಅತಿಯಾಗಿ ಕಟ್ಟಲ್ಪಟ್ಟ ಸಭ್ಯತೆಗೆ, ನಿಗ್ರಹವಿಲ್ಲದ ಸಭ್ಯತೆಗೆ ಪ್ರತೀಕ. ಆದರೆ ಥಟ್ಟನೆ ಹಾಗೆನ್ನಿಸುವುದಿಲ್ಲ. ಏಕೆಂದರೆ ಕಾಡುಗಳಲ್ಲಿ ಅಲೆದಾಡುವ ರಾಕ್ಷಸರೂ ಇದ್ದಾರೆ ರಾಮಾಯಣದಲ್ಲಿ. ಆದರೆ ಇವರು ನೇರ ನೇರ ಅಸಭ್ಯರು, ಸಿನಿಮಾಗಳಲ್ಲಿ ನಾಯಕ ನಟನಿಂದ ಒದೆ ತಿನ್ನುವ ರೌಡಿಗಳಿದ್ದಂತೆ. ಡೊಳ್ಳು ಹೊಟ್ಟೆಯವರು, ಅಸಹ್ಯ ದೇಹ ಉಳ್ಳವರು, ಕಣ್ಣಿನ ಪಿಸುರು ಕೂಡಾ ತೆಗೆಯದೆ, ಸ್ನಾನ ಕೂಡ ಮಾಡದೆ, ಮೂರೂ ಹೊತ್ತು ಋಷಿಮುನಿಗಳನ್ನು ಹಿಂಸಿಸುತ್ತ ಕಾಡುಮೇಡುಗಳಲ್ಲಿ ಅಲೆಯುವವರು ಇವರು.

ನಿಜವಾದ ರಾಕ್ಷಸರು, ಲಂಕಾನಗರಿಯಲ್ಲಿ ಬದುಕುವ ಸ್ಥಿತಿವಂತ ನಾಗರಿಕರು. ಲಂಕಾಧಿಪತಿ ರಾವಣ ಸುಂದರಾಂಗ, ಸಮರ್ಥ ಆಡಳಿತಗಾರ ಹಾಗೂ ಮಹಾ ಪರಾಕ್ರಮಿ ಯೋಧ, ಸಂಗೀತ– ಸಾಹಿತ್ಯ ಹಾಗೂ ಕಲೆಗಳಲ್ಲಿ ಅಪಾರವಾದ ಅಭಿರುಚಿಯಿರುವ ರಸಿಕ ಹಾಗೂ ಬ್ರಾಹ್ಮಣ. ಆತನ ಮಕ್ಕಳು, ಮಡದಿಯರು, ಸ್ನೇಹಿತರು, ಕವಿಗಳು, ಸಭಾಸದರು, ಪ್ರೇಯಸಿಯರು, ಸೇನಾಧಿಪತಿಗಳು... ಎಲ್ಲರೂ ಅವನಂತೆಯೇ ಸರಿ.

ಕುತೂಹಲಕರ ಸಂಗತಿಯೆಂದರೆ, ರಾಕ್ಷಸತನದ ಈ ಮತ್ತೊಂದು ಚಿತ್ರಣವನ್ನು ಕವಿ ಒದಗಿಸುವುದು, ನಿಗ್ರಹಕ್ಕೆ ಹೆಸರಾದ ಒಬ್ಬ ಬ್ರಹ್ಮಚಾರಿಯ ಮೂಲಕ. ಇತ್ತ ಕಪಿಯೂ ಆದ, ಅತ್ತ ಸಭ್ಯನೂ ಆದ ಆಂಜನೇಯನ ಕಣ್ಣುಗಳಲ್ಲಿ ಕಾಣುತ್ತೇವೆ ನಾವು, ನಗರ ನಾಗರಿಕತೆಯ ಅತಿರೇಕಗಳನ್ನು. ಶತ್ರುಪಾಳೆಯದ ಗುಪ್ತಚಾರಿಕೆ ಮಾಡಲೆಂದೇ ಸಣ್ಣ ಕೋತಿಯೊಂದರ ರೂಪ ತಾಳಿ ತಡರಾತ್ರಿಯಲ್ಲಿ ರಾವಣನ ಅರಮನೆಯನ್ನು ಪ್ರವೇಶಿಸುತ್ತಾನೆ ಆಂಜನೇಯ.

ರಾತ್ರಿಯಿಡೀ ನಡೆದ ಪಾನಗೋಷ್ಠಿ ಆಗಷ್ಟೇ ಮುಗಿದಿದೆ, ಗಾಢನಿದ್ರೆಯಲ್ಲಿ ಪರ್ಯವಸಾನ ಹೊಂದಿದೆ. ಯಾರದೋ ತೆಕ್ಕೆಯಲ್ಲಿ ಯಾರೋ ಮಲಗಿದ್ದಾರೆ. ಎಲ್ಲರೂ ಎಲ್ಲವೂ ಅಸ್ತವ್ಯಸ್ತವಾಗಿವೆ. ವಾದ್ಯಗಾರ್ತಿಯರು ವಾದ್ಯಗಳನ್ನೇ ಪ್ರಿಯಕರನೆಂಬಂತೆ ಅವುಚಿಕೊಂಡು ನಿದ್ರೆಗೆ ಜಾರಿದ್ದಾರೆ. ದುಬಾರಿ ಆಭರಣಗಳು ಹಾಗೂ ದುಬಾರಿ ವಸ್ತ್ರಗಳು ವಿವಸ್ತ್ರತೆಯ ವಿವಿಧ ಹಂತಗಳಲ್ಲಿ ಅಲ್ಲಿ ಚೆಲ್ಲಿಕೊಂಡಿವೆ. ಕಾಮವಿಳಿದ ಕಾಮಾಂಗಗಳು ಅಸ್ತವ್ಯಸ್ತವಾಗಿ ಅಲ್ಲಿ ಚೆಲ್ಲಿಕೊಂಡಿವೆ. ತಿಂದುಂಡು ಮಿಕ್ಕಿರುವ ಮಾಂಸದ ಅಡುಗೆಗಳು ಬಂಗಾರದ ತಟ್ಟೆಗಳಿಂದಾಚೆ ತುಳುಕಿವೆ. ಮದ್ಯದ ಗಿಂಡಿಗಳು ಅರೆಬರೆಯಾಗಿ ನಿಂತಿವೆ. ಹಣ್ಣು ಹಂಪಲುಗಳು ಬುಟ್ಟಿಗಳಿಂದಾಚೆ ಉರುಳಿವೆ. ರತ್ನಗಂಬಳಿಗಳು ಹಾಗೂ ಸುಪ್ಪತ್ತಿಗೆಗಳು ಹಾಗೂ ಕುಬೇರನ ವಿಮಾನ ಹಾಗೂ ರಾವಣನ ಸಿಂಹಾಸನ ಎಲ್ಲವೂ ಅಸ್ತವ್ಯಸ್ತವಾಗಿವೆ. ಈ ಎಲ್ಲ ಅಸ್ತವ್ಯಸ್ತತೆಯ ನಡುವೆ ಅಸ್ತವ್ಯಸ್ತತೆಯ ಅಧಿಪತಿ ತಾನೋ ಎಂಬಂತೆ ರಾವಣನು ನಿದ್ರಿಸುತ್ತಿದ್ದಾನೆ.

ಈಗ, ಸಭ್ಯತೆಯ ಚಿತ್ರಣವನ್ನು ಗಮನಿಸಿ. ಅದು ಸರಳತೆಯ ಚಿತ್ರಣವೂ ಹೌದು, ಸಹಜತೆಯ ಚಿತ್ರಣವೂ ಹೌದು, ಆಶ್ರಮವಾಸಿಗಳ ಚಿತ್ರಣವೂ ಹೌದು. ರಾಮ ಕೂಡ ಒಬ್ಬ ಆಶ್ರಮವಾಸಿ. ರಾಮ– ಲಕ್ಷ್ಮಣ– ಸೀತೆಯರು ಅನಿವಾರ್ಯ ಕಾರಣಗಳಿಂದಾಗಿ ಕಾಡಿಗೆ ನೂಕಲ್ಪಟ್ಟಿದ್ದಾರೆ. ಆದರೆ ಅನಿವಾರ್ಯವನ್ನು ಘನತೆಯಿಂದ ಸ್ವೀಕರಿಸಿದ್ದಾರೆ. ಆಶ್ರಮವಾಸವನ್ನು ಘನತೆಯಿಂದ ಸ್ವೀಕರಿಸಿದ್ದಾರೆ. ಅದೇ ಅವರ ಹೆಗ್ಗಳಿಕೆ.

ರಾಮಾಯಣದಲ್ಲಿ ನೂರಾರು ಆಶ್ರಮಗಳು ಹಾಗೂ ಆಶ್ರಮವಾಸಿಗಳು ಚಿತ್ರಿತರಾಗಿದ್ದಾರೆ. ಇವರು ಕಾಡು ಜನರಲ್ಲ, ನಾಡ ಜನರು. ಅರಿವಿನಿಂದ ನಾಡು ತೊರೆದು, ಕಾಡನ್ನು ಪ್ರವೇಶಿಸಿ, ಆಶ್ರಮಗಳನ್ನು ಕಟ್ಟಿಕೊಂಡು ಸಾಧನೆ ಮಾಡುತ್ತಿರುವವರು ಇವರು. ಇವರದ್ದು ಕೇವಲ ಬುದ್ಧಿಯ ಸಾಧನೆ ಅಲ್ಲ; ಸರಳ ಬದುಕಿನ ಸಾಧನೆಯೂ ಹೌದು, ಶ್ರಮದ ಬದುಕಿನ ಸಾಧನೆಯೂ ಹೌದು. ಆಶ್ರಮವಾಸಿಗಳು ಮೂರೂ ಹೊತ್ತು ಮೂಗು ಹಿಡಿದು ಕುಳಿತಿರುವುದಿಲ್ಲ ಅಥವಾ ಲೀಟರುಗಟ್ಟಲೆ ತುಪ್ಪವನ್ನು ಬೆಂಕಿಗೆ ಸುರಿಯುತ್ತ ದಿನವಿಡೀ ಮಣಮಣ ಮಂತ್ರ ಹೇಳುತ್ತಾ ಕಾಲ ನೂಕುವುದಿಲ್ಲ.

ಆಶ್ರಮಗಳಲ್ಲಿ ಸೇವಕರು ಇರುವುದಿಲ್ಲ. ಸುತ್ತ ಒತ್ತರಿಸಿಕೊಂಡು ಬರುತ್ತಿರುವ ಕಾಡಿರುತ್ತದೆ. ನಡುವೆ ಗುಡಿಸಲುಗಳು, ಅಂಗಳಗಳು ಇರುತ್ತವೆ. ದೂಳು ಮೇಲೇಳದಂತೆ ಆಗಾಗ ಅಂಗಳ ಸಾರಿಸಿ ಸ್ವಚ್ಛಗೊಳಿಸಬೇಕಿರುತ್ತದೆ. ಒತ್ತರಿಸಿಕೊಂಡು ಬರುವ ಕಾಡನ್ನು ಮಳೆಗಾಲ ಕಳೆದ ನಂತರ ಸವರಬೇಕಿರುತ್ತದೆ. ಕಟ್ಟಿಗೆ ಒಟ್ಟು ಮಾಡಬೇಕಿರುತ್ತದೆ. ದರ್ಬೆ ಒಟ್ಟು ಮಾಡಬೇಕಿರುತ್ತದೆ. ನಾರು ಮಡಿಗಳನ್ನು ನೇಯ್ದುಕೊಳ್ಳಬೇಕಿರುತ್ತದೆ, ಒಗೆದು ಮಡಿ ಮಾಡಿಕೊಳ್ಳಬೇಕಿರುತ್ತದೆ. ಆಹಾರ ಸಂಗ್ರಹಣೆ ಮಾಡಬೇಕಿರುತ್ತದೆ. ವಯಸ್ಸಾದ ಆಶ್ರಮವಾಸಿಗಳನ್ನು ನೋಡಿಕೊಳ್ಳಬೇಕಿರುತ್ತದೆ. ಒಂದೇ ಎರಡೇ ಕೆಲಸ ಆಶ್ರಮವಾಸಿಗಳಿಗೆ.

ಆಶ್ರಮಗಳ ಸುತ್ತ ಬೇಲಿಗಳಿರುತ್ತವೆ, ಸಾವಯವ ಬೇಲಿ. ಬಳ್ಳಿ ಹಬ್ಬಿಸಿಕೊಂಡು ಹೂವರಳಿಸಿಕೊಂಡು ನಿಂತಿರುವ ಮುಳ್ಳು ಬೇಲಿ. ಇವು ಪ್ರತ್ಯೇಕವೂ ಹೌದು; ಅಲ್ಲವೂ ಹೌದು. ಸಹಜವೂ ಹೌದು; ಅಲ್ಲವೂ ಹೌದು.

ಆಶ್ರಮದ ಬದುಕಿನ ಬಗೆಗೆ ನಮಗೆ ತಪ್ಪು ಕಲ್ಪನೆಗಳಿವೆ. ಉದಾಹರಣೆಗೆ ಆಶ್ರಮಗಳ ಜಿಂಕೆಗಳನ್ನೇ ತೆಗೆದುಕೊಳ್ಳಿ. ಜಿಂಕೆಗಳನ್ನು ಅವುಗಳ ಸೌಂದರ್ಯಕ್ಕಾಗಿ ಅಲ್ಲಿ ತಂದಿರಿಸಿರುತ್ತಾರೆ ಎಂಬುದು ಒಂದು ತಪ್ಪು ಕಲ್ಪನೆ. ಆಶ್ರಮದ ಜಿಂಕೆಗಳು ಅಭಯಾರಣ್ಯಗಳ ಜಿಂಕೆಗಳಿದ್ದಂತೆ, ಹಿಂಸ್ರ ಪಶುಗಳಿಂದ ರಕ್ಷಣೆ ಸಿಗುತ್ತದೆ ಎಂಬ ಕಾರಣದಿಂದಾಗಿ
ಸ್ವ ಇಚ್ಛೆಯಿಂದ ಬಂದಿರುತ್ತವೆ ಆಶ್ರಮಗಳಿಗೆ.

ನಾವು ಪ್ರತ್ಯೇಕತೆ ಬಯಸುವವರು. ನಾಡು ಒತ್ತರಿಸಿಕೊಂಡು ಬರುತ್ತಿರುವ ಸಭ್ಯತೆ ನಮ್ಮದು. ಕಾಡುಗಳಿಗೆ ಬೇಲಿ ಹಾಕಿರುವ ಸಭ್ಯತೆ ನಮ್ಮದು. ಕಾಂಕ್ರೀಟಿನ ಆಶ್ರಮಗಳನ್ನು ಆಯುಧ ಹೊತ್ತ ಸೆಕ್ಯುರಿಟಿ ಗಾರ್ಡುಗಳು ಕಾಯಬೇಕಾದ ಸಭ್ಯತೆ ನಮ್ಮದು. ರಾಮನಾಮ ಜಪಿಸಲಿಕ್ಕೆ ಕೂಡ ವ್ಯವಸ್ಥೆ ಅನಿವಾರ್ಯವಾಗಿಸಿರುವ ಸಭ್ಯತೆ ನಮ್ಮದು. ಹಾಗಾಗಿ, ಸಭ್ಯತೆಗಳ ತುಂಬ ನಾಗರಿಕರೇ ತುಂಬಿಕೊಂಡಿರಬೇಕು, ನಗರಗಳೇ ತುಂಬಿಕೊಂಡಿರಬೇಕು ಎಂದು ನಮಗನ್ನಿಸುತ್ತದೆ. ರಾಮಾಯಣವನ್ನು ಓದುವಾಗ ಅವಸರದಿಂದ ಹಾಳೆ ಮಗುಚಿ, ಪ್ರಕೃತಿ ಚಿತ್ರಣಗಳನ್ನು ತಡಹಾಯ್ದು, ಸಭ್ಯತೆಯನ್ನು ಹುಡುಕುತ್ತೇವೆ ನಾವು.

ರಾಮಾಯಣದಲ್ಲಿ ಚಿತ್ರಿತವಾಗಿರುವುದು ಕೇವಲ ಎರಡು ನಗರಗಳು. ಒಂದು ರಾವಣನ ಲಂಕೆ, ಮತ್ತೊಂದು ದಶರಥನ ಅಯೋಧ್ಯೆ. ರಾವಣನ ಲಂಕೆಯು ಅತಿ-ಸಭ್ಯತೆಗೆ ಪ್ರತೀಕವಾದರೆ, ಅಯೋಧ್ಯೆಯು ಅಪೂರ್ಣ ಸಭ್ಯತೆಗೆ ಪ್ರತೀಕವಾಗಿದೆ. ಆಸ್ತಿವ್ಯಾಜ್ಯದ ತಿಪ್ಪೆಗುಂಡಿಯಾಗಿದೆ, ಸಾಂಸಾರಿಕ ಜಗಳಗಳ ಯುದ್ಧಭೂಮಿಯಾಗಿದೆ. ಅಯೋಧ್ಯೆಗೆ ಪರಿಪೂರ್ಣತೆ ದೊರಕುವುದು ಏನಿದ್ದರೂ ರಾಮಾಯಣದ ಕಡೆಯಲ್ಲಿ, ರಾಮರಾಜ್ಯದಲ್ಲಿ. ರಾಮ ಒಂದೊಮ್ಮೆ ಕಾಡಿಗೆ ಹೋಗದೇ ಇದ್ದಿದ್ದರೆ ಮರ್ಯಾದಾ ಪುರುಷೋತ್ತಮನಾಗಿ ರೂಪಿತನಾಗುತ್ತಿದ್ದಿಲ್ಲ, ಮತ್ತೊಬ್ಬ ದಶರಥನಾಗಿ ರೂಪಿತನಾಗುತ್ತಿದ್ದ ಅಷ್ಟೆ.

ಸಭ್ಯತೆಯ ಕನಿಷ್ಠ ಅಗತ್ಯವಿದು, ಕಾಡಿನೊಟ್ಟಿಗೆ ಸಾಮರಸ್ಯದಿಂದ ಬದುಕುವುದು. ರಾಮನೇ ಏಕೆ, ಅವನ ಅನುಪಸ್ಥಿತಿಯಲ್ಲಿ ಅಯೋಧ್ಯೆಯನ್ನು ಆಳಬೇಕಿರುವ ಭರತ ಕೂಡ ನಗರ ನಾಗರಿಕತೆಯಿಂದ ದೂರ ಕಾಯ್ದುಕೊಳ್ಳುತ್ತಾನೆ. ಆಯೋಧ್ಯೆಯ ಹೊರವಲಯದ ನಂದೀ ಗ್ರಾಮದಲ್ಲಿ ಉಳಿದುಕೊಂಡು ಸರಳವಾಗಿ ಬದುಕುತ್ತ ರಾಜ್ಯಭಾರ ಮಾಡುತ್ತಾನೆ.

ವಾಲ್ಮೀಕಿ ಒಬ್ಬ ಬದ್ಧ ಲೇಖಕ ಎಂದೆ. ಮ್ಯಾಕ್ಸಿಂಗಾರ್ಕಿಗಿಂತ ಮಿಗಿಲಾದ ಬದ್ಧತೆ ಅವನದ್ದು. ಮಯಕಾವಸ್ಕಿಗಿಂತ ಮಿಗಿಲಾದ ಬದ್ಧತೆ ಅವನದ್ದು. ಅದು ನೈತಿಕ ಬದ್ಧತೆ. ದುರಂತವೆಂದರೆ ನೈತಿಕ ಬದ್ಧತೆ ಎಂಬುದು ನಮಗೆ ಬದ್ಧತೆಯಾಗಿ ಕಾಣುವುದಿಲ್ಲ. ನೈತಿಕ ನಿಗ್ರಹವನ್ನು ಹೆಚ್ಚೂ ಕಡಿಮೆ ಕೈಬಿಟ್ಟೂ ಕಾನೂನಿನ ನಿಗ್ರಹವನ್ನು ಮಾತ್ರವೇ
ಸ್ವೀಕರಿಸಿದವರು ನಾವು. ಹಾಗೂ ಭ್ರಷ್ಟವಾಗಿಸಿದವರು. ಏಕೆ ಬೇಕು ನೈತಿಕ ನಿಗ್ರಹ? ಏಕೆ ಬೇಕು ಸರಳ ಬದುಕು? ಏಕೆ ಬೇಕು ದೈಹಿಕ ಶ್ರಮ? ಈ ಪ್ರಶ್ನೆಗಳಿಗೆ ರಾಮಾಯಣದಲ್ಲಿ ಉತ್ತರವಿದೆ. ರಾಮಾಯಣವೇ ಏಕೆ ಹಲವು ಧರ್ಮಗ್ರಂಥಗಳಲ್ಲಿ ಉತ್ತರವಿದೆ.

ಸಭ್ಯತೆ ಎಂಬುದೇ ಒಂದು ಅನ್ಯಾಯದ ವ್ಯವಸ್ಥೆ. ಸಹಜತೆಯ ಮೇಲೆ ಆಕ್ರಮಣ ನಡೆಸುತ್ತಲೇ ಇರುತ್ತದೆ ಅದು. ಆಸ್ತಿ ಸಂಚಯನ ಹಾಗೂ ಮೇಲು– ಕೀಳಿನ ವ್ಯವಸ್ಥೆ ಸಭ್ಯತೆಗಳಿಗೆ ಅನಿವಾರ್ಯ. ಇವುಗಳನ್ನು ನಿಗ್ರಹಿಸಬಹುದಷ್ಟೆ, ನಿವಾರಿಸಲಾಗದು. ಇದೊಂದು ಕಟು ಸತ್ಯ.

ಸಭ್ಯ ರಾಮಚಂದ್ರ ಕೂಡ ಸೀತಾದೇವಿಯನ್ನು ಆಗಾಗ ಹಿಂಸಿಸದೆ, ಅವಮಾನಿಸದೆ ಉಳಿಯಲಾರ. ಕಾಡು ಸವರದೆ ಕೃಷಿ ಮಾಡಲು ಬರುವುದಿಲ್ಲ. ಹೋರಿಯ ಬೀಜ ಒಡೆಯದೆ ನೊಗಕ್ಕೆ ಹೂಡಲು ಬರುವುದಿಲ್ಲ. ಹಸುವಿನ ಮೇಲೆ ಬಲವಂತ ಹೇರದೆ ಹೈನುಗಾರಿಕೆ ಮಾಡಲು ಬರುವುದಿಲ್ಲ. ಜೇನು ಕದಿಯದೆ ಜೇನುಕೃಷಿ ಮಾಡಲು ಬರುವುದಿಲ್ಲ. ತಾಯಿ ಮೀನನ್ನು ಕೊಲ್ಲದೆ ಮೀನುಗಾರಿಕೆ ಮಾಡಲು ಬರುವುದಿಲ್ಲ.

ರಾಮಯಣವು ತಪ್ಪನ್ನು ಒಪ್ಪಿಕೊಳ್ಳುತ್ತದೆ. ನಾವು ಒಪ್ಪಿಕೊಂಡಿಲ್ಲ. ಅಷ್ಟೇ ವ್ಯತ್ಯಾಸ. ಏಸುಕ್ರಿಸ್ತ ಸಹ ಒಪ್ಪಿಕೊಳ್ಳುವ ತಪ್ಪಿದು. ಹಾಗೆಂದೇ ಮನುಷ್ಯ ಮೂಲತಃ ಪಾಪಿಷ್ಠ ಎನ್ನುತ್ತಾನೆ ಏಸುಕ್ರಿಸ್ತ. ಅವನಿಗಿರುವ ಆಯ್ಕೆ ಒಂದೇ, ಕಡಿಮೆ ಪಾಪಿಷ್ಠನಾಗಿ ಉಳಿಯುವುದು. ಸಾಧ್ಯವಿದ್ದಷ್ಟೂ ಪ್ರೀತಿಯಿಂದ, ಸಾಧ್ಯವಿದ್ದಷ್ಟೂ ಸಹನೆಯಿಂದ ಬಾಳುವೆ ಮಾಡಲಿಕ್ಕೆ ಇತರರಿಗೆ ಬಿಡುವುದಷ್ಟೇ ಆತನಿಗಿರುವ ಆಯ್ಕೆ. ಮೈಥುನದಲ್ಲಿದ್ದ ಕ್ರೌಂಚ ಪಕ್ಷಿಯನ್ನು ಕೊಂದನೆಂಬ ಕಾರಣಕ್ಕೆ ಬೇಡನೇ ಆದ ವಾಲ್ಮೀಕಿ ಕವಿಯು ಮತ್ತೊಬ್ಬ ಬೇಡನಿಗೆ ಶಾಪ ಕೊಡುತ್ತಾನೆ. ಏಕೆ ಎಂದು ಯೋಚಿಸಿದ್ದೀರಾ? ನಮ್ಮೊಳಗೆ ಒಂದು ಕಾಡುಪ್ರಾಣಿಯಿದೆ. ಅದನ್ನು ಹಿಂಸ್ರ ಪಶುವಾಗಿಸುತ್ತದೆ ರಾಕ್ಷಸ ನಾಗರಿಕತೆ. ನಮ್ಮೊಳಗಿರುವ ಕಾಡುಪ್ರಾಣಿಯನ್ನು ಪಳಗಿಸು, ಹಸುವನ್ನಾಗಿಸು ಎನ್ನುತ್ತದೆ ರಾಮಾಯಣ. ದುರಂತವೆಂದರೆ ರಾಮಾಯಣವನ್ನು ಅಮಾನವೀಯವಾಗಿ ಅರ್ಥೈಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT