ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ : ಹಗ್ಗ ಜಗ್ಗಾಟ ಇನ್ನೆಷ್ಟು ದಿನ?

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಪ್ರತಿಷ್ಠೆಗೆ ಬಿದ್ದರೆ ಆಗುವುದು ಇಷ್ಟೇ. ಹಗ್ಗ ಹರಿಯುವುದಿಲ್ಲ, ಕೋಲು ಮುರಿಯುವುದಿಲ್ಲ. ಸುಮ್ಮನೆ ಅತ್ತ ಇತ್ತ ಎಳೆದಾಡುತ್ತಲೇ ಇರಬಹುದು. ಕರ್ನಾಟಕದ ಲೋಕಾಯುಕ್ತರ ನೇಮಕ ಕುರಿತಂತೆ ವಿಧಾನಸೌಧ ಮತ್ತು ರಾಜಭವನದ ನಡುವೆ ನಡೆದಿರುವ ಹಗ್ಗ ಜಗ್ಗಾಟ ಒಣಪ್ರತಿಷ್ಠೆಯಲ್ಲದೆ ಮತ್ತೇನೂ ಅಲ್ಲ.
 
ಎರಡೂ ಅಧಿಕಾರ ಕೇಂದ್ರಗಳು ತಮ್ಮದೇ ಸರಿ ಎಂದು ಹಟ ಹಿಡಿದಿವೆ. ನಡುವೆ ಕೂಸು ಬಡವಾಗುತ್ತಿದೆ. ರಾಜ್ಯದಲ್ಲಿ ಲೋಕಾಯುಕ್ತರು ಇಲ್ಲದೇ ನಾಲ್ಕು ತಿಂಗಳೇ ಕಳೆದು ಹೋಗಿವೆ. ಲೋಕಾಯುಕ್ತರು ಇದ್ದರೂ ಅಷ್ಟೇ ಬಿಟ್ಟರೂ ಅಷ್ಟೆ ಎಂಬ ನಿಲುವಿನಲ್ಲಿ ಇರುವ ರಾಜ್ಯ ಸರ್ಕಾರದ ಕೈಗೆ ರಾಜ್ಯಪಾಲರು ಕೋಲು ಕೊಟ್ಟಿದ್ದಾರೆ.
 
`ನಾವೇನು ಮಾಡೋಣ, ಕಾಯ್ದೆ ಪ್ರಕಾರವೇ ಕಳುಹಿಸಿದ ಹೆಸರನ್ನು ರಾಜ್ಯಪಾಲರು ಒಪ್ಪದಿದ್ದರೆ~ ಎಂದು ಸರ್ಕಾರ ಕೇಳಿದರೆ ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ; ಏಕೆಂದರೆ ಕಾಯ್ದೆ ಸರ್ಕಾರದ ಪರವಾಗಿಯೇ ಇದೆ! 1984ರ ಲೋಕಾಯುಕ್ತ ಕಾಯ್ದೆಯ 3 (2) (ಎ) ಕಲಮಿನ ಪ್ರಕಾರ ಲೋಕಾಯುಕ್ತರ ನೇಮಕ ಆಗುತ್ತದೆ.

ನೇಮಕ ಮಾಡುವುದಕ್ಕಿಂತ ಮುಂಚೆ ಮುಖ್ಯಮಂತ್ರಿಗಳು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ವಿಧಾನ ಮಂಡಲದ ಉಭಯ ಸದನಗಳ ಅಧ್ಯಕ್ಷರು ಹಾಗೂ ಈ ಸದನಗಳ ವಿರೋಧ ಪಕ್ಷಗಳ ನಾಯಕರ ಸಲಹೆ ಕೇಳಬೇಕು. ಕಾಯ್ದೆಯಲ್ಲಿ `ಸಲಹೆ~  ಎಂಬ ಪದವನ್ನು ಬಳಸಲಾಗಿದೆ.

`ಸಮ್ಮತಿ~ ಎಂಬ ಪದದ ಬಳಕೆ ಮಾಡಿಲ್ಲ. ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್. ಆರ್.ಬನ್ನೂರಮಠ ಅವರ ನೇಮಕದ ಶಿಫಾರಸನ್ನು ರಾಜ್ಯಪಾಲರಿಗೆ ಕಳುಹಿಸುವುದಕ್ಕಿಂತ ಮುಂಚೆ ಸರ್ಕಾರ ಈ ಪ್ರಕ್ರಿಯೆಯನ್ನು ಪೂರೈಸಿದೆ.
 
ಈ ನಿರ್ಧಾರ ತೆಗೆದುಕೊಳ್ಳಬೇಕಾದ ಮುಖ್ಯಮಂತ್ರಿಯೂ ಸೇರಿದ ಆರು ಜನರ ತಂಡದಲ್ಲಿ ನಾಲ್ವರು ಬನ್ನೂರಮಠರ ಹೆಸರನ್ನು ಒಪ್ಪಿದ್ದಾರೆ. ಅದರಲ್ಲಿ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳೂ ಇರುವುದು ವಿಶೇಷ.

ಒಂದು ಸಾರಿ ಸಲಹೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪೂರೈಸಿದ  ನಂತರ ಸರ್ಕಾರ ಶಿಫಾರಸು ಮಾಡುವ ಹೆಸರನ್ನು ರಾಜ್ಯಪಾಲರು ಒಪ್ಪಿ ಆದೇಶ ಮಾಡಬೇಕು ಎಂಬ ನಿರ್ಬಂಧವೂ ಕಾಯ್ದೆಯಲ್ಲಿ ಇದೆ.

ಅದರಲ್ಲಿ ರಾಜ್ಯಪಾಲರಿಗೆ ಯಾವುದೇ ಆಯ್ಕೆಯಿಲ್ಲ. ವಿವೇಚನಾಧಿಕಾರವೂ ಇಲ್ಲ.
ಆದರೆ, ಬನ್ನೂರಮಠರ ನೇಮಕದ ವಿಚಾರದಲ್ಲಿ ರಾಜ್ಯಪಾಲರು ಹಟ ಹಿಡಿದಿದ್ದಾರೆ. ಅವರು ನೇಮಕದ ಆದೇಶ ಹೊರಡಿಸಲು ಸಿದ್ಧರಿಲ್ಲ ಎಂಬುದರಲ್ಲಿ ಈಗ ಯಾವ ಅನುಮಾನವೂ ಉಳಿದಿಲ್ಲ.
 
ಹಾಗೆಂದು ಅವರು ಬನ್ನೂರಮಠರ ಹೆಸರನ್ನು ತಿರಸ್ಕರಿಸುತ್ತಲೂ ಇಲ್ಲ. ತಿರಸ್ಕರಿಸಲು ಅವರಿಗೆ ಅಧಿಕಾರವಿಲ್ಲ! ರಾಜ್ಯಪಾಲರು ಬನ್ನೂರಮಠರ ಬಗ್ಗೆ ಕೇಳಿದ ಕೆಲವು ಸ್ಪಷ್ಟನೆಗಳಿಗೆ ಸರ್ಕಾರ ಸಮರ್ಪಕ ಸಮಜಾಯಿಷಿಯನ್ನೂ ನೀಡಿದೆ.

ಆದರೆ, ರಾಜ್ಯಪಾಲರಿಗೆ ಬನ್ನೂರಮಠರ ಜಾಗದಲ್ಲಿ ಇನ್ನೊಬ್ಬರನ್ನು ತರುವ ಉದ್ದೇಶ ಇರುವಂತಿದೆ. ಅವರು ಒಂದು ಹೆಸರನ್ನು ಸರ್ಕಾರಕ್ಕೆ ತಿಳಿಸಿಯೂ ಇದ್ದಾರೆ. ಲೋಕಾಯುಕ್ತರು ಕರ್ನಾಟಕದ ಹೊರಗಿನವರು ಇದ್ದರೆ  ಒಳಿತು ಎಂಬ ಅಭಿಪ್ರಾಯವೂ ಅವರಿಗೆ ಇದ್ದಂತೆ ಇದೆ.
 
ಆದರೆ, ಲೋಕಾಯುಕ್ತ ಕಾಯ್ದೆ ಜಾರಿಯಾದ 1984ರಿಂದ ಇದುವರೆಗೆ ಆಯಾಕಾಲದ ಮುಖ್ಯಮಂತ್ರಿಗಳು ತಮಗೆ ಬೇಕಾದವರನ್ನೇ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ್ದಾರೆ. ಸಾಧ್ಯವಾದರೆ ಅವರು ತಮ್ಮ ಜಾತಿಯವರೇ ಇರಲಿ ಎಂದೂ ನೋಡಿಕೊಂಡಿದ್ದಾರೆ!

ಎಲ್ಲರೂ ನಂಬಿರುವ ಹಾಗೆ ರಾಮಕೃಷ್ಣ ಹೆಗಡೆಯವರು 1984ರಲ್ಲಿ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದರು. ಆದರೆ, ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮೊಟ್ಟ ಮೊದಲು ಲೋಕಾಯುಕ್ತ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದವರು.

1977-78ರಲ್ಲಿ ಅವರು ಸುಗ್ರೀವಾಜ್ಞೆಯ ಮೂಲಕ ಲೋಕಾಯುಕ್ತವನ್ನು ಅಸ್ತಿತ್ವಕ್ಕೆ ತಂದು ಹೊನ್ನಯ್ಯ ಎಂಬ ನಿವೃತ್ತ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರಾಗಿ ನೇಮಿಸಿದ್ದರು. ಇದಾದ ಆರು ತಿಂಗಳ ಒಳಗಾಗಿ ಅರಸು ಅಧಿಕಾರ ಕಳೆದುಕೊಂಡರು.
 
ನಂತರ ಮುಖ್ಯಮಂತ್ರಿಯಾದ ಆರ್.ಗುಂಡುರಾಯರಿಗೆ ಹೊನ್ನಯ್ಯ ಅವರು ಆ ಹುದ್ದೆಯಲ್ಲಿ ಇರುವುದು ಬೇಡವಾಗಿತ್ತು. ಅವರು ಅಧಿಕಾರಿಗಳ ಸಲಹೆ ಕೇಳಿದರು. ಅಧಿಕಾರಿಗಳು, `ಯಾವುದೇ ಸುಗ್ರೀವಾಜ್ಞೆ ಆರು ತಿಂಗಳ ಒಳಗೆ ಸದನದಲ್ಲಿ ಮಸೂದೆಯಾಗಿ ಮಂಡನೆಯಾಗಿ ಕಾಯ್ದೆಯಾಗಬೇಕು, ಸುಮ್ಮನಿದ್ದುಬಿಡಿ~ ಎಂದು ಕಿವಿಯೂದಿದರು.
 
ಗುಂಡುರಾಯರು ಹಾಗೇ ಮಾಡಿದರು. ಲೋಕಾಯುಕ್ತ ವ್ಯವಸ್ಥೆ ತನ್ನಷ್ಟಕ್ಕೆ ತಾನೇ ಅಸ್ತಿತ್ವ ಕಳೆದುಕೊಂಡಿತು. ಗುಂಡುರಾಯರು ಲೋಕಾಯುಕ್ತ ಜಾಗದಲ್ಲಿ ಜಾಗೃತ ಆಯೋಗವನ್ನು ಜಾರಿಗೆ ತಂದರು.

ರಾಮಕೃಷ್ಣ ಹೆಗಡೆಯವರು ಭಾರಿ ಮಹತ್ವಾಕಾಂಕ್ಷೆಯೊಡನೆ ಲೋಕಾಯುಕ್ತ ವ್ಯವಸ್ಥೆಯನ್ನು ಜಾರಿಗೆ ತಂದರೂ ಲೋಕಾಯುಕ್ತರಾಗಿ ತುರ್ತುಸ್ಥಿತಿಯಲ್ಲಿ `ಸಂತ್ರಸ್ತ~ರಾದ ನ್ಯಾಯಮೂರ್ತಿ ಎ.ಡಿ.ಕೋಶಲ್ ಅವರನ್ನು ಲೋಕಾಯುಕ್ತರಾಗಿ ನೇಮಕ ಮಾಡಿದರು. ಆಗಲೂ ವಿಧಾನಮಂಡಲದ ವಿರೋಧ  ಪಕ್ಷದ ನಾಯಕರು ಕೋಶಲ್ ನೇಮಕಕ್ಕೆ ಒಪ್ಪಿರಲಿಲ್ಲ. ಹಾಗೆಂದು ಅವರ ನೇಮಕವನ್ನು ಆಗಿನ ರಾಜ್ಯಪಾಲರು ತಡೆಹಿಡಿದಿರಲಿಲ್ಲ.
 
ಮುಂದೆ ಯಾರ ಕಾಲದಲ್ಲಿ ಯಾರು ಯಾರು ಲೋಕಾಯುಕ್ತರಾಗಿ ನೇಮಕವಾದರು ಎಂಬುದೆಲ್ಲ ಈಗ ಇತಿಹಾಸ. ನ್ಯಾಯಮೂರ್ತಿ ಸಂತೋಷ ಹೆಗ್ಡೆಯವರು ನಿವೃತ್ತರಾಗುವುದಕ್ಕಿಂತ ಮುಂಚೆ ಸರ್ಕಾರದ ವಿರುದ್ಧ ಬಂಡೆದ್ದು ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸುಮಾರು 20 ದಿನಗಳ ಕಾಲ ಅವರನ್ನು ವಾಪಸು ಕರೆಸುವ ಪ್ರಯತ್ನಗಳು ನಡೆದಿದ್ದುವು. ಆದರೆ, ಈ ಮಧ್ಯೆಯೇ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲರನ್ನು ಲೋಕಾಯುಕ್ತರಾಗಿ ನೇಮಿಸಲು ಸಿದ್ಧತೆ ಮಾಡಿಕೊಂಡಿದ್ದರು.
 
ಬಿಜೆಪಿಯಲ್ಲಿಯೇ ಇದ್ದ ಯಡಿಯೂರಪ್ಪ `ವೈರಿ~ಗಳು (ಯಾರು ಎಂದು ಹೇಳಬೇಕಿಲ್ಲ!) ಈ ವಿಷಯವನ್ನು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಗಮನಕ್ಕೆ ತಂದು, ಹೆಗ್ಡೆಯವರ ಮನವೊಲಿಸಿ ಅವರೇ ಮುಂದುವರಿಯುವಂತೆ ಮಾಡಿದರು. ಒಂದು ವೇಳೆ ಹೆಗ್ಡೆಯವರು ರಾಜೀನಾಮೆಯನ್ನು ವಾಪಸು ಪಡೆಯದೇ ಇದ್ದರೆ ಏನಾಗುತ್ತಿತ್ತು ಎಂಬುದು ಈಗ ಊಹೆಯ ಜಗತ್ತು.
 
ಒಂದು ಮಾತಂತೂ ಸತ್ಯ ಆಯಾ ಕಾಲದ ಮುಖ್ಯಮಂತ್ರಿಗಳು ತಮಗೆ ಬೇಕಾದವರನ್ನೇ ಲೋಕಾಯುಕ್ತರಾಗಿ ನೇಮಕ ಮಾಡಿಕೊಂಡಿದ್ದರು. ಯಡಿಯೂರಪ್ಪ ಅವರಿಗೆ ಸಂತೋಷ ಹೆಗ್ಡೆಯವರು ಆ ಹುದ್ದೆಯಲ್ಲಿ ಇರಬಾರದಿತ್ತು ಎಂದು ಈಗ ಅನಿಸುತ್ತಿರಲೂಬಹುದು.

ನ್ಯಾಯಮೂರ್ತಿ ಹೆಗ್ಡೆಯವರು ಕಳೆದ ವರ್ಷದ   ಆಗಸ್ಟ್‌ನಲ್ಲಿ ನಿವೃತ್ತರಾದ ನಂತರ ಯಡಿಯೂರಪ್ಪನವರು ಲೋಕಾಯುಕ್ತರಾಗಿ ನೇಮಕವಾಗಲು ಅರ್ಹರಾದ ಐವರು ಲಿಂಗಾಯತರ ಪಟ್ಟಿಯನ್ನೇ ತಯಾರಿಸಿದ್ದರು. ಅವರ ಪೈಕಿ ಶಿವರಾಜ ಪಾಟೀಲರು ಲೋಕಾಯುಕ್ತರಾಗಿ ನೇಮಕಗೊಂಡಿದ್ದರು ಮತ್ತು ಅವರ ನೇಮಕದ ಆದೇಶವನ್ನು ಇದೇ ರಾಜ್ಯಪಾಲರು ಕೆಲವೇ ಕ್ಷಣಗಳಲ್ಲಿ ಹೊರಡಿಸಿದ್ದರು.
 
ಆದರೆ, ತಮ್ಮ ಮೇಲೆ ಬಂದ ಆರೋಪದ ಹಿನ್ನೆಲೆಯಲ್ಲಿ ಪಾಟೀಲರು ರಾಜೀನಾಮೆ ಕೊಟ್ಟು ಹೊರಟು ಹೋದರು. ಅವರ ಹಿಂದೆಯೇ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಗುರುರಾಜನ್ ಅವರೂ ಕಾರಣ ಕೊಡದೇ ರಾಜೀನಾಮೆ ಕೊಟ್ಟರು.
 
ಶಿವರಾಜ ಪಾಟೀಲರ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗೆ ಈಗ ನ್ಯಾಯಮೂರ್ತಿ ಬನ್ನೂರಮಠರ ಹೆಸರು ಶಿಫಾರಸಾಗಿದೆ ಹಾಗೂ ಅವರೇ ಲೋಕಾಯುಕ್ತರಾಗಬೇಕು ಎಂದು ಸರ್ಕಾರ ಪಟ್ಟು ಹಿಡಿದಿದೆ.
 
ಪಕ್ಷದ ಮೇಲೆ ಯಡಿಯೂರಪ್ಪ ಅವರಿಗೆ ಹಿಡಿತ ಇಲ್ಲದೇ ಇದ್ದರೆ ಬನ್ನೂರಮಠರನ್ನು ಬಿಟ್ಟು ಬೇರೆಯವರ ಹೆಸರನ್ನು ಹಾಲಿ ರಾಜ್ಯ ಸರ್ಕಾರ ಸೂಚಿಸಿಬಿಡಬಹುದಿತ್ತೋ ಏನೋ?
 
ಬನ್ನೂರಮಠರ ಮೇಲೆ ಈಗಿನ ಸರ್ಕಾರಕ್ಕೆ ಅಂಥ  ಪ್ರೀತಿಯೇನೂ ಇದ್ದಂತೆ ಇಲ್ಲ. ಯಡಿಯೂರಪ್ಪ ಸಿಟ್ಟಾದಾರು ಎಂದು ಅವರ ಹೆಸರಿಗೇ ರಾಜ್ಯಪಾಲರ ಅನುಮತಿ ದೊರಕಿಸಲು ಹೆಣಗಾಟ ನಡೆದಂತೆ ಕಾಣುತ್ತದೆ.

ತಮ್ಮ ವಿರುದ್ಧ ರಾಜ್ಯಪಾಲರು ಅನುಮಾನ ಬರುವಂತೆ ಮಾತನಾಡುತ್ತಿರುವುದರಿಂದ ಸ್ವತಃ ಬನ್ನೂರಮಠರೇ ಕಣದಿಂದ ಹಿಂದೆ ಸರಿದುಬಿಡಬೇಕಿತ್ತು ಎಂಬ ಒಂದು ವಾದವೂ ಇದೆ.
 
ಆದರೆ, ಅವರು ಹಾಗೆ ಮಾಡಿದರೆ ರಾಜ್ಯಪಾಲರು ಆಡುವ ಅನುಮಾನದ ಮಾತುಗಳಿಗೆ ಪುಷ್ಟಿ ಸಿಕ್ಕಂತೆ ಆಗುತ್ತದೆ ಎಂಬ ಕಾರಣಕ್ಕಾಗಿಯೇ ಬನ್ನೂರುಮಠರು ದಿವ್ಯಮೌನ ತಾಳಿದ್ದಾರೆ. ಅವರ ಮನಸ್ಸಿನಲ್ಲಿಯೂ ಏನೇನೋ ಲೆಕ್ಕಗಳು ಇರಬಹುದು. ಎಷ್ಟೇ  ಆಗಲಿ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದವರು.

ವಿಪರ್ಯಾಸ ಎಂದರೆ ಅವರು ಕೇರಳದ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕಗೊಂಡಾಗ ಭಾರದ್ವಾಜ್ ಅವರೇ ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದರು, ಅಂದರೆ ಅವರ ಸಮ್ಮತಿ ಇತ್ತು ಎಂದೇ ಅರ್ಥ. ಒಟ್ಟು ಸಂದರ್ಭದ ಸಾರಾಂಶವೇನು ಎಂದರೆ ರಾಜ್ಯ ಸರ್ಕಾರ ಬನ್ನೂರುಮಠರ ಹೆಸರಿಗೆ ಬದಲಿ ಹೆಸರನ್ನು ಸದ್ಯಕ್ಕಂತೂ ಸೂಚಿಸುವುದಿಲ್ಲ.

ರಾಜ್ಯಪಾಲರು ಅವರ ಹೆಸರಿನಲ್ಲಿ ಬಂದ ಶಿಫಾರಸನ್ನು ತಿರಸ್ಕರಿಸಲೂ ಸಾಧ್ಯವಿಲ್ಲ, ಆದರೆ, ಅವರು ನೇಮಕದ ಆದೇಶವನ್ನು ಹೊರಡಿಸುವಂತೆಯೂ ಕಾಣುವುದಿಲ್ಲ. ಅಲ್ಲಿಗೆ ಕರ್ನಾಟಕಕ್ಕೆ ಇನ್ನೊಬ್ಬ ಲೋಕಾಯುಕ್ತರು ಬರುವುದು ಯಾವಾಗ ಎಂಬುದು ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ.

ಯಾವುದೇ  ಸಂಸ್ಥೆಗೆ ಯಾರೂ ಅನಿವಾರ್ಯರಲ್ಲ. ಒಂದು ಸಂಸ್ಥೆಯನ್ನು ಸಕ್ರಿಯಗೊಳಿಸುವವರು ಅಲ್ಲಿ ಬಂದು ಕುಳಿತುಕೊಳ್ಳುವ ವ್ಯಕ್ತಿ ಎಂಬುದನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಕೆಲಸ ಮಾಡಿದ ಟಿ.ಎನ್.ಶೇಷನ್ ಮೊದಲ ಬಾರಿ ತೋರಿಸಿಕೊಟ್ಟರು.
 
ನಂತರ ಬಂದವರು ಅವರ  ದಾರಿಯನ್ನೇ ತುಳಿಯುವುದು ಅನಿವಾರ್ಯವಾಯಿತು. ಕರ್ನಾಟಕದ ಲೋಕಾಯುಕ್ತ ಸಂಸ್ಥೆಗೆ ಈಗಿನ ಹೆಸರು ತಂದವರು ಎನ್.ವೆಂಕಟಾಚಲ ಮತ್ತು ಸಂತೋಷ ಹೆಗ್ಡೆಯವರು.

ಮುಂದೆ ಆ ಹುದ್ದೆಗೆ ಬರುವವರು ಕೂಡ ಈ ಇಬ್ಬರು ತುಳಿದ ಹಾದಿಗಿಂತ ಭಿನ್ನವಾಗಿ ನಡೆದುಕೊಳ್ಳುವುದು ಕಷ್ಟವಾಗಬಹುದು. ಸರ್ಕಾರದ ಅಪೇಕ್ಷೆಗಳು ಏನೇ ಇರಲಿ ಭ್ರಷ್ಟಾಚಾರದ ವಿರುದ್ಧದ ಇಂಥ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂಬುದೇ ಈಗ ಜನರ ಒತ್ತಾಸೆ.

ಆದರೆ, ಹಟಕ್ಕೆ ಬಿದ್ದಿರುವ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ಜನರ ಆಶೋತ್ತರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಯೇ? ಹೌದು ಎನ್ನದೆ ವಿಧಿಯಿಲ್ಲ. ಲೋಕಾಯುಕ್ತ ಕಾಯ್ದೆಯನ್ನು ನೋಡಿದರೆ ಚೆಂಡು ರಾಜ್ಯಪಾಲರ ಅಂಗಳದಲ್ಲಿಯೇ ಇದ್ದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT