ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗತ್ವ ಪೂರ್ವಗ್ರಹ: ಬದಲಾಗಲಿ ಭಾವನೆ

Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನದ ಆಚರಣೆಗೆ ಜಗತ್ತು ಸಜ್ಜಾಗುತ್ತಿದೆ.  ಮಹಿಳಾ ದಿನ ಎಂಬುದು ಮಹಿಳಾ ಹೋರಾಟದ ನೆನಪನ್ನು ದಾಖಲಿಸುವ ದಿನ. ಪ್ರತಿರೋಧ, ಪ್ರತಿಭಟನೆಯ ಇತಿಹಾಸದ ಕಥೆ ಇದರ ಬೆನ್ನಿಗಿದೆ. ಹಕ್ಕುಗಳಿಗಾಗಿ ಹೋರಾಡಿದ ಮಹಿಳೆಯರ ಹೋರಾಟದ ಹಾಡಿನ ದನಿ ಇಲ್ಲಿ ಮಿಳಿತವಾಗಿದೆ. ಮಹಿಳಾ ದಿನದ ಆಚರಣೆ ಯಾವುದೋ ಒಂದು ಗುಂಪಿನ ಜೊತೆ ಮಾತ್ರ ಸಹಯೋಗ ಹೊಂದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ವಿವಿಧ ರಾಷ್ಟ್ರಗಳ ಸರ್ಕಾರಗಳು, ಮಹಿಳಾ ಸಂಘಟನೆಗಳು, ಖಾಸಗಿ ಸಂಸ್ಥೆಗಳು ಈ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿವೆ. 1911ರಲ್ಲಿ ಜರ್ಮನಿ ಮುಂತಾದೆಡೆ ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.  ಈ ಬಾರಿ ನಾವು ಆಚರಿಸುತ್ತಿರುವುದು 106ನೇ ಅಂತರರಾಷ್ಟ್ರೀಯ ಮಹಿಳಾ ದಿನ. ಈ ಬಾರಿ ಜಾಗತಿಕ ನೆಲೆಯಲ್ಲಿ ‘ಬದಲಾವಣೆಗಾಗಿ ದಿಟ್ಟತನ ಪ್ರದರ್ಶಿಸಿ’ ಎಂಬುದು ಮಹಿಳಾ ದಿನದ ಘೋಷವಾಕ್ಯವಾಗಿದೆ. ಜಗತ್ತಿನ ವಿವಿಧೆಡೆ ಕಂಡು ಬರುತ್ತಿರುವ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಇದು ಅತ್ಯಂತ ಪ್ರಸ್ತುತ. ಪ್ರತಿರೋಧದ ದನಿಗಳನ್ನು ನೇರ ಹಿಂಸೆಯ ಬೆದರಿಕೆಯೂ ಸೇರಿದಂತೆ ವಿವಿಧ ರೀತಿಗಳಲ್ಲಿ ಹತ್ತಿಕ್ಕುವ ಪ್ರಯತ್ನಗಳು ಇಂದಿನ ಅಂತರ್ಜಾಲ ಯುಗದಲ್ಲಿ ಹೆಚ್ಚಾಗುತ್ತಿರುವ ದಿನಗಳಲ್ಲಿ ಈ ಘೋಷವಾಕ್ಯ ಮುಖ್ಯವಾಗುತ್ತದೆ. ಲಿಂಗತ್ವ ಪೂರ್ವಗ್ರಹ, ಅಸಮಾನತೆಯ ಸಂಸ್ಕೃತಿಗೆ ಸವಾಲೊಡ್ಡುತ್ತಲೇ ಮಹಿಳೆಯರ ಸಾಧನೆಯನ್ನು ಸ್ಮರಿಸುವ ದಿನವಾಗಬೇಕಿದೆ ಇದು. ಜೊತೆಗೆ ‘ಮಹಿಳೆ ಇಲ್ಲದ ಒಂದು ದಿನ’ ಆಚರಣೆಗೂ ಕರೆ ನೀಡಲಾಗಿದೆ. ಎಂದರೆ, ವೇತನಸಹಿತ ಹಾಗೂ ವೇತನರಹಿತ ಶ್ರಮದಿಂದ ಒಂದು ದಿನ ಬಿಡುವು ಪಡೆಯಬೇಕೆಂದು ಮಹಿಳೆಯರಿಗೆ ಹೇಳಲಾಗಿದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಹೇಳಲಾಗದು. ಆದರೆ, ಮಹಿಳೆಯರು ಈ ಮುಷ್ಕರ ನಡೆಸುವುದು ಸದ್ಯದ ಟ್ರಂಪ್ ಯುಗದಲ್ಲಿ ಅತ್ಯಂತ ಸಮಯೋಚಿತವಾದದ್ದು ಎಂದು ಕಳೆದ ತಿಂಗಳು ‘ಗಾರ್ಡಿಯನ್’ ಪತ್ರಿಕೆಯಲ್ಲಿ ಬರೆದ ‘ಓಪ್ ಎಡ್’ ಲೇಖನದಲ್ಲಿ ಮಹಿಳಾ ಕಾರ್ಯಕರ್ತರು ಹಾಗೂ ವಿದ್ವಾಂಸರು ವಾದ ಮಂಡಿಸಿದ್ದರು. ಟ್ರಂಪ್ ಆಡಳಿತದ ಸ್ತ್ರೀದ್ವೇಷ ಹಾಗೂ ಮಹಿಳೆಯರ ಬದುಕುಗಳ ಮೇಲಿನ ನಿರಂತರ ಆಕ್ರಮಣದ ವಿರುದ್ಧ ರೋಸತ್ತ ಲಕ್ಷಾಂತರ ಜನರು ಜನವರಿ 21ರಂದು ಅಮೆರಿಕದ ವಿವಿಧ ನಗರಗಳಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಪ್ರದರ್ಶನ ಯಶಸ್ವಿಯಾಗಿತ್ತು. ಅಷ್ಟೇ ಅಲ್ಲ, ಭಾರತವೂ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಇಂತಹ ಸುಮಾರು 600 ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ವಿರೋಧಿ ಪ್ರದರ್ಶನಗಳಾಗಿದ್ದವು ಅವು. ಈವರೆಗೆ  ಗಳಿಸಿಕೊಂಡುಬಂದ ಮಹಿಳೆಯರ ಹಕ್ಕುಗಳು ಟ್ರಂಪ್ ಅಧಿಕಾರದ ಅವಧಿಯಲ್ಲಿ  ಅಪಾಯಕ್ಕೆ ಸಿಲುಕಬಹುದಾದ ಸಾಧ್ಯತೆಗಳಿಗೆ ವ್ಯಕ್ತಪಡಿಸಲಾಗಿದ್ದ  ಪ್ರತಿರೋಧವಾಗಿತ್ತು ಅದು.

ಟ್ರಂಪ್ ಅಧಿಕಾರ ವಹಿಸಿಕೊಂಡ ಮರುದಿನವೇ ಲಕ್ಷಾಂತರ ಜನರು ಆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ವಿಭಜನೆ, ಲಿಂಗ ತಾರತಮ್ಯ, ಜನಾಂಗೀಯ ವಾದಗಳನ್ನು ಪ್ರತಿಪಾದಿಸುತ್ತಲೇ  ಚುನಾವಣೆಯಲ್ಲಿ ಟ್ರಂಪ್ ಗೆದ್ದ ನಂತರ ‘ಆನ್‌ಲೈನ್‌’ನಲ್ಲಿ ಹೊರಹೊಮ್ಮಿದ ಭಾವನೆಗಳಿಗೆ ಕ್ರಿಯೆಯ ರೂಪ ನೀಡಿ ಮಹಿಳೆಯರು ಬೀದಿಗಿಳಿದಿದ್ದರು. ಈಗ ಇದರ ಮುಂದುವರಿಕೆಯಾಗಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮಹಿಳಾ ಕಾಳಜಿಯ ವಿಷಯ ಹಾಗೂ ಹೋರಾಟವನ್ನು ಜೀವಂತವಾಗಿಡಲು ಹೊಸ ಶಕ್ತಿ ಗಳಿಸಿಕೊಳ್ಳುವ ದಿನವಾಗಿ ಇದನ್ನು ಪರಿಗಣಿಸಲಾಗುತ್ತಿದೆ.

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಲಯಗಳಿಂದ ಮಹಿಳೆಯನ್ನು ದೂರ ಇಡುವುದು ಈ 21ನೇ ಶತಮಾನದಲ್ಲೂ ನಡೆದೇ ಇದೆ. ಸಂಪ್ರದಾಯ, ಸಂಸ್ಕೃತಿ ಹೆಸರಿನಲ್ಲಿ ಮನೆಗಳಲ್ಲಿರುವ ಲಿಂಗತ್ವ ಪೂರ್ವಗ್ರಹಗಳು ಮಹಿಳೆಯ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬದುಕಿನ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿಯೇ ವಿಶ್ವದಾದ್ಯಂತ ಪುರುಷ– ಮಹಿಳೆಯರ ನಡುವೆ ವೇತನ ಅಸಮಾನತೆ ಮುಂದುವರಿದಿದೆ. ಉದ್ಯಮ ಹಾಗೂ ರಾಜಕೀಯ ವಲಯಗಳಲ್ಲಂತೂ ಮಹಿಳೆಯರ ಪ್ರಾತಿನಿಧ್ಯ ನಿಕೃಷ್ಟ ಮಟ್ಟದಲ್ಲಿದೆ. ಜಾಗತಿಕವಾಗಿ ಶಿಕ್ಷಣ ಹಾಗೂ ಆರೋಗ್ಯ ಪಾಲನೆಯಂತಹ ಪ್ರಮುಖ ಕ್ಷೇತ್ರಗಳಲ್ಲೂ ಅಸಮಾನ ಸಂಸ್ಕೃತಿ ಹಾಸುಹೊಕ್ಕಾಗಿದೆ. ಹೆಣ್ಣಿನ ಮೇಲೆ ನಡೆಯುವ ಹಿಂಸಾಚಾರಗಳು ವಿಭಿನ್ನ ಸ್ವರೂಪಗಳನ್ನು ತಾಳುತ್ತಿವೆ. ಇಂತಹ ಸಂದರ್ಭದಲ್ಲಿ ಮುಂದಿನ ಶತಮಾನದ 2186ರವರೆಗೆ ‘ಲಿಂಗತ್ವ ಅಂತರ’ ಎಂದರೆ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಲಿಂಗ ತಾರತಮ್ಯ ಕೊನೆಯಾಗುವುದಿಲ್ಲ  ಎಂದು ವಿಶ್ವ ಆರ್ಥಿಕ ವೇದಿಕೆ ಹೇಳಿದೆ. ಹೀಗಾಗಿ ಅಂತರರಾಷ್ಟ್ರೀಯ ಮಹಿಳಾ ದಿನದ  ಆಚರಣೆ ಇಂದು ಎಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮಹಿಳೆಯರು 170 ಸಮಾನ ಮನಸ್ಕ ಸಂಘಟನೆಗಳ ಜೊತೆ ಒಟ್ಟುಗೂಡಿ ‘ಸಮತೆಯೆಡೆಗೆ ನಮ್ಮ ನಡಿಗೆ’ ಎಂಬ ಆಶಯದೊಂದಿಗೆ ಕೊಪ್ಪಳದಲ್ಲಿ ಮಾರ್ಚ್ 8 ಹಾಗೂ 9ರಂದು ಸಮಾವೇಶಗೊಳ್ಳಲಿದ್ದಾರೆ. ಹಕ್ಕುಗಳಿಗಾಗಿ ಮಹಿಳೆಯರು ನಡೆಸಿದ ಹೋರಾಟಗಳು ಸಮಾಜದ ಸಾರ್ವಜನಿಕ ಪ್ರಜ್ಞೆಯಲ್ಲಿ ಬದಲಾವಣೆಗಳನ್ನಂತೂ ತಂದಿವೆ. ಐಸ್‍ಲ್ಯಾಂಡ್‌ನ ವಿಶ್ವದ ಮೊದಲ ಚುನಾಯಿತ ಮಹಿಳಾ ಅಧ್ಯಕ್ಷೆಯನ್ನು ನೀಡಿತು ಈ ಹೋರಾಟ ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಸಮಾಜದಲ್ಲಿನ ಅಸಮಾನತೆಗಳನ್ನು ಅರಿತುಕೊಳ್ಳುವುದಷ್ಟೇ ಅಲ್ಲ, ಈ ಅಡೆತಡೆ ದಾಟಿ ಸಾಧನೆ ಮಾಡಿದ ಮಹಿಳೆಯರನ್ನು ಸ್ಮರಿಸುವುದೂ ಮುಖ್ಯ. ಯಾವುದೇ ರಾಜಕೀಯ ಪಕ್ಷವಾಗಲಿ ಮಹಿಳಾ ಕಾಳಜಿಯ ವಿಚಾರಗಳನ್ನು ಬೆಂಬಲಿಸಬೇಕು ಎಂಬ ಬಗ್ಗೆ ಈಗ ಮೇಲ್ಮಟ್ಟದಲ್ಲಾದರೂ ಅರಿವು ಇದೆ.

ಹೆಣ್ಣಿನ ಸಬಲೀಕರಣದ ಬಗ್ಗೆ ರಾಜಕಾರಣಿಗಳೂ ಮಾತನಾಡುವುದು ಇಂದು ಮಾಮೂಲಾಗಿದೆ. ಆದರೆ ಈ ಅರಿವು ಸಂವೇದನೆಯಾಗಿ ಅಂತರ್ಗತವಾಗಿಲ್ಲ. ಹೀಗಾಗಿಯೇ ಅನೇಕ ಸಂದರ್ಭಗಳಲ್ಲಿ ಪ್ರಮುಖ ರಾಜಕಾರಣಿಗಳ ಮಾತುಗಳಲ್ಲೂ ಲಿಂಗತ್ವ ತಾರತಮ್ಯ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಮುಖ್ಯವಾಹಿನಿಯ ಜನಮಾನಸದಲ್ಲಿ ಹೆಣ್ಣಿನ ಕುರಿತಾದ ಭಾವನೆಗಳು ಬದಲಾಗಬೇಕಾಗಿರುವ ಅವಶ್ಯಕತೆಯನ್ನು ಇದು ಎತ್ತಿ ಹೇಳುತ್ತದೆ. ಇಂತಹ ಬದಲಾವಣೆಯ ಅವಶ್ಯಕತೆಯನ್ನು 100 ವರ್ಷಗಳ ಹಿಂದೆಯೇ ಕರ್ನಾಟಕದ ನಂಜನಗೂಡಿನಂತಹ ಸಣ್ಣ ಊರಿನಲ್ಲಿದ್ದ ನಂಜನಗೂಡು ತಿರುಮಲಾಂಬಾ ಅವರು ಮನಗಂಡಿದ್ದರು ಎಂಬುದು ದೊಡ್ಡ ಸಂಗತಿ.  ತಿರುಮಲಾಂಬಾ ಅವರು ಕರ್ನಾಟಕದಲ್ಲಿ 20ನೇ ಶತಮಾನದ ಮೊದಲ ಸಂಪಾದಕಿ, ಪ್ರಕಾಶಕಿ ಹಾಗೂ ಮುದ್ರಕಿ ಎಂಬುದು ಹೆಗ್ಗಳಿಕೆ. 1916ರಲ್ಲಿ ‘ಕರ್ನಾಟಕ ನಂದಿನಿ’ ಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ ಆರಂಭಿಸಿದಾಗ ಅವರು ಹೇಳಿರುವ ಮಾತುಗಳಿವು: ‘ನಮ್ಮ ಕರ್ನಾಟಕದಲ್ಲಿ ಸ್ತ್ರೀಯರು ಲೇಖನ ಕಾರ್ಯದಲ್ಲಾಗಲೀ ಸಮಾಜ ಕಲ್ಯಾಣಕ್ಕೆ ಬೇಕಾಗುವ ಸುಧಾರಣಾ ವಿಷಯದಲ್ಲಾಗಲೀ ಅಭಿಪ್ರಾಯಗಳನ್ನು ಕೊಡುವುದರಲ್ಲಿ ಅರ್ಹರಾಗಿಲ್ಲವೆಂದೂ,  ಗೃಹಕೃತ್ಯವೊಂದಲ್ಲದೆ ಮತ್ಯಾವುದರಲ್ಲಿಯೂ ಅನುಭವವಿಲ್ಲದವರೆಂದೂ ಅಪವಾದ ಉಂಟಾಗಿದೆಯಷ್ಟೇ? ಅದನ್ನು ತಪ್ಪಿಸಲೆಂದೇ ಈ ‘ಕರ್ನಾಟಕ ನಂದಿನಿ’ ಹುಟ್ಟಿತು’.

ಇದಕ್ಕಾಗಿ ಸಮಾಜ ಸುಧಾರಣೆಗೆ ಒತ್ತು ನೀಡುವ ಲೇಖನಗಳನ್ನು ತಿರುಮಲಾಂಬಾ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಹೆಣ್ಣುಮಕ್ಕಳನ್ನು ಕುರಿತಾದ ನಿಲುವುಗಳ ಬದಲಾವಣೆಗೆ ಪ್ರೇರಕ ಎನ್ನಬಹುದಾದ ಅಂಶಗಳನ್ನು ಈ ಬರಹಗಳು ಒಳಗೊಂಡಿರುತ್ತಿದ್ದವು. ‘ಕರ್ನಾಟಕ ನಂದಿನಿ’ ಪತ್ರಿಕೆಯಲ್ಲಿ 1919ರಲ್ಲಿ ಪ್ರಕಟವಾಗಿರುವ ತುಳಸೀಬಾಯಿ (ಕಾವ್ಯನಾಮ ಮಲ್ಲಿಗೆ) ಅವರ ‘ಕಾಳಗೌಡ’ ಕಥನ ಕವನ ಗಮನ ಸೆಳೆಯುತ್ತದೆ. ಸ್ತ್ರೀಯರು ನಿರ್ವಹಿಸುವ ಮನೆಗೆಲಸಕ್ಕೆ ಆರ್ಥಿಕ ಮೌಲ್ಯವಿಲ್ಲವೆಂದು ಹೀನವಾಗಿ ಕಾಣುವ ದೃಷ್ಟಿಯ ಬಗ್ಗೆ ಈ ಕವನದ  ‘ನಿವೇದನ’ದಲ್ಲಿ ತಿರುಮಲಾಂಬಾ ಟೀಕಿಸಿದ್ದಾರೆ.  ‘ಸ್ತ್ರೀಯರ ಕ್ಷಮೆ, ಶ್ರಮ, ಸಹಿಷ್ಣುತೆ, ಗೃಹಕಾರ್ಯ ನಿರ್ವಹಣೆಯಲ್ಲಿ ಅವರಿಗಿರುವ ವಿಚಕ್ಷಣೆ, ಸಾಂಸಾರಿಕ ಕ್ಲೇಶಗಳನ್ನು ಸಹಿಸಿ ತಮ್ಮ ಗಂಡಸರನ್ನು ಸಂತೋಷಪಡಿಸಲು ಪಡುವ ಜಾಗರೂಕತೆ ಇತ್ಯಾದಿ ಸದ್ಗುಣಗಳ ನೆಲೆಯನ್ನು ಸರಿಯಾಗಿ ತಿಳಿಯದೆ ಸ್ತ್ರೀಯರೆಂದರೆ ತಮ್ಮ ಊಳಿಗಕ್ಕಾಗಿಯೇ ಭಗವಂತನಿಂದ ನಿರ್ಮಿಸಲ್ಪಟ್ಟ ಮೂಕ ಪ್ರಾಣಿಗಳೆಂದರಿತು...’ ನಡೆಸಿಕೊಳ್ಳುವುದನ್ನು ಟೀಕಿಸುತ್ತಾರೆ. ‘ಉಡುಗೆ ಸಾರಣೆಯೊಂದು ಕೆಲಸವೆ? ಅಡುಗೆ ಮನೆಯ ಕೆಲಸ ಲೆಕ್ಕವೆ?’ ಎಂದು ತನ್ನ ಮಾಳಿಯನ್ನು ಟೀಕಿಸುವ ಕಥನ ಕವನದ ನಾಯಕ ಗೌಡ, ಕವನದ ಕೊನೆಯಲ್ಲಿ ‘ಸಾಗದೇ ಮನೆ ಕೆಲಸ ನನ್ನಿಂದೇಗಲಾರದು ಮಾಳಿಯೇ ಬರಿದೇ ನಿನ್ನನ್ನು ಜರಿಯುತ್ತಿದ್ದೆನು’ ಎಂದು ಹೇಳುತ್ತಾನೆ. ಸ್ತ್ರೀಯರು ನಿರ್ವಹಿಸುವ ಮನೆಗೆಲಸದ ಬಗ್ಗೆ ಆ ಕಾಲದಲ್ಲೇ ವ್ಯಕ್ತವಾಗಿರುವ ಪ್ರಜ್ಞೆ ವಿಶೇಷವಾದದ್ದು.

ರುಮಲಾಂಬಾ ಅವರು ಪತ್ರಿಕೆ ನಡೆಸುವುದು ಆ ಕಾಲದಲ್ಲಿ ಸುಲಭದ ಮಾತಾಗಿರಲಿಲ್ಲ. ‘ಈಕೆಯೂ ಪತ್ರಿಕೆ ನಡೆಸುತ್ತಾಳೆಯೆ? ಹೆಂಗಸು ಎಂದು ಜನ ಕೊಂಡುಕೊಳ್ಳುತ್ತಾರೆ. ಅದರಲ್ಲೇನೂ ಹುರುಳಿಲ್ಲ’ ಎಂದು ಸುಪ್ರಸಿದ್ಧ ಹಿರಿಯ ಸಾಹಿತಿಯೊಬ್ಬರು ಇವರ ಬಗ್ಗೆ ಪ್ರಚಾರ ಮಾಡಿದ್ದು ತಿರುಮಲಾಂಬಾ ಅವರಿಗೆ ನೋವು ನೀಡಿತ್ತು. ಆದರೆ ಇಂತಹ ಕುಹಕಗಳನ್ನು ಮೆಟ್ಟಿ ನಿಂತು ಪತ್ರಿಕೆಯನ್ನು ನಡೆಸಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಪ್ರವೇಶಕ್ಕೆ ಗಟ್ಟಿ ಬುನಾದಿ ಹಾಕಿಕೊಟ್ಟವರು  ತಿರುಮಲಾಂಬಾ ಎಂಬುದನ್ನು ನಾವು ಮರೆಯಲಾಗದು.

ಈ ನೂರು ವರ್ಷಗಳಲ್ಲಿ ಮುಖ್ಯವಾಹಿನಿಯ ಮಾಧ್ಯಮ ವಲಯದಲ್ಲಿ ಅಪಾರ ಬೆಳವಣಿಗೆಗಳಾಗಿವೆ. ಮಾಧ್ಯಮ ವಲಯದಲ್ಲಿ ಮಹಿಳೆಯರು ಈಗ ಅಗೋಚರರಾಗೇನೂ ಉಳಿದಿಲ್ಲ. ಇಂತಹದೊಂದು ಸನ್ನಿವೇಶದಲ್ಲಿ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ‘ಪತ್ರಕರ್ತೆಯರ ಸಮಸ್ಯೆ, ಸವಾಲು ಮತ್ತು ಅವಕಾಶಗಳು’ ಕುರಿತಂತೆ ಆಯೋಜಿಸಲಾಗಿರುವ (ಮಾರ್ಚ್‌ 6 ಮತ್ತು 7)  ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಭಾಗಗಳ ಪತ್ರಕರ್ತೆಯರು ದೊಡ್ಡ ಪ್ರಮಾಣದಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದಾರೆ.

ಈಗ ತಂತ್ರಜ್ಞಾನಗಳ ಯುಗ. ಟೆಲೆಕ್ಸ್‌ನಿಂದ ಟ್ವಿಟರ್‌ವರೆಗೆ ಮಾಧ್ಯಮಲೋಕದಲ್ಲಿ ತಂತ್ರಜ್ಞಾನ ಬೆಳವಣಿಗೆಯಾಗಿದೆ. ಇದು ಸಹ ಸಮಾನ ನೆಲೆಯ ಹಲವು ಅವಕಾಶಗಳನ್ನು ಮಹಿಳೆಗೆ ತೆರೆಯುತ್ತಿದೆ. ಭಾರತೀಯ ಮಾಧ್ಯಮಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಿದ್ದೂ ಮಾಧ್ಯಮ ವಲಯದಲ್ಲಿ ಜೆಂಡರ್ (ಲಿಂಗತ್ವ) ಜಾಗೃತಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಭಾವಿಸಬೇಕಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪುರುಷರಷ್ಟೇ ಮಹಿಳೆಯರೂ ನಿಂದನಾತ್ಮಕ ನುಡಿಗಳನ್ನು ಬಳಸುತ್ತಾರೆ ಎಂಬುದು ದುರದೃಷ್ಟಕರ. ಅದರಲ್ಲೂ  ಹೊರಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕೀಯ, ಜಾತಿ, ಲಿಂಗ ಹಾಗೂ ಅಧಿಕಾರದ ರಾಜಕಾರಣ ಮೇಳೈಸಿದರಂತೂ ಅದು ಮಹಿಳೆಯರ ವಿರುದ್ಧದ ಹಿಂಸೆಯಾಗಿ ಸಮೀಕರಣಗೊಂಡುಬಿಡುತ್ತದೆ. ಪತ್ರಿಕಾ ಕ್ಷೇತ್ರದಲ್ಲಿನ ಸಾಧನೆಗಾಗಿ ಇತ್ತೀಚೆಗೆ ‘ಚಮೇಲಿ ದೇವಿ ಜೈನ್‌’ ಪ್ರಶಸ್ತಿ ಪಡೆದ ನೇಹಾ ದೀಕ್ಷಿತ್ ಸೇರಿದಂತೆ ಹಲವು ಪತ್ರಕರ್ತೆಯರು ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳಿಗೆ ಗುರಿಯಾಗಿದ್ದಾರೆ. ಪತ್ರಕರ್ತೆಯರಷ್ಟೇ  ಅಲ್ಲ ವಿಭಿನ್ನ ವಿಚಾರಧಾರೆಗಳನ್ನು ಮಂಡಿಸುವ ಸ್ವತಂತ್ರ ಮನೋಧರ್ಮದ ಮಹಿಳೆಯರೂ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಹೀಗಾಗಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ದೈಹಿಕ ಹಿಂಸೆಯ ಬೆದರಿಕೆ ಅಥವಾ ಟ್ರಾಲ್‌ಗೆ ಒಳಗಾಗುವ ಅಂತರ್ಜಾಲ ಮಹಿಳಾ ಬಳಕೆದಾರರು ‘ಐಯಾಮ್‍ ಟ್ರಾಲ್ಡ್‍’ ಆ್ಯಪ್‌ನಿಂದ ನೆರವು ಪಡೆಯಲು ಸದ್ಯದಲ್ಲೇ ಸಾಧ್ಯವಾಗಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿರುವುದು ಭರವಸೆದಾಯಕ.

ಮಾಧ್ಯಮ ನಮ್ಮ ಜಗತ್ತನ್ನು ರೂಪಿಸುತ್ತದೆ. ಆದರೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನಡೆಸಲಾದ ಸಂಶೋಧನೆ ಪ್ರಕಾರ ಮುದ್ರಣ, ರೇಡಿಯೊ ಹಾಗೂ ಟಿ.ವಿ.ಗಳಲ್ಲಿನ ಶೇ 46ರಷ್ಟು ಸುದ್ದಿಗಳು ಈಗಲೂ ಲಿಂಗತ್ವ ತಾರತಮ್ಯ ಸ್ಥಿರೀಕರಿಸುವಂತಹವು. ನಾವು ಹೇಗೆ ಆಲೋಚಿಸುತ್ತೇವೆ, ವರ್ತಿಸುತ್ತೇವೆ ಎಂಬುದರ ಮೇಲೆ ಪ್ರಭಾವ ಬೀರುವ ಲಿಂಗತ್ವ ಪಡಿಯಚ್ಚು ಪಾತ್ರಗಳ ಬದಲಾವಣೆಗಳಿಗೆ ಮಾಧ್ಯಮ ಲೋಕ ಶ್ರಮಿಸಬೇಕಾಗಿದೆ. ಮಾಧ್ಯಮ ನಮ್ಮ ಜಗತ್ತನ್ನು ರೂಪಿಸುತ್ತದೆ. ಮಹಿಳೆಯರೂ ಈ ಬದಲಾವಣೆಯ ಪ್ರಮುಖ ಪ್ರತಿನಿಧಿಗಳು ಎಂಬುದನ್ನು ಮೊದಲು ಜಗತ್ತು ಅರಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT