ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಕಿ ಮತ್ತು ನೀವು

Last Updated 13 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಇವತ್ತು ಜಗತ್ತಿನಾದ್ಯಂತ ಜನಪ್ರಿಯವಾಗುತ್ತಿರುವ ರೇಕಿ ವಿದ್ಯೆಯ ಕಿರು ಪರಿಚಯ ಮಾಡಿಕೊಡುವ ಮುಂಚೆ ನಾನು ರೇಕಿಯ ಬಳಿಗೆ ಹೇಗೆ ಬಂದೆ ಎಂಬುದರ ಬಗ್ಗೆ ಸ್ವಲ್ಪ ತಿಳಿಸುತ್ತೇನೆ. ಯಾಕೆಂದರೆ ನಾನು ಬರೆಯುವ ಕೆಲವು ವಿಷಯಗಳ ಬಗ್ಗೆ ನನ್ನ ಪ್ರಿಯ ಓದುಗರು ಯಾವಾಗಲೂ ಒಂದು ಪ್ರಶ್ನೆಯನ್ನು ನನ್ನ ಮುಂದಿಡುತ್ತಾರೆ:  `ನೀವು ಇದನ್ನೆಲ್ಲಾ ನಂಬುತ್ತೀರಾ? ಈ ಪ್ರ್ರಶ್ನೆ ನನಗೆ ತುಂಬಾ ವಿಚಿತ್ರವಾಗಿ ತೋರುತ್ತದೆ. ಆ ಪ್ರಶ್ನೆ ಕೇಳುವರಿಗೆ ನನ್ನ ಉತ್ತರ ಯಾವಾಗಲೂ ಒಂದೇ:  `ನಾನು ಯಾವುದನ್ನೂ ನಂಬುವುದೂ ಇಲ್ಲ. ಅನುಮಾನಿಸುವುದೂ ಇಲ್ಲ. ಅನುಭವದಲ್ಲಿ ಪರೀಕ್ಷಿಸಿ ನೋಡುತ್ತೇನೆ. ಅನುಭವದಲ್ಲಿ ನಿಜ ಕಂಡುಬಂದದ್ದು ನಿಜ. ಅದು ನಂಬುಗೆ ಅಥವಾ ಅಪನಂಬುಗೆಯ ವಿಷಯವಲ್ಲ~.
ಆದ್ದರಿಂದ ನಾನು ರೇಕಿ ವಿದ್ಯೆಗೆ ಹೇಗೆ ಬಂದೆ ಎಂಬುದನ್ನು ಕೇಳಿಸಿಕೊಳ್ಳಿ.

ಸುಮಾರು ಸಾವಿರದೊಂಭೈನೂರಾತೊಂಭತ್ತರ ಮಾತು. ನನಗೆ ಕತ್ತಿನಲ್ಲಿ ಭಯಾನಕ ನೋವು ಸುರುವಾಯಿತು. ಆಗ ನಾನಿನ್ನೂ ಯೋಗಾಸನಗಳನ್ನು ಶಿಸ್ತುಬದ್ಧವಾಗಿ ಮಾಡುತ್ತಿದ್ದ ಕಾಲ. ಯೋಗದಲ್ಲೇ ಎಲ್ಲಕ್ಕೂ ಮದ್ದಿದೆಯೆಂಬ ಹುಂಬ ನಂಬಿಕೆಯಿಂದ ಆಸನಗಳಿಂದ ಅದನ್ನು ನಿವಾರಿಸಿಕೊಳ್ಳ ಹೊರಟು ನೋವನ್ನು ಇನ್ನೂ ಹದಗೆಡಿಸಿಕೊಂಡೆ. ನೋವು ಹೆಚ್ಚುತ್ತಲೇ ಹೋಯಿತು. ಡಾಕ್ಟರಿಗೆ ಒಲ್ಲದ ಮನಸ್ಸಿನಿಂದ ಶರಣುಹೋದೆ.

ಅವರು ಅದಕ್ಕೆ `ಸರ್ವಿಕಲ್ ಸ್ಪಾಂಡಿಲೋಸಿಸ್~ ಎಂಬ ಹೆಸರು ಕೊಟ್ಟರು. ಅವೆಂಥವೋ ಮಾತ್ರೆಗಳನ್ನು ಕೊಟ್ಟರು. ಹಚ್ಚಿಕೊಳ್ಳಲು ಮುಲಾಮು ಕೊಟ್ಟರು. ಆದರೂ ನೋವು ಹೆಚ್ಚುತ್ತಲೇ ಹೋಯಿತು. ಅವರ ಸ್ನೇಹಿತರೊಬ್ಬರ ಹತ್ತಿರ ಫಿಜಿಯೋಥೆರಪಿಗೆ ಕಳಿಸಿದರು.

ಅದರಿಂದಲೂ ಎಳ್ಳಷ್ಟೂ ಅನುಕೂಲವಾಗಲಿಲ್ಲ. ಡಾಕ್ಟರ ಫೀಸು, ಔಷಧಿಯ ಖರ್ಚು ಏರಿದ ಹಾಗೆ ನೋವೂ ಏರತೊಡಗಿತು. ಕೂಡುವಂತಿಲ್ಲ, ನಿಲ್ಲುವಂತಿಲ್ಲ, ನಡೆಯುವಂತಿಲ್ಲ, ಮಲಗುವಂತಿಲ್ಲ. ಹೆಜ್ಜೆಯಿಟ್ಟ ಕೂಡಲೆ ಕತ್ತಿನಲ್ಲಿ ಚಳುಕ್ಕೆನ್ನುತ್ತಿತ್ತು. ಅನ್ನ-ಪಾನಗಳೂ ಸೇರದಾದವು.

ಆಗ ನಾನಿದ್ದದ್ದು ಪೂರ್ವ ದಿಲ್ಲಿಯ ಪಟಪರಗಂಜ್ ಎಂಬ ಕಡೆ. ಒಂದು ದಿನ ಔಷಧಿ ಅಂಗಡಿಗೆ ಹೋಗಿ ಬರುವಲ್ಲಿ ಒಂದು ಜಾಹಿರಾತು ಬೋರ್ಡನ್ನು ಕಂಡೆ. `ಇಲ್ಲಿ ರೇಕಿ ಕಲಿಸಲಾಗುತ್ತದೆ. ರೇಕಿ ಕಲಿಯಿರಿ, ಎಲ್ಲ ಕಾಯಿಲೆಗಳನ್ನೂ ವಾಸಿ ಮಾಡಿಕೊಳ್ಳಿ~.  ಆತುರಾತುರವಾಗಿ ಅಲ್ಲಿ ನಮೂದಿಸಲಾಗಿದ್ದ ಟೆಲಿಫೋನು ನಂಬರು ಗುರುತುಹಾಕಿಕೊಂಡೆ. ಅದೇ ದಿನ ಫೋನು ಮಾಡಿ ಅಪಾಯಿಂಟ್‌ಮೆಂಟ್ ಮಾಡಿಕೊಂಡೆ.

ನನಗೆ ದೊರಕಿದ ರೇಕಿಮಾಸ್ತರು ಒಬ್ಬ ರಾಜಸ್ತಾನಿ ಮಹಿಳೆ. ಹೆಸರು ಶ್ರಿಮತಿ ಉಷಾ ಸೋಡಾ. `ರೇಕಿಯ ಮೂಲಕ ಈ ನೋವು ಗುಣವಾಗುತ್ತದೆಯ~ ಎಂದು ಕೇಳಿದೆ. `ಆಗುತ್ತದೆ~ ಎಂದರು. ಎಕ್ಸ್ ರೆ ಇತ್ಯಾದಿ ರಿಪೋರ್ಟು ತೆಗೆದೆ. ಅವರು ಅದನ್ನು ನೋಡಲೂ ಇಲ್ಲ. ರೇಕಿ ಎನ್ನುವುದು ಎಲ್ಲ ರೋಗಗಳಿಗೂ ಸಾಮಾನ್ಯವಾದ ಚಿಕಿತ್ಸಾ ಪದ್ಧತಿಯೆಂದೂ ಅದಕ್ಕೆ ಡಯಾಗ್ನಾಸಿಸ್‌ನ ಜರೂರಿ ಇಲ್ಲ ಎಂದರು. ಹಾಗಿದ್ದರೆ `ವಾಸಿ ಮಾಡಿ~ ಅಂದೆ.

ತಾವು ಅದನ್ನು ಎರಡು ಬಗೆಯಲ್ಲಿ ಮಾಡಬಹುದೆಂದರು. ಒಂದು: ಅವರೇ ಚಿಕಿತ್ಸೆ ಮಾಡುವುದು; ಎರಡು - ನಾನೇ ಕಲಿತು ಸ್ವತಃ ವಾಸಿಮಾಡಿಕೊಳ್ಳುವುದು. ಇವೆರಡರಲ್ಲಿ ಮೊದಲನೆಯದು ಹೆಚ್ಚು ಖರ್ಚಿನ ಸಮಾಚಾರವಾದ್ದರಿಂದ ಎರಡನೆ ಕ್ರಮವನ್ನು ಅವರು ಸೂಚಿಸಿದರು. ನಾನು ಒಪ್ಪಿ ರೇಕಿಯ ಮೊದಲ ಪಾಠ ಸುರು ಮಾಡಿದೆ. ರೇಕಿ ಮಾಡತೊಡಗಿದ ಹತ್ತು ದಿವಸಕ್ಕೆ ಮಾಯವಾದ `ಸರ್ವಿಕಲ್ ಸ್ಪಾಂಡಿಲೋಸಿಸ್~ ಅಂದು ಮಾಯವಾದದ್ದು ಮುಂದೆ ಇಂದಿನ ತನಕ ಬಂದಿಲ್ಲ! ಕಲಿಯಲು ಮಾಡಿದ ಖರ್ಚು ಡಾಕ್ಟರು, ಔಷಧಿ ಖರ್ಚು ಇತ್ಯಾದಿಗಳ ಶೇ ಹತ್ತಕ್ಕಿಂತಲೂ ಕಮ್ಮಿ!

ಇದಾದ ನಂತರ ಈ ವಿದ್ಯೆಯನ್ನು ಕಲಿತು, ಇತರರಿಗೆ ಕಲಿಸಿ ಜಗತ್ತಿನ ರೋಗನಿವಾರಣೆ ಮಾಡಬೇಕೆಂದು ನಾನೂ ರೇಕಿಯ ವಿದ್ಯಾರ್ಥಿಯಾದೆ, ಮಾಸ್ತರನಾದೆ. ರೇಕಿಯ ಸ್ವಾಸ್ಥ್ಯಶಕ್ತಿಯನ್ನು ಯಥಾಶಕ್ತಿ ಹಂಚುತ್ತಾ ಬಂದಿದ್ದೇನೆ.

ರೇಕಿ ಎಂದರೇನು?
ಅದೊಂದು ಜಪಾನೀ ಶಬ್ದ. ಅದರಲ್ಲಿ ಎರಡು ಮಾತ್ರೆಗಳು: ರೇ ಮತ್ತು ಕಿ. ರೇ ಅಂದರೆ ಸೃಷ್ಟಿ; ಕಿ ಅಂದರೆ ಚಿಕಿತ್ಸಕಶಕ್ತಿ. ಅದು ಇಡೀ ಬ್ರಹ್ಮಾಂಡದಲ್ಲಿ  ಹಾಸುಹೊಕ್ಕಾಗಿರುವ ಚಿಕತ್ಸಕ ಶಕ್ತಿ - ಪ್ರಕೃತಿಯಲ್ಲಿ ವಿದ್ಯುತ್ ಅಡಗಿರುವಂತೆ, ನೀರಿನಲ್ಲಿ ಬೆಂಕಿ ಅಡಗಿರುವಂತೆ. ರೇಕಿ ಪದವು ಈ ಶಕ್ತಿಯನ್ನು ತನ್ನ ಮತ್ತು ಇತರರ ಆರೋಗ್ಯಕ್ಕಾಗಿ ಬಳಸುವ ವಿದ್ಯೆಯ ಹೆಸರೂ ಹೌದು. ಇದರ ಮಾಧ್ಯಮ ಸ್ಪರ್ಶ-ನೇರ ಕೈಗಳ ಮೂಲಕ ಅಥವಾ ಕಲ್ಪನೆಯ ಮೂಲಕ.

19ನೆ ಶತಮಾನದಲ್ಲಿ ಜಪಾನಿನಲ್ಲೊಬ್ಬ ಚಿಕಿತ್ಸಕನಿದ್ದ. ಅವನ ಹೆಸರು ಉಸುಯಿ (1865-1926). ಸ್ಪರ್ಶದ ಮೂಲಕ ಬುದ್ಧ, ಏಸು ಮುಂತಾದ ಮಹಾಮಹಿಮರು ಕುಂಟರನ್ನು ಕುಷ್ಟರೋಗಿಗಳನ್ನು ಗುಣಪಡಿಸಿದ್ದರೆಂದು ಆತ ಓದಿದ್ದ. ಇದು ನಿಜವೋ ಅಲ್ಲವೋ ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತು. ಬೌದ್ಧರನ್ನು ಕೇಳಿದ: `ನೀವಿದನ್ನು ಕಂಡಿದ್ದೀರಾ?~  ಕ್ರೈಸ್ತ ಪಂಡಿತರನ್ನು ಕೇಳಿದ:  `ನೀವಿದನ್ನು ಕಂಡಿದ್ದೀತಾ?~.  ಅವರು ಅದನ್ನು ಕಂಡಿರಲಿಲ್ಲ.

ನಂಬಿದ್ದರು ಅಷ್ಟೆ. ಎರಡೂ ಧರ್ಮಗಳ ಧರ್ಮ ಗ್ರಂಥಗಳನ್ನು ಹುಡುಕತೊಡಗಿದ. ಅಲ್ಲಿ ಕೆಲವು ಎಳೆಗಳು ಸಿಕ್ಕಿದವೇ ಹೊರತು ಪೂರ್ಣವಿವರ ಸಿಗಲಿಲ್ಲ. ಟಿಬೆಟ್, ಇಂಡಿಯಾ ಮುಂತಾದ ಕಡೆ ತಾರಾಡಿ ಅಲ್ಲಿನ ಚಿಕಿತ್ಸಾತಜ್ಞರನ್ನು ಭೆಟ್ಟಿಯಾದ. ಅಲ್ಲೂ ಪೂರ್ಣ ಚಿತ್ರ ಸಿಗಲಿಲ್ಲ.

ಇನ್ನಿದನ್ನು ಅಂತರಂಗದಲ್ಲಿ ಕಂಡುಕೊಳ್ಳಬೇಕೆಂದುಕೊಂಡು ಜಪಾನಿನ ಶಿಂಟೋ ಧರ್ಮೀಯರಿಗೆ ಪವಿತ್ರವೆನಿಸಿದ್ದ ಕುರಾಮೋ ಬೆಟ್ಟದ ಮೇಲೆ 21 ದಿವಸ ಉಪವಾಸ ತಪಸ್ಸಿಗೆ ಕುಳಿತ. ಏನೂ ಗೋಚರವಾಗಲಿಲ್ಲ. ಇಪ್ಪತ್ತೊಂದನೆ ದಿವಸ ಹತಾಶನಾಗಿ ತನ್ನ ತಪಸ್ಸನ್ನು ಕೊನೆಗೊಳಿಸಿ ಮೇಲೆದ್ದಾಗ ಫಳಚ್ಚನೆಂದು ಬೆಳಕಿನ ಪುಂಜವೊಂದು ಅವನ ಶರೀರವನ್ನು ಹೊಕ್ಕ ಅನುಭವವಾಯಿತು. ಅಂದಿನಿಂದ ಅವನೊಳಗೆ ಚಿಕಿತ್ಸಾ ಶಕ್ತಿಯೊಂದು ಬಂದು ಸೇರಿಕೊಂಡಿತು.

ಉಸುಯಿ ಲೋಕಕಲ್ಯಾಣಕ್ಕೆ ಇದನ್ನು ಬಳಸತೊಡಗಿದ. ಅವನ ಸ್ಪರ್ಶದಿಂದ ಹಲವು ರೋಗಿಗಳು ಗುಣವಾಗತೊಡಗಿದರು. ಆದರೆ ಹಲವು ಬಾರಿ ರೋಗ ವಾಸಿಯಾದವರು ಸ್ವಲ್ಪ ಸಮಯದ ನಂತರ ಮತ್ತೆ ರೋಗಿಗಳಾಗುತ್ತಿದ್ದರು. ಉದಾಹರಣೆಗೆ ಒಸಾಕಾದ ಕುಷ್ಟರೋಗಿಗಳ ಕಾಲನಿಯ ಜನ. ಕಾಯಿಲೆ ವಾಸಿಯಾಗಿ ಹೊರಹೋದ  ಕೆಲವೆ ವರ್ಷಗಳಲ್ಲಿ ಮತ್ತೆ ರೋಗಪೀಡಿತರಾಗಿ ಕಾಲನಿಗೆ ಹಿಂತಿರುಗುತ್ತಿದ್ದರು. ಇದರ ಕಾರಣವನ್ನು ಯೋಚಿಸಿದಾಗ ಗೊತ್ತಾಯಿತು - ಉಚಿತವಾಗಿ ಪಡೆದುಕೊಂಡದ್ದನ್ನು ಜನ ಗೌರವಿಸುವುದಿಲ್ಲವೆಂದು. ರೇಕಿ ಒಂದು ಬಗೆಯ ಶಕ್ತಿಯ ಕೊಡುಕೊಳೆಯಾಗಿರುವುದರಿಂದ ಕೊಟ್ಟದ್ದಕ್ಕೆ ಪ್ರತಿಯಾಗಿ ಈಸಿಕೊಳ್ಳುವುದೂ ಮುಖ್ಯ. ಇದು ಗೊತ್ತಾದ ನಂತರ ಉಸುಯಿ ತನ್ನ ಚಿಕಿತ್ಸೆಗೆ ದಕ್ಷಿಣೆಯನ್ನು ಸ್ವೀಕರಿಸತೊಡಗಿದ. ಆಮೇಲೆ ರೋಗ ಮತ್ತೆ ಬರುವುದು ನಿಂತಿತು.

ಆದರೂ ಇನ್ನೂ ಕೆಲವು ಅಂಶಗಳನ್ನು ಅರಿಯಬೇಕೆಂದುಕೊಂಡು ಮತ್ತೆ ಅದೇ ಜಾಗದಲ್ಲಿ ತಪಸ್ಸು ಮಾಡಿ ರೇಕಿ ವಿದ್ಯೆಯ ಇನ್ನಷ್ಟು ರಹಸ್ಯಗಳನ್ನು ಸಾಕ್ಷಾತ್ಕಾರ ಮಾಡಿಕೊಂಡ.
ಅವನ ಚಿಕಿತ್ಸಾರ್ಥಿಗಳ ಸಂಖ್ಯೆ ಬೆಳೆಯತೊಡಗಿತು. ವಿದ್ಯೆಯನ್ನು ಪ್ರಚಾರಮಾಡಲು ಹಲವು ಶಿಷ್ಯರನ್ನು ತರಪೇತಿಗೊಳಿಸಿದ. ಒಸಾಕಾದಲ್ಲಿ ಅವನು ಸ್ಥಾಪಿಸಿದ ಸಂಸ್ಥೆ ಇಡೀ ಜಪಾನಿನಲ್ಲಿ ಪ್ರಸಿದ್ಧವಾಯಿತು. ಕಾಲಾಂತರದಲ್ಲಿ ಹಲವು ರೋಗಗಳ ತವರಾಗಿದ್ದ ಅಮೆರಿಕನ್ ಜಪಾನೀ ಮಹಿಳೆ ಶ್ರಿಮತಿ ತಕಾತಾ ರೇಕಿಯ ಪ್ರಭಾವದಿಂದ ರೋಗಮುಕ್ತಳಾದಳು. ಅವಳು ತಾನೇ ರೇಕಿ ಮಾಸ್ತರಳಾಗಿ ರೇಕಿ ವಿದ್ಯೆಯನ್ನು ಅಮೆರಿಕಾದಲ್ಲಿ ವ್ಯಾಪಕವಾಗಿ ಹರಡಿದಳು. ಅಲ್ಲಿಂದ ಯೂರೋಪಿಗೆ, ಅಮೇಲೆ ಇಡೀ ಜಗತ್ತಿಗೆ ರೇಕಿ ವಿದ್ಯೆ ಹಬ್ಬಿತು.

ಜಗತ್ತಿನಾದ್ಯಂತ ಪ್ರಚಾರವಾಗತೊಡಗಿದ ಮೇಲೆ ಹಲವು ರೇಕಿ ತಜ್ಞರು ತಮ್ಮ ತಮ್ಮ ಅನುಭವಗಳನ್ನು, ಹೊಳಹುಗಳನ್ನು ಚಿಕಿತ್ಸಾ ಪಧ್ಧತಿಯಲ್ಲಿ ಅಳವಡಿಸಿಕೊಂಡರು. ಉಸುಯಿ ಮೂಲತತ್ವದ ಅಧಾರವನ್ನು ಬಿಟ್ಟುಕೊಡದೆ ಹೊಸ, ಹೊಸ ಅಂಶಗಳನ್ನು ವಿದ್ಯೆಯೊಳಗೆ ಪಧ್ಧತಿಯೊಳಗೆ ಸೇರ್ಪಡೆಗೊಳಿಸಿದರು. ಇವತ್ತು ಭಾರತವನ್ನೂ ಒಳಗೊಂಡು ಜಗತ್ತಿನಾದ್ಯಂತ ಹಲವು ರೇಕಿ ಪದ್ಧತಿಗಳು ಪ್ರಚಾರದಲ್ಲಿವೆ.

ರೇಕಿಯನ್ನು ಯಾರು ಬೇಕಾದರೂ ಕಲಿತುಕೊಳ್ಳಬಹುದು. ಕಲಿಯುವ ಕ್ರಮ ಮತ್ತು ಮಾಡುವ ಬಗೆ ಎರಡೂ ಸುಲಭ. ಈ ಚಿಕಿತ್ಸಾಶಕ್ತಿ ಎಲ್ಲರಲ್ಲೂ ಅಡಗಿದೆಯಾದರೂ ಅದನ್ನು ಜಾಗೃತಗೊಳಿಸುವ ಒಂದು ದೀಕ್ಷಾಕ್ರಮವಿದೆ. ಇದನ್ನು ಬಲ್ಲವರು ರೇಕಿ ಮಾಸ್ತರರು. ಕೆಲವು ಅಪವಾದಗಳನ್ನು ಬಿಟ್ಟರೆ,  ಇತರರರಿಗೆ ಈ ದೀಕ್ಷಾಪದ್ಧತಿ ಅನಿವಾರ್ಯ. ಇದೊಂದು ಸರಳ ವಿಧಿ. ತಮ್ಮಳಗೆ ರೇಕಿಶಕ್ತಿಯನ್ನು ಜಾಗೃತಗೊಳಿಸಿಕೊಂಡವರು ಮಾತ್ರ ಬೇರೆಯವರಲ್ಲಿ ಅದನ್ನು ಜಾಗೃತಗಳಿಸಬಲ್ಲರು. ರೇಕಿಯನ್ನು ನಾಲ್ಕು ಹಂತಗಳಲ್ಲಿ  ಕಲಿಸಲಾಗುತ್ತದೆ. ರೇಕಿ 1ನ್ನು ಕಲಿತವರು ತಮಗಾಗಿ ಮಾತ್ರ ರೇಕಿ ಶಕ್ತಿಯನ್ನು ಬಳಸಲರ್ಹರು.  ರೇಕಿ2ನ್ನು ಕಲಿತವರು ಇತರರನ್ನೂ ಗುಣಪಡಿಸಬಲ್ಲರು. ರೇಕಿ 3 ಇನ್ನೂ ಮುಂದುವರಿದ ಘಟ್ಟ. ರೇಕಿ 4ನ್ನು ತಲುಪಿದವರು ರೇಕಿ ಮಾಸ್ತರರಾಗಿ ಇತರರಿಗೂ ರೇಕಿ ಕಲಿಸಲರ್ಹರು. ಪ್ರತಿ ಹಂತದಲ್ಲಿ ದೀಕ್ಷೆ ಪಡೆದ ನಂತರ ತನ್ನಲ್ಲಿ  ಆ ಹಂತದ ರೇಕಿ ಶಕ್ತಿ ಪೂರ್ಣ ಜಾಗೃತವಾಗಲು 21 ದಿವಸ ಅದನ್ನು ಸಾಧಿಸಬೇಕೆಂಬ  ನಿಯಮವಿದೆ. ಉಸುಯಿ  21 ದಿವಸ ಕುರಾಮೋದಲ್ಲಿ ತಪಸ್ಸು ಮಾಡಿದ ಕಾರಣ ಆ ಸಂಖ್ಯೆಗೆ ರೇಕಿ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ.

ರೇಕಿ ಮಾಡುವಾಗ ಯಾವುದೇ ವ್ಯಾಯಾಮದ ಅಗತ್ಯವಿಲ್ಲ. ಯಾವ ಭಂಗಿಯಲ್ಲಾದರೂ ಅದನ್ನು ಮಾಡಬಹುದು. ಆದರೆ ಒಂದು ನಿಯಮವಿದೆ: ಕೈ ಅಥವಾ ಕಾಲುಗಳನ್ನುಅಡ್ಡಡ್ಡವಾಗಿ ಅಳವಡಿಸಿಕೊಳ್ಳಬಾರದು. ರೇಕಿ ಪ್ರಾರಂಭಿಸುವ ಮತ್ತು ಮುಗಿಸುವ ಮೊದಲು ಸಾಧಕ ರೇಕಿಯ ಪ್ರವರ್ತಕನಾದ ಉಸುಯಿಗೆ, ರೇಕಿಶಕ್ತಿಗೆ, ತನ್ನ ಮಾಸ್ತರನಿಗೆ ಮತ್ತು ತನಗೆ ಕೃತಜ್ಞತೆ ಅರ್ಪಿಸಬೇಕು. ಯಾಕೆಂದರೆ ಮನಸ್ಸಿನಲ್ಲಿ ಕೃತಜ್ಞತಾ ಭಾವವಿದ್ದಾಗ ಚಿಕಿತ್ಸೆ ಸುಲಭ. ಮುಖ್ಯ ಸಾಧನೆಯೆಂದರೆ ತನ್ನ ಕೈಗಳನ್ನು ಒಂದೆರಡು ನಿಮಿಷ ಶರೀರದ ಮತ್ತು ಮನಸ್ಸಿನ ಹಲವು ಭಾಗಗಳನ್ನು ನಿಯಂತ್ರಿಸುವ ನಿರ್ದಿಷ್ಟ ಅಂಗಗಳ ಮೇಲೆ ಕೈಗಳನ್ನು ಒಂದೆರಡು ನಿಮಿಷ ಇಡುತ್ತಾಹೋಗುವುದು. ಈ ಅಂಗಗಳು ಯೋಗಶಾಸ್ತ್ರದ ಷಟ್‌ಚಕ್ರಗಳ ಸ್ಥಾನಗಳಿಗೆ ಸಂವಾದಿಯಾಗಿವೆ. ಆನಂತರ ಶರೀರದಲ್ಲಿ ವಿಶೇಷವಾದ ತೊಂದರೆ ಇರುವ ಜಾಗಗಳಲ್ಲಿ ಕೈಗಳನ್ನಿರಿಸಬೇಕು. ಕೈಗಳಲ್ಲಿ ಒಂದು ರೀತಿಯ ಬೆಚ್ಚನೆಯ ಶಕ್ತಿ ಪ್ರವಹಿಸತೊಡಗುತ್ತದೆ. ಆಯಾ ಭಾಗಗಳು ಸ್ವಸ್ಥವಾಗುತ್ತಾ ಹೋಗುತ್ತವೆ. ಇತರರನ್ನು ಗುಣಪಡಿಸಬೇಕೆಂದರೆ ಅವರ ಶರೀರದ ಭಾಗಗಳ ಮೇಲೆ ಕೈಗಳನ್ನಿರಿಸುತ್ತಾ ಹೋಗಬೇಕು.

ಇದು ಸ್ಥೂಲ ಕ್ರಮ. ರೇಕಿಯಲ್ಲಿ ಮುಂದುವರಿದ ಹಾಗೆ ಈ ಭೌತಿಕ ಕ್ರಮ ಹೆಚ್ಚುಹೆಚ್ಚು ಮಾನಸಿಕವಾಗತೊಡಗುತ್ತದೆ, ಪರೋಕ್ಷವಾಗತೊಡಗುತ್ತದೆ. ಕಾಲ -ದೇಶಗಳ ಗಡಿ ದಾಟಿ ರೇಕಿ ಶಕ್ತಿಯನ್ನು ಕಳಿಸುವುದು ಸಾಧ್ಯ. ರೇಕಿ ಪರಂಪರೆಯಲ್ಲಿ ಇದನ್ನು ಸಾಧ್ಯಗೊಳಿಸುವ ಕೆಲವು ರಹಸ್ಯ ಸಂಕೇತಗಳನ್ನು, ಮಂತ್ರಗಳನ್ನು ಕಂಡುಹಿಡಿಯಲಾಗಿದೆ.
ರೇಕಿ ಪದ್ಧತಿಯಲ್ಲಿ ಯಾವುದೇ ವಿಧಿ-ನಿಷೇಧಗಳಿಲ್ಲ. ರೇಕಿ ಸ್ವಾಭಾವಿಕವೂ ಮೂಲಭೂತವಾಗಿ ವಿಶ್ವಕಾರುಣ್ಯಮೂಲವೂ ಆಗಿರುವುದರಿಂದ ಅದು ಯಾವುದು ನಮಗೆ ಒಳ್ಳೆಯದೋ ಅದರೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ ದ್ವೇಷ, ಪ್ರತೀಕಾರ ಭಾವನೆ, ಸಿಡುಕು ಇತ್ಯಾದಿಗಳು ರೇಕಿಶಕ್ತಿಯನ್ನು ಕುಂಠಿತಗೊಳಿಸುತ್ತವೆ. ರೇಕಿ ಮಾಡುವ ಸಮಯದಲ್ಲಾದರೂ ಈ ಭಾವನೆಗಳಿಂದ ಮುಕ್ತರಾಗುವ ಅಗತ್ಯವಿದೆ. ಕೆಲವು ರೋಗಗಳನ್ನು ರೇಕಿಯೊಂದೇ ಗುಣಪಡಿಸಬಲ್ಲುದು. ಆದರೆ ದೀರ್ಘಕಾಲೀನ ರೋಗಗಳ ಚಿಕಿತ್ಸೆಗೆ ಬಹಳ ಸಮಯ ರೇಕಿಮಾಡಬೇಕಾಗುತ್ತದೆ. ರೇಕಿ ಇತರ ಚಿಕಿತ್ಸಾಪದ್ಧತಿಗಳ ರೋಗನಿವಾರಕ ಶಕ್ತಿಯನ್ನು ವರ್ಧಿಸುತ್ತದೆ. ಅದು ಇತರ ಚಿಕತ್ಸಾಪದ್ಧತಿಗಳಿಗೆ ಪೂರಕವೇ ಹೊರತು ವಿರೋಧವಲ್ಲ. ಭೌತಿಕ ರೋಗಗಳ ಮೂಲ ಮನಸ್ಸಿನಲ್ಲಿರುವುದರಿಂದ ರೇಕಿ ಆ ಮಟ್ಟದಲ್ಲೂ ಕೆಲಸ ಮಾಡಿ ರೋಗವನ್ನು ಬೇರುಸಹಿತ ತೆಗೆದುಹಾಕುತ್ತದೆ. ಆದರೆ ಈ ಫಲಗಳನ್ನು ಪಡೆದುಕೊಳ್ಳಲು ಕ್ರಮಬದ್ಧವಾಗಿ ರೇಕಿಯನ್ನು ಮಾಡುವ ಅಗತ್ಯವಿದೆ.
ನನ್ನ ಅನುಭವದಲ್ಲಿ ರೇಕಿ ಯೋಗ ಚಿಕಿತ್ಸೆಗಿಂತ ಯಶಸ್ವಿಯಾಗಿ ಕೆಲಸ ಮಾಡಬಲ್ಲುದು. ಯೋಗದ ಜೊತೆಗೆ ರೇಕಿಯನ್ನೂ ಸೇರಿಸಿಕೊಂಡರೆ ಚಿಕಿತ್ಸೆ ಇನ್ನೂ ಬೇಗ ಆಗುತ್ತದೆ. ರೇಕಿ ಗುಣಪಡಿಸುವುದಂತೂ ಖಾತ್ರಿ. ಆದರೆ ಎಷ್ಟು ಬೇಗ ಅಥವಾ ತಡ ಎಂಬುದು ರೋಗದ ಇತಿಹಾಸದ ಮೇಲೆ ನಿಂತಿದೆ. ಕೆಲವು ಸಲ ರೋಗ ಗುಣವಾಗುವ ಮೊದಲು ಉಲ್ಬಣವಾಗುವುದನ್ನು ಕಂಡಿದ್ದೇನೆ.

ಇನ್ನು ಕೆಲವು ಸಲ ರೋಗಗಳು ಎಷ್ಟು ಗಾಢವಾಗಿರುತ್ತವೆಂದರೆ ನಿವಾರಣೆ ಸಾಧ್ಯವಿರುವುದಿಲ್ಲ. ಅಂತ ಸಂದರ್ಭಗಳಲ್ಲಿ ನೋವನ್ನು ಆದಷ್ಟು ಕಡಿಮೆ ಮಾಡುವುದೊಂದೇ ಸಾಧ್ಯ. ದೀರ್ಘಕಾಲೀನ ಕ್ಯಾನ್ಸರ್‌ಪೀಡಿತ ನನ್ನ ಮೆಚ್ಚಿನ ವಿದ್ಯಾರ್ಥಿನಿಯೊಬ್ಬಳಿಗೆ ಹೀಗಾಯಿತು. ಅವಳ ಅಕಾಲ ಮರಣವನ್ನು ತಡೆಯಲಾಗಲಿಲ್ಲ. ಆದರೆ ರೇಕಿಯ ಮೂಲಕ ಅವಳ ದೈಹಿಕ ನೋವು ಬಹುಮಟ್ಟಿಗೆ ಕಡಿಮೆಯಾಗಿ ಅವಳು ಶಾಂತಿಯಿಂದ ದೇಹಮುಕ್ತಳಾದಳು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT