ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗತ್ವ ಪೂರ್ವಗ್ರಹ ಮತ್ತಷ್ಟು ಹೆಚ್ಚುವುದೆ?

Last Updated 21 ಮಾರ್ಚ್ 2017, 3:56 IST
ಅಕ್ಷರ ಗಾತ್ರ
ಈ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನ (ಮಾರ್ಚ್ 8) ಆಚರಿಸಿದ ಮರು ದಿನವೇ  ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ 2016ಕ್ಕೆ  ಮಾರ್ಚ್ 9ರಂದು ಲೋಕಸಭೆ ಅಂಗೀಕಾರ ನೀಡಿದೆ. ರಾಜ್ಯಸಭೆಯಲ್ಲಿ  ಕಳೆದ ವರ್ಷ ಆಗಸ್ಟ್ 11ರಂದೇ ಈ ಮಸೂದೆ ಅಂಗೀಕಾರಗೊಂಡಿದೆ.

ಹೀಗಾಗಿ ಇದು ಕಾನೂನಾಗಿ ಜಾರಿಗೊಳ್ಳಲು  ರಾಷ್ಟ್ರಪತಿಯವರ ಸಹಿ ಬೀಳಬೇಕಿದೆ ಅಷ್ಟೆ. ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗುವ ಮೊದಲು ನಡೆದ ಚರ್ಚೆಯಲ್ಲಿ ಪಾಲ್ಗೊಂಡವರು ಕೇವಲ 53 ಸಂಸತ್ ಸದಸ್ಯರು.
 
ಮಹಿಳಾ ವಿಚಾರಗಳ ಕುರಿತಂತೆ ನಮ್ಮ ಕಾನೂನು ನಿರ್ಮಾತೃಗಳ ಈ ಬಗೆಯ ತಾತ್ಸಾರ ಅಥವಾ  ನಿರ್ಲಕ್ಷ್ಯ ಹೊಸದೇನೂ ಅಲ್ಲ.  ಅದೇನೇ ಇರಲಿ, ಈ ಮಸೂದೆ ಪ್ರಕಾರ, ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಇನ್ನು ಮುಂದೆ ವೇತನ ಸಹಿತ ಹೆರಿಗೆ ರಜೆ 12ರಿಂದ 26 ವಾರಗಳಿಗೆ ಏರಿಕೆಯಾಗಲಿದೆ.
 
ಪ್ರಗತಿಪರವಾದುದು ಎಂದು ಬಣ್ಣಿಸಲಾಗುತ್ತಿರುವ ಈ ಹೊಸ ಕಾನೂನಿನಿಂದ ಅನುಕೂಲವಾಗುವುದು ರಾಷ್ಟ್ರದ ಕೇವಲ 18 ಲಕ್ಷ ಮಹಿಳೆಯರಿಗೆ ಎಂಬುದನ್ನು ನಾವು ಗಮನಿಸಬೇಕು. 10ಕ್ಕಿಂತ ಹೆಚ್ಚು ನೌಕರರಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಈ ನಿಯಮ ಅನ್ವಯಿಸಲಿದೆ. ಆದರೆ ಶೇ 90ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ.

ಅವರನ್ನು ಈ ಕಾನೂನು ಒಳಗೊಳ್ಳುವುದಿಲ್ಲ. ಕೃಷಿ ಕಾರ್ಮಿಕರು, ಮನೆಗೆಲಸದವರು, ಕಟ್ಟಡ ಕಾರ್ಮಿಕರಂತಹವರು ಅಸಂಘಟಿತ ವಲಯಕ್ಕೆ ಸೇರುತ್ತಾರೆ. ಈಗಾಗಲೇ ಇವರೆಲ್ಲಾ ಅತ್ಯಂತ ಶೋಷಣಾತ್ಮಕ ಪರಿಸರಗಳಲ್ಲಿ ಗೊಣಗದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕ ಕಾನೂನುಗಳೂ ಇವರನ್ನು ಗುರುತಿಸುವುದಿಲ್ಲ. ಹೀಗಾಗಿ ಈ ತಾರತಮ್ಯ ಎದ್ದು ಕಾಣಿಸುವಂತಹದ್ದು. 
 
ಕಾಯಂ ಆಗಿರದ ಕಟ್ಟಡ ಕಾರ್ಮಿಕ ಮಹಿಳೆಯರೂ ಹೆರಿಗೆ ಸೌಲಭ್ಯ ಪಡೆಯಲು ಅರ್ಹರು ಎಂದು 2000ದಲ್ಲಿ ಸುಪ್ರೀಂ ಕೋರ್ಟ್ ಗುರುತಿಸಿತ್ತು.  ಆದರೆ ಈ ತೀರ್ಪನ್ನು ಈ ಹೊಸ ಮಸೂದೆ ಪೂರ್ಣವಾಗಿ ಕಡೆಗಣಿಸಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರನ್ನೂ 1961ರ ಹೆರಿಗೆ ಸೌಲಭ್ಯ ಕಾಯ್ದೆ ಒಳಗೊಳ್ಳಬೇಕು ಎಂದು 2015ರಲ್ಲಿ ಭಾರತ ಕಾನೂನು ಆಯೋಗ ಸಹ ಶಿಫಾರಸು ಮಾಡಿತ್ತು ಎಂಬುದನ್ನೂ ಸ್ಮರಿಸಬಹುದು.

ಸದ್ಯಕ್ಕೆ ಇಂತಹ ಮಹಿಳೆಯರು ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ ಅಡಿ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಹೆರಿಗೆಗಾಗಿ ಗರ್ಭಿಣಿ ಆಸ್ಪತ್ರೆಗೆ ದಾಖಲಾದಲ್ಲಿ ಈ ಯೋಜನೆ ಅಡಿ ಆಕೆಗೆ ₹6,000 ನಗದು ವರ್ಗಾವಣೆ ಮಾಡಲಾಗುತ್ತದೆ. ಆದರೆ ಈ ಯೋಜನೆ ಎರಡು ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ. 
 
ಉದ್ಯೋಗ ಹಾಗೂ ಸಂಸಾರವನ್ನು ಒಟ್ಟಾಗಿ ನಿಭಾಯಿಸುವುದು ಕಷ್ಟ ಎಂಬುದು ಈ ಕಾಲದಲ್ಲೂ ಬದಲಾಗಿಲ್ಲ. ಅದರಲ್ಲೂ ಭಾರತದಲ್ಲಿ ಅಡುಗೆ, ಸ್ವಚ್ಛಗೊಳಿಸುವಿಕೆ, ಮಕ್ಕಳು ಹಾಗೂ ಹಿರಿಯರ ಪಾಲನೆಗಾಗಿ ದಿನಕ್ಕೆ 298 ನಿಮಿಷಗಳನ್ನು ಮಹಿಳೆಯರು ವಿನಿಯೋಗಿಸುತ್ತಾರೆ. ಆದರೆ ಇಂತಹ ಕೆಲಸಗಳಿಗಾಗಿ ಭಾರತೀಯ ಪುರುಷ ವಿನಿಯೋಗಿಸುವ ಸಮಯ ಕೇವಲ 19 ನಿಮಿಷ ಎಂಬುದನ್ನು ಸಮೀಕ್ಷೆಯೊಂದು ತಿಳಿಸಿದೆ.

ವೇತನರಹಿತವಾದ ಇಂತಹ ಮನೆಯೊಳಗಿನ ಕೆಲಸಗಳ ಹೊರೆಯನ್ನು ನಿಭಾಯಿಸಬೇಕಾದ ಮಹಿಳೆಗೆ ಹೊರಗಿನ ಕೆಲಸಕ್ಕೆ ಸಮಯವಾದರೂ ಎಲ್ಲಿ ಎಂಬುದು ಪ್ರಶ್ನೆ. ಹೀಗಾಗಿ   ಭಾರತದ ಔದ್ಯೋಗಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿರುವ ವಿದ್ಯಮಾನವೂ ಇಂದು ನಮ್ಮ  ಕಣ್ಣ ಮುಂದಿದೆ.
 
1990ರಲ್ಲಿ ಭಾರತದ ಔದ್ಯೋಗಿಕ ವಲಯದಲ್ಲಿ  ಶೇ 35ರಷ್ಟಿದ್ದ ಮಹಿಳೆಯರ ಪಾಲ್ಗೊಳ್ಳುವಿಕೆ 2014ರಲ್ಲಿ ಶೇ 27ಕ್ಕೆ ಕುಸಿದಿದೆ ಎಂದರೆ ಅದು ಆತಂಕದ ಸಂಗತಿ. ಏಕೆಂದರೆ, 10 ವರ್ಷಕ್ಕೂ ಹೆಚ್ಚಿನ ಶಾಲಾ ಶಿಕ್ಷಣ ಪೂರೈಸಿದ ಹೆಣ್ಣುಮಕ್ಕಳ ಪ್ರಮಾಣ 2005ರಲ್ಲಿ ಶೇ 22.3 ಇದ್ದದ್ದು 2015ರಲ್ಲಿ ಶೇ 35.7ಕ್ಕೆ ಏರಿದೆ. ಹೀಗಿದ್ದೂ ಇವರೆಲ್ಲಾ ಔದ್ಯೋಗಿಕ ಕ್ಷೇತ್ರದಲ್ಲಿ ಕಾಣೆಯಾಗಿದ್ದಾರೆ ಎಂಬುದು ನಿರ್ಲಕ್ಷಿಸುವ ಸಂಗತಿಯಲ್ಲ.
 
ಈಗಿರುವ ಅಂಕಿಅಂಶಗಳ ಪ್ರಕಾರ, ಉದ್ಯೋಗ ಕ್ಷೇತ್ರದಲ್ಲಿ ಗ್ರಾಮೀಣ ವಲಯದಲ್ಲಿ ಶೇ 24.8 ಹಾಗೂ ನಗರ ಪ್ರದೇಶಗಳಲ್ಲಿ ಶೇ 14.7ರಷ್ಟು ಮಾತ್ರ ಮಹಿಳೆಯರ ಪಾಲ್ಗೊಳ್ಳುವಿಕೆ ಇದೆ. 
 
ಆರ್ಥಿಕತೆಯಲ್ಲಿ ಬೆಳವಣಿಗೆ ಆಗುತ್ತಿದ್ದರೂ, ಉದ್ಯೋಗ ಕ್ಷೇತ್ರದಲ್ಲಿ ಹೀಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಇಳಿಮುಖವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಮಹಿಳೆಯರನ್ನು ಉದ್ಯೋಗ ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ಹೆರಿಗೆ ಸೌಲಭ್ಯ ತಿದ್ದುಪಡಿ ಮಸೂದೆಯಿಂದ ನೆರವಾಗಬಹುದೆ?
 
ಸುದೀರ್ಘ ಅವಧಿಯ ವೇತನ ಸಹಿತ ರಜೆ ಸಿಗುವುದರಿಂದ ಉದ್ಯೋಗಗಳಲ್ಲಿ ಮುಂದುವರಿಯಲು ಮಹಿಳೆಯರಿಗೆ  ಅನುಕೂಲವಾಗುತ್ತದೆ ಎಂಬಂತಹ ಆಶಾದಾಯಕ ಮಾತುಗಳೇನೊ  ಕೇಳಿಬರುತ್ತಿವೆ.  ಜರ್ಮನಿ, ಕೆನಡಾ, ಹಾಗೂ ನಾರ್ವೆ ನಂತರ ಅತಿ ಹೆಚ್ಚಿನ ಹೆರಿಗೆ ರಜೆ ಸೌಲಭ್ಯ ನೀಡುವ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರುತ್ತಿದೆ ಎಂಬುದೂ ಹೆಗ್ಗಳಿಕೆಯ ಸಂಗತಿ ಎಂಬುದೂ ನಿಜ.
 
ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯುವ ಮಹಿಳೆಯರು ಹಾಗೂ ಬಾಡಿಗೆ ತಾಯಿಯನ್ನು ನಿಯೋಜಿಸಿ ತನ್ನದೇ ಮಗು ಪಡೆದುಕೊಳ್ಳುವ ಜೈವಿಕ ತಾಯಿಗೂ  ಈ ಮಸೂದೆ ಪ್ರಕಾರ 12 ವಾರಗಳ ರಜೆ ಸಿಗಲಿದೆ. ಜೊತೆಗೆ 50 ಅಥವಾ ಅದಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವ ಸಂಸ್ಥೆಗಳು ಶಿಶುಪಾಲನಾ ಕೇಂದ್ರಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸುವ ವಿಚಾರವೂ ಮಸೂದೆಯಲ್ಲಿದೆ.
 
ಈ ಶಿಶುಪಾಲನಾ ಕೇಂದ್ರಕ್ಕೆ ಕಚೇರಿಯ ವೇಳೆಯಲ್ಲಿ ದಿನದಲ್ಲಿ ನಾಲ್ಕು ಬಾರಿ ಹೋಗಿಬರಲು ಮಹಿಳೆಗೆ ಅವಕಾಶವೂ ಇರುತ್ತದೆ.  ಅಷ್ಟೇ ಅಲ್ಲ ಮನೆಯಿಂದಲೂ ಮಾಡಬಹುದಾದಂತಹ  ಸ್ವರೂಪದ ಕೆಲಸ ಇದ್ದಲ್ಲಿ ಅದಕ್ಕೆ ಅವಕಾಶವನ್ನೂ ಉದ್ಯೋಗದಾತರು ಕಲ್ಪಿಸಿಕೊಡಬೇಕು ಎಂಬ ವಿಚಾರವೂ ಮಸೂದೆಯಲ್ಲಿದೆ. 
 
1961ರ ಹೆರಿಗೆ ಸೌಲಭ್ಯ ಕಾಯ್ದೆ, ದುಡಿಯುವ ತಾಯಿಗೆ ಎಷ್ಟೇ ಮಕ್ಕಳಿದ್ದರೂ ತಾರತಮ್ಯವಿಲ್ಲದ  ಅನುಕೂಲ ಒದಗಿಸುತ್ತಿತ್ತು. ಆದರೆ ತಿದ್ದುಪಡಿಯಾದ ಮಸೂದೆಯಲ್ಲಿ ಎರಡನೇ ಮಗುವಿನ ನಂತರ ಅನುಕೂಲ ಕಡಿಮೆಯಾಗುತ್ತದೆ. 26 ವಾರಗಳ ವೇತನ ಸಹಿತ ರಜೆ ಮೊದಲ ಎರಡು ಮಕ್ಕಳಿಗೆ ಮಾತ್ರ ಸೀಮಿತ. ಮೂರನೇ ಮಗುವಿಗೆ 12 ವಾರಗಳ ವೇತನ ಸಹಿತ ರಜೆ ನೀಡಲಾಗುತ್ತದೆ.
 
ನಾಲ್ಕನೇ ಮಗುವಿನಿಂದ ಆರು ವಾರಕ್ಕೆ ರಜೆ ಇಳಿಕೆಯಾಗುತ್ತದೆ. ಇದು ಕುಟುಂಬ ಯೋಜನೆ ಹಾಗೂ ಜನಸಂಖ್ಯೆ ನಿಯಂತ್ರಣಕ್ಕೆ ಪರೋಕ್ಷ ಉತ್ತೇಜನ ನೀಡುವಂತಹದ್ದು. ಆದರೆ ಈ ಜನಸಂಖ್ಯಾ ನಿಯಂತ್ರಣದ ಹೊಣೆಯೂ  ಪೂರ್ತಿ ಮಹಿಳೆಯದ್ದೇ ಎಂಬುದೂ ಈ ನೀತಿಯಿಂದ ಬಿಂಬಿತವಾಗುತ್ತದೆ.
ತಾಯಿ ಹಾಗೂ ಶಿಶು ಆರೋಗ್ಯ ರಕ್ಷಣೆಗಾಗಿ 24 ವಾರಗಳ ಹೆರಿಗೆ ರಜೆ ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಸೇರಿದಂತೆ ಅನೇಕ ತಜ್ಞ ಸಂಸ್ಥೆಗಳು ಶಿಫಾರಸು ಮಾಡುತ್ತವೆ.
 
ಆದರೆ ಈ ರಜೆಯ ವೆಚ್ಚವನ್ನು ಸಾಮಾನ್ಯವಾಗಿ ಉದ್ಯೋಗದಾತರೇ ಭರಿಸಬೇಕಾಗುತ್ತದೆ. ಇದು ಅನೇಕ ಸಂದರ್ಭಗಳಲ್ಲಿ ಮಹಿಳೆಯರ ಉದ್ಯೋಗ ಅವಕಾಶ ಕಿತ್ತುಕೊಳ್ಳುವುದಕ್ಕೂ ಕಾರಣವಾಗಬಹುದು ಎಂಬಂತಹ ವಾಸ್ತವವನ್ನೂ ಪರಿಗಣಿಸಬೇಕು. ಮಹಿಳಾಪರ ಎಂದು ಬಿಂಬಿಸಲಾಗುತ್ತಿರುವ ಈ ತಿದ್ದುಪಡಿ ಮಸೂದೆಯೇ ಮಹಿಳಾ ನೇಮಕಾತಿಗಳಿಗೆ ದೀರ್ಘಾವಧಿಯಲ್ಲಿ ಅಡ್ಡಿಯಾಗಬಹುದು.
 
ಚಿಕ್ಕ ಸಂಸ್ಥೆಗಳು ಅಥವಾ ನವೋದ್ಯಮಗಳಲ್ಲಿ 26 ವಾರಗಳ ಗೈರುಹಾಜರಿ ಗಣನೀಯ ನಷ್ಟ ಉಂಟು ಮಾಡುವಂತಹದ್ದು ಎಂಬಂತಹ ಅಭಿಪ್ರಾಯಗಳು ಈಗಾಗಲೇ ವ್ಯಕ್ತವಾಗುತ್ತಿವೆ. ಹೀಗಾಗಿಯೇ ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯಗಳನ್ನು ಒದಗಿಸುವ ವೆಚ್ಚಕ್ಕೆ ಉದ್ಯೋಗದಾತರೇ ಪೂರ್ಣ ಬಾಧ್ಯಸ್ಥರಾಗಬೇಕಿಲ್ಲ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಓ) ಹೆರಿಗೆ ಸೌಲಭ್ಯ ರಕ್ಷಣೆಯ ನಿರ್ಣಯಗಳು ಹೇಳಿರುವುದನ್ನೂ ಗಮನಿಸಬೇಕು.  

ಇಂತಹ ಸೌಲಭ್ಯಗಳನ್ನು ಕಡ್ಡಾಯ ಸಾಮಾಜಿಕ ವಿಮೆ ಅಥವಾ ಸರ್ಕಾರಿ ವೆಚ್ಚದ ಮೂಲಕವೂ ಒದಗಿಸಲು ಅವಕಾಶ ಇರಬೇಕು ಎಂದು ಐಎಲ್‌ಓ ಹೇಳಿದೆ.  ಜಗತ್ತಿನಲ್ಲಿ ಶೇ 16ರಷ್ಟು ರಾಷ್ಟ್ರಗಳಲ್ಲಿ ಉದ್ಯೋಗದಾತರು ಹಾಗೂ ಸರ್ಕಾರ ನೀಡುವ ಹಣದ ನಿಧಿಯಿಂದ ಹೆರಿಗೆ ಸೌಲಭ್ಯ ವೆಚ್ಚವನ್ನು ಭರಿಸಲಾಗುತ್ತಿದೆ. ಆದರೆ ಶೇ 25ರಷ್ಟು ರಾಷ್ಟ್ರಗಳಲ್ಲಿ ಉದ್ಯೋಗದಾತರೇ ಹೆರಿಗೆ ಸೌಲಭ್ಯಗಳನ್ನು ಪೂರ್ಣವಾಗಿ ನೀಡುತ್ತಿದ್ದಾರೆ.
 
ಗರ್ಭಿಣಿಯ ಪ್ರಜನನ ಆರೋಗ್ಯ ಹಕ್ಕುಗಳ ಮೇಲೇ ಈ ಮಸೂದೆ ಹೆಚ್ಚು ಗಮನ ಕೇಂದ್ರೀಕರಿಸಿದೆ ಎನ್ನಬಹುದು.  ಹೀಗಾಗಿ ಈ ಚೌಕಟ್ಟಿನಲ್ಲಿ ಅನೇಕ ಅಂಶಗಳು ಬಿಟ್ಟು ಹೋಗಿವೆ. ಹೆರಿಗೆ ರಜೆ ಮುಗಿಸಿ ವಾಪಸ್ ಬರುವ ಮಹಿಳೆ ಪೂರ್ವಗ್ರಹ ರಹಿತ, ಆರಾಮದಾಯಕ ವಾತಾವರಣದಲ್ಲಿ ಕೆಲಸ ಮಾಡಲು ಅವಶ್ಯಕವಾದ ವಾತಾವರಣ ಸೃಷ್ಟಿಸಲು ದುಡಿಯುವ ಸ್ಥಳಗಳು ಹಾಗೂ ಸಂಸ್ಥೆಗಳ ಬಾಧ್ಯಸ್ಥಿಕೆಯನ್ನು ಇಲ್ಲಿ ಪ್ರಸ್ತಾಪಿಸಿಲ್ಲ.

ಹೆರಿಗೆ ರಜೆ ಪಡೆದುಕೊಳ್ಳುವ ಮಹಿಳೆಯ ವೃತ್ತಿಪರತೆಯನ್ನು ಪೋಷಿಸಲು ಅಗತ್ಯವಾದ ವಿಧಿವಿಧಾನಗಳಿಗೂ ಅವಕಾಶ ಕಲ್ಪಿಸಿಲ್ಲ. ಕಾರ್ಪೊರೇಟ್ ವಲಯ ಹಾಗೂ ಸಂಬಂಧಿಸಿದ ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಲಿಂಗತ್ವ ಪೂರ್ವಗ್ರಹಗಳು ಹಾಸುಹೊಕ್ಕಾಗಿವೆ.  

ಸುದೀರ್ಘವಾದ ಹೆರಿಗೆ ರಜೆ ಸೌಲಭ್ಯಗಳನ್ನು ಅನುಷ್ಠಾನಗೊಳಿಸಿದ ಮಾತ್ರಕ್ಕೆ ಈ ಪೂರ್ವಗ್ರಹಗಳನ್ನು ತೊಡೆಯಲಾಗದು. ಈ ಕಾನೂನು  ಅನುಷ್ಠಾನಗೊಂಡಂತೆಯೇ ಈ ಪೂರ್ವಗ್ರಹ ಉದ್ಯೋಗದಾತರಲ್ಲಿ ಇನ್ನಷ್ಟು ಹೆಚ್ಚಾಗಬಹುದು. ಇದು ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆಯ ಇಳಿಕೆಗೆ ಇನ್ನಷ್ಟು ಕೊಡುಗೆ ಸಲ್ಲಿಸಬಹುದು ಎಂಬ ಕಟು ವಾಸ್ತವವನ್ನೂ ಪರಿಗಣಿಸಬೇಕು.
 
ತಾಯಿ ಹಾಗೂ ಶಿಶು ಆರೋಗ್ಯ ರಕ್ಷಣೆ ಕಾನೂನಿನ ಮೂಲ ಉದ್ದೇಶ. ಆ ಮೂಲಕ ತಾಯ್ತನವನ್ನು ಮಹಿಳೆಯ ಬದುಕಿನ ಕೇಂದ್ರವಾಗಿ ಪರಿಗಣಿಸಲಾಗುತ್ತದೆ. ಆದರೆ ಮಹತ್ವಾಕಾಂಕ್ಷಿ, ವೃತ್ತಿಪರ ಮಹಿಳೆಯ ಕಾಳಜಿಗಳು ಇಲ್ಲಿ ಪರಿಗಣನೆಗೆ ಬರದಿರುವುದು ದುರಂತ.

ಗರ್ಭಿಣಿಯರ ವಿರುದ್ಧ ವ್ಯಾಪಕ ತಾರತಮ್ಯ ಭಾವನೆ ಭಾರತದ ಕಾರ್ಪೊರೇಟ್ ವಲಯದಲ್ಲಿ ಇರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಇತ್ತೀಚಿನ ಅಧ್ಯಯನವೂ ಹೇಳಿತ್ತು. ಹೆಚ್ಚಿನ ಹೆರಿಗೆ ಸೌಲಭ್ಯ ರಜೆಯಿಂದಾಗಿ ಮಹಿಳೆಯ ಪ್ರಜನನ ಪಾತ್ರಗಳ ಮೇಲೇ ಹೆಚ್ಚಿನ ಹೊರೆಯನ್ನು ಹೇರಿದಂತಾಗುತ್ತದೆ. ಹೀಗಾಗಿ ಭಾರತದಲ್ಲಿ ಸುದೀರ್ಘ ಪಿತೃತ್ವ ರಜೆಯ ವಿಚಾರವನ್ನು ಚಿಂತಿಸುವುದಕ್ಕೆ ಇದು ಸಕಾಲ ಎಂದು ಎನ್‌ಸಿಡಬ್ಲ್ಯು ಅಧ್ಯಯನ ಹಾಗೂ ಕಾರ್ಮಿಕ ಸಚಿವಾಲಯದ 2011ರ ವರದಿಗಳು ಹೇಳಿದ್ದವು.
 
ಜೊತೆಗೆ  ಕುಟುಂಬ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಗಳಾಗುತ್ತಿರುವ  ಕಾಲ ಇದು. ಇಂತಹ ಸಂದರ್ಭದಲ್ಲಿ ಶಿಶುಪಾಲನೆಯನ್ನು ಅಮ್ಮ, ಅಪ್ಪಂದಿರ ಜಂಟಿ ಹೊಣೆಗಾರಿಕೆಯಾಗಿಸುವ ದೃಷ್ಟಿಕೋನವನ್ನು ಸಮಾಜದಲ್ಲಿ ಮೂಡಿಸಲು ಪಿತೃತ್ವ ರಜೆಯ  ಅವಶ್ಯಕತೆ ಇದೆ ಎಂದು ಕೆಲವು ಸಂಸತ್ ಸದಸ್ಯರು ಮಸೂದೆ ಅಂಗೀಕಾರದ ವೇಳೆ ಪ್ರಸ್ತಾಪಿಸಿದ್ದು ಸರಿಯಾಗಿಯೇ ಇತ್ತು.

ಆದರೆ, ‘ಪಿತೃತ್ವ ರಜೆ ಎಂಬುದು ಪುರುಷರಿಗೆ ರಜೆಯ ಖುಷಿಯನ್ನು ಅನುಭವಿಸುವ ದಿನಗಳಾಗುತ್ತವೆ ಅಷ್ಟೆ’ ಎಂಬಂತಹ ವಿವಾದಾತ್ಮಕ ನುಡಿಗಳನ್ನು ಸ್ವತಃ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿಯವರೇ ಹೇಳಿದ್ದಾರೆ. ಹೀಗಾಗಿ ಪುರುಷರಿಗೆ ಶಿಶುಪಾಲನೆಯ ಹೊಣೆಯನ್ನು ತೆಗೆದುಹಾಕುವ ಮೂಲಕ ಸರ್ಕಾರ ನೀಡುತ್ತಿರುವ ಸಂದೇಶ ಹಾನಿಕರವಾದದ್ದು.

ಈವರೆಗೆ ಈ ನಿಟ್ಟಿನಲ್ಲಿ ಆಗಿದ್ದ ಕಾನೂನು ಬೆಳವಣಿಗೆಗಳನ್ನು ಇದು ಹಿಂದಕ್ಕೆ ಒಯ್ಯುವಂತಹದ್ದು. ಮತ್ತೆ ಯಥಾಪ್ರಕಾರ ಮಹಿಳೆಯನ್ನು ಪಾರಂಪರಿಕ ಲಿಂಗತ್ವ ಪಾತ್ರಗಳಿಗೇ ಸೀಮಿತಗೊಳಿಸುವಂತಹದ್ದು. ಪಿತೃತ್ವ ರಜೆ ಇಲ್ಲದೆ ಬರೀ ಹೆರಿಗೆ ರಜೆ ನೀಡುವುದು ಲಿಂಗತ್ವ ಪೂರ್ವಗ್ರಹಗಳ ವರ್ತುಲವನ್ನು ದೊಡ್ಡದಾಗಿಸುತ್ತಲೇ ಸಾಗುತ್ತದೆ. ಪಾರಂಪರಿಕ ಲಿಂಗತ್ವ ಪಾತ್ರಗಳಿಗೆ ಇನ್ನಷ್ಟು ನೀರೆರೆಯುವುದು ಮುಂದುವರಿಯುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT