ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯತೆ ಗುಂಗಿನಲ್ಲಿ ಆಧುನಿಕ ಜಗತ್ತು

Last Updated 19 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ ಸಮೀಪದ ಹಳ್ಳಿಯೊಂದರಲ್ಲಿ ಭಾರತ ಮಾತೆಗೆ ದೇವಾಲಯವನ್ನು ಕಟ್ಟಿರುವ ಸುದ್ದಿ ಸ್ವಾತಂತ್ರ್ಯ ದಿನ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಚಿಕ್ಕದಾದ ಗುಡಿಯ ಒಳಗೆ ಪೀಠದ ಮೇಲೆ ಪುಟ್ಟದಾದ ವಿಗ್ರಹ ಕಾಣುತ್ತದೆ. ಅದು ಭಾರತ ಮಾತೆಯ ವಿಗ್ರಹವಂತೆ.

ಗೋಡೆಯ ಮೇಲೆ `ಓಂ' ಸಂಕೇತ, ಮುಂಭಾಗದಲ್ಲಿ ಕಾವಿ ಬಣ್ಣದ ಬಾವುಟ. ನೋಡಿದ ಕೂಡಲೇ ಯಾರಿಗಾದರೂ ಏನಿದು ದೇಶ ಪ್ರೇಮ ಎನಿಸದಿರದು. ನಿಧಾನವಾಗಿ ಗಮನಿಸಿದರೆ ಗೋಚರವಾಗುವುದು ರಾಷ್ಟ್ರೀಯತೆಯ ಚಿಹ್ನೆಗಳಲ್ಲ, ಅದನ್ನೂ ಮೀರಿದ ಹಿಂದೂ ಧಾರ್ಮಿಕ ಸಂಕೇತಗಳು. ಮತ್ತೊಂದು ಕಡೆ ಟಿ.ವಿ.ಯಲ್ಲಿ ನರೇಂದ್ರ ಮೋದಿ ಅವರ ಭಾಷಣಗಳ ಸರಮಾಲೆ. ಧರ್ಮ, ಸಂಸ್ಕೃತಿ, ರಾಷ್ಟ್ರಪ್ರೇಮ, ಅಭಿವೃದ್ಧಿ- ಈ ಪದಗಳು ಪುಂಖಾನುಪುಂಖವಾಗಿ ಬರುತ್ತವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು ಆರೂವರೆ ದಶಕ ಕಳೆದರೂ ನೂರು ವರ್ಷಗಳ ಹಿಂದಿನ ಮಾದರಿಗಳು ಇನ್ನೂ ಬದಲಾಗಲಿಲ್ಲವೇ?

ರಾಷ್ಟ್ರೀಯತೆಯ ಕಲ್ಪನೆಗೆ ಧರ್ಮ ಬೆರೆತರೆ ಮಾದಕ ದ್ರವ್ಯಗಳೆರಡನ್ನು ಬೆರೆಸಿ ಒಂದೇ ಬಾರಿಗೆ ಕುಡಿದಂತೆ. ಧರ್ಮವಾಗಲೀ, ರಾಷ್ಟ್ರೀಯತೆ ಯಾಗಲೀ ಎರಡೂ ಮತ್ತೇರಿಸುವ ವಿಚಾರಗಳೇ. ಭಾರತ ಮಾತೆಯ ಕಲ್ಪನೆ ಹುಟ್ಟಲು ಕಾರಣವಾದವರೂ ಬ್ರಿಟಿಷರೇ ಎಂದರೆ ಸೋಜಿಗವೆನಿಸಬಹುದು. ರಾಷ್ಟ್ರೀಯತೆಯ ಚಿಂತನೆ ಆರಂಭವಾಗಿ ಇಲ್ಲಿಗೆ 250 ವರ್ಷಗಳೇ ಸಂದಿವೆ. ಫ್ರಾನ್ಸ್ ಮಹಾಕ್ರಾಂತಿ ಸಂದರ್ಭದಲ್ಲಿ ಹೊಗೆಯಾಡಿದ ಈ ಚಿಂತನೆ ನೆಪೋಲಿಯನ್‌ನ ಕಾಲಕ್ಕೆ ಹೊತ್ತಿ ಉರಿಯಿತು. ಹದಿನೆಂಟನೇ ಶತಮಾನದ ಫ್ರಾನ್ಸ್‌ನ ದಾರ್ಶನಿಕರು ಹೊಸ ರಾಜಕೀಯ ಆಲೋಚನೆಯನ್ನುಹುಟ್ಟುಹಾಕಿದರು. ಸರ್ವಾಧಿಕಾರಿಗಳ ದರ್ಪವನ್ನು ಪ್ರಶ್ನೆ ಮಾಡಿದರು. ಈ ಆಲೋಚನೆಗಳು ರಾಜತ್ವದ ವಿರುದ್ಧ ಫ್ರಾನ್ಸಿನ ಜನತೆ ಸಂಘಟಿತರಾಗುವಂತೆ ಮಾಡಿತು.

ಬ್ರಿಟಿಷ್ ವಸಾಹತುವಾಗಿದ್ದ ಅಮೆರಿಕ, ವಸಾಹತು ನೀತಿಯನ್ನು ವಿರೋಧಿಸಿತು. ಅಮೆರಿಕ, ವಸಾಹತು ಆಳ್ವಿಕೆಯನ್ನು ವಿರೋಧಿಸಿ ಹೋರಾಡಿದ ಮೊದಲ ದೇಶ. 1776ರಲ್ಲೇ ಅದು ಸ್ವಾತಂತ್ರ್ಯ ಪಡೆಯಿತು. ಆನಂತರದಲ್ಲಿ ಘಟಿಸಿದ ಫ್ರೆಂಚ್ ಮಹಾಕ್ರಾಂತಿ ಯೂರೋಪಿನಲ್ಲಿ ಹೊಸ ಅಲೆಗೆ ಕಾರಣವಾಯಿತು. ಕ್ರಾಂತಿಯ ಶಿಶುವೆಂದು ಕರೆದುಕೊಂಡ ನೆಪೋಲಿಯನ್, ರಾಷ್ಟ್ರರಾಜ್ಯಗಳ ಕಲ್ಪನೆಯನ್ನು ರೂಢಿಗೆ ತರಲು ಸಹಾಯಕನಾದ. ಮಹತ್ವಾಕಾಂಕ್ಷೆಯ ನೆಪೋಲಿಯನ್ ಯೂರೋಪಿನ ದಿಗ್ವಿಜಯದ ಸಂದರ್ಭದಲ್ಲಿ ಗೆದ್ದ ಪ್ರದೇಶಗಳನ್ನು ಭಾಷೆ ಹಾಗೂ ಜನಾಂಗದ ಆಧಾರದ ಮೇಲೆ ರಾಜ್ಯಗಳನ್ನಾಗಿ ರೂಪಿಸಿದನು. ಜನಾಂಗದ ಆಧಾರದ ಮೇಲೆ ಮೊದಲ ಬಾರಿಗೆ ಜರ್ಮನಿಯನ್ನು ಒಂದು ರಾಜ್ಯವಾಗಿ ರೂಪಿಸಿದ್ದು, ಜರ್ಮನರಲ್ಲಿ ಮೂಡಿದ ಏಕತೆಯ ಭಾವನೆ ಆಸ್ಟ್ರಿಯಾದಿಂದ ಹೊರಬರಲು ಸಹಕಾರಿ ಯಾಯಿತು. ಇಂತಹ ರಾಷ್ಟ್ರೀಯ ಭಾವನೆಯನ್ನು ಬಿತ್ತುವ ಜಾಕೋಬಿನ್ ಸಂಘಕ್ಕೆ ಟಿಪ್ಪು ಸುಲ್ತಾನ್ ಸಹ ಸದಸ್ಯನಾಗಿದ್ದನು. 

ರಾಷ್ಟ್ರೀಯತೆಯ ವಿಚಾರ ಹದಿನೆಂಟು, ಹತ್ತೊಂಬತ್ತನೆಯ ಶತಮಾನದ ನೂರಾರು ವಿದ್ವಾಂಸರ, ರಾಜಕೀಯ ಧುರೀಣರ ಭಾವುಕತೆಯನ್ನು ಬೆರೆತ ಬೌದ್ಧಿಕ ಕಸರತ್ತಾಗಿತ್ತು. ರೂಸೊ, ವಾಲ್ಟೇರ್‌ರಂತಹ ದಾರ್ಶನಿಕರಿಂದ ಆರಂಭವಾದ ಚರ್ಚೆ, ಹಲವು ರೂಪಗಳನ್ನು ಪಡೆದು ಕಡೆಗೆ ಹಿಟ್ಲರ್, ಮುಸಲೋನಿಯಂತಹ ಸರ್ವಾಧಿಕಾರಿಗಳ ಕೈಸೇರಿ ಆರ್ಭಟಿಸಿತು. ಇದೆಲ್ಲವೂ ಚರಿತ್ರೆಯ ಪಾಠ ಮಾತ್ರವಾಗಿದ್ದರೆ ಓದಿ ಮರೆಯಬಹುದಿತ್ತು. ಆದರೆ ರಾಷ್ಟ್ರದ ಕಲ್ಪನೆ ಭೂತಾಕಾರವಾಗಿ ಬೆಳೆದು ಆಧುನಿಕ ಕಾಲದ ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ನೆಲೆಗಟ್ಟಾಗಿ ಹೋಗಿದೆ. ಅಮೂರ್ತವಾದ `ರಾಷ್ಟ್ರ' ಕಲ್ಪನೆ ಶ್ರೇಷ್ಠತೆಯ, ಪಾವಿತ್ರ್ಯದ ಅರ್ಥ ಪಡೆದುಕೊಂಡಿದೆ. ದಿನ ಬೆಳಗಾದರೆ ಬಗೆಹರಿಯದ ಭಾರತ, ಪಾಕಿಸ್ತಾನದ ಗಡಿ ಸಮಸ್ಯೆ, ಅನುಮಾನದ ವಿರಸ, ಆಗಾಗ್ಗೆ ಉಗ್ರರ ಬಾಂಬ್ ದಾಳಿ ಇದು ರಾಷ್ಟ್ರೀಯತೆಯ ವಿಕೃತ ಕಲ್ಪನೆಗೆ ತೆರುತ್ತಿರುವ ಬೆಲೆ. ಆಧುನಿಕತೆ ಇಂತಹ ವಿಕಾರಗಳನ್ನು ಹೊತ್ತು ಸಾಗುತ್ತಿರುವುದು ಮಾತ್ರ ವಿರೋಧಾಭಾಸದ ಸಂಗತಿ.

ಭಾರತ ನಡೆಸಿದ ವಸಾಹತು ವಿರೋಧಿ ಸ್ವಾತಂತ್ರ ಹೋರಾಟವನ್ನು ರಾಷ್ಟ್ರೀಯ ಚಳವಳಿ ಎಂದೇ ಕರೆಯಲಾಗುತ್ತಿದೆ. 1857ರಲ್ಲಿ ಭಾರತೀಯ ರಾಜರೂ, ಸೈನಿಕರೂ, ಜಮೀನುದಾರರು ಎಲ್ಲರೂ ಒಟ್ಟಾಗಿ ನಾನಾ ಸಾಹೇಬ್, ಝಾನ್ಸಿ ಲಕ್ಷ್ಮೀ ಬಾಯಿ ಇವರ ನೇತೃತ್ವದಲ್ಲಿ ದಂಗೆ ಎದ್ದಾಗ ಅವರು ಮೊಘಲ್ ಸಾಮ್ರೋಜ್ಯವನ್ನು ಪುನಃ ಸ್ಥಾಪಿಸಬೇಕೆಂದಿದ್ದರೆ ಹೊರತು ರಾಷ್ಟ್ರವಾಗಲು ಹೊರಟಿರಲಿಲ್ಲ. ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಏಕತೆಯ ಸಂಕೇತವಾಗಿದ್ದರು. ಸೈನ್ಯದಲ್ಲಿ ಹಿಂದೂ ಮುಸ್ಲಿಮರೆಲ್ಲ ಒಂದಾಗಿಯೇ ಹೋರಾಡಿದ್ದರು.

ಇದೇ ಹೊತ್ತಿಗೆ ಯೂರೋಪಿನಲ್ಲಿ ಆದ ಬೆಳವಣಿಗೆಯಲ್ಲಿ ಒಂದು ಭಾಷೆ, ಒಂದು ಜನಾಂಗ, ಒಂದು ಧರ್ಮಕ್ಕೆ ಸೇರಿದ ಜನ ಒಂದು ಪ್ರದೇಶದಲ್ಲಿ ಬದುಕಿದ್ದು ತಾವು ಒಂದು ಎಂಬ ಭಾವನೆಯನ್ನು ಹೊಂದುವುದನ್ನು ರಾಷ್ಟ್ರ ಎಂದು ವ್ಯಾಖ್ಯಾನಿಸತೊಡಗಿದ್ದರು. ತಲೆಮಾರುಗಳಿಂದ ತಾವು ಒಂದು ಸಮೂಹವಾಗಿ ಬದುಕಿದ ಆ ಭಾವವೇ ರಾಷ್ಟ್ರವೆಂದು ವಿವರಿಸಿದರು. ವಾಸ್ತವದಲ್ಲಿ ಫ್ರಾನ್ಸ್‌ನಲ್ಲಿದ್ದ ಉಪಭಾಷಿಕರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು.

ಇಟಲಿ ಒಂದು ರಾಷ್ಟ್ರವಾಗಬೇಕೆಂದು ಏಕೀಕರಣ ಹೋರಾಟ ಆರಂಭವಾದಾಗ ಇಟಲಿ (ಇತಾಲಿಯ) ಎಂದರೇನೆಂದು ಎಷ್ಟೋ ಜನರಿಗೆ ತಿಳಿದೇ ಇರಲಿಲ್ಲ. ರಾಜನ ಹೊಸ ಹೆಂಡತಿಯ ಹೆಸರಿರಬೇಕೆಂದು ಕೇಳಿದವರೂ ಇದ್ದರು. ನಾನಾ ಬಗೆಯ ಭಾಷೆ, ಬದುಕನ್ನು ಹೊಂದಿದ ಜನರನ್ನು  ರಾಷ್ಟ್ರದ ಹೆಸರಲ್ಲಿ ಒಂದುಗೂಡಿಸಿದರು. ಬಹುಶಃ ಧರ್ಮವೊಂದೇ ಅವರಿಗಿದ್ದ ಸಾಮಾನ್ಯವಾದ ವಿಚಾರ. ಅವರೆಲ್ಲ ಕ್ರೈಸ್ತರಾಗಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರದ ಕಲ್ಪನೆಯನ್ನು ಬಲವಾಗಿ ನಂಬಿದ್ದ ನಾಯಕರು ಅವರ ಭಾಷಣಗಳಿಂದ ಜನರನ್ನು ನಂಬಿಸಿದ್ದರು.

ಈ ಅಬ್ಬರ ಭಾರತೀಯರ ಕಿವಿಯನ್ನೂ ಮುಟ್ಟಿತ್ತು. ಭಾರತೀಯರಿಗಿದ್ದ ಸಮಸ್ಯೆಯೆಂದರೆ ಯೂರೋಪಿನವರಂತೆ ಹೇಳಿಕೊಳ್ಳಲು ಒಂದು `ಧರ್ಮ'ವಿರಲಿಲ್ಲ. ಯೂರೋಪ್‌ನವರ ಧರ್ಮದ ಕಲ್ಪನೆ ಸ್ಪಷ್ಟವಾಗಿತ್ತು-ಒಬ್ಬ ಪ್ರವಾದಿ, ಒಂದು ಧರ್ಮಗ್ರಂಥದಲ್ಲಿ ನಂಬಿಕೆ ಹೊಂದಿರುವುದು. ಆ ಲೆಕ್ಕಕ್ಕೆ ಇಸ್ಲಾಂ ಸಹ ಒಂದು ಧರ್ಮವಾಗಿತ್ತು. ಈ ಹೊತ್ತಿಗೆ ಭಾರತದ ಸಮಾಜ ಸುಧಾರಕರು ಹಿಂದೂ ಧರ್ಮವನ್ನು ವ್ಯಾಖ್ಯಾನಿಸತೊಡಗಿದರು. ಆರ್ಯ ಸಮಾಜದಲ್ಲಿ ಆರಂಭವಾದ ಹಿಂದೂ ಧರ್ಮದ ವ್ಯಾಖ್ಯಾನ ಹಿಂದೂ ಮಹಾಸಭಾದಲ್ಲಿ ವಿಸ್ತರಿಸಿ ರಾಜಕೀಯಗೊಂಡಿತು.

ಸಂಸ್ಕೃತ ಭಾಷೆ, ವೇದಕಾಲೀನ ಸಾಹಿತ್ಯ, ಯಜ್ಞಯಾಗಾದಿಗಳು ಇವೆಲ್ಲವನ್ನೂ ಹಿಂದೂ ಸಂಸ್ಕೃತಿ ಎಂದು ವಿವರಿಸಲಾಯಿತು. ವಿವರಿಸಿದ್ದು ವೈದಿಕ ಬದುಕನ್ನು, ಆದರೆ ಹೇಳಿದ್ದು ಮಾತ್ರ ಅದು ಹಿಂದೂ ಧರ್ಮವೆಂದು. ಭಿನ್ನ ಭಾಷೆ, ಭಿನ್ನ ಸಂಸ್ಕೃತಿಯುಳ್ಳ ಈ ನಾಡಿನಲ್ಲಿ ಉತ್ತರದಿಂದ ದಕ್ಷಿಣದವರೆಗೆ ಇದ್ದ ಸಾಮ್ಯತೆ ಎಂದರೆ ಜಾತಿ ಪದ್ಧತಿ. ಹಾಗಾಗಿ ಇಂತಹ ಸಂಕೀರ್ಣವಾದ ಪ್ರಶ್ನೆಗಳಿಗೆ ವಾಸ್ತವದ ನೆಲೆಯಲ್ಲಿ ಕಾಣದ ಅರ್ಥಕ್ಕೆ ಚರಿತ್ರೆ, ಪುರಾಣ, ಅಧ್ಯಾತ್ಮ ಭಾಷೆಯಲ್ಲಿ ಉತ್ತರ ಹುಡುಕಿಕೊಂಡವರು ಸಾವರ್ಕರ್.

ರಾಷ್ಟ್ರೀಯತೆಯ ಸಮರ್ಥನೆಗೆ ಹೊರಟ ಸಾವರ್ಕರ್ ಹಿಂದೂ ರಾಷ್ಟ್ರೀಯತೆಯ ಘೋಷಣಾ ವಾಕ್ಯದೊಂದಿಗೆ ಹೊರಬಂದರು. ಹಿಂದೂ ಒಂದು ಧರ್ಮವಲ್ಲ, ಅದು ರಾಷ್ಟ್ರವೆಂದರು. `ಹಿಂದೂ ರಾಷ್ಟ್ರೀಯತೆ'ಯ ವಾದದಲ್ಲಿ ಈ ನಾಡು ಹಿಂದೂಗಳಿಗೆ ಮಾತ್ರ ಸೇರಬೇಕು. ಆ ಹಿಂದೂಗಳು ಯಾರೆಂದು ಅವರು ಗುರುತಿಸಿದ್ದರು. ಆವರೆಗೆ ಹಿಂದೂಸ್ತಾನಿ ಎಂದು ಕರೆಸಿಕೊಳ್ಳುತ್ತಿದ್ದ ಮುಸಲ್ಮಾನರು ಶತ್ರುಗಳಾದರು. ಮುಸಲ್ಮಾನರನ್ನೂ ವಿದೇಶೀಯರೆಂದು ಮಂಡಿಸಿದರು. ಈ ನಾಡಿನಲ್ಲೇ ಹುಟ್ಟಿ ಬೆಳೆದು ಜೊತೆಯಲ್ಲೇ ಬದುಕಿದ ಜನ ಇದ್ದಕ್ಕಿದ್ದಂತೆ ಹೊರಗಿನವರಾಗಿ ಕಾಣಿಸಿದರು.

1885ರಲ್ಲಿ ಆರಂಭವಾದ ರಾಜಕೀಯ ವೇದಿಕೆಯನ್ನು `ನ್ಯಾಷನಲ್' ಕಾಂಗ್ರೆಸ್ ಎಂದು ಹೆಸರಿಸಲಾಯಿತು. ಇವರು ನಂಬಿದ `ನೇಷನ್' ಕಲ್ಪನೆಯಲ್ಲಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟ ಪ್ರದೇಶದ ಜನರೆಲ್ಲರೂ ಒಳಗೊಂಡಿದ್ದರು. ವಸಾಹತು ಆಳ್ವಿಕೆಯಲ್ಲಿ ಆದ ಅನ್ಯಾಯ ಅದರಲ್ಲೂ ಆರ್ಥಿಕ ಶೋಷಣೆಯನ್ನು ವಿರೋಧಿಸುವುದು ಮುಖ್ಯ ಗುರಿಯಾಗಿತ್ತು. ರಾಜಕೀಯ ದಬ್ಬಾಳಿಕೆ, ಆರ್ಥಿಕ ಶೋಷಣೆಯ ಕಾರಣಕ್ಕೆ ತಾವು ಒಂದು ಎಂದು ಭಾವಿಸಿದ್ದರಿಂದ ಅದು ರಾಜಕೀಯ ರಾಷ್ಟ್ರೀಯತೆ ಹಾಗೂ ಆರ್ಥಿಕ ರಾಷ್ಟ್ರೀಯತೆ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ಸಿಗರು, ಹಿಂದೂ ರಾಷ್ಟ್ರೀಯವಾದಿಗಳಂತೆ ಧರ್ಮ ಹಾಗೂ ಸಂಸ್ಕೃತಿಗಳಿಗಾಗಿ ಹೋರಾಡಲಿಲ್ಲ.

ಹದಿನೆಂಟನೇ ಶತಮಾನದ ಯೂರೋಪಿನ ಕಲಾವಿದರು ರಾಷ್ಟ್ರವನ್ನು ಚಿತ್ರಿಸುವಾಗ ಹೆಣ್ಣಿನ ರೂಪಕದಲ್ಲಿ ಕಂಡರು. ಈ ರೂಪಕಗಳು ಜನಪ್ರಿಯವಾದವು. ಆ ಸಂದರ್ಭದಲ್ಲಿ ಹುಟ್ಟಿದ `ತಾಯ್ನೊಡು' (ಮದರ್ ಲ್ಯಾಂಡ್) ಸಂಬೋಧನೆ ರಾಷ್ಟ್ರೀಯತೆಯ ಅತ್ಯಂತ ಪ್ರಬಲ ಭಾವುಕ ರೂಪಕವಾಗಿ ಮೂಡಿಬಂತು. ಜರ್ಮನಿ `ಫಾದರ್ ಲ್ಯಾಂಡ್' ಎಂದು ಕರೆದುಕೊಂಡರೆ, ಸಾವರ್ಕರ್ ಸಹ ಹಾಗೆ ಸಂಬೋಧಿಸುವುದನ್ನು ಬಯಸಿದ್ದರು. ಆದರೆ ಭಾರತೀಯರು ಇಂಗ್ಲಿಷರನ್ನು ಅನುಸರಿಸಿ ತಾಯ್ನೊಡಿನ ರೂಪಕಕ್ಕೆ ಹೆಚ್ಚು ಮಾರುಹೋದರು. ಹಾಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಹುಟ್ಟಿ ಬಂದವಳು `ಭಾರತ ಮಾತೆ'.

ಅಮೂರ್ತವಾಗಿದ್ದ ರಾಷ್ಟ್ರೀಯತೆಯ ಕಲ್ಪನೆಗೆ ಮೂರ್ತಸ್ವರೂಪ ಬರತೊಡಗಿತು. ಬಂಗಾಳದಲ್ಲಿ ಭಾರತ ಮಾತೆಯನ್ನು ಕಾಳಿಕಾ ಮಾತೆಯಲ್ಲಿ ಬೆಸೆದು ನೋಡತೊಡಗಿದಾಗ ಕಲ್ಪಿತ ರಾಷ್ಟ್ರೀಯತೆಗೆ ಧರ್ಮವೂ ಬೆರೆತು ಜನಸಾಮಾನ್ಯರ ಮನಸ್ಸನ್ನು ಸೂರೆಗೊಳ್ಳಲು ಭಾವನೆ ಹದಗೊಂಡಿತು. ಧರ್ಮ ಹಾಗೂ ರಾಷ್ಟ್ರೀಯತೆಯನ್ನು ಬೆರೆಸಿ ವಿವರಿಸಿದ ಬಂಕಿಮರು `ವಂದೇ ಮಾತರಂ' ಗೀತೆಯನ್ನು ಬರೆದರು.  ಕಾಂಗ್ರೆಸ್‌ನಲ್ಲಿದ್ದ ಉಗ್ರರಾಷ್ಟ್ರೀಯ ವಾದಿಗಳಾದ ಅರವಿಂದ ಘೋಷ್ ಅವರು ಕಾಳಿಕಾ ಮಾತೆಯ ಮುಂದೆ ದೀಕ್ಷೆಯನ್ನು ನೀಡುವ ಆಚರಣೆಯನ್ನು ಅನುಶೀಲನಾ ಸಮಿತಿಯಲ್ಲಿ ರೂಢಿಸಿದರು. ರಾಷ್ಟ್ರೀಯತೆಯನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ವಿವರಿಸಿದರು.

ದುರಂತವೆಂದರೆ ಈ ಆಚರಣೆಗಳು ಮುಸಲ್ಮಾನರನ್ನು ರಾಷ್ಟ್ರೀಯ ಹೋರಾಟದಿಂದ ದೂರವಿಡತೊಡಗಿತು. ಇದರ ರಾಜಕೀಯ ಲಾಭ ಮಾಡಿಕೊಂಡವರು ಮಾತ್ರ ಬ್ರಿಟಿಷರು. ಜನರನ್ನು ಒಂದುಗೂಡಿಸಲು ತಿಲಕರು ಆರಂಭಿಸಿದ ಶಿವಾಜಿ ಜಯಂತಿ, ಗಣೇಶ ಚತುರ್ಥಿಗಳು ಮುಂದೆ ಶಿವಸೇನೆಯ ಭಾಗವಾದುದನ್ನು ಇಲ್ಲಿ ಗಮನಿಸಬಹುದು. 

ಕಾಂಗ್ರೆಸ್‌ನ್ಲ್ಲಲಿದ್ದ ಹಿಂದೂ ಸಂಪ್ರದಾಯ ವಾದಿಗಳು ಪಾಶ್ಚಿಮಾತ್ಯ ಪ್ರಭಾವದಿಂದ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತಿದ್ದರೇ ಹೊರತು ಹಿಂದೂ ರಾಷ್ಟ್ರೀಯತೆಯನ್ನು ಬೋಧಿಸಿರಲಿಲ್ಲ. ಹಿಂದೂ ರಾಷ್ಟ್ರೀಯತೆ ಮುಸಲ್ಮಾನರಿಗೆ ನೀಡಿದ ಮೀಸಲಾತಿಯನ್ನು ವಿರೋಧಿಸಿತು. ಈ ಎಲ್ಲಾ ಬೆಳವಣಿಗೆ ಇಸ್ಲಾಂ ಮೂಲಭೂತವಾದವನ್ನು ಹುಟ್ಟುಹಾಕಲು ಕಾರಣವಾಗಿತ್ತು. ಜಿನ್ನಾರಿಗೆ ಇಸ್ಲಾಂ ರಾಷ್ಟ್ರದ ಆಲೋಚನೆ ಬರುವ ಹೊತ್ತಿಗೆ ಎರಡನೇ ಮಹಾಯುದ್ಧ ಆರಂಭವಾಗಿತ್ತು.

ಭಾರತದಲ್ಲಿ ವೈವಿಧ್ಯಮಯವಾದ ಸಮುದಾಯಗಳಿರುವುದರಿಂದ ಇದು ಒಂದು ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಗಾಂಧೀಜಿ ಹೇಳುತ್ತಿದ್ದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗಾಂಧೀಜಿಯ ರಾಷ್ಟ್ರೀಯತೆಯ ಆವೇಶ `ಮಾಡು ಇಲ್ಲವೇ ಮಡಿ' ಎಂಬ ಕರೆಯಲ್ಲಿ ಮೊಳಗಿತು. ಅವರು ರಾಷ್ಟ್ರೀಯವಾದಿಯಾಗಿದ್ದರು ಹಾಗೂ ತಾನು ಹಿಂದೂ ಎಂದೂ ಕರೆದುಕೊಳ್ಳುತ್ತಿದ್ದರು. ಆದರೆ ಹಿಂದೂ ರಾಷ್ಟ್ರೀಯವಾದಿ ಆಗಿರಲಿಲ್ಲ. ಹಿಂದೂ, ಮುಸ್ಲಿಂ ಏಕತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಬಲವಿದೆ ಎಂದು ನಂಬಿದ್ದರು. ಪಾಕಿಸ್ತಾನದ ಪ್ರತ್ಯೇಕತೆಯನ್ನು ತೀವ್ರವಾಗಿ ವಿರೋಧಿಸಿದರು.    

ಇಪ್ಪತ್ತನೇ ಶತಮಾನದಲ್ಲಿ ಯೂರೋಪ್‌ನ ಕೆಲವು ರಾಷ್ಟ್ರಗಳಿಗೆ ರಾಷ್ಟ್ರೀಯತೆಯ ಕಲ್ಪನೆಯಲ್ಲಿ ಜನರನ್ನು ಒಂದುಗೂಡಿಸಲು ಸಾಧ್ಯವಾಗಿತ್ತು. ಆರ್ಥಿಕ ಪೈಪೋಟಿಯಿಂದ ಆರಂಭಗೊಂಡ ಧೋರಣೆ ರಾಷ್ಟ್ರ ವಿಸ್ತರಣೆಯ ಕಡೆಗೆ ಹೊರಳಿತು. ಅತಿಯಾದ ರಾಷ್ಟ್ರೀಯತೆ ಭಾವನೆ ಫ್ಯಾಸಿಸ್ಟ್ ರಾಷ್ಟ್ರಗಳನ್ನು ರೂಪಿಸಿತು. ಜನಾಂಗ ದ್ವೇಷ ಅದರ ನೆಲೆಗಟ್ಟಾಯಿತು. ಫ್ಯಾಸಿಸ್ಟ್ ನಾಯಕರು ಜನರ ಭಾವನೆಗಳನ್ನು ತಮ್ಮ ಮಹತ್ವಾಕಾಂಕ್ಷೆಗೆ ತಕ್ಕ ಹಾಗೆ ರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಫ್ಯಾಸಿಸಂ ಅನ್ನು ಮೆರೆದ ಜರ್ಮನಿ, ಜಪಾನ್, ಇಟಲಿ ಇವುಗಳ ಉತ್ಕರ್ಷ ಎರಡನೆಯ ಮಹಾಯುದ್ಧದಲ್ಲಿ ಪರಿಸಮಾಪ್ತಿಯಾಯಿತು.

ಎರಡನೆಯ ಮಹಾಯುದ್ಧದ ನಂತರ ಹಲವು ಹೊಸ ರಾಷ್ಟ್ರಗಳು ಉದಯಿಸಿದವು. ಇಂದು ಬಹುತೇಕ ವಸಾಹತು ಆಳ್ವಿಕೆ ಕೊನೆಗೊಂಡಿದೆ, ಆದರೆ ಜನಾಂಗ ದ್ವೇಷ ಕೊನೆಗೊಳ್ಳಲಿಲ್ಲ. ಜನಾಂಗ ನೆಲೆಯ ರಾಷ್ಟ್ರಗಳ ಹುಟ್ಟು ಮುಂದುವರೆದಿದೆ. ರಷ್ಯಾದಿಂದ ಹೊರ ಬಂದ ದೇಶಗಳ ತಳಹದಿ ಜನಾಂಗ ಕಲ್ಪನೆಯೇ ಆಗಿದೆ.

ಇದೇ ಕಾರಣದಿಂದ ಬಹು ಕಾಲದ ಹೋರಾಟದ ನಂತರ ಜೆಕ್ ಮತ್ತು ಸ್ಲೊವಾಕಿಯಾ ಬೇರ್ಪಟ್ಟವು. ರಾಷ್ಟ್ರದ ಕಲ್ಪನೆ ಭೂತಾಕಾರವಾಗಿ ಬೆಳೆದು ಆಧುನಿಕ ಕಾಲದ ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ನೆಲೆಗಟ್ಟಾಗಿ ಹೋಗಿದೆ. ಅಮೂರ್ತವಾದ ಈ ಕಲ್ಪನೆ ಶ್ರೇಷ್ಠತೆಯ, ಪಾವಿತ್ರ್ಯದ ಅರ್ಥಪಡೆದುಕೊಳ್ಳತೊಡಗಿತು. ರಾಜತ್ವವನ್ನು, ವಸಾಹತು ಆಳ್ವಿಕೆಯನ್ನು ಉರುಳಿಸಲು `ನ್ಯಾಷನಲಿಸಂ' ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ ನಿಜ, ಆದರೆ ಅದೇ ಸಮಯಕ್ಕೆ ರಾಷ್ಟ್ರಗಳು ತಮ್ಮ ಸುತ್ತ ಕೃತಕ ಗೋಡೆಯನ್ನು ಹಾಕಿಕೊಂಡು ಸಂಘರ್ಷಕ್ಕೆ ಸದಾ ಸಿದ್ಧವಾಗಿವೆ.

ರಾಷ್ಟ್ರೀಯತೆ ಅವಾಸ್ತವಿಕ ನೆಲೆಯಲ್ಲಿ ಹುಟ್ಟಿದ ತರ್ಕ ಎಂದು ಹೇಳಲು ಸಾಧ್ಯವಾಗಿದ್ದು ರವೀಂದ್ರನಾಥ ಟ್ಯಾಗೋರರಿಗೆ. `ನಾನು ರಾಷ್ಟ್ರಗಳನ್ನು ವಿರೋಧಿಸುತ್ತೇನೆ' ಎಂದು ನೇರವಾಗಿ ಬರೆದವರು ಅವರು. ಯೂರೋಪಿನ ರಾಷ್ಟ್ರದ ಕಲ್ಪನೆಯಲ್ಲಿ ಒಂದು ಧರ್ಮವನ್ನು ಹೇಳುವುದು ಸಹಜವಾಗಿತ್ತು. ಏಕೆಂದರೆ ಕ್ರೈಸ್ತ ಧರ್ಮ ಹರಡುವಾಗಲೇ ಅಲ್ಲಿನ ವೈವಿಧ್ಯ ಅಳಿಸಿಹೋಗಿತ್ತು. ಭಾರತದ ವಿಚಾರದಲ್ಲಿ ಟ್ಯಾಗೋರರು ಹಿಂದೂ ಧರ್ಮವನ್ನು ಒಂದು ಭ್ರಮೆಯೆಂದೇ ತಿಳಿದಿದ್ದರು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT