ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ನಾಯಕರನ್ನು ನಮ್ಮ ಹೆಗಲಮಟ್ಟಕ್ಕೆ ಇಳಿಸಿ...

Last Updated 13 ನವೆಂಬರ್ 2016, 5:12 IST
ಅಕ್ಷರ ಗಾತ್ರ

ಕಳೆದ ವರ್ಷ ಟಿಪ್ಪು ಜಯಂತಿ ಆಚರಿಸಿದ ಸಮಯ, ಈಗಿನ ಹಾಗೆಯೇ ಆಗಲೂ ವಿವಾದ ಭುಗಿಲೆದ್ದಿತ್ತು; ಮೂವರ ಬಲಿಯಾಗಿತ್ತು. ನನ್ನ ಮುಸ್ಲಿಂ ಸಹೋದ್ಯೋಗಿ ಜೊತೆಗೆ ಮಾತನಾಡುತ್ತ ‘ನಾವೂ ನೀವೂ ದೂರ ದೂರ ಆಗುತ್ತಿದ್ದೇವೆಯೇ’ ಎಂದು ಕೇಳಿದ್ದೆ. ‘ಈಗಲೇನು ನಾವು ಬಹಳ ಹತ್ತಿರ ಇದ್ದೇವೆಯೇ’ ಎಂದು ಅವರು ಥಟ್ಟನೆ ಉತ್ತರಿಸಿದ್ದರು.

ಅವರ ಮಾತು ಬಹಳ ಅರ್ಥಪೂರ್ಣ ಆಗಿತ್ತು. ನಮ್ಮೊಂದಿಗೆ ಇದ್ದೂ ನಮ್ಮವರು ಅನಿಸದ ಅನಾಥ ಸ್ಥಿತಿಯನ್ನು ಅವರು ಹೇಳುತ್ತಿದ್ದಂತೆ ಇತ್ತು. ಅದಕ್ಕೆ ದೇಶದ ಮಟ್ಟದಲ್ಲಿ ಕಾರಣಗಳು ಇದ್ದುವು. ವಿದೇಶದ ಮಟ್ಟದಲ್ಲಿ ಕಾರಣಗಳು ಇದ್ದುವು. ರಾಜ್ಯ ಮಟ್ಟದಲ್ಲಿಯೂ ಕಾರಣಗಳನ್ನು ಹುಟ್ಟಿ ಹಾಕುವ ಯತ್ನ ಆಗಷ್ಟೇ ನಡೆದಿತ್ತು. ಈ ವರ್ಷ ಅದು ಮತ್ತೆ ಇನ್ನಷ್ಟು ಶಕ್ತಿಯುತವಾಗಿ ನಡೆದಿದೆ.

ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸಿದ್ದರಲ್ಲಿ ತಪ್ಪು ಇದೆಯೇ? ಟಿಪ್ಪುವಿನ ಮೇಲಿನ ನೈಜ ಪ್ರೀತಿಯಿಂದ ಸರ್ಕಾರ ಈ ಜಯಂತಿ ಆಚರಿಸುತ್ತಿದೆಯೇ? ಮುಸಲ್ಮಾನರು ಈ ಜಯಂತಿಯನ್ನು ಹೇಗೆ ನೋಡುತ್ತಾರೆ? ಇದರಿಂದ ಒಟ್ಟು ಸಮಾಜದ ಮೇಲೆ ಏನು ಪರಿಣಾಮ ಆಗುತ್ತದೆ? ಈ ಎಲ್ಲ ಪ್ರಶ್ನೆಗಳು ಈಗ ಎದ್ದು ಕುಳಿತಿವೆ.

‘ವಾಲ್ಮೀಕಿ, ಕನಕದಾಸ, ಮಹಾವೀರ ಹೀಗೆ ಅನೇಕ ಸಂತರ ಜಯಂತಿ ಆಚರಿಸುವ ಸರ್ಕಾರ ಈಗ ಟಿಪ್ಪು ಜಯಂತಿಯನ್ನೂ ಆಚರಿಸುತ್ತಿದೆ. ಅದರಲ್ಲಿ ಏನು ತಪ್ಪು? ತಪ್ಪು ಎಂದು ಹೇಳುವವರ ದೃಷ್ಟಿ ಸರಿಯಿಲ್ಲ’ ಎಂದು ಸರ್ಕಾರದ ಸಮರ್ಥಕರು ಸಮಜಾಯಿಷಿ ಕೊಡುತ್ತಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಡೆದ ಮಹಾವೀರ ಜಯಂತಿ ಆಚರಣೆಗೆ ನಾನೂ ಹೋಗಿದ್ದೆ. ಮಹಾವೀರ ಜಯಂತಿಯನ್ನು ಸರ್ಕಾರ ಅದೇ ಮೊದಲು ಅಧಿಕೃತವಾಗಿ ಆಚರಿಸುತ್ತಿತ್ತು. ಅಂದು ಜೈನರು ಎಷ್ಟು ಸಂಭ್ರಮಿಸಿದ್ದರು ಎಂದರೆ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕುಳಿತುಕೊಳ್ಳಲು ಸೂಜಿ ಮೊನೆಯಷ್ಟೂ ಖಾಲಿ ಜಾಗ ಇರಲಿಲ್ಲ.

ಜೈನರು ಮೂಲತಃ ವ್ಯಾಪಾರಿಗಳಾದ್ದರಿಂದ ಅವರು ಸಾಮಾನ್ಯವಾಗಿ ಬಿಜೆಪಿ ಜೊತೆಗೆ ಹೋಗುವ ಮಂದಿ ಎಂಬ ಅನಿಸಿಕೆ ಇದೆ. ಆದರೆ, ಮಹಾವೀರ ಜಯಂತಿ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಗಳಲು ಜೈನರಲ್ಲಿಯೇ ಭಾರಿ ಪೈಪೋಟಿ ನಡೆದಿತ್ತು. ಸಣ್ಣ ಸಮುದಾಯಗಳು ಸಣ್ಣ ಪುಟ್ಟ ಸಂಗತಿಗಳಿಂದ ರೋಮಾಂಚನಗೊಳ್ಳುವ ಒಂದು ಪರಿಯೂ ಇದು ಆಗಿರಬಹುದು!

ಮುಸಲ್ಮಾನರು ಅಲ್ಪಸಂಖ್ಯಾತರಲ್ಲೇ ಬಹುಸಂಖ್ಯಾತರು. ಆದರೆ, ಅವರಿಗೂ ಅಸ್ಮಿತೆಯ ಸಮಸ್ಯೆ. ಈಗ ಅವರಿಗೆ ಟಿಪ್ಪು ಜಯಂತಿ ಅಸ್ಮಿತೆಯ ಸಂಗತಿಯಾಗಿ ಕಾಣತೊಡಗಿದೆ. ಬೀದರ್‌ನಲ್ಲಿ ಇರುವ ಹಿರಿಯ ಮುಸ್ಲಿಂ ಚಿಂತಕರೊಬ್ಬರ ಜೊತೆಗೆ ನಾನು ನಿನ್ನೆ ಮಾತನಾಡಿದೆ.  ‘ಸರ್ಕಾರ, ಏನಿಲ್ಲವೆಂದರೂ ಹತ್ತು ಮಂದಿ ಹಿಂದೂ ನಾಯಕರ ಜಯಂತಿ ಆಚರಿಸುತ್ತದೆ. ಒಬ್ಬ ಟಿಪ್ಪು ಜಯಂತಿ ಆಚರಿಸಿದರೆ ಎಷ್ಟು ಹೊಟ್ಟೆಯುರಿ ನೋಡಿ’ ಎಂದು ಅವರು ಕೆಣಕಿದರು. ‘ಒಬ್ಬ ಟಿಪ್ಪು ಜಯಂತಿಯನ್ನು ಸಹಿಸದ ಹಿಂದೂಗಳ ಜೊತೆಗೆ ನಮಗೆ ಹೇಗೆ ಮೈತ್ರಿ ಭಾವ ಹುಟ್ಟಲು ಸಾಧ್ಯ’ ಎಂದು ಅವರು ಮರುಪ್ರಶ್ನೆ ಹಾಕಿದರು.

ಬೀದರ್‌ನ ಆ ಮುಸ್ಲಿಂ ಚಿಂತಕ ನಾನು ಬಲ್ಲ ಅತ್ಯಂತ ಸಂಭಾವಿತ ವ್ಯಕ್ತಿಗಳಲ್ಲಿ ಒಬ್ಬರು. ತುಂಬ ತಿಳಿದವರು. ಮುಸಲ್ಮಾನರ ಈಗಿನ ಸ್ಥಿತಿಯ ಬಗೆಗೆ ತೀವ್ರ ವಿಷಾದ ಇದ್ದವರು.ಅವರು ಹೇಳಿದರು: ‘ಬೀದರ್‌ನ ನಮಗೆ ಟಿಪ್ಪು ಯಾರು ಎಂದೇ ಗೊತ್ತಿರಲಿಲ್ಲ.

ಈಗ ನೋಡಿ ಅವನು ನಮ್ಮ ಐಕಾನ್‌ ಆಗಿ ಬಿಟ್ಟ’ ಎಂದು ನಕ್ಕರು. ಅಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಯೋಜನೆಯಲ್ಲಿ ಯಶಸ್ವಿಯಾದರೇ? ಅದರಲ್ಲಿ ಅನುಮಾನವೇನೂ ಬೇಡ. ಸಿದ್ದರಾಮಯ್ಯ ತುಂಬ ಪಳಗಿದ ರಾಜಕಾರಣಿ. ಅವರು ಟಿಪ್ಪು ಜಯಂತಿ ಆಚರಣೆಗೆ ಹಟ ಹಿಡಿದುದರ ಹಿಂದೆ ಒಂದು ಉದ್ದೇಶವಿತ್ತು. ಹೇಗಿದ್ದರೂ ಅವರು ಅಹಿಂದ ರಾಜಕಾರಣ ಮಾಡುವ ಪಣ ತೊಟ್ಟವರು.

ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರಿಗಿಂತ ವಿವಿಧ ಹಿಂದುಳಿದ ಸಮುದಾಯಗಳ ಮತ್ತು ಮುಸಲ್ಮಾನರ ಜನಸಂಖ್ಯೆ ಹೆಚ್ಚು ಇದೆ ಎಂದು ಆಗಾಗ ಬಹಿರಂಗವಾದ ಅಂಕಿ ಅಂಶಗಳು ಅವರ ರಾಜಕೀಯ ತಂತ್ರಗಾರಿಕೆಯ ಭಾಗವೇ ಆಗಿದ್ದುವು. ರಾಜ್ಯದಲ್ಲಿ ನಡೆದ ಸಾಮಾಜಿಕ ಸ್ಥಿತಿಗತಿ ಗಣತಿಯ ಅಂಕಿ ಅಂಶಗಳು ಚುನಾವಣೆ ವೇಳೆಗೆ ಅಧಿಕೃತವಾಗಿ ಬಹಿರಂಗವಾದರೆ ಈ ರಾಜಕೀಯ ತಂತ್ರಗಾರಿಕೆಯ ಮುಂದುವರಿದ ಅಧ್ಯಾಯಗಳನ್ನು ನಾವು ನೋಡಬಹುದು.

ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಿಸಲು ಹಟ ಹಿಡಿವ ಮೂಲಕ ಈಗಿನ ರಾಜಕಾರಣದ ಭಾಗವಾದ ವಿಭಜನೆ ತಂತ್ರವನ್ನು ಮುಂದುವರಿಸಿದರು. ನರೇಂದ್ರ ಮೋದಿ ಅವರು ಪ್ರಧಾನಿ ಆಗುವಾಗ ಇದೇ ವಿಭಜನೆ ತಂತ್ರವನ್ನು ಅನುಸರಿಸಿದ್ದರು.

ಟಿಪ್ಪು ಸುಲ್ತಾನ, ಪ್ರಬಲ ಪರ ಮತ್ತು ವಿರೋಧ ಹುಟ್ಟಿ ಹಾಕುವ ಒಬ್ಬ ನಾಯಕ. ಆತನ ಪರವಾಗಿ ಇರುವಷ್ಟೇ ಮಾತುಗಳು ವಿರೋಧವಾಗಿಯೂ ಇವೆ. ಅಥವಾ ಒಂದಕ್ಕಿಂತ ಒಂದು ಹೆಚ್ಚು ಇವೆ. ಹೀಗೆ ಒಬ್ಬ ಪ್ರಬಲ ನಾಯಕನ ಹುಟ್ಟು ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಮಾತ್ರ ಸಮುದಾಯದಲ್ಲಿ ಧ್ರುವೀಕರಣ ಆಗುತ್ತದೆ. ಮುಸಲ್ಮಾನ ಸಮುದಾಯದಲ್ಲಿ ಈಗ ತೀವ್ರ ಧ್ರುವೀಕರಣ ಆದಂತೆ ಕಾಣುತ್ತದೆ.

ಇದು ಹೀಗೆಯೇ  ಆಗುತ್ತದೆ ಎಂದು ಬಿಜೆಪಿ ನಾಯಕರಿಗೂ ಗೊತ್ತಿತ್ತು. ಅದಕ್ಕಾಗಿಯೇ ಅವರು ಟಿಪ್ಪು ಜಯಂತಿಯನ್ನು ತಾರಕ ಸ್ವರದಲ್ಲಿ ವಿರೋಧಿಸಲು ತೊಡಗಿದರು.ಅವರಿಗೆ  ಹಿಂದೂ ಮತಗಳ ಧ್ರುವೀಕರಣ ಮಾಡಬೇಕಿತ್ತು. ಅದರಲ್ಲಿ ಅವರು ಯಶಸ್ವಿಯಾದರೇ? ತಕ್ಕಮಟ್ಟಿಗೆ  ಆಗಿರಬಹುದು. ತಾವು ಮುಸಲ್ಮಾನರ ವಿರೋಧಿಗಳಲ್ಲ ಎಂದು ಹೇಳಲು ಬಿಜೆಪಿಯವರು ಮೈಸೂರು ರಾಜ್ಯದ ದಿವಾಣರಾದ ಮಿರ್ಜಾ ಇಸ್ಮಾಯಿಲ್‌ ಸಾಹೇಬರ ದಿನಾಚರಣೆ ಆಚರಿಸಲು ಅಡ್ಡಿಯಿಲ್ಲ ಎಂದು ಪ್ರತಿವಾದ ಮಂಡಿಸಿದರು.

ಮಿರ್ಜಾ ಸಾಹೇಬರು ಮುಸಲ್ಮಾನರಲ್ಲೇ ಅಲ್ಪಸಂಖ್ಯಾತರಾದ ಷಿಯಾ ಪಂಗಡದವರು. ಅವರ ಜಯಂತಿ ಆಚರಿಸಿದ್ದರೆ ಬಹುಸಂಖ್ಯಾತರಾದ ಸುನ್ನಿ ಪಂಗಡದವರಿಗೆ ಸಂತೋಷಕ್ಕಿಂತ ಅಸಮಾಧಾನವೇ ಹೆಚ್ಚು ಆಗುತ್ತಿತ್ತು. ಮುಖ್ಯಮಂತ್ರಿಗಳಿಗೆ ಅಷ್ಟು ತಿಳಿಯುವುದಿಲ್ಲವೇ!? ಮತ್ತೆ ಮೂಲ ಪ್ರಶ್ನೆಗೆ ಮರಳುವುದಾದರೆ ಟಿಪ್ಪು ಜಯಂತಿ ಆಚರಿಸಿದ್ದು ತಪ್ಪೇ? ತಪ್ಪು ಎಂದು ಹೇಳುವುದು ಕಷ್ಟ.

ಟಿಪ್ಪುವಿನ ತಪ್ಪುಗಳ ಕುರಿತು ನಾವು ಈಗ ದೊಡ್ಡ ಪಟ್ಟಿ ಕೊಡಬಹುದು. ಆದರೆ, ಇತಿಹಾಸ ಎಂಬುದು ಒಂದು ಕತ್ತಲ ಕೋಣೆ. ನಮ್ಮ ತಾತನ ಅಜ್ಜನ ಹೆಸರೇ ನಮಗೆ ಗೊತ್ತಿರುವುದಿಲ್ಲ.

ಮುನ್ನೂರು ವರ್ಷಗಳ ಹಿಂದೆ ಏನೆಲ್ಲ ಆಯಿತು, ಏಕೆ ಆಯಿತು ಎಂದು ಈಗಿನ ಬೆಳಕಿನಲ್ಲಿ ಅರ್ಥೈಸುವುದು, ವ್ಯಾಖ್ಯಾನಿಸುವುದು ಇತಿಹಾಸ ನೋಡುವ ರೀತಿಯೇ ಅಲ್ಲ. ಆದರೆ, ಟಿಪ್ಪುವಿನ ಮೇಲಿನ ನೈಜ ಪ್ರೀತಿಯಿಂದ ಸರ್ಕಾರ ಜಯಂತಿ ಆಚರಿಸಿತೇ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಸಂಪುಟದ ಒಬ್ಬ ಸಚಿವರು, ಅದರಲ್ಲಿಯೂ ಮುಸ್ಲಿಂ ಸಮುದಾಯದ ತನ್ವೀರ್ ಸೇಠ್ ಅವರು ಟಿಪ್ಪು ಜಯಂತಿ ಆಚರಣೆ ಸಮಯದಲ್ಲಿ ನಡೆದುಕೊಂಡ ರೀತಿ ಈ ಆಚರಣೆ ಕುರಿತು ಸರ್ಕಾರ ಎಷ್ಟು ಲಘುವಾಗಿತ್ತು ಎಂಬುದನ್ನು ತೋರಿಸುತ್ತದೆ.

ಟಿಪ್ಪು ಜಯಂತಿಯಿಂದ ಆಡಳಿತ ಪಕ್ಷ ಪಡೆಯಲು ಬಯಸಿದ್ದ ಲಾಭವನ್ನು ಆ ಸಚಿವರ ನಡವಳಿಕೆ ಹಾಳುಗೆಡವುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಟಿಪ್ಪು ಜಯಂತಿ ಆಚರಣೆಯಿಂದ ಆಡಳಿತ ಪಕ್ಷಕ್ಕೆ ಲಾಭ ಸಿಗಬಾರದು ಎಂದು ವಿರೋಧ ಪಕ್ಷಗಳು ಬಯಸುವುದು ಸಹಜ. ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಾಳಿದ್ದ ವಿರೋಧ ಪಕ್ಷಗಳು ತನ್ವೀರ್‌ ಸೇಠ್ ರಾಜೀನಾಮೆ ವಿಚಾರದಲ್ಲಿ ಒಂದಾಗಿರುವುದು ಇದನ್ನೇ ಹೇಳುತ್ತದೆ.

ಮುಂದಿನ ವಾರಗಳಲ್ಲಿ ಬೆಳಗಾವಿಯಲ್ಲಿ ಸೇರಲಿರುವ ಅಧಿವೇಶನದಲ್ಲಿ ಹುಲಿ(!)ಯ ಆಕ್ರೋಶದೊಂದಿಗೆ ಅವು ಸರ್ಕಾರದ ಗಂಟಲು ಹಿಡಿದುಕೊಳ್ಳುವುದು ನಿರೀಕ್ಷಿತ. ದುರಂತ ಏನು ಎಂದರೆ ನಮ್ಮ ಜನಪ್ರತಿನಿಧಿಗಳು ಎಷ್ಟು ಕ್ಷುಲ್ಲಕರೂ, ಅವಿವೇಕಿಗಳೂ ಆಗಿದ್ದಾರೆ ಎಂಬುದನ್ನು ಈ ಘಟನೆ ಮತ್ತೆ ತೋರಿಸಿಕೊಟ್ಟಿದೆ. ಬಿಜೆಪಿ ಸರ್ಕಾರದಲ್ಲಿ ಮೂವರು ಸಚಿವರ ರಾಜೀನಾಮೆಗೆ ಕಾರಣವಾದ ಘಟನೆ ಕಾಂಗ್ರೆಸ್ ಸರ್ಕಾರದಲ್ಲಿ ಮರುಕಳಿಸಿದೆ.

ಬಿಜೆಪಿ ಸಚಿವರು ಇಂಥದೇ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದರೆ ಕಾಂಗ್ರೆಸ್ ಸಚಿವರೂ ರಾಜೀನಾಮೆ ನೀಡಬೇಕಾದುದು ಅಪೇಕ್ಷಿತ. ಇವರೆಲ್ಲ ಬೇರೆ ಬೇರೆ ಪಕ್ಷಗಳಲ್ಲಿ ಇರಬಹುದು. ಆದರೆ, ಇವರ ನಡತೆಯಲ್ಲಿ ಯಾವುದೇ ಫರಕು ಇಲ್ಲ. ಇವರಿಗೆ ಅಂತರಂಗ ಮತ್ತು ಬಹಿರಂಗದ ನಡವಳಿಕೆಯಲ್ಲಿ ಇರಬೇಕಾದ ಸೂಕ್ಷ್ಮ ವ್ಯತ್ಯಾಸಗಳು ಗೊತ್ತಿಲ್ಲ.

ಸಾರ್ವಜನಿಕ ವೇದಿಕೆಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸಭಾಮರ್ಯಾದೆಗಳೂ ಗೊತ್ತಿಲ್ಲ ಎಂದು ಮತ್ತೆ ಮತ್ತೆ ಸಾಬೀತು ಆಗುತ್ತಿದೆ. ಸೇಠ್‌ ಅವರು ತಮ್ಮ ನಡತೆ ಕುರಿತು ಸಮರ್ಥನೆ ಮಾಡಿಕೊಳ್ಳುತ್ತಲೇ ತಮ್ಮ ಮೊಬೈಲ್‌ಗೆ ಅಶ್ಲೀಲ ಎನ್ನಬಹುದಾದ ಸಂದೇಶ ಕಳಿಸಿದವರ ವಿರುದ್ಧ ಸೈಬರ್‌ ಪೊಲೀಸರಿಗೆ ದೂರು ಕೊಡುವುದಾಗಿಯೂ ಹೇಳಿದ್ದಾರೆ. ಅಂದರೆ ಅವರ ಮೊಬೈಲ್‌ನಲ್ಲಿ ಅಂಥ ಆಕ್ಷೇಪಾರ್ಹವಾದ ಅಶ್ಲೀಲ ಸಂದೇಶ ಇತ್ತು ಎಂದು ಅರ್ಥವಾಗುತ್ತದೆ. ಆದರೆ, ಟಿಪ್ಪು ದಿನಾಚರಣೆ ಸಮಯದಲ್ಲಿ ಆಕಸ್ಮಿಕವಾಗಿ ಅವರು ಅಂಥ ಒಂದು ಸಂದೇಶವನ್ನು ತಮ್ಮ ಮೊಬೈಲ್‌ನಲ್ಲಿ ನೋಡಿದ್ದರೂ ತಕ್ಷಣ ಎಚ್ಚೆತ್ತುಕೊಂಡು ಮೊಬೈಲ್‌ ಅನ್ನು ತೆಗೆದು ಇಡಬೇಕಿತ್ತು. 

ಹಾಗೆ ಮಾಡಿದ್ದರೆ, ಅವರು ಆ ಸಂದೇಶವನ್ನು ತಲ್ಲೀನರಾಗಿ ನೋಡುತ್ತಿರಲಿಲ್ಲ ಎಂದೂ, ಅವರೇ ಹೇಳಿದ ಹಾಗೆ ‘ಅನೇಕ ದಿನಗಳಿಂದ ಮನೆಯಿಂದ ದೂರವಿದ್ದ’ ಹಸಿವಿನಿಂದ ಆನಂದಿಸುತ್ತಿರಲಿಲ್ಲ ಎಂದೂ ಅರ್ಥವಾಗುತ್ತಿತ್ತು! ರಾಜಧಾನಿ ಬೆಂಗಳೂರಿಗೆ ತೀರಾ ಹತ್ತಿರದ ಮೈಸೂರಿನವರಾದ ಸಚಿವರು ಅಷ್ಟು ದಿನಗಳಿಂದ ಮನೆಯಿಂದ ಏಕೆ ದೂರವಿದ್ದರೋ! ಒಂದು ತಪ್ಪನ್ನು ಮುಚ್ಚಿಕೊಳ್ಳಲು ಹೊರಡುವಾಗ ಇನ್ನೊಂದು ತಪ್ಪು ಮಾಡುತ್ತೇವೆ. ಒಂದು ಸುಳ್ಳಿನಿಂದ ಬಚಾವಾಗಲು ಇನ್ನೊಂದು ಸುಳ್ಳಿಗೆ ಮೊರೆ ಹೋಗುತ್ತೇವೆ. ಇದಕ್ಕೆ ಕೊನೆ ಇರುವುದಿಲ್ಲ.

ಟಿಪ್ಪು ಜಯಂತಿ ಸಂದರ್ಭದಲ್ಲಿ ಏನೋ ನೋಡಲು ಹೋಗಿ ಸಿಕ್ಕಿ ಬಿದ್ದ ಸೇಟ್‌ ಅವರ ಗತಿ ಏನಾಗುತ್ತದೆ ಎಂದು ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ. ಆದರೆ, ಈ ಆಚರಣೆಯಿಂದ ಒಟ್ಟು ಸಮಾಜದ ಮೇಲೆ ಏನು ಪರಿಣಾಮ ಆಗುತ್ತದೆ? ನನ್ನ ಸಹೋದ್ಯೋಗಿ ಹೇಳಿದ ಹಾಗೆ, ನಮ್ಮ ನಡುವೆ ಇನ್ನಷ್ಟು ಕಂದರಗಳು ನಿರ್ಮಾಣ ಆಗುತ್ತವೆಯೇ? ನಾವು ಒಡನೆ ಇದ್ದೂ ಬೇರೆ ಬೇರೆ ಆಗಿರುತ್ತೇವೆಯೇ?

ಹಾವೇರಿ ಜಿಲ್ಲೆಯ ಅಕ್ಕಿಆಲೂರು, ಹಾನಗಲ್‌ ಮತ್ತು ಹಿರೆಕೆರೂರಿನ ಕಾಲೇಜುಗಳಲ್ಲಿ ಮುಸ್ಲಿಂ ಮತ್ತು ಹಿಂದೂ ವಿದ್ಯಾರ್ಥಿಗಳ ನಡುವಿನ ಕಂದರ ಎಷ್ಟು ಅಗಲ ಆಗಿದೆ ಎಂದರೆ ಅವರು ಒಂದೇ ಚಾವಣಿ ಕೆಳಗೆ ಅಭ್ಯಾಸ ಮಾಡಿದರೂ ತಾವು ಒಂದೇ ಎಂದು ಎಂದಿಗೂ ಅನಿಸದ ಸ್ಥಿತಿಗೆ ತಲುಪಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿದ್ದ ಈ ಕಂದರ ಹಾವೇರಿ ಜಿಲ್ಲೆಗೂ ವಿಸ್ತರಿಸಿದ್ದು ಹೇಗೆ ಮತ್ತು ಏಕೆ?

‘ನಮಗೆ ಬುರ್ಖಾ ಧರಿಸಲು ಅವಕಾಶ ಇಲ್ಲದೇ ಇದ್ದರೆ ಕಾಲೇಜಿಗೇ ಹೋಗುವುದಿಲ್ಲ’ ಎಂದು ಹೇಳುವಷ್ಟು ಅಲ್ಲಿನ ವಿದ್ಯಾರ್ಥಿನಿಯರು ಮುಖ್ಯವಾಹಿನಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ

ಇದು ಅವರ ಅಸ್ಮಿತೆಯ ಸ್ಥಿರೀಕರಣ (assertion)ವನ್ನು ತೋರಿಸುತ್ತದೆಯೇ ಅಥವಾ ಪರಕೀಯ ಭಾವನೆ (alienation)ಯನ್ನು ತೋರಿಸುತ್ತದೆಯೇ?
ಮೇಲುನೋಟಕ್ಕೆ ನೋಡುವುದಾದರೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸುವವರೆಗೆ ಬುರ್ಖಾ ಧರಿಸಿಕೊಂಡು ಬಂದು ತರಗತಿಯ ಒಳಗೆ ಬಂದ ನಂತರ ಕಾಲೇಜಿನ ಸಮವಸ್ತ್ರದಲ್ಲಿ ಇದ್ದರೆ ಯಾವ ಸಮಸ್ಯೆಯೂ ಉದ್ಭವಿಸುತ್ತಿರಲಿಲ್ಲ.

ಹಾಗೆಂದು ಮುಸ್ಲಿಂ ಸಮುದಾಯದ ನಾಯಕರು ಹೇಳಿದ್ದರೆ ಕಂದರ ಇನ್ನಷ್ಟು ಅಗಲವೂ ಆಗುತ್ತಿರಲಿಲ್ಲ. ಅದನ್ನು ಯುವಶಾಸಕ ರಿಜ್ವಾನ್‌ ಅರ್ಷದ್‌  ಮಾತ್ರ ಹೇಳಿದರು.ಉಳಿದ ಮುಸ್ಲಿಂ ನಾಯಕರು ಮೌನವಾಗಿಯೇ ಇದ್ದರು.

ಉನ್ನತ ಶಿಕ್ಷಣ ಸಚಿವರ ಹೇಳಿಕೆಗಳಂತೂ ಅನಾಹುತಕಾರಿಯಾಗಿದ್ದುವು. ಹಾವೇರಿ ಜಿಲ್ಲೆಯ ಈ ಮೂರು ಕಾಲೇಜುಗಳ ವಿದ್ಯಮಾನ ಒಂದು ಬಿಡಿ ಘಟನೆಯಾಗಿರಲಾರದು.ಇಂಥ ಅತಿರೇಕ ಘಟನೆಗಳು ಎಲ್ಲ ಕಡೆ ಮರುಕಳಿಸಬಹುದು. ಅವರು ಬುರ್ಖಾ ಹಾಕಿಕೊಂಡು ಬರುತ್ತಾರೆ ಎಂದು ಇವರು ಕೇಸರಿ ಶಾಲು ಹಾಕಿಕೊಂಡು ಬಂದು ಕುಳಿತುಕೊಂಡರೆ ನಾವೆಲ್ಲ ಒಂದೇ ಬಳ್ಳಿ ಹೂಗಳು ಎಂದು ಅನಿಸುವುದು ಹೇಗೆ?

ಮತ್ತೆ, ಸಮಾಜದಲ್ಲಿ ಅವು ಎರಡೇ ಬಣ್ಣಗಳು ಇಲ್ಲವಲ್ಲ? ರಾಜಕೀಯ ಅಂಗಳದಲ್ಲಿನ ವಿಭಜನೆಯ ರಾಜಕಾರಣ ಹೇಗೆ ನಮ್ಮ ಶಾಲೆ ಕಾಲೇಜುಗಳಿಗೆ ತಲುಪಿದೆ ಮತ್ತು ಅದು ನಮ್ಮ ನಡುವೆ ಹೇಗೆ ಅಗಲ ಕಂದರಗಳನ್ನು ನಿರ್ಮಿಸುತ್ತಿದೆ ಎಂಬುದಕ್ಕೆ  ಇದಕ್ಕಿಂತ ವಿಷಾದದ ನಿದರ್ಶನ ಇನ್ನೊಂದು ಇರಲಾರದು. ಆಳುವವರು ಮಾಡುವ ಪರೋಕ್ಷ ಕೆಲಸ ಇದು. ಅವರು ನಮ್ಮನ್ನು ಹೇಗೆ ಸೀಳಿ ಹಾಕುತ್ತಾರೆ, ಹೇಗೆ ಒಡೆದು ಆಳಲು ಬಯಸುತ್ತಾರೆ ಎಂಬುದಕ್ಕೂ ಇದು ಒಂದು ನಿದರ್ಶನ.

ಚಿತ್ರದುರ್ಗದ ಒನಕೆ ಓಬವ್ವ ಒಬ್ಬ ಛಲವಾದಿ (ದಲಿತ) ಹೆಣ್ಣು ಮಗಳು ಎಂಬುದನ್ನು ನಮಗೆಲ್ಲ ಈಚೆಗೆ ಗೊತ್ತು ಮಾಡಲಾಯಿತು. ‘ಓಬವ್ವ ಒಬ್ಬ ವೀರ ಮಹಿಳೆ, ಶತ್ರು ಸೈನಿಕರನ್ನು ಜಜ್ಜಿ ಸಾಯಿಸಿದ ದಿಟ್ಟೆ’ ಎಂದು ಮಾತ್ರ ನಮಗೆ ಗೊತ್ತಿತ್ತು. ಆದರೆ, ಆಕೆ ಛಲವಾದಿ ಮಹಿಳೆ, ಹಿಂದೂ ಮಹಿಳೆ ಎಂದೆಲ್ಲ ‘ಸೀಮಿತಗೊಳಿಸಲು’ ಹೋದಾಗ ಮನಸ್ಸೂ ಸಣ್ಣದಾಗುತ್ತದೆ.

ಇವೆಲ್ಲ ಒಂದು ರೀತಿಯ ಅತಿರೇಕಗಳು. ಅಮೆರಿಕ ಅಧ್ಯಕ್ಷರಾಗಿ ಡೋನಲ್ಡ್‌ ಟ್ರಂಪ್‌ ಗೆಲುವು ಒಂದು ಅತಿರೇಕದ ಫಲ. ಅದು ಜಗತ್ತಿನಾದ್ಯಂತ ಬಲಪಂಥೀಯವಾದ ಜಾಗೃತವಾಗಿರುವ ಇನ್ನೊಂದು ನಿದರ್ಶನ ಎಂದೂ ಈಗ ವಿಶ್ಲೇಷಿಸಲಾಗುತ್ತಿದೆ.

ಟಿಪ್ಪು ಜಯಂತಿಯನ್ನು ತೀವ್ರ ಹಟದಿಂದ ಆಚರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಮೆರಿಕ ಚುನಾವಣೆ ಫಲಿತಾಂಶದಲ್ಲಿ ಏನಾದರೂ ಪಾಠ ಇರಬಹುದೇ? ಜಗತ್ತೇ ಬಲಕ್ಕೆ ವಾಲುತ್ತಿದೆ ಎಂದು ಅನಿಸುತ್ತಿರುವಾಗ ಅವರು ತೀರಾ ಎಡಕ್ಕೆ ವಾಲುತ್ತಿದ್ದಾರೆಯೇ? ಅಷ್ಟು ಎಡಕ್ಕೆ ವಾಲಿ ಅವರು ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ತಿಳಿದುಕೊಂಡಿದ್ದಾರೆಯೇ?


ರಾಜೀವ್‌ ಗಾಂಧಿ ಕಾಲದಲ್ಲಿಯೇ ಕಾಂಗ್ರೆಸ್ಸು, ‘ಮೃದು ಹಿಂದುತ್ವವಾದಿ ಪಕ್ಷ’ ಎಂದು ಕರೆಸಿಕೊಂಡಿದ್ದು ಅವರಿಗೆ ನೆನಪು ಇಲ್ಲವೇ? ಮುಖ್ಯಮಂತ್ರಿಗಳಿಗೆ ಮುಸಲ್ಮಾನರ ಮೇಲೆ ಪ್ರೀತಿ ಇದ್ದಿದ್ದರೆ ಈ ಎಲ್ಲ ಪ್ರಶ್ನೆಗಳು ಉದ್ಭವಿಸುತ್ತಿರಲಿಲ್ಲ. ಅವರ ಕಣ್ಣು ಚುನಾವಣೆ ಮೇಲೆ ಇದೆ. ಅದಕ್ಕೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT