ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಪ್‌ಸ್ಟಿಕ್ಕು ಅಗ್ನಿದಿವ್ಯವೇ ಇಲ್ಲಾ ಚಕ್ರವ್ಯೂಹವೇ?

Last Updated 2 ಮಾರ್ಚ್ 2016, 19:30 IST
ಅಕ್ಷರ ಗಾತ್ರ

‘ಸರಿ ಈಗ ನನ್ ಸಮಸ್ಯೆಗೆ ಉತ್ತರ ಹೇಳ್ರೇ’ ಅಂತ ನನ್ನಿ ಕೇಳಿದ್ದು ಅಸಹಾಯಕತೆಯಿಂದಲ್ಲ, ಬದಲಾಗಿ ಹೆಚ್ಚಿನ ಐಡಿಯಾಗಳೇನಾದರೂ ಹೊಳೆದು ಕಗ್ಗಂಟಾಗಿರುವ ಈ ಸಮಸ್ಯೆಯನ್ನು ಎದುರಿಸಲು ಸಾಧ್ಯವೇ ಎನ್ನುವ ಉದ್ದೇಶದಿಂದ. ಹೀಗಾಗಿ ಒಬ್ಬ ಪ್ರೊಫೆಸರರು ಬೇಕಿಲ್ಲದಿದ್ದರೂ ತಮ್ಮ ‘ಗಂಡಸ್ತನ’ದ ಒಂದು ಸಾಮಾಜಿಕ ‘ಇಮೇಜ್’ ಕಟ್ಟಲೇಬೇಕಾದ ಅನಿವಾರ್ಯ  ಪರಿಸ್ಥಿತಿಯನ್ನು ಒದ್ದಾಡುತ್ತಲೇ ನಿಭಾಯಿಸಬೇಕಾದ ಸಂದರ್ಭವನ್ನೂ, ಇತ್ತ ತನ್ನ ಪ್ರೊಫೆಸರರು ತನ್ನನ್ನು ‘ಕಾಂಪ್ರೊಮೈಸ್’ ಗೆ ಒಳಗೊಳ್ಳಲು ಹೇಳಿದ ಸತ್ಯವನ್ನೂ ಹೇಗೆ ಅರ್ಥೈಸಬೇಕೆಂದು ತಿಳಿಯದೇ ಮಸುಕು ಮಸುಕಾದ ಕತ್ತರಿ ದಾರಿಯಲ್ಲಿ ನಿಂತ ಹುಡುಗಿಗೆ ದಾರಿ ಕಾಣುವ ಬಗೆಯಾದರೂ ಹೇಗೆ?

ಗಿರೀಶ್ ಕಾರ್ನಾಡರೇನೋ ‘ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳೇ ಇಲ್ಲದ ದಾರಿಯಲ್ಲಿ ನಡೆಯುವುದು ಹೇಗೆ?’ ಅಂತ ಯಯಾತಿ ನಾಟಕದಲ್ಲಿ ಸರಳವಾಗಿ, ಉತ್ಕಂಠಿತವಾಗಿ ಹೇಳಿಬಿಟ್ಟರು. ಆದರೆ ನನ್ನಿ ನಿಂತಿದ್ದ ದಾರಿಯಲ್ಲಿ ಕನಸು ಕಟ್ಟುವಂಥದ್ದು ಏನೂ ಇರಲಿಲ್ಲ. ಬರೀ ಒಂದು ಬೆಳಕಿನ ಸೆಳಕು ಕಂಡರೂ ಸಾಕಿತ್ತು, ಈ ಸಮಸ್ಯೆಯ ಅಂತ್ಯ ಇದೇ ಅನ್ನುವ ನಂಬಿಕೆಯಿಂದ ಬೇಕಾದಷ್ಟು ನಡೆಯಬಹುದಾಗಿತ್ತು. ಕಷ್ಟದಲ್ಲಿ ಕಾವ್ಯದ ಭಾಷೆ ನೆನಪಾದರೆ ವಾಂತಿ-ಭೇದಿ ರೋಗ ಹತ್ತಿದೋನ ಮುಂದೆ ಬಫೆ ಊಟ ಇಟ್ಟ ಹಾಗೆ. ಹದವಾದ ಮೃಷ್ಟಾನ್ನದ ವಾಸನೆಯೂ ವಾಕರಿಕೆ ಬರಿಸುತ್ತೆ. ಸಿಟ್ಟು ತರುತ್ತೆ. ನನ್ನಿ ಜೀವನ ಅವಳನ್ನು ಎಂಥಾ ಜಾಗದಲ್ಲಿ ನಿಲ್ಲಿಸಿತ್ತು ಅಂದರೆ ಕನಸು, ಬೆಳಕು ಯಾವ್ ನನ್ ಮಗನಿಗೆ ಬೇಕು! ಅನ್ನಿಸಿತ್ತು.

‘ಬೇಗ ಏನಾದ್ರೂ ಸಲ್ಯೂಷನ್ ಕಂಡು ಹಿಡೀರೇ, ನಾಳೆನೇ ಎಕ್ಸಾಮು’ ಅಂತ ನನ್ನಿ ಅಲವತ್ತುಕೊಂಡಳು. ಎಲ್ಲರೂ ಯೋಚನೆಯಲ್ಲಿ ಮುಳುಗಿರುವಾಗ ಅಟೆಂಡರ್ ಮರಿಯಮ್ಮ ‘ಇಜೀಈಈಈಈ ಈ...ಇಜಿಯಮ್ಮಾಆಆಆಆ’ ಅಂತ ವಿಜಿಯನ್ನು ಕಾರಿಡಾರಿನಲ್ಲಿ ಕೂಗುತ್ತಾ ಬರುತ್ತಿರುವುದು ಗಮನಕ್ಕೆ ಬಂತು. ಅಲ್ಲಿಯ ತನಕ ತನ್ನ ಹಾಸಿಗೆಯ ಮೇಲೆ ಅನಂತಶಯನಂತೆ ಪವಡಿಸಿ ನನ್ನಿಯ ಕಷ್ಟಕ್ಕೆ ಪರಿಹಾರ ಯೋಚಿಸುವ ದೇವರಂತೆ ಕಾಣುತ್ತಿದ್ದ ವಿಜಿ ಬಲವಂತವಾಗಿ ಪಂಚೇಂದ್ರಿಯಗಳನ್ನು ವಾಸ್ತವಕ್ಕೆ ಕರೆತರಬೇಕಾಯ್ತು.

ಮಲಗಿದ್ದು ಹಿತವಾದ್ದರಿಂದ ಏಳಲು ಮನಸ್ಸು – ದೇಹ ಎರಡೂ ಸಹಕರಿಸಲಿಲ್ಲ. ಇದ್ದಲ್ಲಿಂದಲೇ ‘ಏನ್ ಮರಿಯಮ್ಮಾ ಆಆಆಆ?’ ಅಂತ ಕೂಗಿದಳು. ಅದು ಮರಿಯಮ್ಮನಿಗೆ ಕೇಳಿಸಲಿಲ್ಲವಾದ್ದರಿಂದ ಮತ್ತೆ ‘ಇಜೀಈಈಈಈಎಯಮ್ಮಾಆ’ ಎನ್ನತೊಡಗಿದಳು. ಇವಳು ‘ಆಆಆಆಅ ಏನ್ ಮರಿಯಮ್ಮಾ!’ ಎನ್ನುವ ಧ್ವನಿ ಮರಿಯಮ್ಮನ ‘ಇಜಿಯಮ್ಮ....’ ಧ್ವನಿ ಹೊರಡುವ ಹೊತ್ತಿಗೇ ಎರಡು ಮೂರು ಬಾರಿ ಹೊರಟು ಎರಡೂ ಧ್ವನಿಗಳು ಕಾರಿಡಾರಿನಲ್ಲಿ ಬಾಣಗಳ ಥರ ಡಿಕ್ಕಿ ಹೊಡೆದು ಇನ್ನೊಬ್ಬರ ಕಿವಿ ತಲುಪದೇ ಹೋದವು.

ಇಬ್ಬರ ಕೂಗಾಟಕ್ಕೆ ರೈಲು ಬೋಗಿ ಥರಾ ಇದ್ದ ಹಾಸ್ಟೆಲು ಗೋಳಗುಮ್ಮಟದಂತೆ ಭಾಸವಾಯಿತು. ಎರಡು ಹೆಣ್ಣುಗಳು ಒಂದೇ ಸಮಯದಲ್ಲಿ ಕೂಗು-ಪ್ರತಿಕೂಗು ಹಾಕುತ್ತಿದ್ದುದರಿಂದ ಪ್ರತೀ ಕೂಗೂ ಪ್ರತಿಧ್ವನಿಸುತ್ತಾ ಗೋಡೆಗಳೆಲ್ಲಾ ಭೂಕಂಪಕ್ಕೆ ಅದುರುವಂತೆ ಅದುರಿದವು. ಈ ದೃಶ್ಯವನ್ನು ನೋಡುತ್ತಾ ಇದ್ದ ಇಂದುಮತಿಗೆ ತಾಳ್ಮೆ ಸೋರಿಹೋಗಿ ‘ಥತ್! ಹೊರಗೆ ಹೋಗಿ ಏನೂಂತ ಕೇಳೇ.

ನಮ್ ಕಿವಿ ಎಲ್ಲಾ ತೂತಾಯ್ತು. ಎದ್ದೋಗೇ ಎಮ್ಮೆ!’ ಎಂದಳು. ಒಲ್ಲದ ಮನಸ್ಸಿನಿಂದ ವಿಜಿ ಎದ್ದು ಧಪ ಧಪ ಹೆಜ್ಜೆ ಹಾಕುತ್ತಾ ಹೋದಳು. ಅರವತ್ತರ ಹತ್ತಿರದ ಮರಿಯಮ್ಮ ತನ್ನ ವಯಸ್ಸಿಗೆ ಅನುಭವಿಸಬೇಕಾದ ಎಲ್ಲ ಕಷ್ಟಗಳನ್ನೂ ಮುಖದ ಮೇಲೆ ಒಂದೊಂದು ಗೆರೆಯನ್ನಾಗಿ ಪರಿವರ್ತಿಸಿಕೊಂಡದ್ದರಿಂದ ಅವಳ ಮುಖವನ್ನು ನೋಡಿದ ಕೂಡಲೇ ‘ಅಯ್ಯೋ ಪಾಪ’ ಎಂದೆನ್ನಿಸಿಬಿಡುತ್ತಿತ್ತು.

‘ಓ! ಇಲ್ಲೀ ತನಕ ಯಾಕ್ ಬಂದ್ರಿ ಮರಿಯಮ್ಮಾ ಯಾರನ್ನಾದರೂ ಕಳಿಸಬಾರದಿತ್ತಾ?’ ಕೇಳುತ್ತಾ ವಿಜಿ ಮರಿಯಮ್ಮನೊಂದಿಗೆ ಹೆಜ್ಜೆ ಹಾಕಿದಳು.
‘ಅಯ್ಯೋ ನನ್ ಮಕಕ್ಕೆ ಯಾವ್ ಮುಂಡೇಗಂಡ್ರು ಯೆಲ್ಪ (ಹೆಲ್ಪ್) ಮಾಡಕ್ಕೆ ಬಂದಾರವ್ವಾ? ನಾನೇ ಎಲ್ಲ ಕಡೆಗೂ ಓಡಾಡಿ ಸಾಯ್ಬೇಕು. ಬಾ ಪೋನ್ ಬಂದದ ನಿಂಗ. ಮತ್ತ ಮಾಡ್ತರ’ ಅಂದಳು ಮರಿಯಮ್ಮ.

ವಿಜಿ ಹಾಸ್ಟೆಲಿನ ವರಾಂಡದಲ್ಲಿದ್ದ ಫೋನಿನ ಹತ್ತಿರ ಹೋಗಿ ಕಾದಳು. ಕಾಯುವಿಕೆಯಲ್ಲಿ ನಿರತರಾದ ಇನ್ನು ಕೆಲವರೂ ಇದ್ದರು. ಯಾರೋ ಪೇಪರ್ ಓದುತ್ತಾ ಕೂತಿದ್ದರೆ ಇನ್ನು ಕೆಲವರು ಎತ್ತಲೋ ನೋಡುತ್ತಾ ನಿಂತಿದ್ದರು. ಮೊಬೈಲು ಎನ್ನುವ ಆಟಿಕೆ ಇಲ್ಲದ ಕಾಲದಲ್ಲಿ ಕಾಯುವಿಕೆ ಒಂದು ಸಾಮಾಜಿಕ ಪ್ರಕ್ರಿಯೆಯಾಗಿತ್ತು. ಕಾಯುವುದೆಂದರೆ ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದೋ, ಕೈಯಲ್ಲಿ ಪುಸ್ತಕವಿದ್ದರೆ ಓದುವುದೋ ಇಲ್ಲಾ ಇನ್ನೊಬ್ಬರೊಂದಿಗೆ ಮಾತನಾಡಿ ಲೋಕ ಜ್ಞಾನ ಹೆಚ್ಚಿಸಿಕೊಳ್ಳುವುದೋ ಹೀಗೆ ಹತ್ತು ಹಲವಾರು ಥರ ಜೀವಿಸಬಹುದಿತ್ತು.

ಈಗೇನಿಲ್ಲ, ಎರಡು ಸೆಕೆಂಡ್ ಬಿಡುವು ಸಿಕ್ಕರೂ ನಮ್ಮ ಕಣ್ಣಿನ ಪಾಪೆಯನ್ನು ವಾಟ್ಸಪ್ಪು, ಫೇಸ್ಬುಕ್ಕು, ಸಿನಿಮಾ, ಮೆಸೇಜು, ಮಿಸ್ಡ್ ಕಾಲ್, ಕ್ಯಾಂಡಿ ಕ್ರಷ್ಶು ಹೀಗೆ ಸಾವಿರ ಬಣ್ಣದ ಪಿಕ್ಸೆಲ್ಲುಗಳು ತುಂಬುತ್ತವೆ. ಫೋನಿಗೆ ಕಾಯುತ್ತಾ ಕೂತ ವಿಜಿಗೆ ತಲೆಯ ತುಂಬಾ ಬರೀ ನನ್ನಿಯ ವಿಚಾರವೇ ತುಂಬಿತ್ತು. ಈ ಹುಡುಗಿಯ ಸಂದಿಗ್ಧವನ್ನು ಪರಿಹರಿಸುವುದು ಹೇಗೆ? ಈಗಿನ ಸಂದರ್ಭದಲ್ಲಾದರೆ ಪ್ರೊಫೆಸರರಿಗೆ ಗೊತ್ತಿಲ್ಲದ ಹಾಗೆ ಅವರ ಮಾತನ್ನು, ನಾಚಿಕೆಗೆಟ್ಟ ನಡವಳಿಕೆಯನ್ನು ರೆಕಾರ್ಡ್ ಮಾಡಿ ಹೆದರಿಸಲು ಪ್ರಯತ್ನ ಪಡಬಹುದಿತ್ತು. ಆದರೆ ಎರಡು ದಶಕಗಳ ಹಿಂದೆ ಅಂಥ ಯಾವ ತಾಂತ್ರಿಕ ಉಪಾಯದ ರಕ್ಷಣೆಯೂ ಇರಲಿಲ್ಲ.

ವಿಜಿ ಅಲ್ಲಿದ್ದ ಸಮಯದಲ್ಲೇ ಕೇರಳದ ವೈನಾಡಿನ ಹುಡುಗಿ ಬೀನಾ ಸಾಲಂಕೃತಳಾಗಿ ಭಕ್ತಾದಿಗಳಿಂದ ಸಿಂಗರಿಸಲಾದ ಉತ್ಸವ ಮೂರ್ತಿಯಂತೆ ನಳನಳಿಸುತ್ತಾ ಎತ್ತಲೋ ಹೊರಟಿದ್ದಳು. ಯಾರೋ ಅವಳನ್ನ ಮಾತಾಡಿಸಿದರು. ‘ಹಾಲ್ ಟಿಕೆಟ್ಸ್ ಬಂದಿದೆಯಂತಾ?’ ‘ಹೌದು’ ಎಂದು ಚುಟುಕಾಗಿ ಉತ್ತರಿಸಿದಳು ಬೀನಾ. ‘ನಂದೂ ಕಲೆಕ್ಟ್ ಮಾಡ್ತೀಯಾ?’ ಅದೇ ಹುಡುಗಿ ಕೇಳಿದಳು. ‘ನಾನು ಈಗ ಹಾಲ್ ಟಿಕೆಟ್ ಕಲೆಕ್ಟ್ ಮಾಡಕ್ಕೆ ಹೋಗ್ತಾ ಇಲ್ಲ. ನನ್ ಅಟೆಂಡೆನ್ಸ್ ಶಾರ್ಟೇಜ್ ಬಂದಿದೆ. ಅದಕ್ಕೆ ಪ್ರೊಫೆಸರ್ ಹತ್ರ ರಿಕ್ವೆಸ್ಟ್ ಮಾಡ್ಕೊಳ್ಳಕ್ಕೆ ಹೋಗ್ತಿದೀನಿ’

ಅಬ್ಬಬ್ಬಾ ಹೆಣ್ಣೇ! ಕ್ಲಾಸಿಗೆ ಹೋಗದೆ ಅಟೆಂಡೆನ್ಸ್ ಶಾರ್ಟೇಜ್ ಬರುವ ಹಾಗೆ ಮಾಡಿಕೊಂಡದ್ದೇ ಅಲ್ಲದೆ, ಹೀಗೆ ಸರ್ವಾಂಗ ಸುಂದರಿಯ ಹಾಗೆ ಕಂಗೊಳಿಸುತ್ತಾ ಹೋದರೆ ಪ್ರೊಫೆಸರು ಮಕದ್ ತುಂಬಾ ಬಯ್ದು ಕಳಿಸೋಲ್ಲವಾ? ವಿಜಿ ಬೀನಾಳನ್ನು ಹತ್ತಿರ ಕರೆದಳು. ‘ಬೀನೂ, ನೀನ್ ಹೋಗ್ತಾ ಇರೋದು ಅಟೆಂಡೆನ್ಸ್ ಬೇಕು ಅಂತ ರಿಕ್ವೆಸ್ಟ್ ಮಾಡಕ್ಕೆ. ಸ್ವಲ್ಪ ಮೇಕಪ್ ಕಡಿಮೆ ಮಾಡಿಕೊಂಡು ಹೋಗಬಾರ್ದಾ? ಮದುವೆ ಮನೆಗೆ ಹೋಗೋ ಥರಾ ಹೊರಟಿದೀಯಾ?’ ಮುಗ್ಧ ಹರಿಣಿಯಂತೆ ಬೀನಾ ಕಣ್ಣುಗಳನ್ನು ಪಟಪಟಿಸಿದಳು. ‘ಅಟೆಂಡೆನ್ಸಗೂ ನನ್ ಡ್ರೆಸ್ಸಿಗೂ ಏನ್ ಸಂಬಂಧ?’

‘ಬಿ ಹಂಬಲ್. ಯಾಕೆ ಅಟೆಂಡೆನ್ಸ್ ಕಡಿಮೆ ಇದೆ ಅಂದ್ರೆ ಏನ್ ಹೇಳ್ತೀಯಾ? ಫ್ಯಾಮಿಲಿ ಪ್ರಾಬ್ಲಮ್ಮೋ ಇಲ್ಲ ಹೆಲ್ತ್ ಪ್ರಾಬ್ಲಮ್ಮೋ ಇತ್ತು ಅಂತ ತಾನೆ? ಏನೋ ಕಷ್ಟ ಇತ್ತು ಅಂತ ಹೇಳಕ್ಕೆ ಹೋಗೋಳು ಹಿಂಗೆ ಡ್ರೆಸ್ ಮಾಡಿಕೊಂಡು ಹೋಗ್ತಾರಾ?’ ‘ಇಲ್ಲವಲ್ಲ? ನಾನು ಹಂಗೇನೂ ಹೇಳಕ್ಕೆ ಹೋಗ್ತಿಲ್ಲ. ನನಗೆ ಟೈಫಾಯಿಡ್ ಆಗಿತ್ತು ಅಂತ ನಮ್ ಮೇಷ್ಟ್ರಿಗೆ ಗೊತ್ತು. ಅಲ್ಲದೆ ಅವರು ಲೇಡಿ ಪ್ರೊಫೆಸರ್ರು. ಮೆಡಿಕಲ್ ಸರ್ಟಿಫಿಕೇಟು ತಗೊಂಡೇ ಹೋಗ್ತಿದೀನಿ. ಅವರ ಸಬ್ಜೆಕ್ಟಲ್ಲಿ ನಾನು ಪಿ.ಎಚ್‌ಡಿ ಮಾಡಬೇಕು ಅಂತ ಇದ್ದೀನಿ.

ಅವರಿಗೆ ಅದೆಲ್ಲಾ ಗೊತ್ತು. ಏನ್ ಗೊತ್ತಾ ವಿಜಿ! ಕಷ್ಟ ಬಂದಾಗ ಉಪಾಯ ಮಾಡಬೇಕು ನಿಜ. ಆದರೆ ನಮಗೇ ಅಪಾಯ ಆಗೋವಷ್ಟಲ್ಲ! ಸುಮ್ ಸುಮ್ನೆ ನಾಟ್ಕ ಹಾಕಕ್ಕೆ ಹೋದ್ರೆ ನೋ ಯೂಸ್!’ ಎಂದು ವಿಜಿಗೆ ಒಂದು ಮಿನಿ ಜೀವನದರ್ಶನ ಮಾಡಿಸಿ ಕಿಲಕಿಲ ನಗುತ್ತಾ ಸೊಂಟದ ತನಕ ಸ್ಪ್ರಿಂಗಿನ ಥರಾ ಬೆಳೆದಿದ್ದ ಗುಂಗುರು ಕೂದಲನ್ನು ಕಟ್ಟಿಕೊಳ್ಳುತ್ತಾ ಹೊರಟಳು. ವಿಜಿಗೆ ಅವಳ ಆತ್ಮವಿಶ್ವಾಸ ಕಂಡು ಹೆಮ್ಮೆ ಎನ್ನಿಸಿತು. ಅವಳಿಗೆ ಟೈಫಾಯಿಡ್‌ ಬಂದದ್ದೆಲ್ಲಾ ಸುಳ್ಳು ಎಂದು ಗೊತ್ತಿದ್ದರೂ ಬೀನಾ ಸತ್ಯದ ತಲೆಯ ಮೇಲೆ ಹೊಡೆದಷ್ಟು ನಿರಾಯಾಸವಾಗಿ ಸುಳ್ಳನ್ನು ಹೇಳಿದ್ದು ಮಾತ್ರ ಬಹಳ ಇಂಪ್ರೆಸಿವ್ ಆಗಿತ್ತು.

‘ಏನೀಗ? ಸಬ್ಜೆಕ್ಟಲ್ಲಿ ಚೆನ್ನಾಗಿ ಓದಿದೀನಿ ಅನ್ನುವ ವಿಶ್ವಾಸ ಅವಳಿಗೆ ಇದೆ ತಾನೇ? ಚೆನ್ನಾಗಿ ಓದೋ ಕೆಪಾಸಿಟಿ ಇದೆ!’ ಎಂದು ಸ್ವಗತವೆಂಬಂತೆ ಹೇಳಿಕೊಂಡಳು. ವಿಜಿ ಹತ್ತಿರತ್ತಿರ ಅರ್ಧ ಗಂಟೆ ಕಾದರೂ ಇವಳ ಫೋನು ಬರಲಿಲ್ಲ. ಮತ್ತೆ ಬಂದ್ರೆ ಮರಿಯಮ್ಮ ಇದ್ದಾಳೆ ಕರಿಯಕ್ಕೆ ಎನ್ನುವ ವಿಶ್ವಾಸದಲ್ಲಿ ರೂಮಿಗೆ ಹೊರಟಳು. ಹೋಗುತ್ತೋಗುತ್ತಾ ಬೀನಾಳನ್ನೂ ನನ್ನಿಯನ್ನೂ ಮನಸ್ಸು ಯಾಕೋ ಅಕ್ಕಪಕ್ಕ ನಿಲ್ಲಿಸಿ ನೋಡಿತು. ಇಬ್ಬರಿಗೂ ಸಮಸ್ಯೆ ಇದೆ- ಸ್ವರೂಪ ಮಾತ್ರ ಬದಲು. ಆದರೆ ಸಮಸ್ಯೆಯನ್ನು ಎದುರಿಸುವ ಮನಃಸ್ಥಿತಿ ಇಬ್ಬರದ್ದೂ ಒಂದೇ ಇದೆ. ಧೃತಿಗೆಡುವಂಥದ್ದು ಏನೂ ಇಲ್ಲ.

ಅಲ್ಲದೆ ನಾಳೆ ನನ್ನಿಗೆ ನಡೆಯೋದು ಫೋಟೊಗ್ರಫಿ ಎಕ್ಸಾಮು. ಅದರಲ್ಲಿ ತೆಗೆದ ಫೋಟೊವನ್ನು ಡೆವಲಪ್ ಮಾಡುವ ಕೆಲಸ ಮುಖ್ಯವಾಗಿರುತ್ತೆ. ಅದು ಅವಳಿಗೆ ಚೆನ್ನಾಗಿ ಗೊತ್ತಿರುವ ಕೆಲಸ. ಡಾರ್ಕ್ ರೂಮಲ್ಲೇ ನಡೆಯುತ್ತೆ ಅಂತಾದರೂ, ಹೊರಗೆ ಎಲ್ಲರೂ ಇರುತ್ತಾರೆ. ಅವಳ ರಕ್ಷಣೆ ಅವಳು ಮಾಡಿಕೊಳ್ಳಲೇಬೇಕು. ಹೀಗನ್ನಿಸಿದ್ದೇ ತಡ ರೂಮಿಗೆ ಓಡಿದಳು. ಅಲ್ಲಿ ಎಲ್ಲರೂ ಇನ್ನೂ ರಣತಂತ್ರಗಳನ್ನು ರೂಪಿಸುತ್ತಾ ಕುಳಿತಿದ್ದರು.

ವಿಜಿ ತನ್ನ ತಲೆಗೆ ಬಂದ ಉಪಾಯವನ್ನು ಎಲ್ಲರ ಮುಂದೂ ಹೇಳಿದಳು. ಎಲ್ಲರಿಗೂ ಆ ಮಾರ್ಗ ಒಪ್ಪಿಗೆಯಾಯಿತು. ಸಂಜೆ ನನ್ನಿ ತನ್ನ ಕ್ಲಾಸ್ಮೇಟ್ ಒಬ್ಬನನ್ನು ಕರೆದು ಸಹಾಯ ಮಾಡಲು ಕೇಳಿಕೊಂಡಳು. ಎಲ್ಲವೂ ತಯಾರಾಯಿತು. ಮಾರನೇ ದಿನ ಮಧ್ಯಾಹ್ನ ಸಮಯಕ್ಕೆ ಸರಿಯಾಗಿ ನನ್ನಿಯ ಪರೀಕ್ಷಾ ಸ್ಥಳದ ವರೆಗೆ ಇಂದುಮತಿ ಮತ್ತು ವಿಜಿ ಜೊತೆಯಲ್ಲಿ ನಡೆದು ಹೋದರು. ರಶ್ಮಿ ಮತ್ತು ನನ್ನಿಯ ಕ್ಲಾಸ್ಮೇಟ್ ಪ್ರವೀಣ ಡಾರ್ಕ್ ರೂಮಿನ ಹೊರಗೆ ಸುಮ್ಮನೆ ಅಲ್ಲೆಲ್ಲೋ ಮಾತಾಡುವವರಂತೆ ನಿಂತರು.

ಪರೀಕ್ಷೆಗಂತ ಒಳಗೆ ಹೋದರೆ ಕನಿಷ್ಠ ಇಪ್ಪತ್ತು ನಿಮಿಷಗಳ ಕಾಲ ವಿದ್ಯಾರ್ಥಿ ಮತ್ತು ಪ್ರೊಫೆಸರ್ ಮಾತ್ರ ಇರುವ ವ್ಯವಸ್ಥೆ ಇದ್ದುದರಿಂದ ಮಾನಸಿಕ ಸ್ಥೈರ್ಯ ಕೊಡಲು ಇಬ್ಬರು, ಹೊರಗೆ ಜೆಡ್ ಕೆಟಗರಿ ಸೆಕ್ಯೂರಿಟಿ ಕೊಡಲು ಇನ್ನಿಬ್ಬರು. ಅಂತೂ ಇಂತೂ ನನ್ನಿ ಪರೀಕ್ಷೆ ಮುಗಿಯಿತು. ಡಾರ್ಕ್ ರೂಮಿನಿಂದ ಪ್ರೊಫೆಸರ್ರು ಹೊರಗೆ ಬರಲಿಲ್ಲ. ಅಲ್ಲಿಂದಲೇ ನೆಕ್ಸ್ಟ್ ಅಂತ ಕರೆದರು. ನನ್ನಿಯ ಮುಖವನ್ನೇ ಗಮನಿಸುತ್ತಾ ಪ್ರವೀಣ ಹೋದ. ರಶ್ಮಿ ನನ್ನಿಯ ಮುಖವನ್ನು ಎಳೆ ಸಂಜೆಯ ಬಿಸಿಲಿಗೆ ಸರಿಯಾಗಿ ಹಿಡಿದು ನೋಡಿದಳು. ಅಲ್ಲಿಂದಲೇ ಇಂದುಮತಿ ಮತ್ತು ವಿಜಿಗೆ ‘ಆಲ್ ಓಕೆ’ ಸಿಗ್ನಲ್ ಕೊಟ್ಟಳು. ಎಲ್ಲರೂ ನಕ್ಕರು! ಸಂಜೆ ಬಿಯರು, ಮೊಟ್ಟೆ ಬಿರಿಯಾನಿ ಪಾರ್ಟಿ ಕಾಯಂ ಆಯಿತು!

ಸರ್ವಭೂಷಿತೆ ಬೀನಾಳನ್ನು ನೋಡಿ ವಿಜಿ ರೂಮಿಗೆ ವಾಪಾಸು ಬಂದ ಮೇಲೆ ರಣ ತಂತ್ರ ಸಂಪೂರ್ಣಗೊಂಡಿತು. ಫಲಿತಾಂಶ ಎಣೆಸಿದಂತೇ ಆಯಿತು. ನಿರ್ಣಯಗಳು ಹೀಗಿದ್ದವು: ಅಕಸ್ಮಾತ್ ಆ ಪ್ರೊಫೆಸರು ನನ್ನಿಯನ್ನು ಬಲವಂತ ಮಾಡಿದರೆ ಅದರ ಕುರುಹು ಅಥವಾ ಸಾಕ್ಷಿ ಅವರ ಮೇಲೂ ಕಾಣುವಂತಿರಬೇಕು. ಬಲಾತ್ಕರಿಸಿದ ಯಾವ ಕುರುಹೂ ಬಿಡದೇ ಕೆಲಸ ಸಾಧಿಸಿಕೊಳ್ಳುವವರೂ ಇದ್ದಾರೆ. ಹಾಗಿರುವಾಗ ಅತಿ ಸಣ್ಣ ಮೂವ್ ಮೆಂಟ್ ಕೂಡ ಯಾವುದೋ ಸಾಕ್ಷಿಯನ್ನು ಪ್ರೊಫೆಸರರಿಗೆ ತಿಳಿಯದಂತೆ ಒದಗಿಸುವಂತಾಗಬೇಕು.

ಪರೀಕ್ಷೆ ದಿನವೂ ನನ್ನಿ ನಾರ್ಮಲ್ ಆಗಿ ಡ್ರೆಸ್ ಮಾಡಬೇಕು. ಬೇಕೆಂದರೆ ಒಂದು ಪಾಲು ಹೆಚ್ಚೇ ಅಲಂಕಾರ ಮಾಡಿಕೊಳ್ಳಲಿ. ಯಾರಿಗೂ ಈಕೆ ಹೆದರಿದ್ದಾಳೆ ಎನ್ನುವುದು ಗಮನಕ್ಕೆ ಬರಬಾರದು. ಒಳಗೆ ಹೋದ ತಕ್ಷಣ ಹೇಳಬೇಕಾದ ಮಾತುಗಳನ್ನು ಹೇಳಿ, ಶಾಂತಚಿತ್ತದಿಂದ ಫೋಟೊಗಳನ್ನು ಡೆವಲಪ್ ಮಾಡಬೇಕು. ಎಕ್ಸ್ಟರ್ನಲ್ ಎಕ್ಸಾಮಿನರ್ ಕೈಗೆ ಈ ಚಿತ್ರ ಹೋಗಬಹುದು. ಅಲ್ಲಿ ಪಾಸಾಗುವುದೂ ಮುಖ್ಯ. ಕಾಳಿದಾಸ ರೋಡಿನ ಪರಿಚಿತ ಹೋಟೆಲೊಂದರಲ್ಲಿ ಕೂತು ಬಿಯರ್ ಕುಡಿಯುತ್ತಾ ಎಲ್ಲರೂ ಬಹಳ ಗದ್ಗದಿತರಾದರು.

ಒಬ್ಬರನ್ನೊಬ್ಬರು ತಬ್ಬಿ ವಿಶ್ವಾಸ ವ್ಯಕ್ತಪಡಿಸಿ ಮುಂದೆ ಜೀವನದಲ್ಲಿ ಸಿಗುತ್ತೇವೋ ಇಲ್ಲವೋ, ಈಗಿರುವ ಧೈರ್ಯವನ್ನೇ ಹೊತ್ತು ಒಯ್ಯಬೇಕು ಎಂದು ಪ್ರಮಾಣಿಸಿಕೊಂಡರು. ಇದೆಲ್ಲದರ ನಡುವೆ ಭಾವನೆಗಳ ಮಹಾಪೂರವನ್ನು ತಡೆಗಟ್ಟಿದವಳು ನಿರ್ಮಲ. ಅವಳಿಗೆ ಕಣ್ಣು ಕಾಣಿಸುತ್ತಿರಲಿಲ್ಲವಾದ್ದರಿಂದ ವಿವರಿಸಿ ಹೇಳಬೇಕಾಯ್ತು. ‘ಡಾರ್ಕ್ ರೂಮಿನ ಒಳಗೆ ಹೋದ ತಕ್ಷಣ ಕಣ್ಣು ಕತ್ತಲೆ ಬಂತು. ಪ್ರೊಫೆಸರು ಬಾಗಿಲ ಹಿಂದೆ ನಿಂತಿದ್ದರು. ನನ್ನ ತೋಳು ಹಿಡಿದು ಮುಂದಕ್ಕೆ ನಡೆಸಿದರು. ಬಲವಂತ ಮಾಡಲಿಲ್ಲವಾದರೂ ನಾನು ಅಭ್ಯಾಸ ಮಾಡಿಟ್ಟುಕೊಂಡಿದ್ದ ಡೈಲಾಗು ಹೇಳಿದೆ’ ‘ಏನದು?’

‘ಸರ್, ಊರು ಬಿಟ್ಟು ಈ ಡಿಗ್ರಿಗೋಸ್ಕರ ಬಂದಿದೀನಿ. ಇದೇ ಸಿಕ್ಕಲ್ಲ ಅಂತಾದ್ರೆ ನಾನು ಸುಮ್ಮನೆ ಇರಲ್ಲ. ಡಿಗ್ರಿ ಬೇಕು ಅಂತ ನೀವ್ ಹೇಳಿದ್ದೆಲ್ಲ ಮಾಡೋಕೂ ತಯಾರಿಲ್ಲ ನಾನು. ಈಗ ಪರೀಕ್ಷೆಗೂ ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದೀನಿ. ನೀವೇನಾದ್ರೂ ಬಲವಂತ ಮಾಡಿದರೆ ಬಾಗಿಲು ತೆರೆದು ಹೊರಗೆ ಓಡ್ತೀನಿ. ಅಲ್ಲದೆ, ನನಗೆ ಬಲವಂತ ಮಾಡಿದ ಸಾಕ್ಷಿ ನಿಮ್ಮ ಬಟ್ಟೆಯ ಮೇಲೆ ಧಾರಾಳವಾಗಿ ಇರುತ್ತೆ. ನೀವು ಮುಗ್ಧರು ಅಂತ ಹೇಳಿದರೆ ಯಾರೂ ನಂಬಲ್ಲ. ಯೋಚಿಸಿ ಸರ್. ಸರಳವಾಗಿ ಪರೀಕ್ಷೆ ಮುಗಿಸಿಕೊಟ್ಟರೆ ನಿಮಗೂ ಒಳ್ಳೆಯದು’ ‘ಪ್ರೊಫೆಸರ್ ಏನಂದ್ರು?’

‘ಹೆಚ್ಚೇನೂ ಹೇಳಲಿಲ್ಲ. ಫೋಕಸ್ ಆನ್ ಎಕ್ಸಾಮ್ ವರ್ಕ್ ಅಂದರು. ನಾನು ಕೆಲಸ ಮುಗಿಸಿ ಹೊರಗೆ ಬಂದೆ’ ‘ಅದು ಗೊತ್ತಾಯ್ತು. ಅವರು ಬಲವಂತ ಮಾಡಿದ್ದರೆ ಅವರ ಬಟ್ಟೆ ಮೇಲೆ ಸಾಕ್ಷಿ ಇರುತ್ತೆ ಅಂದ್ಯಲ್ಲ ಅದೇನು?’ ‘ಅದಾ? ಕೊಚ್ಚೆ ಕಲರ್ ಲಿಪ್‌ಸ್ಟಿಕ್ಕು. ಸರಿಯಾಗಿ ಹಚ್ಕೊಂಡು ಹೋಗಿದ್ದೆ. ಆತ ನನ್ನ ಹೇಗೆ ಟಚ್ ಮಾಡಿದ್ರೂ ಅವರ ಶರ್ಟ್ ಮೇಲೆ ಕಲೆ ಆಗ್ತಾ ಇತ್ತು. ಅದೂ ಡಾರ್ಕ್ ಕಲರ್ ಬೇರೆ’ ‘ಅವರೂ ಡಾರ್ಕ್ ಕಲರ್ ಶರ್ಟ್ ಹಾಕ್ಕೊಂಬಂದಿದ್ರೆ?’

‘ಅದಕ್ಕೂ ತಯಾರಾಗಿದ್ದೆ. ಹಚ್ಚಿಕೊಂಡಿದ್ದು ಡಾರ್ಕ್ ಕಲರು ಲಿಪ್ ಸ್ಟಿಕ್ಕು. ಅಲ್ಲದೆ ಚಿಣಿಮಿಣಿ ಬೇರೆ ಇತ್ತು. ಯಾವ್ ಶರ್ಟ್ ಮೇಲಾದರೂ ಸರಿಯೇ ಬಣ್ಣ ಕಾಣದಿದ್ರೂ ಚಿಣಿಮಿಣಿ ಕಂಡೇ ಕಾಣುತ್ತೆ. ಮೂರು ಸಾರಿ ಬಟ್ಟೆ ತೊಳೆದರೂ ಹೋಗಲ್ಲ!’ ‘ವಾಹ್! ಯಾರ್ ಕೊಟ್ರು ಈ ಐಡಿಯಾನ್ನ?’ ‘ಮೊನ್ನೆ ಆ ಸಲ್ಮಾನ್ ಖಾನ್ ಸಿನಿಮಾ ನೋಡ್ಕೊಂಡು ಬರುವಾಗ ವಿಜಿಗೆ ಕರಿಷ್ಮಾ ಕಪೂರು ಹಚ್ಚಿಕೊಂಡ ಲಿಪ್‌ಸ್ಟಿಕ್ಕೇ ತಲೇಲಿತ್ತಂತೆ. ಬಟ್ಟೆಗೆ ಹತ್ತಿಕೊಂಡ್ರೆ ಹೋಗಲಿಕ್ಕಿಲ್ಲ ಅಂತ ಯೋಚಿಸುತ್ತಿದ್ದಳಂತೆ. ಅದು ಹೆಂಗೋ ಈ ಕೆಲ್ಸಕ್ಕೆ ಉಪಯೋಗ ಆಯ್ತು.’ ‘ಯಾರ್ ಹತ್ರ ಇತ್ತು ಆ ಥರದ್ ಲಿಪ್‌ಸ್ಟಿಕ್ಕು?’ ‘ಬೀನಾ ಹತ್ರ. ಅವಳೇ ಚೆನ್ನಾಗಿ ಮೆತ್ತಿ ಕಳಿಸಿದ್ಲು’ ‘ಲಿಪ್‌ಸ್ಟಿಕ್ಕಿಗೆ ಹೆದರಿಕೊಂಡ್ರು ಅಂತೀಯಾ?’

‘ಆ ವಿಷಯ ನಂಗೊತ್ತಿಲ್ಲ. ಆತ ಹೆದರಿದ್ದು ನನ್ನ ಧೈರ್ಯಕ್ಕೆ ಅನ್ಸುತ್ತೆ. ಬಿಟ್ರೆ ಮಾನ ಮರ್ಯಾದೆ ಹರಾಜಾಕ್ತಾಳೆ ಅನ್ನಿಸಿರಬೇಕು’ ಸುಭದ್ರೆಯ ಹೊಟ್ಟೆಯಲ್ಲಿದ್ದ ಅಭಿಮನ್ಯು ಕೃಷ್ಣನ ಮಾತುಗಳನ್ನು ಲಾಲಿಸಿ ಚಕ್ರವ್ಯೂಹ ಹೊಕ್ಕುವುದನ್ನು ಕಲಿತ; ಹೊರಬರುವುದು ಗೊತ್ತಾಗಲಿಲ್ಲ ಮಗುವಿಗೆ. ಆದರೆ ಎಷ್ಟೋ ಆಧುನಿಕ ಮಹಿಳೆಯರು ತಮ್ಮ ಸ್ನೇಹಿತೆಯರಿಗೆ, ಸಂಗಾತಿಗಳಿಗೆ, ಮಕ್ಕಳಿಗೆ ದಿನಾ ಒಂದಲ್ಲಾ ಒಂದು ಚಕ್ರವ್ಯೂಹದಿಂದ ಹೊರಬರುವ ದಾರಿಯನ್ನೇ ಕಲಿಸುತ್ತಿರುತ್ತಾರೆ. ಮಹಿಳಾ ದಿನಾಚರಣೆಗೆ ನಮ್ಮ ಹುಡುಗಿಯರೂ ಒಂದು ಜೈ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT