ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಎಸ್ಟೇಟ್‌ಗೆ ಪಾತಕಲೋಕ ಪ್ರವೇಶ

Last Updated 30 ಜುಲೈ 2011, 19:30 IST
ಅಕ್ಷರ ಗಾತ್ರ

ಕೊತ್ವಾಲ್ ರಾಮಚಂದ್ರನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಜಯರಾಜ್ ಅಪಾಯದ ತೂಗುಗತ್ತಿಯಿಂದ ಪಾರಾಗಿ ಬಿಡುಗಡೆಯಾದ. ಅವನು ತನ್ನ ಸುತ್ತ ಪ್ರಬಲ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದ. ಅವನ ಜೊತೆ ಒಳ ಗೊಳಗೇ ಸಖ್ಯ ಬೆಳೆಸಿಕೊಂಡಿದ್ದ ರಾಜಕಾರಣಿಗಳಿದ್ದರು. ರಷೀದ್ ಕೊಲೆ ಪ್ರಕರಣದಲ್ಲಿ ಅವನ ಮನೆಯೇ ಹೇಗೆ ಗುಪ್ತ ಸಮಾಲೋಚನೆಯ ತಾಣವಾಗಿತ್ತು ಎಂಬುದನ್ನು ವಿವರವಾಗಿ ನಾನು ಈ ಹಿಂದೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಜಯರಾಜ್ ಕೂಡ ಕೆಲವರ ವಿಷಯದಲ್ಲಿ ವೀರಪ್ಪನ್ ತರಹವೇ ಆಗಿಬಿಟ್ಟಿದ್ದ. ಸಣ್ಣ ಪುಟ್ಟ ಗಲಾಟೆಗಳನ್ನು ಫೈಸಲು ಮಾಡಲು ಅವನ ಬಳಿಗೆ ಹೋದವರಿದ್ದರು.

ಆ ಕಾಲಘಟ್ಟದಲ್ಲಿ ಪೊಲೀಸ್ ಇಲಾಖೆಯಲ್ಲೇ ಎಸಿಪಿ ಆಗಿದ್ದ ಒಬ್ಬರು ಜಯಮಹಲ್‌ನಲ್ಲಿ ಮನೆ ಕಟ್ಟಿ ಬಾಡಿಗೆಗೆ ಕೊಟ್ಟಿದ್ದರು. ಚಿಕ್ಕಪೇಟೆಯಲ್ಲಿ ಸಿದ್ಧ ಉಡುಪುಗಳ ವ್ಯಾಪಾರ ಮಾಡುತ್ತಿದ್ದವರ ದೊಡ್ಡ ಕೂಡುಕುಟುಂಬ ಅಲ್ಲಿ ವಾಸವಿತ್ತು. ದಶಕಗಳಿಂದ ಅವರು ಆ ಮನೆಯಲ್ಲಿ ಸಂತೋಷವಾಗಿದ್ದರು.  ಜಯಮಹಲ್ ಆಗ ಬೆಂಗಳೂರಿನ ಹೊರವಲಯದ ತರಹವೇ ಇದ್ದಂಥ ಪ್ರದೇಶ. ಹಾಗಾಗಿ ಅಲ್ಲಿ ಬಾಡಿಗೆ ತುಟ್ಟಿಯೇನೂ ಆಗಿರಲಿಲ್ಲ. ಮನೆ ಮಾಲೀಕರಾಗಿದ್ದ ಎಸಿಪಿ ಹಾಗೂ ಆ ಬಾಡಿಗೆದಾರರ ಸಂಬಂಧ ತುಂಬಾ ಚೆನ್ನಾಗಿತ್ತು. ದುರದೃಷ್ಟವಶಾತ್ ಆ ಎಸಿಪಿ ತೀರಿಕೊಂಡರು. ಬೆಂಗಳೂರು ಆಗಿನ್ನೂ ಬೆಳೆಯ ತೊಡಗಿತ್ತು. ಆ ಎಸಿಪಿ ಪತ್ನಿಗೆ ಹೆಚ್ಚು ಬಾಡಿಗೆಯ ಆಸೆ ಹುಟ್ಟಿತು. ಬಹಳ ವರ್ಷಗಳಿಂದ ವಾಸವಿದ್ದ ವ್ಯಾಪಾರಿಗಳನ್ನು ಖಾಲಿ ಮಾಡಿಸಿದರೆ, ಹೊಸದಾಗಿ ಬರುವವರಿಂದ ಹೆಚ್ಚು ಮುಂಗಡ ಹಣ ಹಾಗೂ ಬಾಡಿಗೆ ಸಿಗುತ್ತದೆಂಬುದನ್ನು ಯಾರೋ ಅವರ ತಲೆಗೆ ಹಾಕಿದ್ದರು. ಮನೆ ಖಾಲಿ ಮಾಡುವಂತೆ ಬಾಡಿಗೆ ದಾರರಿಗೆ ಹೇಳಿದರು.
 
ಆ ಮನೆಯಿಂದ ತಮಗೆ ಒಳ್ಳೆಯದಾಗಿದೆ ಎಂದ ವ್ಯಾಪಾರಿಗಳು ಸ್ವಲ್ಪ ಹೆಚ್ಚು ಬಾಡಿಗೆಯನ್ನು ಕೊಡಲು ಕೂಡ ಸಿದ್ಧರಿದ್ದರು. ಆದರೆ, ಎಸಿಪಿ ಪತ್ನಿ ಅದರಿಂದ ತೃಪ್ತರಾಗಲಿಲ್ಲ. ಸುಸಂಸ್ಕೃತ ರಾಗಿದ್ದ ಆ ವ್ಯಾಪಾರಿಗಳ ಕುಟುಂಬದವರೂ ಪಟ್ಟು ಬಿಡಲಿಲ್ಲ. ಆ ಮನೆಯನ್ನು ಸುಲಭಕ್ಕೆ ಖಾಲಿ ಮಾಡುವ ಮಾತಾಡಲಿಲ್ಲ. ಮಾಲೀಕರ ಮನಸ್ಸು ಬದಲಾಗ ಬಹುದು ಎಂದು ನಿರೀಕ್ಷಿಸತೊಡಗಿದರು.

ಜಯರಾಜ್ ಅಣ್ಣ ಆ ಎಸಿಪಿ ಪತ್ನಿಗೆ ಪರಿಚಿತನಾಗಿದ್ದ. ಅವನನ್ನು ಸಂಪರ್ಕಿಸಿ ತಮ್ಮ ಮನೆಯನ್ನು ಖಾಲಿ ಮಾಡಿಸಿಕೊಡಬೇಕೆಂದು ಕೇಳಿ ಕೊಂಡರು. ತಮ್ಮ ಗಂಡನೇ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖೆಯನ್ನೇ ಅವರು ನಂಬಲಿಲ್ಲ. ನ್ಯಾಯಾಲಯದ ಮೊರೆಹೋಗಲೂ ಇಲ್ಲ. ಬದಲಿಗೆ ಪಾತಕಲೋಕದಲ್ಲಿ ಹೆಸರಾಗಿದ್ದ ಜಯರಾಜ್‌ಗೆ ತಮ್ಮ ಕೆಲಸ ಒಪ್ಪಿಸಿದರು.

ಜಯರಾಜ್ ಕಡೆಯ ಕೆಲವರು ಚಿಕ್ಕಪೇಟೆಯಲ್ಲಿದ್ದ ಆ ವ್ಯಾಪಾರಿಯ ಅಂಗಡಿಗೆ ನುಗ್ಗಿದರು. ರೌಡಿಗಳು ನುಗ್ಗಿದ್ದನ್ನು ಕಂಡು ವ್ಯಾಪಾರಿಗಳು ದಿಗ್ಭ್ರಾಂತರಾದರು. `ಸುಮ್ಮನೆ ಮನೆ ಖಾಲಿ ಮಾಡಬೇಕು. ಇಲ್ಲವಾದರೆ ಎಲ್ಲಾ ಸಾಮಾನುಗಳನ್ನು ಹೊರಗೆ ಹಾಕುತ್ತೇವೆ~ ಎಂದು ಅವರೆಲ್ಲಾ ದಬಾಯಿಸಿದರು. ಅಂಗಡಿಯನ್ನೂ ಚಿಂದಿ ಮಾಡುವುದಾಗಿ ಧಮಕಿ ಹಾಕಿದರು. ಅಂಗಡಿಯಲ್ಲಿದ್ದ ಕೆಲವರಂತೂ ನಡುಗಿಹೋದರು.
ನನಗೆ ಆ ವ್ಯಾಪಾರಿಗಳ ಪರಿಚಯವಿತ್ತು. ಅವರು ನನ್ನ ಹತ್ತಿರ ಬಂದು ಸಹಾಯ ಮಾಡುವಂತೆ ಕೇಳಿಕೊಂಡರು. ಇಬ್ಬರನ್ನೂ ಕರೆಸಿ ಮಾತಾಡೋಣ ಎಂದುಕೊಂಡು ನಾನು ಸುಮ್ಮನಾದೆ. ಆದರೆ, ದಿನದಿಂದ ದಿನಕ್ಕೆ ಜಯರಾಜ್ ಒತ್ತಡ ಅವರ ಮೇಲೆ ಜಾಸ್ತಿಯಾಯಿತು. ಅವರು ಮತ್ತೊಮ್ಮೆ ನನ್ನಲ್ಲಿ ಅಳಲು ತೋಡಿಕೊಂಡರು. ಜಯರಾಜ್ ಜೊತೆ ಮಾತನಾಡಿ, ಯಾಕೆ ಹಾಗೆ ಮಾಡುತ್ತಿರುವೆ ಎಂದು ಕೇಳಿದೆ. `ನಿಮ್ಮ ಇಲಾಖೆಯಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಯ ಪತ್ನಿ ಕಷ್ಟದಲ್ಲಿದ್ದಾರೆ. ಮಹಿಳೆಗೆ ನ್ಯಾಯ ಬೇಕಿರುವುದರಿಂದ ನಾವು ಒತ್ತಡ ಹಾಕುತ್ತಿದ್ದೇವೆ ಅಷ್ಟೆ~ ಎಂದು ಜಯರಾಜ್ ಸಮಜಾಯಿಷಿ ಕೊಟ್ಟ. ನಾನು ಎಸಿಪಿ ಪತ್ನಿಯವರನ್ನು ಸಂಪರ್ಕಿಸಿದೆ.

ಭೂಗತಲೋಕದವರನ್ನು ಈ ವಿಷಯದಲ್ಲಿ ಎಳೆದುತಂದರೆ ಪೊಲೀಸರು ಮಧ್ಯೆ ಪ್ರವೇಶಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಆಮೇಲೆ ಬಾಡಿಗೆದಾರರು ಹಾಗೂ ಮಾಲೀಕರು ಪರಸ್ಪರ ಮಾತಾಡಿದರು. ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ಆ ವ್ಯಾಪಾರಿಗಳು ಮನೆ ಖಾಲಿ ಮಾಡಿಕೊಂಡು ಹೋದರು. ಪೊಲಿಸ್ ವ್ಯವಸ್ಥೆಯ ಅರಿವಿರುವವರೇ ಹೀಗೆ ಮಾಡುವಾಗ ಇನ್ನು ಸಾಮಾನ್ಯ ಜನರು ಸಮಸ್ಯೆ ಬಗೆಹರಿಸಿಕೊಡುವಂತೆ ಪಾತಕಲೋಕದವರ ಮೊರೆಹೋಗದೇ ಇರುತ್ತಾರೆಯೇ?

ರಿಯಲ್ ಎಸ್ಟೇಟ್ ದಂಧೆಯಲ್ಲಿ ಮುಂಬೈ ಹಾಗೂ ಬೆಂಗಳೂರು ಭೂಗತಲೋಕದವರು ಈಗಲೂ ಸಹ ಮೂಗುತೂರಿಸುತ್ತಿರುವುದು ಇಂಥ ಜನರಿರುವುದ ರಿಂದಲೇ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಹಾಕಿದರೆ, ಎಷ್ಟು ವರ್ಷಕ್ಕೆ ಕೇಸು ಮುಗಿಯು ವುದೋ ಸ್ಪಷ್ಟವಿಲ್ಲ. ಸಿವಿಲ್ ಕೇಸುಗಳಿಗೆ ಪೊಲೀಸರು ಕಾನೂನಿನ ಪ್ರಕಾರ ತಲೆಹಾಕುವಂತಿಲ್ಲ. ಹಾಗಾಗಿ ಜನ ಭೂಗತಲೋಕದವರ ಮೊರೆಯಿಡುತ್ತಾರೆ. ಅದನ್ನು ಭೂಗತಲೋಕದವರು ದುರುಪಯೋಗಪಡಿಸಿ ಕೊಳ್ಳುತ್ತಾರೆ. ಖಾಲಿ ಮಾಡಿದ ಜಾಗದಲ್ಲಿ ಪಾಲು ಕೇಳುತ್ತಾರೆ ಅಥವಾ ಆ ಜಾಗವನ್ನು ತಮಗೆ ಮಾರುವಂತೆ ಒತ್ತಡ ಹಾಕುತ್ತಾರೆ. ಒಮ್ಮೆ ಪಾತಕಲೋಕದವರಿಗೆ ತಗುಲಿಹಾಕಿಕೊಂಡರೆ ಮುಗಿಯಿತು; ಅವರು ಹೇಳಿದಂತೆ ಕೇಳದೇ ವಿಧಿಯಿಲ್ಲ. ಭೂಮಿಯ ಬೆಲೆ ಗಗನಕ್ಕೇರತೊಡಗಿದ ನಂತರ ಈ ದಂಧೆ ವ್ಯಾಪಕವಾಯಿತು. ಸರ್ಕಾರಿ ಜಾಗಗಳು, ಗೋಮಾಳಗಳನ್ನು ತಮ್ಮದೇ ಎಂದು ಬಿಂಬಿಸಿಕೊಂಡು ಯಾರ‌್ಯಾರಿಗೋ ಬಾಡಿಗೆ ಕೊಟ್ಟು, ಹಣ ವಸೂಲಿ ಮಾಡಿದ ದಂಧೆಕೋರರು ಅನೇಕರಿದ್ದಾರೆ.

ಎಕರೆಗಟ್ಟಲೆ ಜಮೀನುಗಳನ್ನು ಖರೀದಿಸಿ, ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಅರ್ಥ ಮಾಡಿಕೊಂಡು ಹಣ ಮಾಡುವುದು ಇನ್ನೊಂದು ಅಡ್ಡದಾರಿ. ನಿವೇಶನಗಳನ್ನು ಮಾಡಲು ಹಲವಾರು ನಿಯಮಗಳಿವೆ. ಬಿಡಿಎ, ಬಿಎಂಆರ್‌ಡಿ ಮೊದಲಾದ ಸ್ಥಳೀಯ ಸರ್ಕಾರಿ ಸಂಸ್ಥೆಗಳ ಅನುಮತಿ ಪಡೆದೇ ನಿವೇಶನಗಳನ್ನು ವಿಂಗಡಿಸಬೇಕೆನ್ನುವುದು ಈಗಿನ ನಿಯಮ.

`ಗ್ರಾಮ್ ಠಾಣಾ~, `ಡಿ.ಸಿ. ಕನ್ವರ್ಷನ್~ ಎಂದು ಹೇಳಿ ಸೈಟುಗಳನ್ನು ವಿಂಗಡಿಸಿ ಮಾರಿದ ಅನೇಕ ದಂಧೆಕೋರರಿಂದ ಕಷ್ಟ ಅನುಭವಿಸಿ ಹಣ ಕಳೆದುಕೊಂಡ ಕೆಲವು ಅಮಾಯಕರು ಈಗಲೂ ಆ ಶಾಕ್‌ನಿಂದ ಹೊರಬಂದಿಲ್ಲ. ನಿವೇಶನಗಳಾಗಿ ಮಾರ್ಪಡಿಸುವ ಹಂತದ್ಲ್ಲಲಿ ತಮ್ಮದೇ ಶೆಡ್‌ಗಳನ್ನು ಕಟ್ಟಿಕೊಂಡು ಗ್ರಾಹಕರನ್ನು ದಂಧೆಕೋರರು ನಂಬಿಸುತ್ತಾರೆ. ರೆವಿನ್ಯೂ ನಿವೇಶನ ಕಾನೂನುಬಾಹಿರ ಎಂಬುದು ಗೊತ್ತಿದ್ದೂ ಜನರು ಕಡಿಮೆ ಬೆಲೆಗೆ ಸಿಗುತ್ತದೆಂಬ ಕಾರಣಕ್ಕೆ ಮುಗಿಬೀಳುತ್ತಾರೆ. ಮುಂದೆ ಆಪತ್ತು ಬರಬಹುದು ಎಂದು ಯೋಚಿಸುವುದೇ ಇಲ್ಲ. ಇಂಥ ದಂಧೆಯ ಹಿಂದೆ ರಾಜಕಾರಣಿಗಳಿರುತ್ತಾರೆ.

`ಗ್ರೀನ್‌ಬೆಲ್ಟ್~ ಪ್ರದೇಶದಲ್ಲಿ ನಿವೇಶನಗಳನ್ನು ಮಾಡುವುದೂ ದೊಡ್ಡ ದಂಧೆ. ಸ್ಥಳೀಯ ರೈತ ಅದರ ಮಾಲೀಕನಾಗಿರುತ್ತಾನೆ. ಭೂಗತಲೋಕದ ಒಬ್ಬ ಅವನ ಮೇಲೆ ಒತ್ತಡ ಹಾಕಿ `ಪವರ್ ಆಫ್ ಅಟಾರ್ನಿ~ ಪಡೆದು ಗ್ರಾಹಕರಿಗೆ ಜಾಗವನ್ನು ನೋಂದಾಯಿ ಸುತ್ತಾನೆ. ಹಣವೆಲ್ಲಾ ಕೈಸೇರಿದ ನಂತರ ಭೂಮಾಲೀಕ ರೈತನನ್ನು ಅದೇ ಗ್ರಾಹಕನ ಮೇಲೆ ಛೂ ಬಿಡುತ್ತಾನೆ. ಆಗ ಅದು ನಿವೇಶನ ಮಾಡುವ ಜಾಗವಲ್ಲ ಎಂಬುದು ಅರಿವಾಗಿ ಕೊಂಡವನು ಬೆಚ್ಚಿಬೀಳಿತ್ತಾನೆ. ಒಂದು ಲಕ್ಷಕ್ಕೆ ಜಾಗ ಖರೀದಿಸಿದ್ದರೆ, `ಎರಡು ಲಕ್ಷ ತೆಗೆದುಕೊಳ್ಳಿ, ಸುಮ್ಮನೆ ಜಾಗ ಬಿಟ್ಟುಬಿಡಿ. ನಮಗೂ ಈ ವಿಷಯ ಈಗಲೇ ಗೊತ್ತಾಗಿದ್ದು~ ಎಂದು ಏನೇನೋ ಹೇಳಿ ಮಾರಿದವನು ಓಲೈಸುತ್ತಾನೆ. ಆಮೇಲೆ ನಿಯಮಾನುಸಾರ ನಿವೇಶನಗಳನ್ನು ವಿಂಗಡಿಸಿ, ಹತ್ತು ಪಟ್ಟು ಬೆಲೆಗೆ ಮಾರಿಕೊಂಡು ಹಣ ದೋಚುತ್ತಾನೆ. ಹೀಗೆ ದಿಢೀರನೆ ಶ್ರೀಮಂತರಾದ ಅನೇಕರು ಭೂಗತಲೋಕದಲ್ಲಿದ್ದಾರೆ. ರವಿ ಪೂಜಾರಿ ಬೆಂಗಳೂರು ಪ್ರವೇಶಕ್ಕೂ ಈ ದಂಧೆ ಬೆಳೆದದ್ದೇ ಕಾರಣ.

ಮಾಜಿ ಕಾರ್ಪೊರೇಟರ್ ಸಮೀಉಲ್ಲಾ ಎಂಬುವರ ಕಚೇರಿ ಮೇಲೆ ಹಿಂದೆ ಗುಂಡಿನ ದಾಳಿ ನಡೆದು, ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಮಾಯಕರು ಸತ್ತು ಹೋದರು. ಸಮೀಉಲ್ಲಾ ಕೂಡ ಭೂಮಾಫಿಯಾ ದಲ್ದ್ದ್‌ದ್ದವರೇ. ಮನೆಮನೆಗೆ ಸೈಕಲ್‌ನಲ್ಲಿ ಎಣ್ಣೆ ಮಾರಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಅವರು ದಿಢೀರನೆ ಕೋಟ್ಯಧಿಪತಿಯಾಗಿದ್ದು ಅಚ್ಚರಿಯ ವಿಷಯ. ಅವರಿಂದ ಮೋಸಹೋದವರು ರೋಸಿ ಹೋಗಿದ್ದರು. ಭೂಮಾಫಿಯಾದ ಜಾಲದಲ್ಲಿದ್ದ ಕಾರಣ ಶತ್ರುಗಳೂ ಹುಟ್ಟಿಕೊಂಡರು. ಹಾಗಾಗಿಯೇ ದಾಳಿ ಗುಂಡಿನ ದಾಳಿ ನಡೆದದ್ದು.  

ಭೂಗತಲೋಕ, ರಿಯಲ್ ಎಸ್ಟೇಟ್, ಸರ್ಕಾರಿ ಅಧಿಕಾರಿಗಳು ಎಲ್ಲರ ಜಾಲ ಸೇರಿ ಈ ಮಾಫಿಯಾದ ವ್ಯಾಪ್ತಿ ದೊಡ್ಡದಾಯಿತು. ಈಗ ರಾಜ್ಯದ ಪ್ರಮುಖ ನಗರಗಳಲ್ಲಿ ಭೂಮಿಯ ಬೆಲೆ ದುಬಾರಿಯಾಗಿದೆ. ಹಾಗಾಗಿ ದಂಧೆಕೋರರಿಗೆ ಲಾಭ ಹೆಚ್ಚು.

ನಿಯಮಗಳಲ್ಲಿನ ಹುಳುಕು ಅರಿತವರು, ಖಾಲಿ ಇರುವ ಸರ್ಕಾರಿ ಜಾಗಗಳ ಮರ್ಮ ಬಲ್ಲವರು ಸಂಬಂಧಪಟ್ಟ ಅಧಿಕಾರಿಗಳನ್ನು ಸರಿಮಾಡಿಕೊಂಡು ಭೂ(ಅ)ವ್ಯವಹಾರ ನಡೆಸುತ್ತಾರೆ. ಎಂದೋ ನಿವೇಶನ ಖರೀದಿಸಿ ತಿಂಗಳುಗಳ ನಂತರವೋ, ವರ್ಷದ ನಂತರವೋ ಅಲ್ಲಿಗೆ ಹೋಗಿ ನೋಡಿ ತಮ್ಮ ಸ್ಥಳದಲ್ಲಿ ಬೇರೆ ಯಾರೋ ಕಟ್ಟಡ ಕಟ್ಟಿಸಿರುವುದನ್ನು ಕಂಡು ಗಾಬರಿಗೊಂಡವರು ಅನೇಕರಿದ್ದಾರೆ. ಹೆಜ್ಜೆಹೆಜ್ಜೆಗೆ ಕಾಣುವ ರಿಯಲ್ ಎಸ್ಟೇಟ್ ಬ್ರೋಕರ್‌ಗಳನ್ನು ಗ್ರಾಹಕರು ಮೊದಲು ಅನುಮಾನದಿಂದಲೇ ನೋಡಬೇಕು ಎಂಬ ಪರಿಸ್ಥಿತಿ ಉದ್ಭವವಾಗಿದೆ. ಭೂಗತಲೋಕದವರ ಕೈಗೆ ಒಮ್ಮೆ ತಗಲಿಹಾಕಿಕೊಂಡರೆ ನೀರಿನ ಸುಳಿಯಲ್ಲಿ ಸಿಕ್ಕಂತೆಯೇ ಸರಿ. ಮಂತ್ರಿ ಮಹೋದಯರೇ ಈಗ ಸರ್ಕಾರಿ ಜಾಗವನ್ನು ತಮ್ಮದಾಗಿಸಿಕೊಂಡು ಹಗರಣಗಳಲ್ಲಿ ಸಿಕ್ಕಿ ಬೀಳುತ್ತಿದ್ದಾರೆ.

ಅಮಾಯಕರಿಗೆ ಅನ್ಯಾಯವಾಗುತ್ತಿದ್ದರೂ ಪೊಲೀಸರು ಈ ವಿಷಯದಲ್ಲಿ ಏನೂ ಮಾಡಲಾಗುತ್ತಿಲ್ಲ. ಅದಕ್ಕೆ ಕಾರಣ ಕಾನೂನಿನಲ್ಲಿರುವ ಮಿತಿ. ಇದೇ ಕಾರಣಕ್ಕೆ ಇಂದು ಭೂಹಗರಣಗಳ ವಿಷಸರ್ಪ ಅಗಲವಾಗಿ ಹೆಡೆಎತ್ತಿ ನಿಂತಿದೆ. ಕಬಳಿಸಿದವರೆಲ್ಲಾ ನಿರ್ಲಜ್ಜರಾಗಿದ್ದರೆ, ಅಮಾಯಕ ಜನರೇ ಮೂಕಪ್ರೇಕ್ಷಕರು. ಇದು ವ್ಯವಸ್ಥೆಯ ದುರಂತ.

ಮುಂದಿನ ವಾರ:
ಆರ್ಡರ್ಲಿಗಳ ಕಥೆಗಳು
ಶಿವರಾಂ ಅವರ ಮೊಬೈಲ್ ನಂಬರ್: 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT