ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಲೋಕದ ಕಂಟಕಿಗಳು, ಚತುರ ಟೆಕಿಗಳು

Last Updated 1 ಜೂನ್ 2016, 19:47 IST
ಅಕ್ಷರ ಗಾತ್ರ

ಮನಸ್ಸನ್ನು ಕಂಗೆಡಿಸುವ ಒಂದು ವಾರ್ತಾಚಿತ್ರ ಮೊನ್ನೆ ಭಾನುವಾರ ಮೂಡಿಬಂತು: ಅಮೆರಿಕದ ಸಿನ್‌ಸಿನ್ನಾಟಿ ನಗರದ ಮೃಗಾಲಯಕ್ಕೆ ಪಾಲಕರ ಜೊತೆ ಹೋಗಿದ್ದ ನಾಲ್ಕು ವರ್ಷದ ತುಂಟ ಹುಡುಗ ಅಲ್ಲಿನ ಬೇಲಿಯೊಳಕ್ಕೆ ನುಸುಳಿ ಆಚಿನ ಕಂದಕಕ್ಕೆ ಬಿದ್ದುಬಿಟ್ಟ. ಅದು ಗೊರಿಲ್ಲಾಗಳ ಆವರಣದ ಸುತ್ತ ನಿರ್ಮಿಸಿದ ನೀರಿನ ಹಳ್ಳವಾಗಿತ್ತು.

ನೀರು ಮೊಣಕಾಲಿನಷ್ಟಿತ್ತು ಸದ್ಯ. ಹುಡುಗ ಬಿದ್ದಿದ್ದೇ ತಡ, ಭೀಕರ ಆಕೃತಿಯ ಗಂಡು ಗೊರಿಲ್ಲಾ ಬಂದು ಆತನ ಕೈ ಹಿಡಿದು ನೀರಲ್ಲೇ ಎಳೆದು ತುಸು ದೂರ ಒಯ್ದು ತನ್ನ ಮುಂಗಾಲುಗಳ ಬಳಿ ನಿಲ್ಲಿಸಿಕೊಂಡಿತು. ಹುಡುಗ ನಿಬ್ಬೆರಗಾಗಿ ಗೊರಿಲ್ಲಾದ ಕಡೆ ನೋಡುತ್ತಿದ್ದನೇ ವಿನಾ ಓಡಲು ಯತ್ನಿಸಲಿಲ್ಲ, ಕೂಗಿದಂತಿಲ್ಲ. ಇತ್ತ ಅಪ್ಪ ಅಮ್ಮ ಕೂಗುತ್ತ ಕಿರುಚಾಡಿರಬೇಕು. ರಕ್ಷಣಾ ಸಿಬ್ಬಂದಿ ಬಂದು ಗೊರಿಲ್ಲಾನನ್ನು ಗುಂಡಿಕ್ಕಿ ಕೊಂದರು; ಕೊಂದೇಬಿಟ್ಟರು.

ಇಂಥದ್ದೇ ಘಟನೆ ಈಚೆಗಷ್ಟೆ ಚಿಲಿ ದೇಶದ ಮೃಗಾಲಯದಲ್ಲೂ ಘಟಿಸಿತ್ತು. ಅಸ್ವಸ್ಥ ಮನಃಸ್ಥಿತಿಯ ಯುವಕನೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಚೀಟಿ ಬರೆದು, ಸಿಂಹಗಳಿರುವ ಆವರಣಕ್ಕೆ ಧುಮುಕಿ ಬಟ್ಟೆ ಬಿಚ್ಚಿ ಆ ಪ್ರಾಣಿಗಳನ್ನು ಕೆಣಕಲು ಹೋದ. ಎದೆಬಡಿದುಕೊಂಡು ಸಿಂಹನಾದವನ್ನೇ ಮಾಡಿದನೋ ಏನೊ. ಸಹಜವಾಗಿ ಎರಡು ಸಿಂಹಗಳು ಆತನತ್ತ ಬಂದವು. ಅವಕ್ಕಿಂತ ವೇಗವಾಗಿ ದೌಡಾಯಿಸಿ ಬಂದ ರಕ್ಷಣಾ ಸಿಬ್ಬಂದಿ ಆ ಎರಡೂ ಸಿಂಹಗಳನ್ನು ಗುಂಡಿಕ್ಕಿ ಕೊಂದರು.

ನಾಡಿದ್ದು ಜೂನ್ 5ರ ‘ವಿಶ್ವ ಪರಿಸರ ದಿನಾಚರಣೆ’ಯ ಸಂದರ್ಭಕ್ಕೆ ವನ್ಯಜೀವಿಗಳ ರಕ್ಷಣೆಯೇ ಆದ್ಯತೆಯ ವಿಷಯವೆಂದು ವಿಶ್ವಸಂಸ್ಥೆ ಘೋಷಿಸಿದೆ. ವನ್ಯ ‘ಜೀವರಕ್ಷಣೆಗೆ ಜೀವನೋತ್ಸಾಹ’ ಎಂಬರ್ಥದಲ್ಲಿ ಗೋ ವೈಲ್ಡ್ ಫಾರ್ ಲೈಫ್ ಎಂಬ ಘೋಷವಾಕ್ಯವನ್ನು ಈ ವರ್ಷಕ್ಕೆ ನೀಡಲಾಗಿದೆ. ಅದರಲ್ಲೂ ಆಫ್ರಿಕಾದಲ್ಲಿ ಅಪಾರ ಸಂಖ್ಯೆಯಲ್ಲಿ ಗೊರಿಲ್ಲಾಗಳ ಕಗ್ಗೊಲೆ ಆಗುತ್ತಿರುವುದನ್ನು ಪರಿಗಣಿಸಿ ಅಲ್ಲಿನ ಅಂಗೋಲಾವನ್ನೇ ಈ ವರ್ಷದ ಪ್ರಾತಿನಿಧಿಕ ದೇಶವೆಂದು ಪರಿಗಣಿಸಲಾಗಿದೆ.

ಇತ್ತ ನೋಡಿದರೆ ಮೃಗಾಲಯದಲ್ಲಿ ಹಾಯಾಗಿ ಓಡಾಡಿಕೊಂಡಿದ್ದ ಹಾರಾಂಬೆ ಹೆಸರಿನ, 180 ಕಿಲೊ ತೂಕದ ಆ ದಷ್ಟಪುಷ್ಟ ಗೊರಿಲ್ಲಾ ತನ್ನ ಯಾವ ತಪ್ಪೂ ಇಲ್ಲದೆ, ಪ್ರಾಯಶಃ ನೀರಿಗೆ ಬಿದ್ದ ಮಗುವಿನ ರಕ್ಷಣೆಗೆ ಬಂದಿದ್ದಕ್ಕೇ ಗುಂಡೇಟಿಗೆ ಸತ್ತು ಬೀಳಬೇಕಾಯಿತು. ಮಗುವಿನ ರಕ್ಷಣೆ ಮಾಡಿದ ಮುಂಗುಸಿಯನ್ನೇ ಚಚ್ಚಿಕೊಂದ ಕನ್ನಡದ ಹಳ್ಳಿಗಿತ್ತಿಯ ಹಾಡಿನ ವಾಸ್ತವ ರೂಪವೇ ಇದಾಗಿರಬಹುದು.

ಮೂವತ್ತು ವರ್ಷಗಳ ಹಿಂದೆ ಬ್ರಿಟನ್ನಿನ ಜೆರ್ಸಿ ಎಂಬ ಊರಲ್ಲೂ ಇಂಥದ್ದೇ ಘಟನೆ ನಡೆದಿತ್ತು: ಐದು ವರ್ಷದ ಬಾಲಕನೊಬ್ಬ ಗೊರಿಲ್ಲಾ ಆವರಣದ ಹೊರಗೋಡೆಯನ್ನು ಹತ್ತಿ ಬಗ್ಗಿ ನೋಡುತ್ತ ಒಳಕ್ಕೆ ಕಾಂಕ್ರೀಟ್ ಹಳ್ಳಕ್ಕೆ ಬಿದ್ದ. ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡ. ಜಂಬೊ ಹೆಸರಿನ ದಢೂತಿ ಗೊರಿಲ್ಲಾ ಸಮೀಪ ಬಂದು, ಬಾಗಿ ಬಾಲಕನ ಮೈಮೇಲೆ ಮೆಲ್ಲಗೆ ಕೈಯಾಡಿಸಿತ್ತು. ಇತರ ಗೊರಿಲ್ಲಾಗಳು ಸಮೀಪ ಬಾರದಂತೆ ಮಗುವಿಗೆ ರಕ್ಷಣೆ ನೀಡಿತ್ತು.

ಜನರೆಲ್ಲ ಉಸಿರು ಬಿಗಿ ಹಿಡಿದು ನೋಡುತ್ತಿದ್ದಾಗ, ಪ್ರಜ್ಞೆ ಮರಳಿದ ಬಾಲಕ ನರಳತೊಡಗಿದಾಗ, ಜಂಬೊ ತಂತಾನೇ ದೂರ ಹೋಗಿ ನಿಂತು, ಬಾಲಕನ ನೆರವಿಗೆ ಸಿಬ್ಬಂದಿ ಬರಲು ಅನುಕೂಲ ಮಾಡಿಕೊಟ್ಟಿತ್ತು. ಅಂಥ ಸಭ್ಯದೈತ್ಯರ ಕುಲಕ್ಕೆ ಸೇರಿದ ಹಾರಾಂಬೆಯ ದುರ್ವಿಧಿಗೆ ಇಂದು ಸಾವಿರಾರು ಜನರು ಅಶ್ರುತರ್ಪಣ ನೀಡುತ್ತಿದ್ದಾರೆ.

ಮೃಗಾಲಯದೆದುರು ಹೂಗುಚ್ಛ ಇಡುತ್ತಿದ್ದಾರೆ. ಮಗುವನ್ನು ಹದ್ದುಬಸ್ತಿನಲ್ಲಿ ಇಡಲಾಗದ ತಾಯಿಗೆ ಶಾಪ ಹಾಕುತ್ತಿದ್ದಾರೆ. ಗುಂಡಿಕ್ಕಿ ಕೊಲ್ಲುವ ಬದಲು ಹಾರಾಂಬೆಗೆ ಪ್ರಜ್ಞೆ ತಪ್ಪಿಸುವ ಚುಚ್ಚುಬಾಣ ಪ್ರಯೋಗಿಸಿ ಆತನನ್ನು ಮಲಗಿಸಲು ಸಾಧ್ಯವಿತ್ತಲ್ಲವೆ? ಹಾಗೆ ಮಾಡುವಂತಿಲ್ಲವಂತೆ; ಏಕೆಂದರೆ ಈಗಿರುವ ಯಾವ ಅರಿವಳಿಕೆ ಮದ್ದೂ ತಕ್ಷಣ ಪರಿಣಾಮ ಬೀರುವುದಿಲ್ಲ. ಆರೆಂಟು ನಿಮಿಷಗಳೇ ಬೇಕಾಗುತ್ತವೆ.

‘ಮದ್ದು ತಲೆಗೇರುವ ಮೊದಲೇ ಮಗುವಿಗೆ ಅಪಾಯ ಬರಲು ಸಾಧ್ಯವಿತ್ತು’ ಎಂದು ಸಿನ್‌ಸಿನ್ನಾಟಿ ಮೃಗಾಲಯದ ಮುಖ್ಯಸ್ಥ ಹೇಳಿಕೆ ನೀಡಿದ್ದಾರೆ. ದಾಳಿ ಸಾಧ್ಯತೆಯಿದ್ದಾಗ ಪ್ರಾಣಿಯನ್ನು ತಕ್ಷಣ ಕೊಲ್ಲಬೇಕೆಂದು ಮೃಗಾಲಯದ ತುರ್ತು ನಿರ್ವಹಣೆಯ ನಿಯಮಗಳೇ ಹೇಳುತ್ತವಂತೆ.

ಅದ್ಯಾವ ಓಬೀರಾಯನ ನಿಯಮವೊ, ಈಗಂತೂ ಎದುರಾಳಿಯನ್ನು ಮಿಂಚಿನಂತೆ ಕೆಡವಬಲ್ಲ ಟೇಸರ್ ಗನ್‌ಗಳು (ಅದಕ್ಕೆ ಸ್ಟನ್‌ಗನ್ ಎಂತಲೂ ಹೇಳುತ್ತಾರೆ) ಬಳಕೆಗೆ ಬಂದಿವೆ. ಶೂಟ್ ಮಾಡುತ್ತಲೇ ಈ ಪಿಸ್ತೂಲಿನಿಂದ ಬಲವಾದ ವಿದ್ಯುತ್ ಆಘಾತ ಚಿಮ್ಮಿ ಎದುರಾಳಿಯನ್ನು ಬೀಳಿಸುತ್ತದೆ.

ತತ್‌ಕ್ಷಣವೇ ಪ್ರಜ್ಞೆತಪ್ಪಿ ಬಿದ್ದ ಪ್ರಾಣಿ ಒಂದರ್ಧ ಗಂಟೆಯ ನಂತರ ನಿಧಾನಕ್ಕೆ ಏಳುತ್ತದೆ. ಅಂಥ ಸ್ಟನ್ ಗನ್‌ಗಳನ್ನು ಮೃಗಾಲಯದವರು ಇಟ್ಟುಕೊಳ್ಳಬಾರದೆ? ಅವರು ಇಟ್ಟುಕೊಳ್ಳಲಿಕ್ಕಿಲ್ಲ. ಆದರೆ ಆಫ್ರಿಕಾದ ಕಾಡುಗಳಲ್ಲಿ ಗೊರಿಲ್ಲಾಗಳ ಬೇಟೆಗೆ ಹೋಗುವ ದುಷ್ಕರ್ಮಿಗಳ ಬಳಿ ಇಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇರುತ್ತವೆ. ಎಲ್ಲ ಕಡೆ ಹಾಗೇ ತಾನೆ? ಮನುಷ್ಯನ ಅನುಕೂಲಕ್ಕೆಂದು ರೂಪುಗೊಂಡ ಎಲ್ಲ ತಾಂತ್ರಿಕ ಸಾಧನಗಳೂ ಜೀವಲೋಕಕ್ಕೆ ಮಾರಕವಾಗುತ್ತಲೇ ಹೋಗುತ್ತವೆ.

ಇಲೆಕ್ಟ್ರಿಕ್ ಗರಗಸ, ಜೆಸಿಬಿ ಬಂದಿದ್ದೇ ತಡ- ಲಕ್ಷಾಂತರ ಎಕರೆ ಅರಣ್ಯಗಳು ನೆಲಸಮಗೊಂಡು ವನ್ಯಜೀವಿಗಳ ಮಾರಣಹೋಮ ನಡೆದು ಅಲ್ಲಿ ಸೊಯಾಬೀನ್, ನೀಲಗಿರಿ, ಅಕೇಶಿಯಾ, ತಾಳೆಣ್ಣೆಯ ತೋಟಗಳಾದವು. ಕಡುಗತ್ತಲಲ್ಲೂ ಮೃಗಗಳನ್ನು ಗುರುತಿಸಬಲ್ಲ ಇನ್‌ಫ್ರಾ ರೆಡ್ ಕ್ಯಾಮರಾಗಳು ಬಂದು, ಅವು ವನ್ಯಪ್ರೇಮಿಗಳ ಹೆಗಲಿ ಗೇರುವ ಮೊದಲೇ ಬೇಟೆಗಾರರ ಬಂದೂಕಿನ ಮೇಲೆ ಏರಿ ಕೂತವು.

ಸ್ಫೋಟಕಗಳು, ವಿದ್ಯುತ್ ಬೇಲಿಗಳು, ಡಾರ್ಟರ್ ಬಾಣಗಳು ಆಳ ಸಮುದ್ರದಿಂದ ಹಿಡಿದು ಹಿಮಗಿರಿಯವರೆಗಿನ ಮುಗ್ಧಜೀವಿಗಳಿಗೆ ಕೊಲೆಕುಣಿಕೆಗಳಾದವು. ದುರ್ಗಮ ಪ್ರದೇಶಗಳನ್ನು ಆಕಾಶದಿಂದ ತೋರಿಸಬಲ್ಲ ಗೂಗಲ್ ಅರ್ಥ್, ಜಿಪಿಎಸ್ ಎಲ್ಲ ಬಂದ ನಂತರವೇ ಘೇಂಡಾಮೃಗಗಳ ಹತ್ಯೆಯ ಪ್ರಮಾಣ ಹೆಚ್ಚುತ್ತ ಹೋಯಿತು.

ಆಫ್ರಿಕಾದ ಕಾಂಗೊ, ರುವಾಂಡಾ, ಉಗಾಂಡಾ, ಅಂಗೋಲಾಗಳಲ್ಲಿ ಗಡಿಜಗಳ, ಜನಾಂಗೀಯ ಕಾದಾಟಕ್ಕೆಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರೈಕೆ ಹೆಚ್ಚಿದಷ್ಟೂ ಗೊರಿಲ್ಲಾ, ಚಿಂಪಾಂಜಿ, ಸೇಬರ್ ಜಿಂಕೆಗಳ ಮಾರಣಹೋಮ ನಡೆಯುತ್ತಿದೆ.

ಅಂಗೋಲಾದ ಕಾಡುಗಳಲ್ಲಿ ಮಾತ್ರ ವಾಸಿಸುವ, ಮಾರುದ್ದ ಕೋಡುಗಳ ಸುಂದರ ಸೇಬರ್ ಜಿಂಕೆಗಳ ಸಂಖ್ಯೆ ಇನ್ನೂರಕ್ಕೂ ಕೆಳಕ್ಕಿಳಿದಿದೆ. ಅವು ಎಷ್ಟಿವೆಯೆಂದು ಲೆಕ್ಕ ಮಾಡಲೆಂದು ಕ್ಯಾಮರಾ ಟ್ರ್ಯಾಪ್ ಹೂಡಿಟ್ಟು, ಮೂರು ವಾರಗಳ ಬಳಿಕ ಚಿತ್ರ ತೆಗೆದು ನೋಡಿದರೆ ಅದರಲ್ಲೂ ಕಳ್ಳಬೇಟೆಗಾರರೇ ಕಂಡರೇ ವಿನಾ ಸೇಬರ್ ಸಿಗಲಿಲ್ಲ.

ತುಸು ನೆಮ್ಮದಿಯ ಸಂಗತಿ ಏನೆಂದರೆ ಈಚೀಚೆಗೆ ಟೆಕಿಗಳಿಗೆ ಮಾತ್ರವೇ ಎಟುಕಬಲ್ಲ ನಾನಾ ಬಗೆಯ ಡಿಜಿಟಲ್ ಸಾಧನಗಳು ವನ್ಯರಕ್ಷಣೆಗೆ ಬರುತ್ತಿವೆ. ಅಂಗೋಲಾದಲ್ಲೇ ಕಾಡುಮೇಡುಗಳ ಮೇಲೆ ಹೆಲಿಕಾಪ್ಟರ್‌ಗಳನ್ನು ಸುತ್ತಾಡಿಸಿ ಸೇಬರ್ ಜಿಂಕೆಗಳಿಗೆ ಅರಿವಳಿಕೆ ಬಾಣ ಹೊಡೆದು ಬೀಳಿಸಿ, ಅವುಗಳ ಕತ್ತಿಗೆ ರೇಡಿಯೊ ಕಾಲರ್ ಹಾಕುತ್ತಾರೆ. ಈ ಕಾಲರ್‌ಗಳೋ ತುಂಬಾ ಚತುರಬಿಲ್ಲೆಗಳು. ಪ್ರಾಣಿಯ ಓಡಾಟವನ್ನಷ್ಟೇ ಅಲ್ಲ, ಅವುಗಳ ಎಲ್ಲ ಬಗೆಯ ವರ್ತನೆಗಳನ್ನೂ, ಕುಣಿಕೆಗೆ ಬಿದ್ದುದನ್ನೂ ವರದಿ ಮಾಡುತ್ತವೆ.

ಕೆನ್ಯಾದಲ್ಲಿ ಕಾಡಾನೆಗಳಿಗೆ ಅಂಟಿಸುವ ಚುರುಕು ಚೀಟಿಗಳು ಎಸ್ಸೆಮ್ಮೆಸ್ ಕೂಡ ಕಳಿಸುತ್ತವೆ. ಸುತ್ತಲಿನ ಹಳ್ಳಿಗಳ ರೈತರಿಗೆ ಆನೆ ದಾಳಿಯ ಮುನ್ಸೂಚನೆಯನ್ನು ಫೋನ್ ಮೂಲಕ ಆನೆಗಳೇ ಕೊಡಲಿವೆ, ಕಾದು ನೋಡಿ. ಇನ್ನು ಹುಲಿ, ಹೆಬ್ಬಾವು, ಸಿಂಹ, ಕರಡಿಗಳಂಥ ಪ್ರಾಣಿಗಳ ತೀರ ಸಮೀಪ ತೆವಳುತ್ತ ಸಾಗುವ ಪುಟ್ಟ ರೋಬಾಟ್‌ಗಳನ್ನು ನಾವು ಆಗಲೇ ನೋಡಿದ್ದೇವೆ. ಅವು ಧ್ವನಿಗ್ರಹಣ, ವಿಡಿಯೊಗ್ರಹಣ ಮಾಡಿ, ದೂರದಲ್ಲಿ ಕೂತವರಿಗೆ ರವಾನೆ ಮಾಡುತ್ತವೆ. (ಅಳಿಲೊಂದು ಕುತೂಹಲ ತಾಳದೆ ಅಂಥ ಪುಟ್ಟ ಸಾಧನವನ್ನು ಕಚ್ಚಿಕೊಂಡು ಮರದ ಮೇಲಕ್ಕೆ ಏರಿ ಅಲ್ಲಿಂದಲೂ ವಿಡಿಯೊ ರೆಕಾರ್ಡಿಂಗ್ ಮಾಡಿ ರವಾನಿಸಿದ್ದನ್ನೂ ಯೂಟ್ಯೂಬ್‌ನಲ್ಲಿ ನೋಡಬಹುದು).

ಕಾಡಿನಲ್ಲಿ ಹೊಮ್ಮುವ ನೂರಾರು ಬಗೆಯ ಸದ್ದುಗಳನ್ನು ಗ್ರಹಿಸಿ, ಅಲ್ಲಿ ಯಾವ ಯಾವ ಪಕ್ಷಿ, ಜೀರುಂಡೆ, ಕಪ್ಪೆ, ಕೆಂದಳಿಲು ಇವೆಯೆಂಬುದನ್ನು ಪ್ರತ್ಯೇಕಿಸಿ ಪಟ್ಟಿ ಮಾಡಿ ವರದಿ ಕೊಡುವ ಸಾಫ್ಟ್‌ವೇರ್‌ಗಳೂ ಸಿದ್ಧವಾಗಿವೆ. ಅಂಥ ರೆಕಾರ್ಡರ್‌ಗಳನ್ನು ಅರಣ್ಯದಲ್ಲಿ ಒಂದಿಡೀ ರಾತ್ರಿ ಇಟ್ಟು, ಮರುದಿನ ಲ್ಯಾಬಿಗೆ ತಂದರೆ ಸಾಕು.

ಕಾಡಿನ ಕ್ಷೇತ್ರಾಧ್ಯಯನ ತಜ್ಞರು ತಿಂಗಳ ಕೆಲಸವನ್ನು ಒಂದೇ ದಿನದಲ್ಲಿ ಮಾಡಿ ಮುಗಿಸಬಹುದು, ಕರಾರುವಾಕ್ಕಾಗಿ. ಐಬಿಎಮ್ ಕಂಪನಿ ಸೃಷ್ಟಿಸಿದ ಪ್ರೆಡಿಕ್ಟಿವ್ ಅನಾಲಿಟಿಕ್ಸ್ ಎಂಬ ಸಾಫ್ಟ್‌ವೇರ್ ಬಳಸಿ ಒಂದಿಡೀ ವನ್ಯ ಸಮುದಾಯದ ಎಲ್ಲ ಜೀವಿಗಳ ಸಮಗ್ರ ಚಿತ್ರಣವನ್ನು ಪಡೆಯಬಹುದು.

ಸುತ್ತ ವಾಸಿಸುವ ಮನುಷ್ಯರ ಚರ್ಯೆಗಳನ್ನೂ ಅದು ವಿಶ್ಲೇಷಣೆ ಮಾಡಿ ವನ್ಯ ಸಂರಕ್ಷಣೆಯ ಯೋಗ್ಯ ವಿಧಾನಗಳನ್ನು ಸೂಚಿಸುತ್ತದೆಂಬ ಅಗ್ಗಳಿಕೆ ಅದರದ್ದು. ಇನ್ನು, ಗುಂಗೀಹುಳದಂತೆ ಅಂತರಿಕ್ಷದಲ್ಲಿ ಸುತ್ತಬಲ್ಲ ಡ್ರೋನ್‌ಗಳನ್ನು ಬಳಸಿ ಅಳಿವಿನಂಚಿನ ಜೀವಿಗಳ ವನ್ಯ ಸಮೀಕ್ಷೆಗೆ ಬಳಸಿಕೊಳ್ಳುವ ನಾನಾ ಸಾಧ್ಯತೆಗಳು ಕಾಣತೊಡಗಿವೆ.

ಡ್ರೋನ್‌ಗಳ ಪ್ರಪಂಚದಲ್ಲಿ ಮಹಾಕ್ರಾಂತಿ ಆಗುತ್ತಿದೆ. ಅವು ಇನ್ನೂ ಏನೇನು ಮಾಡುತ್ತವೆ ಎಂಬುದಕ್ಕೆ ಪ್ರತ್ಯೇಕ ಅಂಕಣವೇ ಬೇಕಾಗುತ್ತದೆ, ಮುಂದೊಮ್ಮೆ ನೋಡೋಣ.

ಸದ್ಯದ ಕತೆ ಏನೆಂದರೆ, ಸಮುದ್ರದಲ್ಲಿ ತಿಮಿಂಗಿಲಗಳ ತೀರ ಸಮೀಪ ಸಾಗಿ ಅವು ಸೀನಿದಾಗ ಸಿಂಬಳವನ್ನು ಸಂಗ್ರಹಿಸಿ ತರಬಲ್ಲ ಪುಟ್ಟ ಡ್ರೋನ್‌ಗಳೂ ಸಿದ್ಧವಾಗಿವೆ.

ಡಿಜಿಟಲ್ ಅಲ್ಲದ ಇತರ ತಂತ್ರಗಳೂ ಸಾಕಷ್ಟಿವೆ: ಮೀನು ಹಿಡಿಯುವ ಭಾರೀ ಬಲೆಗಳಿಗೆ ಶಾರ್ಕ್‌ಗಳು ಅನಗತ್ಯವಾಗಿ ಸಿಕ್ಕಿ ಬೀಳದಂತೆ ಅವುಗಳನ್ನು ದೂರ ಓಡಿಸಬಲ್ಲ ಇಲೆಕ್ಟ್ರಿಕ್ ಕೊಂಡಿಗಳು ಸಿದ್ಧವಾಗಿವೆ. ಡಾಲ್ಫಿನ್‌ಗಳು ವಿನಾಕಾರಣ ಪ್ಲಾಸ್ಟಿಕ್ ಸಿಕ್ಸ್‌ಪ್ಯಾಕ್ ಕುಣಿಕೆಗಳಿಗೆ ಸಿಕ್ಕಿ ಸಾಯದಂತೆ ಇದೀಗ ಭಕ್ಷ್ಯಯೋಗ್ಯ ಕುಣಿಕೆಗಳನ್ನೇ ತಯಾರಿಸುತ್ತೇವೆಂದು ಕ್ಯಾಲಿಫೋರ್ನಿಯಾದ ಬಿಯರ್ ಕಂಪೆನಿಯೊಂದು ಮೊನ್ನೆ ಘೋಷಿಸಿದೆ. ಗೋಧಿ, ಜೋಳದ ಹಿಟ್ಟಿನ ಪ್ಲಾಸ್ಟಿಕ್ ಕುಣಿಕೆಗಳು.

ಅದಿರಲಿ, ಸತ್ತು ನಿರ್ವಂಶವಾದ ಜೀವಿಗಳ ಒಣ ಮೂಳೆಗಳಿಂದ ಅಂಥದೇ ಜೀವಿಯ ಮರುಸೃಷ್ಟಿ ಮಾಡುವ ‘ಡಿ-ಎಕ್ಸ್‌ಟಿಂಕ್ಷನ್’ (ಅನಿರ್ವಂಶ) ಯೋಜನೆಯೂ ಪ್ರಗತಿಯಲ್ಲಿದೆ.

ಅಂತೂ ವನ್ಯಜೀವಿಗಳ ಅಧ್ಯಯನಕ್ಕೆ, ರಕ್ಷಣೆಗೆ ಹೇರಳ ಹೈಟೆಕ್ ತಂತ್ರಗಳು ರೂಪುಗೊಳ್ಳುತ್ತಿವೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಟ್ರೀಹಗ್ಗರ್ ಡಾಟ್ ಕಾಮ್ ನೋಡಬಹುದು.

ಕಾಲೇಜು ಓದುವವರಿಗೆ ಮಾಸ್ಟರ್ ಡಿಗ್ರಿ ಮಟ್ಟದಲ್ಲಿ ಸಂಶೋಧನೆಗೂ ಹೊಸಹೊಸ ದಾರಿಗಳು, ಹೆಚ್ಚಿನ ಧನಸಹಾಯ, ವಿದೇಶೀ ಅವಕಾಶಗಳೆಲ್ಲ ಸಿಗುತ್ತಿವೆ. ವನ್ಯ ಸಂರಕ್ಷಣೆಯನ್ನೇ ವೃತ್ತಿಯಾಗಿ ಆಯ್ದುಕೊಂಡರೆ ದಿನವೂ ಎಷ್ಟೊಂದು ಮೋಜು, ಎಷ್ಟೊಂದು ಥ್ರಿಲ್, ಏನೆಲ್ಲ ತಮಾಷೆಗಳಿರುತ್ತವೆ; ಪ್ರಾಯಶಃ ಒಂದೇ ಒಂದು ಡಲ್ ದಿನವೂ ಇರುವುದಿಲ್ಲ ಎನ್ನುತ್ತಾರೆ, ವನ್ಯ ಸಂರಕ್ಷಕ ಸಂಜಯ್ ಗುಬ್ಬಿ.

ಆದರೂ ಅವೆಲ್ಲ ಡಿಗ್ರಿ ಮುಗಿಸಿದ ನಂತರವಷ್ಟೆ? ನಮಗಿಂದು ಎಳೇ ಪ್ರಾಯದವರಲ್ಲಿ ವನ್ಯಪ್ರೇಮವನ್ನು ಬಿತ್ತಬಲ್ಲ ಶಿಕ್ಷಕರು, ಪಾಲಕರು ಬೇಕಾಗಿದ್ದಾರೆ. ವಿಪರ್ಯಾಸ ಏನೆಂದರೆ ಕಾಡಂಚಿನಲ್ಲಿರುವ ಶಾಲೆಗಳನ್ನೇ ಸರ್ಕಾರ ಮುಚ್ಚಿಸುತ್ತಿದೆ; ಹಳ್ಳಿಹಳ್ಳಿಗಳಲ್ಲಿ ಇಂಗ್ಲಿಷ್ ಮಾಧ್ಯಮ ಬಂದಿದ್ದರಿಂದ ಸ್ಥಳೀಯ ಜಾನಪದ ಪದಸಂಪತ್ತೇ ಕಣ್ಮರೆಯಾಗುತ್ತಿದೆ.

ಕಣ್ಣಿದ್ದೂ ಕಾಣದ ಕುರುಡತನ ಆವರಿಸುತ್ತಿದೆ. ವನ್ಯರಕ್ಷಣೆಗೆ ಆತ್ಮಬಲವಲ್ಲ, ಆ್ಯಪ್ ಬಲವೊಂದಿದ್ದರೆ ಯಾವ ವಯಸ್ಸಲ್ಲಾದರೂ ಧುಮುಕಬಹುದೆಂಬ ಹುಂಬ ಮಾತುಗಳು ಕೇಳಬರುತ್ತವೆ.

ಆ್ಯಪ್ ಬೇಕು, ತಂತ್ರಜ್ಞಾನ ಬೇಕು ನಿಜ. ಆದರೆ ಕೇವಲ ಯುಕ್ತಿಯಿಂದಲೂ ಶಕ್ತಿವಂತ ಪ್ರಾಣಿಗಳನ್ನು ನಿಭಾಯಿಸಲು ಸಾಧ್ಯವಿದೆ. ಉದಾಹರಣೆ: ಆನೆಗಳಿಗೆ ಜೇನ್ನೊಣ ಕಂಡರೆ ತುಂಬಾ ಭಯ ತಾನೆ? ಪದೇಪದೇ ಆನೆ ದಾಳಿಗೆ ಬೇಸತ್ತ ಆಫ್ರಿಕದ ರೈತನೊಬ್ಬ ತನ್ನ ಬೇಲಿಯ ಸುತ್ತ ಜೇನುಗೂಡುಗಳನ್ನು ಸಾಕಿದ್ದಾನೆ.

ಹಾಗೆಂದು ನೂರಾರು ಜೇನನ್ನು ಆತ ಸಾಕಿಕೊಂಡಿಲ್ಲ. ಬಗಿನೆ ಮರದಂಥ ಮಾರುದ್ದದ ಟೊಳ್ಳು ದಿಮ್ಮಿಗಳಲ್ಲಿ ಜೇನು ಸಾಕಿದ್ದಾನೆ. ಅವನ್ನು ಉದ್ದುದ್ದ ಹಗ್ಗದ ಮೂಲಕ ತೂಗುಹಾಕಿದ್ದಾನೆ. ಐದಾರು ಅಂಥ ಬಗಿನೆ ಜೇನುಗಳಿದ್ದರೆ ನೂರು ಮೀಟರ್ ಉದ್ದದ ಗಜಬಂದಿ ಬೇಲಿ ಸಿದ್ಧವಾಗುತ್ತದೆ. ಹಾಗೆಂದು ಆನೇಕಲ್ ಸುತ್ತಲಿನ ರೈತರು ಈ ಪ್ರಯೋಗಕ್ಕೆ ಕೈ ಹಾಕುವ ಮುನ್ನ ತುಸು ಹುಷಾರಾಗಿರಿ. ಆನೆಗಳ ಬದಲು, ಜೇನೆಂದರೆ ಜೊಲ್ಲು ಸುರಿಸುವ ಕರಡಿಗಳು ಬಂದಾವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT