ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದ ನಗದೀಕರಣಕ್ಕೆ ಹೆಚ್ಚಿದ ಅವಕಾಶ

Last Updated 15 ಅಕ್ಟೋಬರ್ 2017, 18:58 IST
ಅಕ್ಷರ ಗಾತ್ರ

ಎರಡನೇ ತ್ರೈಮಾಸಿಕವು ಅಂತ್ಯಗೊಳ್ಳುತ್ತಿದ್ದಂತೆಯೇ, ಸಾಮಾನ್ಯವಾಗಿ ಷೇರುದಾರರಿಗೆ ಆಕರ್ಷಕ ಲಾಭಾಂಶ ವಿತರಿಸುವ ದಾಖಲೆ ಹೊಂದಿರುವ ಸರ್ಕಾರಿ ವಲಯದ ಕೋಲ್ ಇಂಡಿಯಾ,  ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್,  ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಗೇಲ್ ಇಂಡಿಯಾ ದಂತಹ ಕಂಪೆನಿಗಳು ಚಟುವಟಿಕೆ ಭರಿತವಾಗಿ ವಿಜೃಂಭಿಸುತ್ತಿವೆ.  ಈ ವಿಜೃಂಭಣೆಗೆ ಈ ಕಂಪೆನಿಗಳು ಈ ಬಾರಿಯ ತ್ರೈಮಾಸಿಕ ಫಲಿತಾಂಶದೊಂದಿಗೆ ಉತ್ತಮ ಲಾಭಾಂಶ ಘೋಷಿಸಬಹುದೆಂಬ ನಿರೀಕ್ಷೆಯೂ ಇರಬಹುದು.

ಪೇಟೆಯಲ್ಲಿನ ಬೆಳವಣಿಗೆಗಳು ಯಾವ ರೀತಿಯಲ್ಲಿ ಭಾರಿ ಏರಿಳಿತವಾಗುತ್ತವೆ ಎಂಬುದಕ್ಕೆ ಈ ವಾರ  ಬಿಎಎಸ್‌ಎಫ್‌ ಷೇರಿನ  ಬೆಲೆಯಲ್ಲಿ ಆದ  ಬದಲಾವಣೆಗಳೇ  ಸಾಕ್ಷಿ. ಹಿಂದಿನವಾರ ವಿತ್ತೀಯ ಸಂಸ್ಥೆಯೊಂದು ಕೊಳ್ಳುವ ರೇಟಿಂಗ್ ಕೊಟ್ಟಿದೆ ಎಂಬ ಕಾರಣಕ್ಕಾಗಿ ಷೇರಿನ ಬೆಲೆಯು ಒಂದೇ ದಿನ ₹295 ರಷ್ಟು ಏರಿಕೆ ಪ್ರದರ್ಶಿಸಿದ ಈ ಕಂಪೆನಿ ಸೋಮವಾರ ₹1,812 ರ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿ ನಂತರ ₹1,690 ಕ್ಕೆ ಇಳಿದಿದೆ.  ಒಂದು ಷೇರಿನ ಬೆಲೆಯು ಅನಿರೀಕ್ಷಿತ ವೇಗದಲ್ಲಿ ಏರಿಕೆ ಕಂಡಾಗ ಅದು ಲಾಭದ ನಗದೀಕರಣಕ್ಕೆ ಅವಕಾಶವೆಂಬುದು ದೃಢಪಡಿಸಿದೆ.

ಮಂಗಳವಾರ ಗ್ರಾಹಕ ಬಳಕೆಯ ಕಂಪೆನಿ ವಾ ಟೆಕ್ ವಾಬಾಗ್ ಲಿಮಿಟೆಡ್ ಕಂಪೆನಿಯ ಮೇಲೆ ನ್ಯಾಷನಲ್ ಕಂಪೆನಿ ಲಾ ನ್ಯಾಯಾಧೀಕರಣ, ಚೆನ್ನೈ ಡಿವಿಜನ್ ಬೆಂಚ್, ಕಾರ್ಪೊರೇಟ್ ದಿವಾಳಿತನದ ಪ್ರಕ್ರಿಯೆಯನ್ನಾರಂಭಿಸಿದ ಸುದ್ದಿಯು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಷೇರಿನ ಬೆಲೆಯು ₹600 ರಿಂದ ₹564 ರವರೆಗೂ ಕುಸಿಯಿತು.

ಬುಧವಾರ ಕಂಪೆನಿಯು ಪತ್ರಿಕಾ ಪ್ರಕಟಣೆ ಹೊರಡಿಸಿ, ಕಂಪೆನಿಯು ಸಾಕಷ್ಟು ಸಂಪನ್ಮೂಲ ಹೊಂದಿದ್ದು, ದಿವಾಳಿಯ ಅಂಚಿನಲ್ಲಿರುವುದಿಲ್ಲ.  ಈ ಪ್ರಕ್ರಿಯೆ ಆರಂಭಿಸಿದ ಕನ್ಸಾಲಿಡೇಟೆಡ್ ಕನ್ಸ್‌ಟ್ರಕ್ಷನ್‌ ಕನ್ಸೋರ್ಶಿಯಂ ಲಿಮಿಟೆಡ್ ಕಂಪೆನಿಯ ದ್ವಾರಕಾ ಪ್ರಾಜೆಕ್ಸ್‌ನಲ್ಲಿ ಸಬ್ ಕಾಂಟ್ರಾಕ್ಟರ್ ಆಗಿದ್ದು, ಆ ಕಂಪೆನಿಗೆ ನಿರ್ವಹಿಸಿದ್ದ ಕಾರ್ಯವನ್ನು ಪೂರ್ಣಗೊಳಿಸದೆ ಇದ್ದ ಕಾರಣ ಆ ಕಂಪೆನಿಗೆ ₹1,50,13,529 ನ್ನು ತಡೆಹಿಡಿಯಲಾಯಿತು. ಈ ಕಾರಣಕ್ಕಾಗಿ  ಕನ್ಸಾಲಿಡೇಟೆಡ್ ಕನ್ಸ್‌ಟ್ರಕ್ಷನ್‌ ಕನ್ಸೋರ್ಶಿಯಂ ಲಿಮಿಟೆಡ್ ಕಂಪೆನಿಯು ದಿವಾಳಿತನದ ಪ್ರಕ್ರಿಯೆ ಆರಂಭಿಸಿದೆ. ಈ ನಿರ್ಧಾರವನ್ನು  ಪ್ರಶ್ನಿಸಿ ಕಂಪೆನಿಯು ನ್ಯಾಷನಲ್ ಕಂಪೆನಿ ಕಾಯ್ದೆ ಮೇಲ್ಮನವು ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಲಾಗಿದೆ.  2016–17 ರ ವರ್ಷದಲ್ಲಿ ಕಂಪೆನಿಯು ₹102 ಕೋಟಿ ಲಾಭ ಗಳಿಸಿದ್ದು, 10 ವರ್ಷಗಳಿಂದಲೂ ಸತತವಾಗಿ ಲಾಭಗಳಿಕೆಯಲ್ಲಿದೆ. ಕಂಪೆನಿಯ ಒಟ್ಟು ಸಂಪತ್ತಿನ ಮೌಲ್ಯ ₹1,010 ಕೋಟಿ ಇದ್ದು, ₹261 ಕೋಟಿ ನಗದು ಕೈಲಿದೆ ಎಂದು ಸಮಜಾಯಿಷಿ ನೀಡಿದೆ.

ಕೊಚ್ಚಿನ್‌ ಶಿಪ್ ಯಾರ್ಡ್ ಕಂಪೆನಿಯು ಭಾರತೀಯ ನೌಕಾ ನೆಲೆಯಿಂದ ₹ 4,400 ಕೋಟಿ ಮೌಲ್ಯದ ಎಂಟು ನೌಕೆಗಳ ನಿರ್ಮಾಣದ ಆರ್ಡರ್ ಪಡೆದುಕೊಂಡಿದೆ ಎಂಬ ಸುದ್ದಿ ಮಂಗಳವಾರದ ವಹಿವಾಟಿನ ಅಂತಿಮ ಘಟ್ಟದಲ್ಲಿ ಷೇರಿನ ಬೆಲೆ ₹520 ರ ಸಮೀಪದಿಂದ ವಾರ್ಷಿಕ ಗರಿಷ್ಠ ₹585 ರವರೆಗೂ ಜಿಗಿದು ಅಚ್ಚರಿ ಮೂಡಿಸಿತು.

ದಿಲೀಪ್ ಬಿಲ್ಡ್ ಕಾನ್ ಲಿಮಿಟೆಡ್ ಕಂಪೆನಿಯ ಪರವಾಗಿ ಆರ್ಬಿಟ್ರೇಷನ್ ಅವಾರ್ಡ್ ಬಂದ ಸುದ್ದಿಯು ಷೇರಿನ ಬೆಲೆಯನ್ನು ಸಾರ್ವಕಾಲಿಕ ಗರಿಷ್ಠ ಬೆಲೆ  ₹706 ನ್ನು ತಲುಪುವಂತೆ ಮಾಡಿತು. ಈ ಷೇರಿನ ಬೆಲೆಯೂ ಕಳೆದ ಒಂದು ತಿಂಗಳಲ್ಲಿ ₹563 ರಿಂದ ₹737 ರವರೆಗೂ ಜಿಗಿತ ಕಂಡಿದೆ.

ಗುರುವಾರ  ಸಂವೇದಿ ಸೂಚ್ಯಂಕದ ಅಗ್ರಮಾನ್ಯ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಭಾರಿ ಪ್ರಮಾಣದ ಅಂದರೆ ₹32 ಕ್ಕೂ ಹೆಚ್ಚಿನ ವಾರ್ಷಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಇದಕ್ಕೆ ಜೊತೆಯಾಗಿ ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್, ಹಿಂದುಸ್ಥಾನ್ ಯುನಿಲಿವರ್, ಮಾರುತಿ ಸುಜುಕಿ, ಹೀರೊ ಮೋಟೊಕಾರ್ಪ್, ಲುಪಿನ್, ಸನ್ ಫಾರ್ಮಾದಂತಹ ಕಂಪೆನಿಗಳು ಆಕರ್ಷಕ ಏರಿಕೆಯಿಂದ ಸಂವೇದಿ ಸೂಚ್ಯಂಕವನ್ನು ಸುಮಾರು 348 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು.

ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಎರಡನೇ ತ್ರೈಮಾಸಿಕ ಫಲಿತಾಂಶವು ಶುಕ್ರವಾರ ಪ್ರಕಟವಾದ ಕಾರಣ ಷೇರಿನ ಬೆಲೆಯು ಚುರುಕಾದ ಏರಿಕೆ ಕಂಡುಕೊಂಡಿತು. ಒಂದೇ  ತಿಂಗಳಲ್ಲಿ ಷೇರಿನ ಬೆಲೆಯು ₹780 ರ ಸಮೀಪದಿಂದ ₹891 ರವರೆಗೂ ಜಿಗಿದಿದೆ.
ರೇಟಿಂಗ್‌ಗಳ ಪ್ರಭಾವದಿಂದ ಅನೇಕ ಕಂಪೆನಿಗಳು ಚುರುಕಾದ ಏರಿಕೆ ಕಂಡವು.  ಕೋಟಕ್ ಮಹಿಂದ್ರಾ ಬ್ಯಾಂಕ್ ಸರ್ಕಾರಿ ವಲಯದ ಎಂಜಿನೀರ್ಸ್ ಇಂಡಿಯಾ ಕಂಪೆನಿ ಬಗ್ಗೆ ಕೊಳ್ಳುವ ರೇಟಿಂಗ್ ನೀಡಿದರೆ,  ಮೂಡೀಸ್ ಸಂಸ್ಥೆಯು ಆ್ಯಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳಿಗೆ ಕೊಳ್ಳುವ ರೇಟಿಂಗ್ ದೊರೆತು ಪೇಟೆಯಲ್ಲಿ ಏರಿಕೆ ಕಂಡುಕೊಂಡಿವೆ.

ಬ್ಯಾಂಕಿಂಗ್ ವಲಯದ ಪ್ರಮುಖ ಕಂಪೆನಿ ಕೆನರಾ ಬ್ಯಾಂಕ್ ಷೇರಿನ ಬೆಲೆಯು ₹298 ರ ಸಮೀಪಕ್ಕೆ ಕುಸಿದು ಪುಟಿದೆದ್ದಿತು.  ರಿಲಯನ್ಸ್ ಕ್ಯಾಪಿಟಲ್ ಷೇರಿನ ಬೆಲೆ ₹776 ರಿಂದ ಕುಸಿದು ₹536 ರ ಸಮೀಪದಿಂದ ಚೇತರಿಕೆ ಕಂಡಿದೆ. ಎವರೆಸ್ಟ್ ಇಂಡಸ್ಟ್ರೀಸ್ ಷೇರಿನ ಬೆಲೆಯು ₹325 ರ ವರೆಗೂ ಕುಸಿದು ನಂತರ ತ್ವರಿತವಾದ ಚೇತರಿಕೆಯಿಂದ ₹441 ಕ್ಕೆ ಏರಿಕೆ ಕಂಡಿರುವುದು, ಪೇಟೆಯಲ್ಲಿ ಸೃಷ್ಟಿಯಾಗುವ ಅಲ್ಪಾವಧಿಯ ಅವಕಾಶಗಳಿಗೆ ಹಿಡಿದ ಕನ್ನಡಿಯಾಗಿದೆ.

ಟಾಟಾ  ಟೆಲಿ ಸರ್ವಿಸಸ್ ಕಂಪೆನಿಯ ಮೊಬೈಲ್ ವ್ಯವಹಾರವನ್ನು ಭಾರ್ತಿ ಏರ್‌ಟೆಲ್ ಕಂಪೆನಿಗೆ ವಹಿಸಿದ ಕಾರಣ ಸಂವೇದಿ ಸೂಚ್ಯಂಕದ ಅಂಗವಾದ ಭಾರ್ತಿ ಏರ್ ಟೆಲ್ ಷೇರಿನ ಬೆಲೆಯು ₹30 ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ.  ಎಚ್‌ಡಿಎಫ್‌ಸಿ  ಬ್ಯಾಂಕ್,  ಹೀರೊ ಮೋಟೊಕಾರ್ಪ್, ಬಜಾಜ್ ಆಟೋ, ಕೋಟಕ್ ಬ್ಯಾಂಕ್, ಟಾಟಾ ಸ್ಟೀಲ್ ಕಂಪೆನಿಗಳು ದೀಪಾವಳಿ ಮುನ್ನಾ  ದಿನಗಳ ಚಟುವಟಿಕೆಯಿಂದ ನಿಫ್ಟಿಯನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿಸಿದೆ. ಈ ರೀತಿಯ ಏರಿಕೆಯು ಹೆಚ್ಚು ಏರಿಳಿತ ಉಂಟು ಮಾಡುವುದರಿಂದ, ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶವಾಗಿರುತ್ತದೆ.

ಒಟ್ಟಾರೆ ದೀಪಾವಳಿಯ ಮುಂಚಿನ ವಾರದಲ್ಲಿ ಸಂವೇದಿ ಸೂಚ್ಯಂಕವು 618 ಅಂಶಗಳ ಏರಿಕೆಯಿಂದ ವಿಜೃಂಭಿಸಿದರೆ ಮಧ್ಯಮ ಶ್ರೇಣಿ ಸೂಚ್ಯಂಕ 126 ಅಂಶಗಳ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 296 ಅಂಶಗಳ ಏರಿಕೆ ಪಡೆದುಕೊಂಡಿವೆ.  ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದಿಂದ ₹3,454 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹3,154 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯ ₹138.19 ಲಕ್ಷ ಕೋಟಿಗೆ ಏರಿಕೆ ಕಂಡು ಸಾರವ ದಾಖಲೆ ನಿರ್ಮಿಸಿದೆ.

ಹೊಸ ಷೇರಿನ ವಿಚಾರ:  ರಿಲಯನ್ಸ್ ನಿಪ್ಪಾನ್ ಲೈಫ್ ಅಸೆಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಕಂಪೆನಿಯು ರಿಲಯನ್ಸ್ ಮ್ಯುಚುಯಲ್ ಫಂಡ್, ಇ ಟಿ ಎಫ್ , ಫೋರ್ಟ್‌ಫೋಲಿಯೊ ಮ್ಯಾನೇಜ್‌ಮೆಂಟ್‌ ಸರ್ವಿಸಸ್, ಪಿಂಚಣಿ ನಿಧಿ, ಸಾಗರೋತ್ತರ ನಿಧಿಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಕಂಪೆನಿ.

ಈ ಕಂಪೆನಿ ಪ್ರತಿ ಷೇರಿಗೆ ₹247 ರಿಂದ ₹252 ರ ಅಂತರದಲ್ಲಿ ಈ ತಿಂಗಳ 25 ರಿಂದ 27 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ.  ಅರ್ಜಿಯನ್ನು 59 ಷೇರು  ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಮುಖಬೆಲೆ ಸೀಳಿಕೆ:  ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ನವೆಂಬರ್ 10 ನಿಗದಿತ ದಿನ.

ವಿಶಾಲ್ ಫ್ಯಾಬ್ರಿಕ್ಸ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಈ ತಿಂಗಳ 25 ನಿಗದಿತ ದಿನ.

ಹಕ್ಕಿನ ಷೇರು: ಹಿಂದ್ ರೆಕ್ಟಿಫೈರ್ಸ್ ಲಿಮಿಟೆಡ್ ಕಂಪೆನಿ ಪ್ರತಿ ಷೇರಿಗೆ ₹80 ರಂತೆ ವಿತರಿಸಲಿರುವ 1:10 ರ ಅನುಪಾತದ  ಹಕ್ಕಿನ ಷೇರಿಗೆ ಈ ತಿಂಗಳ 18 ನಿಗದಿತ ದಿನ.

ವಾರದ ವಿಶೇಷ
ಪೇಟೆಯಲ್ಲಿನ ವಹಿವಾಟಿನ ರೀತಿ ಗಮನಿಸಿದಾಗ ಪೇಟೆಯು ಸೂತ್ರವಿಲ್ಲದ ಗಾಳಿಪಟದಂತೆ ಚಲಿಸುತ್ತಿದೆ ಎನ್ನುವಂತಿದೆ. ಈ ಸೋಮವಾರ ಮತ್ತು ಮಂಗಳವಾರ ಪೇಟೆಗಳಲ್ಲಿ ನಡೆದ ವಹಿವಾಟಿನ ಗಾತ್ರವು ಕ್ರಮವಾಗಿ ₹3.99 ಲಕ್ಷ ಕೋಟಿ ಮತ್ತು ₹3.96 ಲಕ್ಷಕೋಟಿಯಷ್ಟಿತ್ತು.

ಈ ಕಾರಣ ಆ ದಿನಗಳಲ್ಲಿ ಸಂವೇದಿ ಸೂಚ್ಯಂಕವು ಸೋಮವಾರ 32 ಅಂಶ, ಮಂಗಳವಾರ 77 ಅಂಶ  ಏರಿಕೆ ಕಂಡುಕೊಂಡರೆ ಬುಧವಾರ ವಹಿವಾಟಿನ ಗಾತ್ರ ₹8.39 ಲಕ್ಷ ಕೋಟಿಗೆ ಜಿಗಿತ ಕಂಡಿದ್ದು ಅಂದು ಸಂವೇದಿ ಸೂಚ್ಯಂಕ 90 ಅಂಶಗಳ ಇಳಿಕೆ ಕಂಡಿತು. ಗುರುವಾರದ ವಹಿವಾಟಿನ ಗಾತ್ರವು ₹11.59 ಲಕ್ಷ ಕೋಟಿ ಭಾರಿ ಜಿಗಿತ ಕಂಡಿತು. ಈ ಭಾರಿ ಪ್ರಮಾಣದ ವಹಿವಾಟಿನ ಗಾತ್ರದ ಕಾರಣ ಗುರುವಾರ ಸಂವೇದಿ ಸೂಚ್ಯಂಕದ ಅಗ್ರಮಾನ್ಯ ಕಂಪೆನಿಗಳು ಹೆಚ್ಚಿನ ಏರಿಕೆ ಕಂಡು ಸೂಚ್ಯಂಕವನ್ನು 348 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿದವು. ಶುಕ್ರವಾರದ ವಹಿವಾಟಿನ ಗಾತ್ರವು ಕೂಡ ಭಾರಿ ಏರಿಕೆ ಕಂಡಿದೆ.

(9886313380. ಸಂಜೆ 4.30ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT