ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ಗಳಿಕೆಗೆ ಹೆಚ್ಚು ಅವಕಾಶ

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಷೇರುಪೇಟೆಗಳಲ್ಲಿ  ನಡೆಯುವ ಚಟುವಟಿಕೆಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಅಳವಡಿಸಿಕೊಂಡರೆ ಅಪಾಯ ಹೆಚ್ಚು. ಏರಿಕೆಯಲ್ಲಿರುವಾಗ ಮತ್ತಷ್ಟು ಏರಿಕೆ ಕಾಣುವುದು, ಇಳಿಕೆಯಲ್ಲಿದ್ದಾಗ ಇನ್ನೂ ಇಳಿಕೆಗೆ ಒಳಪಡುವುದು, ಹೂಡಿಕೆ ದೀರ್ಘಕಾಲೀನವಾಗಿರಬೇಕು, ಹೂಡಿಕೆ ಮಾಡಿ ಮರೆತುಬಿಡು, ಮುಂತಾದ ಚಿಂತನೆಗಳಿಂದ ಈಗಿನ ಪೇಟೆಗಳು ಬಹು ದೂರ ಸರಿದಿವೆ.

ಹಿಂದಿನ ವಾರದ ಆರಂಭದ ದಿನ ಅಂದರೆ 26 ರಂದು ಪೇಟೆಯ ಸೂಚ್ಯಂಕಗಳು ಹೆಚ್ಚಿನ ಏರಿಕೆ ಪಡೆದುಕೊಂಡವು. ಅಂದು ಕೆನರಾ ಬ್ಯಾಂಕ್ ಷೇರು ₹242 ರ ಸಮೀಪದಿಂದ ₹274 ರವರೆಗೂ ಜಿಗಿಯಿತು. ಈ ಷೇರು ₹225 ರ ವಾರ್ಷಿಕ ಕನಿಷ್ಠ ಬೆಲೆಗೆ 12 ರಂದು ಕುಸಿದು ಹದಿನೈದು ದಿನಗಳಲ್ಲಿ  ಸುಮಾರು 50 ರೂಪಾಯಿಗಳಷ್ಟು ಪುಟಿಯಿತು. ಇದು ಪೇಟೆಯಲ್ಲಿ ವ್ಯಾಲ್ಯೂ ಪಿಕ್‌ಗೆ ದೊರೆಯಬಹುದಾದ ಅವಕಾಶಗಳಿಗೆ ಹಿಡಿದ ಕನ್ನಡಿಯಾಗಿದೆ.

ಗ್ಲೇನ್ ಮಾರ್ಕ್ ಫಾರ್ಮಾ ಷೇರು ₹524 ರಿಂದ ₹555 ರವರೆಗೂ ಏರಿಕೆ ಕಂಡಿದೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಷೇರಿನ ಬೆಲೆ ಸೋಮವಾರ ₹520 ರ ಸಮೀಪದಿಂದ ₹546 ರವರೆಗೂ ಜಿಗಿತ ಕಂಡರೆ, ನಂತರದ ದಿನಗಳಲ್ಲಿ ₹565 ರವರೆಗೂ ಜಿಗಿದಿದೆ.  ಈ ಷೇರಿನ ಬೆಲೆ ಮಾರ್ಚ್ 8 ರಂದು ₹478 ರ ಸಮೀಪಕ್ಕೆ ಕುಸಿದಿತ್ತು.  ವೇದಾಂತ ಲಿಮಿಟೆಡ್ ಕಂಪನಿ ಷೇರಿನ ಬೆಲೆ ಲಾಭಾಂಶ ವಿತರಿಸಿದ ನಂತರ ₹293 ರ ಸಮೀಪದಿಂದ ₹269 ಕ್ಕೆ ಕುಸಿದು ನಂತರ ಚೇತರಿಕೆಯಿಂದ ಮತ್ತೆ ₹289 ರ ವರೆಗೂ ಏರಿಕೆಯನ್ನು ಕೇವಲ ಒಂದೇ ವಾರದಲ್ಲಿ ಪ್ರದರ್ಶಿಸಿದೆ.

‘ಸಾಧನೆ ನಗಣ್ಯ- ಬೋಧನೆಗೆ ಹೆಚ್ಚಿನ ಮಾನ್ಯ’ ಎಂಬ ಈಗಿನ ದಿನಗಳಲ್ಲಿ ಷೇರುಪೇಟೆ  ಲಾಭಗಳಿಕೆಗಾಗಿ ಅಧಿಕ ಅವಕಾಶಗಳನ್ನು ಸೃಷ್ಟಿಸಿಕೊಡುತ್ತಿದೆ ಎಂಬುದು ನಿರ್ವಿವಾದ.  ಆದರೆ, ಅಪಾಯದ ಅರಿವಿನಿಂದ ಉತ್ತಮ ಗುಣಮಟ್ಟದ, ಷೇರುಗಳ ವ್ಯಾಲ್ಯೂ ಪಿಕ್ ಮಾಡುವುದು ಅತ್ಯವಶ್ಯಕ. ಕೆಲವೊಮ್ಮೆ ಅಚ್ಚರಿಯ ರೀತಿಯಲ್ಲಿ ಅಲ್ಪಕಾಲೀನ ಅವಕಾಶಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಬುಧವಾರ, ಚುಕ್ತಾಚಕ್ರದ ಕೊನೆದಿನ, ಮಾರುತಿ ಸುಜುಕಿ ಷೇರಿನ ಬೆಲೆ ₹8,810 ರ ಸಮೀಪದಲ್ಲಿ ಆರಂಭವಾಗಿ ದಿನದ ಮಧ್ಯಂತರದಲ್ಲಿ ₹9,085 ರವರೆಗೂ ಏರಿಕೆ ಕಂಡು ನಂತರ ಅದೇ ವೇಗದಲ್ಲಿ  ಹಿಂದಿರುಗಿ ₹8,863 ರಲ್ಲಿ ಕೊನೆಗೊಂಡಿದೆ. ಈ ಷೇರಿನ ಬೆಲೆ ಸೋಮವಾರ ₹8,640 ರ ಸಮೀಪವಿತ್ತು. ಬುಧವಾರ ₹9,085 ಕ್ಕೆ ಜಿಗಿತ ಕಂಡಿರುವುದು ಸೋಜಿಗದ ಸಂಗತಿ. ಸಾಮಾನ್ಯವಾಗಿ ಸ್ಥಿರತೆಯಲ್ಲಿರುತ್ತಿದ್ದ ನೆಸ್ಲೆ ಇಂಡಿಯಾ ಷೇರು ಸೋಮವಾರದಿಂದ ಬುಧವಾರದೊಳಗೆ ₹7,720 ರ ಸಮೀಪದಿಂದ ₹8,235ಕ್ಕೆ ಜಿಗಿದು ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ.

ಈಗಲೂ ದೀರ್ಘಕಾಲೀನ ಹೂಡಿಕೆ ಎಂಬ ಉದ್ದೇಶದಿಂದ ಆಯ್ಕೆ ಮಾಡಿಕೊಳ್ಳಲು ಉತ್ತಮ ಕಂಪನಿಗಳು ಅನೇಕವಿದ್ದು, ಅವಕಾಶ ಉಪಯೋಗಿಸಿಕೊಳ್ಳುವವರಿಗೆ ಸುಗ್ಗಿಯಾಗಿದೆ. ಆಕರ್ಷಕ ಕಾರ್ಪೊರೇಟ್ ಫಲಗಳನ್ನು ನೀಡುವ ಸರ್ಕಾರಿ ವಲಯದ ಪವರ್ ಫೈನಾನ್ಸ್ ಕಾರ್ಪೊರೇಷನ್,  ಇಂಡಿಯನ್ ಆಯಿಲ್ ಕಾರ್ಪೊರೇಷನ್, ಆಯಿಲ್ ಇಂಡಿಯಾ, ಆರ್‌ಇಸಿ, ಎನ್‌ಎಂಡಿಸಿಗಳಲ್ಲದೆ,  ಭಾರಿ ಕುಸಿತಕ್ಕೊಳಗಾಗಿರುವ ಬಜಾಜ್ ಹಿಂದುಸ್ಥಾನ್, ಹಿಂದುಸ್ಥಾನ್ ಕನ್ಸ್‌ಟ್ರಕ್ಷನ್‌, ಕಮ್ಮಿನ್ಸ್ ಮುಂತಾದವುಗಳು ಉತ್ತಮ ಹೂಡಿಕೆಯ ಅವಕಾಶಗಳಾಗಿವೆ. ಆದರೆ ಪೇಟೆ ಅಲ್ಪಾವಧಿಯಲ್ಲೇ ಅವಕಾಶ ನೀಡಿದಲ್ಲಿ ಹೊರಬರುವ ಗುಣವನ್ನು ರೂಢಿಸಿಕೊಳ್ಳಬೇಕು.

ವಿಸ್ಮಯಕಾರಿ ಸಂಗತಿಗಳು: ಕಳೆದ ಜನವರಿಯಲ್ಲಿ ಪ್ರತಿ ಷೇರಿಗೆ ₹155 ರಂತೆ ಆಫರ್ ಫಾರ್ ಸೇಲ್ ಮೂಲಕ ಷೇರು ವಿಕ್ರಯ ಮಾಡಿದ ಕಂಪನಿ ಷೇರಿನ ಬೆಲೆ ₹120 ರ ಸಮೀಪದಲ್ಲಿದೆ.  ಈ ಕಂಪನಿ ಪ್ರತಿ ಷೇರಿಗೆ ₹4.30 ರಂತೆ   26 ರಂದು ಲಾಭಾಂಶ ಪ್ರಕಟಿಸಿತು, ಅದರೊಂದಿಗೆ 27ರಿಂದ ಲಾಭಾಂಶರಹಿತ ವಹಿವಾಟು ಆರಂಭವಾಗುವುದು ಎಂಬ ಪ್ರಕಟಣೆಯು ಸಾಮಾನ್ಯ ಹೂಡಿಕೆದಾರರ ಚಿಂತನೆಗಳಿಗೆ ವಿರುದ್ಧವಾಗಿದೆ. ಒಂದು ಕಂಪನಿ ಪ್ರಕಟಿಸಿದ ಕಾರ್ಪೊರೇಟ್ ಫಲಗಳಿಂದ ಪ್ರೇರಿತವಾಗಿ ನಂತರದ ದಿನವೇ ಆ ಷೇರನ್ನು ಕೊಳ್ಳುವ ಗುಣ ಉಳ್ಳವರಿಗೆ ನಿರಾಸೆಯಾಗಿದೆ.

ಪ್ರತಿ ಷೇರಿಗೆ ₹519 ರಿಂದ ₹520 ರಂತೆ ಆರಂಭಿಕ ಷೇರು ವಿತರಣೆಗೆ ಮುಂದಾಗಿದ್ದ ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್‌ಗೆ ಹೂಡಿಕೆ ದಾರರ ಸ್ಪಂದನೆ ಸಿಗದೇ ಇದ್ದ ಕಾರಣ ವಿತರಣೆಯ ಗಾತ್ರವನ್ನು ಮೊಟಕುಗೊಳಿಸಿ ಸಂಗ್ರಹಣೆಯಾದ ಮೊತ್ತಕ್ಕೆ ತೃಪ್ತಿ ಪಟ್ಟುಕೊಂಡು ವಿತರಣೆಯನ್ನು ಕೊನೆಗಾಣಿಸಿತು.

ಹಿಂದುಸ್ಥಾನ್ ಏರೊನಾಟಿಕ್ಸ್‌ ಕಂಪನಿ ಪ್ರತಿ ಷೇರಿಗೆ ₹1,215 ರಂತೆ ವಿತರಣೆ ಸಂದರ್ಭದಲ್ಲಿ ಎಲ್ಐಸಿ ಬೆಂಬಲದಿಂದ ಯಶಸ್ಸು ಕಂಡು 28ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆದರೆ, ಷೇರಿನ ಬೆಲೆ ಮಾತ್ರ ವಿತರಣೆ ಬೆಲೆ ತಲುಪದೇ ₹ 1,184 ರ ಸಮೀಪದಿಂದ ₹1,117 ರ ಸಮೀಪಕ್ಕೆ ಕುಸಿದು ನಂತರ ₹1,128 ರ ಸಮೀಪ ವಾರಾಂತ್ಯ ಕಂಡಿದೆ.

ಪ್ರತಿ ಷೇರಿಗೆ ₹150 ರಂತೆ ಷೇರು ಮರು ಖರೀದಿ ಮಾಡಿದ ಬಲರಾಂಪುರ್ ಚಿನ್ನಿ, ಪ್ರತಿ ಷೇರಿಗೆ ₹182.50 ರಂತೆ ಮರು ಖರೀದಿ ಮಾಡಿದ ಭಾರತ್ ಎಲೆಕ್ಟ್ರಾನಿಕ್ಸ್ ಲಿ. ಕಂಪನಿಗಳ ಷೇರಿನ ಬೆಲೆಗಳು ಮರುಖರೀದಿ ನಂತರ ಹೆಚ್ಚಿನ ಕುಸಿತಕ್ಕೊಳಗಾಗಿವೆ. ಬಲರಾಂಪುರ್ ಚಿನ್ನಿ ಷೇರಿನ ಬೆಲೆ ₹ 75 ರ ಸಮೀಪ ಮತ್ತು  ಭಾರತ್ ಎಲೆಕ್ಟ್ರಾನಿಕ್ಸ್  ಷೇರಿನ ಬೆಲೆ ₹142 ರ ಸಮೀಪವಿದೆ.

ಅಪಾಯದ ಮಟ್ಟ: ಷೇರುಪೇಟೆಯ ಏರಿಳಿತ ಗಳಿಗೆ ಕೇವಲ ಆ ಕಂಪನಿಯ ಆಂತರಿಕ ಅಂಶಗಳು, ಬೆಳವಣಿಗೆಗಳು ಕಾರಣವಾಗಿರದೆ ಹೊರಗಿನ ಕಾರಣಗಳು ಹೆಚ್ಚು ಪ್ರಭಾವಿಯಾಗಿರುತ್ತವೆ. ಇತ್ತೀಚಿಗೆ ಬ್ಯಾಂಕಿಂಗ್ ಹಗರಣಗಳಲ್ಲಿ ಸಿಲುಕಿ ಕೊಂಡಿರುವ ಬ್ರ್ಯಾಂಡೆಡ್‌ ಆಭರಣಗಳ ಕಂಪನಿ ಗೀತಾಂಜಲಿ ಜೆಮ್ಸ್  2013 ರ ಏಪ್ರಿಲ್ ನಲ್ಲಿ ಷೇರಿನ ಬೆಲೆ ₹637 ರ ಸಮೀಪಕ್ಕೆ ಜಿಗಿದಿತ್ತು.  ಜುಲೈ ತಿಂಗಳಲ್ಲಿ ಷೇರಿನ ಬೆಲೆ ಸುಮಾರು ₹60 ರ ಸಮೀಪಕ್ಕೆ ಕುಸಿದಿತ್ತು.

ಅನೇಕ ತಾರಾಗಣವನ್ನು ತನ್ನ ಬ್ರ್ಯಾಂಡ್‌ ಅಂಬಾಸಿಡರ್‌ಗಳಾಗಿಸಿಕೊಂಡು ಮೆರೆಯುವ ಕಂಪನಿ ಷೇರಿನ ಬೆಲೆ ನವೆಂಬರ್ 2017 ರಲ್ಲಿ ಮತ್ತೊಮ್ಮೆ ₹100 ರ ಗಡಿ ದಾಟಿತು.  ಈಗ ಬ್ಯಾಂಕಿಂಗ್ ಹಗರಣದಲ್ಲಿರುವ ಕಾರಣ ಷೇರಿನ ಬೆಲೆ ದಿನೇ  ದಿನೇ ಕುಸಿಯುತ್ತಿದ್ದು, ₹8  ರ ಸಮೀಪವೂ ಕೊಳ್ಳುವವರಿಲ್ಲದ ಕಾರಣ ಮಾರಾಟ ಸಾಧ್ಯವಾಗುತ್ತಿಲ್ಲ.    ಷೇರುಪೇಟೆಯಲ್ಲಿ ಹೂಡಿಕೆ ಮಾಡಿದವರು ಅಪಾಯದ ಅರಿವು ಹೊಂದಿರುವುದರಿಂದ, ಹಣ ಕಳೆದುಕೊಂಡರೂ ದೂಷಿಸುವಂತಿಲ್ಲ.

ಹೊಸ ಷೇರು: ಪ್ರತಿ ಷೇರಿಗೆ ₹332 ರಂತೆ ಸಾರ್ವಜನಿಕ ವಿತರಣೆ ಮಾಡಿದ ಸಂಧಾರ್ ಟೆಕ್ನಾಲಜಿಸ್ ಕಂಪನಿ ಷೇರುಗಳು ಏಪ್ರಿಲ್ 2 ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ ಯಾಗಲಿವೆ. ಇತ್ತೀಚಿಗೆ ಪ್ರತಿ ಷೇರಿಗೆ ₹180 ರಂತೆ ಸಾರ್ವಜನಿಕ ವಿತರಣೆ ಮಾಡಿದ ಕಾರ್ಡ್‌  ಕನ್ಸ್‌ಟ್ರಕ್ಷನ್‌ ಕಂಪನಿ ಷೇರುಗಳು ಏಪ್ರಿಲ್ 2 ರಿಂದ 'ಟಿ' ವಹಿವಾಟಿಗೆ ಬಿಡುಗಡೆಯಾಗಲಿದೆ.
**
ಸೋಮವಾರದಿಂದ ಹೊಸ ಆರ್ಥಿಕ ವರ್ಷದ ಚಟುವಟಿಕೆಗಳು ಆರಂಭವಾಗಲಿವೆ. ಎಲ್ಲಾ ರೀತಿಯ ಹೊಂದಾಣಿಕೆ ಚಟುವಟಿಕೆಗಳು ಮುಗಿದಿದ್ದು ಹೊಸ ಚೈತನ್ಯ ಮೂಡಿಸುವ ಸಂದರ್ಭ ಇದಾಗಿದೆ. ಹೊಸ ವರ್ಷದಿಂದ ದೀರ್ಘಾವಧಿಯ ಬಂಡವಾಳ ಗಳಿಕೆ ಮೇಲಿನ  ತೆರಿಗೆಯು ಸಹ ಜಾರಿಯಾಗಲಿದೆ. ಈ ಸಂದರ್ಭದಲ್ಲಿ ಅಲ್ಪಕಾಲೀನ ಮತ್ತು ದೀರ್ಘಕಾಲೀನ ತೆರಿಗೆಯು  ಶೇ15 ಮತ್ತು ಶೇ10 ಇದ್ದು ಪೇಟೆಯಲ್ಲಿನ ಏರಿಳಿತಗಳ ವೇಗಕ್ಕೆ ಶೇ5 ರಷ್ಟು ಹೆಚ್ಚುವರಿ ತೆರಿಗೆಯು ಪ್ರಭಾವಿಯೇನಲ್ಲ. ಈ ಕಾರಣದಿಂದ ಏರಿಳಿತಗಳ ರಭಸವು ಹೆಚ್ಚಾಗಬಹುದು.

ಈ ವಾರ ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ನೀತಿ ಪ್ರಕಟವಾಗಲಿದ್ದು, ಇದಕ್ಕೆ ಸಂಬಂಧಿಸಿದ ವಿದ್ಯಮಾನಗಳು ಸಹ ಪ್ರಭಾವಿಯಾಗಿರಲಿವೆ.  ಒಟ್ಟಿನಲ್ಲಿ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಸಮೀಕರಣದ ಮೂಲಕ ನಡೆಸುವ ಚಟುವಟಿಕೆ ಮಾತ್ರ ಸ್ವಲ್ಪಮಟ್ಟಿನ ಸುರಕ್ಷಿತ ಆದಾಯ ಗಳಿಸಿ ಕೊಡಬಹುದಾಗಿದೆ.

(ಮೊ: 9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT