ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಆರೋಗ್ಯ ನೀತಿ ಜಾರಿ ಎಂದು?

Last Updated 19 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಇನ್ನು ಮೂರು ವರ್ಷಗಳಲ್ಲಿ ಸಂತಾನಶಕ್ತಿಹರಣ ಸಾಮೂಹಿಕ ಶಿಬಿರ ಆಯೋಜಿಸುವುದನ್ನು ನಿಲ್ಲಿಸಬೇಕು
*

ರಾಷ್ಟ್ರೀಯ ಆರೋಗ್ಯ ನೀತಿಯನ್ನು ಜಾರಿಗೊಳಿಸುವುದು ಯಾವಾಗ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕರಡು ರಾಷ್ಟ್ರೀಯ ಆರೋಗ್ಯ ನೀತಿ 2015ನ್ನು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ವೆಬ್‌ಸೈಟ್‌ನಲ್ಲಿ  2014ರ ಡಿಸೆಂಬರ್‌ನಲ್ಲೇ  ಪ್ರಕಟಿಸಿ ಸಲಹೆ, ಟೀಕೆ ಟಿಪ್ಪಣಿಗಳನ್ನು ಆಹ್ವಾನಿಸಲಾಗಿತ್ತು.

ಈಗ ಒಂದೂವರೆ ವರ್ಷ ಕಳೆದುಹೋಗಿದೆ. ಹೀಗಿದ್ದೂ  ರಾಷ್ಟ್ರೀಯ ಆರೋಗ್ಯ ನೀತಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂಬ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪವನ್ನು ದಾಖಲಿಸಿದೆ. ಜೊತೆಗೆ ಈ ವರ್ಷ ಡಿಸೆಂಬರ್ 31ರ ವೇಳೆಗೆ ರಾಷ್ಟ್ರೀಯ ಆರೋಗ್ಯ ನೀತಿ ರೂಪಿಸಬೇಕು ಎಂಬಂಥ ನಿರ್ದೇಶನವನ್ನು  ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೀಡಿದೆ.

ಆರೋಗ್ಯ ವ್ಯವಸ್ಥೆಯನ್ನು ಅದರ ಎಲ್ಲಾ ಆಯಾಮಗಳಲ್ಲಿ ರೂಪಿಸುವಲ್ಲಿ ಸರ್ಕಾರದ ಪಾತ್ರವನ್ನು  ‘ಕರಡು ರಾಷ್ಟ್ರೀಯ ಆರೋಗ್ಯ ನೀತಿ’ ಎತ್ತಿ ಹೇಳುತ್ತದೆ ಎಂಬುದು ಇಲ್ಲಿ ಮುಖ್ಯ. ಆರೋಗ್ಯ ಹಾಗೂ ಅಭಿವೃದ್ಧಿಯ ಮಧ್ಯದ ಸಂಬಂಧವನ್ನು ಈ ನೀತಿ ಗುರುತಿಸುತ್ತದೆ, ಜೊತೆಗೆ ಆರೋಗ್ಯ ಪಾಲನೆ ಸೌಲಭ್ಯ ಎಲ್ಲರಿಗೂ ಸಮನಾಗಿ ಸಿಗುತ್ತಿಲ್ಲ ಎಂಬುದನ್ನೂ ಇದು ಒತ್ತಿಹೇಳುತ್ತದೆ.

ಇದಕ್ಕೆ ಸಾಕ್ಷ್ಯ ಎಂಬಂತೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಯೊಂದರಲ್ಲಿ 2012ರಲ್ಲಿ  ಕೇವಲ ಎರಡೇ  ಗಂಟೆಗಳಲ್ಲಿ  ಬ್ಯಾಟರಿ ಬೆಳಕಲ್ಲಿ 53 ಬಡ ಮಹಿಳೆಯರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಈ ಬಗ್ಗೆ ಆರೋಗ್ಯ ಕಾರ್ಯಕರ್ತೆ ದೇವಿಕಾ ಬಿಸ್ವಾಸ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಂತರ ಸುಪ್ರೀಂ ಕೋರ್ಟ್ ಕಳೆದ ಬುಧವಾರ (ಸೆ.14) 51 ಪುಟಗಳ ಸುದೀರ್ಘ ತೀರ್ಪು ನೀಡಿದ್ದು ಆರೋಗ್ಯ ನೀತಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ನೆನಪಿಸಿದೆ.

ಮಹಾರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶ ಹಾಗೂ ಕೇರಳಗಳಲ್ಲೂ ಸಂತಾನಶಕ್ತಿಹರಣ ಶಿಬಿರಗಳ ಅವ್ಯವಸ್ಥೆಗಳನ್ನು ಕೋರ್ಟ್ ಗಮನಕ್ಕೆ ತೆಗೆದುಕೊಂಡಿದೆ. ನಂತರ 2014ರಲ್ಲಿ ಛತ್ತೀಸಗಡದ ಬಿಲಾಸಪುರ ಜಿಲ್ಲೆಯಲ್ಲಿ ನಡೆಸಲಾದ ಸಂತಾನಶಕ್ತಿಹರಣ ಸಾಮೂಹಿಕ ಶಿಬಿರದಲ್ಲಿ 13 ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆಯನ್ನೂ ಈ ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿದೆ.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸಾವುಗಳು ತಡೆಗಟ್ಟಬಹುದಾದದ್ದು. ಹೀಗಿದ್ದೂ ಸಾವುಗಳು ಸಂಭವಿಸುತ್ತವೆ ಎಂದಾದಲ್ಲಿ ಅದು ಆರೋಗ್ಯ ಪಾಲನೆ ಸೌಲಭ್ಯಗಳ ದುರವಸ್ಥೆಗೆ ದ್ಯೋತಕ.

ಹೀಗಾಗಿ ಇನ್ನು ಮೂರು ವರ್ಷಗಳಲ್ಲಿ ಸಂತಾನಶಕ್ತಿಹರಣ ಸಾಮೂಹಿಕ ಶಿಬಿರಗಳನ್ನು ಆಯೋಜಿಸುವುದನ್ನೇ ನಿಲ್ಲಿಸಬೇಕೆಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಮಹತ್ವದ್ದು.  ಸಂತಾನಶಕ್ತಿ ಹರಣ ಕಾರ್ಯಕ್ರಮಗಳ ಜಾರಿಗೆ ಯಾವುದೇ ಗುರಿಗಳನ್ನೂ ಸರ್ಕಾರಗಳು ನಿಗದಿ ಮಾಡಬಾರದು ಎಂಬ ನಿರ್ದೇಶನವನ್ನೂ ನೀಡಲಾಗಿದೆ.

ಸಂತಾನಶಕ್ತಿಹರಣ ಕಾರ್ಯಕ್ರಮಗಳಿಗೆ ಯಾವುದೇ ಗುರಿ ನಿಗದಿಪಡಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದರೂ ಗುರಿ ನಿಗದಿಪಡಿಸುವ ಅನೌಪಚಾರಿಕ ವ್ಯವಸ್ಥೆ ಇರುವಂತಿದೆ ಎಂದೂ ಕೋರ್ಟ್ ಹೇಳಿದೆ.

ಸಂತಾನಶಕ್ತಿಹರಣ ಶಸ್ತ್ರಕ್ರಿಯೆಗಳ ಗುರಿ ಸಾಧನೆಗಾಗಿ ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರುಗಳಿಗೆ ಉತ್ತೇಜನ ಕ್ರಮವಾಗಿ ನಗದು ಬಹುಮಾನ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಗೊಳಗಾದವರಿಗೂ ಇಂತಿಷ್ಟು ಎಂದು ಪರಿಹಾರ ಮೊತ್ತ ನೀಡುವುದು ನಡದುಕೊಂಡುಬಂದೇ ಇದೆ. 

ಈಗಾಗಲೇ ತಮಿಳುನಾಡು, ಮಹಾರಾಷ್ಟ್ರ, ಸಿಕ್ಕಿಂ ಹಾಗೂ ಗೋವಾ ರಾಜ್ಯಗಳು ಸಂತಾನಶಕ್ತಿಹರಣ ಸಾಮೂಹಿಕ  ಶಿಬಿರಗಳನ್ನು ನಡೆಸುವುದನ್ನು ನಿಲ್ಲಿಸಿವೆ. ಇತರ ರಾಜ್ಯಗಳ ಮನ ಒಲಿಕೆಗೆ ಕೇಂದ್ರ ಕ್ರಮ ಕೈಗೊಳ್ಳಬೇಕಾಗಿದೆ.  ಈ ನಿರ್ದೇಶನವನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಗಂಭೀರವಾಗಿ ತೆಗೆದುಕೊಳ್ಳಬೇಕು. ಜೊತೆಗೆ ಪ್ರಾಥಮಿಕ ಆರೋಗ್ಯ ಸೇವಾ ವ್ಯವಸ್ಥೆ ಸುಧಾರಣೆಗೆ ಬದ್ಧತೆ ಪ್ರದರ್ಶಿಸಬೇಕಾದುದು ಅಗತ್ಯವಾಗುತ್ತದೆ.

ಸಂತಾನಶಕ್ತಿಹರಣ ಸಾಮೂಹಿಕ ಶಿಬಿರಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗುತ್ತಿರುವ ಎರಡನೇ ಅರ್ಜಿ ಇದು. ಒಂದು ದಶಕಕ್ಕೂ ಮುಂಚೆ  ಹೆಲ್ತ್ ವಾಚ್ ಫೋರಮ್‌ನಿಂದ ರಮಾಕಾಂತ ರೈ 2003ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮಹಿಳಾ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಮಾದರಿ ಕ್ರಮಗಳ ಕುರಿತಂತೆ 1999ರ ಅಕ್ಟೋಬರ್‌ನಲ್ಲಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ರೂಪಿಸಿದ ಮಾರ್ಗದರ್ಶಿ ಸೂತ್ರಗಳ ಅನುಷ್ಠಾನ ಕೋರಿ ಅವರು ಈ ಅರ್ಜಿ ಸಲ್ಲಿಸಿದ್ದರು.

ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸಿ ತೊಂದರೆಗೊಳಗಾದವರಿಗೆ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದೂ ರೈ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. 

ಈ ಬಗ್ಗೆ 2005ರಲ್ಲಿ ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಸಂತಾನಶಕ್ತಿ ಹರಣ ಶಿಬಿರಗಳನ್ನು ನಡೆಸಲು ಅಗತ್ಯ ಮಾನದಂಡಗಳನ್ನು ಪಾಲಿಸಬೇಕೆಂದು  ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಎಲ್ಲಾ ವಿಷಯ ತಿಳಿದುಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಲು ಒಪ್ಪಿಗೆ ನೀಡುವುದು, ಸುರಕ್ಷಿತ ಶಸ್ತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ನಂತರ ಸೂಕ್ತ ನಿರ್ವಹಣೆಯ ವಿಚಾರಗಳನ್ನು ಮಾರ್ಗದರ್ಶಿ ಸೂತ್ರಗಳಲ್ಲಿ ಅಳವಡಿಸಲಾಗಿತ್ತು.

ಈ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ ವೈದ್ಯರನ್ನು ಶಿಕ್ಷಿಸಬೇಕೆಂದು ಸರ್ಕಾರಕ್ಕೆ ಕೋರ್ಟ್ ಆದೇಶ ನೀಡಿತ್ತು. ಶಸ್ತ್ರಚಿಕಿತ್ಸೆ ವೈಫಲ್ಯ, ಗಾಯ ಅಥವಾ ಸಾವು ಸಂಭವಿಸಿದಲ್ಲಿ ಮಹಿಳೆಯರು ಹಾಗೂ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದೂ ಕೋರ್ಟ್ ಹೇಳಿತ್ತು. ಹೀಗಿದ್ದೂ 10 ವರ್ಷಗಳ ನಂತರ ಪ್ರತಿವರ್ಷ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಳಿಂದ ನೂರಾರು ಮಹಿಳೆಯರು ಈಗಲೂ ಸಾಯುತ್ತಲೇ ಇರುವುದು ವಿಪರ್ಯಾಸ.

2015-2016ರ ಅವಧಿಯಲ್ಲಿ ಟ್ಯೂಬೆಕ್ಟಮಿ (ಮಹಿಳೆಯರಿಗೆ ಮಾಡಲಾಗುವ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ) ನಂತರ 113 ಮಹಿಳೆಯರು ಸತ್ತಿದ್ದಾರೆಂದು 2016ರ  ಆಗಸ್ಟ್ ನಲ್ಲಿ ಸರ್ಕಾರ ಕೋರ್ಟ್ ಗೆ ತಿಳಿಸಿದೆ.

ಸಂಸತ್‌ನಲ್ಲಿ ಮಂಡಿಸಲಾಗಿರುವ ಅಂಕಿಅಂಶಗಳ ಪ್ರಕಾರ, 2003 ಹಾಗೂ 2012ರ ನಡುವಿನ ಅವಧಿಯಲ್ಲಿ 1434 ಟ್ಯೂಬೆಕ್ಟಮಿ ಸಾವುಗಳು ರಾಷ್ಟ್ರದಾದ್ಯಂತ ವರದಿಯಾಗಿವೆ. ಎಂದರೆ ವರ್ಷಕ್ಕೆ ಸುಮಾರು 150. ವಾರಕ್ಕೆ ಸುಮಾರು 3 ಸಾವುಗಳು. ಹೀಗಿದ್ದೂ ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿರುವುದು ವಿಪರ್ಯಾಸ. ಬಡ ಮಹಿಳೆಯರು ಆಡಳಿತಯಂತ್ರಕ್ಕೆ ಕೇವಲ ಅಂಕಿಅಂಶಗಳಾಗುವುದು ಅಭಿವೃದ್ಧಿ ಪಥದ ನಿರ್ದಯತೆಗೆ ದ್ಯೋತಕ.


ಆದರೆ, ಜನಸಂಖ್ಯೆ ಕುರಿತ ಕಾರ್ಯಕ್ರಮಗಳಲ್ಲಿ ಮಹಿಳಾ ಹಕ್ಕುಗಳನ್ನು  1994ರಲ್ಲಿ ಕೈರೊದಲ್ಲಿ ನಡೆದ ಜನಸಂಖ್ಯೆ ಹಾಗೂ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ (ಐಸಿಪಿಡಿ) ಎತ್ತಿಹಿಡಿದಿತ್ತು. ಹೀಗಾಗಿ ‘ಜನಸಂಖ್ಯೆ ನಿಯಂತ್ರಣ’ ನುಡಿಗಟ್ಟಿಗೆ ಬದಲಾಗಿ ಪ್ರಜನನ ಆರೋಗ್ಯ, ಪ್ರಜನನ ಹಕ್ಕುಗಳು ಇತ್ಯಾದಿ ಮಾತುಗಳು ಚಾಲ್ತಿಗೆ ಬಂದವು.

ಐಸಿಪಿಡಿ ನಿರ್ಣಯಗಳಿಗೆ ಭಾರತವೂ ಸಹಿ ಹಾಕಿದೆ. ಹೀಗಿದ್ದೂ ರಾಷ್ಟ್ರದ ಹಲವು ರಾಜ್ಯಗಳಲ್ಲಿರುವ ಜನಸಂಖ್ಯಾ ನೀತಿಗಳು, ಐಸಿಪಿಡಿಗೆ ಭಾರತ ಹೊಂದಿರುವ ಬದ್ಧತೆಗಳಿಗೆ ವ್ಯತಿರಿಕ್ತವಾಗಿಯೇ ಇವೆ. ಪ್ರಜನನ ಆರೋಗ್ಯ, ತಾಯಿ, ನವಜಾತ ಶಿಶು, ಮಗು ಹಾಗೂ ಹದಿಹರೆಯದವರ ಆರೋಗ್ಯ ಕಾರ್ಯಕ್ರಮವನ್ನು (ಆರ್‌ಎಂಎನ್‌ಸಿಎಚ್+ಎ) ನಮ್ಮ ರಾಷ್ಟ್ರ ಅಳವಡಿಸಿಕೊಂಡಿದೆ.

ಈ ಪ್ರಕಾರ, ಪ್ರಜನನ ಆರೋಗ್ಯ ಉತ್ತೇಜಿಸಿ ಮಾತೃ, ಶಿಶು, ಮಕ್ಕಳ ಮರಣ ಹಾಗೂ ಅನಾರೋಗ್ಯವನ್ನು ಕಡಿಮೆ ಮಾಡಲು ಕುಟುಂಬ ಯೋಜನೆ ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿದೆ ಎಂದು ಕೋರ್ಟ್ ಉಲ್ಲೇಖಿಸಿದೆ. ಆರೋಗ್ಯ ಕ್ಷೇತ್ರದ ಆಡಳಿತದಲ್ಲಿ ಮುಖ್ಯವಾದ ಸವಾಲು ಎಂದರೆ ಕೇಂದ್ರ ಹಾಗೂ ರಾಜ್ಯಗಳ ಮಧ್ಯೆ ಹೊಣೆಗಾರಿಕೆ ವಿತರಣೆ ಹಾಗೂ ಉತ್ತರದಾಯಿತ್ವ.

ಸುಪ್ರೀಂ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ನಡೆದ ವಾದವಿವಾದಗಳ ವೇಳೆ, ಆರೋಗ್ಯ ಎಂಬುದು ರಾಜ್ಯದ ವಿಚಾರ ಎಂಬ ವಾದಕ್ಕೆ ಕೇಂದ್ರ ಸರ್ಕಾರ  ಜೋತುಬಿದ್ದಿದ್ದು ಈ ವಿಚಾರದಲ್ಲಿ ಕೇಂದ್ರ ಹೆಚ್ಚು ಮಧ್ಯಪ್ರವೇಶಿಸಲಾಗದು ಎಂದು ಹೇಳಿಕೊಂಡಿದೆ. ಆದರೆ ಈ ವಾದವನ್ನು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಹಾಗೂ ಉದಯ್ ಉಮೇಶ್ ಲಲಿತ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ತಳ್ಳಿಹಾಕಿದೆ.

ಆರೋಗ್ಯ, ರಾಜ್ಯ ವಿಷಯವಾದರೂ ಕೇಂದ್ರೀಯ ಹಣಕಾಸು ನೀಡಿಕೆಯ ವಿಚಾರದಲ್ಲಿ  ಕೇಂದ್ರ ಸರ್ಕಾರ, ಸಂಸತ್ತಿಗೆ ಉತ್ತರದಾಯಿಯಾಗಬೇಕಾಗುತ್ತದೆ. ಎಲ್ಲಾ ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಸುಮಾರು ಶೇ36ರಷ್ಟು ಹಾಗೂ ಕೆಲವು ರಾಜ್ಯಗಳಲ್ಲಂತೂ ಶೇ50ರಷ್ಟು ಹೊಣೆಗಾರಿಕೆ ಕೇಂದ್ರದ್ದಾಗಿರುತ್ತದೆ. ಜೊತೆಗೆ ಅಸಂಖ್ಯ ಅಂತರರಾಷ್ಟ್ರೀಯ ನಿರ್ಣಯಗಳು ಹಾಗೂ ಒಪ್ಪಂದಗಳಿಗೂ ಕೇಂದ್ರ ಬಾಧ್ಯಸ್ಥವಾಗಬೇಕಾಗುತ್ತದೆ ಎಂಬುದನ್ನು ಕೋರ್ಟ್ ನೆನಪಿಸಿದೆ.

ಕಾಯಿಲೆ ನಿಯಂತ್ರಣ ಹಾಗೂ ಕುಟುಂಬ ಯೋಜನೆ ಸಹವರ್ತಿ ಪಟ್ಟಿಯಲ್ಲಿವೆ. ಆದರೆ ಅಸಮಾನ ಅಭಿವೃದ್ಧಿಯನ್ನು ಸರಿಪಡಿಸಿ ಅಗತ್ಯವಿರುವೆಡೆ ಹೆಚ್ಚಿನ ಸಂಪನ್ಮೂಲ ಒದಗಿಸಬೇಕಾದ ಹೊಣೆಗಾರಿಕೆ ಕೇಂದ್ರ ಸರ್ಕಾರಕ್ಕಿದೆ.

ಕೇಂದ್ರ ಹಾಗೂ ರಾಜ್ಯ ಸಂಬಂಧಗಳ ಕುರಿತು ರಚಿಸಲಾದ ಸರ್ಕಾರಿಯಾ ಆಯೋಗವೂ ಜನಸಂಖ್ಯೆ ನಿಯಂತ್ರಣ ಹಾಗೂ ಕುಟುಂಬ ಯೋಜನೆ, ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರ ಎಂದಿದೆ. ಇದು ಕೇಂದ್ರ ಹಾಗೂ ರಾಜ್ಯಗಳಿಗೆ ಸಮಾನ ಕಾಳಜಿಯ ವಿಚಾರ ಎಂದೂ ಅದು ಸ್ಪಷ್ಟಪಡಿಸಿದೆ.

ಸಂತಾನಶಕ್ತಿಹರಣ ಕಾರ್ಯಕ್ರಮ ಕೇವಲ ಮಹಿಳಾ ಸಂತಾನಶಕ್ತಿಹರಣದ ಕಾರ್ಯಕ್ರಮವಾಗಿಬಿಟ್ಟಿರುವುದನ್ನೂ ಸುಪ್ರೀಂ ಕೋರ್ಟ್ ಟೀಕಿಸಿದೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಇದನ್ನು ವಿವರವಾಗಿ ಕೋರ್ಟ್ ಚರ್ಚಿಸಿದೆ.

ಸಂತಾನಶಕ್ತಿ ಹರಣ ಕಾರ್ಯಕ್ರಮ ಬರೀ ಮಹಿಳೆಯರನ್ನೇ ಹೆಚ್ಚು ಗುರಿಯಾಗಿಸಿಕೊಳ್ಳಬಾರದು. ಈ ಕಾರ್ಯಕ್ರಮದಲ್ಲಿ ಪುರುಷರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. 2014ರಲ್ಲಿ ನಡೆದ 1,54,347 ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಲ್ಲಿ ಕೇವಲ 5085 ಮಂದಿ ಮಾತ್ರ ಪುರುಷರು ಎಂಬುದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ ಸೈಟ್‌ನಲ್ಲಿ ಲಭ್ಯವಿರುವ ಅಂಕಿಅಂಶಗಳಲ್ಲಿ ವ್ಯಕ್ತ.

ಸಂತಾನಶಕ್ತಿಹರಣಕ್ಕೆ ಒಳಗಾಗುವ ಮಹಿಳೆಯರಿಗೆ ಹೋಲಿಸಿದಲ್ಲಿ ಸಂತಾನಶಕ್ತಿಹರಣ ಶಸ್ತ್ರಕ್ರಿಯೆಗೆ ಒಳಗಾಗುವ ಪುರುಷರಿಗೆ ನೀಡಲಾಗುವ ಪ್ರೋತ್ಸಾಹ ಧನ ಕಡಿಮೆ ಇದೆ ಎಂಬುದು ದಾಖಲೆಗಳಿಂದ ವ್ಯಕ್ತವಾಗುತ್ತದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪುರುಷರ ಪ್ರಮಾಣ ಕಡಿಮೆ ಇರುವುದಕ್ಕೆ ಇದೂ ಒಂದು ಕಾರಣ ಇರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸರ್ಕಾರದ ನೀತಿಗಳು ಸಮಾಜದಲ್ಲಿ ಪ್ರಚಲಿತವಿರುವ ವ್ಯವಸ್ಥೆಯ ತಾರತಮ್ಯಗಳನ್ನೇ ಪ್ರತಿಬಿಂಬಿಸಬಾರದು. ಬದಲಿಗೆ ಈ ತಾರತಮ್ಯ ಸರಿಪಡಿಸಿ ಸಮಾನತೆ ಸಾಧಿಸುವ ಗುರಿ ಹೊಂದಿರಬೇಕು ಎಂಬಂಥ ಕೋರ್ಟ್ ಅಭಿಪ್ರಾಯ ಮಹತ್ವದ್ದು.

ಯೋಜನೆಗಳಲ್ಲಿ ಲಿಂಗ ನಿರಪೇಕ್ಷತೆ ಇರಬೇಕು. ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಕ್ರಿಯೆಯ ಮೇಲೆ ಅನಗತ್ಯ ಗಮನ ಕೇಂದ್ರೀಕೃತಗೊಳ್ಳುವುದು ತಪ್ಪಬೇಕು ಎಂಬುದು ಅಭಿವೃದ್ಧಿ ಹಾದಿಯ ಅಸಮತೋಲನಗಳನ್ನು ಸರಿಪಡಿಸುವಂತಹ ಚಿಂತನೆಯಾಗಿದೆ.

ಸಂವಿಧಾನದ 21ನೇ ವಿಧಿ ಅನ್ವಯ ಬದುಕುವ ಹಕ್ಕಿನಲ್ಲಿ ಘನತೆಯ ಹಾಗೂ ಅರ್ಥಪೂರ್ಣ ಬದುಕನ್ನು ನಡೆಸುವ ಹಕ್ಕು ಸಹ ಸೇರಿದೆ.  ಇದರಲ್ಲಿ ಆರೋಗ್ಯ ಹಾಗೂ ಪ್ರಜನನ ಹಕ್ಕುಗಳೂ ಅಂತರ್ಗತವಾಗಿವೆ. ಪ್ರಜನನ ಹಕ್ಕುಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಆಯಾಮ  ಇದೆ.

ಈ ಪ್ರಜನನ ಹಕ್ಕುಗಳನ್ನು ಚಲಾಯಿಸುವ ಸಂದರ್ಭದಲ್ಲಿ  ಮಾಹಿತಿಗಳನ್ನು ಪಡೆದುಕೊಳ್ಳುವುದಲ್ಲದೆ ಯಾವುದೇ ವಿಧದ ಒತ್ತಡವಿಲ್ಲದೆ  ಸಂತಾನಶಕ್ತಿಹರಣ ಶಸ್ತ್ರಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತತೆಗೆ ಅವಕಾಶ ಇರುತ್ತದೆ.

ಆರೋಗ್ಯ ಕುರಿತಾದ ರಾಷ್ಟ್ರೀಯ ನೀತಿ ರೂಪಿಸುತ್ತಿರುವ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಸಂದೇಶವನ್ನು ಸರಿಯಾದ ನೆಲೆಯಲ್ಲಿ ಗ್ರಹಿಸಬೇಕು.  ಆರೋಗ್ಯದ ಹಕ್ಕನ್ನು ಬದುಕುವ ಹಕ್ಕಿನಿಂದ ಬೇರ್ಪಡಿಸಲಾಗದು ಎಂಬುದನ್ನು ಈ ತೀರ್ಪು ಬಲಪಡಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT