ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ ಕೊಟ್ಟ ದೇವರು

Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ಗಣಿತ ಪಿರಿಯಡ್ ಬಂತೆಂದರೆ ಚಳಿಜ್ವರಗಳು ಒಟ್ಟಿಗೆ ವಕ್ಕರಿಸುತ್ತಿದ್ದವು. ಗಣಿತ ಮೇಷ್ಟ್ರ ಕೈಲಿ ಹೊಡೆತ ತಿಂದು ಸಾಯಲೆಂದೇ ಆ ದೇವರು ನಮ್ಮನ್ನು ಸೃಷ್ಟಿಸಿದ್ದಾನೆಂದೆ ನಾವೆಲ್ಲಾ ನಂಬಿದ್ದೆವು. ಪ್ರತಿ ಪಿರಿಯಡ್‌ನ ಹೊಡೆತಗಳು ನಮ್ಮ ಈ ನಂಬಿಕೆಯನ್ನು ಹೆಚ್ಚು ಗಟ್ಟಿ ಮಾಡಿದ್ದವು.

ದುರಿನ ಬೆಂಚುಗಳಲ್ಲಿ ಕೂತಿದ್ದರೆ ಹೊಡೀತಾರೆ ಅಂತ ಹೆದರಿ ನಾವೊಂದಿಷ್ಟು ಹುಡುಗರು ಹಿಂದಿನ ಬೆಂಚಿನಲ್ಲಿ ಕೂರುತ್ತಿದ್ದೆವು. ಗಣಿತ ಮೇಷ್ಟ್ರ ಉಗ್ರಕೋಪ ನಮನ್ನು ಬೆನ್ನತ್ತಿ ಅಲ್ಲಿಗೇ ಬರುತ್ತಿತ್ತು. ಅವರು ಕ್ಲಾಸಿಗೆ ಬಂದ ತಕ್ಷಣ ಅದೇಕೋ ಪ್ರಶ್ನೆಗಳನ್ನು ಮೊದಲು ಕೇಳುತ್ತಿದ್ದದ್ದೇ ನಮ್ಮನ್ನು. ಕಾಯಂ ಉತ್ತರ ಗೊತ್ತಿಲ್ಲದ ನಾವು ಮರು ಮಾತಿಲ್ಲದೆ ಕೈಯನ್ನು ಚಾಚಿ ಕಣ್ಣು ಮುಚ್ಚಿ ನಿಲ್ಲುತ್ತಿದ್ದೆವು. ಆಮೇಲೆ ಮುಂಗಾರು ಮಳೆ ಇದ್ದದ್ದೆ.

ದೇವರೇ, ಗಣಿತದ ರಾಮಲಿಂಗಾಚಾರ್ರು ಇವತ್ತು ಬರೋದು ಬೇಡಪ್ಪ. ಬರುವಾಗ ಅವರ ಸೈಕಲ್ ಪಂಕ್ಚರ್ ಆಗಲಿ. ಇಲ್ಲ, ಟೈರಿಗೆ ಒಂದು ಗುಂಡಿ ಸಿಕ್ಕು ಅವರು ಅಲ್ಲೇ ಬಿದ್ದೇ ಹೋಗಲಿ. ಸಾಧ್ಯವಾದರೆ ನಮ್ಮನ್ನು ಹೊಡೆಯುವ ಅವರ ಬಲಗೈ ಮುರಿದು ಹೋಗಲಿ, ಮಳೆ ಬಂದು ಅವರ ಮನೆ ಕೊಚ್ಚಿಹೋಗಿ ದೊಡ್ಡಕೆರೆ ಸೇರಲಿ ಎಂದೆಲ್ಲಾ ಪ್ರಾರ್ಥಿಸುತ್ತಿದ್ದೆವು. ಆ ಹಾಳಾದ ದೇವರು ನಮ್ಮ ಮಾತನ್ನು ಕೇಳಿದ್ದೇ ಕಡಿಮೆ. ಬೇಡ ಬೇಡವೆಂದು ನಾವು ಬೇಡಿಕೊಳ್ಳುವಾಗಲೇ ಅವರು ಪ್ರತ್ಯಕ್ಷರಾಗಿರುತ್ತಿದ್ದರು.

ಮೇಷ್ಟ್ರು ರಾಮಲಿಂಗಾಚಾರ್ರಿಗೆ ಇದ್ದ ಸಿಟ್ಟು ಅದೆಷ್ಟು ಪ್ರಮಾಣದ್ದು ಅನ್ನೋದು ವಿವರಿಸೋದೆ ಕಷ್ಟ. ಅವರ ರಕ್ತನಾಳಗಳಲ್ಲಿ ಬಿ.ಪಿ. ಟನ್ನುಗಟ್ಟಲೆ ತುಂಬಿ ಹೋಗಿತ್ತು. ಅವರೇನು ದಿನಾ ಹೆಂಡ್ತಿ ಹತ್ರ ಜಗಳ ಮಾಡ್ಕೊಂಡು ಬಂದು ಆ ಸೇಡನ್ನ  ನಮ್ಮ ಮೇಲೆ ತೀರಿಸಿಕೊಳ್ತಿದ್ರೋ ಏನೋ ಗೊತ್ತಿಲ್ಲ.

ಒಟ್ಟಾರೆ ನಾನಾ ಬಗೆಯ ಚಿತ್ರ ಹಿಂಸೆಯ ಶಿಕ್ಷೆಗಳನ್ನು ಕೊಡುತ್ತಿದ್ದರು. ಕೋಲಲ್ಲಿ ಮುಖ ಮೂತಿಗೆ ಬಾರಿಸುವುದು, ಕೆನ್ನೆ, ಕಿವಿ ಹಿಂಡುವುದು, ಕೈಯನ್ನು ಮೇಜಿನ ಮೇಲಿರಿಸಿ ಬೆರಳಿನ ಮೂಳೆಗಳು ಲಟಾರ್ ಎನ್ನುವಂತೆ ಹೊಡೆಯುವುದು, ಕಿವಿ ಹಿಡಿದು ಬಗ್ಗಿ ನಿಲ್ಲುವಂತೆ ಹೇಳುವುದು, ಹಾಗೆ ಬಗ್ಗಿ ನಿಂತಾಗ ಚೆಂದದಿಂದ ಕಾಣುವ ಕುಂಡೆಗಳ ಮೇಲೆ ಬಿಗಿಯುವುದು ಮಾಡುತ್ತಿದ್ದರು. ನಮಗೆ ಈ ಶಿಕ್ಷೆಗಳು ಮೊದಲಿಗೆ ಕಷ್ಟ ಅನ್ನಿಸಿದರೂ, ಆಮೇಲೆ ಅದನ್ನು ಸಹಿಸಿಕೊಳ್ಳುವ ಒಂದಿಷ್ಟು ಶಕ್ತಿಯನ್ನು ಹೇಗೋ ಬೆಳೆಸಿಕೊಂಡುಬಿಟ್ಟೆವು.

ಇದಾದ ನಂತರ ಅವರೊಂದು ಹೊಸ ಬಗೆಯ ಶಿಕ್ಷೆಯನ್ನು ಸಂಶೋಧಿಸಿದರು. ಆ ಶಿಕ್ಷೆ ಮಾತ್ರ ಭಯಂಕರವಾಗಿತ್ತು. ಯಮ ಯಾತನೆಯದು. ನೆನೆಸಿಕೊಂಡರೆ ಈಗಲೂ ಚಳಿ ಜ್ವರ ಬರುತ್ತೆ. ಅಂಥ ಘನಘೋರವದು. ಅದರ ಕ್ರಮ ಹೀಗಿತ್ತು: ನಮ್ಮ ಎರಡೂ ಕಿವಿಗಳನ್ನು ಹಿಡಿದು ಮೊದಲು ಬಿಗಿಯಾಗಿ ಹಿಂಡುವುದು. ನಂತರ ಹಿಂಡಿದ ಕಿವಿಗಳ ಮೇಲೆ ಇಡೀ ದೇಹದ ಭಾರ ಬೀಳುವಂತೆ ಅನಾಮತ್ತಾಗಿ ಹಿಡಿದೆತ್ತುವುದು. ತಕ್ಕಡಿಯಂತೆ ಎತ್ತಿ ಹಿಡಿದು ಆಮೇಲೆ ಧಡಾರಂತ ನೆಲಕ್ಕೆ ಬಿಟ್ ಬಿಸಾಕೋದು. ಈ ಶಿಕ್ಷೆಯನ್ನೂ ಅದರ ಅಸಾಧ್ಯ ನೋವನ್ನು ತಾಳಿಕೊಳ್ಳುವ ಶಕ್ತಿ ಮತ್ತು ಧೈರ್ಯ ನಮಗ್ಯಾರಿಗೂ ಇರಲೇ ಇಲ್ಲ. ಈ ಕಾರಣಕ್ಕೆ ಏನೋ ಈ ಶಿಕ್ಷೆ ಮುಗಿದ ಮೇಲೆ ಚೆಡ್ಡಿಗಳು ಕಡ್ಡಾಯ ಒದ್ದೆಯಾಗಿರುತ್ತಿದ್ದವು. ಹೀಗಾಗಿ, ಇವತ್ತಿಗೂ ಮ್ಯಾಥ್ಸ್ ಎಂದರೆ ಅದೇನೋ ಒಂಥರ ಹೆದರಿಕೆ.

ನಮಗೆ ಅವರು ಕಲಿಸಿದ ಲೆಕ್ಕಗಳಿಗಿಂತಲೂ ಹೊಡೆದ ಲೆಕ್ಕದ ನೆನಪುಗಳೇ ಹೆಚ್ಚಾಗಿ ಉಳಿದಿವೆ. ಇಷ್ಟೊಂದು ಕಷ್ಟಪಟ್ಟು ಹೊಡೆತ ತಿಂದು ಓದುವ ಬದಲಿಗೆ ಶಾಲೆಯಿಂದ ತಪ್ಪಿಸಿಕೊಂಡು ಓಡಿಹೋಗುವುದೇ ಸರಿಯಾದ ಮಾರ್ಗವೆಂದು ಲಾಸ್ಟ್ ಬೆಂಚಿನ ನಾವೆಲ್ಲಾ ಸೇರಿ ನಿರ್ಣಯ ಮಾಡುತ್ತಿದ್ದೆವು. ನಿರ್ಣಯದಂತೆ ನಿರ್ಧರಿಸಿ ಒಂದು ಸಲ ಚಕ್ಕರ್ ಸುತ್ತಿದೆವು. ಅದರ ಪರಿಣಾಮ: ಮೊದಲು ಮನೆಯಲ್ಲಿ ಒದೆ ಮತ್ತೆ ಹೆಡ್‌ಮೇಷ್ಟ್ರು ರೂಲ್ ದೊಣ್ಣೆ ಒದೆ, ಕೊನೆಗೆ ಗಣಿತದ ಒದೆ. ಹೀಗೆ ಒದೆಗಳ ಸಂಖ್ಯೆ ಸಂಕಲನವಾಯಿತೇ ಹೊರತು ಯಾವತ್ತೂ ನಮ್ಮ ಪಾಲಿಗೆ ವ್ಯವಕಲನವಾಗಲಿಲ್ಲ.

ನಮ್ಮ ಶಾಲೆಯಲ್ಲಿ ನಮ್ಮ ಮನಸ್ಸನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದ ಏಕೈಕ ಜೀವವೆಂದರೆ ಅದು ಲಾಂಗ್‌ಬೆಲ್. ಆ ಲಾಂಗ್‌ಬೆಲ್ ಸದ್ದು ಕಿವಿಗೆ ಬಿದ್ದ ತಕ್ಷಣ ಅದೇನು ಸಂಭ್ರಮ? ಅದೆಂಥ ಬಿಡುಗಡೆಯ ಭಾಗ್ಯ! ಛೇ! ವರ್ಣಿಸಲು ಅಸಾಧ್ಯ. ಹೀಗಾಗಿ, ಇವತ್ತಿಗೂ ಲಾಂಗ್‌ಬೆಲ್ ಎಂದರೆ, ಕೇಳಲು ಪರಮಸುಖ ಎನ್ನಿಸುತ್ತೆ. ಎಲ್ಲದರಿಂದ ಬಿಡುಗಡೆ ಸಿಕ್ಕಷ್ಟು ನಿರಾಳ ಅನ್ನಿಸುತ್ತೆ.

ನಮ್ಮದು ಸರ್ಕಾರಿ ಪ್ರಾಥಮಿಕ ಶಾಲೆ. ಹೀಗಾಗಿ ಊರ ಜನ ಓಡಾಡುವ ಮುಖ್ಯ ರಸ್ತೆಗೆ ಅದು ತಾಗಿಕೊಂಡಿತ್ತು. ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ದೊಡ್ಡ ದೊಡ್ಡ ಕಿಟಕಿಗಳಾದ ಕಾರಣ ಇಡೀ ಊರಿನ ಉಸಾಬರಿಯನ್ನೇ ಕ್ಲಾಸಿನಲ್ಲಿ ಕೂತು ನೋಡಬಹುದಿತ್ತು. ಲೀಸರ್ ಪಿರಿಯಡ್‌ನಲ್ಲಿ ನಮ್ಮ ಮುಖಗಳೆಲ್ಲಾ ಆ ಕಿಟಕಿಗೆ ಫಿಕ್ಸ್ ಆಗಿರುತ್ತಿದ್ದವು. ಹೊರಗಿನ ಜನರ ಸ್ವತಂತ್ರ ಓಡಾಟ, ಯಾವ ಗಣಿತದ ಮೇಷ್ಟ್ರ ಕಾಟವಿಲ್ಲದೆ ನೆಮ್ಮದಿಯಾಗಿ ಟೀ ಕುಡಿಯುವ, ತಿಂಡಿ ತಿನ್ನುವ ರೀತಿಗಳ ನೋಡಿ ಸಂಕಟವಾಗುತ್ತಿತ್ತು.

ಓದಿನ ಕೌಟುಂಬಿಕ ಹಿನ್ನೆಲೆಯಿಲ್ಲದ ಕಾರಣ ನಮಗೆ ಕನ್ನಡವೊಂದನ್ನು ಹೊರತುಪಡಿಸಿ ಗಣಿತ, ಸಮಾಜ, ಮತ್ತು ವಿಜ್ಞಾನ ವಿಷಯಗಳೆಂದರೇನು? ಅದನ್ನು ಯಾಕಾಗಿ ಇಟ್ಟಿದ್ದಾರೆ? ಈ ವಿಷಯಗಳ ನಡುವೆ ಇರುವ ಪ್ರಾಥಮಿಕ ವ್ಯತ್ಯಾಸಗಳೇನು ಎಂಬುದು ಕಿಂಚಿತ್ತೂ ಗೊತ್ತಿರಲಿಲ್ಲ. ಯಾವುದನ್ನು ಓದಬೇಕು? ಹೇಗೆ ಓದಬೇಕು? ಎಂಬ ಪರಿಜ್ಞಾನವೂ ಇರಲಿಲ್ಲ. ಪುಸ್ತಕಗಳನ್ನು ನಾವು ಅವುಗಳ ಚಿತ್ರ, ಗಾತ್ರ ಮತ್ತು ಬಣ್ಣದಿಂದ ಗುರುತಿಸುತ್ತಿದ್ದೆವು. ಪದ್ಯಗಳನ್ನು ಹಾಡಿನ ರೂಪದಲ್ಲಿ ಕಲಿಸಿದರೆ ಅದನ್ನು ಮಾತ್ರ ಬೇಗ ಕಲಿಯುತ್ತಿದ್ದೆವು.

 ಗಣಿತದ ಪಿರಿಯಡ್ ಬಂದಾಗ ಹಾಳಾದ ಮುಂದಿನ ಸಾಲಿನ ಹುಡುಗರು ನಮ್ಮತ್ತ ನೋಡಿಕೊಂಡು ವ್ಯಂಗ್ಯವಾಗಿ, ಆಹಾ! ಓಹೋ! ಈಗ ಐತೆ ಮಜಾ! ಎಂದು ಕೈಕೈ ಹಿಸುಕಿಕೊಂಡು ಸಂಭ್ರಮ ಪಡುತ್ತಿದ್ದರು. ಅವರಿಗೆ ಅವರಪ್ಪ ಅಮ್ಮ ಮನೆಯಲ್ಲಿ ಕಲಿಸುತ್ತಿದ್ದರು. ಹೀಗಾಗಿ ಅವು ಏನು ಕೇಳಿದರೂ ಒದರೋವು. ನಾವು ಏನು ಕೇಳಿದರೂ ಕೈ ಚಾಚಿ ಆಮೇಲೆ ಒದರಾಡುತ್ತಿದ್ದೆವು. ಇದಿಷ್ಟೇ ನಮಗೂ ಅವರಿಗೂ ಇದ್ದ ವ್ಯತ್ಯಾಸ. ಎಲ್ಲಾ ಹಿಂದಿನ ದಿನವೇ ಮನೆಯಲ್ಲಿ ಕಲಿತು ಬಂದು ನಮಗೆ ಹೊಡೆತ ಬೀಳುವ ಟೈಮಿನಲ್ಲಿ ಸಂತೋಷ ಪಡುವ ಅವರನ್ನು ನಾವೆಲ್ಲಾ ಎನಿಮೀಸ್ ಎಂದು ಕರೀತಿದ್ದೆವು. ಆದರೆ ನಿಜಕ್ಕೂ ಎನಿಮೀಸ್ ಅನ್ನೋ ಇಂಗ್ಲೀಷ್ ಪದದ ಅರ್ಥ ಏನೆಂದು ಕೇಳಿದರೆ ನಮ್ಮಲ್ಲಿ ಅನೇಕರಿಗೆ ಗೊತ್ತಿರಲಿಲ್ಲ. ಎಲ್ಲರೂ ಬಳಸಿದರು ಅಂತ ನಾವೂ ಬಳಸುತ್ತಿದ್ದೆವು ಅಷ್ಟೆ.

ಇದ್ದದ್ದರಲ್ಲಿ ನಮ್ಮ ಕನ್ನಡ ಮೇಡಂ ಒಬ್ಬರು ತುಂಬಾ ಒಳ್ಳೆಯವರು. ಯಾವಾಗಲೂ ನೀವೇ ಓದ್ಕೊಳ್ರೋ ಅಂತ ಸರ್ವಸ್ವಾತಂತ್ರ ಕೊಟ್ಟು ಆರಾಮಾಗಿ ಕೂತು ಇನ್ನೊಬ್ಬ ಟೀಚರ್ ಜೊತೆ ಹರಟೆ ಕೊಚ್ಚುತ್ತಿದ್ದರು. ಅಷ್ಟರಲ್ಲಿ ಆ ಹರಟೆಗೆ ಮತ್ತೊಂದಿಷ್ಟು ಅಧ್ಯಾಪಕರು ತಮ್ಮ ತಮ್ಮ ಕ್ಲಾಸು ನಿಲ್ಲಿಸಿ ಬಂದು ಸೇರೋರು. ಆಮೇಲೆ, ಯಥಾ ಪ್ರಕಾರ ನಮ್ಮನ್ನು ಕರೆದು ದುಡ್ಡು ಕೊಟ್ಟು ಹೋಗಿ ಶಂಕರಣ್ಣನ ಅಂಗಡೀಲಿ ಖಾರ, ಮಂಡಕ್ಕಿ, ಬೋಂಡ ಕಟ್ಟಿಸ್ಕೊಂಡು ಈರುಳ್ಳಿ ಜಾಸ್ತಿ ಹಾಕಿಸ್ಕೊಂಡು ಬಾ ಅಂತ ಕೆಲಸ ಹೇಳೋರು. ಆಗ ಗುರುಗಳ ಈ ಮಂಡಕ್ಕಿ ಸೇವೆ ಮಾಡುವುದೇ ಒಂದು ದೊಡ್ಡ ಸಂತೋಷ.

ಆಗ, ಈ ಟೀಚರ್ ಎಷ್ಟು ಒಳ್ಳೆಯವರಪ್ಪ ಅಂತ ಅನ್ನಿಸಿ ಅವರ ಮೇಲೆ ಗೌರವ ಉಕ್ಕಿ ಬರೋದು. ನಮ್ಮ ಪಾಡಿಗೆ ನಾವು ಗಲಾಟೆ ಬಾರಿಸುತ್ತಿದ್ದರೆ ಅವರು ಮಾತ್ರ ಆರಾಮಾಗಿ ಮಂಡಕ್ಕಿ ಬೋಂಡ ಬಾಯಿಗೆ ಎಸೆದುಕೊಳ್ಳುತ್ತಿದ್ದರು. ನಾವು ಅವರು ತಿನ್ನುವುದನ್ನೇ ಕಣ್ಣು ಬಾಯಿಬಿಟ್ಟುಕೊಂಡು ಆಸೆಯಿಂದ ವೀಕ್ಷಿಸುತ್ತಿದ್ದೆವು. ಅಷ್ಟು ದುರುಗುಟ್ಟಿಕೊಂಡು ನೋಡಿದರೂ ಅವರಿಗೆ ಸಣ್ಣ ಬಿಗುಮಾನವಾಗಲೀ ಬೇಸರವಾಗಲಿ ಇರುತ್ತಿರಲಿಲ್ಲ. ನಮಗಾಗ  ಅವರ ಬಗ್ಗೆ ಉಂಟಾಗುತ್ತಿದ್ದ ಒಂದೇ ಒಂದು ಬೇಜಾರೆಂದರೆ; ಸೌಜನ್ಯಕ್ಕಾದರೂ ತಗೋಳ್ರೋ ನೀವೊಂದಿಷ್ಟು ಮಂಡಕ್ಕಿ ಎಂದು ಬಾಯಿತಪ್ಪಿಯೂ ಅವರು ಹೇಳದೆ ಇದ್ದದ್ದು.

ಒಂದು ದಿನ ನಮಗೆ ಗಣಿತದ ನರಕಾವಳಿ ನಡೆಯುತ್ತಿದ್ದಾಗ ಶಾಲಾ ಇನ್ಸ್‌ಪೆಕ್ಟರ್ ಬರ್ತಾ ಇದ್ದಾರೆ ಎನ್ನುವ ಸುದ್ದಿಯನ್ನು ಅಟೆಂಡರ್ ಬಂದು ರಾಮಲಿಂಗಾಚಾರ್ರಿಗೆ ಅವಸರದಲ್ಲಿ ಹೇಳಿ ಓಡಿ ಹೋದ. ಆ ಮಾತು ಕೇಳಿದ ತಕ್ಷಣ ನಮ್ಮ ರಾಮಲಿಂಗಾಚಾರ್ರು ತಮ್ಮ ಹೊಡೆತ ಬಡಿತಗಳನ್ನು ತಕ್ಷಣವೇ ನಿಲ್ಲಿಸಿದರು. ತಕ್ಷಣ ಅವರ ಮುಖಚರ್ಯೆಯೇ ಬಿಳಚಿ ಬದಲಾಗಿ ಹೋಯಿತು. ಕೆಂಡದಂಥ ಮುಖದಲ್ಲಿ ಭಯ ಭೀತಿಗಳು ಅಟಕಾಯಿಸಿಕೊಂಡವು. ಅವರ ಗಾಬರಿ, ಸಂಕಟಗಳು ನೋಡಿ ನಮ್ಮ ಎದೆಗಳು ಅರಳಿದವು.

ನಮ್ಮನ್ನು ಶಿಕ್ಷಿಸುವ ಯಮಧರ್ಮರಾಯನೇ ಹೆದರಿ ಕಂಗಾಲಾಗಿರುವುದು ನೋಡಿ ನಾವೆಲ್ಲಾ ಹಿರಿಹಿರಿ ಹಿಗ್ಗಿದೆವು. ರಾಮಲಿಂಗಾಚಾರ್ರು ಪಂಚೆ ಸರಿ ಮಾಡಿಕೊಂಡು, ತಲೆ ಕೂದಲನ್ನು ತಿದ್ದಿಕೊಂಡು ಎಲ್ಲಿಲ್ಲದ ಪ್ರೀತಿ, ನಗು, ವಿಪರೀತದ ಆತ್ಮೀಯತೆ ಚೆಲ್ಲುತ್ತಾ ಪಾಠ ಹೇಳತೊಡಗಿದರು. ಬೋರ್ಡಿನ ಮೇಲೆ ತಕ್ಷಣ ನಮಗರ್ಥವಾಗದ ಅನೇಕ ಲೆಕ್ಕಗಳನ್ನು ಬರೆದರು. ಅವರ ಈ ದಿಢೀರ್ ಬದಲಾವಣೆ ಯಾಕೆಂಬುದು ನಮಗೆ ಫಕ್ಕನೆ ಅರ್ಥವಾಗಲಿಲ್ಲ.

ಅಷ್ಟರಲ್ಲಿ ಕೋಟು ಕನ್ನಡಕ ಧರಿಸಿದ ಶಾಲಾ ಇನ್ಸ್‌ಪೆಕ್ಟರ್ ನಮ್ಮ ಕ್ಲಾಸಿಗೆ ಬಂದರು. ರಾಮಲಿಂಗಾಚಾರ್ರು ಎದ್ದೂ ಬಿದ್ದೂ ಅವರಿಗೆ ನಮಸ್ಕಾರ ಹೇಳಿದರು. ಬಹಳ ವಿಧೇಯರಾಗಿ ನಿಂತರು. ಅವರ ಮಾತುಗಳಿಗೆ ಹುಸಿನಗೆಯಲ್ಲಿ ಉತ್ತರಿಸುತ್ತಾ ಹೋದರು. ಆ ಇನ್ಸ್‌ಪೆಕ್ಟರ್ ನಮ್ಮನ್ನು ನಿಲ್ಲಿಸಿ ಏನೇನೋ ಪ್ರಶ್ನೆ ಕೇಳಿದರು. ಅದಕ್ಕೆ ನಾವು ನೀರವ ಮೌನದ ಉತ್ತರ ನೀಡಿದೆವು. ಆಗ ಸಡನ್ನಾಗಿ ರಾಮಲಿಂಗಾಚಾರ್ರು ಕಡೆಗೆ ತಿರುಗಿದ ಅಧಿಕಾರಿ ಅವರು ಭೂಮಿಗೆ ಕುಸಿದು ಬೀಳುವಷ್ಟು ಕನ್ನಡ ಇಂಗ್ಲೀಷಿನಲ್ಲಿ ಏನೇನೋ ಬೈಯತೊಡಗಿದರು. ಗಣಿತದ ಮೇಷ್ಟ್ರು ಸೋತು ಸುಣ್ಣವಾಗಿ ನಗುನಗುತ್ತಾ ಏನೇನೋ ಸಬೂಬು ಹೇಳತೊಡಗಿದರು. ಅವರ ಅಂದಿನ ಆ ದೈನೇಸಿ ಸ್ಥಿತಿ ನೋಡಿ ನಮಗಾದ ಆನಂದ ಅಷ್ಟಿಷ್ಟಲ್ಲ. ಆಗ ನಮಗೆಲ್ಲಾ  ನಿಜಕ್ಕೂ ಅನ್ನಿಸಿತು. ಅಂತೂ ದೇವರು ನಮ್ಮ ಹರಕೆಗೆ ವರಕೊಟ್ಟ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT