ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾ ಸಮಸ್ಯೆ: ರಾಷ್ಟ್ರದ ಭದ್ರತೆಯೇ ಮುಖ್ಯ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೇಶದ 130 ಕೋಟಿ ಜನರ ಯೋಗಕ್ಷೇಮ ಹಾಗೂ ಸುರಕ್ಷತೆಯ ವಿಚಾರದಲ್ಲಿ, ಎಂದಿನಂತೆ ತೀರಾ ಅಸೂಕ್ಷ್ಮವಾಗಿ ವರ್ತಿಸಿರುವ ಎಡ ಉದಾರವಾದಿಗಳು, ಅಕ್ರಮ ವಲಸಿಗರಾದ ರೋಹಿಂಗ್ಯಾ ಸಮುದಾಯದವರ ಪರವಾಗಿ ಧ್ವನಿ ಎತ್ತಿದ್ದಾರೆ. ರೋಹಿಂಗ್ಯಾ ಸಮುದಾಯದ ಹಲವರಿಗೆ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಇದೆ, ಇವರು ದೇಶದ ಭದ್ರತೆಗೆ ಬಹುದೊಡ್ಡ ಬೆದರಿಕೆಯಾಗಿದ್ದಾರೆ.

ದೇಶದ ಪ್ರಜೆಗಳ ಅಭಿವೃದ್ಧಿಗಿಂತಲೂ ಈ ಅಕ್ರಮ ವಲಸಿಗರ ಯೋಗಕ್ಷೇಮಕ್ಕೇ ಹೆಚ್ಚಿನ ಆದ್ಯತೆ ನೀಡಿದ್ದಾರೆ ಅವರ ಪರ ಮೃದು ಧೋರಣೆ ಹೊಂದಿರುವ ಈ ವ್ಯಕ್ತಿಗಳು. ಭಾರತೀಯರು ತಮ್ಮ ಭದ್ರತೆಯ ಕುರಿತ ಆತಂಕಗಳನ್ನು ಬದಿಗಿಟ್ಟು, ದೇಶದಲ್ಲಿ ಲಭ್ಯವಿರುವ ವಿರಳ ಸಂಪನ್ಮೂಲಗಳನ್ನು ರೋಹಿಂಗ್ಯಾ ಸಮುದಾಯದವರ ಜೊತೆ ಹಂಚಿಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

ರೋಹಿಂಗ್ಯಾ ಸಮುದಾಯದವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಮಂಡಿಸಲಾಗುತ್ತಿರುವ ವಾದಗಳು ಏನಿವೆ ಎಂಬುದನ್ನು ನಾವು ಮೊದಲು ಪರಿಶೀಲಿಸಬೇಕು. ‘ಅವರನ್ನು ಅಕ್ರಮ ವಲಸಿಗರು ಎಂದಷ್ಟೇ ಪರಿಗಣಿಸಬಾರದು, ಅವರು ನಿರಾಶ್ರಿತರು’ ಎಂದು ವಾದಿಸಲಾಗುತ್ತಿದೆ. ಆಶ್ರಯ ಬೇಡಿ ಬಂದವರನ್ನು ವಾಪಸ್ ಕಳುಹಿಸುವುದಿಲ್ಲ ಎಂಬ ತತ್ವವೂ ಸೇರಿದಂತೆ, ಭಾರತ ಸಹಿ ಹಾಕಿರುವ ಅಂತರರಾಷ್ಟ್ರೀಯ ಮಟ್ಟದ ಹಲವು ಒಪ್ಪಂದಗಳ ಅನ್ವಯ ಅವರು ರಕ್ಷಣೆ ಪಡೆಯಲು ಅರ್ಹರು ಎಂಬ ವಾದ ಮುಂದಿಡಲಾಗುತ್ತಿದೆ. ಇವೆಲ್ಲ ವಾದಗಳಲ್ಲಿ ಹೇಳುತ್ತಿರುವ ಅಂಶ ಸತ್ಯವಲ್ಲ.

ರೋಹಿಂಗ್ಯಾ ಸಮುದಾಯದವರು ನಿರಾಶ್ರಿತರಲ್ಲ. ಹಾಗೂ ನಿರಾಶ್ರಿತರಿಗೆ ಸಿಗುವ ಹಕ್ಕುಗಳಿಗೆ ರೋಹಿಂಗ್ಯಾ ಸಮುದಾಯದವರು ಅರ್ಹರಲ್ಲ. ರೋಹಿಂಗ್ಯಾ ಸಮುದಾಯದವರು ಕೂಡ, ಭಾರತದೊಳಕ್ಕೆ ಅಕ್ರಮವಾಗಿ ನುಸುಳಿ, ದೇಶದ ಹಲವೆಡೆ ಹಂಚಿಹೋಗಿರುವ ಬಾಂಗ್ಲಾದೇಶದ ಲಕ್ಷಾಂತರ ಜನರಂತೆಯೇ. ನಿರಾಶ್ರಿತರ ಸ್ಥಾನಮಾನಕ್ಕೆ ಸಂಬಂಧಿಸಿದ 1951ರ ಒಪ್ಪಂದಕ್ಕೆ ಭಾರತ ಸಹಿ ಮಾಡಿಲ್ಲ. ನಿರಾಶ್ರಿತರಿಗೆ ಸಂಬಂಧಿಸಿದ ಶಿಷ್ಟಾಚಾರಗಳನ್ನು ಕುರಿತ 1967ರ ಒಪ್ಪಂದಕ್ಕೂ ಭಾರತ ಸಹಿ ಮಾಡಿಲ್ಲ. 1951ರ ಒಪ್ಪಂದಕ್ಕೆ ಸಹಿ ಮಾಡಿರುವ ರಾಷ್ಟ್ರಗಳು ಮಾತ್ರ ‘ಆಶ್ರಯ ಬೇಡಿ ಬಂದವರನ್ನು ಹಿಂದಕ್ಕೆ ಕಳುಹಿಸುವುದಿಲ್ಲ’ ಎಂಬ ತತ್ವಕ್ಕೆ ಬದ್ಧವಾಗಿರಬೇಕಾಗುತ್ತದೆ.

ರೋಹಿಂಗ್ಯಾ ಸಮುದಾಯದವರನ್ನು ವಾಪಸ್‌ ಕಳುಹಿಸುವುದರ ವಿರುದ್ಧ ಮುಂದಿಡಲಾಗುತ್ತಿರುವ ವಾದದಲ್ಲಿ ಮತ್ತೆ ಮತ್ತೆ ಪ್ರಸ್ತಾಪ ಆಗುತ್ತಿರುವ ಅಂಶವು ನಮ್ಮ ಸಂವಿಧಾನದ ಮೂರನೆಯ ಭಾಗದಲ್ಲಿ ಹೇಳಿರುವ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ್ದು. ಇಲ್ಲಿ ಹೇಳಿರುವ ಬಹುತೇಕ ಹಕ್ಕುಗಳನ್ನು ನೀಡಿರುವುದು ಭಾರತದ ಪ್ರಜೆಗಳಿಗೇ ವಿನಾ, ಎಲ್ಲರಿಗೂ ಅಲ್ಲ. ಸಂವಿಧಾನದ ಕೆಲವು ವಿಧಿಗಳು ‘ವ್ಯಕ್ತಿಗಳು’ ಎಂಬ ಪದವನ್ನು ಬಳಸಿವೆ, ಬಹುತೇಕ ವಿಧಿಗಳು ‘ಪ್ರಜೆ’ ಎಂಬ ಪದ ಬಳಸಿವೆ. ಈ ಎರಡು ಪದಗಳ ಬಳಕೆ ಮುಂದಿಟ್ಟುಕೊಂಡು, ಎರಡೂ ಪದಗಳನ್ನು ಅಕ್ಕಪಕ್ಕ ಇಟ್ಟು, ಅಕ್ರಮ ವಲಸಿಗರಿಗೂ ಎಲ್ಲ ಬಗೆಯ ಹಕ್ಕುಗಳನ್ನು ಕೊಡಬೇಕು ಎಂಬ ಬೇಡಿಕೆ ಮುಂದಿಟ್ಟು, ಇಡೀ ವಿಷಯವನ್ನು ಇನ್ನೆಲ್ಲಿಗೂ ಕೊಂಡೊಯ್ಯುವ ಯತ್ನವೂ ನಡೆದಿದೆ.

ಸಂವಿಧಾನದ 14ನೇ ವಿಧಿಯು ಖಾತ್ರಿಪಡಿಸುವ ಸಮಾನತೆಯ ಹಕ್ಕು ಹಾಗೂ 21ನೇ ವಿಧಿ ಹೇಳುವ ಜೀವಿಸುವ ಸ್ವಾತಂತ್ರ್ಯ ಕೇಳಿ ರೋಹಿಂಗ್ಯಾ ಸಮುದಾಯ ಮುಂದಿಟ್ಟಿರುವ ವಾದದಲ್ಲಿ ಹುರುಳಿದೆ. ಏಕೆಂದರೆ ಈ ಹಕ್ಕು ‘ವ್ಯಕ್ತಿ’ಗೆ ನೀಡಿರುವಂಥದ್ದೇ ವಿನಾ ‘ಪ್ರಜೆ’ಗೆ ಮಾತ್ರ ನೀಡಿರುವಂಥದ್ದಲ್ಲ. ಆದರೆ ಕೆಲವು ವಾದಗಳ ಮೂಲಕ ಈ ಅಕ್ರಮ ವಲಸಿಗರನ್ನು ನಾಗರಿಕರಿಗೆ ಸರಿಸಮನಾದ ಸ್ಥಾನದಲ್ಲಿ ಇರಿಸುವ ಯತ್ನ ನಡೆದಿದೆ. ಇಂಥ ವಾದಗಳನ್ನು ಪ್ರಶ್ನಿಸಲೇಬೇಕು. ಉದಾಹರಣೆಗೆ, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ದೇಶದಲ್ಲಿ ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಯೂರುವ ಸ್ವಾತಂತ್ರ್ಯಗಳನ್ನು ಸಂವಿಧಾನದ 19ನೇ ವಿಧಿ ನೀಡಿರುವುದು ‘ಪ್ರಜೆ’ಗಳಿಗೆ ಮಾತ್ರ.

ಸಂವಿಧಾನದಲ್ಲಿ ಹೇಳಿರುವುದು ಮಾತ್ರವೇ ಅಲ್ಲ, ದೇಶದ ಎಲ್ಲ ಪ್ರಜೆಗಳ ಹಕ್ಕುಗಳನ್ನು ರಕ್ಷಿಸಬೇಕಿರುವುದು ಭಾರತದ ಪ್ರಭುತ್ವದ ಕರ್ತವ್ಯವೂ ಹೌದು. ದೇಶದ ಗಡಿಗಳು ಅಭೇದ್ಯವಾಗಿಲ್ಲದ ಕಾರಣ, ಗಡಿಯಾಚೆಗಿಂದ ಜನ ಭಾರತದೊಳಕ್ಕೆ ನುಸುಳುವುದು ದಶಕಗಳಿಂದ ನಡೆದು ಬಂದಿದೆ. ಇದರಿಂದಾಗಿ ಹಲವು ಗಡಿ ರಾಜ್ಯಗಳ ಜನಸಂಖ್ಯಾ ಸ್ವರೂಪದಲ್ಲಿ ಭಾರಿ ಬದಲಾವಣೆಗಳು ಆಗಿವೆ. ಹಾಗೆಯೇ, ಭಾರತದೊಳಕ್ಕೆ ನುಸುಳಿದ ಭಯೋತ್ಪಾದಕರ ಕೈಯಲ್ಲಿ ಪ್ರಾಣ ತೆತ್ತ ಜನಸಾಮಾನ್ಯರು ಹಾಗೂ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಯಾರಿಗಾದರೂ ಪುನಃ ಹೇಳಬೇಕಾದ ಅಗತ್ಯ ಇದೆಯೇ

ರೋಹಿಂಗ್ಯಾ ಸಮುದಾಯದವರ ವಿಚಾರದಲ್ಲಿ ಹೇಳುವುದಾದರೆ, ಅವರು ದೇಶದೊಳಗೆ ಇರುವುದರಿಂದ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳು ಆಗಬಲ್ಲದು ಎನ್ನಲು ರಾಷ್ಟ್ರದ ಭದ್ರತೆಯ ಹೊಣೆ ಹೊತ್ತಿರುವ ಸಂಸ್ಥೆಗಳ ಬಳಿ ಸಾಕಷ್ಟು ಮಾಹಿತಿ ಇದೆ. ರೋಹಿಂಗ್ಯಾ ಸಮುದಾಯದ ಕೆಲವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿದ್ದಾರೆ. ಅವರು ಜಮ್ಮು, ದೆಹಲಿ ಮತ್ತು ಹೈದರಾಬಾದ್‌ನಂತಹ ನಗರಗಳತ್ತ ಸಾಗಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಇಂತಹ ವ್ಯಕ್ತಿಗಳು ನಮ್ಮ ಆಂತರಿಕ ಭದ್ರತೆಗೆ ಗಂಭೀರ ಸವಾಲು ಒಡ್ಡುತ್ತಾರೆ. ಇವರು ಭಾರತದ ನಕಲಿ ಗುರುತಿನ ಪತ್ರ ಬಳಸುತ್ತಿರುವ ಬಗ್ಗೆ, ಹವಾಲಾ ಮಾರ್ಗದ ಮೂಲಕ ಹಣ ಒಗ್ಗೂಡಿಸುತ್ತಿರುವ ಬಗ್ಗೆ ಆಧಾರಗಳಿವೆ.

ಯಾವುದೇ ತೀರ್ಮಾನಕ್ಕೆ ಬರುವ ಮುನ್ನ, ರೋಹಿಂಗ್ಯಾ ಸಮುದಾಯದವರು ಎದುರಿಸುತ್ತಿರುವ ಸ್ಥಿತಿಗೆ ಭಾರತವನ್ನು ಹೊಣೆ ಮಾಡುವ ಮೊದಲು, ಪ್ರಕ್ಷುಬ್ಧಗೊಂಡಿರುವ ಮ್ಯಾನ್ಮಾರ್‌ನ ರಾಖೈನ್‌ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವುದು ಉತ್ತಮ. ಅಲ್ಲಿನ ಸ್ಥಿತಿಯನ್ನು ವಿಶ್ವಸಂಸ್ಥೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನೇತೃತ್ವದ ಸಲಹಾ ಆಯೋಗ ಪರಿಶೀಲಿಸಿದೆ. ಕೋಫಿ ಅನ್ನಾನ್ ವರದಿಯು ಇಂದಿನ ಸಂಘರ್ಷದ ಮೂಲದ ಬಗ್ಗೆ ಅವಲೋಕನ ನಡೆಸಿದೆ. ‘ಮ್ಯಾನ್ಮಾರ್‌ ದೇಶವು 1948ರಲ್ಲಿ ಸ್ವಾತಂತ್ರ್ಯ ಪಡೆದ ಕೆಲವೇ ಸಮಯದಲ್ಲಿ ರಾಖೈನ್‌ ರಾಜ್ಯದಲ್ಲಿ ಮುಸ್ಲಿಂ ಮುಜಾಹಿದ್ದೀನ್ ಬಂಡಾಯ ಶುರುವಾಯಿತು. ರಾಜ್ಯದ ಉತ್ತರ ಭಾಗದಲ್ಲಿ ಸ್ವಾಯತ್ತ ಮುಸ್ಲಿಂ ಪ್ರದೇಶ ರಚಿಸಬೇಕು, ಸಮಾನ ಹಕ್ಕುಗಳನ್ನು ನೀಡಬೇಕು ಎಂಬುದು ಬಂಡಾಯದ ಆಗ್ರಹವಾಗಿತ್ತು’ ಎಂದು ವರದಿ ಹೇಳಿದೆ. ಆ ಬಂಡಾಯವನ್ನು ಸೋಲಿಸಲಾಯಿತು. ಆದರೆ, ರೋಹಿಂಗ್ಯಾ ಸಾಲಿಡಾರಿಟಿ ಆರ್ಗನೈಸೇಷನ್ (ಆರ್‌ಎಸ್‌ಒ) ಎನ್ನುವ ಸಂಘಟನೆಯು ನಂತರದ ದಿನಗಳಲ್ಲಿ ಸಶಸ್ತ್ರ ಹೋರಾಟವನ್ನು ಪುನಃ ಶುರುಮಾಡಿತು.

ಇದಾದ ನಂತರ, ಹರಾಕತ್ ಅಲ್–ಯಕೀನ್ (ಇದನ್ನು ನಂತರದ ದಿನಗಳಲ್ಲಿ ಆರಾಕಾನ್‌ ರೋಹಿಂಗ್ಯಾ ವಿಮೋಚನಾ ಸೇನೆ – ಎಆರ್‌ಎಸ್‌ಎ – ಎಂದು ಹೆಸರಿಸಲಾಯಿತು) ಸಂಘಟನೆಯು ಸರ್ಕಾರಿ ಭದ್ರತಾ ಪಡೆಗಳ ಮೇಲೆ 2016ರ ಅಕ್ಟೋಬರ್‌ನಲ್ಲಿ ದಾಳಿ ನಡೆಸಿತು. ಇದು ಸರ್ಕಾರದ ಭದ್ರತಾ ಪಡೆಗಳ ಮೇಲೆ ನಡೆದ ಈವರೆಗಿನ ಅತಿ ದೊಡ್ಡ ಮುಸ್ಲಿಂ ದಾಳಿಗಳಲ್ಲಿ ಒಂದು ಎಂದು ಆ ವರದಿಯಲ್ಲಿ ಹೇಳಲಾಗಿದೆ. ರಾಖೈನ್‌ನಲ್ಲಿ, ರಾಷ್ಟ್ರೀಯವಾದಿ ಹಾಗೂ ಕಮ್ಯುನಿಸ್ಟ್‌ ಚಿಂತನೆಯ ಸಶಸ್ತ್ರ ಗುಂಪುಗಳು ಮ್ಯಾನ್ಮಾರ್‌ ಸೇನೆಯ ಜೊತೆ ಸೆಣಸಾಟ ನಡೆಸಿವೆ. ತಮ್ಮದೇ ಆದ ಸೇನೆ ಹೊಂದಿರುವವರು, ಹಿಂಸಾತ್ಮಕ ಹಾಗೂ ರಕ್ತಸಿಕ್ತ ಕೋಮು ಸಂಘರ್ಷಗಳನ್ನು ನಡೆಸಿರುವವರು, ಗಡಿ ದಾಟಿ ಭಾರತದ ಒಳಕ್ಕೆ ನುಸುಳಿದಾಗ ಅವರು ಮಾಡಿದ ತಪ್ಪುಗಳನ್ನೆಲ್ಲ ಅಲಕ್ಷಿಸುವುದು ಸರಿಯೇ? ನಮಗೆ ನಮ್ಮದೇ ಆದ ಸಮಸ್ಯೆಗಳು ಸಾಕಷ್ಟಿಲ್ಲವೇ?

ಕೋಮು ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಲ್ಲಿ ಸಂಕೀರ್ಣವಾಗಿರುವ ನಾಗರಿಕತ್ವದ ಸಮಸ್ಯೆಯನ್ನು ಬಗೆಹರಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೋಫಿ ಅನ್ನಾನ್ ಆಯೋಗವು ಶಿಫಾರಸು ಮಾಡಿದೆ. ಯಾವ ರಾಷ್ಟ್ರಕ್ಕೂ ಸೇರಿರದ ಅತಿ ದೊಡ್ಡ ಸಮುದಾಯ ಇರುವುದು ಮ್ಯಾನ್ಮಾರ್‌ನಲ್ಲಿ ಎಂದು ಆಯೋಗ ಹೇಳಿದೆ. ‘ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಇದು ಜನಸಾಮಾನ್ಯರಿಗೆ ತೊಂದರೆಯಾಗುವುದು ಹಾಗೂ ಜನರಲ್ಲಿ ಅಭದ್ರತೆಯ ಭಾವ ಮೂಡುವುದು ಮುಂದುವರಿಯಲಿದೆ’ ಎಂದು ಹೇಳಿದೆ. ಭಾರತವು ಕೋಫಿ ಅನ್ನಾನ್‌ ವರದಿಯನ್ನು ಬೆಂಬಲಿಸಿರುವುದು ಸರಿಯಾಗಿಯೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿ, ಕೋಮು ಸೌಹಾರ್ದ, ನ್ಯಾಯ, ಮಾನವನ ಘನತೆ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳನ್ನು ಆಧರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಒಳಕ್ಕೆ ಹರಿದುಬರುತ್ತಿರುವ ನಿರಾಶ್ರಿತರಿಗಾಗಿ ಭಾರತವು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ.

ತೊಂದರೆಯಲ್ಲಿ ಇರುವ ಜನರಿಗೆ ಭಾರತವು ಎಂದಿನಿಂದಲೂ ಆಶ್ರಯ ನೀಡುತ್ತ ಬಂದಿರುವುದು ನಿಜವಾದರೂ, ತನ್ನ ಪ್ರಜೆಗಳನ್ನು ರಕ್ಷಿಸುವುದು ಭಾರತದ ಪ್ರಭುತ್ವದ ಪ್ರಾಥಮಿಕ ಕರ್ತವ್ಯ. ಪ್ರಜೆಗಳ ಒಳಿತನ್ನು ಅಪಾಯಕ್ಕೆ ನೂಕುವ ಯಾವುದೇ ಕ್ರಿಯೆ ಅಥವಾ ನೀತಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ‘ಪ್ರಜೆಗೆ ಮೊದಲ ಆದ್ಯತೆ’ ಎಂಬ ನೀತಿಯನ್ನು ಸರ್ಕಾರ ಅನುಸರಿಸಬೇಕು. ಪರಿಸ್ಥಿತಿ ಕೈಮೀರಿ ಹೋಗುವ ಮೊದಲು ರೋಹಿಂಗ್ಯಾ ಸಮುದಾಯದವರನ್ನು ಗುರುತಿಸಿ, ಅವರನ್ನು ವಾಪಸ್ ಕಳುಹಿಸಬೇಕು. ರೋಹಿಂಗ್ಯಾಗಳ ಪರ ಕಣ್ಣೀರು ಸುರಿಸುತ್ತಿರುವವರ ಮಾತಿಗೆ ಸರ್ಕಾರ ಬೆಲೆ ಕೊಡಬೇಕಾಗಿಲ್ಲ. ಅದರಲ್ಲೂ ಮುಖ್ಯವಾಗಿ, ಭಾರತದಲ್ಲಿ ವಾಸವಿದ್ದೂ ಅಭಾರತೀಯರಂತೆ ವರ್ತಿಸುವವರ ಮಾತುಗಳಿಗೆ, ತಮ್ಮ ದೇಶದವರಿಗೆ ಪಾಠ ಹೇಳುವ ಸಾಮಾನ್ಯ ಜ್ಞಾನ ಹಾಗೂ ಧೈರ್ಯ ಇಲ್ಲದಿದ್ದರೂ ಭಾರತ ಎನ್ನುವ ಅತಿದೊಡ್ಡ ಪ್ರಜಾತಂತ್ರವಾದ, ವಿಶ್ವದ ಅತ್ಯಂತ ವೈವಿಧ್ಯಮಯವಾದ, ಅತಿಥಿ ಸತ್ಕಾರಕ್ಕೆ ಹೆಸರಾದ ಹಾಗೂ ಅತ್ಯಂತ ಉದಾರಿಯಾದ ಭಾರತದ ಘನತೆ ಹಾಳು ಮಾಡಲು ನಿರಂತರವಾಗಿ ಯತ್ನಿಸುವ ಬೇರೆ ದೇಶಗಳ ಜನರ ಮಾತು ಕೇಳುವ ಅಗತ್ಯವಂತೂ ಇಲ್ಲವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT