ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್: ಅಂದು ಇಂದು ಅದೇ ವಿಶ್ವಾಸ

Last Updated 14 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ವಿಶ್ವ ಕಪ್ ಕ್ರಿಕೆಟ್ ಗೆಲುವಿನ ಸಂಭ್ರಮ ಇನ್ನೂ ಹಸಿಹಸಿಯಾಗಿರುವಂತೆಯೇ ಭಾರತದ ಅತಿಮುದ್ದಿನ ಕ್ರಿಕೆಟ್ ಪಟುಗಳು ಇಂಗ್ಲೆಂಡ್‌ನಲ್ಲಿ ಬೆತ್ತಲಾಗುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮಹೇಂದ್ರ ಸಿಂಗ್ ದೋನಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತು.
 
ಈಗ ಅವರು ಇಂಗ್ಲೆಂಡ್‌ನವರ ಹೊಡೆತ ತಾಳಲಾರದೇ ಬೆಚ್ಚಗಿನ ಜಾಗ ಹುಡುಕುವಂತಾಗಿದೆ. ಟೆಸ್ಟ್ ಸರಣಿಯಂತೂ ಕೈಬಿಟ್ಟಂತಾಗಿದೆ. (ಇದನ್ನು ಬರೆಯುವ ಹೊತ್ತಿಗೆ ಮೂರನೇ ಟೆಸ್ಟ್‌ನಲ್ಲೂ ಭಾರತ ಪರದಾಡುತ್ತಿತ್ತು.) ಮುಂದೆ ಒಂದು ದಿನದ ಪಂದ್ಯಗಳ ಸರಣಿ. ವಿಶ್ವ ಕಪ್ ವೀರರ ಮರ್ಯಾದೆ ಪ್ರಶ್ನೆ.

ಎಲ್ಲರೂ ನೋಡಿ ನಗುವಂತಾಗಬಾರದೆಂದು ಮಾನ ಕಾಪಾಡಿಕೊಳ್ಳಲು ಸುತ್ತಲೂ ಎತ್ತರದ `ಗೋಡೆ~ ಕಟ್ಟುವ ಯೋಚನೆಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ತಂಡಕ್ಕೆ ಆರಿಸಲಾಗಿದೆ. ಒಂದು ರೀತಿಯ ಅನಿವಾರ್ಯ ಸ್ಥಿತಿಯಲ್ಲಿ ರಾಹುಲ್ ಅವರ ಮೊರೆಹೋಗಲಾಗಿದೆ.

ರಾಹುಲ್ ಜಾಣ ಮನುಷ್ಯ. ಹದಿನೈದು ವರ್ಷಗಳಿಂದ ಭಾರತದ ಕ್ರಿಕೆಟ್‌ನ ಆಳವನ್ನು ಕಂಡಿರುವ ಅವರು, ತಮ್ಮನ್ನು ಯಾಕೆ ಆರಿಸಲಾಗಿದೆ ಎಂಬುದನ್ನು ಅರಿತಿದ್ದಾರೆ. ಟೆಸ್ಟ್‌ಗಳಲ್ಲಿ ಅವರು ಶತಕ ಹೊಡೆದರೂ ಭಾರತ ಗೆಲ್ಲಲಿಲ್ಲ ಎಂಬ ಮಾತು ಬೇರೆ. ಸಂಪೂರ್ಣವಾಗಿ ಕುಸಿದುಹೋಗಿರುವ ತಂಡದ ಮಧ್ಯಮ ಕ್ರಮಾಂಕಕ್ಕೆ ತಾವಿಲ್ಲದೇ ಬಲ ಇಲ್ಲ ಎಂಬುದನ್ನು ಅವರು ಮೇಲಿಂದ ಮೇಲೆ ಸಾಬೀತುಪಡಿಸಿದ್ದಾರೆ.
 
1996ರಲ್ಲಿ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪೆವಿಲಿಯನ್‌ನಲ್ಲಿ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಎಷ್ಟೊಂದು ವಿಶ್ವಾಸದಿಂದ ಮಾತನಾಡಿದ್ದರೆಂದರೆ, `ಮುಂಬರುವ ವಿಶ್ವ ಕಪ್‌ಗೆ ಭಾರತ ತಂಡದಲ್ಲಿ ಖಚಿತವಾಗಿ ಸ್ಥಾನ ಪಡೆಯುವ ಆಟಗಾರ ಯಾರಾದರೂ ಇದ್ದರೆ ಅದು ನಾನೇ~ ಎಂದು ಹೇಳಿದ್ದು ಕಿವಿಯಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ. ಆದರೆ ಅವರು ಆಯ್ಕೆಯಾಗಿರಲಿಲ್ಲ. 2011ರ ವಿಶ್ವ ಕಪ್‌ನಲ್ಲೂ ಅವರ ಅಗತ್ಯ ಬೀಳಲಿಲ್ಲ. ಆದರೆ ಈಗ ಇಂಗ್ಲೆಂಡ್‌ನಲ್ಲಿ ಒಂದು ದಿನದ ಸರಣಿಗೆ ಅವರು ಬೇಕಾಗಿದ್ದಾರೆ. ಭಾರತದ ಬ್ಯಾಟಿಂಗ್‌ನಲ್ಲಿ ಬಲ ತುಂಬಲು ಅವರಿರಲೇಬೇಕು.

ಭಾರತ ಕ್ರಿಕೆಟ್ ತಂಡದ ಇಂದಿನ ಕೆಟ್ಟ ಸ್ಥಿತಿಗೆ ಕಾರಣವಾಗಿರುವ ಐಪಿಎಲ್‌ನಲ್ಲಿ ರಾಹುಲ್ ಆಡಿದರೂ, ನಿಗದಿಯ ಓವರುಗಳ ಅಂತರರಾಷ್ಟ್ರೀಯ ಪಂದ್ಯಗಳಿಂದ ಅವರು ದೂರ ಸರಿದು ಎರಡು ವರ್ಷಗಳೇ ಆಗಿವೆ. ಈಗಲೂ ಅವರಿಗೆ ಆಡುವ ಮನಸ್ಸು ಇದ್ದಂತಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿ ನಂತರ ನಿಗದಿತ ಓವರುಗಳ ಪಂದ್ಯ ಆಡುವುದಿಲ್ಲ ಎಂದು ಅವರು ಈಗಾಗಲೇ ಪ್ರಕಟಿಸಿದ್ದಾರೆ.

ಭಾರತದ ಸತ್ವಹೀನ ಪಿಚ್‌ಗಳ ಮೇಲೆ ರಾಹುಲ್ ಅವರ ಸ್ಥಾನವನ್ನು ಹಲವು ಮಂದಿ ಯುವ ಆಟಗಾರರು ತುಂಬಿದ್ದಾರೆ. ಆದರೆ ಯುವರಾಜ್ ಸಿಂಗ್, ಸುರೇಶ್ ರೈನಾ ಅವರಂಥ ಸಮರ್ಥ ಆಟಗಾರರಿಗೂ ಇಂಗ್ಲೆಂಡ್‌ನಲ್ಲಿಯ ವಾತಾವರಣ ಚಳಿ ಹುಟ್ಟಿಸಿದೆ. ಟೆಸ್ಟ್ ಪಂದ್ಯಗಳಂತೆಯೇ ಒಂದು ದಿನದ ಪಂದ್ಯಗಳೂ ಭಾರತಕ್ಕೆ ದೊಡ್ಡ ಸವಾಲಾಗುವ ಎಲ್ಲ ಸಾಧ್ಯತೆಗಳೂ ಇವೆ. ಹೊರಗೆಲ್ಲ ಹೊಡೆತ ತಿಂದು ಬಂದ ಇಂಗ್ಲೆಂಡ್ ತನ್ನದೇ ಗುಹೆಯಲ್ಲಿ ಸಿಂಹವಾಗಿಬಿಟ್ಟಿದೆ.

ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ (ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳು) ಪಂದ್ಯಗಳಲ್ಲಿ ತಮ್ಮ ನೂರನೇ ಶತಕ ಗಳಿಸಿಯೇ ನಿವೃತ್ತಿಯಾಗುವ ಗುರಿ ಹೊಂದಿದಂತಿದೆ. ಆದರೆ ಅವರಿಗೆ ಆ ಕೊನೆಯ ಮೆಟ್ಟಿಲು ಹತ್ತಲು ಕಷ್ಟವಾಗುತ್ತಿದೆ.

ಭಾರತದಲ್ಲಿ ನಡೆದ ವಿಶ್ವ ಕಪ್ ಪಂದ್ಯಗಳಲ್ಲಿ ಅವರು ಚೆನ್ನಾಗಿಯೇ ಆಡಿದರು. ರಾಹುಲ್ ಅವರಿಗಿಂತ ಎರಡು ತಿಂಗಳು ಚಿಕ್ಕವರಾದ ಸಚಿನ್ ಅವರ ಮೈಮನಗಳಲ್ಲಿ ಉತ್ಸಾಹ ಕಂಡುಬಂದರೂ ಅವರು ಕಾಲುಗಳೂ ಸೋಲುತ್ತಿವೆ ಎಂಬ ಸೂಚನೆಗಳು ಕಾಣುತ್ತಿವೆ. ಆದರೆ ರಾಹುಲ್ ಮಾತ್ರ ಹದಿನೈದು ವರ್ಷಗಳ ಹಿಂದೆ ಇದ್ದ ವಿಶ್ವಾಸದಿಂದಲೇ ಆಡುತ್ತಿದ್ದಾರೆ. ಭಾರತ ತಂಡಕ್ಕೆ ಅವರಿನ್ನೂ ಅನಿವಾರ್ಯವಾಗಿದ್ದಾರೆ.

ಇವರ ಜೊತೆಗೇ 1996ರಲ್ಲಿ, ಇಂಗ್ಲೆಂಡ್‌ನಲ್ಲೇ ಟೆಸ್ಟ್ ರಂಗಕ್ಕೆ ಕಾಲಿಟ್ಟಿದ್ದ ಸೌರವ್ ಗಂಗೂಲಿ ಈಗ ಟಿವಿ ವೀಕ್ಷಕ ವಿವರಣೆಗಾರರಾಗಿ ಬಾಯಿಪಾಠ ಒಪ್ಪಿಸುತ್ತಿದ್ದಾರೆ. ಸುನೀಲ್ ಗಾವಸ್ಕರ್ ತಮ್ಮ ಬ್ಯಾಟಿಂಗ್‌ನಂತೆಯೇ ತಮಗಾಗಿ, ತಮ್ಮ ದಾಖಲೆಗಾಗಿ ಬಹಳ ರಕ್ಷಣಾತ್ಮಕವಾಗಿ, ಯಾರನ್ನೂ (ಮುಖ್ಯವಾಗಿ ಕೋಟಿಗಟ್ಟಲೇ ಸಂಭಾವನೆ ಕೊಡುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಎದುರುಹಾಕಿಕೊಳ್ಳದೇ, ಎಲ್ಲರಿಗೂ ಮೆಚ್ಚುಗೆಗೆ ಪಾತ್ರರಾಗುವಂತೆ ವೀಕ್ಷಕ ವಿವರಣೆ ಕೊಡುತ್ತ ಅತಿ ಬುದ್ಧಿವಂತಿಕೆಯಿಂದ ಕ್ರಿಕೆಟ್‌ನಲ್ಲಿ ಮುಂದುವರಿದಿದ್ದಾರೆ.

ರವಿ ಶಾಸ್ತ್ರಿ ಕೂಡ ಹಿರಿಯಣ್ಣನ ಹಿಂದೆಯೇ ಹೆಜ್ಜೆ ಇಟ್ಟಿದ್ದಾರೆ. ಇವರಿಬ್ಬರೂ ತಾವು ಆಡುವ ದಿನಗಳಲ್ಲಿ ಭಾರತ ಕ್ರಿಕೆಟ್ ಮಂಡಳಿಯ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದವರೇ. ಆಟಗಾರರಿಗೆ ಹಣ ಮಾಡುವ `ಕೌಶಲ~ವನ್ನು ಹೇಳಿಕೊಟ್ಟವರು ಗಾವಸ್ಕರ್ ಅವರೇ ಎಂದು ಅವರನ್ನು ತೀರ ಹತ್ತಿರದಿಂದ ಬಲ್ಲ ಹಿರಿಯ ಕ್ರಿಕೆಟ್ ವರದಿಗಾರರು ಹೇಳುತ್ತಿದ್ದರು.

ಮಾಜಿ ಕ್ರಿಕೆಟ್‌ಪಟುಗಳೆಲ್ಲ ಈಗ ಒಂದು ರೀತಿಯಲ್ಲಿ ರಾಜಕಾರಣಿಗಳೇ ಆಗುತ್ತಿರುವುದರಿಂದ ಇದು ಇಲ್ಲಿಗೇ ಮುಗಿಯುವ ಅಧ್ಯಾಯವಲ್ಲ. ಆದರೆ ರಾಹುಲ್ ಅವರಂಥ ಒಬ್ಬ ಸಭ್ಯ, ಸಮರ್ಥ ಆಟಗಾರ ಅವರನ್ನು ಹಿಂದೆ ನಡೆಸಿಕೊಂಡ ರೀತಿ ಹಾಗೂ ಈಗ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಬೇಸರವಾಗುತ್ತದೆ.

ಅವರನ್ನು ಈಗ ಇಂಗ್ಲೆಂಡ್ ವಿರುದ್ಧ ಅನಿವಾರ್ಯವಾಗಿ ಆರಿಸುವ ಆಯ್ಕೆ ಸಮಿತಿ (ಇದರಲ್ಲಿ ದೋನಿಯ ಮಾತೂ ನಡೆಯುತ್ತದೆ), ತಂಡದ ಮುಂದಿನ ಸರಣಿಗೆ ಉಳಿಸಿಕೊಳ್ಳುವುದೆಂಬ ನಂಬಿಕೆ ಯಾರಿಗೂ ಇಲ್ಲ. ರಾಹುಲ್ ಅವರಿಗೂ ಇಲ್ಲದಿರುವುದಕ್ಕೇ ಅವರು ನಿವೃತ್ತಿ ಪ್ರಕಟಿಸಿಬಿಟ್ಟಿದ್ದಾರೆ.

ಇವರಂತೆ ತಂಡಕ್ಕಾಗಿ ಮತ್ತು ತಂಡಕ್ಕಾಗಿ ಮಾತ್ರ ಆಡಿದ ಆಟಗಾರ ಮತ್ತೊಬ್ಬ ಸಿಗಲಿಕ್ಕಿಲ್ಲ. ವಿಕೆಟ್‌ಕೀಪಿಂಗ್ ಮಾಡೆಂದರೆ ಅದಕ್ಕೂ ಸೈ, ಸ್ಲಿಪ್‌ನಲ್ಲಿ ನಿಲ್ಲೆಂದರೆ ಅದಕ್ಕೂ ರೆಡಿ. ಆರಂಭ ಆಟಗಾರನಾಗಿ ಆಡಲೂ ಹಿಂಜರಿಯುವುದಿಲ್ಲ. ದೋನಿ ವಿಕೆಟ್‌ಕೀಪಿಂಗ್ ಗ್ಲೌಸ್ ಕಳಚಿ ಬೌಲಿಂಗ್ ಮಾಡಿದಂತೆ, ರಾಹುಲ್ ಕೈಗೂ ಚೆಂಡು ಕೊಟ್ಟಿದ್ದರೆ ಬಹುಶಃ ಅದಕ್ಕೂ ಅವರು ಇಲ್ಲ ಎನ್ನುತ್ತಿರಲಿಲ್ಲವೇನೋ! ಆದರೆ ರಾಹುಲ್ ಅವರನ್ನು ಭಾರತದ ಕ್ರಿಕೆಟ್ ವ್ಯವಸ್ಥೆ ಯಾವಾಗಲೂ ಎರಡನೇ ಸ್ಥಾನದಲ್ಲೇ ಇಟ್ಟಿದೆ.


ಇಂಗ್ಲೆಂಡ್‌ನಲ್ಲಿ ಭಾರತ ತಂಡ ಪರದಾಡುವ ನಿರೀಕ್ಷೆ ಇದ್ದೇ ಇತ್ತಾದ್ದರಿಂದ ಸೋಲಿನ ಬಗ್ಗೆ ಅಷ್ಟೇನೂ ಅನಿಸುವುದಿಲ್ಲ. ಆದರೆ ಸೋಲಿನ ರೀತಿ ಬೇಸರ ಮೂಡಿಸುತ್ತಿದೆ. ದೋನಿ ಮುಖದ ಮೇಲಿನ ತುಂಟ ನಗೆ ಮಾಯವಾಗಿಹೋಗಿದೆ. ಬೆಲ್ ಅವರನ್ನು ವಾಪಸ್ಸು ಆಡಲು ಕರೆದು ಕ್ರೀಡಾಮನೋಭಾವವನ್ನು ಮೆರೆದದ್ದು ಮೆಚ್ಚಬೇಕಾದ ಅಂಶವೇ ಆದರೂ ಅದು ಸೋಲಿಗೆ ಸಮಾಧಾನವಾಗುವುದಿಲ್ಲ.
 
ಮುಂದೆ ಇಂಗ್ಲೆಂಡ್ ತಂಡ ಭಾರತಕ್ಕೆ ಬಂದಾಗ ಸೇಡು ತೀರಿಸಿಕೊಳ್ಳುವ ಅವಕಾಶ ಇದೆಯಾದರೂ ಈಗಂತೂ ಇಂಗ್ಲೆಂಡ್‌ನವರು ಗೆಲುವಿನ ಕೇಕೆ ಹಾಕುತ್ತಿದ್ದಾರೆ.
 
2011 ರ ವಿಶ್ವ ಕಪ್‌ನಲ್ಲಿ ಭಾರತ ವಿರುದ್ಧ ಸೋಲದಿದ್ದರೂ, ಐರ್ಲೆಂಡ್‌ನಂಥ `ಬಚ್ಚಾ~ ಕೈಲಿ ಬಡಿಸಿಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಮುಖಭಂಗವಾಗಿತ್ತು. ಭಾರತ ವಿರುದ್ಧ ಇಂಗ್ಲೆಂಡ್‌ಗೆ ಯಾವಾಗಲೂ ಹೊಟ್ಟೆಯುರಿ.

ತಾವೇ ಕಲಿಸಿದ ಆಟದಲ್ಲಿ ತಮ್ಮನ್ನೇ ಮೀರಿಸಿ, ಎರಡು ಸಲ ವಿಶ್ವ ಕಪ್ ಗೆದ್ದಿರುವುದಲ್ಲದೇ, ಕ್ರಿಕೆಟ್ ರಂಗದಲ್ಲಿ ಹಣದ ಹೊಳೆಯನ್ನೇ ಹರಿಸಿದ ಭಾರತ ವಿರುದ್ಧ ಬಿಳಿಯರಿಗೆ ಅಸೂಯೆ ತುಂಬಿತುಳುಕುತ್ತದೆ. ಹೊರಗೆ ತೋರಿಸಿಕೊಳ್ಳದಿದ್ದರೂ, ಭಾರತಕ್ಕಿಂತ ತಾವೇ ಶ್ರೇಷ್ಠ ಕ್ರಿಕೆಟ್‌ಪಟುಗಳು ಎಂಬ ಅಹಂ ಇಂಗ್ಲೆಂಡ್ ಆಟಗಾರರಲ್ಲಿದೆ.

ಆ ಸೊಕ್ಕನ್ನು ಮುರಿಯಬೇಕೆಂದರೆ, ಒಂದು ದಿನದ ಸರಣಿಯಲ್ಲಾದರೂ ಭಾರತ ವಿಜೃಂಭಿಸಬೇಕು. ರಾಹುಲ್ ದ್ರಾವಿಡ್ ಟೆಸ್ಟ್‌ನಂತೆ ಆ ಪಂದ್ಯಗಳಲ್ಲಿಯೂ ತಂಡದ ಬ್ಯಾಟಿಂಗ್ ಬಲಪಡಿಸಬೇಕು. ಅದು ಭಾರತ ತಂಡದ ಆಯ್ಕೆಗಾರರಿಗೂ ಉತ್ತರ ಕೊಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT