ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯೊ ಒಲಿಂಪಿಕ್ಸ್‌ ಮತ್ತು ಮಾದರಿ ಕಥನ

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಅವಕಾಶ, ಕಲಿಕೆ, ತರಬೇತಿ, ಸಾಧನೆ ಮತ್ತು ಯಶಸ್ಸುಗಳ ಕುರಿತು ಕೆಲವು ಟಿಪ್ಪಣಿಗಳನ್ನು ಇಂದಿನ ಅಂಕಣದಲ್ಲಿ ದಾಖಲಿಸುತ್ತಿದ್ದೇನೆ. ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ನಿರೀಕ್ಷೆಗಿಂತ ಕಳಪೆಯ ಸಾಧನೆ ಮಾಡಿದರು ಎನ್ನುವ ಟೀಕೆಗಳ ಹಿನ್ನೆಲೆಯಲ್ಲಿ ಈ ಟಿಪ್ಪಣಿಗಳನ್ನು ಗ್ರಹಿಸಬಹುದು. ಒಲಿಂಪಿಕ್ಸ್ ಪದಕಗಳು ಆಕಾಶದಿಂದ ಉದುರುವುದಿಲ್ಲ.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್‌ ಸ್ಪರ್ಧೆಗಳು ಕ್ರೀಡೆಯಾಚೆಗೂ ಯಾವುದೇ ಕ್ಷೇತ್ರದಲ್ಲಾಗಲಿ ನಾವು ರೂಪಿಸಿಕೊಂಡಿರುವ ಅತ್ಯಂತ ಕಠಿಣ ಸ್ಪರ್ಧೆಗಳು. ಎಲ್ಲ ಸೌಕರ್ಯಗಳನ್ನೂ ಪಡೆದಿದ್ದು, ಕನಿಷ್ಠ ಒಂದು ದಶಕವಾದರೂ ಉತ್ತಮ ತರಬೇತಿ ಪಡೆದಿರುವ ಪ್ರತಿಭಾಶಾಲಿಯಾದ ಕ್ರೀಡಾಪಟುವು ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುವುದು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಧನೆಯನ್ನು ಮಾಡಿದಾಗ ಮಾತ್ರ. ಈ ಮೇಲಿನ ಮಾತುಗಳ ವಿವರಣೆಗೆ ಕೆಳಗಿನ ನಾಲ್ಕು ಕಥನಗಳನ್ನು ಗಮನಿಸಿ. ಈ ಕಥನಗಳು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ನಾಲ್ವರು ಭಾರತೀಯ ಕ್ರೀಡಾಪಟುಗಳಿಗೆ ಸಂಬಂಧಿಸಿದವು.

ನನ್ನ ಮೊದಲ ಕಥನದ ನಾಯಕ ದತ್ತು ಭೊಕನಾಲ್ ಎಂಬ 24 ವರ್ಷ ವಯಸ್ಸಿನ ರೋಯಿಂಗ್ (ದೋಣಿ ಚಾಲನೆ) ಪಟು. ಮಹಾರಾಷ್ಟ್ರದ ಬರಪೀಡಿತ ಹಳ್ಳಿಯೊಂದರಲ್ಲಿ ಬೆಳೆದ ದತ್ತುವಿನ ತಂದೆ ಬಾವಿ ತೋಡುತ್ತಿದ್ದವರು. ಐದು ವರ್ಷಗಳ ಹಿಂದೆ ತಂದೆ ತೀರಿಕೊಂಡಾಗ, ಓದು ನಿಲ್ಲಿಸಿದ ದತ್ತು ಜೀವನ ನಿರ್ವಹಣೆಗಾಗಿ ಸೈನ್ಯ ಸೇರಿದರು. ಅಲ್ಲಿ ದತ್ತುವಿನ ಮೈಕಟ್ಟು ನೋಡಿದ ಅವರ ಉನ್ನತ ಅಧಿಕಾರಿ ರೋಯಿಂಗ್ ತಂಡವನ್ನು ಸೇರುವಂತೆ ಒತ್ತಾಯಿಸಿದರು.

ಕಲ್ಲು ಒಡೆಯುತ್ತ, ಮನೆ ಬಳಕೆಗೆ ಮತ್ತು ಕೃಷಿಗಾಗಿ ಮೈಲಿಗಟ್ಟಲೆ ನೀರನ್ನು ಹೊತ್ತು ಕೆತ್ತನೆಗೊಂಡ ದೇಹವದು. ಆದರೆ ದತ್ತುವಿಗೆ ನೀರನ್ನು ಕ್ರೀಡೆಗೂ ಬಳಸಬಹುದು ಎನ್ನುವುದೇ ಒಂದು ವಿಚಿತ್ರದ, ವಿನೂತನ ವಿಷಯ. ರೋಯಿಂಗ್ ಪ್ರಾರಂಭಿಸುವ ಮೊದಲು ನದಿಯನ್ನಾಗಲಿ, ಸಮುದ್ರವನ್ನಾಗಲಿ ನೋಡಿಯೇ ಇರದಿದ್ದ ದತ್ತು ಪ್ರಾರಂಭದ ದಿನಗಳಲ್ಲಿ ನೀರಿನ ಬಗ್ಗೆ ತಮಗಿದ್ದ ಭಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಒಂದು ವರ್ಷದೊಳಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲಾರಂಭಿಸಿದರು. ನಂತರ 2014ರ ಏಷ್ಯನ್ ಕ್ರೀಡಾಕೂಟದಲ್ಲಿ 5ನೆಯ ಸ್ಥಾನ ಪಡೆದರು. 2015ರಲ್ಲಿ ಏಷ್ಯನ್ ಪಂದ್ಯಾವಳಿಗಳಲ್ಲಿ ಎರಡನೆಯ ಸ್ಥಾನವನ್ನೂ ಮತ್ತು 2016ರಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆಯನ್ನೂ ಪಡೆದರು. ರಿಯೊದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕನೆಯ ಸ್ಥಾನ ಪಡೆದ ದತ್ತು ಇನ್ನಾರು ಸೆಕೆಂಡ್ ವೇಗವಾಗಿ ಕ್ರಮಿಸಿದ್ದರೆ ಸೆಮಿಫೈನಲ್ ಪ್ರವೇಶಿಸುತ್ತಿದ್ದರು. ಕಡೆಗೆ 13ನೆಯ ಸ್ಥಾನವನ್ನು ಗಳಿಸಿದರು.

ದತ್ತು ಭೊಕನಾಲ್‍ರಿಗೆ ದೊರಕಿದ ಅವಕಾಶ ಆಕಸ್ಮಿಕವಾದುದು. ನೀರನ್ನೇ ನೋಡದಿದ್ದವ ನಾಲ್ಕೇ ವರ್ಷಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವಷ್ಟು ಪ್ರಶಂಸನೀಯ ಸಾಧನೆಯನ್ನು ದತ್ತು ಮಾಡಿದ್ದಾರೆ. ಆದರೆ ಇಂದು ದತ್ತುವಿನ ಮಾತುಗಳಲ್ಲಿ ನಮಗೆ ಕಾಣುವುದು ತನ್ನ ಒಲಿಂಪಿಕ್ಸ್ ಪ್ರದರ್ಶನದ ಬಗೆಗಿನ ಪ್ರಾಮಾಣಿಕ ವಿಮರ್ಶೆ ಮತ್ತು ಭವಿಷ್ಯದ ಬಗೆಗಿನ ಅಪಾರ ಮಹತ್ವಾಕಾಂಕ್ಷೆ. ಈ ಬಾರಿ ತನಗೆ ಸಾಧ್ಯವಾಗಿದ್ದು ಕೇವಲ ಆರು ತಿಂಗಳುಗಳ ತರಬೇತಿ. ಅದರಲ್ಲೂ ಗಾಳಿಗೆ ವಿರುದ್ಧವಾಗಿ ಹುಟ್ಟುಹಾಕುವುದನ್ನು ಮತ್ತಷ್ಟು ಅಭ್ಯಾಸ ಮಾಡಬೇಕಿತ್ತು, ತಾನು ತರಬೇತಿಯ ಕ್ರಮ, ಹುಟ್ಟುಹಾಕುವ ತಂತ್ರ ಮತ್ತು ತನ್ನ ದೇಹದಲ್ಲಿ ಮಾಡಿಕೊಳ್ಳಬೇಕಾಗಿರುವ ಬದಲಾವಣೆಗಳು ಇವುಗಳ ಬಗ್ಗೆ ಅಪಾರವಾಗಿ ಕಲಿತಿದ್ದೇನೆ ಎನ್ನುವ ದತ್ತುವಿಗೆ ಟೋಕಿಯೊದಲ್ಲಿ ಪದಕ ಪಡೆಯುತ್ತೇನೆ ಎನ್ನುವ ವಿಶ್ವಾಸವಿದೆ.

  ನನ್ನ ಎರಡನೆಯ ಕಥನ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಮನೀಷ್ ರಾವತ್ ಅವರನ್ನು ಕುರಿತದ್ದು.  25 ವರ್ಷದ ರಾವತ್ ಸಹ ರಿಯೊ ಒಲಿಂಪಿಕ್ಸ್‌ನಲ್ಲಿ 13ನೆಯ ಸ್ಥಾನವನ್ನು ಗಳಿಸಿದರು. ಕಂಚಿನ ಪದಕ ಪಡೆದ ಸ್ಪರ್ಧಿಗಿಂತ ಕೇವಲ 37  ಸೆಕೆಂಡುಗಳಿಂದ ಹಿಂದಿದ್ದ ರಾವತ್ ಈ ಸ್ಪರ್ಧೆಯಲ್ಲಿ ನಾಲ್ವರು ವಿಶ್ವಚಾಂಪಿಯನ್ನರು, ಮೂವರು ಏಷ್ಯನ್ ಚಾಂಪಿಯನ್ನರು, ಇಬ್ಬರು ಒಲಿಂಪಿಕ್ ಪದಕ ವಿಜೇತರನ್ನೂ ಸೋಲಿಸಿದ್ದರು. ಉತ್ತರಾಖಂಡದ ಬದರಿನಾಥದಲ್ಲಿನ ಸಣ್ಣ ಹೋಟೆಲ್ ಒಂದರಲ್ಲಿ ಪರಿಚಾರಕನಾಗಿ ಕೆಲಸ ಮಾಡುವ ರಾವತ್ ಇಂದಿಗೂ ನಾಲ್ಕು ಗಂಟೆಗೆ ಎದ್ದು, ಎರಡು ತಾಸು ಅಭ್ಯಾಸ ನಡೆಸುತ್ತಾರೆ.

ಪ್ರೌಢಶಾಲೆಯಲ್ಲಿರುವಾಗ ದಿನವೂ ರಾವತ್ ಶಾಲೆಗೆ ಒಂದು ದಿಕ್ಕಿನಲ್ಲಿ ಏಳು ಕಿ.ಮೀ ನಡೆಯಬೇಕಾಗಿತ್ತು. ಆ ದಿನಗಳಿಂದಲೇ ಸ್ಪರ್ಧಾತ್ಮಕ ನಡಿಗೆಯಲ್ಲಿ ಭಾಗವಹಿಸಲಾರಂಭಿಸಿದರು. ರಾವತ್ ಹತ್ತನೆಯ ತರಗತಿಯಲ್ಲಿದ್ದಾಗ ತಂದೆ ತೀರಿಕೊಂಡದ್ದು ಅವರ ಬದುಕಿಗೆ ತಿರುವು ನೀಡಿತು. ಸಂಸಾರ ನಿರ್ವಹಣೆಗೆ ಎರಡು-ಮೂರು ಅರೆಕಾಲಿಕ ಕೆಲಸಗಳನ್ನು ಮಾಡುತ್ತಲೇ ತಮ್ಮ ಕ್ರೀಡಾ ಬದುಕನ್ನೂ ರಾವತ್ ಮುಂದುವರಿಸಿದರು. 2010ರಲ್ಲಿ ಉತ್ತರಾಖಂಡ ಪೊಲೀಸ್‌ ದಳಕ್ಕೆ ಕ್ರೀಡಾ ಮೀಸಲಿನ ಮೂಲಕ ಸೇರಲು ಮಾಡಿದ ಪ್ರಯತ್ನ ವಿಫಲವಾಯಿತು.

ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ನಡಿಗೆ ಸ್ಪರ್ಧಿಗಳು ವಿಶ್ವಮಟ್ಟದಲ್ಲಿ ಗಣನೀಯ ಸಾಧನೆಯನ್ನು ಮಾಡಿದ್ದಾರೆ. ಇವರಲ್ಲಿ ಬಹುತೇಕರು ರಾವತ್‌ರಂತೆ ಬಡಹಿನ್ನೆಲೆಯಿಂದ ಬಂದವರು.

ತಮಿಳುನಾಡಿನ ಕೃಷ್ಣನ್ ಗಣಪತಿಯ ಕಥೆಯೂ ಇಂತಹುದೆ. ಕೃಷ್ಣಗಿರಿಯ ಸಣ್ಣ ಹಳ್ಳಿಯಿಂದ ಬಂದ ಗಣಪತಿಗೆ ಸೈನ್ಯದಲ್ಲಿ ಕೆಲಸ ದೊರಕಿದ್ದರೂ ತರಬೇತಿಗೆ ಅಗತ್ಯವಾದ ಸೌಕರ್ಯಗಳಾಗಲಿ, ಒಳ್ಳೆಯ ಪೌಷ್ಟಿಕ ಆಹಾರವಾಗಲಿ ಸ್ವಂತ ವೆಚ್ಚದಿಂದಲೇ ಬರಬೇಕು. ರಿಯೊ ಒಲಿಂಪಿಕ್ಸ್ ತರಬೇತಿಗಾಗಿ ಗಣಪತಿಯ ಕುಟುಂಬ ಮೂರು ಲಕ್ಷ ಸಾಲ ಮಾಡಿದೆ. ರಾವತ್‌ರೊಡನೆ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಗಣಪತಿ ಸ್ಪರ್ಧೆಯ ನಡುವೆ ಅನರ್ಹರಾದರು. ಆದರೆ ರಾವತ್ ಮತ್ತು ಗಣಪತಿ ಇಬ್ಬರ ಆಕ್ರಂದನದ ನುಡಿಗಳು ಒಂದೆ: ಪದಕ ಗೆಲ್ಲುತ್ತೇವೆ ಎಂದು ನಮ್ಮ ಹಳ್ಳಿಯಲ್ಲಿ ಹೇಳಿದ್ದೆವು, ಈಗ ಮುಖ ತೋರಿಸುವುದು ಹೇಗೆ? ಈ ಮಾತುಗಳಲ್ಲಿಯೇ ಅವರ ಮಹತ್ವಾಕಾಂಕ್ಷೆಯೂ ಸುಸ್ಪಷ್ಟ.

ದತ್ತು ಮತ್ತು ರಾವತ್‌ರಿಗೆ ಹೋಲಿಸಿದರೆ ನನ್ನ  ಕಥನದ  ಮೂರನೆಯ ನಾಯಕಿ ರಿಯೊ ಒಲಿಂಪಿಕ್ಸ್‌ನ ನಂತರ ಚಿರಪರಿಚಿತರು. ಜಿಮ್ನಾಸ್ಟ್ ದೀಪಾ ಕರ್ಮಾಕರ್ ಕಥೆ ಎಲ್ಲರಿಗೂ ಈಗ ತಿಳಿದಿದೆ. 23 ವರ್ಷ ವಯಸ್ಸಿನ ದೀಪಾ ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ನಾಲ್ಕನೆಯ ಸ್ಥಾನ ಪಡೆದರು. ಅವರು ಪದಕ ಪಡೆಯುವ ಸಾಧ್ಯತೆಯನ್ನು ಹೊಂದಿದ್ದುದು ಅವರಿಗೆ ದೊರೆತ ತರಬೇತಿ ಅಥವಾ ಸೌಲಭ್ಯಗಳ ಕಾರಣದಿಂದಲ್ಲ. ಬದಲಿಗೆ ಪ್ರೊಡುನೊವಾ ವಾಲ್ಟ್ ಎಂಬ ಅಪಾಯಕಾರಿ ಜಿಗಿತವನ್ನು ತಮ್ಮ ಜಿಗಿತಗಳ ಶಸ್ತ್ರಕೋಶದಲ್ಲಿ ಅವರು ಇರಿಸಿಕೊಂಡಿದ್ದರಿಂದ.

ತ್ರಿಪುರಾದ ಅಗರ್ತಲಾದವರಾದ ದೀಪಾರ ಇದುವರೆಗಿನ ಜಿಮ್ನಾಸ್ಟ್ ವೃತ್ತಿಜೀವನ ಸುಲಲಿತವಾಗಿ ಸಾಗಿಲ್ಲ. ಭಾರತೀಯ ಕ್ರೀಡಾ ಪ್ರಾಧಿಕಾರವು ಅವರನ್ನು ಹಲವು ಬಾರಿ ತಿರಸ್ಕರಿಸಿತ್ತು. ದೀಪಾರ ತಂದೆ ವೇಟ್‌ಲಿಫ್ಟಿಂಗ್‌ ತರಬೇತುದಾರರು. ಅವರ ಪ್ರೋತ್ಸಾಹದಿಂದ ತನ್ನ ಕ್ರೀಡಾಜೀವನವನ್ನು ಕಟ್ಟಿಕೊಂಡ ದೀಪಾ ಹಳೆಯ ಸಲಕರಣೆಗಳನ್ನೇ ಬಳಸುತ್ತ ಬೆಳೆದರು. ಅವರ ಮೊದಲ ವಾಲ್ಟ್‌ಗೆ ಬಳಸಲಾದ ಸಲಕರಣೆಯನ್ನು ಸ್ಕೂಟರ್ ಸ್ಪ್ರಿಂಗ್ ಬಳಸಿ ತಯಾರಿಸಲಾಗಿತ್ತು. ದೀಪಾರನ್ನು ಇಂದು ಮನ್ನಿಸುವವರು ನೆನಪಿನಲ್ಲಿಡಬೇಕಾಗಿರುವುದು ಇಷ್ಟನ್ನು ಮಾತ್ರ. ತರಬೇತಿ, ಪ್ರತಿಭೆ ಇವುಗಳ ನಡುವೆ ದೀಪಾಗೆ ಸಿಕ್ಕಿರುವ ಯಶಸ್ಸು ಅವರು ಅಪಾಯಕಾರಿ ಪ್ರೊಡುನೊವಾ ವಾಲ್ಟ್ ಮಾಡಿದ ಕಾರಣದಿಂದಲೆ.

ನನ್ನ ನಾಲ್ಕನೆಯ ಕಥನ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿಯ ಪದಕ ಪಡೆದ ಪಿ.ವಿ.ಸಿಂಧು ಅವರ ಕುರಿತಾದುದು. ನಾನಿಲ್ಲಿ ದಾಖಲಿಸಿರುವ ಮಿಕ್ಕ ಮೂರು ಕಥನಗಳ ನಾಯಕರಿಗೆ ಹೋಲಿಸಿದಾಗ ಸಿಂಧು ಹೆಚ್ಚು ಅನುಕೂಲಸ್ಥ ಮತ್ತು ಕ್ರೀಡೆಗಳ ಹಿನ್ನೆಲೆಯಿದ್ದ ಕುಟುಂಬದಿಂದ ಬಂದವರು. ಅವರ ತಂದೆ ಪಿ.ವಿ.ರಮಣ ಭಾರತೀಯ ವಾಲಿಬಾಲ್ ತಂಡದ ನಾಯಕರಾಗಿದ್ದವರು. ಅವರ ತಾಯಿ ವಿಜಯಾ ಸಹ ವಾಲಿಬಾಲ್ ಆಟಗಾರ್ತಿ. 9ನೆಯ ವಯಸ್ಸಿನಲ್ಲಿ ಸಿಂಧು ಬ್ಯಾಡ್ಮಿಂಟನ್ ಅಭ್ಯಾಸ ಪ್ರಾರಂಭಿಸಿದಾಗಿನಿಂದ ಪುಲ್ಲೇಲ ಗೋಪಿಚಂದ್‌ ಅವರ ತರಬೇತಿ ದೊರಕಿದೆ.

ಮೊದಲ ಆರು ವರ್ಷಗಳ ಕಾಲ ತಂದೆ ರಮಣ ಮಗಳನ್ನು ಪ್ರತಿದಿನವೂ ಬೆಳಿಗ್ಗೆ, ಸಂಜೆ ಮೂವತ್ತು ಕಿ.ಮೀ ದೂರದಲ್ಲಿದ್ದ ಗೋಪಿಚಂದ್‌ರ ಅಕಾಡೆಮಿಗೆ ವಾರಕ್ಕೆ ಆರು ದಿನ ತರಬೇತಿಗಾಗಿ ಕರೆದೊಯ್ಯುತ್ತಿದ್ದರು. ನಿರಂತರ ಪ್ರಯಾಣದಿಂದ ಮಗಳಿಗೆ ತೊಂದರೆಯಾಗುತ್ತಿದೆಯೆಂದು ತಮ್ಮ ಮನೆಯನ್ನೇ ಅಕಾಡೆಮಿಯ ಹತ್ತಿರದ ಸ್ಥಳಕ್ಕೆ ಬದಲಿಸಿದರು. ಒಲಿಂಪಿಕ್ಸ್ ತರಬೇತಿಯ ಸಂದರ್ಭದಲ್ಲಿ ಮಗಳಿಗೆ ಸಹಕರಿಸಬೇಕೆಂದು ರಮಣ ಕಳೆದ ಎಂಟು ತಿಂಗಳುಗಳಿಂದ ರಜೆ ಪಡೆದು, ಪ್ರತಿದಿನ ಬೆಳಿಗ್ಗೆ 3:45ಕ್ಕೆ ಮಗಳ ಜೊತೆಗೆ ಅಕಾಡೆಮಿಗೆ ತಾವೂ ಹೋದರು, ದಿನವೆಲ್ಲ ಜೊತೆಗಿದ್ದರು.

ಒಲಿಂಪಿಕ್‌್ಸ ಪದಕ ವಿಜೇತರನ್ನು ಹುಟ್ಟುಹಾಕಲು ಒಂದೆಡೆ ಕುಟುಂಬದ ನಿರಂತರ ಬೆಂಬಲದ ಅಗತ್ಯವಿದ್ದರೆ ಗೋಪಿಚಂದ್‌ರಂತಹ ವಿಶ್ವಮಟ್ಟದ ತರಬೇತುದಾರರ ಅವಶ್ಯಕತೆಯನ್ನು ಎಷ್ಟು ಒತ್ತಿ ಹೇಳಿದರೂ ಸಾಲದು. ಸ್ವತಃ ವಿಶ್ವಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಗೋಪಿ ತನಗೆ ಸಿಗದ ಎಲ್ಲ ಸೌಲಭ್ಯ-ಸಂಪನ್ಮೂಲಗಳನ್ನು ತನ್ನ ಆಟಗಾರರಿಗೆ ಒದಗಿಸಿದರು. ಸಿಂಧು ಎತ್ತರಕ್ಕೆ ಬೆಳೆಯುತ್ತಾರೆ ಎನ್ನುವುದನ್ನು ನಿರೀಕ್ಷಿಸಿದ ಗೋಪಿ ಅದಕ್ಕೆ ಸರಿಹೊಂದುವ ಆಟದ ಶೈಲಿಯನ್ನು ಅವರಿಗೆ ರೂಪಿಸಿದರು.

ಅವರ ಊಟ, ದೈಹಿಕ ಮತ್ತು ಮಾನಸಿಕ ತರಬೇತಿ, ಯಾವ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಮತ್ತು ಎಷ್ಟು ಜಾಹೀರಾತು ಸಂಬಂಧಿ ವ್ಯಾವಹಾರಿಕ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎನ್ನುವ ನಿರ್ಧಾರಗಳನ್ನೆಲ್ಲ ಸ್ವತಃ ನೋಡಿಕೊಂಡರು. ಈ ಬಗೆಯ ಬೆಂಬಲ ದೊರಕಿದವರೆಲ್ಲರೂ ಒಲಿಂಪಿಕ್ಸ್‌ ಪದಕ ಗೆಲ್ಲುವುದಿಲ್ಲ, ನಿಜ. ಆದರೆ ಬಹುತೇಕ ಗೆಲ್ಲುವವರೆಲ್ಲರೂ ಇಂತಹ ವ್ಯವಸ್ಥೆಯನ್ನು ಹೊಂದಿರುತ್ತಾರೆ ಎನ್ನುವುದಂತೂ ನಿಜ. ಮೂರು ವಾರದ ಹಿಂದೆ ಸಿಂಧು ಪದಕ ಗೆಲ್ಲಬಹುದೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಅವರು ತಮ್ಮ ಪ್ರತಿಭೆ-ಸಾಮರ್ಥ್ಯಗಳ ಅಂಚನ್ನು ವಿಸ್ತರಿಸಿದರು ಎನ್ನುವುದು ಈಗ ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT