ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆನೊವೊ ಝೀ 2 ಪ್ಲಸ್ ಶಕ್ತಿಯುತವಾದ ಉತ್ತಮ ಸ್ಮಾರ್ಟ್‌ಫೋನ್‌

Last Updated 30 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಲ್ಯಾಪ್‌ಟಾಪ್‌ಗಳಿಗೆ ಪ್ರಸಿದ್ಧವಾಗಿದ್ದ ಲೆನೊವೊ ಕಂಪೆನಿ ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನೂ ತಯಾರಿಸುತ್ತಿದೆ ಮಾತ್ರವಲ್ಲ ಈ ಕ್ಷೇತ್ರದಲ್ಲಿ ಗಣನೀಯ ಹೆಸರನ್ನೂ ಮಾಡಿದೆ. ಲೆನೊವೊ ಗೂಗಲ್‌ನವರಿಂದ ಮೋಟೊರೊಲ ಫೋನ್ ವಿಭಾಗವನ್ನು ಕೊಂಡುಕೊಂಡಿತ್ತು.

ಈ ಎರಡು ಬ್ರ್ಯಾಂಡ್‌ಗಳು ಜೊತೆ ಸೇರಿದರೆ ಸದ್ಯ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡನೆಯ ಸ್ಥಾನದಲ್ಲಿವೆ. ಲೆನೊವೊ ಕಂಪೆನಿಯ ಒಂದೆರಡು ಫೋನ್‌ಗಳ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಈ ಸಲ ಅದೇ ಕಂಪೆನಿಯ ಉತ್ತಮ ಶಕ್ತಿಶಾಲಿಯಾದ ಫೋನಿನ ವಿಮರ್ಶೆ. ಅದುವೇ ಲೆನೊವೊ ಝೀ 2 ಪ್ಲಸ್ (Lenovo Z2 Plus).

ಗುಣವೈಶಿಷ್ಟ್ಯಗಳು
2.15 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Snapdragon 820), ಗ್ರಾಫಿಕ್ಸ್ ಪ್ರೊಸೆಸರ್ (Adreno 530), 4+64 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲ, ಓಟಿಜಿ ಸವಲತ್ತು ಇದೆ, 5 ಇಂಚು ಗಾತ್ರದ 1920X1080 ಪಿಕ್ಸೆಲ್ ರೆಸೊಲೂಶನ್‌ನ ಬಹುಸ್ಪರ್ಶ ಸಂವೇದಿ ಅಮೋಲೆಡ್ (AMOLED) ಪರದೆ,

ಗೊರಿಲ್ಲ ಗಾಜು, ಎರಡು ನ್ಯಾನೊ ಸಿಮ್, 2ಜಿ/3ಜಿ/4ಜಿ, ವಿಒಎಲ್‌ಟಿಇ (VoLTE), 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ, ಅದಕ್ಕೆ ಎಲ್‌ಇಡಿ ಫ್ಲಾಶ್, 8 ಮೆಗಾಪಿಕ್ಸೆಲ್‌ನ ಸ್ವಂತಿ ಕ್ಯಾಮೆರಾ, ವೈಫೈ, ಬ್ಲೂಟೂತ್, ಜಿಪಿಎಸ್, ಎಕ್ಸೆಲೆರೋಮೀಟರ್, 3500mAh ಶಕ್ತಿಯ, ತೆಗೆಯಲಸಾಧ್ಯವಾದ ಬ್ಯಾಟರಿ, ಬೆರಳಚ್ಚು ಸ್ಕ್ಯಾನರ್, 141.7 x 68.9 x 8.5 ಮಿ.ಮೀ. ಗಾತ್ರ, 149 ಗ್ರಾಂ ತೂಕ, ಆಂಡ್ರಾಯ್ಡ್‌ 6.0.1, ನಿಗದಿತ ಬೆಲೆ ₹19,999. 3+32 ಗಿಗಾಬೈಟ್ ಮಾದರಿಯ ಬೆಲೆ ಸುಮಾರು ₹18,000.

ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಹಾಗೆ ನೋಡಿದರೆ ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳ ರಚನೆ ಮತ್ತು ವಿನ್ಯಾಸಗಳು ಚೆನ್ನಾಗಿಯೇ ಇವೆ.ಇದನ್ನು ಕಡಿಮೆ ಬೆಲೆಯ ಫೋನ್ ಎನ್ನುವಂತಿಲ್ಲ. ಈ ಬೆಲೆಗೆ ಸಾಮಾನ್ಯವಾಗಿ ನಾವು ನಿರೀಕ್ಷಿಸುವುದು ಲೋಹದ ದೇಹ. ಆದರೆ ಈ ಫೋನಿನ ದೇಹ ಫೈಬರ್ ಪ್ಲಾಸ್ಟಿಕ್ಕಿನದು. ಬದಿಗಳು ವಕ್ರವಾಗಿಲ್ಲ. ಹಾಗೆಂದು ಕೈಯಲ್ಲಿ ಹಿಡಿದಾಗ ಕಡಿಮೆ ಬೆಲೆಯ ಭಾವನೆ ಬರುವುದಿಲ್ಲ. ಮೇಲ್ದರ್ಜೆಯ ಫೋನಿನ ಭಾವನೆಯೇ ಬರುತ್ತದೆ. 

ಬಲಭಾಗದಲ್ಲಿ ಮಧ್ಯದಲ್ಲಿ ಆನ್/ಆಫ್ ಸ್ವಿಚ್, ಅದರ ಮೇಲ್ಗಡೆ ವಾಲ್ಯೂಮ್ ಬಟನ್ ಇವೆ. ಬಲಭಾಗದಲ್ಲಿ ಕೆಳಗಡೆ ಸಿಮ್ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ಅದನ್ನು ಹೊರತೆಗೆಯಲು ಪಿನ್ ಬಳಸಿ ಚುಚ್ಚಬೇಕು. ಇದರ ಕವಚ ತೆಗೆಯಲು ಸಾಧ್ಯವಿಲ್ಲ. ಅಂದರೆ ಬ್ಯಾಟರಿ ಬದಲಿಸುವಂತಿಲ್ಲ. ಕೆಳಭಾಗದಲ್ಲಿ ಮಧ್ಯದಲ್ಲಿ ಯುಎಸ್‌ಬಿ-ಸಿ ನಮೂನೆಯ ಕಿಂಡಿ ಇದೆ.

ಅದರ ಪಕ್ಕದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಹಿಂಭಾಗದಲ್ಲಿ ಬಲಗಡೆ ಮೇಲ್ಭಾಗದ ಮೂಲೆಯಲ್ಲಿ ಕ್ಯಾಮೆರಾ ಇದೆ. ಅಂದರೆ ಫೋನನ್ನು ಕ್ಯಾಮೆರಾದಂತೆ ಬಳಸುವಾಗ ಬೆರಳು ಲೆನ್ಸ್ ಅನ್ನು ಮುಚ್ಚದಂತೆ ಎಚ್ಚರವಹಿಸಬೇಕು. ಹಿಂಭಾಗದ ಕವಚ ತುಂಬ ನಯವಾಗಿದೆ. ಒಂದು ಹೆಚ್ಚಿಗೆ ಕವಚವನ್ನು ಅವರೇ ನೀಡಿದ್ದಾರೆ.

ಮುಂಬದಿಯಲ್ಲಿ ಕೆಳಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಅದರ ಸಂವೇದನೆ ಚೆನ್ನಾಗಿದೆ. ಈ ಸ್ಕ್ಯಾನರ್ ಜೊತೆ ಬಟನ್ ಕೂಡ ಇದೆ. ಬಟನ್ ಇತರೆ ಹಲವು ಕೆಲಸಗಳನ್ನೂ ಮಾಡುತ್ತದೆ. ಅವು ಯಾವುವು ಎಂಬುದನ್ನು ನಾವೇ ತೀರ್ಮಾನಿಸಬಹುದು. ಹಲವು ಫೋನ್‌ಗಳಲ್ಲಿರುವಂತೆ ಇದರ ಮುಂಭಾಗದಲ್ಲಿ ಮೂರು ಸಾಫ್ಟ್‌ಬಟನ್‌ಗಳು ಇಲ್ಲ. ಈ ಫೋನಿನ ಗಾತ್ರ 5 ಇಂಚು ಎನ್ನುವುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ತುಂಬ ದೊಡ್ಡ ಫೋನ್ ಬೇಡ ಎನ್ನುವವರಿಗೆ ಇದು ಉತ್ತಮ.

ಈ ಫೋನಿನಲ್ಲಿರುವುದು ಶಕ್ತಿಶಾಲಿಯಾದ ಪ್ರೊಸೆಸರ್. ಜೊತೆಗೆ ಗ್ರಾಫಿಕ್ಸ್‌ಗೆಂದೇ ಇನ್ನೊಂದು ಶಕ್ತಿಶಾಲಿಯಾದ ಪ್ರೊಸೆಸರ್ ಇದೆ. ಸಾಕಷ್ಟು ಮೆಮೊರಿಯೂ ಇದೆ. ಇವೆಲ್ಲ ಸೇರಿ ಇದನ್ನೊಂದು ಶಕ್ತಿಶಾಲಿಯಾದ ಫೋನನ್ನಾಗಿಸಿವೆ. ಅಂದರೆ ತುಂಬ ಶಕ್ತಿಯನ್ನು ಬೇಡುವ ಯಾವುದೇ ಕೆಲಸ ಮಾಡುವುದು ನಿಮ್ಮ ಉದ್ದೇಶವಾಗಿದ್ದಲ್ಲಿ ಈ ಫೋನ್ ನಿಮಗಾಗಿ. ಎಲ್ಲ ಮೇಲ್ದರ್ಜೆಯ ಆಟಗಳನ್ನು ಇದರಲ್ಲಿ ಸರಾಗವಾಗಿ ಆಡಬಹುದು. ಮೂರು ಆಯಾಮದ ಕೆಲಸಗಳನ್ನು ಮಾಡಬಹುದು.

ಇದು ಎಲ್ಲ ನಮೂನೆಯ ವಿಡಿಯೊಗಳನ್ನು ಪ್ಲೇ ಮಾಡುತ್ತದೆ. ಹೈಡೆಫಿನಿಶನ್ ಮತ್ತು 4k ವಿಡಿಯೊಗಳೂ ಪ್ಲೇ ಆಗುತ್ತವೆ. ಎಲ್ಲೂ ಅಡೆತಡೆ ಆಗುವುದಿಲ್ಲ. ಈ ಫೋನಿನ ಆಡಿಯೊ ಚೆನ್ನಾಗಿದೆ. ಆದರೆ ಪೆಟ್ಟಿಗೆಯಲ್ಲಿ ಯಾವುದೇ ಇಯರ್‌ಫೋನ್ ಅಥವಾ ಇಯರ್‌ಬಡ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಇಯರ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸಬಹುದು. ಉತ್ತಮ ಪರದೆ, ಶಕ್ತಿಶಾಲಿಯಾದ ಪ್ರೊಸೆಸರ್, ಉತ್ತಮ ಆಡಿಯೊ –ಇವೆಲ್ಲ ಸೇರಿ ನಿಮಗೆ ಉತ್ತಮ ಸಿನಿಮಾ ವೀಕ್ಷಿಸುವ ಅನುಭವ ನೀಡುತ್ತದೆ. ಇದು ಆಟ ಆಡುವುದಕ್ಕೂ ಅನ್ವಯಿಸುತ್ತದೆ.

13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ ಇದೆ. ಇದರಲ್ಲಿ ಹಲವು ಸೌಲಭ್ಯಗಳಿವೆ. ಆದರೂ ಇತರೆ ಫೋನ್‌ಗಳ ಕ್ಯಾಮೆರಾಗಳಿಗೆ ಹೋಲಿಸಿದರೆ ಇದರ ಕ್ಯಾಮೆರಾ ಕಿರುತಂತ್ರಾಂಶ (ಆ್ಯಪ್) ಸಾಧಾರಣ ಮಟ್ಟದ್ದು. ಇವರು ನೀಡಿದ ಕ್ಯಾಮೆರಾ ಕಿರುತಂತ್ರಾಂಶದ ಬದಲಿಗೆ ಓಪನ್ ಕ್ಯಾಮೆರಾ ಕಿರುತಂತ್ರಾಂಶವನ್ನು ಹಾಕಿಕೊಂಡರೆ ಉತ್ತಮ.

ಆದರೂ ಕ್ಯಾಮೆರಾದ ಯಂತ್ರಾಂಶವು ಮ್ಯಾನುಯಲ್ ಫೋಕಸ್ ಅನ್ನು ಬೆಂಬಲಿಸುತ್ತಿಲ್ಲವಾದುದರಿಂದ ಕೆಲವು ಸೃಜನಶೀಲ ಫೋಟೊಗ್ರಫಿ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಬೆಳಕಿನಲ್ಲಿ ಫೋಟೊಗಳು ತೃಪ್ತಿದಾಯಕವಾಗಿ ಮೂಡಿಬರುತ್ತವೆ. ಕಡಿಮೆ ಬೆಳಕಿನ ಛಾಯಾಗ್ರಹಣ ತೃಪ್ತಿದಾಯಕವಾಗಿಲ್ಲ. ರಾತ್ರಿ ಫೋಟೊಗ್ರಫಿಗೆ ಇದು ಹೇಳಿದ್ದಲ್ಲ. ಇದರ ಬೆಲೆಗೆ ಹೋಲಿಸಿದರೆ ಈ ಫೋನಿನ ಕ್ಯಾಮೆರಾದ ಗುಣಮಟ್ಟ ಖಂಡಿತ ಸಾಲದು.

ಇತ್ತೀಚೆಗೆ ಕಡಿಮೆ ಬೆಲೆಯಲ್ಲಿ, ಅಂದರೆ ಹತ್ತರಿಂದ ಹದಿನೈದು ಸಾವಿರದ ಆಸುಪಾಸಿನಲ್ಲಿ ಹಲವು ಉತ್ತಮ ಫೋನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಆ ನಿಟ್ಟಿನಲ್ಲಿ ಯೋಚಿಸಿದರೆ ಈ ಫೋನಿನ ಬೆಲೆ ಸ್ವಲ್ಪ ಜಾಸ್ತಿಯಾಯಿತು ಎನ್ನಬಹುದು.

***
ವಾರದ ಆ್ಯಪ್
ಪದದ ಆಟ ‘ಬರ್ಫಿ’

ಪದಬಂಧ ಗೊತ್ತು ತಾನೆ? ಅದೇ ಮಾದರಿಯ ಹಲವು ಆಟಗಳಿವೆ. ಕನ್ನಡದಲ್ಲೂ ಇದ್ದರೆ ಒಳ್ಳೆಯದಲ್ಲವೇ? ಈಗ  ಅದಕ್ಕಾಗೇ ‘ಬರ್ಫಿ’ ಎಂಬ ಆಟ ಬಂದಿದೆ. ಇದು ಕನ್ನಡ ಸಹಿತ ಭಾರತದ ಹಲವು ಭಾಷೆಗಳಲ್ಲಿ ಲಭ್ಯವಿದೆ. ನಾಲ್ಕು ಅಕ್ಷರಗಳ ಒಂದು ಪದವಿದೆ. ಅದರ ನಾಲ್ಕು ಅಕ್ಷರಗಳು ಅಡ್ಡಾದಿಡ್ಡಿಯಾಗಿ ಕಂಡುಬರುತ್ತವೆ. ಈ ಅಕ್ಷರಗಳನ್ನು ಸರಿಯಾಗಿ ಜೋಡಿಸಬೇಕು. ಹಾಗೆ ಜೋಡಿಸಿದರೆ ಮುಂದಿನ ಹಂತಕ್ಕೆ ಹೋಗಬಹುದು. ಸರಳವಾದ ಆಟ.

ಭಾಷೆ ಕಲಿಯಲು ಸಹಾಯಕಾರಿ. ಈ ಆಟ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Barfi-Desi Four Letter Game ಎಂದು ಹುಡುಕಬೇಕು ಅಥವಾ bit.ly/gadgetloka255 ಜಾಲತಾಣಕ್ಕೆ ಭೇಟಿ ನೀಡಬೇಕು. ನೀವೇ ಆಡಬಹುದು. ಸಮಯದ ಪರಿಮಿತಿಯಿಟ್ಟುಕೊಂಡು ಆಡಬಹುದು. ಅಂತರಜಾಲದ ಮೂಲಕ ಬೇರೆಯವರ ಜೊತೆ ಆಡುವ ಸೌಲಭ್ಯವೂ ಇದೆ.

***
ಗ್ಯಾಜೆಟ್‌ ಸಲಹೆ
ವಿನಾಯಕ ಅವರ ಪ್ರಶ್ನೆ:
ನನಗೆ ಗಣಕದಲ್ಲಿ ಕೆಲಸ ಮಾಡಲು ಯಾವುದಾದರೂ, ಬಳಕೆಗೆ ಸುಲಭವಾದ ಹಾಗೂ ಉಚಿತವಾದ ಗ್ರಾಫಿಕ್ಸ್ ಎಡಿಟರ್ ಸೂಚಿಸುತ್ತೀರಾ?
ಉ: www.getpaint.net ಜಾಲತಾಣದಿಂದ Paint.net ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದು ಸುಲಭವಾಗಿದೆ.

***
ಗ್ಯಾಜೆಟ್‌ ತರ್ಲೆ

ಮಾರ್ಕ್ ಝುಕರ್‌ಬರ್ಗ್ ಗೊತ್ತು ತಾನೆ? ಅವರು ಫೇಸ್‌ಬುಕ್‌ನ ಒಡೆಯ. ಫೇಸ್‌ಬುಕ್‌ನ ಮೇಲೆ ಇರುವ ಒಂದು ಆರೋಪವೆಂದರೆ ಅದು ಅದರ ಬಳಕೆದಾರರ ಎಲ್ಲ ಖಾಸಗಿ ಮಾಹಿತಿ ಸಂಗ್ರಹಿಸುತ್ತಿದೆ ಎಂದು. ಹಾಗಿದ್ದ ಮೇಲೆ ಅದರ ಯಜಮಾನ ತನ್ನ ಖಾಸಗಿ ಮಾಹಿತಿಯನ್ನು ಇತರರು ಸಂಗ್ರಹಿಸಿದರೆ ತಲೆಕೆಡಿಸಿಕೊಳ್ಳಬಾರದು ಅಲ್ಲವೇ? ಆದರೆ ವಸ್ತುಸ್ಥಿತಿ ಹಾಗಿಲ್ಲ.

ಝುಕರ್‌ಬರ್ಗ್ ಅವರ ಲ್ಯಾಪ್‌ಟಾಪ್‌ನ ಕ್ಯಾಮೆರಾದ ಮೇಲೆ ಟೇಪು ಅಂಟಿಸಲಾಗಿದೆ. ಝುಕರ್‌ಬರ್ಗ್ ಫೇಸ್‌ಬುಕ್‌ನಲ್ಲಿ ಸೇರಿಸಿದ ಫೋಟೊ ಒಂದರಲ್ಲಿ ಇದು ಪತ್ತೆಯಾಗಿದೆ. ಯಾಕೆ ಟೇಪು ಅಂಟಿಸಿದ್ದಾರೆ? ಹ್ಯಾಕರ್‌ಗಳು ಅವರ ಲ್ಯಾಪ್‌ಟಾಪ್‌ಗೆ ಲಗ್ಗೆ ಇಟ್ಟು ಅದರ ಕ್ಯಾಮೆರಾ ಮೂಲಕ ಗೂಢಚರ್ಯೆ ಮಾಡಬಾರದು ಎಂದು!

***
ಗ್ಯಾಜೆಟ್‌ ಸುದ್ದಿ
ಹಳೆಯ ಫ್ಲಾಪಿ ಆಕಾರದ ಪವರ್‌ಬ್ಯಾಂಕ್

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆಯೇ ನೀವು ಗಣಕ ಬಳಸುತ್ತಿದ್ದೀರಾದಲ್ಲಿ ನಿಮಗೆ ಫ್ಲಾಪಿ ಡಿಸ್ಕ್ ಎಂದರೇನು ಎಂದು ತಿಳಿದಿರುತ್ತದೆ ಹಾಗೂ ಅವುಗಳನ್ನು ಬಳಸಿರುತ್ತೀರಿ ಕೂಡ. ಅಂದಮೇಲೆ ನೀವು ಈ ಫ್ಲಾಪಿಗಳ ಅಭಿಮಾನಿ (ಫ್ಯಾನ್) ಕೂಡ ಆಗಿರಬೇಕಲ್ಲ? ಹಾಗಿದ್ದರೆ ನಿಮಗೆ ಫ್ಲಾಪಿ ಇನ್ನೊಮ್ಮೆ ಬಳಸಬೇಕು ಎಂಬ ಆಲೋಚನೆ ಬರುತ್ತಿದೆಯೇ? ಹೌದಾದಲ್ಲಿ ನಿಮಗಾಗಿ ಫ್ಲಾಪಿ ಆಕಾರದ ಪವರ್‌ಬ್ಯಾಂಕ್ ಬಂದಿದೆ.

ನೋಡಲು ಇದು 3.5 ಇಂಚಿನ ಗಾತ್ರದ ಫ್ಲಾಪಿ ಡಿಸ್ಕ್‌ನಂತೆಯೇ ಕಾಣಿಸುತ್ತದೆ. ಇದರಲ್ಲಿ 2,500 mAh ಶಕ್ತಿಯ ಬ್ಯಾಟರಿ ಅಡಕವಾಗಿದೆ. ಇದಕ್ಕೆ ಚಾರ್ಜ್ ಮಾಡಲು ಮೈಕ್ರೊ ಯುಎಸ್‌ಬಿ ಮತ್ತು ಇದರಿಂದ ಬೇರೆ ಗ್ಯಾಜೆಟ್‌ಗಳಿಗೆ ಚಾರ್ಜ್ ಮಾಡಲು ಮಾಮೂಲಿ ಯುಎಸ್‌ಬಿ ಕಿಂಡಿಗಳಿವೆ. ಇದರ ಬೆಲೆಯೆಷ್ಟು, ಯಾವಾಗ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂಬ ಬಗ್ಗೆ ಮಾಹಿತಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT