ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶಪಾರಂಪರ್ಯ ಆಡಳಿತದಲ್ಲಿ ಉಳಿದ ಕೊಳಕು

Last Updated 30 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕ್ರಾಂತಿಕಾರಿಗಳ ಜನಪ್ರಿಯತೆ ಯಾವತ್ತೂ ದೀರ್ಘಕಾಲೀನವಾಗಿರುವಂತಹದ್ದಲ್ಲ. ಅವರ ಸುದೀರ್ಘ ಕಾಲದ ಹೋರಾಟ, ತ್ಯಾಗಗಳೆಲ್ಲವೂ ಅದೇಕೋ ಏನೋ ಜನರ ಸ್ಮೃತಿಪಟಲದಿಂದ ಬೇಗನೇ ಮರೆಯಾಗಿಬಿಡುತ್ತವೆ.

ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿ ಯಶಸ್ವಿಯಾದ ಮಹಾತ್ಮಾ ಗಾಂಧಿಯವರ ನೆನಪಂತೂ ಜನಸಾಮಾನ್ಯರಲ್ಲಿ ಅಚ್ಚಳಿಯದೆ ಉಳಿದಿದೆ. ಭಾರತದ ಕರೆನ್ಸಿ ನೋಟುಗಳಲ್ಲಿ ಜನರು ನಿತ್ಯವೂ ಅವರ ಚಿತ್ರವನ್ನು ನೋಡುತ್ತಾರಲ್ಲ...! ಇದೇ ರೀತಿ ಮಹಮದಾಲಿ ಜಿನ್ನಾ ಮತ್ತು ಷೇಕ್ ಮುಜಿಬುರ್ ರೆಹಮಾನ್ ಅವರನ್ನು ಅವರ ದೇಶಗಳಲ್ಲಿ ಕರೆನ್ಸಿ ನೋಟುಗಳ ಮೇಲೆ ನಿತ್ಯವೂ ಜನರು ನೋಡುತ್ತಲೇ ಇರುತ್ತಾರೆ.

ಆದರೆ 1977ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಬಿಗಿಹಿಡಿತದಿಂದ ದೇಶದ ಪ್ರಜಾಸತ್ತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಯಪ್ರಕಾಶ ನಾರಾಯಣರು ಸಂಘಟಿಸಿದ್ದ ಕ್ರಾಂತಿಯನ್ನು ಲಘುವಾಗಿ ಪರಿಗಣಿಸುವಂತಹದ್ದೇನಲ್ಲ. ಆದರೆ ಜಯಪ್ರಕಾಶರು ಗಾಂಧಿಯ ರೀತಿಯಲ್ಲಿ ನಮ್ಮ ನಡುವೆ ಉಳಿದಿಲ್ಲ.
 
ಜಯಪ್ರಕಾಶರ ತವರು ಬಿಹಾರದಲ್ಲಿಯೇ ಅವರನ್ನು ಜನ ಮರೆತ್ತಿದ್ದಾರೆ ಎಂಬುದು ಈಚೆಗೆ ನಾನು ಪಟ್ನಾಕ್ಕೆ ಭೇಟಿ ಕೊಟ್ಟಿದ್ದಾಗ ಅರಿತುಕೊಂಡೆ. ನಾನು ಕಳೆದ ಅಕ್ಟೋಬರ್ 11ರಂದು ಆ ರಾಜ್ಯಕ್ಕೆ ಭೇಟಿ ನೀಡಿದ್ದೆ. ಕಾಕತಾಳೀಯವರೆಂದರೆ ಅದೇ ದಿನ ಜಯಪ್ರಕಾಶರ ಹುಟ್ಟುಹಬ್ಬ ಕೂಡಾ. ಅಂದು ಅಲ್ಲಿನ ಬಹುತೇಕ ಎಲ್ಲಾ ಪತ್ರಿಕೆಗಳ ಮೇಲೆ ಕಣ್ಣಾಡಿಸಿದ್ದೆ. ಯಾವುದರಲ್ಲಿಯೂ ಜಯಪ್ರಕಾಶರ ಬಗ್ಗೆ ಒಂದು ವಾಕ್ಯವೂ ಇರಲಿಲ್ಲ, ಅವರ ಫೋಟೊ ಎಲ್ಲಿಯೂ ಕಣ್ಣಿಗೆ ಬೀಳಲಿಲ್ಲ.

ಜಯಪ್ರಕಾಶರು ಬದುಕಿದ್ದಾಗ ಅವರ ನಿಷ್ಠಾವಂತ ಅನುಯಾಯಿಯಾಗಿದ್ದ ನಿತೀಶ್ ಕುಮಾರ್ ಅವರೇ ಇವತ್ತು ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ. ಅವರೂ ಈ ಮಹತ್ವದ ದಿನವನ್ನು ನೆನಪಿಸಿಕೊಂಡಂತಿರಲಿಲ್ಲ.
 
ಜಯಪ್ರಕಾಶರು ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದು, ತುರ್ತುಪರಿಸ್ಥಿತಿಯಲ್ಲಿ ಜನಾಂದೋಲನ ಸಂಘಟಿಸಿದ್ದು, ಕೇಂದ್ರದಲ್ಲಿ ಕಾಂಗ್ರೇಸ್ಸೇತರ ಪಕ್ಷಗಳ ಧ್ರುವೀಕರಣಕ್ಕೆ ಕಾರಣೀಭೂತರಾಗಿದ್ದನ್ನು ಯಾರೂ ನೆನಪಿಸಿಕೊಂಡಿರಲಿಲ್ಲ. ಅದಿರಲಿ, ಅವರ ತವರು ರಾಜ್ಯವಾದ ಬಿಹಾರಕ್ಕೆ ನೀಡಿದ ಕೊಡುಗೆಯನ್ನು ಕೂಡಾ ಅಂದು ಯಾರೂ ಪಟ್ನಾದಲ್ಲಿ ನೆನಪಿಸಿಕೊಂಡಿರಲಿಲ್ಲ.

ಪಟ್ನಾದಲ್ಲಿರುವ ವಿಮಾನ ನಿಲ್ದಾಣಕ್ಕೆ ಬಹಳ ಹಿಂದೆಯೇ ಜಯಪ್ರಕಾಶರ ಹೆಸರಿಡಲಾಗಿದೆ, ನಿಜ. ಆದರೆ ಅವರ ಹೆಸರು ಬರೆಯುವಾಗ ಬಳಸುತ್ತಿದ್ದ ಇಂಗ್ಲಿಷ್ ಅಕ್ಷರಗಳಿಗೆ ಸಂಬಂಧಿಸಿದ ತಪ್ಪನ್ನು ಇನ್ನೂ ತಿದ್ದಿಲ್ಲ. ಅದು ಇವತ್ತಿಗೂ ಅದೇ ರೀತಿ ಉಳಿದುಕೊಂಡಿದೆ.

ಕದಮ್‌ಕ್ವಾನ್ ಪ್ರದೇಶದಲ್ಲಿರುವ ಜಯಪ್ರಕಾಶರ ನಿವಾಸವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆ ಪ್ರದೇಶವಂತೂ ಕಿಷ್ಕಿಂದೆಯಂತಿದೆ. ಅಲ್ಲಿಯೇ ಇರುವ ಜಯಪ್ರಕಾಶರ ಪ್ರತಿಮೆಯೊಂದಕ್ಕೆ ಹೂಹಾರ ಹಾಕಿ ಬರಲು ಪಡಿಪಾಟಲು ಪಡುವಂತಾಗಿತ್ತು. ಜಯಪ್ರಕಾಶರ ನಿವಾಸದ ಒಂದು ಭಾಗವನ್ನು ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಡಿಸಲಾಗಿದೆ.

ಅವರು ಅಧ್ಯಯನ ನಡೆಸುತ್ತಿದ್ದ ಕೊಠಡಿ, ಅವರು ಮಲಗುತ್ತಿದ್ದ ಕೊಠಡಿಗಳನ್ನು ಹಾಗೆಯೇ ಉಳಿಸಲಾಗಿದೆ. ಇಂತಹ ಕಟ್ಟಡದ ಮೇಲೆಯೂ ಕೆಲವು ಕಟ್ಟಡ ನಿರ್ಮಾಣದ ಗುತ್ತಿಗೆದಾರರ ಕಣ್ಣು ಬಿದ್ದಿದೆ ಎಂದು ಗೊತ್ತಾದಾಗ ನನಗೆ ಆತಂಕ ಉಂಟಾಯಿತು.

ಈ ದೇಶದಲ್ಲಿ ಪ್ರಜಾಪ್ರಭುತ್ವ ಹಳಿ ತಪ್ಪುತ್ತಿದೆ ಎಂದು ಗೊತ್ತಾದಾಗ ದೇಶದಾದ್ಯಂತ ಸಂಚರಿಸಿ, ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಜನಸಂಘಟನಾ ಕೈಂಕರ್ಯದಲ್ಲಿ ತೊಡಗಿದ್ದ ಜಯಪ್ರಕಾಶರು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಮತ್ತೆ ಹಳಿಯ ಮೇಲೆ ತಂದು ಸರಿದಿಕ್ಕಿನಲ್ಲಿ ಕಳುಹಿಸಿದವರು.

1977ರಲ್ಲಿ ನಡೆದಿದ್ದ ಮಹಾಚುನಾವಣೆಯಲ್ಲಿ ಇಂದಿರಾಗಾಂಧಿಯವರ ಸೋಲಿಗೆ ಕಾರಣರಾಗಿದ್ದರು. ತುರ್ತುಪರಿಸ್ಥಿತಿಯ ವೇಳೆ ಈ ನಾಡಿನ ಸಂವಿಧಾನಕ್ಕೆ ಬಡಿದಿದ್ದ ಗ್ರಹಣ ಬಿಡಿಸುವಲ್ಲಿ ಯಶಸ್ವಿಯಾದರು. ಮಾಧ್ಯಮ ಸ್ವಾತಂತ್ರ್ಯದ ಮೇಲಿದ್ದ ತೂಗುಕತ್ತಿಯನ್ನು ಕಿತ್ತೆಸೆದರು.

ನಾನು ಪಟ್ನಾದಿಂದ ದೆಹಲಿಗೆ ಮರಳಿದಾಗ ಇಲ್ಲಿ ರಾಜಕಾರಣದ ಚಾರಿತ್ರ್ಯಹೀನ ಘಟನೆಯೊಂದು ಕಳವಳ ಮೂಡಿಸುವಂತಿತ್ತು. ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಮೇಲಿರುವ ಆರೋಪಗಳೆಲ್ಲಾ ಸುಳ್ಳು ಎಂದು ಕೇಂದ್ರ ಸರ್ಕಾರವು ವಕಾಲತ್ತು ನಡೆಸಿತ್ತು.

ವಾದ್ರಾ ನಡೆಸಿರುವ ವಹಿವಾಟುಗಳಲ್ಲಿ ಅವ್ಯವಹಾರ ಇರುವುದು ಅವರು ನೋಂದಣಾಧಿಕಾರಿಗಳಿಗೆ ನೀಡಿದ್ದ ಲೆಕ್ಕಪತ್ರಗಳ ಮೂಲಕವೇ ಎದ್ದುಕಾಣುತಿತ್ತು. ರಿಯಲ್ ಎಸ್ಟೇಟ್ ಕಂಪೆನಿಯೊಂದರಿಂದ ಅವರು ಜಾಗ ಖರೀದಿಸಿ, ಅದನ್ನು ಕೆಲವೇ ಸಮಯದಲ್ಲಿ ಮಾರಾಟ ಮಾಡುವ ಮೂಲಕವೇ ಸುಮಾರು 700ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಗಳಿಸಿರುವುದು ಗೊತ್ತಾಗುತ್ತದೆ.

ಹರಿಯಾಣದ ಅಶೋಕ್ ಖೇಮ್ಕೋ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲೇ ಬೇಕು. ಅತ್ಯಂತ ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿರುವ ಖೇಮ್ಕೋ ಅವರು ವಾದ್ರಾ ನಡೆಸಿದ ವ್ಯವಹಾರಗಳನ್ನೆಲ್ಲಾ ಪರಿಶೀಲಿಸಿದ ನಂತರ ವಾದ್ರಾಗೆ ಭೂಮಿ ಮಂಜೂರು ಮಾಡಿದ್ದ ಆದೇಶವನ್ನು ರದ್ದುಗೊಳಿಸಿದರು.

ತಕ್ಷಣ ಈ ಅಧಿಕಾರಿಯನ್ನು ವರ್ಗಾವಣೆ ಮಾಡಲಾಯಿತು ಬಿಡಿ. ಇವರಿಗೆ ಇದು ಹೊಸತೂ ಅಲ್ಲ. ಇವರು ಇಪ್ಪತ್ತು ವರ್ಷಗಳಲ್ಲಿ ಸುಮಾರು 40 ವರ್ಗಾವಣೆಯನ್ನು ಪಡೆದವರು. ಈ ವ್ಯವಸ್ಥೆಯ ಸುಧಾರಣೆ ಸಾಧ್ಯವೇ ಇಲ್ಲ ಎಂದು ಸಿನಿಕತನದಿಂದ ಹೇಳುವವರಿಗೆ ಖೇಮ್ಕೋ ಘಟನೆ ಸ್ಫೂರ್ತಿ ನೀಡುವಂತಹದ್ದಾಗಿದೆ.

ನೆಹರು-ಗಾಂಧಿ ವಂಶಪಾರಂಪರ್ಯ ಆಡಳಿತ ಪರಂಪರೆ ಇದೀಗ ಹತ್ತು ಹಲವು ಭ್ರಷ್ಟಾಚಾರದ ಹಗರಣಗಳಿಗೆ ಸಿಲುಕಿಕೊಂಡಿರುವಲ್ಲಿಗೆ ಬಂದು ನಿಂತಿರುವುದನ್ನು ಕಂಡಾಗ ನನಗೆ ಅಚ್ಚರಿಯಾಗುತ್ತಿದೆ. ನೆಹರು ಅವರ ಮೇಲೆ ವೈಯಕ್ತಿಕ ನೆಲೆಯಲ್ಲಿ ಭ್ರಷ್ಟಾಚಾರಿ ಎಂದು ಯಾರೂ ಬೆಟ್ಟು ಮಾಡಿರಲಿಲ್ಲ, ಜತೆಗೆ ಅವರು 17ವರ್ಷಗಳ ಕಾಲ ಪ್ರಧಾನಿಯಾಗಿದ್ದರು.

ಅವರ ಸಂಪುಟದ ಸಚಿವರು ಕೂಡಾ ಈಗಿನವರಂತೆ ಭ್ರಷ್ಟರಾಗಿರಲಿಲ್ಲ. ಆ ದಿನಗಳಲ್ಲಿ ಹಣಕಾಸು ಸಚಿವರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರು ಕಂಪೆನಿಯೊಂದು ತನ್ನ ಷೇರುಗಳನ್ನು ನಿರ್ದಿಷ್ಟ ವಿಮಾ ಕಂಪೆನಿಯೊಂದಕ್ಕೆ ಮಾರಾಟ ಮಾಡಬೇಕೆಂದು ಒತ್ತಡ ಹೇರಿದ್ದರೆಂಬ ಆರೋಪಕ್ಕೆ ಒಳಗಾಗಿದ್ದರು. ಆಗ ಅದನ್ನು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿತ್ತು.
 
ಕೃಷ್ಣಮಾಚಾರಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಆಗ ಯಾರೂ ನೆಹರು ಅವರನ್ನು ಅನುಮಾನದಿಂದ ನೋಡಿರಲಿಲ್ಲ. ಅದೊಂದು ಕಾಲಘಟ್ಟ, ಹೋರಾಟ, ತ್ಯಾಗದ ಮೂಸೆಯೊಳಗಿಂದ ಚಿಗುರೊಡೆದ ನಾಯಕರು ಹಗರಣಗಳ ಜತೆಗೆ ಕೈಜೋಡಿಸುತ್ತಿರಲಿಲ್ಲ. 

ಆದರೆ ನೆಹರು ಅವರ ಮಗಳು ಇಂದಿರಾಗಾಂಧಿಯವರು ಅಧಿಕಾರದ ಗದ್ದುಗೆ ಏರಿದ ನಂತರ ಆ ಹಳೆಯ ಮೌಲ್ಯಗಳೆಲ್ಲವೂ ಚದುರಿದಂತೆ ಕಂಡು ಬಂದಿತು. ಇಂದಿರಾಜಿಯವರ ಆಡಳಿತಾವಧಿಯಲ್ಲಿ ಗುಂಪುಗುಳಿತನ, ಪಕ್ಷದ ಹೆಸರಲ್ಲಿ ವಿಪರೀತ ದೇಣಿಗೆ ಸಂಗ್ರಹ, ಸಾರ್ವಜನಿಕ ಉದ್ದಿಮೆ ಸಂಸ್ಥೆಗಳ ಭ್ರಷ್ಟ ವಹಿವಾಟುಗಳು ಸುದ್ದಿಯಾಗತೊಡಗಿದವು.

ಕೇಂದ್ರದಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಮೇಲೆ ಜನಸಾಮಾನ್ಯರು ಅನುಮಾನದಿಂದ ನೋಡತೊಡಗಿದರು. ಇಂತಹದ್ದೊಂದು ಭ್ರಷ್ಟ ಪರಂಪರೆ ಹೊಸದಾಗಿ ದಾಪುಗಾಲಿಡತೊಡಗಿತು.

ಇದೀಗ ಇಂದಿರಾಗಾಂಧಿಯ ಈ ಪರಂಪರೆಯಲ್ಲಿ ವಾದ್ರಾ ಎಂಬ ಅಳಿಯನೊಬ್ಬನ ಹಗರಣದ ವಾಸನೆ ಹೊಡೆಯತೊಡಗಿದೆ. ಆದರೆ ಅರ್ಧ ಶತಮಾನದ ಹಿಂದೆ ಇದೇ ನೆಹರು ಕುಟುಂಬದಲ್ಲೊಬ್ಬ ಅಳಿಯ ಇದ್ದರು. ಅವರು ಫಿರೋಜ್ ಗಾಂಧಿ. ಇಂದಿರಾಗಾಂಧಿಯವರ ಪತಿ.


ಅವರು ಅತ್ಯಂತ ಪ್ರಾಮಾಣಿಕ ಮತ್ತು ಸರಳ ವ್ಯಕ್ತಿಯಾಗಿದ್ದರಲ್ಲದೆ, ಹಲವು ಹಗರಣಗಳನ್ನೇ ಬಯಲಿಗೆಳೆದು ಮಾವನ ಸರ್ಕಾರವನ್ನೇ ಕಾಡಿದ್ದವರು. ಅವರು ಎಂದೂ ಪ್ರಧಾನಿಯವರ ಸೌಧದಲ್ಲಿ ವಾಸಿಸಲಿಲ್ಲ. ಸಂಸತ್ ಸದಸ್ಯನಿಗೆ ನೀಡುವ ಪ್ರತ್ಯೇಕ ನಿವಾಸದಲ್ಲಿಯೇ ವಾಸಿಸುತ್ತಿದ್ದರು.

ಅಂತಹ ಫಿರೋಜ್‌ಗಾಂಧಿಯವರ ಮಗ ರಾಜೀವ್ ಗಾಂಧಿ ಪ್ರಧಾನಿಯಾದಾಗ ಬೋಫೋರ್ಸ್‌ ಹಗರಣದಲ್ಲಿ ಸಿಲುಕಿದ್ದೊಂದು ವಿಪರ್ಯಾಸ. ನಂತರದ ದಿನಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬೋಫೋರ್ಸ್‌ ಹಗರಣವನ್ನು ಉಪಮೆಯಂತೆ ಬಳಸುವ ಪರಿಸ್ಥಿತಿಯೇ ನಿರ್ಮಾಣಗೊಂಡಿತು. ರಾಜೀವ್‌ಗಾಂಧಿಯವರು ಅದೇ ಕಾರಣದಿಂದ 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಬೇಕಾಯಿತು.

ಇಂದಿರಾ ಕುಟುಂಬವರ್ಗಕ್ಕೆ ಭ್ರಷ್ಟಾಚಾರದ ಪ್ರಕರಣಗಳು ಬಲು ದೊಡ್ಡ ಪಾಠಗಳನ್ನೇ ಕಲಿಸಿದೆ. ಈ ಕುಟುಂಬದ ಯಾರೊಬ್ಬರೂ ಇದೀಗ ಸರ್ಕಾರದೊಳಗಿಲ್ಲ. ಆದರೂ ಇದೀಗ ನೋಡಿ ಅಳಿಯ ರಾಬರ್ಟ್ ವಾದ್ರಾ ಹಗರಣದ ಕೆಸರು ಈ ಕುಟುಂಬದ ಮೇಲೆ ಮೆತ್ತಿಕೊಂಡಿತಲ್ಲ.

ಕಾಂಗ್ರೆಸ್ ಪಕ್ಷ ಮತ್ತು ಮನಮೋಹನ ಸಿಂಗ್ ಅವರ ಸಂಪುಟದ ಕೆಲವು ಸದಸ್ಯರು `ವಾದ್ರಾ ಮುಗ್ಧ, ಆತನ ಮೇಲೆ ಅನಗತ್ಯ ಆರೋಪಗಳನ್ನು ಮಾಡಲಾಗುತ್ತಿದೆ~ ಎಂದೆಲ್ಲಾ ಬಡಬಡಿಸುತ್ತಿದ್ದಾರೆ. ಆತನ ಪರ ವಾದ ಮಂಡಿಸುತ್ತಿದ್ದಾರೆ. ಆದರೆ ಇಂದಿರಾ ಕುಟುಂಬದ ಪ್ರತಿಷ್ಠೆಗೆ ಆಗಬೇಕಾದ ಹಾನಿಯಂತೂ ಆಗಿಯೇ ಹೋಗಿದೆ ಎನ್ನುವುದಂತೂ ನಿಜ.

ಇಂತಹ ಹಲವು ವೈರುಧ್ಯಗಳು ಕಾಡುತ್ತಿದ್ದ ಆ ಕಾಲದಲ್ಲಿಯೇ ಜಯಪ್ರಕಾಶ್ ನಾರಾಯಣರು ಮೌಲ್ಯಗಳಿಂದ ಜೀವ ತುಂಬಿಕೊಂಡಿದ್ದ ಆಂದೋಲನವೊಂದನ್ನು ಹುಟ್ಟು ಹಾಕಿದ್ದನ್ನು ಮರೆಯುವುದೆಂತು. ಅಂದು ಭ್ರಷ್ಟಾಚಾರ ಒಂದರ ವಿರುದ್ಧ ಮಾತ್ರ ಎದ್ದ ಧ್ವನಿ ಅದಾಗಿರಲಿಲ್ಲ ಎನ್ನುವುದೂ ನಿಜ.

ಕಳೆದು ಹೋದ ಮೌಲ್ಯಗಳಿಗೆ ಮರುಜೀವ ನೀಡುವುದೇ ಅಂದು ಜಯಪ್ರಕಾಶರ ಹೆಗ್ಗುರಿಯಾಗಿತ್ತು. ಇವತ್ತಿಗೂ ಅಂತಹದ್ದೊಂದು ಚಿಂತನೆಯ ಅಗತ್ಯವಿದೆ. ಆ ದಿಸೆಯಲ್ಲಿ ಮೊದಲ ಹೆಜ್ಜೆ ಎಂದರೆ ಸಾರ್ವಜನಿಕ ಜೀವನದಲ್ಲಿರುವವರು ಕಳಂಕರಹಿತರಾಗಿರಬೇಕು. ಇದು ಕೇಂದ್ರ ಸರ್ಕಾರದಲ್ಲಿಯೇ ಆಗಲಿ, ರಾಜ್ಯ ಸರ್ಕಾರದಲ್ಲಿಯೇ ಆಗಲಿ, ಸರ್ಕಾರದಲ್ಲಿ ಇರುವವರೆಲ್ಲರಿಗೂ ಅನ್ವಯಿಸುವಂತಾಗಬೇಕಿದೆ.

ಇವತ್ತು ಕೂಡಾ ದೇಶ ದಶಕಗಳ ಹಿಂದೆ ಎದುರಿಸುತ್ತಿದ್ದಂತಹದ್ದೇ ಸಮಸ್ಯೆಗಳ ಸವಾಲನ್ನು ಎದುರಿಸುತ್ತಿದೆ. ಅನ್ಯಾಯದ ವಿರುದ್ಧ ಹೋರಾಟವೆಂದರೆ ಅದು ನಿತ್ಯ ಹರಿಯುವ ನದಿಯಂತೆ... ಭ್ರಷ್ಟಾಚಾರದ ವಿರುದ್ಧದ ಹೋರಾಟವೂ ಅದರಲ್ಲಿ ಒಂದು ಭಾಗ ಅಷ್ಟೇ. ಇದು ನಿತ್ಯ ಪ್ರವಾಹವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT