ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಯೇ ಕ್ಲಾಸ್ ಮಾನಿಟರ್ ಆದಾಗ...

Last Updated 25 ಮೇ 2017, 19:30 IST
ಅಕ್ಷರ ಗಾತ್ರ
ಬ್ರಿಟಿಷರ ಕೈಯಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವುದಕ್ಕಾಗಿ ಮೂವರು ಸದಸ್ಯರ ‘ಸಂಪುಟ ಸಮಿತಿ’ಯೊಂದು 1946ರ ಮಾರ್ಚ್‌ನಲ್ಲಿ ಭಾರತಕ್ಕೆ ಬಂತು. ತಮ್ಮನ್ನು ಭೇಟಿಯಾಗುವಂತೆ ಸೇವಾಗ್ರಾಮದಲ್ಲಿದ್ದ ಮಹಾತ್ಮ ಗಾಂಧಿ ಅವರನ್ನು ಈ ಸಮಿತಿಯು ಆಹ್ವಾನಿಸಿತು.
 
ನವದೆಹಲಿಯ ಹೃದಯಭಾಗದಲ್ಲಿರುವ  ತಮ್ಮ ವಿಶಾಲ ಬಂಗಲೆಯಲ್ಲಿ ತಂಗಿ, ಗಾಂಧಿ ಅವರು ತಮ್ಮ ಆತಿಥ್ಯ ಸ್ವೀಕರಿಸಬೇಕು ಎಂದು ಹಿಂದಿನಿಂದಲೂ ಗಾಂಧಿಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಅವರ ಅನುಯಾಯಿ ಜಿ.ಡಿ. ಬಿರ್ಲಾ ಬಯಸಿದ್ದರು. ಆದರೆ ಗಾಂಧಿ ಭಂಗಿಗಳ (ಗುಡಿಸುವವರು) ಕಾಲೊನಿಯಲ್ಲಿ ತಂಗಲು ಬಯಸಿದರು. ಅವರು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದ ಗುಡಿಸಲಿಗೆ ಆತುರಾತುರವಾಗಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸಲು ಬಿರ್ಲಾ ಮುಂದಾದರು.
 
ಗಾಂಧಿ ದೆಹಲಿಗೆ ಬರುವುದಕ್ಕೆ ಮುನ್ನವೇ ಅವರ ಕಾರ್ಯದರ್ಶಿ ಪ್ಯಾರೇಲಾಲ್ ಅವರು ಬಿರ್ಲಾ ಅವರಿಗೆ ಪತ್ರವೊಂದನ್ನು ಬರೆದು ‘ಭಂಗಿ ನಿವಾಸ’ದಲ್ಲಿ ಮಾಡುವ ಯಾವುದೇ ವ್ಯವಸ್ಥೆ ಶಾಶ್ವತವಾಗಿರಬೇಕು ಎಂದು ಗಾಂಧಿ ಬಯಸಿದ್ದಾರೆ ಎಂದು ತಿಳಿಸಿದರು. ‘ವೈರ್‌ಗಳನ್ನು ತೆಗೆದ ಮರುಕ್ಷಣವೇ ಗಾಂಧಿ ಅವರು ಆ ಮನೆಯಿಂದ ಹೊರನಡೆಯುತ್ತಾರೆ. ಇಡೀ ವ್ಯವಸ್ಥೆ ಒಂದು ಪ್ರಹಸನವಾದೀತು’ ಎಂದು ಪ್ಯಾರೇಲಾಲ್ ಹೇಳಿದ್ದರು.
 
‘ಗಾಂಧಿ ಅವರ ವಾಸ್ತವ್ಯದಿಂದಾಗಿ ಭಂಗಿ ನಿವಾಸದಲ್ಲಿ ಯಾವುದಾದರೂ ಶಾಶ್ವತ ಬದಲಾವಣೆ ಉಂಟಾಗಬೇಕು’ ಎಂದು ಗಾಂಧಿಯ ಪರವಾಗಿ ಮಾತನಾಡಿದ್ದ ಪ್ಯಾರೇಲಾಲ್ ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳಿದ್ದರು.
 
1946ರ ಏಪ್ರಿಲ್ ಒಂದರಂದು ಗಾಂಧಿ ಅವರು ದೆಹಲಿಗೆ ತಲುಪಿದರು. ಅದೇ ಸಂಜೆ ನಡೆದ ಪ್ರಾರ್ಥನಾ ಸಭೆಯಲ್ಲಿ ‘ಅಸ್ಪೃಶ್ಯತೆಯು ಹಿಂದೂ ಧರ್ಮದ ಅತ್ಯಂತ ಕಪ್ಪು ಚುಕ್ಕೆ’ ಎಂದು ಬಣ್ಣಿಸಿದರು. ಹಿಂದೂಗಳು ಮಾಡಬಹುದಾದ ‘ಕನಿಷ್ಠ ಪ್ರಾಯಶ್ಚಿತ್ತ’ ಏನೆಂದರೆ, ‘ಹರಿಜನರ ಅನನುಕೂಲಗಳನ್ನು ಹಂಚಿಕೊಳ್ಳುವುದು ಮತ್ತು ಅವರು ಪಡೆಯಲು ಸಾಧ್ಯವಿಲ್ಲದ ಸೌಲಭ್ಯಗಳನ್ನು ನಿರಾಕರಿಸುವುದು’ ಎಂದು ಗಾಂಧಿ ಹೇಳಿದರು.
 
ಪಾಕಿಸ್ತಾನ ಸೇನೆಯಿಂದ ಕ್ರೂರವಾಗಿ ಹತ್ಯೆಯಾದ ಬಿಎಸ್‍ಎಫ್‌ ಯೋಧನ ಮನೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಇತ್ತೀಚೆಗೆ ನೀಡಿದ ಭೇಟಿಯ ಬಗ್ಗೆ ಓದಿದಾಗ ನನಗೆ ಈ ಘಟನೆ ನೆನಪಾಯಿತು. ಯೋಧನ ಮನೆಗೆ ಮುಖ್ಯಮಂತ್ರಿ ತಲುಪುವುದಕ್ಕೆ ಮೊದಲು ಜಿಲ್ಲಾಡಳಿತ ಅಲ್ಲಿ ಹವಾನಿಯಂತ್ರಣ ಯಂತ್ರ ಅಳವಡಿಸಿತ್ತು, ನೆಲಕ್ಕೆ ಕೆಂಪು ಹಾಸು ಹಾಸಿ, ಸೋಫಾಗಳನ್ನು ಇರಿಸಿತ್ತು. ಶೌಚಾಲಯಗಳಲ್ಲಿ ಹೊಸ ಟವಲುಗಳನ್ನು ಇರಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಮನೆಯಿಂದ ಹೊರಗೆ ನಡೆದ ಕೂಡಲೇ ಈ ಎಲ್ಲ ಸೌಲಭ್ಯಗಳನ್ನು ತೆಗೆಯಲಾಗಿತ್ತು.
 
ಈ ಸುದ್ದಿ ಮಾಧ್ಯಮದಲ್ಲಿ ವರದಿಯಾದಾಗ ಯೋಗಿಗೆ ಹವಾ ನಿಯಂತ್ರಣ ವ್ಯವಸ್ಥೆ ಬೇಕೇ ಎಂದು ಕೆಲವು ವಿಶ್ಲೇಷಕರು ಆಶ್ಚರ್ಯ ವ್ಯಕ್ತಪಡಿಸಿದ್ದರು. ತಮ್ಮನ್ನು ‘ಯೋಗಿ’ ಎಂದು ಕರೆದುಕೊಂಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಐಷಾರಾಮಿ ವಸ್ತುಗಳ ಬಗ್ಗೆ ಹೊಂದಿರುವ ಮೋಹ ಮಾತ್ರ ಇಲ್ಲಿ ಇರುವ ಪ್ರಶ್ನೆ ಅಲ್ಲ. ಯೋಗಿಗಳು ಧ್ಯಾನ ಮತ್ತು ಅಧ್ಯಾತ್ಮದ ಜೀವನಕ್ಕಾಗಿ ಅಧಿಕಾರವನ್ನು ತ್ಯಜಿಸಬೇಕು ಎಂದು ಲೆಕ್ಕ.
 
ಆದರೆ ಈ ವ್ಯಕ್ತಿ ಭಾರತದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯದ ರಾಜಕೀಯ ನಿಯಂತ್ರಣ ಪಡೆದುಕೊಳ್ಳುವುದಕ್ಕೆ ಮೊದಲು ಪ್ರಭಾವಿ ಮತ್ತು ಸಮೃದ್ಧವಾದ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಆಧ್ಯಾತ್ಮಿಕ ವ್ಯಕ್ತಿಗಳು ಅನುಕಂಪ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವಿಕೆಯನ್ನು ಬೋಧಿಸಬೇಕು ಎಂದು ನಂಬಲಾಗುತ್ತದೆ. ಆದರೆ ಈ ವ್ಯಕ್ತಿ ಸಹಜೀವಿಗಳ ವಿರುದ್ಧ ಹಿಂಸೆಯನ್ನು ಸಾಮಾನ್ಯವಾಗಿ ಬೋಧಿಸುತ್ತಿದ್ದರು ಮತ್ತು ಕೆಲವೊಮ್ಮೆ ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ದರು.
 
ಉತ್ತರಪ್ರದೇಶದ ಅತ್ಯಂತ ಗೌರವಾನ್ವಿತ ಲೇಖಕಿಯರಲ್ಲಿ ಒಬ್ಬರಾದ ನಯನತಾರಾ ಸೆಹಗಲ್ ಅವರು ಗೋರಖಪುರದ ಗೋರಖನಾಥ ಮಠದ ಮುಖ್ಯಸ್ಥ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲ ದಿನಗಳ ನಂತರ ಹೀಗೆ ಹೇಳಿದ್ದಾರೆ: ‘ಹಲವು ವರ್ಷಗಳಿಂದ ಯೋಗವನ್ನು ಅಭ್ಯಾಸ ಮಾಡುತ್ತಿರುವ ನನಗೆ ಈ ಆಧ್ಯಾತ್ಮಿಕ ಹಾದಿಯ ಪ್ರಧಾನ ತತ್ವವೇ ಅಹಿಂಸೆ ಎಂದು ಬೋಧಿಸಿದ್ದರು. ಹಿಂಸೆಯನ್ನು ಪ್ರತಿಪಾದಿಸುವ ವ್ಯಕ್ತಿ ಯೋಗಿ ಆಗುವುದಿಲ್ಲ. ಹಾಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಶ್ರೀ ಆದಿತ್ಯನಾಥ ಎಂದು ಸಂಬೋಧಿಸಲು ನನಗೆ ಅನುಮತಿ ಬೇಕು’.
 
ಆದಿತ್ಯನಾಥ ಅವರು ಮುಖ್ಯಮಂತ್ರಿಯಾಗಿ ನೇಮಕವಾದದ್ದು ಸೆಹಗಲ್ ಅವರಲ್ಲಿ ಕಳವಳ ಮೂಡಿಸಿದೆ. ಆದರೆ ಇತರ ಲೇಖಕರು ಇದೊಂದು ಅಸಾಮಾನ್ಯ ನಡೆ ಎಂದು ಸಂಭ್ರಮಿಸಿದ್ದಾರೆ. ತರಗತಿಯಲ್ಲಿರುವ ರೌಡಿಯನ್ನು ಮಾನಿಟರ್ ಮಾಡುವುದು ತರಗತಿಯನ್ನು ಶಾಂತಿಯಿಂದ ಇರಿಸುವುದಕ್ಕೆ ಇರುವ ಅತ್ಯುತ್ತಮ ಮಾರ್ಗ ಎಂದು ಒಬ್ಬ ಅಂಕಣಕಾರರು ಹೇಳಿದ್ದಾರೆ. ಇದು ಅಂತರ್ಬೋಧೆಯಿಂದ ಕೈಗೊಂಡ ನಿರ್ಧಾರ ಎಂದು ಮತ್ತೊಬ್ಬ ಅಂಕಣಕಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.
 
ಆದಿತ್ಯನಾಥರನ್ನು ಮುಖ್ಯವಾಹಿನಿಗೆ ತರಬಲ್ಲ ಪ್ರಜಾಸತ್ತಾತ್ಮಕ ಆಡಳಿತದ ಸಾಮರ್ಥ್ಯದ ಬಗ್ಗೆ ಪ್ರಧಾನಿ ಮೋದಿ ಅವರಿಗಿರುವ ವಿಶ್ವಾಸವನ್ನು ಅವರು ಶ್ಲಾಘಿಸಿದ್ದಾರೆ.   ಆದಿತ್ಯನಾಥ ಅವರು ಮುಸ್ಲಿಂ ವಿರೋಧಿ ಎಂಬ ಭಾವನೆ ಸರಿಯಲ್ಲ ಎಂದು ಕೆಲವು ವರದಿಗಾರರು ಬರೆದಿದ್ದಾರೆ. ಯಾಕೆಂದರೆ ಗೋರಖನಾಥ ಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವವರಲ್ಲಿ ಒಬ್ಬ ಮುಸ್ಲಿಂ ಎಂದು ಅವರು ಹೇಳಿದ್ದಾರೆ.
 
ಆದಿತ್ಯನಾಥ ಅವರು ಅಧಿಕಾರಕ್ಕೆ ಬಂದು ಎರಡು ತಿಂಗಳಷ್ಟೇ ಆಗಿದೆ. ಈ ಅಲ್ಪ ಅವಧಿಯಲ್ಲಿಯೇ ಹಿರಿಯ ಮತ್ತು ಹೆಚ್ಚು ಸ್ವತಂತ್ರ ಮನೋಭಾವದ ಲೇಖಕಿ ಸೆಹಗಲ್ ಅವರೇ ಆದಿತ್ಯನಾಥ ಅವರ ವ್ಯಕ್ತಿತ್ವ ಮತ್ತು ರಾಜಕಾರಣವನ್ನು ಹೆಚ್ಚು ಗಾಢವಾಗಿ ಅರ್ಥ ಮಾಡಿಕೊಂಡಿದ್ದಾರೆಯೇ ಹೊರತು ಆಡಳಿತದ ಜತೆ ಸಾಗಲು ನಿರ್ಧರಿಸಿರುವ ಯುವ ಲೇಖಕರಲ್ಲ ಎಂಬುದನ್ನು ಮುಖ್ಯಮಂತ್ರಿ ಸಾಬೀತು ಮಾಡಿರುವುದು ಬೇಸರದ ಸಂಗತಿ.
 
ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಅವರು ‘ಅಕ್ರಮ’ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ಯಾವ ಕಸಾಯಿಖಾನೆಗಳಿಗೆ ಅಗತ್ಯ ಅನುಮತಿ ಮತ್ತು ಪರವಾನಗಿಗಳು ಇವೆ ಎಂಬುದನ್ನು ಪರೀಕ್ಷಿಸುವ ಮೊದಲೇ ಆದಿತ್ಯನಾಥ ಅವರ ಅನುಯಾಯಿಗಳನ್ನು ಜತೆಗೆ ಕರೆದೊಯ್ದ ಪೊಲೀಸರು ರಾಜ್ಯದಾದ್ಯಂತ ಇದ್ದ ಕಸಾಯಿಖಾನೆಗಳನ್ನು ಮನಸೋಇಚ್ಛೆ ಜಪ್ತಿ ಮಾಡಿದ್ದಾರೆ. ಉತ್ತರಪ್ರದೇಶದ ಆರ್ಥಿಕವಾಗಿ ಕಾರ್ಯಸಾಧುವಾದ ಕೆಲವೇ ಉದ್ಯಮಗಳಲ್ಲಿ ಮಾಂಸ ರಫ್ತು ಕೂಡ ಒಂದು.
 
ಅಮೂಲ್ಯವಾದ ವಿದೇಶಿ ವಿನಿಮಯವನ್ನು ಗಳಿಸುವುದರ ಜತೆಗೆ ಸಾವಿರಾರು ಜನರಿಗೆ ಇದು ಉದ್ಯೋಗವನ್ನೂ ನೀಡಿದೆ. ಆತುರದ ಆದೇಶ ಮತ್ತು ಅದನ್ನು ಜಾರಿ ಮಾಡಿದ ದರ್ಪದ ರೀತಿಯಿಂದಾಗಿ ಮುಖ್ಯಮಂತ್ರಿ ತಮ್ಮ ರಾಜ್ಯದ ಅರ್ಥ ವ್ಯವಸ್ಥೆಗೆ ಹೊಡೆತ ಕೊಟ್ಟದ್ದೇ ಅಲ್ಲದೆ ಸಾವಿರಾರು ಜನರ ಜೀವನೋಪಾಯವನ್ನೂ ಇಲ್ಲವಾಗಿಸಿದರು.
 
ಈ ಮಧ್ಯೆ, ಮುಖ್ಯಮಂತ್ರಿಯಾಗಿ ಆದಿತ್ಯನಾಥ ಅವರ ನೇಮಕ ಗೋ–ಗೂಂಡಾಗಳಿಗೆ ಇನ್ನಷ್ಟು ಧೈರ್ಯ ತುಂಬಿತು. ಅವರು ಬಲಿಪಶುಗಳನ್ನು ಹುಡುಕಿಕೊಂಡು ಬೀದಿಗೆ ಬಂದರು. ಕಳೆದ ಎರಡು ತಿಂಗಳಲ್ಲಿ ಗೋರಕ್ಷಕರು ಹಲವು ಜನರ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಗೋ–ಗೂಂಡಾಗಳ ಪರ ವಹಿಸಿ ಅವರನ್ನು ಸುಮ್ಮನೆ ಬಿಟ್ಟರೆ, ದಾಳಿಗೆ ಒಳಗಾದವರ ಮೇಲೆಯೇ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದರು. ‘ಲವ್ ಜಿಹಾದ್’ ವಿರುದ್ಧದ ದಾಳಿ ಎಂಬ ಹೆಸರಿನಲ್ಲಿ ಹಿಂದೂ ತೀವ್ರವಾದಿಗಳು ಮುಸ್ಲಿಂ ಮನೆಗಳು ಮತ್ತು ಗ್ರಾಮಗಳ ಮೇಲೆ ದಾಳಿ ನಡೆಸಿದ್ದಾರೆ.
 
ಆದಿತ್ಯನಾಥ ಮುಖ್ಯಮಂತ್ರಿಯಾದ ನಂತರ ಹಿಂದೂ ಮತ್ತು ಮುಸ್ಲಿಮರ ನಡುವಣ ಸಂಘರ್ಷ ಹೆಚ್ಚಾಗಿದೆ ಎಂಬುದು ಕಣ್ಣಿಗೆ ಕಾಣುವಂತಿದೆ. ಹಾಗೆಯೇ ಮೇಲ್ಜಾತಿ ಮತ್ತು ಕೆಳಜಾತಿಯ ಜನಗಳ ನಡುವಣ ಸಂಘರ್ಷವೂ ಹೆಚ್ಚಾಗಿದೆ. ತಮ್ಮದೇ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾರೆ ಎಂಬುದರಿಂದ ಉತ್ತೇಜಿತರಾಗಿರುವ ಸಹಾರನ್‌ಪುರದ ಠಾಕೂರರು ದಲಿತರ ಮೇಲೆ ಅನಾಗರಿಕ ರೀತಿಯ ದಾಳಿ ನಡೆಸಿದ್ದಲ್ಲದೆ ಅವರ ಮನೆಗಳನ್ನು ಸುಟ್ಟು ಹಾಕಿದ್ದಾರೆ.
 
ಇಂತಹ ದಾಳಿಗೆ ಒಳಗಾದ ದಲಿತ ವ್ಯಕ್ತಿಯೊಬ್ಬರು ಈ ದಾಳಿಯ ಬಗ್ಗೆ ತೀಕ್ಷ್ಣವಾಗಿ ಆಡಿದ ಮಾತುಗಳು ಹೀಗಿವೆ: ‘ಚುನಾವಣೆಗಳು ಬಂದಾಗ ನಾವು ಹಿಂದೂಗಳು ಎಂದು ನಮಗೆ ಹೇಳಲಾಗಿತ್ತು. ಆದರೆ ಚುನಾವಣೆಗಳು ಮುಗಿದ ಬಳಿಕ ಮತ್ತೆ ನಾವು ದಲಿತರಾಗಿದ್ದೇವೆ’.
 
ಉತ್ತರಪ್ರದೇಶದ ಪೊಲೀಸರು ಆದಿತ್ಯನಾಥ ಅವರ ಗೂಂಡಾಗಳಿಂದ ಬೆದರಿಕೆಗೆ ಒಳಗಾದಂತೆ ಕಾಣಿಸುತ್ತಿದ್ದು, ಅವರಿಂದಲೇ ಆದೇಶಗಳನ್ನು ಪಡೆದುಕೊಳ್ಳುವ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಿತ್ಯನಾಥ ಅವರು ಹಿಂದೆ ಮಾಡಿದ ದ್ವೇಷ ಭಾಷಣಗಳ ವಿರುದ್ಧ ವಿಚಾರಣೆ ನಡೆಸಬೇಕೆಂದು ಅಲ್ಲಿನ ಕೆಲವು ದಿಟ್ಟ ಜನರು ನ್ಯಾಯಾಲಯಗಳಿಗೆ ದೂರು ನೀಡಿದ್ದಾರೆ.
 
‘ಅವರು ಒಬ್ಬ ಹಿಂದೂ ಹುಡುಗಿಯನ್ನು ಒಯ್ದರೆ ಮುಸ್ಲಿಮರ ನೂರು ಹುಡುಗಿಯರನ್ನು ನಾವು ತೆಗೆದುಕೊಳ್ಳಬೇಕು’ ಎಂದು ಒಂದು ಧ್ವನಿಮುದ್ರಿತ ಭಾಷಣದಲ್ಲಿ ಆದಿತ್ಯನಾಥ ಹೇಳಿದ್ದರು. ಮತ್ತೂ ಮುಂದುವರಿದ ಅವರು ‘ಸರ್ಕಾರ ಏನೂ ಮಾಡುವುದಿಲ್ಲ ಎಂದಾದರೆ ಹಿಂದೂಗಳೇ ಈ ವಿಚಾರವನ್ನು ಕೈಗೆತ್ತಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದಿದ್ದರು. ಆದಿತ್ಯನಾಥ ಅವರು ವೇದಿಕೆಯಲ್ಲಿ ಕುಳಿತಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ, ಮುಸ್ಲಿಂ ಮಹಿಳೆಯರ ಮೃತ ದೇಹಗಳನ್ನು ಗೋರಿಯಿಂದ ಹೊರತೆಗೆದು ಅತ್ಯಾಚಾರ ಮಾಡಬೇಕು ಎಂದು ಹೇಳಿದ್ದರು.
 
ಆದಿತ್ಯನಾಥ ಮತ್ತು ಅವರ ಬೆಂಬಲಿಗರು ದ್ವೇಷ ಭಾಷಣಗಳನ್ನು ಮಾಡಿದ್ದಾರೆ ಮತ್ತು ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಸಾಕ್ಷ್ಯಗಳ ಬಗ್ಗೆ ಯಾವುದೇ ಸಂದೇಹ ಇಲ್ಲ. ಆದರೆ ನ್ಯಾಯಾಲಯವು ವಿಚಾರಣೆ ಆರಂಭಿಸಬೇಕಾದರೆ ರಾಜ್ಯ ಸರ್ಕಾರದಿಂದ ಅನುಮತಿ ಬೇಕು. ಆದಿತ್ಯನಾಥ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ಅನುಮತಿ ನಿರಾಕರಿಸಲಾಗಿದೆ.
 
ಆದಿತ್ಯನಾಥ ಅವರ ಸಂಕುಚಿತ ಮನೋಭಾವವನ್ನು ಹಿಡಿದಿಡುವಂತಹ ಮತ್ತೊಂದು ಹೇಳಿಕೆಯನ್ನು ಅವರು ಇತ್ತೀಚೆಗೆ ನೀಡಿದ್ದಾರೆ. ‘ಅಕ್ಬರ್, ಔರಂಗಜೇಬ್ ಮತ್ತು ಬಾಬರ್ ಅತಿಕ್ರಮಣಕಾರರು. ಈ ಸತ್ಯವನ್ನು ನಾವು ಎಷ್ಟು ಬೇಗ ಒಪ್ಪಿಕೊಳ್ಳುತ್ತೇವೆಯೋ ಅಷ್ಟು ಬೇಗ ದೇಶದ ಸಮಸ್ಯೆಗಳೆಲ್ಲ ಮಾಯವಾಗುತ್ತವೆ’ ಎಂದು ಅವರು ಹೇಳಿದ್ದಾರೆ.
 
ಬಡತನ ಮತ್ತು ಅನಾರೋಗ್ಯ, ಮಹಿಳೆಯರು ಮತ್ತು ದಲಿತರ ವಿರುದ್ಧದ ದೌರ್ಜನ್ಯ, ಪರಿಸರ ನಾಶ, ನಕ್ಸಲರ ತೀವ್ರವಾದ ಮತ್ತು ಪೊಲೀಸರ ಕ್ರೌರ್ಯ, ಜಾತಿ ಮತ್ತು ಧರ್ಮ ಸಂಘರ್ಷ, ಕುಸಿದು ಬಿದ್ದಿರುವ ಅಪರಾಧ ನ್ಯಾಯ ವ್ಯವಸ್ಥೆ, ಭ್ರಷ್ಟಾಚಾರ ಮತ್ತು ಸಾರ್ವಜನಿಕ ಸಂಸ್ಥೆಗಳ ನಾಶ ಇಂತಹ ಸಮಸ್ಯೆಗಳ ಪರಿಹಾರಕ್ಕೆ ‘ಅಕ್ಬರ್, ಔರಂಗಜೇಬ್ ಮತ್ತು ಬಾಬರ್ ಅತಿಕ್ರಮಣಕಾರರು’ ಎಂದು ಜನರು ಪಠಿಸಿದರೆ ಸಾಕು ಎಂದು ಆದಿತ್ಯನಾಥ ಹೇಳುತ್ತಾರೆ! ಇಂತಹ ವ್ಯಕ್ತಿಗೆ 20 ಕೋಟಿ ಜನರ ಭವಿಷ್ಯದ ಹೊಣೆಯನ್ನು ಪ್ರಧಾನಿ ವಹಿಸಿದ್ದಾರೆ.
 
ಉತ್ತರಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗೆ ಹಿಂದಿನ ಮುಖ್ಯಮಂತ್ರಿಗಳು ಅನುಸರಿಸಿದ ಕೆಟ್ಟ ಮತ್ತು ಲೋಪಗಳಿಂದ ಕೂಡಿದ ನೀತಿಗಳು ಕಾರಣ. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದರು; ಎಸ್‌ಪಿ ಮತ್ತು ಬಿಎಸ್‌ಪಿಯ ಮುಖ್ಯಮಂತ್ರಿಗಳು ಜಾತೀಯತೆ ಮತ್ತು ಭ್ರಷ್ಟಾಚಾರಕ್ಕೆ ಒತ್ತಾಸೆ ನೀಡಿದರು.
 
ಆದಿತ್ಯನಾಥ ಅವರು ಅಧಿಕಾರಕ್ಕೆ ಬರುವುದಕ್ಕೆ ಬಹಳ ಹಿಂದೆಯೇ ಉತ್ತರ ಪ್ರದೇಶ ಎಂಬ ಹೆಸರಿನಲ್ಲಿ ಇರುವ ‘ಯು’ ಎಂಬ ಅಕ್ಷರ ಅನ್‌ಗವರ್ನೆಬಲ್ (ಆಡಳಿತ ಅಸಾಧ್ಯ) ಎಂಬುದರ ಸಂಕೇತವಾಗಿ ರೂಪುಗೊಂಡಿತ್ತು. ಅವರು ಅಧಿಕಾರಕ್ಕೆ ಬಂದ 60 ದಿನಗಳಲ್ಲಿಯೇ ಉತ್ತರ ಪ್ರದೇಶ ಇನ್ನೂ ಸ್ವಲ್ಪ ಹಿಂದೆ ಹೋಗಿದೆ ಎಂಬುದು ಆತಂಕಕಾರಿ ವಿಚಾರ. ಒಂದು ಅಂಕಿ ಅಂಶ ಇದನ್ನು ದೃಢಪಡಿಸುತ್ತದೆ.
 
‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವರದಿ ಪ್ರಕಾರ, ಆದಿತ್ಯನಾಥ ಅವರ ಹಿಂದೂ ಯುವವಾಹಿನಿಯ ಸದಸ್ಯತ್ವಕ್ಕೆ ಹಿಂದೆ ದಿನಕ್ಕೆ 50-100 ಅರ್ಜಿಗಳು ಬರುತ್ತಿದ್ದವು. ಈಗ ಈ ಗುಂಪು ಸೇರಲು ದಿನಕ್ಕೆ ಐದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬರುತ್ತಿವೆ. ಅಂದರೆ ತಿಂಗಳಿಗೆ ಒಂದೂವರೆ ಲಕ್ಷ, ವರ್ಷಕ್ಕೆ 18 ಲಕ್ಷ. ಮುಖ್ಯಮಂತ್ರಿಯಾಗಿ ಆದಿತ್ಯನಾಥ ಅವರು ಅವಧಿ ಪೂರ್ಣಗೊಳಿಸಿದರೆ ಈ ಸಂಖ್ಯೆ 90 ಲಕ್ಷವಾಗುತ್ತದೆ. ಇದು ಉತ್ತರ ಪ್ರದೇಶದ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಒಂದು ವಿಧಾನ ಆಗಿರಬಹುದು ಎಂದು ನನಗೆ ಅನಿಸುತ್ತದೆ.
 
ಆದರೆ ಇದು ಅಷ್ಟೊಂದು ಲಘುವಾಗಿ ಪರಿಗಣಿಸಬಹುದಾದ ವಿಚಾರ ಅಲ್ಲ. ಭಾರತದ ಆರು ಜನರಲ್ಲಿ ಒಬ್ಬ ಉತ್ತರ ಪ್ರದೇಶದ ನಿವಾಸಿ. ಉತ್ತರಪ್ರದೇಶವು ಬೀದಿ ಗುಂಪಿನ ಆಡಳಿತಕ್ಕೆ ಕುಸಿದರೆ ದೇಶದ ಬೇರೆಡೆ ಜೀವಿಸುವವರು ಅದರ ಪರಿಣಾಮಗಳಿಂದ ಪಾರಾಗುವುದು ಸಾಧ್ಯವಿಲ್ಲ. ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಕೇಂದ್ರ ನಾಯಕತ್ವ ತಡವಾಗಿಯಾದರೂ ಆದಿತ್ಯನಾಥ ಅವರನ್ನು ನಿಯಂತ್ರಿಸಲು ಹೊರಟಿವೆ ಎಂದು ಹೇಳಲಾಗುತ್ತಿದೆ.
 
ಆದರೆ ಅವರ ಹಿನ್ನೆಲೆ ಮತ್ತು ಮನೋಧರ್ಮವನ್ನು ನೋಡಿದರೆ ನೀತಿಯ ವಿಚಾರದಲ್ಲಿ ಅವರು ತಮ್ಮ ಹಾದಿ ಬದಲಿಸಬಹುದು ಎಂದು ಅನಿಸುವುದಿಲ್ಲ. ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ತರುವುದು, ಕಾನೂನಿನ ಆಡಳಿತಕ್ಕೆ ಗೌರವ ನೀಡಿ ಅದನ್ನು ಜಾರಿಗೆ ತರುವುದು, ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡಬಲ್ಲ ಉದ್ಯಮಿಗಳನ್ನು ಆಕರ್ಷಿಸುವಂತಹ ಕೆಲಸಗಳನ್ನು ಅವರು ಪ್ರಾಮಾಣಿಕವಾಗಿ ಮಾಡುತ್ತಾರೆ ಎಂದು ನಂಬುವುದು ಕಷ್ಟ.
ಭಾರತದ ಅತಿ ಹೆಚ್ಚು ಜನರಿರುವ ರಾಜ್ಯದ ವಿಧಿ ಹಿಂದೆಂದಿಗಿಂತಲೂ ನಿರಾಶಾದಾಯಕವಾಗಿ ಕಾಣಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT