ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಗ್ರಸ್ತ ಕಾದಂಬರಿ ಸಿನಿಮಾ ಆಗಬಹುದೇ?

Last Updated 7 ಜುಲೈ 2011, 19:30 IST
ಅಕ್ಷರ ಗಾತ್ರ

ಗಣ್ಯ ನಿರ್ದೇಶಕರೊಬ್ಬರಿಗೆ ಎಸ್.ಎಲ್. ಭೈರಪ್ಪನವರ ಕೃತಿಯೊಂದನ್ನು ಸಿನಿಮಾ ಮಾಡುವ ಆಸೆ. ಭೈರಪ್ಪನವರ ಕಾದಂಬರಿಯೊಂದನ್ನು ಎರಡು - ಮೂರು ಬಾರಿ ಮನನ ಮಾಡಿಕೊಂಡು, ಅನುಮತಿ ಪಡೆಯಲು ನಿರ್ದೇಶಕರು ಭೈರಪ್ಪನವರ ಮನೆಗೆ ಹೋಗುತ್ತಾರೆ.
 
`ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಅನುಭವ ಏನು?~ ಎಂದು ಪ್ರಶ್ನಿಸಿದ ಭೈರಪ್ಪನವರು, `ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡುವುದಾದರೆ ಮಾತ್ರ ನನ್ನ ಕೃತಿಗಳನ್ನು ಕೊಡುವೆ, ಬೇರೆಯವರಿಗೆಲ್ಲಾ ಕೊಡಲು ಸಾಧ್ಯವಿಲ್ಲ~ ಎಂದು ಹೇಳಿ ಅವರನ್ನು ಸಾಗಹಾಕುತ್ತಾರೆ. ಸಾಹಿತಿ ಮನೆಯ ಗೇಟಿನ ಒಳಗೂ ಪ್ರವೇಶ ಸಿಗದೆ, ಕಮರ್ಷಿಯಲ್ ನಿರ್ದೇಶಕರು ಪೆಚ್ಚು ಮುಖ ಹಾಕಿಕೊಂಡು ಹಿಂತಿರುಗುತ್ತಾರೆ.

ಕನ್ನಡ ಸಿನಿಮಾವನ್ನೇ ನಿಷೇಧಿಸಬೇಕು ಎಂದು ಒಮ್ಮೆ ಹೇಳಿದ್ದ ಭೈರಪ್ಪನವರಿಗೆ ಕನ್ನಡ ಚಿತ್ರರಂಗದಲ್ಲಿರುವ ನಿರ್ದೇಶಕರುಗಳಿಗೆ ನನ್ನ ಕೃತಿಗಳನ್ನು ಸಿನಿಮಾ ಆಗಿಸುವ ಯೋಗ್ಯತೆ ಇಲ್ಲ ಎನ್ನುವ ಧೋರಣೆಯಿದೆ.

ಆದರೆ ಈಗ, `ಭೈರಪ್ಪನವರ ಕೃತಿಗಳಿಗೆ ಸಿನಿಮಾ ಆಗುವ ಯೋಗ್ಯತೆ ಇಲ್ಲ, ಅವು ದುರ್ಬಲಕೃತಿಗಳು, ನಿರ್ದೇಶಕ ಅದರ ಒಳಗಿರುವ ಶಕ್ತಿಯನ್ನು ಹೆಕ್ಕಿ ತೆಗೆದು ಸಿನಿಮಾ ಮಾಡಬೇಕಿದೆ~ ಎನ್ನುವ ಚರ್ಚೆ ಈಗ ಆರಂಭವಾಗಿದೆ. `ಭೈರಪ್ಪ ರಾಹುಗ್ರಸ್ತ ಲೇಖಕ. ಭೈರಪ್ಪನವರ ಡಿಬೆಟ್ ತರಹದ ಮಂಡನೆಯಂಥ ಕೃತಿಗಳನ್ನು ಕೂಡ ಅದರ ಒಳಗಿರುವ ಶಕ್ತಿಯನ್ನು ಗಮನಿಸಿ, ಸಿನಿಮಾ ಮಾಡಿ ಅದರ ಮರು ಓದನ್ನು ಸಾಧ್ಯ ಮಾಡಿದವರು ಗಿರೀಶ್ ಕಾಸರವಳ್ಳಿ~ ಎಂದು ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಹೇಳುತ್ತಾರೆ.

`ಭೈರಪ್ಪನವರಂಥ ಲೇಖಕರ ಕೃತಿಯನ್ನು ಗಿರೀಶ್ ಸಿನಿಮಾ ಭಾಷೆಯಲ್ಲಿ ಓದಿ, ಮಂಡಿಸುವ ಹೊತ್ತಿಗೆ ಅದರೊಳಗಿನ ಧಾರಣದ ತಿರುಳು ಮಾತ್ರ ಹೊರಬಂದು ಒಂದು ಉತ್ತಮ ಕಲಾಕೃತಿಯಾಗಿ ಬಿಟ್ಟಿರುತ್ತದೆ. ಗಿರೀಶ್ ಕಾಸರವಳ್ಳಿ ಐಡಿಯಾಲಜಿಯೆಂಬ ರಾಹುವಿನಿಂದ ಭೈರಪ್ಪನವರನ್ನು ಬಿಡುಗಡೆ ಮಾಡಿ, ಅವರ ಕೃತಿಯ ಒಳಗಿರುವ ಕಲೆಯನ್ನು ಹೊರತೆಗೆದಿದ್ದಾರೆ~ ಎಂದು ಹೇಳುವ ಮೂಲಕ ಯು.ಆರ್. ಅನಂತಮೂರ್ತಿಯವರು ಕೃತಿಕಾರನಿಗಿಂತ, ದೃಶ್ಯ ಮಾಧ್ಯಮದಲ್ಲಿ ಅದನ್ನು ಸಮರ್ಥವಾಗಿ ಪ್ರತಿಫಲಿಸುವಂತೆ ಮಾಡುವ ನಿರ್ದೇಶಕನ ಜಾಣ್ಮೆಯೇ ಹೆಚ್ಚು ಪ್ರಭಾವಶಾಲಿ ಎನ್ನುವ ಚರ್ಚೆಗೆ ಚಾಲನೆ ನೀಡಿದ್ದಾರೆ.

ಸಾಹಿತ್ಯ ಮತ್ತು ಸಿನಿಮಾ ಒಂದು ಅಂತರ್ಗತ ಸಂಬಂಧದ ತಳುಕು ಹಾಕಿಕೊಂಡೇ ಮುಂದುವರೆಯುತ್ತಿದೆ. ಯಾವ ಲೇಖಕನೂ ತನ್ನ ಕೃತಿ ತೆರೆಯ ಮೇಲೆ ಸಂಪೂರ್ಣವಾಗಿ ನನ್ನ ಅಭಿವ್ಯಕ್ತಿಯೇ ಆಗಿ ಕಾಣಿಸಿಕೊಂಡಿದೆ ಎನ್ನುವುದನ್ನು ಒಪ್ಪಲಾರ, ಒಪ್ಪಿಲ್ಲ.

ಗಿರೀಶ್ ಕಾಸರವಳ್ಳಿಯವರು `ಘಟಶ್ರಾದ್ಧ~ದ ಕೊನೆಯಲ್ಲಿ ಯಮನಕ್ಕಳಿಗೆ ತಲೆ ಬೋಳಿಸಿ ತೋರಿಸಿರುವುದನ್ನು ಮೂಲಕತೆಗಾರರಾದ ಅನಂತಮೂರ್ತಿ ಒಪ್ಪುವುದಿಲ್ಲ. `ಸಂಸ್ಕಾರ~ದಲ್ಲಿ ಗಿರೀಶ್ ಕಾರ್ನಾಡ್ ಮತ್ತು ಪಟ್ಟಾಭಿ ಸೇರಿ ನಾರಾಯಣಪ್ಪನ ಹೆಣ ಉಳಿಸಿಕೊಂಡಿರುವ ದೃಶ್ಯವನ್ನು ಅನಂತಮೂರ್ತಿ ಅವರು ಮೂಲ ಲೇಖಕರಾಗಿ ಒಪ್ಪುವುದಿಲ್ಲ.

`ಘಟಶ್ರಾದ್ಧ~ದಲ್ಲಿ ನಾನು ಹೇಳಿದ್ದಕ್ಕಿಂತ ಹೆಚ್ಚಿನದನ್ನು ಗಿರೀಶ್ ಹೇಳಿದ್ದಾರೆ. ಅದು ನನಗೆ ಇಷ್ಟವಾಗದ ಸಿನಿಮೀಯ ಬದಲಾವಣೆ~ ಎನ್ನುವ ಮೂಲಕ ಸಿನಿಮಾ ನಿರ್ದೇಶಕ ಮೂಲಕೃತಿಗೆ ಬದ್ಧವಾಗಿರಬೇಕು, ನಿಷ್ಠನಾಗಿರಬೇಕು ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. `ನನಗೆ ಕಾದಂಬರಿಯ ಒಂದು ಎಳೆ ಸಾಕು.

ಉಳಿದದ್ದನ್ನು ದೃಶ್ಯರೂಪದಲ್ಲಿ ನಾನು ಬೇರೆ ಮಾಡುತ್ತೇನೆ~ ಎಂದು ಹೇಳುತ್ತಿರುವ ನಿರ್ದೇಶಕರುಗಳ ಧೋರಣೆಯನ್ನು ಚರ್ಚೆಗೆ ಒಳಪಡಿಸುವ ಅವಶ್ಯಕತೆ ಇದೆ. `ಗೆಜ್ಜೆ ಪೂಜೆ~ ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ, ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದರು.
 
ಸಾಹಿತ್ಯ ಕೃತಿಯೊಂದು ಸಿನಿಮಾ ಆಗಿ ಪರಿವರ್ತನೆ ಆಗುವಾಗ ಅಲ್ಲಿ ಕ್ಯಾಮರಾಕ್ಕೂ ಒಂದು ಪಾತ್ರವಿದೆ. ಹಾಡು, ಸಂಭಾಷಣೆ, ಚಿತ್ರಕಥೆ, ವಸ್ತ್ರವಿನ್ಯಾಸ, ಸಂಕಲನ.... ಹೀಗೆ ಪ್ರತಿಯೊಂದು ವಿಭಾಗವೂ ಮೂಲ ಲೇಖಕನ ಒಟ್ಟಾರೆ ಆಶಯವನ್ನು ತಾನು ಅರ್ಥಮಾಡಿಕೊಂಡ ರೀತಿಯಲ್ಲಿ ಮಂಡಿಸುತ್ತಾ ಹೋಗುತ್ತಾನೆ. ಇಲ್ಲಿ ತಾಂತ್ರಿಕತೆಯದೂ ಮೇಲುಗೈ ಆಗಿರುವುದರಿಂದ ಮೂಲಸಾಹಿತಿ ನಿಮಿತ್ತ ಮಾತ್ರನಾಗಿ ಬಿಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮೂಲ ಕತೆಗಾರ ತನ್ನ ಕತೆಯನ್ನು ತೆರೆಯ ಮೇಲೆ ಕಂಡ ನಂತರ `ಇದು ನನ್ನ ಕತೆಯೇ ಅಲ್ಲ~ ಎಂದು ಹೇಳಿಕೆ ನೀಡಿದ ಉದಾಹರಣೆಗಳು ಸಿಗುತ್ತವೆ. ತರಾಸು ಅವರು `ನಾಗರಹಾವು~ ನೋಡಿ, ಇದು `ಕೇರೇ ಹಾವು~ ಎಂದು ಟೀಕಿಸಿದ್ದರು.

ಅದಕ್ಕೆ ಪುಟ್ಟಣ್ಣನವರು ಪ್ರತಿಕ್ರಿಯಿಸಿ: `ಮೂಲಕತೆಯ ಒಂದು ಹಾಳೆಯನ್ನು ಮಾತ್ರ ನಾನು ಎತ್ತಿಕೊಂಡು ಸಂಪೂರ್ಣವಾಗಿ ನನ್ನ ಮಾಧ್ಯಮಕ್ಕೆ ಹೇಗೆ ಬೇಕೋ ಹಾಗೆ ಬದಲಿಸಿಕೊಳ್ಳುತ್ತೇನೆ. ಸಿನಿಮಾ ನಿರ್ದೇಶನ ಮಾಧ್ಯಮವಾಗಿರುವುದರಿಂದ ನಿರ್ದೇಶಕನಿಗೆ ಆ ಸ್ವಾತಂತ್ರ್ಯವಿದೆ~ ಎಂದು ಪ್ರತಿಪಾದಿಸಿದ್ದರು. ಆರ್. ಕೆ. ನಾರಾಯಣ್ ಅವರೂ `ಗೈಡ್~ ಚಿತ್ರವನ್ನು ವೀಕ್ಷಿಸಿ `ಮಿಸ್‌ಗೈಡೆಡ್ ಗೈಡ್~ ಎಂದು ಟೀಕಿಸಿರಲಿಲ್ಲವೇ?

ತಮ್ಮ ಕೃತಿಗಳನ್ನು ಸಿನಿಮಾ ಮಾಡುವ ಸಾಮರ್ಥ್ಯವಿರುವುದು ಗಿರೀಶ್ ಕಾಸರವಳ್ಳಿ ಹಾಗೂ ಗಿರೀಶ್ ಕಾರ್ನಾಡ್‌ಗೆ ಮಾತ್ರ ಎಂದು ಭೈರಪ್ಪನವರು ಭಾವಿಸಿದ್ದಾರೆ. `ಭೈರಪ್ಪನವರ ರಾಹುಗ್ರಸ್ತ ಮನಸ್ಸನ್ನು ಕಾಸರವಳ್ಳಿ ಕಿತ್ತುಹಾಕಿದ್ದಾರೆ~ ಎಂದು ಅನಂತಮೂರ್ತಿ ಹೇಳುತ್ತಾರೆ. (ಗಿರೀಶ್ ಕಾಸರವಳ್ಳಿ `ನಾಯಿ ನೆರಳು~ ನಿರ್ದೇಶಿಸಿದ್ದಾರೆ. ಕಿರುತೆರೆಗಾಗಿ `ಗೃಹ ಭಂಗ~ ನಿರ್ದೇಶಿಸಿದ್ದಾರೆ) `ವಂಶವೃಕ್ಷ~ ಮತ್ತು `ತಬ್ಬಲಿಯು ನೀನಾದೆ ಮಗನೆ~ ಚಿತ್ರವನ್ನು ಗಿರೀಶ್ ಕಾರ್ನಾಡ್ ನಿರ್ದೇಶಿಸಿದ್ದಾರೆ.

(`ವಂಶವೃಕ್ಷ~ವನ್ನು ಬಿ.ವಿ.ಕಾರಂತರೊಡಗೂಡಿ ನಿರ್ದೇಶಿಸಿದ್ದಾರೆ). `ಭೈರಪ್ಪನವರ ಈ ಎರಡು ಕಾದಂಬರಿಗಳನ್ನು ನಿರ್ದೇಶಿಸಿ ನಾನು ತಪ್ಪು ಮಾಡಿದೆ, ಈ ಎರಡೂ ಕೃತಿಗಳು ದುರ್ಬಲ ಕೃತಿಗಳಾಗಿದ್ದು ಸಮರ್ಪಕ ಚಿತ್ರವಾಗಲಿಲ್ಲ~ ಎಂದು ಗಿರೀಶ್ ಕಾರ್ನಾಡ್ ಹೇಳಿಕೊಂಡಿದ್ದಾರೆ. ಭೈರಪ್ಪನವರದು ಡಿಬೆಟ್ ಮಂಡನೆಯಂಥ ಕೃತಿ ಎಂದು ಅನಂತಮೂರ್ತಿಯವರು ಹೇಳಿರುವುದನ್ನೇ ಗಿರೀಶ್ ಕಾರ್ನಾಡ್ ದುರ್ಬಲ ಕೃತಿ ಎಂದು ಹೇಳುತ್ತಾರೆ.

ಒಬ್ಬ ಲೇಖಕ ಮತ್ತೊಬ್ಬ ಲೇಖಕನ ಕೃತಿಯನ್ನು ತೆರೆಗೆ ಅಳವಡಿಸುವಾಗ ಉಂಟಾಗುವ ಸಮಸ್ಯೆ ಏನು? ಇನ್ನೊಬ್ಬ ಲೇಖಕನಿಗೆ ನ್ಯಾಯ ಒದಗಿಸಲು ಸಾಧ್ಯವೇ ಎನ್ನುವ ಪ್ರಶ್ನೆಗಳೂ ಈ ಸಂದರ್ಭದಲ್ಲಿ ಉದ್ಭವಿಸುತ್ತದೆ. `ಸಂಸ್ಕಾರ~ಕ್ಕೆ ಚಿತ್ರಕಥೆ ಬರೆಯುವ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್, `ಅನಂತಮೂರ್ತಿ ಅವರ ಕೃತಿಯನ್ನು ಹೇಗಾದರೂ ಮಾಡಿ ನನ್ನದಾಗಿಸಿಕೊಳ್ಳಬೇಕಾಗಿತ್ತು,

ಆದರೆ ಕಾದಂಬರಿ ಕೇವಲ ವಾಸ್ತವಿಕ ವಿವರಗಳ ಚೌಕಟ್ಟಿಗೇ ಬದ್ಧವಾಗಿ ಉಳಿಯದೆ ಅದನ್ನೊಡೆದು ಹೊರ ಬಂದು ಆಳವಾದ ವ್ಯಾಖ್ಯಾನಿಸಲು ಅಶಕ್ಯವಾದ ಹಂತದಲ್ಲಿ ನನ್ನನ್ನು ಕಲಿಸಿತು. ಸಾಮಾಜಿಕ, ನಿಯಮಗಳಿಗೆಲ್ಲ ಮೀರಿದ ಆಧ್ಯಾತ್ಮಿಕ ತಲ್ಲಣಗಳಲ್ಲಿ ನನ್ನನ್ನು ಎಳೆದೊಯ್ಯಿತು~ ಎಂದು ಹೇಳುತ್ತಾರೆ. `ಸಂಸ್ಕಾರ~ದ ಪ್ರಭಾವಶಾಲಿ ನಿರೂಪಣೆಯನ್ನು ಒಪ್ಪಿಕೊಂಡೂ, `ಗಿರೀಶ್ ಕಾರ್ನಾಡ್ ಮತ್ತು ಪಟ್ಟಾಭಿ ಸೇರಿ ನಾರಾಯಣಪ್ಪನ ಹೆಣ ಉಳಿಸಿಕೊಂಡಿರುವ ದೃಶ್ಯಗಳನ್ನು ನನಗೆ ಒಪ್ಪಲು ಸಾಧ್ಯವಿಲ್ಲ~ ಎಂದು ಅನಂತಮೂರ್ತಿ `ಸಂಸ್ಕಾರ~ ಚಿತ್ರದ ಬಗ್ಗೆ ಹೇಳುತ್ತಾರೆ.

ಆದರೆ ಗಿರೀಶ್‌ಕಾರ್ನಾಡ್ ಅವರು ಭೈರಪ್ಪನವರ ಎರಡು ಕಾದಂಬರಿಗಳನ್ನು ನಿರ್ದೇಶಿಸಿ ನಾನು ತಪ್ಪು ಮಾಡಿದೆ ಎಂದು ಹೇಳಿಕೊಂಡಿರುವುದು ಇಂತಹ ಚರ್ಚೆಗೆ ಮತ್ತೊಂದು ಆಯಾಮವನ್ನು ನೀಡುತ್ತದೆ ಎಂದು ನನಗನಿಸುತ್ತದೆ. ಭೈರಪ್ಪನವರ “ವಂಶವೃಕ್ಷ” ಮತ್ತು “ತಬ್ಬಲಿಯು ನೀನಾದೆ ಮಗನೆ” ಎರಡೂ ಕಾದಂಬರಿಗಳು ದುರ್ಬಲ ಕೃತಿಗಳಾಗಿದ್ದು, ಇದರಿಂದಾಗಿಯೇ ಈ ಎರಡೂ ಚಲನಚಿತ್ರಗಳು ಸಮರ್ಪಕವಾಗಿರಲಿಲ್ಲ ಎಂದು ಗಿರೀಶ್ ಕಾರ್ನಾಡ್ ಹೇಳಿದ್ದಾರೆ. ನಿರ್ದೇಶಕನಿಗೂ ಕಾದಂಬರಿಕಾರನಿಗೂ ಇರುವ ಭಿನ್ನ ನಿಲುವು ಇಲ್ಲಿ ಗೋಚರಿಸುತ್ತವೆ.

ಗಿರೀಶ್‌ಕಾರ್ನಾಡ್ ಕೂಡ ಸಾಹಿತಿಯಾಗಿರುವುದರಿಂದ ಒಬ್ಬ ಲೇಖಕ ಮತ್ತೊಬ್ಬ ಲೇಖಕನ ಕೃತಿಯನ್ನು ಹೇಗೆ ಅರ್ಥೈಸಿಕೊಳ್ಳುತ್ತಾನೆ ಎಂಬುದೂ ಇ್ಲ್ಲಲಿ ಚರ್ಚೆಗೆ ಒಳಗಾಗುತ್ತದೆ. ಕುವೆಂಪು ಅವರ `ಕಾನೂರು ಸುಬ್ಬಮ್ಮ ಹೆಗ್ಗಡಿತಿ~ ಕಾದಂಬರಿಯನ್ನು ಗಿರೀಶ್ ಕಾರ್ನಾಡ್ “ಕಾನೂರು ಹೆಗ್ಗಡಿತಿ” ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿಸಿದ್ದಾರೆ. ಆ ಚಿತ್ರ ಕೂಡ ಕುವೆಂಪು ಅವರ ಆಶಯಕ್ಕೆ ತದ್ವಿರುದ್ದವಾಗಿದ್ದುದನ್ನು ನಾವು ಗಮನಿಸಿದ್ದೇವೆ.

ಕುವೆಂಪು ಅವರ ಮೂಲ ಕಾದಂಬರಿ ಪೂರ್ಣವಾಗಿ ಒಂದು ಹೆಣ್ಣಿನ ನೆಲೆಯಲ್ಲಿ ಸಾಗಿದರೆ, ಕಾರ್ನಾಡರ ಚಲನಚಿತ್ರ ಪುರುಷ ನೆಲೆಯಲ್ಲಿ ಸಾಗುತ್ತದೆ. ಹೀಗಾಗಿ ಇಡೀ ಕಥಾವಸ್ತುವಿನ ಆಶಯಕ್ಕೆ ಭಂಗವಾಗಿದೆ. ಇದು ಕಾದಂಬರಿಕಾರನ ಮೂಲ ಆಶಯಕ್ಕೆ ಧಕ್ಕೆ ತರುವ ಸಂಗತಿ. ಸಾಹಿತಿಗಳ ವಲಯದಲ್ಲೇ ಕೃತಿ ಹಾಗೂ ದೃಶ್ಯನಿರೂಪಣೆಯ ಬಗ್ಗೆ ಈ ರೀತಿಯ ಭಿನ್ನಮತವಿದೆ. ಚಿತ್ರರಂಗದಲ್ಲೂ ಇದೇ ರೀತಿ ಸಾಹಿತಿಗಳು ಹಾಗೂ ಸಿನಿಮಾ ವೃತ್ತಿನಿರತರ ನಡುವೆ ಭಿನ್ನಾಭಿಪ್ರಾಯವಿದೆ.

ಸಿನಿಮಾಗಳಿಗೆ ಸಾಹಿತ್ಯದ್ದೇ ಮೂಲ ಪ್ರೇರಣೆ. ಆದರೆ ಈಗ ವಾಣಿಜ್ಯೀಕರಣ ಗೊಂಡಿರುವ ಚಲನಚಿತ್ರರಂಗದ ಜನ ಈ ವಾದವನ್ನು ಒಪ್ಪಲು ಸಿದ್ಧವಿಲ್ಲ. ಈಗಾಗಲೇ ಸಾಹಿತ್ಯವಲಯದಲ್ಲಿ ಗುರುತಿಸಲ್ಪಟ್ಟಿರುವ ಸಾಹಿತ್ಯವನ್ನಾಗಲಿ, ಸಾಹಿತಿಗಳನ್ನಾಗಲಿ ಸಿನಿಮಾವಲಯದಲ್ಲಿ ಸಂಪೂರ್ಣ ತೊಡಗಿಸಲು ಚಿತ್ರರಂಗ ಇಷ್ಟಪಡುವುದಿಲ್ಲ. ಹೀಗಾಗಿ ಎರಡೂ ವಲಯಗಳಲ್ಲಿನ ಅಂತರ ದಿನೇದಿನೇ ಬೆಳೆಯುತ್ತಾ ಹೋಗಿದೆ. ಸಾಹಿತಿಗಳಿಗೆ ಸಿನಿಮಾರಂಗದವರೆಂದರೆ ಒಂದು ರೀತಿಯ ಅಸಡ್ಡೆ.

ಸಿನಿಮಾರಂಗದವರಿಗೆ ಸಾಹಿತಿಗಳೆಂದರೆ ಭಯ-ಗೌರವಕ್ಕಿಂತ ಅವರಿಂದ ದೂರವಿದ್ದರೆ ಸಾಕು ಎಂಬ ಮನೋಭಾವ. ಈ ರೀತಿಯ ಅವ್ಯಕ್ತ ಭಯ ಎರಡೂ ಬಣದಲ್ಲಿ ಹೆಡೆಯಾಡುತ್ತಿರುವುದರಿಂದ ಸೃಜನಾತ್ಮಕ ಮಾಧ್ಯಮವೊಂದರ ವಾಸ್ತವಿಕ ಕಾಣ್ಕೆಗೆ ಅಪಾರ ನಷ್ಟವಾಗಿದೆ. ಸಿನಿಮಾದಲ್ಲಿ ತೆರೆಯ ಮೇಲೆ ಮೂಡಿಸಬೇಕಾದ ಕತೆಗೆ, ನಿರೂಪಣಾ ಶೈಲಿಗೆ ನಿರ್ದೇಶಕನೊಬ್ಬನೇ ಕಾರಣ ಎಂದು ತೋರ್ಪಡಿಕೆಗೆ ಒಬ್ಬನನ್ನು ಹೊಣೆಗಾರನನ್ನಾಗಿ ಮಾಡಿದರೂ, ಒಂದೊಂದು ವಿಭಾಗದಲ್ಲೂ ಒಬ್ಬೊಬ್ಬರ ಶ್ರಮವಿರಲೇ ಬೇಕಾಗುತ್ತದೆ.

ತಾಂತ್ರಿಕ ಮಾಧ್ಯಮದಲ್ಲಿ ಚಿತ್ರಕಥೆ, ಮೂಲಕಲ್ಪನೆ ಛಾಯಾಗ್ರಾಹಕನ ಮೂಲಕ ದೃಶ್ಯವಾಗಿ ಒಡಮೂಡಬೇಕು. ಈ ಪ್ರಕ್ರಿಯೆಯಲ್ಲಿ ಹಲವು ಮಾರ್ಪಾಟುಗಳೂ ಆಗಬಹುದು. ಮೂಲಕಲ್ಪನೆ, ಈ ಪರಿವರ್ತನಾ ಕಾರ್ಯದಲ್ಲಿ ಮೂಲ ಕಲ್ಪನೆ ದುರ್ಬಲವೂ ಆಗಬಹುದು. ಇಲ್ಲವೇ ಮತ್ತಷ್ಟು ಸುಧಾರಣೆಯೂ ಆಗಬಹುದು. 

ಈ ರೀತಿಯ ಬೆಳವಣಿಗೆಗಳು ಸೃಜನಾತ್ಮಕ ಕೃತಿಯೊಂದರ ಮೂಲ ಆಶಯಗಳಿಗೆ ಭಂಗ ತರುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ತನ್ನ ಮೂಲ ಆಶಯಕ್ಕೆ ಭಂಗ ಬಂದಿರುವ ಅಥವಾ ಭಂಗ ಬರಬಹುದಾದ ಸಾಧ್ಯತೆಗಳಿಗೆ ಹೆದರಿಯೇ ಸಾಹಿತಿಯೊಬ್ಬ ತನ್ನ ಕೃತಿ ಚಲನಚಿತ್ರವಾಗುವುದನ್ನು ನಿರಾಕರಿಸಬಹುದು. ಈ ವಿಷಯದಲ್ಲಿಯೇ ಸಾಹಿತಿಗೂ, ಚಲನಚಿತ್ರ ನಿರ್ದೇಶಕರಿಗೂ ಸದಾ ಸಂಘರ್ಷ. 

ಈ ವಿಭಜನೆ ಸ್ಪಷ್ಟವಾಗಿ ಎದ್ದು ಕಾಣುವುದು ಹೊಸಅಲೆ ಚಿತ್ರಗಳು ಎಂಬ ವರ್ಗೀಕರಣದಲ್ಲಿ. 1970ರ ನಂತರ ಕನ್ನಡ ಚಿತ್ರರಂಗದಲ್ಲಿ ಆರಂಭವಾದ ಹೊಸಅಲೆ ಚಿತ್ರಗಳ ತಯಾರಿಕೆ ಚಿತ್ರರಂಗಕ್ಕೆ ಸಾಹಿತಿಗಳು ನೇರ ಪ್ರವೇಶ ಮಾಡುವಂತೆ ಪ್ರೇರೇಪಿಸಿತು. 41 ವರ್ಷದ ನಂತರವೂ ಹೊಸ ಅಲೆ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದವರನ್ನು ಪ್ರತ್ಯೇಕ ಗುಂಪಾಗಿಯೇ ಗುರುತಿಸಲಾಗುತ್ತದೆ.

ಇದನ್ನು ಸ್ಪಷ್ಟವಾಗಿ ಸಾಹಿತ್ಯವಲಯ ಸಿನಿಮಾಕ್ಷೇತ್ರವನ್ನು ಆಕ್ರಮಿಸಿಕೊಳ್ಳುವುದರ ವಿರುದ್ಧದ ಪ್ರತಿಭಟನೆ ಎಂದೂ ಅರ್ಥೈಸಬಹುದು. ಹೊಸ ಅಲೆ ಎಂಬ ಚಿತ್ರ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಾಗ ಅದರಲ್ಲಿ ಸಾಹಿತಿಗಳೇ ಹೆಚ್ಚಿನ ಪ್ರಮಾಣದಲ್ಲಿದ್ದರು. ಸಿನಿಮಾ ನೋಡುವ ಪ್ರೇಕ್ಷಕರಿಗೂ ಹೊಸ ಅನುಭವವೇ ದಕ್ಕುತ್ತದೆ.

ಆದ್ದರಿಂದಲೇ ಇಂತಹ ಸಿನಿಮಾಗಳು ಹೊಸ ಪ್ರೇಕ್ಷಕವರ್ಗವನ್ನು ಸೃಷ್ಟಿಸಿಕೊಳ್ಳುತ್ತದೆ. ಪಶ್ಚಿಮಬಂಗಾಳದಲ್ಲಿ, ಕೇರಳದಲ್ಲಿ ಇದು ಸಾಧ್ಯವಾಗಿದೆ.

ಹೊಸ ಅಲೆ ಚಿತ್ರಗಳ ಮೂಲಕ ಚಿತ್ರೋದ್ಯಮದಲ್ಲಿ ಸಾಹಿತಿಗಳು ಹಾಗೂ ಸಿನಿಮಾ ನಡುವೆ ಸ್ಪಷ್ಟ ವಿಭಜನೆ ಆಗಿದೆ. ಹೊಸ ಅಲೆ ಸಿನಿಮಾ ತಯಾರಕರು ಹಾಗೂ ವಾಣಿಜ್ಯ ಉದ್ದೇಶದ ಸಿನಿಮಾ ತಯಾರಕರ ನಡುವೆ ಸಿದ್ಧಾಂತಗಳಲ್ಲೇ ಭಿನ್ನತೆ ಎದ್ದು ಕಾಣುತ್ತದೆ.

ಈ ಎರಡೂ ಪಂಗಡಗಳು ಒಂದುಗೂಡುವುದು ಸಾಧ್ಯವೇ ಇಲ್ಲವೇನೋ ಎಂಬಂತೆ ಎರಡೂ ವಲಯಗಳೂ ತಮ್ಮ ನಡುವೆ ಲಕ್ಷ್ಮಣರೇಖೆ ಎಳೆದುಕೊಂಡು ಬಿಟ್ಟಿವೆ. ಇಂಥ ಸಂದರ್ಭದಲ್ಲಿ ಭೈರಪ್ಪನವರ ಕೃತಿಗಳ ಬಗ್ಗೆ ಬರುವ ಟೀಕೆಯಾಗಲಿ, ಕಮರ್ಷಿಯಲ್ ನಿರ್ದೇಶಕರಿಗೆ ಕಾದಂಬರಿಗಳನ್ನು ಕೊಡುವುದಿಲ್ಲ ಎನ್ನುವ ಹೇಳಿಕೆಗಳಾಗಲಿ, ಸಿನಿಮಾವನ್ನೇ ನಿಷೇಧಿಸಬೇಕು ಎನ್ನುವ ಮಾತುಗಳಾಗಲಿ ಸಿನಿಮಾ-ಸಾಹಿತ್ಯದ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT