ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳ ಸಾಮಾಜಿಕತೆ ಮತ್ತು ಆಧ್ಯಾತ್ಮಿಕತೆ

Last Updated 9 ಮೇ 2013, 19:59 IST
ಅಕ್ಷರ ಗಾತ್ರ

ಡಂಕಿನ್ ಜಳಕಿಯವರ ವಚನಗಳ ಕುರಿತ ಮಹಾಪ್ರಬಂಧವನ್ನು ಕುರಿತು ನಾನು ಈ ಅಂಕಣದ ಮಿತಿಯಲ್ಲಿ ಬರೆದ ಪ್ರತಿಕ್ರಿಯೆ ಸುಮಾರು ಒಂದು ತಿಂಗಳ ಕಾಲ `ಪ್ರಜಾವಾಣಿ'ಯಲ್ಲಿ  ಹಲವು ನಿಟ್ಟನಿಂದಚರ್ಚಿತವಾಯಿತು. ಈ ಚರ್ಚೆ `ಪ್ರಜಾವಾಣಿ'ಯ ಪುಟಗಳನ್ನೂ ಮೀರಿ `ಫೇಸ್‌ಬುಕ್'ನಂಥ ಅಂತರ್ಜಾಲದ ವಲಯಗಳಲ್ಲಿ, ಸಾಹಿತ್ಯಕ ಪತ್ರಿಕೆಗಳಲ್ಲಿ ಕೂಡ ಚರ್ಚಿತವಾದದ್ದು ಚರ್ಚಿತ ವಿಚಾರಗಳ ಮಹತ್ವದ ಕುರುಹು.

ಜಳಕಿ ವಿರೋಧಿಗಳಲ್ಲಿ ಕೆಲವು ಮಂದಿ ಗಣ್ಯರು ನನ್ನ ಮೇಲೂ ಹರಿಹಾಯ್ದದ್ದೂ ಆಯಿತು. ಶಿವಮೊಗ್ಗೆಯ ಕೆಲವು ಸಂಶಯಾಸ್ಪದ ಮಿತ್ರರು ನಾನು ಬಾಲಗಂಗಾಧರ ಅವರಿಂದ ಯಾವುದೋ ಅನುಕೂಲ ಪಡೆಯುವ ಉದ್ದೇಶದಿಂದ ಅವರ ಶಿಷ್ಯರೊಬ್ಬರ ವಿಚಾರಗಳಿಗೆ ಪ್ರಚಾರ ಕೊಟ್ಟೆನೆಂದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೂರಿದರು. ನನ್ನನ್ನು ಬಲ್ಲವರಿಗೆ ಅಂಥ ಲಾಭ ಪಡೆಯುವ ಉದ್ದೇಶ ನನಗಿಲ್ಲವೆಂದು ಸಮರ್ಥನೆ ನೀಡುವ ಅಗತ್ಯವಿಲ್ಲ. ಒಲ್ಲದವರಿಗೆ ನೀಡಿಯೂ ಪ್ರಯೋಜನವಿಲ್ಲ.

ಕೆಲವರು ಅಮುಖ್ಯವಾದ ವಿಚಾರಗಳ ಬಗ್ಗೆ ಅನಗತ್ಯವಾಗಿ ಬರೆದ ಕಾರಣಕ್ಕೆ ನನ್ನನ್ನು ದೂರಿದರು. ಇಷ್ಟೊಂದು ಮಂದಿ ಹಿರಿಯ ವಿದ್ವಾಂಸರು, ಬರಹಗಾರರು ಚರ್ಚೆಯಲ್ಲಿ ಆಳವಾಗಿ ಭಾಗವಹಿಸಿದ್ದು ಈ ದೂರು ನಿಷ್ಕಾರಣವೆಂದು ಸಾಬೀತು ಮಾಡಿದೆ. ಚರ್ಚಿತ ವಿಷಯಗಳು ಮಹತ್ವಪೂರ್ಣವಾದ್ದರಿಂದ ತಾನೇ ಕಂಬಾರ, ದೇವನೂರ ಮಹಾದೇವ, ಸಿದ್ದರಾಮಯ್ಯ, ಕೆ.ವೈ. ನಾರಾಯಣಸ್ವಾಮಿಯವರಂಥ ಪ್ರಮುಖ ಲೇಖಕರೂ, ಕಲ್ಬುರ್ಗಿಯವರಂಥ ಹಿರಿಯ ವಿದ್ವಾಂಸರೂ, ಆಶಾದೇವಿಯವರಂಥ ಹೆಸರಾಂತ ವಿಮರ್ಶಕರೂ ಚರ್ಚೆಯಲ್ಲಿ ಪ್ರವೇಶಿಸಿದ್ದು. 

ಜಳಕಿಯವರ ಜೊತೆ ತೀವ್ರ ವಾಗ್ಯುದ್ಧಕ್ಕೆ ಬಿದ್ದ ವಿಜಯಕುಮಾರ ಬೋರಟ್ಟಿ ಎಂಬುವವರು ಇನ್ನೊಂದು ಬಗೆಯ ಆರೋಪವನ್ನು ಮಾಡಿದರು. ವಚನಗಳ ಬಗ್ಗೆ ಆರ್ಕೈವಲ್ ಅಧ್ಯಯನ ಮಾಡದ ನನ್ನಂಥ ಪರಮಪಾಮರನಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಿಕ್ಕೆ ಯೋಗ್ಯತೆಯೇ ಇಲ್ಲವೆಂದು ಗುಡುಗಿದರು. ನಾನು ವಚನಗಳ ಬಗ್ಗೆ ಅವರು ನಿರೀಕ್ಷಿಸುವ ಥರದ ಸಂಶೋಧನೆ ಮಾಡಿಲ್ಲ ಎಂದು ಖುಲ್ಲಾ ಒಪ್ಪಿಕೊಳ್ಳುತ್ತೇನೆ. ಅಂದ ಮಾತ್ರಕ್ಕೆ ವಚನಗಳ ಬಗ್ಗೆ ಮಾತಾಡುವ ನನ್ನ ಅಧಿಕಾರವನ್ನು ಯಾವ ಆರ್ಕೈವಲ್ ವಿದ್ವಾಂಸರೂ ಕಸಿದು ಕೊಳ್ಳಲಾರರು. ಯಾಕೆಂದರೆ ವಚನಕಾರರು ಮಾತಾಡಿದ್ದು ಕೇವಲ ಬೋರಟ್ಟಿಯವರಂಥ ವಿದ್ವಾಂಸರನ್ನುದ್ದೇಶಿಸಿ ಅಲ್ಲ. ಅವರು ಎಲೆ ಸಂಕುಲ, ಮಾಮರ, ಬೆಳದಿಂಗಳು, ಕೋಗಿಲೆ ಇತ್ಯಾದಿ ಎಲ್ಲ ಜೀವಜಡಗಳನ್ನೂ ಮಾತಾಡಿಸಿದ್ದರಿಂದ ಅವರನ್ನು ಪ್ರೀತಿಯಿಂದ ಓದಿ ಅವರಿಂದ ಸ್ಫೂರ್ತಿ ಪಡೆದುಕೊಂಡ ನನಗೂ ಅವರ ಬಗ್ಗೆ ಬಾಯ್ದೆರೆಯಲು ಒಂದಿಷ್ಟು ಹಕ್ಕಿದೆಯೆಂದು ಮಾತ್ರ ನಮ್ರನಾಗಿ ಸೂಚಿಸ ಬಯಸುತ್ತೇನೆ.

ಜಳಕಿಯವರ ಪಿಎಚ್ ಡಿ ಮಾರ್ಗದರ್ಶಿಗಳಾದ  ಪ್ರೊಫೆಸರ್ ವಿವೇಕ ಧಾರೇಶ್ವರ ಅವರು, ನನಗೆ ಜಳಕಿಯವರ ಮೂಲವಾದವನ್ನು ಹಿಡಿಯಲೇ ಆಗಿಲ್ಲವೆಂದು ವಿವೇಕಯುತವಾಗಿ ದೂರಿದರು. ಬಾಲಗಂಗಾಧರರ ಸಿದ್ಧಾಂತಗಳ ಮೂಲಕ ವಚನಗಳನ್ನು ಜಳಕಿಯವರು ಪರೀಕ್ಷಿಸಿರುವುದರಿಂದ ಆ ಬಗ್ಗೆ ತಿಳಿಯದ ನಾನು ಮಾತಾಡುವ ಅಧಿಕಾರವನ್ನೇ ಪಡೆದುಕೊಂಡಿಲ್ಲವೆಂದು ಬಾಲಗಂಗಾಧರವಾದಿಗಳಾದ ಪ್ರೊಫೆಸರ್ ವಿವೇಕ ಧಾರೇಶ್ವರ ಅವರ ವಿದ್ವತ್ಪೂರ್ಣ ಇಂಗಿತಾರ್ಥವಿರಬಹುದು. ಆದರೆ ಅವರಿಗೆ ನನ್ನ ಉದ್ದೇಶವೂ ಅರ್ಥವಾಗಿಲ್ಲ. ನಾನು ಚರ್ಚಿಸಹೊರಟದ್ದು ಜಳಕಿ ಅವರ ಅಧ್ಯಯನ ಮಾದರಿ ಅಥವಾ ಕ್ರಮಗಳನ್ನಲ್ಲ. ಈ ಬಗ್ಗೆ  ಬೋರಟ್ಟಿಯವರು ಮುಖ್ಯ ಪ್ರ್ರಶ್ನೆಗಳನ್ನೆತ್ತಿದ್ದಾರೆ. ನಾನು ಆ ತಂಟೆಗೇ ಹೋಗಲಿಲ್ಲ. ಜಳಕಿ ಅವರು ನೀಡಿರುವ ವಚನ ಕುರಿತ ತೀರ್ಮಾನಗಳು ಅಸಮರ್ಥನೀಯವೆಂದು ನನ್ನ ಭಿನ್ನವಾದ ವಚನಾಧ್ಯಯನದ ಆಕರ ಮತ್ತು ಆಧಾರಗಳ ಮೂಲಕ ವಾದಿಸಲೆಳೆಸಿದೆ, ಅಷ್ಟೆ. ನಾವೆಲ್ಲರೂ ನಮ್ಮ ನಮ್ಮ ಕ್ರಮಗಳೇ ಪ್ರಶ್ನಾತೀತವೆಂದು ಕೂತುಬಿಟ್ಟರೆ ಚರ್ಚೆಯ ಜರೂರತ್ತೇ ಇರುವುದಿಲ್ಲ.

ಅಲ್ಲದೆ ಅಧ್ಯಯನ ಕ್ರಮ ಇತ್ಯಾದಿಗಳ ಚರ್ಚೆ ಅಕಡೆಮಿಕ್ ವಲಯಗಳಲ್ಲಿ ಪ್ರಸ್ತುತವೇ ಹೊರತು ಈ ಅಂಕಣದಂಥ ಸಾರ್ವಜನಿಕ ವೇದಿಕೆಗಳಲ್ಲಲ್ಲ. ನೀವು ಯಾವುದೇ ಕ್ರಮವನ್ನು ಅನುಸರಿಸಿ, ಬಿಡಿ. ಆ ಮೂಲಕ ನೀವು ನೀಡುವ ತೀರ್ಮಾನಗಳನ್ನು ನನ್ನ ನಿಕಷದ ಮೂಲಕ ಪರೀಕ್ಷೆಗೊಡ್ಡುವ ಜರೂರಿ ನನಗಿದೆ. ಯಾಕೆಂದರೆ ನಿಮ್ಮ ಸಂಶೋಧನೆಯ ಕ್ರಮವೊಂದೇ ನನ್ನಂಥ ಸಾಮಾಜಿಕರ ಏಕಮೇವ ಲೋಕಗ್ರಹಣಕ್ರಮವಾಗಲು ಸಾಧ್ಯವಿಲ್ಲ.

ನಾನು ಸಣ್ಣದನಿಯಲ್ಲಿ ಶುರುಮಾಡಿದ ಚರ್ಚೆಯನ್ನು ಎರಡೂ ಪಕ್ಷಗಳ ಕೆಲವರು ಪರಸ್ಪರ ದೋಷಾರೋಪಣೆಯ ಮಟ್ಟಕ್ಕೆ ತೆಗೆದುಕೊಂಡು ಹೋದರು. ಇದರ ಮುಖ್ಯ ಕಾರಣಗಳು ಹಲವು. ಅವುಗಳಲ್ಲಿ ಮೊದಲನೆಯದು ನಮ್ಮ ವಿಚಾರಗಳನ್ನು ಒಪ್ಪದವರು ನಮ್ಮ ಭಾಷೆಯಲ್ಲೇ ಮಾತನಾಡಬೇಕೆಂಬ ನಿರೀಕ್ಷೆ. ಸಾರ್ವಜನಿಕವಾಗಿ ಮಹತ್ವಪೂರ್ಣವಾದ ವಿಷಯಗಳ ಬಗ್ಗೆ ಚರ್ಚೆ ಸುರುವಾದ ಮೇಲೆ ತಜ್ಞರಲ್ಲದವರೂ ಅನಿವಾರ್ಯವಾಗಿ ಪ್ರವೇಶಿಸುತ್ತಾರೆ. ಅಂಥವರ ಭಾಷೆ ತಜ್ಞರ ಅಕೆಡೆಮಿಕ್ ಶಿಸ್ತಿಗೆ ಒಳಪಡಬೇಕಿಲ್ಲ. ಹೀಗಾಗಿ ದೇವನೂರ ಮಹಾದೇವ ಅವರ ಗಂಭೀರ ಪ್ರತಿಕ್ರಿಯೆ ಪೂರ್ವಪಕ್ಷದ ವಕ್ತಾರರಿಗೆ ಬೈಗುಳವಾಗಿ ಕೇಳಿಸಿದ್ದು. ತಮ್ಮ ವಿಚಾರಗಳನ್ನು ತಮ್ಮ ಕ್ರಮಗಳಲ್ಲೇ ತಮ್ಮ ಗುರು ಪರಂಪರೆಯ ರೀತಿಯಲ್ಲೇ ಅರ್ಥ ಮಾಡಿಕೊಂಡು ತಮ್ಮಂತೆಯೇ ನುಡಿಯಬೇಕೆಂದು ಅಪೇಕ್ಷಿಸಿದರೆ ಆಗುವುದು ಹಾಗೇ.
ಇಷ್ಟು ದಿವಸ ನಡೆದ ಚರ್ಚೆ ವಚನಕಾರರ ಸುತ್ತ ಅಡ್ಡಾಡಿದರೂ ಅದು ಕೇವಲ ವಚನಕಾರರನ್ನು ಕುರಿತದ್ದು ಮಾತ್ರವಾಗಿರಲಿಲ್ಲ. ವಚನಕಾರರನ್ನು ಇಪ್ಪತ್ತೊಂದನೇ ಶತಮಾನದಲ್ಲಿ ಮರು ಓದುತ್ತಿರುವ ನಮ್ಮನಮ್ಮ ಪರಸ್ಪರ ವಿರುದ್ಧವಾದ ನಂಬಿಕೆಗಳೇ ವಚನಕಾರರಿಗಿಂತ ಮುನ್ನೆಲೆಗೆ ಬಂದವು. ಇದು ತಪ್ಪೇನೂ ಅಲ್ಲ. ವಚನಕಾರರು ತಮ್ಮ ಪೂರ್ವಜರನ್ನು ತಮ್ಮ ನೆಲೆಗಟ್ಟಿನ ಮೇಲೆ ಪರೀಕ್ಷಿಸಿದ ಹಾಗೆ ನಾವೂ ವಚನಕಾರರನ್ನು ನಮ್ಮ ಅಗತ್ಯಗಳ ಬೆಳಕಿನಲ್ಲಿ ಮರುಪರಿಶೀಲಿಸಬೇಕಾಗಿದೆ.

ಜಳಕಿಯವರ ವಿಚಾರಗಳ ಬಗ್ಗೆ ನಾನು ಎತ್ತಿದ ನನ್ನ ತಗಾದೆಗಳನ್ನು ಸರಿಪಡಿಸಿಕೊಳ್ಳುವ ಅಗತ್ಯ ನನಗೆ ಕಾಣುತ್ತಿಲ್ಲ. ಅವರಿಗೂ ತಮ್ಮ ವಿಚಾರಗಳನ್ನು ಬದಲಿಸಿಕೊಳ್ಳುವ ಇಚ್ಛೆ ಇರುವ ಪುರಾವೆಗಳು ಅವರ ಪ್ರತಿಕ್ರಿಯೆಗಳಲ್ಲೂ ನನಗೆ ಸಿಕ್ಕಿಲ್ಲ. ಅಲ್ಲಮನೆಂದ ಹಾಗೆ `ಪರಿಪರಿಯ ಭಂಡದ ವ್ಯವಹಾರದೊಳಗೆ ಕೊಡಲಿಲ್ಲ, ಕೊಳಲಿಲ್ಲ'.

ಈ ನಡುವೆ ಜಳಕಿ ಮತ್ತವರ ಸಮರ್ಥಕರ ಮೂಲ ಸ್ಫೂರ್ತಿಯಾದ ಪ್ರೊಫೆಸರ್ ಬಾಲಗಂಗಾಧರ ಅವರ ವಚನ ಕುರಿತ ಬರಹವೊಂದು ಈ ಪುಟಗಳಲ್ಲಿ ಪ್ರಕಟವಾಗಿತ್ತು. ಆ ಬರಹವು ವಚನ ಕುರಿತ ಅವರ ಒಟ್ಟು ವಿಚಾರಗಳನ್ನು ಸುಲಭಗ್ರಾಹ್ಯವಾಗಿ ಸಂಗ್ರಹಿಸಿತ್ತು. ಆ ವಿಚಾರಗಳನ್ನು ಪರೀಕ್ಷಿಸುವ ಸಲುವಾಗಿ ಚರ್ಚೆಯನ್ನು ಮರುಪ್ರವೇಶಿಸುತ್ತಿದ್ದೇನೆ. ಅವರ ಪ್ರಸ್ತುತ ಬರಹದ ಮುಖ್ಯಾಂಶಗಳು ಹೀಗಿವೆ:
ವಚನಗಳನ್ನು ಜಾತಿವಿನಾಶದ ಹೇಳಿಕೆಗಳಾಗಿ ನೋಡದೆ ಆಧ್ಯಾತ್ಮಿಕ ಅಭಿವ್ಯಕ್ತಿಗಳೆಂದು ನೋಡಬೇಕು; ಭಾರತೀಯ ಆಧ್ಯಾತ್ಮಿಕ ಪರಂಪರೆಯ ಭಾಗಗಳಾಗಿರುವ ವಚನಗಳ ಮತ್ತು ಅವುಗಳ ಹಿಂದಿರುವ ಆಧ್ಯಾತ್ಮಿಕ ಪರಂಪರೆಯ ಕುರಿತು ನಮ್ಮಲ್ಲಿರುವ ವಿವರಣೆಗಳೆಲ್ಲವೂ ಕ್ರಿಶ್ಚಿಯನ್ ಥಿಯಾಲಜಿಯಿಂದ ಪ್ರಭಾವಿತವಾಗಿಬಿಟ್ಟಿವೆ; ಈ ಆಧ್ಯಾತ್ಮಿಕ ಪರಂಪರೆಯನ್ನರಿಯಲು ನಾವು ಹೊಸದೊಂದು ವೈಜ್ಞಾನಿಕ ಭಾಷೆಯನ್ನು ರಚಿಸಿಕೊಳ್ಳಬೇಕಿದೆ; ಎಲ್ಲ ಆಧ್ಯಾತ್ಮಿಕ ಪಂಥಗಳಂತೆ ವಚನಗಳೂ ಭವಬಂಧನದಿಂದ ಮುಕ್ತಿಯನ್ನು ಪಡೆಯುವ ಮೂಲೋದ್ದೇಶವನ್ನೇ ಹೊಂದಿವೆ; ವೈವಿಧ್ಯಪೂರ್ಣವಾದ ಆಧ್ಯಾತ್ಮಿಕ ಪರಂಪರೆಯಲ್ಲಿ ವಚನಕಾರರು ಬೋಧಿಸಿದ ಮಾರ್ಗ ಷಟ್ಸ್ಥಲಾನುಸಾರಿಯಾದುದು ಮತ್ತು ಇದರ ಉದ್ದೇಶ ಶಿವಸಾಯುಜ್ಯ; ವಚನಕಾರರ ಉದ್ದೇಶಿತ ಗುರಿ ಸಾಧಕಸಮುದಾಯ.

ಈ ಅಂಶಗಳನ್ನು ಒಂದೊಂದಾಗಿ ಚರ್ಚೆಗೆತ್ತಿಕೊಳ್ಳುವ ಮೊದಲು ವಚನಗಳೆಂಬ ಸಾಮೂಹಿಕ ರಚನಾಸಮುಚ್ಚಯದ ಸ್ವಭಾವಗಳನ್ನು ಮೊದಲು ಪರೀಕ್ಷಿಸೋಣ. ವಚನಗಳು ಸಾಹಿತ್ಯವೆನ್ನುವ ಮಾತು ಅಸಂದಿಗ್ಧ ರೀತಿಯಲ್ಲಿ ಚರ್ಚೆಯಲ್ಲಿ ಮತ್ತೆಮತ್ತೆ ಬಂದಿದೆ. ಒಂದು ವೇಳೆ ಅವು ಸಾಹಿತ್ಯಕೃತಿಗಳು ಮಾತ್ರವಾಗಿದ್ದರೆ ಅವುಗಳ ವಿಚಾರಗಳ ಬಗ್ಗೆ ಇಷ್ಟೊಂದು ಪರಾಮರ್ಶೆಯ ಅಗತ್ಯವಿರಲಿಲ್ಲ. ಯಾಕೆಂದರೆ ಕಾವ್ಯಕೃತಿಗಳ ಹೇಳಿಕೆಗಳು ಅಲೌಕಿಕ , ಅಂದರೆ ಲೌಕಿಕವೂ ಅಲ್ಲ, ಪರಮಾರ್ಥವೂ ಅಲ್ಲ. ಆಚಾರ್ಯ ತೀನಂಶ್ರೀ ಅವರು ಅಕ್ಕಮಹಾದೇವಿಯ `ಕಾವ್ಯಸೌಂದರ್ಯ'ದ ಬಗ್ಗೆ ಬರೆದ ಲೇಖನದಲ್ಲಿ ವಚನಗಳ ಕಾವ್ಯಾತ್ಮಕತೆಯ ಬಗ್ಗೆ ಬೆಳಕು ಚೆಲ್ಲಿದರು. ಇನ್ನೊಬ್ಬ ವಚನ ವಿದ್ವಾಂಸರಾದ ಎಂ.ಆರ್. ಶ್ರಿ ಅವರು ಬಸವಣ್ಣನವರ ವಚನಗಳ ಕಾವ್ಯಾತ್ಮಕತೆಯನ್ನು ಮೆಚ್ಚಿ ಬಸವಣ್ಣನವರನ್ನು ` ಕನ್ನಡದ ಕಾಳಿದಾಸ'ನೆಂದು ಕರೆದರು. ಗಣನೀಯ ಸಂಖ್ಯೆಯ ವಚನಗಳಲ್ಲಿ ಕಾವ್ಯಾತ್ಮಕತೆ  ದಟ್ಟವಾಗಿರುವುದು ಗೊತ್ತಿರುವ ವಿಷಯ. ವಿಶೇಷವಾಗಿ ಅಕ್ಕ, ಅಲ್ಲಮ, ಬಸವಣ್ಣ, ದಾಸಿಮಯ್ಯ, ಗಜೇಶ ಮಸಣಯ್ಯ, ಉರಿಲಿಂಗದೇವ, ಸಕಳೇಶ ಮಾದರಸ ಮುಂತಾದವರ ವಚನಗಳಲ್ಲಿ ಕಾವ್ಯಾಂಶ ದಂಡಿಯಾಗಿದೆ. ಆದರೆ ಕಾವ್ಯಾಂಶವಿರುವ ಎಲ್ಲ ವಚನಗಳೂ ಒಂದೇ ಬಗೆಯವಲ್ಲ. ಅಕ್ಕನ ಭಾವಗೀತಾತ್ಮಕತೆ, ಅಲ್ಲಮನ ಅನುಭಾವೀ ನಿಗೂಢತೆ, ಬಸವಣ್ಣನ ಸಮಾಜಮುಖತೆ, ನೀಲಾಂಬಿಕೆಯ ಒಗಟಿನ ಗುಣ, ಅಂಬಿಗರ ಚೌಡಯ್ಯನ ಕಠೋರ ಸಮಾಜವಿಡಂಬನೆ -ಇವೆಲ್ಲವೂ ವಚನಗಳ ಕಾವ್ಯಗುಣವನ್ನು ಬಹುಮುಖಿಯಾಗಿ ಮಾಡಿವೆ.

ಆದರೆ ಕಾವ್ಯಮೀಮಾಂಸೆಕಾರರು ಕಾವ್ಯದ ವಿರುದ್ಧಧ್ರುವವೆಂದು ಬಣ್ಣಿಸಿದ ಶಾಸ್ತ್ರದ ಅಭಿದಾಪ್ರಧಾನ ವಚನಗಳೂ ಹಲವಿವೆ. ಚನ್ನಬಸವಣ್ಣ, ಉರಿಲಿಂಗ ಪೆದ್ದಿಗಳಲ್ಲಿ ಮಾತ್ರವಲ್ಲದೆ ಅಧಿಕಸಂಖ್ಯೆಯ ಕಾವ್ಯಾತ್ಮಕ ರಚನೆಗಳನ್ನು ನೀಡಿರುವ ಅಕ್ಕ, ಬಸವ, ಅಲ್ಲಮರಲ್ಲೂ ಶಾಸ್ತ್ರಪ್ರಧಾನವಾದ ವಚನಗಳು ಹೇರಳವಾಗಿ ಕಾಣಸಿಗುತ್ತವೆ.

ಇವೆರಡಕ್ಕೂ ಭಿನ್ನವಾಗಿ ಸ್ವಂತ ಅನುಭವವನ್ನು ನೇರವಾಗಿ ಹೇಳಿ ಆತ್ಮನಿವೇದನೆ ಅನ್ನಬಹುದಾದ ವಚನಗಳೂ ಬೇಕಾದಷ್ಟಿವೆ.
ಒಟ್ಟಿನಲ್ಲಿ ವಚನಗಳಲ್ಲಿ ನಮ್ಮನ್ನು ದಿಕ್ಕುಗೆಡಿಸುವಷ್ಟು ವೈವಿಧ್ಯಮಯವಾದ ಅಭಿವ್ಯಕ್ತಿಗಳಿವೆ. ಅಲ್ಲದೆ ವಚನಕಾರರೂ ಪರಸ್ಪರ ಭಿನ್ನವಾದ ಸಾಂಸ್ಕೃತಿಕ, ಆಧ್ಯಾತ್ಮಿಕ, ಜಾತೀಯ ಪರಂಪರೆಗಳಿಂದ ಬಂದವರು. ಈ ಅಂಶ ವಚನಗಳ ಬಹುಳತೆಯನ್ನು ಇನ್ನೂ ಹೆಚ್ಚಿಸಿದೆ. ಕೆಲವೊಮ್ಮೆ ಕಾವ್ಯವಾಗಿ, ಕೆಲವೊಮ್ಮೆ ಶಾಸ್ತ್ರವಾಗಿ, ಕೆಲವೊಮ್ಮೆ ಸೂಕ್ತಿಯಾಗಿ, ಕೆಲವೊಮ್ಮೆ ಆತ್ಮನಿವೇದನೆಯಾಗಿರುವ ವಚನಗಳು ಬಹಳ ಸಲ ಒಂದು ವಿಶಿಷ್ಟ ಸಂದರ್ಭದಲ್ಲಿ ಅಂದ ಮಾತುಗಳು. ಶೂನ್ಯಸಂಪಾದನೆಗಳು ನೀಡುವ ನಾಟಕೀಯ ಭಿತ್ತಿಯನ್ನು ಕಾಲ್ಪನಿಕವೆನ್ನಬಹುದಾದರೂ ವಚನಗಳು ಮೂಲಭೂತವಾಗಿ ಸಂವಾದಾತ್ಮಕ ಅಭಿವ್ಯಕ್ತಿಗಳೆನ್ನುವುದಕ್ಕೆ ಅನೇಕ ಸೂಚನೆಗಳು ವಚನದ ಪಾಠಗಳಲ್ಲಿ ದೊರಕುತ್ತವೆ.

ಹೀಗೆ ಬಹುಮುಖೀ ಸಂವಾದಾತ್ಮಕತೆಯನ್ನು ಹೊಂದಿರುವ, ಹಲವು ದೃಷ್ಟಿಕೋನಗಳ ನಡುವಿನ ಸಂಘರ್ಷಗಳನ್ನು ಒಂದು ನೆಲೆಗೆ ತರಲು ಪ್ರಯತ್ನಿಸುತ್ತಿರುವ ವಚನಗಳಲ್ಲಿ ಯಾವ ವಾದವಿದೆಯೆಂದು ತೋರಿಸಿದರೂ ಅದಕ್ಕೆ ವಿರುದ್ಧವಾದ ಉದಾಹರಣೆಗಳನ್ನೂ ತೆಗೆದುಕೊಡಬಹುದು. `ಸದ್ಭಕ್ತಿಯ ಉದಕವನ್ನೆರೆದು ಸಲುಹು' ಎನ್ನುವ ಬಸವಣ್ಣನೇ ಇನ್ನೊಂದು ವಚನದಲ್ಲಿ  `ಭಕ್ತಿಯೆಂಬುದ ಮಾಡಬಾರದಯ್ಯೊ' ಎಂದೂ ಹೇಳಿರುವುದನ್ನು ತೋರಿಸಿ ಒಮ್ಮೆ ಭಕ್ತಿಯ ಪರವಾಗಿರುವ ಬಸವಣ್ಣ ಇನ್ನೊಮ್ಮೆ ಭಕ್ತಿವಿರೋಧಿಯಾಗಿರಬಹುದೆಂಬ ಜಾಣ ಕಿತಾಪತಿಯನ್ನೂ ತೆಗೆಯಬಹುದು.

ಬಹುಜನಕೃತ ವಚನಸಮುಚ್ಚಯಕ್ಕೆ ವಿಶಿಷ್ಟವಾಗಿರುವ ವೈವಿಧ್ಯ, ಸಾಂದರ್ಭಿಕತೆ, ಸಂವಾದಾತ್ಮಕತೆಗಳನ್ನು ಗಮನಿಸಿದಾಗ ವಚನಗಳು ಜಾತಿಪರವಾದ ಅಥವಾ ವಿರೋಧವಾದ ಸಿದ್ಧಾಂತ ಮಂಡಿಸುತ್ತಿವೆಯೆಂದಾಗಲಿ ಇಲ್ಲವೆಂದಾಗಲಿ ಸರಳೀಕೃತ ನಿರ್ಧಾರಗಳನ್ನು ಕೊಡಲೆಳೆಸುವವರು ವಚನಗಳನ್ನು ಒಂದು ಅಸಂದಿಗ್ಧ ವಾದಕ್ಕೆ ಅಂಟಿಸುವ ಪ್ರಯತ್ನಗಳು.

ಅಂದರೆ ವಚನಕಾರರ ಜಾತಿವಿರೋಧಿತ್ವವನ್ನು ಅಥವಾ ಜಾತಿನಿರಪೇಕ್ಷತೆಯನ್ನು ಮಹತ್ವಪೂರ್ಣವೆಂದು ಸಾಧಿಸುವ ವಾದಗಳಿಗೆ ವಚನಗಳಲ್ಲಿ ಪೂರ್ಣ ಸಮರ್ಥನೆ ಸಿಗುವುದಿಲ್ಲ. ಆದರೆ ವಚನಗಳು ನಮ್ಮ ಸಮಾಜದಲ್ಲಿ ಇಂದಿಗೂ ಇರುವ ಹಲವು ತರತಮಗಳನ್ನು, ಶೋಷಣಾನೆಲೆಗಳನ್ನು ಮುಖಾಬಿಲೆ ಮಾಡಿರುವುದರಿಂದ ಇಂದಿನ ನಾವು ಅಂದಿನ ವಚನಗಳಲ್ಲಿ ಪಡಿಮೂಡುವ ನಮ್ಮ ಬಿಂಬವನ್ನೇ ನೋಡುತ್ತಿದ್ದೇವೆ. ವೀರಶೈವರ ಜಡ ಆಚರಣೆಗಳನ್ನೇ ವಚನಗಳಲ್ಲಿ ಹುಡುಕುವವರಿಗೆ ಅವುಗಳಲ್ಲಿನ ಪಂಚಾಚಾರ, ಪಾದೋದಕ, ಅಷ್ಟಾವರಣಗಳೇ ಮುಖ್ಯವಾಗಿಬಿಡುತ್ತವೆ.

ಹೀಗಾಗಿ ವಚನಗಳು ಜಾತಿಪರವೆ ಅಥವಾ ಜಾತಿನಿರಪೇಕ್ಷವೆ ಎಂಬ ಸಮಸ್ಯೆ ನಮ್ಮ ಇಂದಿನ ಸಮಸ್ಯೆಯಾದ ಜಾತಿಯ ಬಗ್ಗೆ ಇಂದು ನಾವು ತಳೆಯುತ್ತಿರುವ ನಿಲುವು ನಮ್ಮ ಆಯ್ಕೆಯನ್ನು ನಿರ್ಧರಿಸುತ್ತದೆ.

ಜಾತಿ ಒಂದು ಶೋಷಣಾವ್ಯವಸ್ಥೆಯೇ ಅಲ್ಲವೆಂದು, ಜಾತಿ ಅಸಮಾನತೆಯನ್ನು ಹೋಗಲಾಡಿಸಲು ಮೀಸಲಾತಿ ಮುಂತಾದ ಸಂವಿಧಾನಾತ್ಮಕ ಕ್ರಮಗಳು ಭಾರತದ ಪತನಕ್ಕೆ ಕಾರಣವೆಂದು ಏರುದನಿಯಲ್ಲಿ ಘೋಷಿಸುತ್ತಿರುವ ಅತ್ಯಂತ ಸಂಕೀರ್ಣವಾದ ತರ್ಕಗಳನ್ನು ಮುಂದಿಡುತ್ತಿರುವ ಬಾಲಗಂಗಾಧರರಿಗೆ ವಚನಗಳ ಜಾತಿನಿರಪೇಕ್ಷ ಅಂಶಗಳೇ ಪ್ರಧಾನವಾಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ.

ಹೀಗೆಂದರೆ ನನ್ನ ಮಾತುಗಳು ಪ್ರೊಫೆಸರ್ ಬಾಲಗಂಗಾಧರ ಅವರ ವೈಯಕ್ತಿಕ ನಿಂದನೆಯೆಂದು ಬಗೆಯದೆ ಅವರ ನಿಲುವುಗಳ ಖಂಡನೆಯೆಂದು ಓದುಗರು ಅರ್ಥಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ.

ಪ್ರೊಫೆಸರ್ ಬಾಲಗಂಗಾಧರ ಅವರ ಆಧ್ಯಾತ್ಮಿಕತೆಯ ಬಗೆಗಿನ ವಿಚಾರಗಳನ್ನು ಮುಂದಿನ ಅಂಕಣದಲ್ಲಿ ಚರ್ಚಿಸೋಣ.
 ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT