ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀಪುತ್ರರ ಸಂಪತ್ತು ಸೃಷ್ಟಿಗೆ ಅಡ್ಡದಾರಿಗಳಿಲ್ಲ...

Last Updated 31 ಜುಲೈ 2012, 19:30 IST
ಅಕ್ಷರ ಗಾತ್ರ

ವಿಶ್ವದ 10 ಮಂದಿ ಮುಂಚೂಣಿ ಕುಬೇರರ ಹೊಸ ಪಟ್ಟಿ ಪ್ರಕಟವಾಗಿದ್ದು, ಹಲವಾರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತೀಯರು ಈ ಗಣ್ಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಈ ಹಿಂದೆ ಪಟ್ಟಿಯಲ್ಲಿ ಇರುತ್ತಿದ್ದ ಮುಖೇಶ್ ಅಂಬಾನಿ, ಅಜೀಂ ಪ್ರೇಮ್‌ಜಿ, ಲಕ್ಷ್ಮೀ ಮಿತ್ತಲ್ ಅವರ ಹೆಸರುಗಳೂ ಈ ಬಾರಿ ಕಾಣೆಯಾಗಿವೆ.

ಇದೊಂದು ಸಾಂಕೇತಿಕ ಪಟ್ಟಿಯಾಗಿದ್ದರೂ, ಇದು ನೀಡುವ ಸಂದೇಶ ತುಂಬ ಮಹತ್ವದ್ದಾಗಿರುತ್ತದೆ. ದೇಶದಲ್ಲಿ ಆರ್ಥಿಕ ಉದಾರೀಕರಣ ಆರಂಭಗೊಳ್ಳುವ ಮುನ್ನ ಭಾರತದ ಯಾರೊಬ್ಬರೂ ಈ ವಿಶ್ವದ ಮುಂಚೂಣಿ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಿರಲಿಲ್ಲ.

ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಕಂಡು ಬರುತ್ತಿದ್ದಂತೆ ಸ್ಫೋಟಕ ಸ್ವರೂಪದಲ್ಲಿ ಬೆಳವಣಿಗೆಗಳು ಕಂಡು ಬರತೊಡಗಿದವು. ಇದರಿಂದ ಉದ್ಯಮಿಗಳ ಸಂಪತ್ತು ನಿರಂತರವಾಗಿ ಹೆಚ್ಚುತ್ತಲೇ ಹೋಯಿತು. ಕ್ರಮೇಣ ಅನೇಕ ಉದ್ಯಮ ಸಂಸ್ಥೆಗಳು, ಉದ್ಯಮ ದಿಗ್ಗಜರು ಈ ಪ್ರತಿಷ್ಠಿತರ ಸಾಲಿಗೆ ಸೇರ್ಪಡೆಯಾಗತೊಡಗಿದರು. ಇತ್ತೀಚಿನ ದಿನಗಳಲ್ಲಿ ವಿಶ್ವ ಕುಬೇರರ ಸಾಲಿನಲ್ಲಿ ಭಾರತೀಯರ ಸಂಖ್ಯೆ ಹಠಾತ್ತಾಗಿ ಮತ್ತೆ ಕ್ಷೀಣಿಸತೊಡಗಿದೆ.

ಹೊಸ ಕೋಟ್ಯಧಿಪತಿಗಳ ಪಟ್ಟಿಯಲ್ಲಿ 69 ಶತಕೋಟಿ ಡಾಲರ್ (ರೂ 3,45,000 ಕೋಟಿ) ಸಂಪತ್ತಿನ ಒಡೆಯರಾಗಿರುವ ಮೆಕ್ಸಿಕೊದ ಕಾರ್ಲೋಸ್ ಸ್ಲಿಮ್ ಮುಂಚೂಣಿ ಸ್ಥಾನದಲ್ಲಿ ಇದ್ದರೆ, 61 ಶತಕೋಟಿ ಡಾಲರ್‌ನ (ರೂ 3,05,000 ಕೋಟಿ) ಬಿಲ್ ಗೇಟ್ಸ್ ದ್ವಿತೀಯ ಸ್ಥಾನದಲ್ಲಿ ಇದ್ದಾರೆ. ಹಾಂಕಾಂಗ್‌ನ ಲಿ ಕಾಷಿಂಗ್ ಅವರು ಮಾತ್ರ ಏಷ್ಯಾ ಪ್ರತಿನಿಧಿಯಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತೀಯರು ಈ ಪಟ್ಟಿಯಲ್ಲಿ ಇಲ್ಲದಿರುವುದು ನಿರಾಶೆ ಮೂಡಿಸಿದ್ದರೂ ಅದರಲ್ಲಿ ಚಕಿತಪಡುವಂತಹ ಸಂಗತಿ ಏನೂ ಇಲ್ಲ. ದೇಶಿ ಷೇರುಪೇಟೆಯ ಕಳಪೆ ಸಾಧನೆ ಫಲವಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಷೇರುಗಳ ಮೌಲ್ಯ ಕುಸಿತ ಕಂಡಿದೆ. ಅಮೆರಿಕದ ಡಾಲರ್ ಎದುರು ರೂಪಾಯಿಯ ವಿನಿಮಯ ದರವೂ ಶೇ 20ರಷ್ಟು ಅಪಮೌಲ್ಯಗೊಂಡಿದೆ. ಈ ಎರಡೂ ವಿದ್ಯಮಾನಗಳು ಸಂಪತ್ತಿನ ಮೌಲ್ಯ ಕರಗುವಂತೆ ಮಾಡಿವೆ. ಇದರಿಂದ ದೇಶಿ ಕುಬೇರರ ಸಂಪತ್ತೂ ಕಡಿಮೆಯಾಗಿದೆ.

ವಿಶ್ವದ ಮುಂಚೂಣಿ 10 ಮಂದಿ ಕುಬೇರರ ಪಟ್ಟಿ ವಿಶ್ಲೇಷಿಸಿದರೆ, ಅದರಿಂದ ಅನೇಕ ಆಸಕ್ತಿಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಈ ಆಗರ್ಭ ಸಿರಿವಂತರು, ಅಲ್ಪ ಮೊತ್ತದಿಂದ ತಮ್ಮ ಉದ್ಯಮ ವಹಿವಾಟು ಆರಂಭಿಸಿ ಸುದೀರ್ಘ ಕಾಲ ಅವಿಶ್ರಾಂತವಾಗಿ ದುಡಿದು  ಸಂಪತ್ತಿನ ಸಾಮ್ರಾಜ್ಯ ವಿಸ್ತರಿಸಿದ್ದಾರೆ.

ವಾರನ್ ಬಫೆಟ್ (81) ಅವರು ತಮ್ಮ 44 ಶತಕೋಟಿ ಡಾಲರ್‌ಗಳಷ್ಟು (ರೂ 2,20,000 ಕೋಟಿ) ಸಂಪತ್ತನ್ನು ಷೇರು ವಹಿವಾಟಿನಿಂದಲೇ ಕೂಡಿ ಹಾಕಿದ್ದಾರೆ. ಹರೆಯದಲ್ಲಿದ್ದಾಗಲೇ ಅವರು ಷೇರು ವಹಿವಾಟಿನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ವಿಶ್ವದ ಸಿರಿವಂತರಲ್ಲಿ ಬಹುತೇಕರು ವಂಶಪರಂಪರೆಯಿಂದ ಬಂದ ಸಂಪತ್ತನ್ನು ವೃದ್ಧಿಸಿಲ್ಲ.

ಬದಲಿಗೆ,  ತಾವೇ ಸ್ವತಃ ಬೆವರು ಸುರಿಸಿ ಅಗಾಧ ಪ್ರಮಾಣದ ಸಂಪತ್ತು ಸೃಷ್ಟಿಸಿದ್ದಾರೆ. ದುಡಿಮೆಯಲ್ಲಿಯೇ ಕಂಡುಕೊಂಡ ಬದುಕಿನ ಸಾರ್ಥಕತೆಯಿಂದಲೇ ತಮ್ಮ ಉದ್ಯಮ ಜಗತ್ತನ್ನು ವಿಸ್ತರಿಸಿದ್ದಾರೆ. ತಮ್ಮ ಈ ದೀರ್ಘಾವಧಿ ಪ್ರಯಾಣದಲ್ಲಿ ಎದುರಾದ ಏರಿಳಿತ ಸೋಲುಗಳಿಂದ ಅವರು ಯಾವತ್ತೂ ಎದೆಗುಂದಿಲ್ಲ. ಪ್ರತಿಕೂಲತೆಗಳನ್ನೆಲ್ಲ ಧೈರ್ಯದಿಂದಲೇ ಎದುರಿಸಿದ್ದಾರೆ.

ಈ ಎಲ್ಲ ಸಿರಿವಂತ ಸಾಧಕರು ಅಭಿವೃದ್ಧಿ ಹೊಂದಿದ ದೇಶಗಳಿಗೆ ಸೇರಿರುವುದು ಆಶ್ಚರ್ಯ ಮೂಡಿಸುವ ಸಂಗತಿ ಏನಲ್ಲ. ಏಕೆಂದರೆ, ಈ ದೇಶಗಳಲ್ಲಿನ ಅರ್ಥ ವ್ಯವಸ್ಥೆಯು ಆರ್ಥಿಕ ಬೆಳವಣಿಗೆಗೆ ಬಹು ವಿಧದಲ್ಲಿ ಪೂರಕವಾಗಿದೆ. ಉದ್ಯಮ - ವಹಿವಾಟು  ಕೊನೆಮೊದಲಿಲ್ಲದೇ ಬೆಳವಣಿಗೆ ಕಾಣುತ್ತಲೇ ಹೋಗಿದೆ.
 
ವರ್ಷಗಳ ಉದ್ದಕ್ಕೂ ಸ್ಥಾಪನೆಗೊಳ್ಳುತ್ತಲೇ ಬಂದಿರುವ ಹಣಕಾಸು ಸಂಸ್ಥೆಗಳು,  ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಆರ್ಥಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಿಕೊಟ್ಟಿವೆ. ಬದಲಾವಣೆಗೊಳ್ಳದ ಆರ್ಥಿಕ ನೀತಿ ನಿಯಮಗಳು ಮತ್ತು ವಿಶಾಲವಾದ ಮುಕ್ತ ಮಾರುಕಟ್ಟೆ ವ್ಯವಸ್ಥೆಗಳು, ದೀರ್ಘಾವಧಿ ನಿರ್ಧಾರ ಕೈಗೊಳ್ಳಲು ಮತ್ತು ಅದಕ್ಕೆ ಪೂರಕವಾಗಿ ಬಂಡವಾಳ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿವೆ.

ಇತರ ದೇಶಗಳಿಗೆ ಹೋಲಿಸಿದರೆ ಈ ಅಭಿವೃದ್ಧಿಶೀಲ ದೇಶಗಳಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಕನಿಷ್ಠ ಅಡಚಣೆಗಳು ಇವೆ. ಹೀಗಾಗಿ ಇಲ್ಲೆಲ್ಲ ಉದ್ದಿಮೆ ವಹಿವಾಟುಗಳು, ಜಾಗತಿಕ ಹಿನ್ನಡೆ ಹೊರತಾಗಿಯೂ ಉತ್ತಮ ಬೆಳವಣಿಗೆ ದರ ಕಾಯ್ದುಕೊಂಡು ಬಂದಿವೆ. ಈ ಎಲ್ಲ ಬೆಳವಣಿಗೆಗಳನ್ನು ನಮ್ಮ ಕೇಂದ್ರ ಸರ್ಕಾರವೂ ಗಮನಿಸುತ್ತಿದೆ ಎಂದೇ ನಾನು ಆಶಿಸುವೆ.

ವಿಶ್ವದ ಮುಂಚೂಣಿ ಕುಬೇರರು ಸಾಗಿ ಬಂದಿರುವ ಮತ್ತು ಸಂಪತ್ತು ಸೃಷ್ಟಿಸಿದ ವಿಧಾನವನ್ನು ಅನೇಕರು ಗಮನಿಸುತ್ತ, ಕಾಲ ಕಾಲಕ್ಕೆ ಪರಾಮರ್ಶಿಸುತ್ತ ಬಂದಿದ್ದಾರೆ. ಈ ಸಿರಿವಂತರು ಕೂಡ ತಮ್ಮೆಲ್ಲ ಅನುಭವಗಳನ್ನು ಸಂದರ್ಶನ ಮತ್ತು ಆತ್ಮಕತೆ ಮೂಲಕ ಹಂಚಿಕೊಂಡಿದ್ದಾರೆ. ಈ ಎಲ್ಲ ಕೋಟ್ಯಧಿಪತಿಗಳ ಗುಣ ವಿಶೇಷತೆಗಳಲ್ಲಿ ಏಕರೂಪತೆ ಕಂಡು ಬರುತ್ತದೆ.

ಇವರೆಲ್ಲ ಹಣಕಾಸು ವಹಿವಾಟನ್ನು ವಿವೇಚನೆ, ವಿಶೇಷ ಕಾಳಜಿಯಿಂದನಿಭಾಯಿಸಿರುವುದು ಮತ್ತು ಸಂಪತ್ತಿನ ಸಾಮ್ರಾಜ್ಯವನ್ನು ತುಂಬ ವ್ಯವಸ್ಥಿತವಾಗಿ ನಿರ್ಮಾಣ ಮಾಡಿ ವಿಸ್ತರಿಸಿರುವುದು ಕಂಡು ಬರುತ್ತದೆ.

ಉದ್ಯಮ ವಹಿವಾಟಿನಿಂದ ಹರಿದು ಬರುವ ಸಂಪತ್ತನ್ನು ಕೂಡಿಟ್ಟು ವಿವೇಚನೆಯಿಂದ ಬಳಸುವ ತತ್ವದಲ್ಲಿ ಇವರೆಲ್ಲ ನಂಬಿಕೆ ಇಟ್ಟಿರುವುದು ಕಂಡು ಬರುತ್ತದೆ. ಇದಕ್ಕೆ ವಾರನ್ ಬಫೆಟ್ ಅವರ ಜೀವನ ವಿಧಾನವೇ ಒಂದು ಅತ್ಯುತ್ತಮ ನಿದರ್ಶನ. ಇವರು 20 ಸಾವಿರ ಡಾಲರ್ ಬೆಲೆಯ (ರೂ 10 ಲಕ್ಷ) ಸಾಧಾರಣ ಕಾರನ್ನೇ ಬಳಸುತ್ತಾರೆ. ಮೂರು ಬೆಡ್‌ರೂಮ್‌ಗಳ ಪುಟ್ಟ ಮನೆಯಲ್ಲಿಯೇ ವಾಸಿಸುತ್ತಾರೆ.

ಅನೇಕ ಸಿರಿವಂತರು ಜಿಪುಣರಾಗಿರುತ್ತಾರೆ ಎನ್ನುವ ಅನೇಕ ನಿದರ್ಶನಗಳೂ ಇವೆ. ಇನ್ನೂ ಕೆಲವರು ಸಂಪತ್ತು ಇರುವುದೇ ವಿಲಾಸಿ ಜೀವನ ಶೈಲಿ ಅನುಕರಿಸಲು ಎಂದೂ ನಂಬಿರುತ್ತಾರೆ.

ಇವರಿಗಿಂತ ಭಿನ್ನವಾಗಿರುವ ಇನ್ನೂ ಕೆಲವರು, ದಿನಕ್ಕೆ 15ರಿಂದ 16 ಗಂಟೆಗಳ ಕಾಲ ದುಡಿಯುತ್ತಾರೆ. ಕೆಲಸ ಮಾಡುವುದರಲ್ಲಿಯೇ ಅವರು ಸಂತೋಷ ಕಾಣುತ್ತಾರೆ. ದಣಿವರಿಯದ ದುಡಿಮೆಯ ಫಲವಾಗಿ ಹಣ / ಸಂಪತ್ತು  ಬೆಳೆಯುತ್ತ ಹೋಗುತ್ತದೆ ಎಂದೇ ಅವರು ನಂಬಿರುತ್ತಾರೆ.

ಕಠಿಣ ಪರಿಶ್ರಮ, ಪ್ರಾಮಾಣಿಕತೆ, ದುಡಿಮೆಯ ಬಗೆಗಿನ ಬದ್ಧತೆ ಮತ್ತು ವಿವೇಚನೆ ಮುಂತಾದವು ಯಶಸ್ಸಿನ ಸೂತ್ರಗಳಾಗಿವೆ ಎನ್ನುವುದು ಇವರ ಯಶೋಗಾಥೆಯಿಂದ ಕಂಡು ಬರುತ್ತದೆ. ತಲೆತಲಾಂತರದಿಂದ ಬರುವ ಸಂಪತ್ತು ಇದ್ದರೆ ಅದನ್ನು ಇನ್ನಷ್ಟು ವಿಸ್ತರಿಸುವುದು ತುಂಬ ಸುಲಭ ಎನ್ನುವ ನಂಬಿಕೆಯೂ ಅನೇಕ ಸಂದರ್ಭಗಳಲ್ಲಿ ಸುಳ್ಳಾಗುತ್ತದೆ.

ಯಶಸ್ಸನ್ನು ನಿಭಾಯಿಸುವುದೂ ಕುಬೇರರ ಪಾಲಿಗೆ ಇನ್ನೊಂದು ಮಹತ್ವದ ಸಂಗತಿಯಾಗಿರುತ್ತದೆ. ಗಳಿಸಿದ ಸಂಪತ್ತು ಎಲ್ಲಿ ಕರಗಿ ಹೋಗುವುದೋ ಎನ್ನುವ ಹೆದರಿಕೆ ಅನೇಕ ಸಿರಿವಂತರಲ್ಲಿಯೂ ಇದ್ದೇ ಇರುತ್ತದೆ. ಇಂತಹ ಆತಂಕ ಹೊಂದಿದವರು ಸಂಪತ್ತನ್ನು ವೃದ್ಧಿಸಲು  ಇನ್ನಷ್ಟು ಕಠಿಣ ಪರಿಶ್ರಮ ಪಡಬೇಕಾಗುತ್ತದೆ.

ಅನೇಕ ಸಂಗತಿಗಳು, ನಿರ್ಧಾರಗಳಲ್ಲಿ ಬದಲಾವಣೆ ಮುಖ್ಯ ಎಂದರೂ, ಯಶಸ್ಸಿನ ಮಾರ್ಗ ಮಾತ್ರ ಎಂದಿಗೂ ಬದಲಾಗುವುದಿಲ್ಲ. ಸಾಮಾನ್ಯರೂ ಅಸಾಮಾನ್ಯವಾದ ಸಾಧನೆ ಮಾಡಿ ತೋರಿಸಲು ಸಾಧ್ಯವಿದೆ. ಯಶಸ್ಸಿನ ಗುರಿ ಮುಟ್ಟಲು ಅಡ್ಡದಾರಿಗಳಂತೂ ಇಲ್ಲವೇ ಇಲ್ಲ. ಸಂದೇಹಾಸ್ಪದ ವಿಧಾನಗಳ ಮೂಲಕ ಗಳಿಸಿದ್ದ ಯಾವುದೇ ಯಶಸ್ಸು ಅಲ್ಪಾವಧಿಯದೇ ಆಗಿರುತ್ತದೆ.

ವಿಶ್ವದ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಅನೇಕ ಭಾರತೀಯರು ಮತ್ತೆ ಯಾವಾಗ ಸ್ಥಾನಗಿಟ್ಟಿಸುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಬಹುತೇಕ ಉದ್ಯಮಪತಿಗಳು ಕನಸುಗಾರರು ಮತ್ತು ಆಶಾವಾದಿಗಳು ಆಗಿರುತ್ತಾರೆ. ಅವರೆಲ್ಲರ ಕನಸುಗಳು - ಆಸೆಗಳು ಆದಷ್ಟು ಬೇಗ ನನಸಾಗಲಿ ಎಂದೇ ಹಾರೈಸೋಣ.

(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT