ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ರಾಜಕಾರಣದಲ್ಲಿ ರಾಜ್ಯಗಳ ಪ್ರಭಾವ

Last Updated 3 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಗುಜರಾತ್‌ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌ ಅವರು ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವುದು ಮತ್ತು ಇದು ರಾಷ್ಟ್ರ ರಾಜಕಾರಣದ ಮೇಲೆ ಬೀರಬಹುದಾದ ಪರೋಕ್ಷ ದೂರಗಾಮಿ ಪರಿಣಾಮವು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿನ ರಾಜ್ಯಗಳು ರಾಷ್ಟ್ರೀಯ ರಾಜಕಾರಣದ ಹೊಸ  ಪ್ರಭಾವಿ ಕೇಂದ್ರಗಳಾಗಿ ಪ್ರವರ್ಧಮಾನಕ್ಕೆ ಬರುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸ್ಪಷ್ಟ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳು ನೇಪಥ್ಯಕ್ಕೆ ಸರಿಯಲಿವೆ, ರಾಷ್ಟ್ರ  ರಾಜಕಾರಣದಲ್ಲಿ ಕೇಂದ್ರ ಸರ್ಕಾರವೇ ಹೆಚ್ಚು ಪ್ರಭಾವ ಬೀರುತ್ತ ಗಮನ ಸೆಳೆಯಲಿದೆ ಎಂದು ಬಹುತೇಕರು ನಂಬಿದ್ದರು.

ಎರಡು ವರ್ಷಗಳಲ್ಲಿ ನಡೆದಿರುವ  ಅನೇಕ ವಿದ್ಯಮಾನಗಳನ್ನು ಆಧರಿಸಿ ಹೇಳುವುದಾದರೆ,  ಬಿಜೆಪಿಯು ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದರೂ, ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಸರ್ಕಾರಗಳು ದಕ್ಷ ರೀತಿಯಲ್ಲಿ, ಜನಾನುರಾಗಿಯಾಗಿ ಕಾರ್ಯ ನಿರ್ವಹಿಸುವುದರತ್ತ ಸಾಕಷ್ಟು ಗಮನ ನೀಡಬೇಕಾದ ಅಗತ್ಯ ಇರುವುದೂ ಸಾಬೀತಾಗಿದೆ.

ಸದ್ಯದ ಸಂಕ್ರಮಣ ಸ್ಥಿತಿಯಲ್ಲಿ ಗುಜರಾತ್‌ ಮುಖ್ಯಮಂತ್ರಿಯ ಬದಲಾವಣೆಯು ರಾಷ್ಟ್ರ ರಾಜಕಾರಣದ ಮೇಲೆ ಬಹು ಬಗೆಯ ಪರಿಣಾಮಗಳನ್ನು ಬೀರಲಿದೆ. ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಗೆಲ್ಲುವುದಕ್ಕಿಂತ ಗುಜರಾತ್‌ನಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಕೀಯವಾಗಿ ಹೆಚ್ಚು ಮಹತ್ವದ್ದಾಗಲಿದೆ.

ಒಂದು ವೇಳೆ ಗುಜರಾತ್‌ನಲ್ಲಿ ಸೋಲು ಉಂಟಾದರೆ ಅದು ಪ್ರಧಾನಿ ಮತ್ತು ಬಿಜೆಪಿಗೆ ಆಗುವ ತೀವ್ರ ಮುಖಭಂಗ ಎಂದೇ ಪರಿಗಣಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗುಜರಾತ್‌ನಲ್ಲಿ ನಡೆದ ಘಟನಾವಳಿಗಳು ಮತ್ತು ಪಕ್ಷದಲ್ಲಿನ ಎಲ್ಲ ಬಣಗಳನ್ನು  ತಮ್ಮೊಂದಿಗೆ ಕರೆದೊಯ್ಯುವಲ್ಲಿ ಆನಂದಿಬೆನ್‌ ಅವರು ವಿಫಲರಾಗಿರುವುದು ಮುಖ್ಯಮಂತ್ರಿ ಬದಲಾವಣೆಯನ್ನು ಅನಿವಾರ್ಯಗೊಳಿಸಿದೆ.

75ರ ವಯೋಮಿತಿ ದಾಟಿದವರಿಗೆ ಸಚಿವ ಹುದ್ದೆ ಇಲ್ಲ ಎನ್ನುವ ಪಕ್ಷದ ಅಲಿಖಿತ ನಿಯಮವನ್ನು ಬಿಜೆಪಿಯು ಇಲ್ಲಿ ತನ್ನ ಅನುಕೂಲಕ್ಕೆ ಬಳಸಿಕೊಂಡು, ಮುಖ್ಯಮಂತ್ರಿ ಬದಲಾವಣೆಯನ್ನು ಸಕ್ರಮಗೊಳಿಸುವ ಮುಖವಾಡ ಪ್ರದರ್ಶಿಸುತ್ತಿದೆ.

ಈ ನಿರ್ಧಾರವು ಬೀರಬಹುದಾದ ವ್ಯಾಪಕ ಪರಿಣಾಮಗಳ ಬಗ್ಗೆ ಗಮನಹರಿಸುವುದು ಅಗತ್ಯ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ  ಅಧಿಕಾರ ಉಳಿಸಿಕೊಳ್ಳುವ ಒಂದೇ ಕಾರಣಕ್ಕೆ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಬಿಜೆಪಿಗೆ ಮುಖ್ಯವಾಗಿಲ್ಲ.  ರಾಷ್ಟ್ರ ಮಟ್ಟದಲ್ಲಿ ಪಕ್ಷದ ಮೇಲೆ ಬೀರಬಹುದಾದ ಸಕಾರಾತ್ಮಕ ಪರಿಣಾಮ ಮುಖ್ಯವಾದುದು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯು ತನ್ನ ‘ಕಾಂಗ್ರೆಸ್‌ ಮುಕ್ತ ಭಾರತ’ ಕಾರ್ಯಸೂಚಿಗೆ ಅನುಗುಣವಾಗಿ, ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚೆಚ್ಚು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲುವುದಕ್ಕೆ ರಾಜಕೀಯ ಕಾರ್ಯತಂತ್ರ ಹೆಣೆದು ಅದನ್ನು ಗಂಭೀರವಾಗಿ ಕಾರ್ಯರೂಪಕ್ಕೆ  ತರಲು ಹೆಣಗಾಡುತ್ತಿದೆ.

ಬಿಜೆಪಿಯು ಒಂದೆಡೆ ಕೇಂದ್ರ ಸರ್ಕಾರದ ಕಾರ್ಯ ನಿರ್ವಹಣೆಗೆ ಸಾಕಷ್ಟು ಗಮನ ನೀಡುವುದರ ಜತೆಗೆ, ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಅವರನ್ನೇ ತನ್ನ ಪ್ರಮುಖ ಪ್ರಚಾರಕರನ್ನಾಗಿ ಬಳಸಿಕೊಳ್ಳುತ್ತ ಬಂದಿದೆ.

ರಾಜ್ಯಗಳ ವಿಷಯದಲ್ಲಿ, ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಅಥವಾ ಚುನಾವಣೆ ನಂತರ ಶಾಸಕಾಂಗ ಪಕ್ಷದ ಮುಖಂಡನ ಆಯ್ಕೆ ವಿಷಯದಲ್ಲಿ ಮೋದಿ ಅವರ ಮಾತೇ ಅಂತಿಮವಾಗಿತ್ತು.

ಮುಖ್ಯಮಂತ್ರಿಗಳ ಆಯ್ಕೆಗೆ ಬಿಜೆಪಿಯು ನೀಡಿದ್ದ ಮಹತ್ವ ಆಧರಿಸಿ ಹೇಳುವುದಾದರೆ, ರಾಜ್ಯಗಳೇ ರಾಷ್ಟ್ರ ರಾಜಕಾರಣದ ನಿಜವಾದ ಚಾಲಕ ಶಕ್ತಿ ಆಗಿರುವುದನ್ನು ಪಕ್ಷ ತಳೆದಿರುವ ನಿಲುವು ಸ್ಪಷ್ಟಪಡಿಸುತ್ತದೆ. ಕೇಂದ್ರ ಸಚಿವ ಸಂಪುಟದಲ್ಲಿನ ಹಿರಿಯ ಸಚಿವರನ್ನು ಹೊರತುಪಡಿಸಿದರೆ, ಬಿಜೆಪಿಯು ತನ್ನ ಮುಖ್ಯಮಂತ್ರಿಗಳನ್ನೂ  ಪ್ರಮುಖವಾಗಿ ಬಿಂಬಿಸುತ್ತಿದೆ.

ಈ ವಿಷಯದಲ್ಲಿ ಇನ್ನೊಂದು ಆಯಾಮವೂ  ಮಹತ್ವ ಪಡೆದುಕೊಂಡಿದೆ.  ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿ ಹೇಳುವುದಾದರೆ, 2014ರ ಸಾರ್ವತ್ರಿಕ ಚುನಾವಣೆಯು ಇನ್ನೊಂದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿತ್ತು.

ಪ್ರಮುಖ ಪಕ್ಷವೊಂದು ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಅದೇ ಮೊದಲ ಬಾರಿಗೆ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿತ್ತು. ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದುಕೊಂಡೇ ಪಕ್ಷಕ್ಕೆ ರಾಷ್ಟ್ರೀಯ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟು ಪ್ರಧಾನಿ ಗದ್ದುಗೆ ಏರಿದ ಅಪರೂಪದ ಸಾಧನೆ ಮಾಡಿದ್ದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಗಮನಾರ್ಹ ಸಾಧನೆ ಮಾಡುವಲ್ಲಿ ಬಿಜೆಪಿ ಮುಖ್ಯಮಂತ್ರಿಗಳೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿನ ಪಕ್ಷದ ಗೆಲುವಿಗೆ ಬಿಜೆಪಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳು ಸಿದ್ಧಮಾಡಿದ್ದ ಭೂಮಿಕೆಯ ಕೊಡುಗೆಯೂ ಸಾಕಷ್ಟಿತ್ತು ಎಂಬುದು ಜನಪ್ರಿಯ  ಗ್ರಹಿಕೆಯಾಗಿದೆ.

ಇತ್ತೀಚಿನ ದಶಕಗಳಲ್ಲಿ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿನ ರಾಜ್ಯಗಳು ರಾಜಕಾರಣದ ಹೊಸ ಪ್ರಭಾವಿ ಕೇಂದ್ರಗಳಾಗಿ ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ಪ್ರತಿಪಾದಿಸಲಾಗುತ್ತಿದೆ. ಹೀಗಾಗಿ, ಆನಂದಿಬೆನ್‌ ಪಟೇಲ್‌ ಅಧಿಕಾರ ತ್ಯಾಗ ಮಾಡಿರುವುದನ್ನು ಈ ದೃಷ್ಟಿಕೋನದಿಂದಲೇ ವಿಶ್ಲೇಷಿಸಬೇಕು.

ರಾಜ್ಯಗಳಲ್ಲೂ, ರಾಜ್ಯಕ್ಕೆ ಮಾತ್ರ ಸೀಮಿತವಾದ ಪ್ರಭಾವಶಾಲಿ ಪಕ್ಷಗಳು ಅಸ್ತಿತ್ವದಲ್ಲಿ ಇವೆ. ಈ  ಪಕ್ಷಗಳು ಪ್ರಾದೇಶಿಕ ಪಕ್ಷಗಳು ಎಂದು ನಾನು ಉದ್ದೇಶಪೂರ್ವಕವಾಗಿ ಪರಿಗಣಿಸುತ್ತಿಲ್ಲ.  ಈ ಪಕ್ಷಗಳು ಪ್ರಾದೇಶಿಕ ವ್ಯಾಪ್ತಿಯನ್ನೇ  ಹೊಂದಿಲ್ಲ, ಜತೆಗೆ ಆ ಬಗ್ಗೆ ಗಂಭೀರ ಧೋರಣೆಯನ್ನೂ ತಳೆದಿಲ್ಲ. ಅವುಗಳ ರಾಜಕೀಯ ಪ್ರಭಾವ ಮತ್ತು ಚಿಂತನೆ ಏನಿದ್ದರೂ ಆಯಾ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ.

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಚುಕ್ಕಾಣಿಯು ಪಕ್ಷಗಳ ರಾಜ್ಯ ಮಟ್ಟದ ನಾಯಕರ ಮತ್ತು ಬಹುತೇಕ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳ  ಬಳಿಯಲ್ಲಿಯೇ ಇರುವುದನ್ನು ಪ್ರತಿಯೊಬ್ಬರೂ  ಗಮನಿಸಬೇಕು. 

ತಮಿಳುನಾಡಿನಲ್ಲಿ ಜಯಲಲಿತಾ ಅಥವಾ ಎಂ. ಕರುಣಾನಿಧಿ, ನವೀನ್‌ ಪಟ್‌್ನಾಯಕ್‌ (ಒಡಿಶಾ), ಮಮತಾ  ಬ್ಯಾನರ್ಜಿ (ಪಶ್ಚಿಮ ಬಂಗಾಳ), ಅರವಿಂದ ಕೇಜ್ರಿವಾಲ್‌ (ದೆಹಲಿ), ನಿತೀಶ್‌ ಕುಮಾರ್‌ (ಬಿಹಾರ) ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ಅವರು ರಾಜಕೀಯದಲ್ಲಿ ಮುಂಚೂಣಿಯಲ್ಲಿ ಇರುವುದು  ಈ ಮೇಲಿನ ಮಾತಿಗೆ ಪುಷ್ಟಿ ನೀಡುತ್ತದೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಆ ರಾಜ್ಯದ ಜನರು ತಮ್ಮ ಜನಪ್ರಿಯ ನಾಯಕ ಎಂದು ಗುರುತಿಸಲಿಲ್ಲ. ತಮ್ಮ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಸ್ಥಳೀಯರು ತಾವೇ ನಿರ್ಧರಿಸಿದರು.

ಇದೇ ಕಾರಣಕ್ಕೆ ಬಿಜೆಪಿಯು ಅಸ್ಸಾಂನಲ್ಲಿ ತನ್ನ ರಾಜಕೀಯ ಕಾರ್ಯತಂತ್ರ ಬದಲಿಸಿತು. ಚುನಾವಣೆಗೆ ಮೊದಲೇ ಪಕ್ಷವು ಅಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಿತು.ಜತೆಗೆ ತನ್ನ ಪ್ರಮುಖ ಪ್ರಚಾರಕ ಮೋದಿ ಸೇರಿದಂತೆ  ಕೇಂದ್ರೀಯ ನಾಯಕರ ಚುನಾವಣಾ ಪ್ರಚಾರದ ಪ್ರಖರತೆಯನ್ನು ತಗ್ಗಿಸಿತು.

ರಾಜ್ಯಗಳಲ್ಲಿ ಸ್ಥಳೀಯ ರಾಜಕಾರಣಕ್ಕೆ ಸಿಗುತ್ತಿರುವ ಮನ್ನಣೆಯ ಮಹತ್ವವನ್ನು  ಗ್ರಹಿಸುವಲ್ಲಿ ಕಾಂಗ್ರೆಸ್‌ ವಿಫಲಗೊಂಡಿದೆ.  ಪಕ್ಷದ ಹೈಕಮಾಂಡ್‌ ಮೇಲಿನ ಅತಿಯಾದ ಅವಲಂಬನೆ ಮತ್ತು  ದೆಹಲಿಯಲ್ಲಿನ ಸ್ವಹಿತಾಸಕ್ತಿಯೇ ಮುಖ್ಯವಾಗಿರುವ ಪ್ರಭಾವಶಾಲಿ ಮುಖಂಡರ ಸೀಮಿತ ಪ್ರಭಾವ ಅಥವಾ  ಕೆಳಹಂತದ ರಾಜಕೀಯ ಅರ್ಥೈಸುವಿಕೆಯಲ್ಲಿನ ವೈಫಲ್ಯದ ಕಾರಣಕ್ಕೆ ಎಲ್ಲೆಡೆ ಪಕ್ಷದ ಪ್ರಭಾವ ಕ್ಷೀಣಿಸುತ್ತಿದೆ.

ಕಾಂಗ್ರೆಸ್‌ ಪಕ್ಷವು ರಾಜ್ಯಗಳಲ್ಲಿನ ಸ್ಥಳೀಯ ಮುಖಂಡರನ್ನು ರಾಜಕೀಯವಾಗಿ ಪ್ರಭಾವಶಾಲಿಯಾಗಿ ಬೆಳೆಸುವಲ್ಲಿ ವಿಫಲಗೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ.  ಪಕ್ಷದಲ್ಲಿ ಈಗಲೂ ಅಧಿಕಾರ ಕೇಂದ್ರಿತ  ಹೈಕಮಾಂಡ್‌ ಸಂಸ್ಕೃತಿಯೇ ವಿಜೃಂಭಿಸುತ್ತಿದೆ.

ಶೀಲಾ ದೀಕ್ಷಿತ್‌ (ದೆಹಲಿ), ತರುಣ್‌ ಗೊಗೊಯ್‌ (ಅಸ್ಸಾಂ), ಉಮ್ಮನ್‌ ಚಾಂಡಿ (ಕೇರಳ)– ಇವರೆಲ್ಲ ತಮ್ಮ ತಮ್ಮ ರಾಜ್ಯಗಳಲ್ಲಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಸಾಕಷ್ಟು ಜನಾನುರಾಗಿ ಆಗಿದ್ದಾರೆ.  ಆದರೆ, ರಾಜ್ಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿ, ಒಗ್ಗಟ್ಟು ಪ್ರದರ್ಶಿಸಿ ಮುನ್ನಡೆಸುವಲ್ಲಿ ಎಲ್ಲ ಬಣಗಳ ಬೆಂಬಲ ಪಡೆಯಲು ಇವರೆಲ್ಲ ವಿಫಲರಾಗಿದ್ದಾರೆ.

ಕರ್ನಾಟಕದಲ್ಲಿಯೂ ಕಾಂಗ್ರೆಸ್‌ ಪಕ್ಷವು ಇದೇ ಬಗೆಯ ಸವಾಲು ಎದುರಿಸುತ್ತಿದೆ.  ಪಕ್ಷ ಅಧಿಕಾರದಲ್ಲಿ ಇರುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಇದೆ.ರಾಜಕಾರಣದಲ್ಲಿ ಮುಖ್ಯವಾದ ಅಧಿಕಾರವು ಪಕ್ಷದ ಹೈಕಮಾಂಡ್‌ನಲ್ಲಿ ಇರದೆ ಸ್ಥಳೀಯ ಮುಖಂಡರಲ್ಲಿಯೇ  ಇರುವ ವಾಸ್ತವವನ್ನು ಕಾಂಗ್ರೆಸ್‌ ಸಾಧ್ಯವಾದಷ್ಟು ಬೇಗ ಮನದಟ್ಟು ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ರಾಜಕೀಯವಾಗಿ ಪುನಶ್ಚೇತನಗೊಳ್ಳಬೇಕೆಂಬ ಅದರ ಹಂಬಲ ಕನಸಾಗಿಯೇ ಉಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT