ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಪ್‌ಟಾಪ್ ಕೊಳ್ಳುವ ಮುನ್ನ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಂದಿನ ಜೀವನದಲ್ಲಿ ಟೆಲಿವಿಷನ್, ಮೊಬೈಲ್ ಫೋನ್‌ಗಳಂತೆ ಗಣಕವೂ ಒಂದು ಅವಿಭಾಜ್ಯ ಅಂಗವಾಗುತ್ತಿದೆ. ಶಾಲೆ ಕಾಲೇಜುಗಳಲ್ಲಿ ಕಲಿಯುವ ಮಕ್ಕಳಿಗೆ ಗಣಕ ಮತ್ತು ಅಂತರಜಾಲ ಸಂಪರ್ಕ ಬೇಕೇ ಬೇಕು. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಗಣಕ ಬೇಕು. ಅದೇನೋ ಸರಿ. ಆದರೆ ಯಾವುದನ್ನು ಕೊಳ್ಳುವುದು? ಈ ಮಾಲಿಕೆಯಲ್ಲಿ ಈಗಾಗಲೇ ಯಾವ ಸಂದರ್ಭಕ್ಕೆ ಡೆಸ್ಕ್‌ಟಾಪ್ ಗಣಕ, ಯಾವ ಸಂದರ್ಭಕ್ಕೆ ಲ್ಯಾಪ್‌ಟಾಪ್ ಎಂಬುದನ್ನು ಗಮನಿಸಿದ್ದೇವೆ.

ಡೆಸ್ಕ್‌ಟಾಪ್ ಗಣಕ ಕೊಳ್ಳುವುದು ಹೇಗೆ ಎಂದೂ ನೋಡಿ ಆಗಿದೆ. ಈಗ ಲ್ಯಾಪ್‌ಟಾಪ್ ಮತ್ತು ಅದರ ಕುಟುಂಬದ ಕಡೆಗೆ ಕಣ್ಣು ಹಾಯಿಸೋಣ.

ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್ ಎಂಬ ಎರಡು ಪದಗಳನ್ನೂ ಸಮಾನಾರ್ಥವಾಗಿ ಬಳಸಲಾಗುತ್ತಿದೆ. ಇವುಗಳಲ್ಲೂ ಹಲವು ವಿಧಗಳಿವೆ. ಅವುಗಳಲ್ಲಿ ಕೆಲವನ್ನು ಗಮನಿಸೋಣ.

ದೊಡ್ಡ ಗಾತ್ರದ ಲ್ಯಾಪ್‌ಟಾಪ್‌ಗಳು
14 ಇಂಚು ಮತ್ತು ಅದಕ್ಕಿಂತ ದೊಡ್ಡ ಗಾತ್ರದ ಪರದೆ ಇರುವ ಲ್ಯಾಪ್‌ಟಾಪ್‌ಗಳನ್ನು ದೊಡ್ಡ ಗಾತ್ರದವು ಎನ್ನಬಹುದು. ಇವುಗಳಲ್ಲಿ ಹಲವು ಗಾತ್ರದವು ದೊರೆಯುತ್ತವೆ. 14, 15.6, 17 ಇತ್ಯಾದಿ. ಈ ಸಂಖ್ಯೆ ಪರದೆಯ ಕರ್ಣದ ಉದ್ದವನ್ನು ಸೂಚಿಸುತ್ತವೆ. 15.6 ಗಾತ್ರದ ಲ್ಯಾಪ್‌ಟಾಪ್ ಎಂದರೆ ಪರದೆಯ ಎಡ-ಕೆಳಗಿನ ಮೂಲೆಯಿಂದ ಬಲ-ಮೇಲಿನ ಮೂಲೆಗೆ 15.6 ಇಂಚು ಅಳತೆ ಇದೆ ಎಂದಾಗುತ್ತದೆ. ಪರದೆ 4:3 ರ ಅನುಪಾತದಲ್ಲಿದೆಯೋ ಅಥವಾ 16:9 ರ ಅನುಪಾತದಲ್ಲಿದೆಯೋ ಎಂಬುದನ್ನು ಅವಲಂಬಿಸಿ ಪರದೆಯ ಅಗಲ ಮತ್ತು ಎತ್ತರ ತೀರ್ಮಾನವಾಗುತ್ತದೆ. ಪರದೆಯ ರೆಸೊಲ್ಯೂಶನ್ ಬಹಳ ಮುಖ್ಯವಾಗುತ್ತದೆ. ಇದು ಜಾಸ್ತಿ ಇದ್ದಷ್ಟು ಒಳ್ಳೆಯದು. 1024x768 ತುಂಬ ಹಳೆಯ ರೆಸೊಲ್ಯೂಶನ್. ಇದು 4:3 ಅನುಪಾತದಲ್ಲಿದೆ. ಅಗಲ ಪರದೆ ಅಂದರೆ 16:9 ಅನುಪಾತದ ಪರದೆಯ ರೆಸೊಲ್ಯೂಶನ್ ಸಾಮಾನ್ಯವಾಗಿ 1366x768 ಇರುತ್ತದೆ. ಈಗೀಗ 1920x1080 ಅಂದರೆ ಪೂರ್ತಿ ಹೈಡೆಫಿನಿಶನ್ ರೆಸೊಲ್ಯೂಶನ್‌ನ ಪರದೆಗಳೂ ದೊರೆಯುತ್ತಿವೆ. ಇದು ಸಿನಿಮಾ ನೋಡಲು ಉತ್ತಮ.

ಮಧ್ಯಮ ಗಾತ್ರದವು
14ಇಂಚಿಗಿಂತ ಚಿಕ್ಕ ಪರದೆಯ ಲ್ಯಾಪ್‌ಟಾಪ್‌ಗಳನ್ನು ಮಧ್ಯಮ ಗಾತ್ರದವು ಎನ್ನಬಹುದು. ಇವುಗಳಲ್ಲಿ ಗಮನಾರ್ಹವಾದುದು 13ಇಂಚಿನ ಲ್ಯಾಪ್‌ಟಾಪ್‌ಗಳು. ಯಾವಾಗಲೂ ಪ್ರಯಾಣ ಮಾಡುತ್ತಿರುವವರಿಗೆ, ಅದರಲ್ಲೂ ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಇದು ಸೂಕ್ತ. ವಿಮಾನದ ಆಸನಕ್ಕೆ ಲಗತ್ತಿಸಿರುವ, ತೆರೆಯಬಲ್ಲ, ಮಡಚಬಲ್ಲ ಊಟದ ಚಿಕ್ಕ ಮೇಜಿನಲ್ಲಿ ಈ ಲ್ಯಾಪ್‌ಟಾಪ್ ಸಲೀಸಾಗಿ ಕುಳಿತುಕೊಳ್ಳುತ್ತದೆ. ಇವುಗಳಲ್ಲೂ ಎಲ್ಲ ನಮೂನೆಯ ರೆಸೊಲ್ಯೂಶನ್‌ನ ಪರದೆ ಒಳಗೊಂಡ ಲ್ಯಾಪ್‌ಟಾಪ್‌ಗಳು ದೊರೆಯುತ್ತವೆ.

ಅಲ್ಟ್ರಾಬುಕ್‌ಗಳು
ತುಂಬ ತೆಳ್ಳಗಿರುವ ಮತ್ತು ಚಿಕ್ಕ ಪರದೆಯ ಲ್ಯಾಪ್‌ಟಾಪ್‌ಗಳಿಗೆ ಅಲ್ಟ್ರಾಬುಕ್ ಎಂಬ ಹೆಸರಿದೆ. ಇವು 13 ಇಂಚು ಮತ್ತು ಅದಕ್ಕಿಂತ ಕಡಿಮೆ ಗಾತ್ರದ ಪರದೆಯನ್ನು ಹೊಂದಿರುತ್ತವೆ. ಆದರೂ 13 ಇಂಚಿನ ಅಲ್ಟ್ರಾಬುಕ್‌ಗಳು ತುಂಬ ಜನಪ್ರಿಯವಾಗಿವೆ. ಅತಿಯಾಗಿ ಪ್ರಯಾಣಿಸುವವರಿಗೆ ಇದು ಸೂಕ್ತ. ಇವುಗಳ ಒಟ್ಟು ದಪ್ಪ (ಮಡಚಿದಾಗ) ಸುಮಾರು 0.8 ಇಂಚಿಗಿಂತ ಕಡಿಮೆ ಇರುತ್ತದೆ. ಇವು ತುಂಬ ತೆಳ್ಳಗಿರುವುದರಿಂದ ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಸಿ.ಡಿ./ಡಿ.ವಿ.ಡಿ. ಅಥವಾ ಬ್ಲೂರೇ ಪ್ಲೇಯರ್ ಇರುವುದಿಲ್ಲ. ಕೆಲವು ಮಾದರಿಗಳಲ್ಲಿ ಇನ್ನೊಂದು ಮಾನಿಟರ್ ಅಥವಾ ಪ್ರೊಜೆಕ್ಟರ್‌ಗೆ ಜೋಡಿಸಲು ವಿಜಿಎ ಅಡಾಪ್ಟರ್ ಇರುವುದಿಲ್ಲ. ಅದರ ಬದಲಿಗೆ ಎಚ್‌ಡಿಎಂಐ ಕಿಂಡಿ ಮಾತ್ರ ಇರುತ್ತದೆ. ಹಳೆಯ ಪ್ರೊಜೆಕ್ಟರ್‌ಗೆ ಎಚ್‌ಡಿಂಐ ಕೇಬಲ್ ಮೂಲಕ ಜೋಡಿಸಲು ಆಗುವುದಿಲ್ಲ. ಇಂತಹ ಸಂದರ್ಭಗಳಿಗೆಂದೇ ಎಚ್‌ಡಿಎಂಐಯಿಂದ ವಿಜಿಎಗೆ ಪರಿವರ್ತಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅಲ್ಟ್ರಾಬುಕ್‌ಗಳು ತುಂಬ ತೆಳ್ಳಗಿರುವುದರಿಂದ ಅವುಗಳ ಕೆಳಭಾಗದಲ್ಲಿ ಗಾಳಿ ಓಡಾಡಲು ಕಿಂಡಿಗಳು ಇರುವುದಿಲ್ಲ. ಆದುದರಿಂದ ತುಂಬ ಸಮಯ ಬಳಸಿದಾಗ ಅವು ಬಿಸಿಯಾಗುತ್ತವೆ. ಲ್ಯಾಪ್‌ಟಾಪ್ ಎಂಬ ಹೆಸರಿದ್ದರೂ ಅವುಗಳನ್ನು ತುಂಬ ಸಮಯ ತೊಡೆ ಮೇಲೆ ಇಟ್ಟು ಕೆಲಸ ಮಾಡುವುದು ಅಷ್ಟು ಒಳ್ಳೆಯದಲ್ಲ.

ಮೇಲೆ ತಿಳಿಸಿದ ಎಲ್ಲ ನಮೂನೆಗಳ ಮೂಲ ಯಂತ್ರದ ಕಡೆ ಗಮನ ನೀಡಿದರೆ ಸಾಮಾನ್ಯವಾಗಿ ಒಂದೇ ವಿಧದಲ್ಲಿ ಬರುತ್ತವೆ. ಅಂದರೆ ಸಿ.ಪಿ.ಯು., ಮೆಮೊರಿ, ಹಾರ್ಡ್‌ಡಿಸ್ಕ್ ಎಲ್ಲ ಒಂದೇ ರೀತಿಯವಾಗಿರುತ್ತವೆ. ಇವುಗಳ ಬಗ್ಗೆ ಹಿಂದಿನ ಲೇಖನಗಳಲ್ಲಿ ತಿಳಿಸಿ ಆಗಿದೆ.

ನೆಟ್‌ಬುಕ್‌ಗಳು
ಇವು ಅಲ್ಟ್ರಾಬುಕ್‌ಗಳಿಗಿಂತಲೂ ಚಿಕ್ಕದಾಗಿವೆ. 12 ಇಂಚಿಗಿಂತಲೂ ಚಿಕ್ಕ ಗಾತ್ರದವು. ಅಷ್ಟು ಹೇಳಿದರೆ ಇವುಗಳಿಗೂ ಲ್ಯಾಪ್‌ಟಾಪ್‌ಗಳಿಗೂ ವ್ಯತ್ಯಾಸ ತಿಳಿಸಿದಂತಾಗುವುದಿಲ್ಲ. ಇವುಗಳಿಗೂ ಲ್ಯಾಪ್‌ಟಾಪ್‌ಗಳಿಗೂ ಒಂದು ಪ್ರಮುಖ ವ್ಯತ್ಯಾಸ ಇರುವುದು ಇವುಗಳ ಸಿ.ಪಿ.ಯು.ನಲ್ಲಿ. ಇವುಗಳಲ್ಲಿ ಬಳಕೆಯಾಗುವುದು ಕಡಿಮೆ ಶಕ್ತಿಯ ಆಟಂ ಪ್ರೊಸೆಸರ್‌ಗಳು. ಇವುಗಳ ಕಾರ್ಯಕ್ಷಮತೆ ತುಂಬ ಕಡಿಮೆ. ಅಂತರಜಾಲ ವೀಕ್ಷಣೆ, ಇಮೈಲ್, ಕಡತ ತಯಾರಿ ಮತ್ತು ಸಂಪಾದನೆ (ವರ್ಡ್ ಪ್ರೋಸೆಸಿಂಗ್), ಆಫೀಸ್ ಕೆಲಸಗಳು, ಇತ್ಯಾದಿಗಳಿಗೆ ಮಾತ್ರ ಇವುಗಳ ಬಳಕೆ ಸಾಧ್ಯ. ಹೆಚ್ಚು ಪ್ರೊಸೆಸಿಂಗ್ ಶಕ್ತಿ ಬೇಕಾಗಿಬರುವ ಗ್ರಾಫಿಕ್ಸ್, ಪ್ರೋಗ್ರಾಮಿಂಗ್ ಎಲ್ಲ ಈ ನೆಟ್‌ಬುಕ್‌ಗಳಲ್ಲಿ ಅಸಾಧ್ಯ. ಟ್ಯಾಬ್ಲೆಟ್‌ಗಳು ಜನಪ್ರಿಯವಾಗುತ್ತಿದ್ದಂತೆ ನೆಟ್‌ಬುಕ್‌ಗಳು ಮಾರುಕಟ್ಟೆಯಿಂದ ಹಿಂದೆ ಸರಿಯತೊಡಗಿವೆ.

ಟ್ಯಾಬ್ಲೆಟ್ ಗಣಕಗಳು
ನೆಟ್‌ಬುಕ್‌ಗಳನ್ನು ಬಳಸಿ ಮಾಡುವ ಎಲ್ಲ ಕೆಲಸಗಳನ್ನೂ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ಟ್ಯಾಬ್ಲೆಟ್ ಬಳಸಿ ಮಾಡಬಹುದು. ಆದರೆ ಇವುಗಳಿಗೆ ಭೌತಿಕ ಕೀಲಿಮಣೆ ಇರುವುದಿಲ್ಲ. ಪ್ರತ್ಯೇಕವಾಗಿ ಜೋಡಿಸಬಲ್ಲ ಕೀಲಿಮಣೆಗಳು ದೊರೆಯುತ್ತಿವೆ. ಕಾರ್ಯಕ್ಷಮತೆಯಲ್ಲಿ ಇವು ಗಣಕಗಳನ್ನು (ಲ್ಯಾಪ್‌ಟಾಪ್, ಅಲ್ಟ್ರಾಬುಕ್) ಸರಿದೂಗಲಾರವು. ಟ್ಯಾಬ್ಲೆಟ್‌ಗಳು ಎಲ್ಲ ಕೆಲಸಗಳಲ್ಲಿ ಗಣಕಗಳಿಗೆ ಬದಲಿಯಾಗಲು ಸಾಧ್ಯವಿಲ್ಲ.

ಕನ್ವರ್ಟಿಬಲ್‌ಗಳು
ಮೈಕ್ರೋಸಾಫ್ಟ್‌ನವರ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿ 8. ಇದು ಸ್ಪರ್ಶಸಂವೇದಿ ಪರದೆಗಳಿಗೆಂದೇ ಹೇಳಿ ಮಾಡಿಸಿದಂತಿವೆ. ಇವುಗಳ ಪೂರ್ತಿ ಪ್ರಯೋಜನ ಪಡೆಯಬೇಕಾದರೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಸ್ಪರ್ಶಸಂವೇದಿ ಪರದೆ ಇರುವುದು ಅಗತ್ಯ. ಅಂತೆಯೇ ಸ್ಪರ್ಶಸಂವೇದಿ ಪರದೆಯುಳ್ಳ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಆದರೆ ಸ್ಪರ್ಶಸಂವೇದಿ ಪರದೆಯುಳ್ಳ ಲ್ಯಾಪ್‌ಟಾಪ್ ಬಳಸುವುದು ಅಷ್ಟು ಉತ್ತಮ ಅನುಭವ ನೀಡುವುದಿಲ್ಲ. ಯಾಕೆಂದರೆ ಪರದೆ ನಮ್ಮಿಂದ ದೂರ ಇರುತ್ತದೆ. ಸ್ಪರ್ಶಸಂವೇದಿ ಪರದೆ ಏನಿದ್ದರೂ ಟ್ಯಾಬ್ಲೆಟ್ ಮಾದರಿಯ, ಅಂದರೆ ಭೌತಿಕ ಕೀಲಿಮಣೆ ಇಲ್ಲದ, ಗಣಕಗಳಿಗೆ ಹೆಚ್ಚು ಸೂಕ್ತ. ಈ ವಿಷಯವನ್ನು ಗಮನದಲ್ಲಿರಿಸಿಕೊಂಡು ಹೊಸ ನಮೂನೆಯ, ಲ್ಯಾಪ್‌ಟಾಪ್‌ನಿಂದ ಟ್ಯಾಬ್ಲೆಟ್‌ಗೆ ಪರಿವರ್ತಿಸಬಲ್ಲ ಕನ್ವರ್ಟಿಬಲ್ ಗಣಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವುಗಳಿಗೆ ಭೌತಿಕ ಕೀಲಿಮಣೆ, ಸ್ಪರ್ಶಸಂವೇದಿ ಪರದೆ ಎಲ್ಲ ಇವೆ. ಕೀಲಿಮಣೆ ಬಳಸಿ ಲ್ಯಾಪ್‌ಟಾಪ್‌ನಂತೆ ಕೆಲಸ ಮಾಡಬಹುದು. ಕೀಲಿಮಣೆಯನ್ನು ಪರದೆಯ ಹಿಂದೆ ಮಡಚಿ, ಒಳಕ್ಕೆ ಸರಿಸಿದಾಗ ಅದು ಟ್ಯಾಬ್ಲೆಟ್ ಆಗುತ್ತದೆ. ಇವುಗಳ ಗಾತ್ರವೂ ಅಲ್ಟ್ರಾಬುಕ್‌ನಂತೆ ಚಿಕ್ಕದಾಗಿರುತ್ತದೆ. ಅಂತೆಯೇ ಇವುಗಳಲ್ಲಿ ಡಿ.ವಿ.ಡಿ. ಅಥವಾ ಬ್ಲೂರೇ ಪ್ಲೇಯರ್ ಇರುವುದಿಲ್ಲ. ಕೆಲವು ಕನ್ವರ್ಟಿಬಲ್‌ಗಳಲ್ಲಿ ಹಾರ್ಡ್‌ಡಿಸ್ಕ್ ಕೂಡ ಇರುವುದಿಲ್ಲ. ಅದರ ಬದಲಿಗೆ ಎಸ್‌ಎಸ್‌ಡಿ (SSD = solid-state drive)  ಮೆಮೊರಿ ಇರುತ್ತದೆ. ಇವು ಸದ್ಯಕ್ಕೆ 128, 256 ಗಿಗಾಬೈಟ್ ಮೆಮೊರಿಗಳಲ್ಲಿ ಮಾತ್ರ ದೊರೆಯುತ್ತಿವೆ.

ಗ್ಯಾಜೆಟ್ ಸಲಹೆ
ತುಂಬಾ ಜನ ಓದುಗರು ಆಗಾಗ ಕೇಳುವ ಒಂದು ಪ್ರಶ್ನೆ ಮೊಬೈಲ್ ಫೋನ್‌ಗಳಲ್ಲಿ ಕನ್ನಡ ಬಳಕೆಯ ಬಗ್ಗೆ ಇದೆ. ಪ್ರಶ್ನೆ ಸಾಮಾನ್ಯವಾಗಿ ಈ ರೀತಿ ಇರುತ್ತದೆ - ನಾನು ---- ಮಾದರಿಯ ಫೋನ್ ಕೊಂಡಿದ್ದೇನೆ. ಅದರಲ್ಲಿ ಕನ್ನಡ ಬರುವಂತೆ ಮಾಡುವುದು ಹೇಗೆ?. ಈ ಪ್ರಶ್ನೆಯನ್ನು ನೀವು ಕೇಳಬೇಕಾಗಿರುವುದು ಫೋನ್ ತಯಾರಿಸಿದವರಲ್ಲಿಯೇ ವಿನಾ ನನ್ನಲ್ಲಿ ಅಲ್ಲ. ಎಲ್ಲ ಫೋನ್ ಕೊಳ್ಳುವವರೂ ಈ ಪ್ರಶ್ನೆ ಕೇಳಿದರೆ ಕಂಪೆನಿಯವರು ಎಚ್ಚೆತ್ತುಕೊಂಡು ತಮ್ಮ ಫೋನ್‌ಗಳಲ್ಲಿ ಕನ್ನಡವನ್ನು ಅಳವಡಿಸುತ್ತಾರೆ. ಆದುದರಿಂದ ಎಲ್ಲ ಕನ್ನಡಿಗರಲ್ಲಿ ಒಂದು ಕೋರಿಕೆ. ಫೋನ್ ಕೊಳ್ಳುವಾಗ ಅಂಗಡಿಯವನಲ್ಲಿ  ಈ ಫೋನ್‌ನಲ್ಲಿ ಕನ್ನಡ ಬರುತ್ತದೆಯೇ, ಕನ್ನಡದಲ್ಲಿ ಟೈಪ್ ಮಾಡಬಹುದೇ?  ಎಂದು ಕೇಳಿ. ಫೋನ್ ಕೊಂಡ ನಂತರ ಕಂಪೆನಿಯ ಗ್ರಾಹಕ ಸೇವೆಗೆ ಫೋನಾಯಿಸಿ ಹೀಗೆ ಕೇಳಿ - ನಾನು ನಿಮ್ಮ ಕಂಪೆನಿಯ --- ಫೋನ್ ಕೊಂಡಿದ್ದೇನೆ. ಇದರಲ್ಲಿ ಕನ್ನಡ ಓದಲು ಮತ್ತು ಟೈಪ್ ಮಾಡಲು ಏನು ಮಾಡಬೇಕು? 4 ಕೋಟಿ ಮಂದಿ ಕೇಳಿದರೆ ಎಲ್ಲ ತಯಾರಕರೂ ಕನ್ನಡ ಕೊಟ್ಟೇ ಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT