ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭವನದಲ್ಲಿ ಶಿಷ್ಟಾಚಾರವೆಂಬ ಸೋಗು

Last Updated 19 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಜನರ ನಡುವಿನಿಂದಲೇ ಬೆಳೆದುಬಂದ ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿ ಭವನದ ರಾಜವೈಭವದ ಮಾಯಾಲೋಕದೊಳಗೆ ಜಾರಿರುವುದನ್ನು ಕಂಡು ನನಗೆ ಅಚ್ಚರಿ ಉಂಟಾಗಿದೆ. ಕೇವಲ ಆರು ತಿಂಗಳಲ್ಲಿ ಅವರು ಬದಲಾದ ಪರಿ ಬಗ್ಗೆ ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ.

ಶತಮಾನದ ಹಿಂದೆ ಭಾರತದ ವಿವಿಧ ಸಂಸ್ಥಾನಗಳ ರಾಜರು ಅಥವಾ ಆಂಗ್ಲ ಉನ್ನತಾಧಿಕಾರಿಗಳ `ಅರಮನೆ'ಗಳಲ್ಲಿ  ವಿಶಿಷ್ಟ ನಿಲುವಂಗಿಯಂತಹ ಉಡುಪು ಧರಿಸಿ ಅದಕ್ಕೊಂದು ಸೊಂಟಪಟ್ಟಿ ಕಟ್ಟಿಕೊಂಡಿರುತ್ತಿದ್ದಂತಹ ಸೇವಕರಿದ್ದರು ತಾನೆ. ಇದೀಗ ಅಂತಹ ಹತ್ತಾರು ಸೇವಕರು ಮುಖರ್ಜಿಯವರ ಸುತ್ತಮುತ್ತ ಸದಾ ಕಂಡು ಬರುತ್ತಾರೆ.

ಪ್ರಣವ್ ಎತ್ತ ಕಡೆ ಹೆಜ್ಜೆ ಇಟ್ಟರೂ ಅಲ್ಲಿ ನಿಂತಿರುವ ಅಂತಹ ಸೇವಕನೊಬ್ಬ ಎರಡೂ ಕೈಗಳನ್ನು ಎದೆಯ ಬಳಿ ತಂದು ಬೆನ್ನು ಬಾಗಿಸಿ, ಅಪ್ಪಣೆಗಾಗಿ ಕಾಯತ್ತಾನೆ ಅಥವಾ ಗೌರವ ಸೂಚಿಸುತ್ತಾನೆ. ಬಹುಶಃ ಮುಖರ್ಜಿಯವರು ರಾಷ್ಟ್ರಪತಿ ಭವನದ ಇಂತಹ ಶಿಷ್ಟಾಚಾರಗಳನ್ನೆಲ್ಲಾ ಮುರಿದು ಜನಸಾಮಾನ್ಯರಿಗೆ ಹತ್ತಿರವಾಗಬಹುದು ಎಂದು ಆರು ತಿಂಗಳ ಹಿಂದೆ ನಾನು ಅಂದುಕೊಂಡಿದ್ದೆ. ಆದರೆ ಮುಖರ್ಜಿಯವರು ರಾಷ್ಟ್ರಪತಿ ಭವನಕ್ಕೆ ತಕ್ಕಂತೆ ತಾವೇ ಬದಲಾಗಿಬಿಟ್ಟಿದ್ದಾರೆ.

ಹಿಂದೆ ಆಂಗ್ಲ ದೊರೆಗಳು ಇದೇ ರಾಷ್ಟ್ರಪತಿ ಭವನದೊಳಗೆ ವಾಸಿಸುತ್ತಿದ್ದಾಗ ತೋರುತ್ತಿದ್ದ ಡಂಬಾಚಾರದ ಪರಂಪರೆಯನ್ನೇ ತಾವೂ ಮುಂದುವರಿಸಿರುವ ಮುಖರ್ಜಿ ಇದರಲ್ಲಿಯೇ ಖುಷಿ ಕಂಡುಕೊಂಡಂತಿದೆ.

ರಾಷ್ಟ್ರಪತಿ ಭವನದೊಳಗೆ ನಡೆದಿದ್ದ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ನನ್ನನ್ನು ಆಹ್ವಾನಿಸಿದ್ದರಿಂದ ಕೆಲವು ದಿನಗಳ ಹಿಂದೆ ನಾನು ಅಲ್ಲಿಗೆ ಹೋಗಿದ್ದೆ. ಹಿಂದಿನ ರಾಷ್ಟ್ರಪತಿಗಳಿಗಿಂತ ಪ್ರಣವ್ ಹೇಗೆ ಭಿನ್ನವಾಗಿದ್ದಾರೆಂಬುದನ್ನು ನೋಡಲು ನಾನು ಕಾತರನಾಗಿದ್ದೆ. ಆದರೆ ಅಂತಹದ್ದೇನೂ ಕಂಡು ಬರಲಿಲ್ಲ. ವೇದಿಕೆಯಲ್ಲಿ ಬಂಗಾರದ ಲೇಪನವಿರುವಂತೆ ಕಾಣುವ ಆ ಭವ್ಯ ಕುರ್ಚಿಯ ಪಕ್ಕದಲ್ಲಿಟ್ಟಿದ್ದ ಎರಡು ಸಾಮಾನ್ಯ ಕುರ್ಚಿಗಳೇ ಎಲ್ಲವನ್ನೂ ಹೇಳುವಂತಿತ್ತು. ನನ್ನ ಮಟ್ಟಿಗೆ ಆ ಐಷಾರಾಮಿ ಕುರ್ಚಿಯೇ ಅಲ್ಲಿ ವಿಚಿತ್ರವೆನಿಸುತಿತ್ತು. ಸೇನಾ ಸಮವಸ್ತ್ರ ಧರಿಸಿದ್ದ ಶಿಸ್ತಿನ ಸಿಪಾಯಿಯೊಬ್ಬ ಹಾಳೆಯೊಂದನ್ನು ತೆಗೆದುಕೊಂಡು ಹೋಗಿ ಮೈಕ್‌ಗೆ ತಾಗಿದಂತಿದ್ದ ಮೇಜಿನ ಮೇಲಿಟ್ಟ.

ಆತನು ಧರಿಸಿದ್ದ ಅಂಗಿಯ ಮುಂಭಾಗದಲ್ಲಿ ಮೇಲಿನಿಂದ ಕೆಳಗಿನವರೆಗೆ ಸಾಲುಸಾಲಾಗಿದ್ದ ದಪ್ಪನೆ ಗುಂಡಿಗಳು ಹೊಳೆಯುತ್ತಿದ್ದವು. ನಂತರ ರಾಷ್ಟ್ರಪತಿಗಳು ಆ ಹಾಳೆಯನ್ನು ನೋಡುತ್ತಾ ಮಾತನಾಡಿದರು. ಇವೆಲ್ಲಾ ಏನೇ ಇರಬಹುದು, ಆದರೆ ಅವತ್ತು ಪ್ರಣವ್ ಮಾಡಿದ ಭಾಷಣ ಅರ್ಥಗರ್ಭಿತವಾಗಿತ್ತು. ದೇಶದ ಇವತ್ತಿನ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡೇ ಅವರು ಮಾತನಾಡಿದಂತಿತ್ತು.

ಹೌದು, ತಮ್ಮ ಚಿಂತನೆಯ ನೆಲೆಯಲ್ಲಿಯೇ ತಾವು ಭಿನ್ನ ಎಂದು ತೋರಿಸಲು ಇಲ್ಲಿ ಅವಕಾಶವಿದೆ. ಇಂಗ್ಲೆಂಡ್‌ನಲ್ಲಿ ಮಹಾರಾಣಿ ಇದ್ದಂತೆ ಇಲ್ಲಿ ರಾಷ್ಟ್ರಪತಿ ಕೂಡಾ ಆಡಳಿತದ `ಮುಖ್ಯಸ್ಥ' ಎಂಬುದನ್ನು ಪ್ರಣವ್ ಮುಖರ್ಜಿ ಅರಿತುಕೊಳ್ಳಬೇಕಿದೆ. ಸಂವಿಧಾನವನ್ನು ಸಂರಕ್ಷಿಸುವ ಜವಾಬ್ದಾರಿ ಇವರದಾಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸಂಬಂಧಿಸಿದಂತಹ ಅಧಿಕಾರ ಇವರ ಕಚೇರಿಯಲ್ಲಿಯೇ ಇದೆ. ಆದರೆ ಸಂವಿಧಾನದ ಪಾಲನೆ ಮಾತ್ರ ಜನಪ್ರತಿನಿಧಿಗಳಿಂದ ಕೂಡಿರುವ ಸರ್ಕಾರದ ಕೆಲಸವಾಗಿರುತ್ತದೆ.

ಈ ಸರ್ಕಾರವೇ ಜನರಿಗೆ ಉತ್ತರ ಕೊಡಬೇಕಾಗುತ್ತದೆ. ಈಚೆಗೆ ನಾನು ಸೂಕ್ಷ್ಮವಾಗಿ ಗಮನಿಸಿರುವಂತೆ ಮುಖರ್ಜಿಯವರ ಭಾಷಣಗಳಲ್ಲೆಲ್ಲಾ ರಾಜಕೀಯ ಚಿಂತನೆ ಅಥವಾ ಆಗುಹೋಗುಗಳ ಬಗ್ಗೆಯೇ ಹೆಚ್ಚು ಪ್ರಸ್ತಾಪಗಳನ್ನು ಹೊಂದಿರುತ್ತವೆ. ಇದು ಅವರ ಅಂತರಂಗದ ಪ್ರತಿಬಿಂಬವಷ್ಟೇ. ಒಮ್ಮಮ್ಮೆ ಅವರು ತಾವಿನ್ನೂ ಲೋಕಸಭಾ ಸದಸ್ಯ ಎಂದೇ ಭಾವಿಸಿಕೊಂಡಿದ್ದಾರೇನೋ ಎಂಬ ಅನುಮಾನವೂ ಬರುತ್ತದೆ. ಅವರು ದೇಶದ ಅತ್ಯಂತ ಗೌರವಾನ್ವಿತ ಸ್ಥಾನದಲ್ಲಿದ್ದಾರೆ. ಅವರ ನಡೆನುಡಿ ಚಿಂತನೆಗಳೆಲ್ಲವೂ ಹೊಸಪೀಳಿಗೆಗೆ, ನಾಡಿನ ಜನಸಾಮಾನ್ಯರಿಗೆ, ರಾಜಕಾರಣಿಗಳಿಗೆ, ಆಡಳಿತಗಾರರಿಗೆ ಮಾದರಿ ಎನಿಸುವಂತಿರಬೇಕು. ಅವರ ಮಾತು ಮಾರ್ಗದರ್ಶನದ ಸೊಗಡು ಹೊಂದಿರಬೇಕು. ಆದರೆ ಪ್ರಣವ್ ಭಾಷಣಗಳಲ್ಲಿ ಓರ್ವ ರಾಜಕಾರಣಿಯ ಅಂತರಂಗದ ಧ್ವನಿ ಕೇಳಿ ಬರುತ್ತಿರುವುದೊಂದು ವಿಪರ್ಯಾಸ.

ಆಶ್ಚರ್ಯವೆಂದರೆ, ಮೊನ್ನೆ ಆ ಸಮಾರಂಭ ಮುಗಿದ ಒಡನೆ ಮುಖರ್ಜಿಯವರು 'ಅರಮನೆ' ಯೊಳಗೆ ತಾವು ವಾಸವಿರುವ ದಿಕ್ಕಿನತ್ತ ನಡೆದೇ ಬಿಟ್ಟರು. ಆದರೆ ಹಿಂದಿನ ಅಧ್ಯಕ್ಷರೆಲ್ಲರೂ ಅತಿಥಿಗಳೊಡನೆ ಕುಳಿತು ಮುಕ್ತವಾಗಿ ಮಾತನಾಡುತ್ತಿದ್ದರಲ್ಲದೆ, ಅವರೊಡನೆ ಚಹ ಸೇವಿಸುತ್ತಿದ್ದರು. ಆದರೆ ಮುಖರ್ಜಿಯವರು ಅಧಿಕಾರಶಾಹಿಯನ್ನೇ ಹೆಚ್ಚು ಅವಲಂಬಿಸಿದಂತೆ ಕಂಡು ಬರುತ್ತದೆ. ಇಂತಹ ಅಧಿಕಾರಿಗಳು  ರಾಷ್ಟ್ರಪತಿ ಮತ್ತು ಜನಸಾಮಾನ್ಯರ ನಡುವಣ ಅಂತರ ಹೆಚ್ಚಾಗುವಂತೆ ನೋಡಿಕೊಳ್ಳುತ್ತಿದ್ದಾರೆ.

ದೆಹಲಿಯ ಯಾವುದೇ ಭಾಗಕ್ಕೆ ಈಗ ಮುಖರ್ಜಿಯವರು ಭೇಟಿ ಕೊಟ್ಟರೂ, ಅವರ ಕಾರಿನ ಹಿಂದೆ ಮತ್ತು ಮುಂದೆ ಹತ್ತಾರು ಕಾರುಗಳ ದಂಡು ಸಾಗುತ್ತದೆ. ಈ ಕಾರುಗಳ ಮೆರವಣಿಗೆ ಸಾಗಿದಲ್ಲೆಲ್ಲಾ ಪೊಲೀಸರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುತ್ತಾರೆ. ಹೀಗಾಗಿ `ಟ್ರಾಫಿಕ್ ಜಾಮ್' ಸಾಮಾನ್ಯ. ಹಿಂದೊಮ್ಮೆ ನಾನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೊಡನೆ ಮಾತನಾಡುತ್ತಿದ್ದಾಗ `ಇಂತಹ ಬಿಗಿಯಾದ ಭದ್ರತಾ ವ್ಯವಸ್ಥೆಯ ಅಗತ್ಯವಿದೆಯೇ' ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು `ಇಂತಹ ಯಾವುದೂ ನನ್ನ ಕೈಯಲ್ಲಿಲ್ಲ. ಸರ್ಕಾರಕ್ಕೆ ಇದೆಲ್ಲಾ ಬೇಕಾಗಿದೆ. ಹಾಗಾಗಿ ಇಂತದ್ದೆಲ್ಲಾ ನಡೆಯುತ್ತಿದೆ, ಅಷ್ಟೇ' ಎಂದಿದ್ದರು. ಆದರೆ ಇದನ್ನೇ ಅವರು ಒಂದು ಚರ್ಚೆಗೆ ವಸ್ತುವನ್ನಾಗಿಸಿದರೆ ಮತ್ತು ಇಂತಹದ್ದೆಲ್ಲಾ ತಮಗೆ ಬೇಕಿಲ್ಲ ಎಂದು ಪಟ್ಟು ಹಿಡಿದರೆ ಅವರು ಅದರಲ್ಲಿ ಯಶಸ್ವಿಯಾಗಬಹುದೇನೋ ?

ರಾಷ್ಟ್ರಪತಿಗಳಿಗೆ ಬೆಂಗಾವಲು ಪಡೆ ಇರಬಾರದೆಂದು ನಾನು ಹೇಳುತ್ತಿಲ್ಲ. ಅವರಿಗೆ ಅವರದೇ ಆದ ಶಿಷ್ಟಾಚಾರದ ಸಿಬ್ಬಂದಿ ಇರಬೇಕು. ಇವತ್ತು ಸಿಬ್ಬಂದಿ ವರ್ಗವು ವಿದೇಶಾಂಗ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಈ ಸಚಿವಾಲಯ ಹಳೆಯ ಸಂಪ್ರದಾಯಗಳಿಗೆ ಮತ್ತು ವೈಭವೋಪೇತ ನಡವಳಿಕೆಗಳಿಗೆ ಹೆಚ್ಚು ಜೋತು ಬಿದ್ದಿದೆ. ಇವತ್ತು ರಾಷ್ಟ್ರಪತಿಗಳ ದಂಡು ಸಾಗುವಲ್ಲೆಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರುವ ಪರಿಪಾಠವನ್ನಾದರೂ ಕೈಬಿಡಬಹುದೇನೊ. ಪ್ರಣವ್ ಮುಖರ್ಜಿಯವರನ್ನು ನಾನು ಬಹಳ ಹಿಂದಿನಿಂದಲೇ ನೋಡುತ್ತಾ ಬಂದಿರುವಂತೆ ಅವರು ಬಹಳ ಸುಲಭದಲ್ಲಿ ಎಲ್ಲರ ಕೈಗೂ ಸಿಗುತ್ತಿದ್ದವರು. ಯಾರು ಬೇಕಿದ್ದರೂ ಹಿಂದೆ ಅವರೊಡನೆ ಮಾತನಾಡಬಹುದಿತ್ತು. ಆದರೆ ಇವತ್ತು `ರಾಷ್ಟ್ರಪತಿಗಳ ಭವನ' ಇದಕ್ಕೆ ಅಡ್ಡಿಯಾಗದಿರಲಿ ಎಂಬುದೇ ನನ್ನ ಆಶಯ.


ಹಿಂದೆ ನಾನು ಲಂಡನ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದಾಗ ಅಲ್ಲಿನ ಮಹಾರಾಣಿಯವರ ಕಾರು ಸಾಗುತ್ತಿದ್ದ ಪರಿ ಕಂಡು ಅಚ್ಚರಿ ಪಟ್ಟಿದ್ದೆ. ಏಕೆಂದರೆ ಮಹಾರಾಣಿಯವರ ಕಾರಿನ ಎದುರು ಮೋಟಾರು ಬೈಕಿನಲ್ಲಿ ಒಬ್ಬ `ಶಿಷ್ಟಾಚಾರದ ಅಧಿಕಾರಿ' ಹೋಗುತ್ತಿದ್ದನಷ್ಟೆ. ಮಹಾರಾಣಿಯವರ ಆ ಕಾರನ್ನು ಯಾವುದೇ ಸಿಬ್ಬಂದಿ ವರ್ಗದ ಕಾರೂ ಹಿಂಬಾಲಿಸುತ್ತಿರಲಿಲ್ಲ ಮತ್ತು ಎಲ್ಲಿಯೂ ಪೊಲೀಸರು ರಸ್ತೆತಡೆ ಮಾಡುತ್ತಿರಲಿಲ್ಲ. ಲಂಡನ್‌ನ ಪರಿಸ್ಥಿತಿಯೇ ಬೇರೆ ನಮ್ಮ ನಗರಗಳ ಸ್ಥಿತಿಯೇ ಬೇರೆ ಎಂದು ಯಾರಾದರೂ ವಾದ ಮಾಡಬಹುದು ನಿಜ, ಆದರೆ ಇವತ್ತು  ಆ ನಗರದಲ್ಲಿಯೂ ಭಯೋತ್ಪಾದಕರ ಕಾಟ ಇದ್ದೇ ಇದೆಯಲ್ಲಾ.

ನನಗನ್ನಿಸುವ ಮಟ್ಟಿಗೆ ನಮ್ಮ ದೇಶದಲ್ಲಿ ಅಧಿಕಾರಸ್ತರಿಗೆ ಭದ್ರತೆ ಎನ್ನುವುದು ಗೀಳಿನಂತಾಗಿಬಿಟ್ಟಿದೆ. ಪ್ರಣವ್ ಮುಖರ್ಜಿಯವರು ನಿನ್ನೆಮೊನ್ನೆಯವರೆಗೂ ಜನರ ನಡುವೆಯೇ ಓಡಾಡುತ್ತಾ ಕಳೆದವರು. ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಅವರು ಯಾವತ್ತೂ ಜನರಿಂದ ದೂರವಿದ್ದವರಲ್ಲ ಮತ್ತು ಭದ್ರತಾ ಸಿಬ್ಬಂದಿಗಳ ಕೋಟೆಯೊಳಗೆ ಬಂಧಿಯಾಗಿದ್ದವರಲ್ಲ. ಇನ್ನಾದರೂ ಅವರು ತಮ್ಮ ಭದ್ರತಾ ಸಿಬಂದಿಯನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಲಿ. ಮತ್ತು ಇಂತಹದ್ದೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟು ಮಾದರಿಯಾಗಲಿ. ಗುಪ್ತಚರ ವರದಿಗಳು ಯಾವತ್ತೂ ಉತ್ಪ್ರೇಕ್ಷೆಯಿಂದಲೇ ಕೂಡಿರುತ್ತದೆ. ಜೀವಬೆದರಿಕೆಗಳಿರುವ ಸಾಧ್ಯತೆಗಳ ಬಗ್ಗೆ ಕೂಡಾ ಗುಪ್ತಚರ ಇಲಾಖೆ ಅನೇಕ ಸಲ ಸರಿಯಾದ ಮಾಹಿತಿಗಳನ್ನು ಸಂಗ್ರಹಿಸದೆ ಒಟ್ಟಾರೆಯಾಗಿ ಯಾವುದೋ ಒಂದು ವರದಿಯನ್ನಿಟ್ಟುಕೊಂಡು ಭದ್ರತಾ ಸಿಬ್ಬಂದಿ ಹೆಚ್ಚಿಸುವ ಕುರಿತು ಸಲಹೆ ನೀಡಿಬಿಡುತ್ತದೆ.

ಬ್ರಿಟನ್‌ನಲ್ಲಿ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಇರುವ ನಿರ್ಲಿಪ್ತತೆ ಬಗ್ಗೆ ನನಗೊಂದು ಘಟನೆ ನೆನಪಿಗೆ ಬರುತ್ತದೆ. ಭಾರತದ ಆಗಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರು ಬ್ರಿಟನ್‌ಗೆ ಅಧಿಕೃತ ಭೇಟಿ ನೀಡಿದ್ದರು. ಮೊದಲ ದಿನವೇ ಅಪಶಕುನವೊಂದು ಎದುರಾಗಿತ್ತು. ಅತ್ಯುತ್ಸಾಹಿ ಪೊಲೀಸನೊಬ್ಬ ರೈಲ್ವೆ ನಿಲ್ದಾಣದ ಪ್ರಯಾಣಿಕರು ನಿಲ್ಲುವ ಸ್ಥಳದಲ್ಲಿ ಬಿದ್ದಿದ್ದ ಕೈಚೀಲವೊಂದರ ಬಗ್ಗೆ ಅನುಮಾನಗೊಂಡನು. ಆತನಿಗೆ ಅದು ಯಾರದೆಂದು ತಕ್ಷಣ ಗೊತ್ತಾಗಲಿಲ್ಲ. ಆತ ಅದರೊಳಗೆ ಬಾಂಬು ಇರಬಹುದೆಂದು ಶಂಕಿಸಿದ. ಅದೇ ವೇಳೆ ಗೇಟ್‌ವಿಕ್ ವಿಮಾನ ನಿಲ್ದಾಣಕ್ಕೆ ಸಮೀಪದ ಆ ರೈಲು ನಿಲ್ದಾಣದಲ್ಲಿ `ರಾಯಲ್ ಟ್ರೇನ್' ಕಾಯುತ್ತಾ ನಿಂತಿತ್ತು.

ಆ ರೈಲು ರಾಷ್ಟ್ರಪತಿ ವೆಂಕಟರಾಮನ್ ತಂಡವನ್ನು ಅಲ್ಲಿಂದ ವಿಕ್ಟೋರಿಯಾ ನಿಲ್ದಾಣದತ್ತ ಕರೆದೊಯ್ಯುವುದಿತ್ತು. ಆ ನಿಲ್ದಾಣದಲ್ಲಿ ಮಹಾರಾಣಿಯವರು ಈ ತಂಡವನ್ನು ಸ್ವಾಗತಿಸಲು ಕಾಯುತ್ತಿದ್ದರು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಉತ್ಸಾಹಿ ಪೊಲೀಸ್ `ರಾಯಲ್ ಟ್ರೇನ್' ಅನ್ನು ವಾಪಸು ಕಳಿಸಿಬಿಟ್ಟ. ತಕ್ಷಣ ಬಾಂಬು ಪರಿಶೀಲನಾ ದಳಕ್ಕೆ ಕರೆ ಹೋಯಿತು. ಅವರು ಬಂದು ಪರಿಶೀಲಿಸಿದಾಗ, ಆ ಕೈಚೀಲ ಯಾರೋ ಮರೆತುಹೋಗಿದ್ದೆಂದೂ ಗೊತ್ತಾಯಿತು. ಅದರಲ್ಲಿ ಬಾಂಬು ಇರಲಿಲ್ಲ. ಆದರೆ ಯಾರೊಬ್ಬರೂ ಆ ಪೊಲೀಸನ ನಿರ್ಧಾರವನ್ನು ಪ್ರಶ್ನಿಸುವ ಗೋಜಿಗೇ ಹೋಗಲಿಲ್ಲ.

ಅಷ್ಟರಲ್ಲಿ ವೆಂಕಟರಾಮನ್ ಅವರಿದ್ದ ಭಾರತೀಯರ ತಂಡ ಗೇಟ್‌ವಿಕ್ ವಿಮಾನ ನಿಲ್ದಾಣದಿಂದ ಹೊರಬಂದಿತ್ತು. ಹೀಗಾಗಿ ಈ ತಂಡವನ್ನು ವಾಹನ ದಟ್ಟಣೆ ಇರುವ ಮುಖ್ಯರಸ್ತೆಯಲ್ಲಿಯೇ ಕರೆದೊಯ್ಯಲಾಯಿತು. ಭದ್ರತಾ ಪಡೆಗೆ ಸೇರಿದ ನಾಲ್ವರು ಮೋಟಾರು ಬೈಕ್ ಸವಾರರು ತಮ್ಮ ತಮ್ಮ ಬೈಕುಗಳಲ್ಲಿ ಭಾರತದ ರಾಷ್ಟ್ರಪತಿಗಳಿದ್ದ ವಾಹನದ ಮುಂಭಾಗದಲ್ಲಿ ಸಾಗತೊಡಗಿದರು. ಆ ನಾಲ್ವರು ಆ ಕೆಲಸವನ್ನು ನಿಭಾಯಿಸಿದ ಪರಿ ಅನನ್ಯವಾಗಿತ್ತು. ಈ ತಂಡ ಬಕ್ಕಿಂಗ್‌ಹ್ಯಾಮ್ ಅರಮನೆ ತಲುಪಿದಾಗ ಅಲ್ಲಿ ಮಹಾರಾಣಿ ಹೊರಗೆ ಬಂದು ಎಲ್ಲರನ್ನೂ ಸ್ವಾಗತಿಸಿ ಒಳಗೆ ಕರೆದೊಯ್ದರು.

ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಕತೆ ಹೊರತು ಪಡಿಸಿ ನೋಡಿದರೂ, ರಾಷ್ಟ್ರಪತಿ ಭವನದಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕಿದೆ. ಆ ನಿಟ್ಟಿನಲ್ಲಿ ಪ್ರಣವ್ ಮುಖರ್ಜಿಯವರು ಯೋಚಿಸಬೇಕಿದೆ. ಮೊದಲ ಬಾರಿಗೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಈ ಭವನದೊಳಗೆ ಅಚ್ಚರಿಯಾಗುವಂತಹ ಬದಲಾವಣೆ ತಂದಿದ್ದರು. ಅದಕ್ಕೆ ಮೊದಲು ಅದು ವೈಸರಾಯ್ ನಿವಾಸವಾಗಿತ್ತಲ್ಲಾ, ಆ ವೈಭೋಗದ ಬಹುಪಾಲನ್ನು ರಾಜೇಂದ್ರ ಪ್ರಸಾದ್ ಕೈಬಿಟ್ಟಿದ್ದರು. ಆದರೆ ಕೆಲವು ಶಿಷ್ಟಾಚಾರಗಳು ಉಳಿದುಕೊಂಡವು.

ಶಿಷ್ಟಾಚಾರವೆಂಬ ಆಷಾಡಭೂತಿತನವಿದೆಯಲ್ಲಾ, ಇದನ್ನು ಇನ್ನಾದರೂ ಕೈಬಿಡಬೇಕು. ಅಗತ್ಯಕ್ಕೆ ಎಷ್ಟು ಬೇಕೊ ಅಷ್ಟು ಇರಲಿ ಅಷ್ಟೇ. ಪ್ರಸಕ್ತ ಈ ಭವನ ರಾಜವೈಭೋಗದ ಕೇಂದ್ರದಂತಿದೆ ಎನಿಸುತ್ತಿದೆ ನಿಜ, ಮುಂದಿನ ದಿನಗಳಲ್ಲಿ ಇದು ಸಾಮ್ರಾಜ್ಯಶಾಹಿ ಕೇಂದ್ರದ ಸ್ವರೂಪ ಪಡೆದುಕೊಳ್ಳಲೂ ಬಹುದೆನಿಸುತ್ತದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಪ್ರಣವ್ ಮುಖರ್ಜಿಯವರಿಗೆ ಚಿಕ್ಕ ವಯಸ್ಸಾಗಿದ್ದರಿಂದ ಬಹುಶಃ ಅದರಲ್ಲಿ ಪಾಲ್ಗೊಂಡಿರಲಿಕ್ಕಿಲ್ಲ. ಆದರೆ ಇವರು ವೈಸರಾಯ್ ಬದುಕುತ್ತಿದ್ದಂತೆ ಬದುಕುವ ಅಗತ್ಯವೇನಿಲ್ಲ. ಈ ನೆಲದ ಜನರ ಭಾವನೆಗಳಿಗೆ, ಭಾರತೀಯ ಬದುಕಿಗೆ ಹತ್ತಿರವಾಗಿರಬಹುದಲ್ಲಾ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT