ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆಯ ಕೂಪ ಪೈರಸಿಯ ತಾಪ

Last Updated 26 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಲಾಟರಿ, ಜೂಜಿನಲ್ಲಿ ಹಣ ಕಳೆದುಕೊಂಡವರ ನಂತರದ ಬದುಕು ಘೋರ. ಕೆಲವರು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡರೆ, ಇನ್ನು ಕೆಲವರು ಭಂಡತನವನ್ನು ರೂಢಿಸಿಕೊಳ್ಳುತ್ತಾರೆ. ಹಣ ಗಳಿಸಲು ಇರುವ ವಾಮಮಾರ್ಗಗಳನ್ನೇ ಅಂಥವರು ಹುಡುಕುವುದು. ಎಷ್ಟೋ ಸಲ ಇದು ಪ್ರಕೋಪಕ್ಕೆ ಹೋಗಿ ನೆಂಟರಿಷ್ಟರ ಕೊಲೆಗಳಲ್ಲಿ ಪರ್ಯಾವಸಾನಗೊಂಡಿರುವ ಉದಾಹರಣೆಗಳಿವೆ.

ಜೂಜುಕೋರ ದುರ್ಬಲ ಮನಸ್ಥಿತಿಯ ಜನರನ್ನು ದುರುಪಯೋಗ ಮಾಡಿಕೊಳ್ಳಲೆಂದೇ ವಂಚಕರ ವ್ಯವಸ್ಥೆ ಹುಟ್ಟಿಕೊಂಡಿತು. ಯಾವುದೋ ರಾಜ್ಯದ ಮುಖ್ಯಮಂತ್ರಿಯ ಹೆಸರು ಹಗರಣದಲ್ಲಿ ಕೇಳಿಬಂದು, ಅವರು ಮಹಾ ಭ್ರಷ್ಟರೆಂಬುದು ಸುದ್ದಿಯಾಗುವುದು ಮೊದಲಿನಿಂದಲೂ ಇದೆ. ಅಂಥ ಮುಖ್ಯಮಂತ್ರಿಯ ಹೆಸರಿನಲ್ಲಿ ಕಡಿಮೆ ಬಡ್ಡಿಗೆ ಹಣ ಕೊಡುವ ‘ಕಾಲಾದಂಧೆ’ ಒಂದು ಕಾಲದಲ್ಲಿ ನಡೆಯುತ್ತಿತ್ತು. ಸಾವಿರಕ್ಕೆ ನಾಲ್ಕಾಣೆ, ಎಂಟಾಣೆ ಬಡ್ಡಿಗೆ ಕೋಟಿಗಟ್ಟಲೆ ಸಾಲವನ್ನು ಅವರು ಕೊಡಲು ಸಿದ್ಧ ಎಂಬುದಾಗಿ ನಂಬಿಸುವ ಜಾಲವದು. ನಗರಗಳ ಹೊರವಲಯಗಳಿಗೆ ಅಥವಾ ಬೇರೆ ರಾಜ್ಯಗಳಿಗೆ ಆಕಾಂಕ್ಷಿಗಳನ್ನು ಕರೆಸಿ, ಬಡ್ಡಿಗೆ ಹಣ ಕೊಡುವುದಾಗಿ ವಂಚಕರು ಹೇಳುತ್ತಿದ್ದರು. ಅಲ್ಲಿಗೆ ಹೋದವರಿಗೆ ಹಣ ತೋರಿಸಿ ನಂಬಿಕೆ ಬರುವಂತೆ ಮಾಡುತ್ತಿದ್ದರು. ಕಾಗದ-ಪತ್ರ ವ್ಯವಹಾರ ಮತ್ತಿತರ ಕೆಲಸಕ್ಕೆ ಸರ್ವಿಸ್ ಶುಲ್ಕ ತೆರಬೇಕು ಎಂದು ಮೊದಲೇ ಸಾಲ ಮೊತ್ತದ ಶೇಕಡಾವಾರು ಲೆಕ್ಕಾಚಾರದ ಮೇಲೆ ಗಿರಾಕಿಗಳಿಂದ ಒಂದಿಷ್ಟು ಹಣ ವಸೂಲು ಮಾಡುತ್ತಿದ್ದರು. ಆಮೇಲಿನದ್ದು ಕೊಟ್ಟವನು ಕೋಡಂಗಿ, ಇಸಿದುಕೊಂಡವನು ಈರಭದ್ರ ಎಂಬ ಕಥೆ.

ವಂಚಕರಿಂದ ಟೋಪಿ ಹಾಕಿಸಿಕೊಳ್ಳುವ ಜನರನ್ನು ಗಮನಿಸುತ್ತಿದ್ದ ವಿದೇಶೀಯರು ಕೂಡ ಇಂಥ ದಂಧೆಗೆ ಇಳಿದರು. ಹತ್ತು ಹನ್ನೆರಡು ವರ್ಷಗಳ ಹಿಂದೆ ಶುರುವಾದ ವಿದೇಶೀಯರ ವಂಚನೆ ‘ನೈಜೀರಿಯನ್ ಸ್ಕ್ಯಾಮ್’ ಎಂದೇ ಹೆಸರಾಯಿತು.

‘ನಿಮ್ಮ ಮೊಬೈಲ್ ನಂಬರಿಗೆ 1 ಲಕ್ಷ ಡಾಲರ್ ಬಹುಮಾನ ಬಂದಿದೆ. ಹೆಚ್ಚಿನ ವಿವರಗಳಿಗೆ ಈ ಸಂಖ್ಯೆಗೆ ಕರೆಮಾಡಿ’- ಹೀಗೆ ಮೊಬೈಲ್‌ಗೆ ಬರುವ ಸಂದೇಶಗಳನ್ನು ಕಂಡು ಕುತೂಹಲ ಮೂಡುತ್ತದೆ. ಇಂಥದ್ದೇ ಸಂದೇಶ ಇ-ಮೇಲ್‌ಗಳಿಗೆ ಬರುವುದೂ ಉಂಟು. 1 ಲಕ್ಷ ಡಾಲರ್ ಅಂದರೆ ಸುಮಾರು 50 ಲಕ್ಷ ರೂಪಾಯಿಗೆ ಸಮ. ಅಷ್ಟು ದೊಡ್ಡ ಮೊತ್ತವು ಬಹುಮಾನದ ರೂಪದಲ್ಲಿ ಬರುವುದೆಂದರೆ ತಮಾಷೆಯಾ? ಜನ ಕುತೂಹಲದಿಂದ ಎಸ್‌ಎಂಎಸ್‌ನಲ್ಲೋ, ಇ-ಮೇಲ್‌ನಲ್ಲೋ ಬಂದ ನಂಬರಿಗೆ ಫೋನ್ ಮಾಡುತ್ತಾರೆ. ವಂಚನೆಯ ಜಾಲದವರೇ ಫೋನ್ ಎತ್ತಿಕೊಂಡು ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟವಾಗಿ ಉತ್ತರ ಕೊಡುತ್ತಾ ಹೋಗುತ್ತಾರೆ. ಬಹುಮಾನ ಹೇಗೆ ಬಂತು ಎಂಬುದನ್ನು ವಿವರಿಸಲೆಂದು ಕಥೆ ಕಟ್ಟುತ್ತಾರೆ. ಎರಡು ಮೂರು ಸಲ ಫೋನ್ ಕಟ್ ಮಾಡಿ, ಅವರೇ ಮತ್ತೆ ಮಾಡುತ್ತಾರೆ. ತಾವು ತುಂಬಾ ಪ್ರಾಮಾಣಿಕರು ಎಂದು ನಂಬಿಸುವ ತಂತ್ರವಿದು. ಒಂದಿಷ್ಟು ಮಾತುಕತೆ ನಡೆಸಿ ಗಿರಾಕಿಗಳು ಬುಟ್ಟಿಗೆ ಬೀಳುವಂತೆ ಮಾಡುವ ಇಂಥ ವಂಚಕರಿಗೆ ವಶೀಕರಣ ಮಾಡಿಕೊಳ್ಳುವ ಕಲೆ ಕರಗತವಾಗಿರುತ್ತದೆ. ಮಾತಿನ ಭರಾಟೆಯಲ್ಲಿಯೇ ಒಂದು ಬ್ಯಾಂಕ್ ಅಕೌಂಟ್ ನಂಬರ್ ನೀಡಿ ಅದಕ್ಕೆ ಸರ್ವಿಸ್ ಚಾರ್ಜ್ ತುಂಬುವಂತೆ ಸೂಚಿಸುತ್ತಾರೆ. ಅದು ಕೂಡ ಸಣ್ಣ ಮೊತ್ತವೇನೂ ಆಗಿರುವುದಿಲ್ಲ. ಸರ್ವಿಸ್ ಚಾರ್ಜ್ ತುಂಬಿದ ಮೇಲೆ ಅದು ತಲುಪಿತು ಎಂಬುದನ್ನು ಖಾತರಿ ಪಡಿಸಲು ಮತ್ತೆ ಫೋನ್ ಬರುತ್ತದೆ. ಇಂದು, ನಾಳೆ ಹಣ ಬರುತ್ತದೆಂದು ನಂಬಿಸುತ್ತಾ ಆ ಚಾರ್ಜ್, ಈ ಚಾರ್ಜ್ ಎಂದು ಒಂದಿಷ್ಟು ಹಣವನ್ನು ಕಟ್ಟಿಸಿಕೊಂಡು ಇದ್ದಕ್ಕಿದ್ದಂತೆ ಕೈಕೊಡುವ ಇಂಥ ವಂಚಕರಿಂದ ಮೋಸ ಹೋಗಿರುವವರೆಲ್ಲರೂ ವಿದ್ಯಾವಂತರೇ. ಗೃಹಿಣಿಯರಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುವವರವರೆಗೆ ಅನೇಕರು ಈ ಜಾಲಕ್ಕೆ ಮಿಕಗಳಾಗಿದ್ದಾರೆ. ಇತ್ತೀಚೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಾವು ಈ ಜಾಲದಿಂದ ವಂಚನೆಗೆ ಒಳಗಾಗಿದ್ದಾಗಿ ದೂರು ಕೊಟ್ಟಿದ್ದರೆಂಬುದ ಮಾಧ್ಯಮದಲ್ಲಿ ವರದಿಯಾಗಿತ್ತು.
ವಂಚನೆಯ ಜಗತ್ತಿನಲ್ಲಿ ನೈಜೀರಿಯನ್ನರು ಕುಖ್ಯಾತರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ರೀತಿಯ ವಂಚನೆ ಮಾಡಿದ್ದ ಅವರು ಅಲ್ಲಿ ಕಡಿವಾಣ ಬಿದ್ದಮೇಲೆ ಏಷ್ಯಾ ರಾಷ್ಟ್ರಗಳ ಕಡೆಗೆ ಬಂದರು. ಅವರ ಕಾರ್ಯವೈಖರಿಯ ಬಗ್ಗೆ ನಾನು ವಿವರವಾಗಿ ತಿಳಿದುಕೊಂಡಿದ್ದೆ.

ಹೇಗೋ ಹಣ ಹೊಂದಿಸಿಕೊಂಡು ಬೆಂಗಳೂರಿಗೆ ಬಂದಿಳಿಯುತ್ತಿದ್ದ ನೈಜೀರಿಯನ್ ವಂಚಕ ಕಲಾಸಿಪಾಳ್ಯದಲ್ಲೋ, ಮೆಜೆಸ್ಟಿಕ್‌ನಲ್ಲೋ ದಿನದ ಲೆಕ್ಕದ ಮೇಲೆ ಮಲಗಲು ಹಾಸಿಗೆ ಕೊಡುತ್ತಾರಲ್ಲ; ಅಲ್ಲಿಯೇ ಕಾಲ ಕಳೆಯುತ್ತಿದ್ದದ್ದು. ಅವನಿಗೆ ಪ್ರತಿನಿತ್ಯ ಹೊಟ್ಟೆತುಂಬಿಸಿಕೊಳ್ಳುವುದೇ ಕಷ್ಟವಿತ್ತು. ಜೂಜಿನಿಂದ ಹಣ ಕಳೆದುಕೊಂಡು ಕಂಗಾಲಾದವರನ್ನು, ಬಡ್ಡಿ ಕಟ್ಟಿ ಕಟ್ಟಿ ಸುಸ್ತಾದವರನ್ನು, ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವವರನ್ನು ಸೂಕ್ಷ್ಮವಾಗಿ ಗಮನಿಸಿ ಅಂಥವರ ಮೊಬೈಲ್‌ಗೇ ಸಂದೇಶ ಕಳಿಸುತ್ತಿದ್ದ. ‘ನೈಜೀರಿಯನ್ ಸ್ಕ್ಯಾಮ್’ ಶುರುವಾದ ಬಗೆ ಇದು. ಅವನು ಬೆಂಗಳೂರಿನ ಪಂಚತಾರಾ ಹೋಟೆಲ್‌ಗೆ ಆಸಕ್ತ ಗಿರಾಕಿಗಳನ್ನು ಕರೆಯುತ್ತಿದ್ದ. ಬಾಡಿಗೆ ಹಾಸಿಗೆಯಿಂದ ಮೇಲೆದ್ದು, ಮುಖ ತೊಳೆದು ನೇರವಾಗಿ ಪಾಂಚತಾರಾ ಹೋಟೆಲ್‌ನ ಲಾಂಜ್‌ನಲ್ಲಿ ಕೂರುತ್ತಿದ್ದ. ನೀಗ್ರೋ ತರಹ ಇರುವುದರಿಂದ ಹೋಟೆಲ್‌ನವರಿಗಾಗಲೀ, ಗಿರಾಕಿಗಳಿಗಾಗಲೀ ಅವನ ಮೇಲೆ ಅನುಮಾನ ಬರುವ ಸಂಭವ ತುಂಬಾ ಕಡಿಮೆ. ತಮ್ಮ ಕಂಪೆನಿಯಲ್ಲಿ ಬಹಳ ಹಣವಿದೆ. ಆದರೆ, ಭಯೋತ್ಪಾಕರನ್ನು ತಮ್ಮವರೇ ಕೊಂದಿರುವ ಕಾರಣಕ್ಕೆ ಅದನ್ನು ಚಲಾವಣೆ ಮಾಡಲು ಅಲ್ಲಿ ಅನುಮತಿ ಕೊಡುತ್ತಿಲ್ಲ. ಹಾಗಾಗಿ ಇಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿ ಅವನು ಗಿರಾಕಿಗಳನ್ನು ನಂಬಿಸುತ್ತಿದ್ದ. ಸಾವಿರ ರೂಪಾಯಿಗೆ ಐವತ್ತು ಪೈಸೆಯೋ ಒಂದು ರೂಪಾಯಿಯೋ ಬಡ್ಡಿಯಷ್ಟೆ ಎನ್ನುತ್ತಿದ್ದ. ನೈಜೀರಿಯಾದ ನಂಬರಿಗೆ ಫೋನ್ ಮಾಡಿ ತಾನೂ ಮಾತಾಡಿ, ಎದುರಲ್ಲಿ ಕೂತ ಗಿರಾಕಿಗೂ ಫೋನ್ ಕೊಟ್ಟು ಮಾತಾಡುವಂತೆ ಪುಸಲಾಯಿಸುತ್ತಿದ್ದ. ನಂಬಿಕೆಯ ಬೀಜವನ್ನು ಅವನು ಬಿತ್ತುತ್ತಿದ್ದುದೇ ಹೀಗೆ. ಇಷ್ಟೆಲ್ಲಾ ಮಾತನಾಡಿದ ಮೇಲೆ ಸರ್ವಿಸ್ ಚಾರ್ಜ್ ವಸೂಲು ಮಾಡುವುದು ಕಷ್ಟವೇನೂ ಆಗುತ್ತಿರಲಿಲ್ಲ. ಒಮ್ಮೆ ಸರ್ವಿಸ್ ಚಾರ್ಜ್ ಬ್ಯಾಂಕ್ ಖಾತೆಗೆ ಜಮೆಯಾದದ್ದೇ ಅವನು ಕಣ್ಣಿಗೇ ಬೀಳುತ್ತಿರಲಿಲ್ಲ.

ಇಂಥ ಜಾಲದಲ್ಲಿ ಸಿಲುಕಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡವರು ಇದ್ದಾರೆ. ಪೊಲೀಸ್ ಠಾಣೆಗಳಲ್ಲಿ ಅಸಂಖ್ಯ ದೂರುಗಳೂ ದಾಖಲಾಗಿವೆ. ಅನೇಕರನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳ ಮೇಲೆ 420 ಕೇಸನ್ನು ಹಾಕಬಹುದಷ್ಟೆ. ನ್ಯಾಯಾಲಯಕ್ಕೆ ಹೋಗಿ ಜಾಮೀನು ಪಡೆದು ಹೊರಬರುವುದು ಅವರಿಗೆ ಕಷ್ಟದ ವಿಷಯವೇನೂ ಅಲ್ಲ. ಬೆಂಗಳೂರು ವಂಚಕರ ಸ್ವರ್ಗ ಎನ್ನಿಸಿಕೊಳ್ಳಲು ಕಾನೂನಿನ ಕೈ ಈ ವಿಷಯದಲ್ಲಿ ಅಷ್ಟೊಂದು ಬಿಗಿಯಾಗಿಲ್ಲದಿರುವುದೇ ಕಾರಣ.

ನಮ್ಮ ದೇಶದಲ್ಲಿ ಎಲ್ಲಾ ವಸ್ತುಗಳ ನಕಲಿಗಳೂ ಸಿಗುತ್ತವೆ. ಸ್ಯಾನಿಟರಿ ನ್ಯಾಪ್‌ಕಿನ್ಸ್, ಸೋಪು, ಪೌಡರ್, ಪುಸ್ತಕಗಳು ಹೀಗೆ ಬಗೆಬಗೆಯ ನಕಲಿ ವಸ್ತುಗಳನ್ನು ಪತ್ತೆಮಾಡಿ ಕೇಸುಗಳನ್ನು ನಾವು ದಾಖಲಿಸಿದ್ದೆವು. ಟೇಪ್‌ರೆಕಾರ್ಡರ್ ಬಂದು, ಕ್ಯಾಸೆಟ್‌ಗಳ ಮಾರಾಟ ತೀವ್ರಗೊಂಡ ಕಾಲ ಅದು.. ಸಂಗೀತಾ ಹಾಗೂ ಎಚ್‌ಎಂವಿ ಆಗ ಕ್ಯಾಸೆಟ್‌ಗಳನ್ನು ತಯಾರಿಸುತ್ತಿದ್ದ ಕಂಪೆನಿಗಳು. ಜನಪ್ರಿಯ ಸಿನಿಮಾ ಸಂಗೀತವನ್ನು ಅವು ಜನರಿಗೆ ಒದಗಿಸಿದ್ದವು. ‘ಬಿನಾಕಾ ಗೀತ್ ಮಾಲಾ’ ತರಹದ ಕಾರ್ಯಕ್ರಮಗಳಲ್ಲಿ ಜನ ಕೇಳಿದ ಹಾಡುಗಳು ಕ್ಯಾಸೆಟ್‌ಗಳ ರೂಪದಲ್ಲಿ ದೊರೆಯುವಂತೆ ಮಾಡಿದ್ದೇ ಆ ಕಂಪೆನಿಗಳು. ಅವುಗಳ ನಕಲಿ ಕ್ಯಾಸೆಟ್‌ಗಳು ಮಾರುಕಟ್ಟೆಗೆ ಬರತೊಡಗಿದವು. ಆ ಕ್ಯಾಸೆಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರೇ ಹಣದಾಸೆಗೆ ಈ ದಂಧೆಯಲ್ಲಿ ತೊಡಗಿದ್ದು. ಸಿಂಗಪೂರ್‌ನಿಂದ ಬರುತ್ತಿದ್ದ ನಕಲಿ ಕ್ಯಾಸೆಟ್‌ಗಳಿಗೆ ಅಸಲಿ ಕ್ಯಾಸೆಟ್‌ನ ಹಾಡುಗಳನ್ನು ರೆಕಾರ್ಡ್ ಮಾಡುವುದು, ಹಳೆಯ ಕ್ಯಾಸೆಟ್‌ಗಳ ಹಾಡುಗಳನ್ನು ಅಳಿಸಿ ಹೊಸ ಹಾಡುಗಳನ್ನು ರೆಕಾರ್ಡ್ ಮಾಡುವುದು ಶುರುವಾಯಿತು. ಇವತ್ತು ಚಿತ್ರೋದ್ಯಮ ಪದೇಪದೇ ಎತ್ತುವ ಸೀಡಿ ಪೈರಸಿಯ ಸೊಲ್ಲಿನ ಮೂಲ ಇದೇ.

ಮೊದಮೊದಲು ನಕಲಿ ಕ್ಯಾಸೆಟ್‌ಗಳಿಗೆ ಅಸಲಿ ಕ್ಯಾಸೆಟ್‌ನಂತೆ ಇನ್‌ಲೇ ಕಾರ್ಡ್ ಇರುತ್ತಿರಲಿಲ್ಲ. ಸುಮ್ಮನೆ ಯಾವುದೋ ಬಿಳಿ ಕಾಗದವನ್ನು ಕ್ಯಾಸೆಟ್‌ನ ಒಳಗಿಟ್ಟು, ಅದರ ಮೇಲೆ ಪೆನ್ನಿನಲ್ಲಿ ಬರೆದಿರುತ್ತಿದ್ದರು. ಆದರೆ, ಈ ದಂಧೆ ಜನಪ್ರಿಯವಾದದ್ದೇ ಇನ್‌ಲೇ ಕಾರ್ಡ್ ತಯಾರಿಸುವ ಉದ್ಯಮ ಚುರುಕುಗೊಂಡಿತು. ತಮಿಳುನಾಡಿನ ಶಿವಕಾಶಿಯಲ್ಲಿ ಆಫ್‌ಸೆಟ್ ಪ್ರಿಂಟಿಂಗ್ ಮಷೀನ್‌ಗಳು ಹೆಚ್ಚಾಗಿದ್ದವು. ಹಾಗಾಗಿ ಅಲ್ಲಿ ಇನ್‌ಲೇ ಕಾರ್ಡುಗಳು ಮುದ್ರಿತಗೊಂಡು ಬೆಂಗಳೂರು ಮೊದಲಾದ ನಗರಗಳ ಮಾರುಕಟ್ಟೆಗೆ ಬರುತ್ತಿದ್ದವು. ಅಚ್ಚುಕಟ್ಟಾಗಿ ಇನ್‌ಲೇ ಕಾರ್ಡ್‌ಗಳನ್ನು ಇರಿಸಿ, ಕ್ಯಾಸೆಟ್‌ಗಳನ್ನು ಮಾರಲು ಪ್ರಾರಂಭಿಸಿದ ನಂತರ ಜನರಿಗೆ ಅಸಲಿ ಯಾವುದು, ನಕಲಿ ಯಾವುದು ಎಂಬುದು ಮುಖ್ಯವಾಗಲೇ ಇಲ್ಲ. ಕಡಿಮೆ ಬೆಲೆಗೆ ದೊರೆಯುವ ಕ್ಯಾಸೆಟ್ ಸಿಗುತ್ತಿದೆಯಲ್ಲ; ಅದು ಸಾಕು ಎಂದುಕೊಂಡರು.

ಕ್ಯಾಸೆಟ್ ಪೈರಸಿಯನ್ನು ತಡೆಗಟ್ಟಲು ದಾಳಿ ನಡೆಸಿದ ನನ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ಮೋಹಿನಿ-ಭಸ್ಮಾಸುರ ಕಥೆ ಎಂದೇ ಕರೆಯುತ್ತಿದ್ದರು. ಯಾಕೆಂದರೆ, ಕ್ಯಾಸೆಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರೇ ಈ ದಂಧೆ ಪ್ರಾರಂಭಿಸಿ, ಹಣ ಮಾಡಿ, ತಮ್ಮದೇ ಕ್ಯಾಸೆಟ್ ಕಂಪೆನಿಗಳನ್ನು ಶುರುಮಾಡಿದ್ದರು. ಈಗ ಹೆಸರಾಗಿರುವ ಅನೇಕ ಆಡಿಯೋ ಕಂಪೆನಿಗಳ ಹುಟ್ಟಿನ ಹಿಂದೆ ಪೈರಸಿಯ ಕಥೆಗಳಿವೆ.

ಮುಂದೆ ಸೀಡಿ, ಎಂಪಿ3, ಡಿವಿಡಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. ತಂತ್ರಜ್ಞಾನ ಮುಂದುವರಿದಷ್ಟೂ ಪೈರಸಿ ಅಂಗೈನೆಲ್ಲಿಯಾಯಿತು. ರಾಜಾರೋಷವಾಗಿ ಪೈರಸಿ ಸೀಡಿಗಳು ಬಿಕರಿಯಾಗತೊಡಗಿದವು. ರಕ್ತಬೀಜಾಸುರನ ಸ್ವರೂಪದ ಪೈರಸಿ ಆಡಿಯೋ ಕಂಪೆನಿಗಳಿಗೇ ಈಗ ಸವಾಲೆಸೆದು ನಿಂತಿದೆ.

ಮುಂದಿನ ವಾರ: ನಾವು ಮಾಡಿದ ಪೈರಸಿ ದಾಳಿಗಳು
 
ಶಿವರಾಂ ಅವರ ಮೊಬೈಲ್ ನಂಬರ್     94483-13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT