ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಪ್ರಾಯಶ್ಚಿತ್ತ ತೀರಾ ವಿಳಂಬ, ಅತ್ಯಲ್ಪ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಚುನಾವಣೆಯ ಸಂದರ್ಭದಲ್ಲಿ ಮತ‌ದಾನದ ದಿನದವರೆಗೆ ಮತದಾರರ ಓಲೈಕೆಗೆ ರಾಜಕಾರಣಿಗಳು ಯಾವ ಮಟ್ಟಕ್ಕೆ ಇಳಿಯಬಹುದು ಎಂಬುದನ್ನು ಕಾಂಗ್ರೆಸ್‌ ಪಕ್ಷಕ್ಕೆ ಶೀಘ್ರವೇ ಅಧ್ಯಕ್ಷರಾಗಲಿರುವ ರಾಹುಲ್‌ ಗಾಂಧಿ ಅವರು ಗುಜರಾತ್‌ನ ಸೋಮನಾಥ ಮಂದಿರಕ್ಕೆ ಇತ್ತೀಚೆಗೆ ನೀಡಿದ ಭೇಟಿಯ ಸುತ್ತಲೂ ಸುತ್ತಿಕೊಂಡಿರುವ ವಿವಾದ ತೋರಿಸಿಕೊಡುತ್ತಿದೆ. ಆದರೆ, ತಾನು ಕಟ್ಟಾ ಶಿವಭಕ್ತನೆಂದು ಹೇಳಿಕೊಂಡು ದೇವಾಲಯ ಸುತ್ತುವ ಹುಮ್ಮಸ್ಸಿನಲ್ಲಿರುವ ರಾಹುಲ್‌ ತಮ್ಮ ಮುತ್ತಜ್ಜ ಜವಾಹರಲಾಲ್‌ ನೆಹರೂ ಅವರ ಹುಸಿ ಜಾತ್ಯತೀತವಾದ ಮತ್ತು ಹಿಂದೂವಿರೋಧಿ ನೀತಿಯ ಪರಂಪರೆ ಹೊಂದಿರುವ ಪಕ್ಷದ ನೇತೃತ್ವ ವಹಿಸಿಕೊಳ್ಳಲಿರುವುದು ಅತ್ಯಂತ ದೊಡ್ಡ ವಿರೋಧಾಭಾಸ.

ಘಜನಿ ಮುಹಮ್ಮದ್, ಅಲ್ಲಾವುದ್ದೀನ್‌ ಖಿಲ್ಜಿ, ಔರಂಗಜೇಬ್‌ ಮತ್ತು ಇಸ್ಲಾಂನ ಯೋಧರು ಎಂದು ತಮ್ಮನ್ನು ಕರೆದುಕೊಂಡ ಇತರ ಹಲವರು ಹತ್ತಾರು ಬಾರಿ ಸುಲಿಗೆ ಮಾಡಿ ನಾಶ ಮಾಡಿದ ಸೋಮನಾಥ ಮಂದಿರದ ಮರುನಿರ್ಮಾಣವನ್ನು ತಡೆಯಲು ತಮಗೆ ಸಾಧ್ಯವಿದ್ದ ಎಲ್ಲವನ್ನೂ ದೇಶದ ಮೊದಲ ಪ್ರದಾನಿ ಜವಾಹರಲಾಲ್‌ ನೆಹರೂ ಮಾಡಿದ್ದರು ಎಂಬುದನ್ನು ಭಾರತದ ಜನರು ಮರೆತಿಲ್ಲ. ರಾಹುಲ್‌ ಅವರ ‘ಆಪರೇಷನ್‌ ಸೋಮನಾಥ’ ಮುಗ್ಗರಿಸಲು ಮುಖ್ಯ ಕಾರಣಗಳಲ್ಲಿ ಇದೂ ಒಂದು.

ರಾಷ್ಟ್ರೀಯ ವೈಭವದ ಮರುಸ್ಥಾಪನೆಗೆ ತಮ್ಮ ಅತ್ಯಂತ ಪವಿತ್ರ ದೇಗುಲವಾದ ಸೋಮನಾಥ ದೇವಾಲಯವನ್ನು ಮರುನಿರ್ಮಾಣ ಮಾಡುವುದು ಬಹಳ ಮುಖ್ಯ ಎಂದು ಸ್ವಾತಂತ್ರ್ಯಾನಂತರ ಭಾರತದ ಬಹುಸಂಖ್ಯಾತ ಜನರು ಭಾವಿಸಿದ್ದರು. ಆದರೆ, ಶಿಥಿಲವಾಗಿದ್ದ ದೇವಾಲಯವನ್ನು ಅದು ಇದ್ದ ಸ್ಥಿತಿಯಲ್ಲಿಯೇ ಸಂರಕ್ಷಿಸಲು ಭಾರತದ ಪುರಾತತ್ವ ಇಲಾಖೆಗೆ ನೀಡಲು ನೆಹರೂ ನೇತೃತ್ವದ ಸರ್ಕಾರ ಬಯಸಿತ್ತು. ಸೋಮನಾಥ ದೇವಾಲಯದ ಮರುನಿರ್ಮಾಣ ಮತ್ತು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಎಂದು ಹಿಂದೂಗಳು ಗೌರವಿಸುವ ಲಿಂಗದ ಮರುಸ್ಥಾಪನೆ ಆಗುವ ತನಕ ಗಾಯಗೊಂಡಿರುವ ದೇಶದ ಆತ್ಮಾಭಿಮಾನಕ್ಕೆ ಶಮನ ದೊರೆಯದು ಎಂದು ನೆಹರೂ ಸಂಪುಟದ ಸದಸ್ಯರಾಗಿದ್ದ ಸರ್ದಾರ್‌ ಪಟೇಲ್‌, ಕೆ.ಎಂ. ಮುನ್ಶಿ ಮತ್ತು ಎನ್‌.ವಿ. ಗಾಡ್ಗೀಳ್ ಮತ್ತು ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್‌ ದೃಢ ನಿಲುವು ತಳೆದರು. ಮುಸ್ಲಿಂ ಆಕ್ರಮಣ ಮತ್ತು ಹಿಂದೂ ದೇವಾಲಯಗಳ ಮೇಲೆ ಈ ಆಕ್ರಮಣಕಾರರು ನಡೆಸಿದ ದಾಳಿಯ ಇತಿಹಾಸದಿಂದಾಗಿ ಸೋಮನಾಥ ದೇವಾಲಯದ ಘನತೆಯನ್ನು ಮರುಸ್ಥಾಪಿಸದಿದ್ದರೆ ರಾಷ್ಟ್ರೀಯ ಸ್ವಾಭಿಮಾನ ಮರುಸ್ಥಾಪನೆ ಆಗದು ಎಂದು ಅವರು ಭಾವಿಸಿದ್ದರು. ಆದರೆ, ನೆಹರೂ ತಮ್ಮ ನಿಲುವು ಸಡಿಲಿಸಲಿಲ್ಲ. ಸೋಮನಾಥ ದೇವಾಲಯದ ಮರು ನಿರ್ಮಾಣ ತಮ್ಮ ಸರ್ಕಾರದ ‘ಜಾತ್ಯತೀತ’ ಲಕ್ಷಣಕ್ಕೆ ಹಾನಿ ಉಂಟು ಮಾಡಬಹುದು ಎಂಬ ಕಾರಣಕ್ಕೆ ಇದನ್ನು ನೆಹರೂ ವಿರೋಧಿಸಿದರು. ಸರ್ದಾರ್‌ ಪಟೇಲ್‌ ಮಾತ್ರವಲ್ಲದೆ, ರಾಜೇಂದ್ರ ಪ್ರಸಾದ್‌ ಮತ್ತು ವಿದ್ವಾಂಸ, ಮುತ್ಸದ್ದಿ ಮತ್ತು ಸಂಪುಟದ ಸದಸ್ಯರಾಗಿದ್ದ ಕೆ.ಎಂ. ಮುನ್ಶಿ ಅವರ ಜತೆಗೆ ನೆಹರೂ ಹೊಂದಿದ್ದ ಸಂಬಂಧವೂ ಈ ಆಕ್ಷೇಪದಿಂದಾಗಿ ಹಾಳಾಯಿತು.

ಸರ್ಕಾರದ ಹಣವನ್ನು ಈ ಯೋಜನೆಗೆ ಬಳಸಿಕೊಳ್ಳ ಬಾರದು ಎಂಬುದು ನೆಹರೂ ಅವರು ಮೊದಲ ಆಕ್ಷೇಪವಾಗಿತ್ತು. ಎರಡನೆಯದಾಗಿ, ತಮ್ಮ ಸರ್ಕಾರದ ಸದಸ್ಯರು ಮತ್ತು ರಾಷ್ಟ್ರಪತಿ ಈ ಯೋಜನೆಯೊಂದಿಗೆ ಗುರುತಿಸಿಕೊಳ್ಳಬಾರದು. ಸರ್ದಾರ್‌ ಪಟೇಲ್‌ ಅವರು ಈ ವಿಚಾರವನ್ನು ಮಹಾತ್ಮ ಗಾಂಧಿ ಅವರ ಬಳಿಗೆ ಒಯ್ದರು. ದೇವಾಲಯ ಮರುನಿರ್ಮಾಣ ಯೋಜನೆಗೆ ಮಹಾತ್ಮ ಗಾಂಧಿ ಸಂಪೂರ್ಣ ಬೆಂಬಲ ನೀಡಿದರು. ಆದರೆ, ಟ್ರಸ್ಟೊಂದನ್ನು ರಚಿಸಿ ಅದರ ಮೂಲಕ ಈ ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಹಣವನ್ನು ಜನರಿಂದ ಸಂಗ್ರಹಿಸಬೇಕು ಎಂದು ಅವರು ಹೇಳಿದರು. ನೆಹರೂ ಅವರ ಆಕ್ಷೇಪದಿಂದ ವಿಚಲಿತರಾಗದ ಪಟೇಲ್‌, ಮುನ್ಶಿ ಮತ್ತು ಗಾಡ್ಗೀಳ್ ಅವರು ಮಹಾತ್ಮ ಗಾಂಧಿ ಸಲಹೆಯಂತೆ ತಕ್ಷಣವೇ ಟ್ರಸ್ಟೊಂದನ್ನು ಸ್ಥಾಪಿಸಿ, ಜನರಿಂದ ಹಣ ಸಂಗ್ರಹಿಸಿ ದೇವಾಲಯ ಮರುನಿರ್ಮಾಣ ಕೆಲಸ ಆರಂಭಿಸಿದರು. ಸಂಪುಟದ ಸದಸ್ಯರು ಈ ಯೋಜನೆಯಲ್ಲಿ ಭಾಗಿಯಾಗಬಾರದು ಎಂಬ ನೆಹರೂ ಒತ್ತಾಯವನ್ನು ಅವರು ನಿರ್ಲಕ್ಷಿಸಿದರು. ಸೋಮನಾಥ ದೇವಾಲಯದ ಮರುನಿರ್ಮಾಣ ಪವಿತ್ರ ಕಾರ್ಯವಾಗಿದ್ದು ಎಲ್ಲರೂ ಅದರಲ್ಲಿ ಭಾಗಿಯಾಗಬೇಕು ಎಂದು ಪಟೇಲ್‌ ಘೋಷಿಸಿದರು. ಇದಕ್ಕೆ ಸಂಬಂಧಿಸಿ ಪಟೇಲ್‌ ಅವರು ಬರೆದ ಪತ್ರದ ಸಾಲುಗಳನ್ನು ಮುನ್ಶಿ ಉಲ್ಲೇಖಿಸಿದ್ದರು: ‘ಈ ದೇವಾಲಯಕ್ಕೆ ಸಂಬಂಧಿಸಿ ಹಿಂದೂಗಳ ಭಾವನೆ ಬಲವಾಗಿದೆ ಮತ್ತು ವ್ಯಾಪಕವಾಗಿದೆ... ಮೂರ್ತಿಯ ಮರುಸ್ಥಾಪನೆ ಹಿಂದೂಗಳ ಗೌರವ ಮತ್ತು ಭಾವನೆಗೆ ಸಂಬಂಧಿಸಿದ ವಿಚಾರ’ ಎಂದು ಈ ಪತ್ರದಲ್ಲಿ ಬರೆಯಲಾಗಿತ್ತು.

ತಮ್ಮ ಕನಸು ಸಾಕಾರಗೊಳ್ಳುವುದನ್ನು ನೋಡಲು ಪಟೇಲ್ ಇರಲಿಲ್ಲ ಎಂಬುದು ದುಃಖದ ಸಂಗತಿ. 1950ರ ಡಿಸೆಂಬರ್‌ 15ರಂದು ಅವರು ನಿಧನರಾದರು.  ದೇವಾಲಯದ ಕೆಲಸ ಅತ್ಯಂತ ತ್ವರಿತಗತಿಯಲ್ಲಿ ಸಾಗಿತು ಮತ್ತು ಆಡಳಿತ ಮಂಡಳಿಯವರು ಲಿಂಗದ ಮರುಸ್ಥಾಪನೆ ಮತ್ತು ದೇವಾಲಯದ ಪುನರ್‌ಪ್ರತಿಷ್ಠಾಪನೆಗೆ ಸಿದ್ಧವಾದರು. ರಾಜೇಂದ್ರ ಪ್ರಸಾದ್‌ ಅವರು ಈ ಸಮಾರಂಭದಲ್ಲಿ ಭಾಗವಹಿಸುವುದನ್ನು ನೆಹರೂ ಆಕ್ಷೇಪಿಸಿದರು. ಇದು ತಮ್ಮ ಸರ್ಕಾರದ ಜಾತ್ಯತೀತ ಲಕ್ಷಣಗಳಿಗೆ ಹಾನಿ ಮಾಡುತ್ತದೆ ಎಂದು ಹೇಳಿದರು. ನೆಹರೂ ನೀಡಿದ ಅನಪೇಕ್ಷಿತ ಸಲಹೆಯನ್ನು ರಾಜೇಂದ್ರ ಪ್ರಸಾದ್‌ ನಿರ್ಲಕ್ಷಿಸಿ ದೇವಾಲಯದ ಪುನರ್‌ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದರು. ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿದ್ದರೂ ಈ ಕಾರ್ಯಕ್ರಮದ ಜತೆಗೆ ಸರ್ಕಾರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ನೆಹರೂ ಹೇಳಿದರು. ಕಾರ್ಯಕ್ರಮದ ಮುಖ್ಯ ಸಂಘಟಕ ಮುನ್ಶಿ ಅವರು ನೆಹರೂ ಅವರ ಸಿಟ್ಟಿಗೆ ಗುರಿಯಾಗಬೇಕಾಯಿತು ಮತ್ತು ಸಂಪುಟ ಸಭೆಗಳಲ್ಲಿ ಪ್ರಧಾನಿಯ ವ್ಯಂಗ್ಯದ ನುಡಿಗಳಿಗೆ ಪಕ್ಕಾಗಬೇಕಾಯಿತು. ಒಂದು ಸಂಪುಟ ಸಭೆಯಲ್ಲಿ ಸೋಮನಾಥ ಯೋಜನೆಯನ್ನು ನೆಹರೂ ಅವರು ‘ಹಿಂದೂ ಪುನರುತ್ಥಾನ’ದ ಕೃತ್ಯ ಎಂದು ಬಣ್ಣಿಸಿದರು. ಆದರೆ, ಮುನ್ಶಿ ತಮ್ಮ ದೃಢ ನಿಲುವು ಸಡಿಲಿಸಲಿಲ್ಲ. ‘ನಾವು ಮಾಡಿರುವ ಮತ್ತು ಮಾಡುತ್ತಿರುವ ಇತರ ಎಷ್ಟೋ ಕೆಲಸಗಳಿಗಿಂತ ಸೋಮನಾಥ ದೇವಾಲಯದ ಮರು ನಿರ್ಮಾಣದ ಯೋಜನೆಯು ಭಾರತದ ಸಾಮೂಹಿಕ ಸುಪ‍್ತಪ್ರಜ್ಞೆಗೆ ಖುಷಿ ಕೊಟ್ಟಿದೆ ಎಂದು ನಾನು ಭರವಸೆ ನೀಡುತ್ತೇನೆ’ ಎಂದು 1951ರ ಏಪ್ರಿಲ್‌ 24ರಂದು ಬರೆದ ಪತ್ರದಲ್ಲಿ ಮುನ್ಶಿ ಹೇಳಿದ್ದಾರೆ. ಭಾರತದ ರಾಷ್ಟ್ರೀಯತೆಯ ತಿರುಳು ಎಂದು ಅವರು ಏನನ್ನು ಭಾವಿಸಿದ್ದರೋ ಅದನ್ನು ವಿವರಿಸುವ ಮೂಲಕ ಈ ಪತ್ರವನ್ನು ಕೊನೆಗೊಳಿಸಿದ್ದರು.

‘ವರ್ತಮಾನದಲ್ಲಿ ಕೆಲಸ ಮಾಡಲು ಮತ್ತು ಭವಿಷ್ಯದ ಬಗ್ಗೆ ಆಶಾವಾದಿಯಾಗಿರಲು ಭೂತಕಾಲದ ಬಗ್ಗೆ ನಾನು ಹೊಂದಿರುವ ವಿಶ್ವಾಸವು ನನಗೆ ಶಕ್ತಿ ನೀಡಿದೆ. ಭಗವದ್ಗೀತೆಯನ್ನು ನಮ್ಮಿಂದ ಕಿತ್ತುಕೊಳ್ಳುತ್ತದೆ ಅಥವಾ ದೇವಾಲಯಗಳ ಬಗ್ಗೆ ನಮ್ಮ ಲಕ್ಷಾಂತರ ಜನರಿಗೆ ಇರುವ ನಂಬಿಕೆಯನ್ನು ಬುಡಮೇಲು ಮಾಡಿ ಆ ಮೂಲಕ ನಮ್ಮ ಜೀವನದ ಹೆಣಿಗೆಯನ್ನೇ ನಾಶಪಡಿಸುತ್ತದೆ ಎಂದಾದರೆ ಅಂತಹ ಸ್ವಾತಂತ್ರ್ಯಕ್ಕೆ ನಾನು ಬೆಲೆ ಕೊಡುವುದಿಲ್ಲ. ಸೋಮನಾಥ ದೇವಾಲಯ ಮರುನಿರ್ಮಾಣದ ನನ್ನ ನಿರಂತರ ಕನಸು ನನಸಾಗುವುದನ್ನು ನೋಡುವ ಸೌಭಾಗ್ಯ ನನಗೆ ಇದೆ. ನಮ್ಮ ಬದುಕಿನಲ್ಲಿ ಮಹತ್ವದ್ದಾದ ಈ ದೇಗುಲದ ಪುನರುತ್ಥಾನ ನಮ್ಮ ಜನರ ಧರ್ಮದ ಪರಿಕಲ್ಪನೆಯನ್ನು ಇನ್ನಷ್ಟು ಶುದ್ಧವಾಗಿಸುತ್ತದೆ ಮತ್ತು ಸ್ವಾತಂತ್ರ್ಯ ಹಾಗೂ ಅದರ ಪ್ರಯೋಗಗಳ ಈ ಮಹತ್ವದ ದಿನಗಳಲ್ಲಿ ನಮ್ಮ ಶಕ್ತಿಯ ಪ್ರಜ್ಞೆಯನ್ನು ಇನ್ನಷ್ಟು ಉಜ್ವಲವಾಗಿಸುತ್ತದೆ ಎಂದು ನನ್ನ ಮನಸ್ಸು ಖಚಿತವಾಗಿ ಹೇಳುತ್ತದೆ’.

ಪಟೇಲ್‌ ಮತ್ತು ಮುನ್ಶಿ ಅವರ ಮಾತುಗಳನ್ನು ನೆಹರೂ ಮತ್ತು ಕಾಂಗ್ರೆಸ್‌ ಪಕ್ಷ ಕೇಳಿದ್ದರೆ ನೆಹರೂ ಅವರ ಮರಿಮೊಮ್ಮಗ ತಮ್ಮ ಪಕ್ಷದ ‘ಹಿಂದೂ’ ಮನೋಭಾವವನ್ನು ಸಾಬೀತುಪಡಿಸಲು ಹೆಣಗುವ ಅಗತ್ಯ ಇರುತ್ತಿರಲಿಲ್ಲ. ನೆಹರೂ ಆಕ್ಷೇಪಗಳಿಗೆ ಮನ್ನಣೆ ಕೊಡದ ರಾಜೇಂದ್ರ ಪ್ರಸಾದ್‌ ಅವರು 1951ರ ಮೇ 11ರಂದು ನಡೆದ ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದರು.

ಸೋಮನಾಥನ ಬಗ್ಗೆ ರಾಹುಲ್‌ ಅವರಲ್ಲಿ ಮೂಡಿರುವ ದಿಢೀರ್ ಭಕ್ತಿ, ಸೋಮನಾಥ ದೇವಾಲಯದ ಬಗ್ಗೆ ನಿರ್ದಿಷ್ಟವಾಗಿ ಮತ್ತು ಹಿಂದೂ ಭಾವನೆಗಳ ಬಗ್ಗೆ ಒಟ್ಟಾಗಿ ನೆಹರೂ ಅವರು ಹೊಂದಿದ್ದ ಧೋರಣೆ ಮತ್ತು ಕಾಂಗ್ರೆಸ್‌ ಪಕ್ಷವು ಅನುಸರಿಸಿಕೊಂಡು ಬಂದ ಹಿಂದೂ ವಿರೋಧಿ ಹಾಗೂ ಹುಸಿ ಜಾತ್ಯತೀತ ನೀತಿಗಳ ಬಗ್ಗೆ ಗಮನ ಹರಿಸುವಂತೆ ಮಾಡಿವೆ. ಕೊನೆಯದಾಗಿ, ಹಿಂದೂಗಳ ಕುರಿತ ‘ನೆಹರೂ ಸಿದ್ಧಾಂತ’ದ ಬಗ್ಗೆ ನಮ್ಮಲ್ಲಿ ಇರುವ ಪುರಾವೆಗಳನ್ನು ಮುಂದಿಟ್ಟು ನೋಡಿದರೆ ಸೋಮನಾಥದಲ್ಲಿ ರಾಹುಲ್‌ ಮಾಡಿದ್ದು ತೀರಾ ವಿಳಂಬವಾದ ಮತ್ತು ಅತ್ಯಲ್ಪವಾದ ಪ್ರಾಯಶ್ಚಿತ್ತ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT