ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

Last Updated 15 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೀಗೊಂದು ಸ್ಥಿತಿಯನ್ನು ಗಮನಿಸೋಣ: ತ್ರಿಪುರಾದಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾವು (ಸಿಪಿಎಂ) ಭಗತ್‍ ಸಿಂಗ್‍ ಪ್ರತಿಮೆಗಳನ್ನು ಸ್ಥಾಪಿಸಿದ್ದರೆ ಏನಾಗುತ್ತಿತ್ತು? ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಸೋತ ಬಳಿಕ ಬಿಜೆಪಿ ಕಾರ್ಯಕರ್ತರು ಈ ಪ್ರತಿಮೆಗಳನ್ನು ಒಡೆದು ಹಾಕುತ್ತಿದ್ದರೇ?

ಸಿಪಿಎಂ ಸದಸ್ಯರೂ ಆಗಿರುವ ಇತಿಹಾಸಕಾರರೊಬ್ಬರ ಜತೆಗೆ ನಾನು ಬೆಂಗಳೂರಿನಲ್ಲಿ ವರ್ಷದ ಹಿಂದೆ ಮಧ್ಯಾಹ್ನದ ಊಟ ಮಾಡಿದ್ದೆ. ಚತುರ ಮಾತುಗಾರರೂ ಆಗಿರುವ ಈ ಅತ್ಯುತ್ತಮ ವಿದ್ವಾಂಸನಿಗೆ ಕ್ರಿಕೆಟ್‍ ಮೇಲೆ ಬಹಳ ಪ್ರೀತಿ. ಹಾಗಾಗಿ ಅವರು ಕಮ್ಯುನಿಸ್ಟ್ ಆಗಿದ್ದರೂ ನನಗೆ ಅವರ ಮೇಲೆ ಪ್ರೀತಿ. ಅವರ ಪಕ್ಷದ ಸಮಾವೇಶಗಳಲ್ಲಿ 19ನೇ ಶತಮಾನದ ಜರ್ಮನಿಯ ಇಬ್ಬರು ಚಿಂತಕರಾದ ಕಾರ್ಲ್ ಮಾರ್ಕ್ಸ್‌ ಮತ್ತು ಫ್ರೆಡರಿಕ್‍ ಎಂಗೆಲ್ಸ್ ಹಾಗೂ 20ನೇ ಶತಮಾನದ ಇಬ್ಬರು ಸರ್ವಾಧಿಕಾರಿಗಳಾದ ವ್ಲಾಡಿಮಿರ್ ಲೆನಿನ್‍ ಮತ್ತು ಜೋಸೆಫ್‍ ಸ್ಟಾಲಿನ್‍ ಭಾವಚಿತ್ರಗಳನ್ನು ಯಾಕೆ ಇರಿಸಿಕೊಳ್ಳಲಾಗುತ್ತದೆ ಎಂದು ನಾನು ಅವರನ್ನು ಕೇಳಿದ್ದೆ.

ಭಾರತೀಯ ಪಕ್ಷವೊಂದಕ್ಕೆ ಕೆಲವರಾದರೂ ಭಾರತೀಯ ಆದರ್ಶ ವ್ಯಕ್ತಿಗಳು ಬೇಕಲ್ಲವೇ? ಕನಿಷ್ಠಪಕ್ಷ ಭಗತ್‍ ಸಿಂಗ್‍ ಚಿತ್ರವನ್ನಾದರೂ ಹಾಕಬಹುದಲ್ಲವೇ?

ಭಗತ್‍ ಸಿಂಗ್‍ ಭಾರತೀಯನೂ ಹೌದು, ಮಾರ್ಕ್ಸ್‌ವಾದಿಯೂ ಹೌದು. ಹಾಗಿದ್ದರೂ ಅಧಿಕೃತ ಎಡಪಕ್ಷಗಳು ಭಗತ್ ಸಿಂಗ್‍ರನ್ನು ಮರೆತಿವೆ. ಹಿಂದುತ್ವವಾದಿಗಳು ಭಗತ್‌ ಸಿಂಗ್‌ ಬಗೆಗಿನ ನೆನಪುಗಳನ್ನು ಸಜೀವಗೊಳಿಸಿ, ಹೊಗಳುತ್ತಿದ್ದಾರೆ. ಇಂತಹುದಕ್ಕೆ ಸಿಪಿಎಂನಲ್ಲಿ ಅವಕಾಶ ಇದೆಯೇ ಎಂದು ನನ್ನ ಇತಿಹಾಸಕಾರ ಗೆಳೆಯರಲ್ಲಿ ನಾನು ಕೇಳಿದೆ. ಈ ಬಗ್ಗೆ ಪಕ್ಷದ ವರಿಷ್ಠರ ಜತೆ ಮಾತನಾಡುವುದಾಗಿ ಅವರು ತಿಳಿಸಿದರು. ಆದರೆ ಈ ವಿಷಯದಲ್ಲಿ ಏನೂ ಆಗಿಲ್ಲ ಎಂದು ಕಾಣುತ್ತದೆ.

ಲೆನಿನ್‍ ಮತ್ತು ಸ್ಟಾಲಿನ್‍ಗೆ ಸಿಪಿಎಂ ಯಾಕೆ ಹೆಚ್ಚು ಗೌರವ ಕೊಡುತ್ತದೆ ಎಂಬುದಕ್ಕೆ ಎರಡು ಕಾರಣಗಳಿವೆ. ಒಂದನೆಯದು ಜಡತ್ವ; ಚಿಕ್ಕ ವಯಸ್ಸಿನಿಂದಲೇ ಇವರನ್ನು ಆರಾಧಿಸುತ್ತಾ ಬಂದದ್ದರಿಂದ ಈಗ ಅದನ್ನು ಬದಲಾಯಿಸುವುದನ್ನು ಯೋಚಿಸುವುದಕ್ಕೂ ಅವರಿಗೆ ಆಗುವುದಿಲ್ಲ. ವೈಷ್ಣವರಾಗಿ ಬೆಳೆದ ಮಕ್ಕಳು ವಿಷ್ಣು ಮತ್ತು ಆತನ ಅವತಾರಗಳನ್ನು ಬಿಟ್ಟು ಬೇರೆ ಯಾವುದರಲ್ಲಿಯೂ ಹುರುಳಿಲ್ಲ ಎಂದು ಭಾವಿಸುವಂತೆ, ಮಾರ್ಕ್ಸ್‌ವಾದಿಗಳು ಕೂಡ ಬಾಲ್ಯದಲ್ಲಿ ಆರಾಧಿಸಿದ ದೇವರುಗಳಿಗೆ, ಪ್ರೌಢರಾದಾಗ ಮತ್ತು ಅರಳುಮರಳು ಸ್ಥಿತಿ ತಲುಪಿದಾಗಲೂ ಅದೇ ನಿಷ್ಠೆ ಹೊಂದಿರುತ್ತಾರೆ.

ಎರಡನೆಯದಾಗಿ, ಸಿಪಿಎಂ ತನ್ನ ಮೂಲವನ್ನು ಗುರುತಿಸಿಕೊಳ್ಳುವುದು ಅವಿಭಜಿತ ಸಿಪಿಐನಲ್ಲಿ (ಕಮ್ಯುನಿಸ್ಟ್ ಪಾರ್ಟಿ ಆಫ್ ‍ಇಂಡಿಯಾ). ಸಿಖ್‍ ಕ್ರಾಂತಿಕಾರಿ ಭಗತ್‍ ಸಿಂಗ್‍ ಸಿಪಿಐನ ಸದಸ್ಯ ಆಗಿರಲಿಲ್ಲ. ಹಾಗಾಗಿಯೇ ಸಿಪಿಎಂನ ಮಹಾಪುರುಷರ ಪಟ್ಟಿಯಲ್ಲಿ ಭಗತ್‍ ಸಿಂಗ್‍ಗೆ ಜಾಗ ಇಲ್ಲ. ಭಗತ್‍ ಸಿಂಗ್‍ ಅವರು ಹಿಂದೂಸ್ಥಾನ್‍ ಸೋಷಿಯಲಿಸ್ಟ್ ರಿಪಬ್ಲಿಕನ್‍ ಅಸೋಸಿಯೇಷನ್‍ಗೆ (ಎಚ್‍ಎಸ್‍ಆರ್‌ಎ) ಸೇರಿದ್ದರು. ಬಾಂಬೆ ಮತ್ತು ಕಲ್ಕತ್ತಾದ ಕಾರ್ಮಿಕರ ನಡುವೆ ಸಿಪಿಐಗೆ ಗಟ್ಟಿ ನೆಲೆ ಇತ್ತು. ಆದರೆ ಈಶಾನ್ಯ ಭಾರತದಲ್ಲಿ ಎಚ್‍ಎಸ್‍ಆರ್‌ಎ ಹೆಚ್ಚು ಸಕ್ರಿಯವಾಗಿತ್ತು. ಹೀಗಾಗಿ, ಭಗತ್‍ ಸಿಂಗ್‍ ಮಾರ್ಕ್ಸ್‌ವಾದಿ ಆಗಿದ್ದರೂ ಅವರು ಅವಿಭಜಿತ ಸಿಪಿಐ ಸದಸ್ಯ ಆಗಿರಲಿಲ್ಲ ಎಂಬುದು ಪಕ್ಷದ ಸಮಾವೇಶಗಳಲ್ಲಿ ಅವರ ಚಿತ್ರವನ್ನು ಸಿಪಿಎಂ ಹಾಕದಿರುವುದಕ್ಕೆ ಕಾರಣ ಆಗಿರಬಹುದು.

ಲೆನಿನ್‍ ವಿದೇಶಿ ಎಂಬುದು ತ್ರಿಪುರಾದಲ್ಲಿದ್ದ ಆತನ ಪ್ರತಿಮೆಗಳ ಬಗ್ಗೆ ಬಿಜೆಪಿ ಹೊಂದಿರುವ ಆಕ್ಷೇಪ. ಲೆನಿನ್‍ ಪ್ರತಿಮೆಗಳ ಜಾಗದಲ್ಲಿ ತ್ರಿಪುರಾದ ಕಮ್ಯುನಿಸ್ಟ್ ನಾಯಕ ನೃಪೇನ್‍ ಚಕ್ರವರ್ತಿ ಪ್ರತಿಮೆಗಳಿದ್ದಿದ್ದರೆ ಅವನ್ನು ಒಡೆದು ಹಾಕುತ್ತಿರಲಿಲ್ಲವೇನೋ ಎಂದು ಬಿಜೆಪಿ ಕಾರ್ಯಕರ್ತನೊಬ್ಬ ಹೇಳಿದ್ದಾಗಿ ‘ಇಂಡಿಯನ್‍ ಎಕ್ಸ್‌ಪ್ರೆಸ್‍’ ಪತ್ರಿಕೆ ವರದಿ ಮಾಡಿದೆ. ಸಮಸ್ಯೆ ಇರುವುದು ಲೆನಿನ್‍ ವಿದೇಶಿ ಎಂಬುದಲ್ಲ, ಬದಲಿಗೆ ಆತನಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಲಿಲ್ಲ. ಕ್ರೂರಿಯಾದ ನಿರಂಕುಶಾಧಿಕಾರಿಯಾಗಿದ್ದ- ಆತ ಮೊದಲಿಗೆ ದೇಶವನ್ನು ತನ್ನ ಪಕ್ಷಕ್ಕೆ ಶರಣಾಗಿಸಿದ; ಬಳಿಕ ಪಕ್ಷವನ್ನು ತನಗೆ ಶರಣಾಗಿಸಿದ. ಶತ್ರುಗಳು ಮತ್ತು ಪ್ರತಿಸ್ಪರ್ಧಿಗಳನ್ನು ಆತ ಕೊಂದ, ಬೌದ್ಧಿಕ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಮೇಲೆ ನಿರ್ಬಂಧ ಹೇರಿದ ಮತ್ತು ಇನ್ನೂ ಹೆಚ್ಚು ಕ್ರೂರವಾದ ಸ್ಟಾಲಿನ್‍ನ ನಿರಂಕುಶ ಆಡಳಿತಕ್ಕೆ ದಾರಿ ಮಾಡಿಕೊಟ್ಟ.

ಬಿಜೆಪಿಯ ಅನ್ಯದ್ವೇಷವನ್ನು ನಾನು ಒಪ್ಪುವುದಿಲ್ಲ. ಬೆಳಕು ಸೂಸುವ ದೀಪ ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅದನ್ನು ಗೌರವಿಸಬೇಕು ಎಂದು ರವೀಂದ್ರನಾಥ ಟ್ಯಾಗೋರರಂತೆ ನಾನೂ ನಂಬಿದವನು. ಮಹಾತ್ಮರಿಗೆ ದೇಶದ ಗಡಿಗಳಿಲ್ಲ. ಉದಾಹರಣೆಗೆ, ನೆಲ್ಸನ್‍ ಮಂಡೇಲಾ, ಮಾರ್ಟಿನ್‍ ಲೂಥರ್ ಕಿಂಗ್‍ ಮತ್ತು ವಾಕ್ಲಾವ್‍ ಹಾವೆಲ್‍ರಂಥವರ ಪುತ್ಥಳಿಗಳನ್ನು ನಮ್ಮ ನಗರಗಳು ಮತ್ತು ಪಟ್ಟಣಗಳಲ್ಲಿ ಸ್ಥಾಪಿಸಿದರೆ ನಾನು ಖುಷಿಪಡುತ್ತೇನೆ. ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ವ್ಯಕ್ತಿ. ಹಾಗಾಗಿ ಸರ್ವಾಧಿಕಾರಿಗಳಿಂದ ದೂರ ಇರಬೇಕು.

ಟ್ವಿಟರ್ ಯುಗದಲ್ಲಿ ಲೆನಿನ್‍ ಇದ್ದಿದ್ದರೆ ಆತ ‘ಸೂಪರ್ ಟ್ರಾಲ್‍’ನ ವಸ್ತುವಾಗಿರುತ್ತಿದ್ದ. ಆತ ಒಬ್ಬ ಪ್ರತೀಕಾರದ ಮನುಷ್ಯ. ಆತನ ಬರಹ ಮತ್ತು ಭಾಷಣಗಳು ನಿಂದನೆಯಿಂದ ಕೂಡಿವೆ. ಆತನ ದ್ವೇಷ ಬೂರ್ಜ್ವಾಗಳಿಗೆ (ಬಂಡವಾಳಶಾಹಿಗಳು) ಮಾತ್ರ ಸೀಮಿತವಾಗಿರಲಿಲ್ಲ; ತನ್ನ ಜತೆ ಭಿನ್ನಾಭಿಪ್ರಾಯ ಇದ್ದ ಸಮಾಜವಾದಿಗಳನ್ನೂ ಆತ ಕ್ರೂರವಾಗಿ ನಡೆಸಿಕೊಂಡಿದ್ದ. ಹಿಂಸಾತ್ಮಕ ಕ್ರಾಂತಿಯನ್ನು ತಿರಸ್ಕರಿಸಿ ಶಾಂತಿಯುತ ಜನತಾಂತ್ರಿಕ ಬದಲಾವಣೆ ಆಗಬೇಕು ಎಂದು ಪ್ರತಿಪಾದಿಸಿದ್ದ ಜರ್ಮನಿಯ ಮಾರ್ಕ್ಸ್‌ವಾದಿ ಎಡ್ವರ್ಡೊ ಬರ್ನ್‍ಸ್ಟೈನ್‍ ಕೂಡ ಲೆನಿನ್‍ ಆಕ್ರೋಶಕ್ಕೆ ತುತ್ತಾದವರಲ್ಲಿ ಒಬ್ಬ.

ಭಾರತದ ಮಾರ್ಕ್ಸ್‌ವಾದಿಗಳಿಗೆ ಲೆನಿನ್‍ಗಿಂತ ಬರ್ನ್‍ಸ್ಟೈನ್‍ನಂತಹವರು ಹೆಚ್ಚು ಉತ್ತಮವಾದ ಆದರ್ಶ ಆಗಬೇಕಿತ್ತು. ಪಶ್ಚಿಮ ಯುರೋಪ್‍ನ ಪ್ರಜಾಪ್ರಭುತ್ವ ದೇಶಗಳಲ್ಲಿ ಸುಧಾರಣಾಪರ ಸಮಾಜವಾದಿಗಳು ಜನರ ಅಭಿವೃದ್ಧಿಯ ಮಾದರಿಗಳನ್ನು ಕಟ್ಟಿ ನಿಲ್ಲಿಸಿದರು. ಆದರೆ  ತ್ಸಾರ್‌ಗಳ (ದೊರೆಗಳು) ನಿರಂಕುಶಾಧಿಕಾರದ ಬದಲಿಗೆ ಅಷ್ಟೇ ದಮನಕಾರಿಯಾದ ಬಾಲ್ಷೆವಿಕ್‍ ನಿರಂಕುಶಾಧಿಕಾರವನ್ನು ಲೆನಿನ್‌ ಸ್ಥಾಪಿಸಿದ. ಹಲವು ದಶಕಗಳಿಂದ ಭಾರತದ ಚುನಾವಣೆಗಳಲ್ಲಿ ಸಿಪಿಎಂ ಭಾಗವಹಿಸುತ್ತಿದೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ನಡೆಸಿದೆ ಎಂಬುದು ಗಮನಾರ್ಹ. ಹಾಗಿದ್ದರೂ ಒಂದೇ ಪಕ್ಷ ವ್ಯವಸ್ಥೆಯ ಲೆನಿನ್‍ ತತ್ವಗಳನ್ನು ಅಧಿಕೃತವಾಗಿ, ಬಹಿರಂಗವಾಗಿ ಅಲ್ಲಗಳೆಯುವ ಕೆಲಸವನ್ನು ಆ ಪಕ್ಷ ಮಾಡಿಲ್ಲ.

ಸರ್ಕಾರವನ್ನು ಸೇರುವುದಾದರೆ ತಾನೇ ಪ್ರಬಲನಾಗಿರಬೇಕು ಅಥವಾ ತನಗೆ ಬೇಕಾದಂತೆ ಸರ್ಕಾರ ನಡೆಯಬೇಕು ಎಂದು ಲೆನಿನ್‍ ಭಾವಿಸಿದ್ದ. ಇತರ ಪಕ್ಷಗಳು ಮತ್ತು ರಾಜಕಾರಣಿಗಳ ಜತೆಗೆ ಸೇರಿ ಕೆಲಸ ಮಾಡುವುದು ಆತನ ಸಿದ್ಧಾಂತಕ್ಕೆ ವಿರುದ್ಧವಾದುದು ಮಾತ್ರವಲ್ಲ, ಅದು ಆತನ ಸ್ವಭಾವದಲ್ಲಿಯೇ ಇರಲಿಲ್ಲ. ಸಿಪಿಎಂ ಎಷ್ಟು ಲೆನಿನ್‍ ನಿಷ್ಠವೆಂದರೆ, 1996ರಲ್ಲಿ ಭಾರತದ ಪ್ರಧಾನಿಯಾಗಲು ಜ್ಯೋತಿ ಬಸು ಅವರಿಗೆ ಆ ಪಕ್ಷದ ಕೇಂದ್ರ ಸಮಿತಿ ಅನುಮತಿಯನ್ನೇ ನೀಡಲಿಲ್ಲ. 2004ರಲ್ಲಿ ಸಿಪಿಎಂ ಮಾಡಿದ್ದು ಇನ್ನೂ ದೊಡ್ಡ ಪ್ರಮಾದ ಎಂದು ಹೇಳಬಹುದು- ಕೇಂದ್ರದ ಯುಪಿಎ ಸರ್ಕಾರವನ್ನು ಸೇರಲು ಸಿಪಿಎಂಗೆ ತಾನು ನಂಬಿದ್ದ ಲೆನಿನ್‍ವಾದವೇ ಅಡ್ಡಿಯಾಯಿತು. 1996ರಲ್ಲಿ ಜ್ಯೋತಿ ಬಸು ಅವರು ಅಲ್ಪಮತದ ಮೈತ್ರಿಕೂಟದ ನೇತೃತ್ವ ವಹಿಸಿಕೊಂಡಿದ್ದರೆ ಅದು ದುರ್ಬಲವಾಗಿಯೇ ಇರುತ್ತಿತ್ತು ಮತ್ತು ವರ್ಷದೊಳಗೆ ಕುಸಿದು ಬೀಳುವ ಸಾಧ್ಯತೆಯೇ ಹೆಚ್ಚಾಗಿತ್ತು. ಆದರೆ, 2004ರಲ್ಲಿ ಎಡಪಕ್ಷಗಳು ಯುಪಿಎ ಸರ್ಕಾರ ಸೇರಿದ್ದರೆ ಆ ಪಕ್ಷಗಳು ಬಹುಮತವಿರುವ ಸುಸ್ಥಿರ ಮೈತ್ರಿಕೂಟದ ಭಾಗವಾಗಿ ಐದು ವರ್ಷಗಳ ಪೂರ್ಣ ಅವಧಿಗೆ ಸರ್ಕಾರ ನಡೆಸಬಹುದಿತ್ತು.

ಇತರ ಪಕ್ಷಗಳ ಜತೆ ಸೇರಿ ಲೆನಿನ್‍ವಾದಿಗಳು ಕೆಲಸ ಮಾಡಬಾರದು ಎಂದು ‘ಮಹಾನ್‍ ದೈವ’ ಲೆನಿನ್‍ ಬಹಳ ಹಿಂದೆಯೇ ಹೇಳಿದ್ದರಿಂದ ಮನಮೋಹನ್‍ ಸಿಂಗ್‍ ಸರ್ಕಾರವನ್ನು ಸಿಪಿಎಂ ಸೇರಲಿಲ್ಲ. ಈ ಪ್ರಮಾದಕ್ಕೆ ತಕ್ಕ ಬೆಲೆಯನ್ನೂ ಆ ಪಕ್ಷ ತೆತ್ತಿದೆ. ಅಷ್ಟೇ ಅಲ್ಲ, ಈ ಪ್ರಮಾದಕ್ಕೆ ಭಾರತದ ಜನರೂ ಬೆಲೆ ತೆರಬೇಕಾಯಿತು. ಪುರಾತನವಾದ ಸಿದ್ಧಾಂತಕ್ಕೆ ಜೋತುಬಿದ್ದರೂ ಭಾರತದ ಕಮ್ಯುನಿಸ್ಟ್ ಪಕ್ಷಗಳ ರಾಜಕಾರಣಿಗಳು ಇತರ ಪಕ್ಷಗಳ ರಾಜಕಾರಣಿಗಳಿಗೆ ಹೋಲಿಸಿದರೆ ಹೆಚ್ಚು ಬುದ್ಧಿವಂತರು ಮತ್ತು ಕಡಿಮೆ ಭ್ರಷ್ಟರು; ಕಮ್ಯುನಿಸ್ಟರಲ್ಲಿ ವಂಶಾಡಳಿತ ಮತ್ತು ಕೋಮುವಾದವೂ ಕಡಿಮೆ. ಸಿಪಿಎಂನ ಅತ್ಯುತ್ತಮ ಸಂಸದರು ಯುಪಿಎ ಸರ್ಕಾರವನ್ನು 2004ರಲ್ಲಿ ಸೇರಿದ್ದರೆ ಅವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಬುಡಕಟ್ಟು ಜನರ ಅಭಿವೃದ‍್ಧಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯಂತಹ ಖಾತೆಗಳನ್ನು ಪಡೆಯಬಹುದಿತ್ತು. ಬಡಜನರ ಜೀವನ ಮಟ್ಟವನ್ನು ಸುಧಾರಿಸಲು ಪೂರ್ಣ ಮನಸ್ಸಿನಿಂದ ಕೆಲಸ ಮಾಡಬಹುದಿತ್ತು. ತಮ್ಮ ಬುದ್ಧಿವಂತಿಕೆ ಮತ್ತು ವಾಗ್ಮಿತೆಯನ್ನು ಸುದ್ದಿವಾಹಿನಿಗಳು ಮತ್ತು ಸಂಸತ್ತಿನಲ್ಲಿ ಒಳ್ಳೆಯ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಿತ್ತು; ಕೇರಳ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳವನ್ನು ದಾಟಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿಯ ಜನರಿಗೂ ತಮ್ಮ ಪಕ್ಷ ಕಾಣಿಸುವಂತೆ ಮಾಡಬಹುದಿತ್ತು. ಇದರ ಜತೆಗೆ ತಮ್ಮ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಿಸಬಹುದಿತ್ತು.

ತ್ರಿಪುರಾದಲ್ಲಿ ಲೆನಿನ್‍ ಪ್ರತಿಮೆಗಳನ್ನು ನೆಲಕ್ಕುರುಳಿಸಿದ ಬಿಜೆಪಿಯ ವಿಜಯೋತ್ಸಾಹಿ ದುರುಳರಿಗೆ ಅಸಡ್ಡೆಗಿಂತ ಹೆಚ್ಚಿನ ಬೆಲೆ ಕೊಡುವ ಅಗತ್ಯ ಇಲ್ಲ. ಆದರೆ, ಆ ಪ್ರತಿಮೆಗಳನ್ನು ಅಲ್ಲಿ ಸ್ಥಾಪಿಸಿದ ಜನರ ಬಗ್ಗೆ ಅನುಕಂಪ ತೋರುತ್ತದೆ ಮತ್ತು ಬೇಸರವೂ ಅನಿಸುತ್ತದೆ. 1920ರ ದಶಕದಲ್ಲಿ ಲಾಹೋರ್‌ನಲ್ಲಿ ಜೀವಿಸಿದ್ದ ಭಗತ್‍ ಸಿಂಗ್‍ಗೆ ರಷ್ಯಾದಲ್ಲಿ ಲೆನಿನ್‍ ಮತ್ತು ಸ್ಟಾಲಿನ್‍ ಸೃಷ್ಟಿಸಿದ ವಿಕೃತಿಗಳು ಮತ್ತು ಭೀತಿಯ ಬಗ್ಗೆ ತಿಳಿದಿರುವುದು ಸಾಧ್ಯವೇ ಇಲ್ಲ. ಆದರೆ, 1930ರ ದಶಕದ ಭೀಕರ ಕ್ಷಾಮ, ಶಿಬಿರಗಳಲ್ಲಿನ ಸಾವು ನೋವುಗಳು ಮತ್ತು ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧದ ಹಿಂಸಾಚಾರಗಳೆಲ್ಲವೂ ಅಚ್ಚುಕಟ್ಟಾಗಿ ದಾಖಲಾಗಿವೆ. ಸೋವಿಯತ್‍ ಒಕ್ಕೂಟದ ಕಮ್ಯುನಿಸ್ಟ್ ಪಕ್ಷವೇ 1956ರಲ್ಲಿ ಲೆನಿನ್‍ನನ್ನು ಖಂಡಿಸಿದೆ. 1989ರಲ್ಲಿ ಬರ್ಲಿನ್‍ ಗೋಡೆ ಉರುಳಿತು; ಒಂದು ಕಾಲದಲ್ಲಿ ಆತ ಆಳಿದ್ದ ದೇಶಗಳೇ ಲೆನಿನ್‍ನನ್ನು ಸಮಗ್ರವಾಗಿ ತಿರಸ್ಕರಿಸಿಬಿಟ್ಟವು. ಆದರೆ, ನಮ್ಮದೇ ದೇಶದ ಕಮ್ಯುನಿಸ್ಟರು ಇಷ್ಟೆಲ್ಲ ದಶಕಗಳಲ್ಲಿ ಏನನ್ನೂ ಮರೆಯಲಿಲ್ಲ; ಅಷ್ಟೇ ಅಲ್ಲ, ಹೊಸದಾಗಿ ಏನನ್ನೂ ಕಲಿಯಲಿಲ್ಲ. ರಷ್ಯಾದ ಈ ಇಬ್ಬರು ನಿರಂಕುಶಾಧಿಕಾರಿಗಳ ಮೇಲಿನ ಗೌರವವನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಗ ತ್ರಿಪುರಾದಲ್ಲಿ ಸಿಪಿಎಂ ಸೋತಿದೆ. ಪಶ್ಚಿಮ ಬಂಗಾಳದಲ್ಲಿಯೂ ಸಿಪಿಎಂ ಸರ್ಕಾರ ಇಲ್ಲ. ಸಿಪಿಎಂನ ಮುಂದಿನ ಸಮಾವೇಶದಲ್ಲಾದರೂ ರಷ್ಯಾದ ಸರ್ವಾಧಿಕಾರಿಯನ್ನು ಹೊರದಬ್ಬಿ ಆ ಸ್ಥಾನದಲ್ಲಿ ಭಗತ್‍ ಸಿಂಗ್‍ ಅಂಥವರನ್ನು ಕೂರಿಸುತ್ತಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT