ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಮಾತು, ನೆನಪುಗಳ ಮೆಲುಕು

Last Updated 4 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿ ಪಟ್ಟಕ್ಕೇರಿದ ದಿನದಿಂದಲೂ ಅವರ ಭಾಷಣಗಳಲ್ಲಿ ಪ್ರಸಕ್ತ ರಾಜಕೀಯದ ಕುರಿತ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಲೇ ಇವೆ. ಈಚೆಗೆ ಗಣರಾಜ್ಯೋತ್ಸವ ಸಂದರ್ಭದ ಭಾಷಣ­ದಲ್ಲಂತೂ ಇಂತಹ ಅನಿಸಿಕೆಗಳು ಒಂದಿಷ್ಟು ಹೆಚ್ಚಾ­­ಗಿಯೇ ಇತ್ತು. ಹೀಗಾಗಿ ಆ ಭಾಷಣದ ಬಗ್ಗೆ ಹಲವು ವಲಯಗಳಿಂದ ಟೀಕೆಗಳೂ ಕೇಳಿ­ಬಂದವು.  ಸಿಪಿಐ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆ ಭಾಷಣವನ್ನು ‘ರಾಜಕೀಯ ಭಾಷಣ’ ಎಂದೇ ಕರೆದವು.

ರಾಷ್ಟ್ರಪತಿ ಮುಖರ್ಜಿ ಅವರು ಹೇಳುತ್ತಿರು­ವುದರಲ್ಲಿ ಯಾವುದೇ ತಪ್ಪಿಲ್ಲ. ಸಾರ್ವಜನಿಕ ಬದುಕಿ­ನಲ್ಲಿ ಈಚೆಗೆ ಹೆಚ್ಚುತ್ತಿರುವ ಕಪಟ ನಡವ­ಳಿಕೆ, ನಾಯಕರಲ್ಲಿ ಎದ್ದು ಕಾಣುತ್ತಿರುವ ಆತ್ಮ­ವಂಚನೆ ಇತ್ಯಾದಿಗಳೆಲ್ಲವೂ ನಿಜ. ಆದರೆ ತಾವು ಈ ದೇಶದ ಸಂಸದೀಯ ಪ್ರಜಾಪ್ರಭುತ್ವ ವ್ಯವ­ಸ್ಥೆಯ ಮುಖ್ಯಸ್ಥರಷ್ಟೇ ಎಂಬ ಸಂಗತಿಯನ್ನು ಅವರು ಮರೆತುಬಿಟ್ಟಂತಿದೆ. ಲೋಕಸಭೆ ಮತ್ತು ವಿಧಾನ­ಸಭೆಗಳ ಜನಪ್ರತಿನಿಧಿಗಳು ರಾಷ್ಟ್ರಪತಿ­ಗಳಿಂದ ನಿರೀಕ್ಷಿಸುವುದೂ ಅಷ್ಟನ್ನೇ ಎನ್ನುವುದೂ ಅವರಿಗೆ ಗೊತ್ತಿಲ್ಲವೇ?

ಮುಖರ್ಜಿ ಅವರು ಸಕ್ರಿಯ ರಾಜಕಾರಣ­ದಲ್ಲೇ ಹಲವು ದಶಕಗಳನ್ನು ಕಳೆದವರು. ಅದು ಅವರಿಗೆ ಚಿರಪರಿಚಿತ ಕ್ಷೇತ್ರ ಎನ್ನುವುದರ­ಲ್ಲಿಯೂ ಎರಡು ಮಾತಿಲ್ಲ. ಆದರೆ ಅವರು ರಾಷ್ಟ್ರಪತಿ­ಗಳ ಸ್ಥಾನವನ್ನು ಅಲಂಕರಿಸಿದ ಮೇಲೆ ಹಿಂದಿನಂತೆ ವಾಚಾಮಗೋಚರವಾಗಿ ಮಾತನಾ­ಡುವಂತಿಲ್ಲ. ಆ ಸ್ಥಾನದ ಘನತೆಗೆ ತಕ್ಕಂತಿರಬೇಕು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೇಲೆ ಅವರಿಗೆ ಅಸಮಾಧಾನ ಇರಬಹುದು. ಅದು ಅವರು ಮತ್ತು ಸೋನಿಯಾ ಗಾಂಧಿ ಅವರಿಗಷ್ಟೇ ಸಂಬಂಧಿಸಿದ್ದು. ಅದು ಕಾಂಗ್ರೆಸ್ ಪಕ್ಷದೊಳಗೆ ನಡೆದಿರಬಹುದಾದ ಕೆಲವು ಸಂಗತಿ­ಗಳಿಗೆ ಸಂಬಂಧಿಸಿದ್ದು. ಅದನ್ನು ಕಟ್ಟಿಕೊಂಡು ಈ ದೇಶದ ಜನರಿಗೆ ಏನೂ ಆಗಬೇಕಿಲ್ಲ.

ಒಂದು ವೇಳೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರೆ  ಆ ಸ್ಥಾನಕ್ಕೆ ಸಹಜವಾಗಿಯೇ ಮುಖರ್ಜಿ ಅವರು ಉತ್ತರಾಧಿಕಾರಿ ಆಗುತ್ತಿದ್ದರು.  ಆ ಮಟ್ಟಿಗೆ ಪ್ರಭಾವಿ­­ಯಾಗಿರುವ ಮುಖರ್ಜಿಯವರನ್ನು ಬಹುಶಃ ಅದೇ ‘ಕಾರಣ’ದಿಂದಲೇ ಇನ್ನೂ ‘ಎತ್ತರದ ಸ್ಥಾನ’ಕ್ಕೆ ತಳ್ಳಲಾಯಿತು. ಸೋನಿಯಾ ಗಾಂಧಿ ಅವರಿಗೆ ತಮ್ಮ ಮಗ ರಾಹುಲ್ ಗಾಂಧಿ ಅವ­ರನ್ನು ಪ್ರಧಾನ ಮಂತ್ರಿ ಗಾದಿಯಲ್ಲಿ ಕುಳ್ಳಿರಿ-ಸುವ ಮಹದಾಸೆ ಇದೆ. ಈ ಮಹದಾಸೆಯೇ  ಮುಖರ್ಜಿಯವರ ಮಹತ್ವಾಕಾಂಕ್ಷೆಗೆ ಅಡ್ಡಿಯಾ­ಯಿತು ಎಂದರೆ ಅತಿಶಯೋಕ್ತಿಯಂತೂ ಅಲ್ಲ.

ಹಿಂದೆ ಮುಖರ್ಜಿ ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸುವ ಪ್ರಸ್ತಾಪ ಬಂದಾಗ ಅವರು ಒಪ್ಪಿಕೊಂಡು ಬಿಟ್ಟರು. ಆ ಬಗ್ಗೆ ಆಸಕ್ತಿ ಇಲ್ಲದಿದ್ದಿದ್ದರೆ ಬೇಡ ಎಂದು ತಿರಸ್ಕರಿಸ­ಬಹು­ದಿತ್ತಲ್ಲ. ಆದರೆ ಅವರು ಆ ದಿನಗಳಲ್ಲೇ ಹೇಳಿಕೆ­ಯೊಂದನ್ನು ನೀಡಿ ತಾವು ೨೦೧೪ರ ಚುನಾವಣೆ­ಯಲ್ಲಿ ಸ್ಪರ್ಧಿಸುವುದಿಲ್ಲ ಎಂದುಬಿಟ್ಟರು. ಆ ಮೂಲಕ ತಾವು ರಾಷ್ಟ್ರಪತಿ ಭವನದೊಳಗೆ ಹೋಗಲು ಸಿದ್ಧ ಎಂಬ ಸಂದೇಶವನ್ನೂ ರವಾನಿಸಿ­ಬಿಟ್ಟರು. ಸೋನಿಯಾ ಗಾಂಧಿ ಅವರಿಗೂ ಅಷ್ಟೇ ಬೇಕಿತ್ತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಅವಕಾಶ ಒದಗಿ ಬಂದರೆ, ಪ್ರಧಾನಿ ಪಟ್ಟಕ್ಕೆ ರಾಹುಲ್ ಏರಲಿಕ್ಕೆ ಪಕ್ಷದೊಳಗೆ ಇನ್ನು ಯಾವುದೇ ಅಡ್ಡಿ ಇಲ್ಲ ಎನ್ನುವಂತಾಯಿತು. ಇದ­ಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಬೇರೆ ಸಂದರ್ಭ­ಗಳಲ್ಲಿ ಎದುರಾದ ಕ್ಲಿಷ್ಟಕರ ಪರಿಸ್ಥಿತಿಗಳನ್ನು ಮುಖರ್ಜಿಯವರೇ ನಿಭಾಯಿಸಿದ್ದಾರೆ.

ಕಾಂಗ್ರೆಸ್ ‘ಸಾಮ್ರಾಜ್ಯ’ಕ್ಕೆ ಸುದೀರ್ಘ ಕಾಲ ಈ ಮಟ್ಟಿಗಿನ ಮಹತ್ತರ ಸೇವೆ ಸಲ್ಲಿಸಿದ ಮುಖರ್ಜಿ­-ಯವರನ್ನು ಸುಮ್ಮನೆ ಬದಿಗೆ ತಳ್ಳುವಂತಿರಲಿಲ್ಲ. ಇಂತಹ ಹತ್ತು ಹಲವು ರಾಜಕೀಯ ಬೆಳವಣಿಗೆ­ಗಳ ನಡುವೆಯೇ ಮುಖರ್ಜಿಯವರು ರಾಷ್ಟ್ರ­ಪತಿ ಭವನದೊಳಗೆ ಕಾಲಿಟ್ಟರು. ಆದರೆ ರಾಷ್ಟ್ರ­ಪತಿ ಎಂಬ ‘ವ್ಯವಸ್ಥೆ’ಯೊಳಗೆ ಮುಖರ್ಜಿ­ಯ­ವರು ಇನ್ನೂ ಸರಿಯಾಗಿ ಹೊಂದಿಕೊಳ್ಳದಿರು­ವು­ದೊಂದು ವಿಪರ್ಯಾಸ. ಒಬ್ಬ ರಾಜಕಾರಣಿ­ಯಾ­­ಗಿ­ದ್ದಾಗ ನೀಡುತ್ತಿದ್ದಂತಹ ಹೇಳಿಕೆಗಳನ್ನು ಈಗ ನೀಡಬಾರದು ಎಂಬ ಪರಿವೆಯೇ ಇಲ್ಲದೆ ಮಾತನಾಡುತ್ತಿರುವುದಕ್ಕೆ ಏನನ್ನುವುದು?

ದೆಹಲಿಯ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರಿಗೆ ಅಪಮಾನ ಮಾಡಿದ ಇಬ್ಬರು ಪೊಲೀಸರನ್ನು ವರ್ಗಾಯಿಸಬೇಕೆಂದು ಒತ್ತಾ­ಯಿಸಿ ಸ್ವತಃ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ಧರಣಿ ನಡೆಸಿದ್ದು, ಕೆಲವು ಅಹಿತಕರ ಘಟನೆಗಳಿಗೆ ಕಾರಣವಾಗಿದ್ದು ಸರಿ ಎಂದು ನಾನು ಒಪ್ಪುವುದಿಲ್ಲ. ಒಬ್ಬ ಮುಖ್ಯಮಂತ್ರಿ­ಯಾಗಿ ಆ ರೀತಿ ನಡೆದುಕೊಳ್ಳುವುದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಸಂಬಂಧಪಟ್ಟ ಪೊಲೀಸರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳ­ಬೇಕೆಂಬ ಬಗ್ಗೆ ಕೇಜ್ರಿವಾಲ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜತೆಗೆ ಮಾತನಾಡ­ಬೇಕಿತ್ತು.

ಆ ನಂತರ ಇವರು ತೀರ್ಮಾನ ತೆಗೆದು­ಕೊಳ್ಳಬೇಕಿತ್ತು.  ಅವರು ಹಾಗೆ ಮಾಡಲಿಲ್ಲ, ಬಿಡಿ. ಆದರೆ ಕೇಜ್ರಿವಾಲ್ ಅವರು ಇವತ್ತಿಗೂ ತಾವು ಮಾಡಿದ್ದೇ ಸರಿ ಎಂದು ವಾದಿಸುತ್ತಿದ್ದಾರೆ. ಮುಖ್ಯಮಂತ್ರಿಯೊಬ್ಬ ಧರಣಿ ನಡೆಸಬಾರದೆಂದು ಯಾವ ಕಾನೂನಿನಲ್ಲಿದೆ ತೋರಿಸಿ ಎಂಬ ಮೊಂಡು ವಾದಕ್ಕೆ ಇಳಿದಿರುವ ಅವರಿಗೆ ಏನನ್ನುವುದು?

ತಾವು ನಡೆಸಿದ ಧರಣಿ ಯಾವುದೇ ಕಾರಣಕ್ಕೂ ಸಂವಿಧಾನಬಾಹಿರವಲ್ಲ ಎಂದೂ ಕೇಜ್ರಿವಾಲ್‌  ಹೇಳುತ್ತಿದ್ದಾರೆ. ಈಗ ಅವರ ಬಲು ದೊಡ್ಡ ಬೆಂಬಲಿಗ ಸಮೂಹ ಮಧ್ಯಮ ವರ್ಗವೇ ಆಗಿದ್ದು, ಆ ವರ್ಗ, ಮುಖ್ಯಮಂತ್ರಿಯೊಬ್ಬರು ಧರಣಿ ಕುಳಿತುಕೊಳ್ಳುವುದನ್ನು ಇಷ್ಟಪಡುತ್ತದೆ ಎಂಬುದನ್ನಂತೂ ನಾನು ನಂಬುವುದಿಲ್ಲ.

ಕೇಜ್ರಿವಾಲ್‌ ಕಥೆ ಏನೇ ಇರಲಿ, ರಾಷ್ಟ್ರಪತಿ­ಗಳೇಕೆ ರಾಜಕೀಯ ಏಳುಬೀಳುಗಳ ಬಗ್ಗೆ ಅನಿಸಿಕೆ­ಗಳನ್ನು ಹರಿಯಬಿಡಬೇಕು? ‘ಸರ್ಕಾರ ಧರ್ಮ­ಛತ್ರವಲ್ಲ...’ ಎಂಬುದಾಗಿ ಮುಖರ್ಜಿಯವರು ನೀಡಿದ ಹೇಳಿಕೆಯೊಂದು ಈಚೆಗೆ ವಿವಾದಕ್ಕೆ ಕಾರಣ­ವಾಗಿದೆ. ಚುನಾವಣೆಯಲ್ಲಿ ಜನಮನ ಗೆಲ್ಲುವ ದೃಷ್ಟಿಯಿಂದ ಹತ್ತು ಹಲವು ಭರವಸೆ­ಗಳನ್ನು ನೀಡುವ ಪ್ರವೃತ್ತಿಯ ಬಗ್ಗೆ ಅವರು ಈ ರೀತಿ ಟೀಕಿಸಿದ್ದರು.

ಇಂತಹ ಭರವಸೆಗಳನ್ನು ಎಲ್ಲಾ ರಾಜಕೀಯ ಪಕ್ಷಗಳೂ ನೀಡುತ್ತವೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ‘ಗರೀಬಿ ಹಠಾವೊ’ ಘೋಷಣೆ ವ್ಯಾಪಕ ಪ್ರಚಾರ ಪಡೆದಿತ್ತು. ಆಗ ಕೇಂದ್ರ ಸಂಪುಟದಲ್ಲಿ ಮುಖರ್ಜಿಯವರೂ ಇದ್ದರು ತಾನೆ? ಈಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ತಮ್ಮ ಸರ್ಕಾರವನ್ನು ಉಳಿಸಿ­ಕೊಳ್ಳುವ ನಿಟ್ಟಿನಲ್ಲಿ ಡಿಎಂಕೆ ಪಕ್ಷಕ್ಕೆ ಯಾವ ತೆರನಾದ ಭರವಸೆ ನೀಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು ತಾನೆ.

ಕೇಂದ್ರ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಲಾಯಂ ಸಿಂಗ್‌ ಯಾದವ್‌ ಅವರ ಮೇಲಿದ್ದ ಸಿಬಿಐ ತನಿಖೆಯ ಸ್ಥಿತಿ ಏನಾಯಿತು ಎಂಬುದು ಜನರಿಗೆ ಗೊತ್ತಿಲ್ಲ­ದ್ದೇನೂ ಅಲ್ಲ. ಹಿಂದೆ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಬೀಳುವುದನ್ನು ತಪ್ಪಿಸಲು ವಿಶೇಷ ಪ್ರಯತ್ನಗಳು ನಡೆದಿದ್ದವು. ಆಗ  ಮುಖರ್ಜಿ­ಯವರು ಅದೇ ಸಂಪುಟದಲ್ಲಿ ಸಚಿವರಾಗಿರಲಿಲ್ಲವೇ?
ಸರ್ಕಾರ ಎನ್ನುವುದು ಧರ್ಮಛತ್ರವಲ್ಲ ಎಂದಿರುವ ಮುಖರ್ಜಿಯವರು ಅಂದು ಸುಮ್ಮನಿದ್ದರೇಕೆ?

ಮುಖರ್ಜಿಯವರು ಹಿರಿಯ ಮುಖಂಡ­ರಾಗಿ­ದ್ದರಿಂದ ಅವರ ಮಾತಿಗೆ ಹೆಚ್ಚು ತೂಕವಿತ್ತು. ಅಂತಹದ್ದನ್ನೆಲ್ಲಾ ನಿಲ್ಲಿಸಲು ಯತ್ನಿಸ­ಬಹು­ದಿತ್ತಲ್ಲ. ಹಿಂದೆ ಪೂರ್ವಾನ್ವಯ ತೆರಿಗೆ ವಸೂಲಿ­ಯನ್ನು ಜಾರಿಗೆ ತಂದಾಗ ವಿದೇಶಿ ಹೂಡಿಕೆ ಕಡಿಮೆಯಾಗುತ್ತಾ ಬಂದಿತು. ಅಂದು ಹಣ­ಕಾಸು ಸಚಿವರಾಗಿದ್ದ ಅವರು ಇಂತಹ­ದ್ದೊಂದು ಪ್ರತಿಕೂಲ ಪರಿಸ್ಥಿತಿ ಬರಬಹುದು ಎಂದು ನಿರೀಕ್ಷಿಸಿ­ರಬೇಕಿತ್ತು. ಆ ಆಘಾತ ಇವತ್ತಿಗೂ ತನ್ನ ಪ್ರತಿಕೂಲ ಪರಿಣಾಮ ತೋರುತ್ತಲೇ ಇದೆ. ಆದರೆ ಮುಖರ್ಜಿಯವರು ರಾಷ್ಟ್ರಪತಿ ಭವನದಲ್ಲಿ ನೆಮ್ಮದಿಯಾಗಿದ್ದಾರೆ.
ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಮತ್ತು ಆಗಿನ ರಾಷ್ಟ್ರಪತಿ ಗ್ಯಾನಿ ಜೈಲ್‌ ಸಿಂಗ್‌ ನಡುವೆ ಸಂಬಂಧ ಹದಗೆಟ್ಟಿತ್ತು. ಪಂಜಾಬ್‌ನಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿ­ದಂತೆ ಜೈಲ್‌ ಸಿಂಗ್‌ ತೀವ್ರ ಅಸಮಾಧಾನ­ಗೊಂಡಿದ್ದರು.

ಇದರಿಂದ ಸಿಟ್ಟಿಗೆದ್ದ ಇಂದಿರಾ ಗಾಂಧಿ­ಯವರು ಜೈಲ್‌ ಸಿಂಗ್‌ ಅವರಿಗೆ ಯಾವುದೇ ಕಡತಗಳನ್ನು ಕಳುಹಿಸುತ್ತಿರಲಿಲ್ಲ. ಅಂದು ಇಂದಿರಾ ಅವರು ಸಂವಿಧಾನವನ್ನು ಉಲ್ಲಂಘಿಸಿದ್ದು ಜಗಜ್ಜಾಹೀರಾಗಿತ್ತು. ಅಂದೂ ಮುಖರ್ಜಿಯವರು ಮೌನವಾಗಿದ್ದರು. ರಾಷ್ಟ್ರ­ಪತಿ ಸ್ಥಾನ ಅತ್ಯಂತ ಗೌರವಯುತವಾಗಿರುವಂತ­ಹದ್ದು. ಅದಕ್ಕೆ ಅಪಚಾರ ಎಸಗುವಂತೆ ಯಾರೂ ಮಾತನಾಡಬಾರದು ಅಥವಾ ಯಾರೂ ಆ ಸ್ಥಾನದ ಘನತೆಗೆ ಕುಂದುಂಟಾಗುವಂತೆ ನಡೆದು ಕೊಳ್ಳಬಾರದು. ಆದರೆ ಅಂದು ಆಡಳಿತಗಾರರು ಮಾಡಿದ್ದೇನು ?

ಇಂದಿರಾ ಗಾಂಧಿಯವರು 1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಅವರ ತಂದೆ ಅತ್ಯಂತ ಮುತುವರ್ಜಿಯಿಂದ ನೋಡಿಕೊಂಡಿದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಇಂದಿರಾ ಅವರು ಗಾಸಿ ಮಾಡಿದ್ದರು. ಅಂದು ಮುಖರ್ಜಿಯವರು ಸಂಜಯ ಗಾಂಧಿ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದರು. ರಾಜ­ಕೀಯದ ಮೂಲದ್ರವ್ಯವಾಗಿರ­ಬೇಕಾದಂತಹ ನೈತಿಕತೆ­ಯೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾಶವಾಗಿತ್ತು. ಒಂದು ತೆರನಾದ ಭಯದ ವಾತಾವರಣ ನಿರ್ಮಾಣವಾಗಿತ್ತು. ತುರ್ತು ಪರಿಸ್ಥಿತಿಯನ್ನು ಘೋಷಿಸುವುದಕ್ಕೆ ಸಂಬಂಧಿ­ಸಿ­ದಂತೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆ­ಯುವ ಮೊದಲೇ ಆಗಿನ ರಾಷ್ಟ್ರಪತಿ ಫಕ್ರುದ್ದಿನ್‌ ಅಲಿ ಅಹ್ಮದ್‌ ಅವರ ಸಹಿ ಪಡೆಯಲಾಗಿತ್ತು .

ನನ್ನ ಅನುಭವದಲ್ಲಿ ಕಂಡುಕೊಂಡಂತೆ ಪ್ರಧಾನ ಮಂತ್ರಿಗಳು ಸಾಮಾನ್ಯವಾಗಿ ರಾಷ್ಟ್ರಪತಿ­ಗಳ ಬಗ್ಗೆ ಹೆಚ್ಚು ಗಮನ ವಹಿಸುವುದಿಲ್ಲ. ಅಧ್ಯಕ್ಷೀಯ ಸರ್ಕಾರದ  ಬದಲಿಗೆ ಪಾರ್ಲಿಮೆಂ­ಟರಿ ವ್ಯವಸ್ಥೆಯನ್ನು ರಚಿಸಿದವರು ಈ ವ್ಯವಸ್ಥೆ­ಯಲ್ಲಿ ರಾಷ್ಟ್ರಪತಿಗಳು ಏನೇನು ಮಾಡಲು ಸಾಧ್ಯವಿದೆ ಎಂಬ ಬಗ್ಗೆ ಸ್ಪಷ್ಟವಾಗಿ ಬರೆದಿದ್ದಾರೆ.

ರಾಷ್ಟ್ರಪತಿಗಳ ವಿಷಯದಲ್ಲಿ ಯಾವುದು ಸರಿ ಅಥವಾ ಯಾವುದು ತಪ್ಪು ಎಂಬುದರ ನಡುವೆ ಒಂದು ತೆಳುವಾದ ಗೆರೆ ಇದೆ ಎನ್ನಬಹುದು. ವೇದಿಕೆಯೊಂದರ ಮೇಲೆ ನಿಂತು  ಇಂತಹದನ್ನು ಮಾಡಿ­ದರೆ ದೇಶಕ್ಕೆ ಒಳಿತು ಅಥವಾ ಅಂತಹ­ದನ್ನು ಮಾಡಿದರೆ ದೇಶಕ್ಕೆ ಕೆಡುಕು ಎಂದೆಲ್ಲಾ ಮಾತನಾಡುವುದು ಸುಲಭ. ಇದೀಗ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ತಾವು ಹೇಳುತ್ತಿ­ರುವು­ದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಹಿಂದೆ ತಾವು ಕೇಂದ್ರ ಸಚಿವರಾಗಿದ್ದಾಗ ತೆಗೆದುಕೊಂಡ ತೀರ್ಮಾನಗಳಲ್ಲಿ ಕಾನೂನು­ಬದ್ಧವಾಗಿ ಮತ್ತು ನೈತಿಕವಾಗಿ ಸರಿಯಾಗಿದ್ದುದು ಎಷ್ಟು, ತಪ್ಪಾಗಿದ್ದುದು ಎಷ್ಟು ಎಂದೂ ಮುಖರ್ಜಿ ಅವರು ಯೋಚಿಸಲಿ.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT