ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ಆದೇಶಗಳ ಬೆನ್ನೇರಿ...

Last Updated 23 ಜೂನ್ 2013, 19:59 IST
ಅಕ್ಷರ ಗಾತ್ರ

ಪ್ರತಿವರ್ಷ ಮುಂಗಾರು ಆರಂಭವಾಗುವ ವೇಳೆಗೆ ಸರ್ಕಾರದಲ್ಲಿ ವರ್ಗಾವಣೆಯ ಹಂಗಾಮು ಸಹ ಉತ್ತುಂಗಕ್ಕೆ ಏರುತ್ತದೆ. ಚುನಾವಣೆಗೆ ನಿಲ್ಲಲು ಪಕ್ಷದ ಟಿಕೆಟ್ ಗಿಟ್ಟಿಸಲು ನಡೆಸುವ ಕಸರತ್ತಿಗಿಂತ ದೊಡ್ಡ ಸರ್ಕಸ್ಸನ್ನು ಸರ್ಕಾರಿ ನೌಕರರು ಆಯಕಟ್ಟಿನ ಸ್ಥಳಕ್ಕೆ ವರ್ಗವಾಗಲು ನಡೆಸುತ್ತಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳಂತೆ ಈ ಸರ್ಕಸ್ಸಿನಲ್ಲೂ ಹಣದ ಹೊಳೆ ಜೋರಾಗಿ ಹರಿಯುತ್ತದೆ ಎಂಬುದೇನೂ ಗುಟ್ಟಾಗಿ ಉಳಿದಿಲ್ಲ

ಒಮ್ಮಮ್ಮೆ ಮುಂಗಾರು ಕೈಕೊಟ್ಟು ಹೊಳೆಗಳು ತುಂಬಿ ಹರಿಯದಿರಬಹುದು. ವರ್ಗಾವಣೆ `ಹೊಳೆ'ಗಳ ಪ್ರವಾಹ ಮಾತ್ರ ಎಂದಿಗೂ ತಗ್ಗುವುದಿಲ್ಲ.
ವರ್ಗಾವಣೆ ದಂಧೆಯ ಈಗಿನ ವಿರಾಟ್ ರೂಪವು ನನಗೆ 35 ವರ್ಷಗಳ ಹಿಂದಿನ ನನ್ನ ಸೇವೆಯ ಆರಂಭದ ದಿನಗಳನ್ನು ನೆನಪಿಗೆ ತರುತ್ತದೆ.

1977ರಲ್ಲಿ ಸೇವೆಗೆ ಸೇರಿದ ನಾನು ಧಾರವಾಡ-ಬೆಳಗಾವಿಯಲ್ಲಿ ಪ್ರೊಬೇಷನರಿ ಅವಧಿ ಮುಗಿಸಿದೆ. 1980ರ ಏಪ್ರಿಲ್ ತಿಂಗಳ ಒಂದು ದಿನ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಹೊರಟು ಬರುವಂತೆ ನನ್ನ ಮಾವನವರಾದ ಎಚ್.ಎ. ಅಜ್ಜೇಗೌಡರಿಂದ ಬುಲಾವ್ ಬಂತು. ಸಕಲೇಶಪುರದ ಹಾನಬಾಳಿನ ಅಜ್ಜೇಗೌಡರು ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದವರು. ಸುಮಾರು 100 ಎಕರೆ ಕಾಫಿ ತೋಟದ ಮಾಲೀಕರು. ಹಳೆಯ ತಲೆಮಾರಿನ ಕಾಂಗ್ರೆಸ್ಸಿಗರು. ಗೌರವದಿಂದ ಜೀವನ ನಡೆಸುತ್ತಿದ್ದವರು. ಹೆಣ್ಣುಕೊಟ್ಟ ಮಾವನವರ ಆದೇಶವಾಗಿದ್ದರಿಂದ ಉಪೇಕ್ಷೆ ಮಾಡುವಂತಿರಲಿಲ್ಲ! ರಾತ್ರಿಯೇ ರೈಲು ಏರಿ ಬೆಂಗಳೂರಿಗೆ ಬಂದೆ.

ಜನರಲ್ ಹಾಸ್ಟೆಲ್‌ಗೆ ಬರಬೇಕು ಎಂಬ ಸಂದೇಶ ಬಂತು. ಅಲ್ಲಿಗೆ ತಲುಪಿದಾಗ ಸಕಲೇಶಪುರದ ಶಾಸಕ ಜೆ.ಡಿ. ಸೋಮಪ್ಪನವರು ಮಂಚದ ಮೇಲೆ ಸುಖ ನಿದ್ರೆಯಲ್ಲಿದ್ದರು. ಪಕ್ಕದ ಕುರ್ಚಿಯಲ್ಲಿ ಅಜ್ಜೇಗೌಡರು ತೂಕಡಿಸುತ್ತಾ ಕುಳಿತಿದ್ದರು. ನನ್ನ ಆಗಮನದಿಂದ ಎಚ್ಚೆತ್ತ ಅವರು, `ನಿಮ್ಮ ವರ್ಗಾವಣೆ ವಿಷಯ ಮಾತನಾಡಲು ಬಂದಿದ್ದೇವೆ. ಬೆಳಿಗ್ಗೆ ಮಾಜಿ ಸಚಿವ ಎಚ್. ಎನ್.ನಂಜೇಗೌಡರ ಮನೆಗೆ ಹೋಗಿದ್ದೆವು. ಅವರು ಮುಖ್ಯಮಂತ್ರಿ ಆರ್. ಗುಂಡೂರಾವ್ ಜೊತೆ ಮಾತನಾಡುವ ಭರವಸೆ ನೀಡಿದ್ದಾರೆ. ಸೋಮಪ್ಪನವರು ನಮ್ಮನ್ನು ಕಂದಾಯ ಸಚಿವ ಎಸ್. ಬಂಗಾರಪ್ಪ ಅವರ ಮನೆಗೆ ಕರೆದುಕೊಂಡು ಹೋಗಲಿದ್ದಾರೆ. ಅದಕ್ಕೇ ಕಾಯುತ್ತಿದ್ದೇವೆ' ಎಂದು ತಿಳಿಸಿದರು. ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಹೀಗೆ ಹಳೆ ಮೈಸೂರಿನ ಕೆಲವು ಉಪ ವಿಭಾಗಗಳ ಹೆಸರು ಹೇಳಿ, ನನಗೆ ಯಾವ ಸ್ಥಳ ಬೇಕು ಎಂದು ಕೇಳಿದರು.

ಊರಿನಲ್ಲಿ ಸ್ಥಿತಿವಂತರು. ನಾಲ್ಕು ಜನರಿಗೆ ಬೇಕಾದವರು. ಮಗಳನ್ನು ಮದುವೆ ಮಾಡಿಕೊಟ್ಟ ಗ್ರಹಚಾರಕ್ಕಾಗಿ ಇವರು ಎಲ್ಲರ ಮನೆಯ ಮೆಟ್ಟಿಲು ತುಳಿಯುವಂತಹ ಸ್ಥಿತಿ ಎದುರಾಯಿತಲ್ಲ ಎಂದು ನನಗೆ ಮರುಕವಾಯಿತು. ಅದನ್ನು ಅವರಿಗೆ ತಿಳಿಸಿದೆ. ಆದರೂ ಅವರು ಸಂಕೋಚದಿಂದಲೇ, `ಉತ್ತರ ಕರ್ನಾಟಕಕ್ಕೆ ವರ್ಗವಾದರೆ ಬಹಳ ಕಷ್ಟ; ಅವೆಲ್ಲ ತುಂಬಾ ಬಿಸಿಲಿನ ಪ್ರದೇಶಗಳು. ಕುಡಿಯಲು ನೀರು ಸಹ ಸಿಗುವುದಿಲ್ಲ. ನೀವು `ಹೂಂ' ಅಂದರೆ ನಮ್ಮ ಭಾಗದಲ್ಲಿಯೇ ಆರಾಮವಾಗಿ ಇರಬಹುದು' ಎಂದು ಮುಂದುವರಿಸಿದರು. ನನಗೆ ತಾಳಲಾರದಷ್ಟು ಕೋಪ ಬಂತು. `ನನಗೇನೂ ಕಷ್ಟವಿಲ್ಲ. ನಿಮ್ಮ ಮಗಳಿಗೆ ಕಷ್ಟವಾಗುತ್ತದೆ ಎಂದೆನಿಸಿದರೆ, ಸಕಲೇಶಪುರದಲ್ಲೇ ಇಟ್ಟುಕೊಳ್ಳಿ. ನನ್ನ ಪಾಡಿಗೆ ನನ್ನನ್ನು ಗೌರವದಿಂದ ಕೆಲಸ ಮಾಡಲು ಬಿಡಿ' ಎಂದೆ. ಮುಂದೆ ಅವರಾಗಲಿ, ಅವರ ಮಗಳಾಗಲಿ ನನ್ನ ಕೆಲಸದಲ್ಲಿ ಯಾವತ್ತೂ ತಲೆ ಹಾಕಲಿಲ್ಲ.

ಕೆಲವೇ ದಿನಗಳಲ್ಲಿ ನನಗೆ ಗದಗ ಉಪ ವಿಭಾಗಕ್ಕೆ ಅಸಿಸ್ಟಂಟ್ ಕಮಿಷನರ್ ಆಗಿ ವರ್ಗವಾಯಿತು. ರಾಜ್ಯ ಕಂಡ ಅತ್ಯಂತ ಕ್ರಿಯಾಶೀಲ ರಾಜಕಾರಣಿ ಕೆ.ಎಚ್. ಪಾಟೀಲರು, ಡಿ.ಆರ್. ಪಾಟೀಲ ಮತ್ತು ಇನ್ನಿಬ್ಬರು ಯುವಕರೊಂದಿಗೆ ಬೆಟಗೇರಿಯಲ್ಲಿದ್ದ ನನ್ನ ಮನೆಗೆ ಒಂದು ಬೆಳಿಗ್ಗೆ ಆಗಮಿಸಿದರು. ಅವರು ಯಾವುದೇ ಸ್ವಂತ ಕೆಲಸಕ್ಕೆ ಬಂದಿರಲಿಲ್ಲ. ನನ್ನನ್ನು ಅವರ ಊರಿಗೆ ಸ್ವಾಗತಿಸಿ, ಶುಭ ಹಾರೈಸಲು ಬಂದಿದ್ದರು. `ಪ್ರಾಂತ ಸಾಹೇಬರೇ (ಅಸಿಸ್ಟಂಟ್ ಕಮಿಷನರ್‌ಗೆ ಹಾಗೆ ಕರೆಯುತ್ತಿದ್ದರು), ಕಾಳಜಿ ಮಾಡಬ್ಯಾಡ್ರೀ. ನಿಮಗ ಯಾವ್ದಕ್ಕೂ ಬಿಲ್‌ಕುಲ್ ತ್ರಾಸು ಆಗಲ್ರೀ' ಎಂದು ಪ್ರೀತಿಯಿಂದ ಹರಸಿದರು.

ನನ್ನ ಪತ್ನಿಯನ್ನು ಉದ್ದೇಶಿಸಿ, `ತಂಗೀ, ಇದು ನಿಮ್ಮೂರು ಎಂದು ತಿಳೀರಿ. ಈ ಹುಡುಗ್ರೆಲ್ಲಾ ನಿಮ್ಮ ಅಣ್ಣ-ತಮ್ಮಂದಿರು' ಎಂದು ಡಿ.ಆರ್. ಪಾಟೀಲ ಮತ್ತಿತರರನ್ನು ಪರಿಚಯಿಸಿದಾಗ, ನಾವಿಬ್ಬರೂ ಏನು ಹೇಳಬೇಕೆಂದು ತೋಚದೆ ಭಾವುಕರಾದೆವು. ಈ ಊರಿನಲ್ಲಿ ಇದ್ದಷ್ಟು ದಿನ ನಾವು ಜೋಳದ ರೊಟ್ಟಿ, ಎಣ್‌ಗಾಯಿ ಪಲ್ಯ, ಶೇಂಗಾ ಹೋಳಿಗೆ... ಶಿವಲಿಂಗಪ್ಪನ ಭರ್ಜರಿ ಅಡುಗೆಯನ್ನು ಸವಿದೆವು. ಜನರ ಪ್ರೀತಿಗೆ ಪಾರವೇ ಇಲ್ಲದ ಊರು ಗದಗ.

`ಮಕ್ಕಳು ಯಾವುದೇ ತೊಂದರೆ ಅನುಭವಿಸದಂತೆ ಚೆನ್ನಾಗಿರಬೇಕು' ಎಂಬುದು ಆಗಿನ ವರ್ಗಾವಣೆ ಓಡಾಟದ ಹಿಂದಿದ್ದ ಏಕೈಕ ಉದ್ದೇಶವಾಗಿತ್ತು. ಈಗ ಆ ನಂಬಿಕೆ ಬುಡಮೇಲಾಗಿದೆ. ವರ್ಗಾವಣೆ ಒಂದು ಮಾಯಾಜಾಲವಾಗಿದೆ; ಮಾತ್ರವಲ್ಲ, ಬಂಡವಾಳವಿಲ್ಲದ, ಮರ್ಯಾದೆಯೂ ಇಲ್ಲದ ದಂಧೆಯಾಗಿ ಪರಿಣಮಿಸಿದೆ. ನಿಸ್ಸಂದೇಹವಾಗಿ ಅದು ಸಾವಿರಾರು ಕೋಟಿ ವಹಿವಾಟಿನ ಉದ್ಯಮ. ವರ್ಗಾವಣೆ ವ್ಯವಸ್ಥೆ ಸರಿಪಡಿಸದೆ ಆಡುವ ಆಡಳಿತ ಸುಧಾರಣೆ ಮಾತುಗಳೆಲ್ಲ ಬರಿ ಬೊಗಳೆ.

ಎಲ್ಲ ಹುದ್ದೆಗಳೂ ಒಂದೇ ಎಂಬ ಸತ್ಯವನ್ನು ಅಧಿಕಾರಿಗಳು ಮತ್ತು ನೌಕರರು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಎಲ್ಲಿಗೆ ವರ್ಗವಾಗಿ ಹೋದರೂ ಯಾವ ಅನಾಹುತವೂ ಆಗುವುದಿಲ್ಲ ಎಂಬ ಗಟ್ಟಿಯಾದ ನಂಬಿಕೆ ರೂಢಿಸಿಕೊಳ್ಳಬೇಕಿದೆ. ನನ್ನ 35 ವರ್ಷಗಳ ವೃತ್ತಿ ಜೀವನದಲ್ಲಿ 27 ಸಲ ವರ್ಗಾವಣೆಗೊಂಡಿದ್ದೇನೆ. ನನ್ನ ಮಗಳು ಶ್ರೀಗೌರಿ 10ನೇ ತರಗತಿಗೆ ಬರುವ ಮೊದಲೇ ನಾನು 12 ವರ್ಗಾವಣೆ `ಪಾಸ್' ಮಾಡಿದ್ದೆ!

ಒಂದೊಂದು ವರ್ಗಾವಣೆಯನ್ನೂ ನಾನು ಹೊಸ ಸವಾಲು, ಹೊಸ ಅವಕಾಶವೆಂದು ತಿಳಿದು ಕೆಲಸ ಮಾಡಿದ್ದೇನೆ. ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ನಾನು ಎಂದಿಗೂ ಯಾರ ಬಳಿಯಲ್ಲೂ ಕೈಚಾಚಿ ಬೇಡಿಲ್ಲ. ಸ್ವಾಭಿಮಾನ, ಆತ್ಮಗೌರವ ಹಾಗೂ ಮರ್ಯಾದೆಯಿಂದ ಕೆಲಸ ಮಾಡುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಎಲ್ಲಿ ಹಾಕಿದರೂ ಕೆಲಸ ಮಾಡಲು ಸಿದ್ಧ ಎಂಬ ಧೋರಣೆ ಪ್ರದರ್ಶಿಸಿದರೆ ಆಳುವವರಿಗೂ ನಮ್ಮ ಮೇಲೆ ಗೌರವ ಇರುತ್ತದೆ.

ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ವರ್ಗಾವಣೆಗೆ ಅತ್ಯುತ್ತಮ ನೀತಿಯೊಂದನ್ನು ಜಾರಿಗೆ ತಂದರು. ನೌಕರರ ವರ್ಗಾವಣೆ ವಿಷಯದಲ್ಲಿ ಅವರು ಯಾವ ಕಾರಣಕ್ಕೂ ಮೂಗು ತೂರಿಸುತ್ತಿರಲಿಲ್ಲ. ಆಯಾ ಇಲಾಖೆಗಳ ಅಧಿಕಾರಿಗಳೇ ತಮ್ಮ ಇಲಾಖೆಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಅಗತ್ಯವಾದ ವರ್ಗಾವರ್ಗಿ ಆದೇಶಗಳನ್ನು ಹೊರಡಿಸುತ್ತಿದ್ದರು. ಕೊಡಗಿನಲ್ಲಿ ಒಮ್ಮೆ ಗುಂಡೂರಾವ್ ಅವರು ಪ್ರವಾಸದಲ್ಲಿದ್ದಾಗ ನಾನೂ ಜೊತೆಯಲ್ಲಿದ್ದೆ. ಅಲ್ಲಿಗೆ ಬಂದಿದ್ದ ಸಕಲೇಶಪುರದ ಶಾಸಕರೊಬ್ಬರು ವರ್ಗಾವಣೆಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರನ್ನು ಮರಳಿ ಅದೇ ಸ್ಥಳಕ್ಕೆ ವರ್ಗ ಮಾಡಬೇಕು ಎಂಬ ಬೇಡಿಕೆ ಇಟ್ಟರು. ತಮ್ಮ ಬೇಡಿಕೆಗೆ ಪೂರಕವಾಗಿ ಆ ಇನ್ಸ್‌ಪೆಕ್ಟರ್ ದಕ್ಷತೆಯನ್ನು ಸುಮಾರು 15-20 ನಿಮಿಷಗಳ ಕಾಲ ಗುಣಗಾನ ಮಾಡಿದರು. ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡ ಗುಂಡೂರಾವ್, `ನೀವು ಹೇಳುವುದನ್ನೆಲ್ಲ ಕೇಳಿದರೆ, ಬರುವ ಚುನಾವಣೆಯಲ್ಲಿ ಪಕ್ಷದಿಂದ ಆ ಇನ್ಸ್‌ಪೆಕ್ಟರ್‌ಗೇ ಟಿಕೆಟ್ ಕೊಡುವುದು ಒಳಿತೆನಿಸುತ್ತದೆ' ಎಂದುಬಿಟ್ಟರು. ಶಾಸಕರು ಪೆಚ್ಚು ಮುಖದಿಂದ ವಾಪಸಾದರು.

ವಿಭಾಗ ಮಟ್ಟದ ಅಧಿಕಾರಿಗಳನ್ನು ಆಗ ವಿಭಾಗೀಯ ಅಧಿಕಾರಿಗಳೇ ವರ್ಗ ಮಾಡುತ್ತಿದ್ದರು. ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪರಿಷತ್ ಆ ಜವಾಬ್ದಾರಿಯನ್ನು ನಿಭಾಯಿಸುತ್ತಿತ್ತು. ಹಂತ-ಹಂತವಾಗಿ ಆ ಅಧಿಕಾರವನ್ನು ಕಸಿದುಕೊಳ್ಳಲಾಯಿತು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸರ್ಕಾರ ಸಂಖ್ಯಾ ಆಟದಲ್ಲಿ ನಾಜೂಕಿನ ಸ್ಥಿತಿಯಲ್ಲಿತ್ತು. ಆಗ ಶಾಸಕರನ್ನು ತೃಪ್ತಿಪಡಿಸಲು ಅವರಿಗೆ ಬೇಕಾದ ವರ್ಗಾವಣೆ ಆದೇಶಗಳು ಹೊರಬೀಳತೊಡಗಿದವು. ವರ್ಗಾವಣೆ ನೀತಿ ಆಗಲೇ ದುರ್ಬಲಗೊಂಡಿತು.

ವರ್ಗಾವಣೆ ಋತು ಬಂತೆಂದರೆ ಕೆಲವು ಜನ ಅಧಿಕಾರಸ್ಥರು ಸುಮ್ಮನೇ ಅಧಿಕಾರಿಗಳ ಒಂದು ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ನೈಜವಾಗಿ ಅದು ವರ್ಗವಾಗುವಂತಹ ಪಟ್ಟಿಯಲ್ಲ. ಅದನ್ನು ವ್ಯವಸ್ಥಿತ ರೀತಿಯಲ್ಲಿ ಗಾಳಿಸುದ್ದಿಯಾಗಿ ತೇಲಿ ಬಿಡಲಾಗುತ್ತದೆ. ಬೆಂಗಳೂರಿನಲ್ಲಿ ಇರುವ ತಮ್ಮನ್ನು ದೂರದ ಸುರಪುರಕ್ಕೆ ವರ್ಗ ಮಾಡಲಾಗುತ್ತದೆ ಎಂಬ ಸುದ್ದಿ ಅಧಿಕಾರಿಗಳನ್ನು ತಲ್ಲಣಗೊಳಿಸುತ್ತದೆ. ವ್ಯವಹಾರ ಕುದುರುತ್ತದೆ. ಲಕ್ಷಾಂತರ ರೂಪಾಯಿ ಕೈಬದಲಾಗಿ ಇದ್ದ ವ್ಯವಸ್ಥೆ ಹಾಗೇ ಇರುತ್ತದೆ. ಇಂತಹ ಗಾಳಿಸುದ್ದಿ ಪ್ರತಿವರ್ಷವೂ ಬೀಸಿ, ಒಂದೇ ಒಂದು ಕಾಗದವೂ ಆಚೀಚೆ ಓಡಾಡದೆ, ಸೂಟ್‌ಕೇಸ್‌ಗಳು ಮಾತ್ರ ಕೈಬದಲಾಗುವಂತೆ ಮಾಡುತ್ತದೆ.

ಮುಖ್ಯ ಎಂಜಿನಿಯರ್ ಒಬ್ಬರ ವರ್ಗಾವಣೆ ಕಥೆಯೂ ಇಲ್ಲಿ ನೆನಪಾಗುತ್ತಿದೆ. ಹಿಂದಿನ ಮುಖ್ಯಮಂತ್ರಿಯೊಬ್ಬರ ಆಪ್ತರಿಗೆ ದೊಡ್ಡ ಮೊತ್ತ ಕೊಟ್ಟು ಅವರು ತಮಗೆ ಬೇಕಾದ ಆಯಕಟ್ಟಿನ ಸ್ಥಳಕ್ಕೆ ವರ್ಗವಾಗಿದ್ದರು. ವಾರದಲ್ಲಿ ಅವರಿಗೆ ಮತ್ತೊಂದು ಆದೇಶ ಬಂದು, ಮೊದಲ ಇದ್ದ ಹುದ್ದೆಗೇ ವಾಪಸು ಬರಬೇಕಾಯಿತು. ಆ ಅಧಿಕಾರಿ `ಈ ದಿಢೀರ್ ಬದಲಾವಣೆಗೆ ಏನು ಕಾರಣ' ಎಂಬುದನ್ನು ಪತ್ತೆ ಮಾಡಲು ತಮ್ಮ ಪತ್ತೆದಾರರನ್ನು ಬಿಟ್ಟರು. ಎರಡು ದಿನದಲ್ಲಿ ವರ್ತಮಾನ ಬಂತು. ತಮ್ಮ ಕಡು ವಿರೋಧಿಯಾಗಿದ್ದ ಅಧಿಕಾರಿಯೊಬ್ಬರು ತಾವು ಕೊಟ್ಟ ಕಾಣಿಕೆಗಿಂತಲೂ ಅಧಿಕವಾದ ಉಡುಗೊರೆ ನೀಡಿ, ಆ ವರ್ಗಾವಣೆಯನ್ನು ರದ್ದುಗೊಳಿಸಿದ್ದರು. ಮುಖ್ಯ ಎಂಜಿನಿಯರ್ ಸೀದಾ ಮುಖ್ಯಮಂತ್ರಿಗಳ ಬಳಿಗೆ ಹೋದರು.

ನನಗೆ ಹೊಸ ಹುದ್ದೆಗೆ ವರ್ಗಾವಣೆ ಆದೇಶ ಕೊಡಬೇಕು ಇಲ್ಲವೆ ಕೊಟ್ಟ ದುಡ್ಡನ್ನು ವಾಪಸು ಕೊಡಬೇಕು ಎಂದು ನೇರವಾಗಿಯೇ ಕೇಳಿದರು. ಅದಕ್ಕೆ ಆ ಮುಖ್ಯಮಂತ್ರಿಗಳು, `ರೊಕ್ಕ ವಾಪಸ್ ಕೊಡು ಅನ್ಲಿಕ್ಕೆ ಅದನ್ನೇನ್ ಮನಿಯಿಂದ ತಂದೀಯೇನು' ಎಂದು ಗದರಿಸಿ ಕಳುಹಿಸಿದರಂತೆ. ಅಧಿಕಾರಿಗಳ ವರ್ತುಲದಲ್ಲಿ ಆಗ ಇದು ದೊಡ್ಡ ಸುದ್ದಿಯಾಗಿತ್ತು. ಇದರ ಸತ್ಯಾಸತ್ಯತೆಯನ್ನು ಆ ಭಗವಂತನೇ ಬಲ್ಲ.

ವರ್ಗಾವಣೆ ಋತು ಬಂದರೆ ಬೆಂಗಳೂರು ನಗರದ ಹೋಟೆಲ್‌ಗಳು ಕಿಕ್ಕಿರಿದು ತುಂಬುತ್ತವೆ. ಬ್ರೋಕರ್‌ಗಳು, ಏಜೆಂಟ್‌ಗಳು ವಿಧಾನಸೌಧದ ಅಂಗಳದಲ್ಲಿ ಗಿರಕಿ ಹೊಡೆಯತ್ತಾರೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರು, ನಿವೃತ್ತ ಅಧಿಕಾರಿಗಳು, ರಾಜಕಾರಣಿಗಳ ಹಿಂಬಾಲಕರು, ಸಚಿವರ ಹೆಂಡಿರು-ಮಕ್ಕಳು, ಇನ್ನೂ ಯಾರು, ಯಾರೋ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ದುಡ್ಡು ಪಡೆದುಕೊಂಡು ನಾಪತ್ತೆಯಾಗುವ ಮಂದಿಗೂ ಲೆಕ್ಕವಿಲ್ಲ. ಮಹಿಳಾ ನೌಕರರೂ ವರ್ಗಾವಣೆಗಾಗಿ ಬೆಂಗಳೂರಿಗೆ ಬಂದು ಹೋಟೆಲ್‌ಗಳಲ್ಲಿ ತಂಗುತ್ತಾರೆ. ಅವರ ಅಸಹಾಯಕತೆ ಯಾವ, ಯಾವ ಬಗೆಯಲ್ಲಿ ಶೋಷಣೆಗೆ ಬಳಕೆಯಾಗುತ್ತದೆ ಎಂಬುದರ ವಿಷಯವಾಗಿ ಮಾತನಾಡದಿರುವುದೇ ಒಳಿತು. ವರ್ಗಾವಣೆಗೆ ಬಂದಿದ್ದ ನರ್ಸ್ ಒಬ್ಬರು ಎಷ್ಟೊಂದು ಖ್ಯಾತಿ ಗಳಿಸಿದ್ದರು ಎಂಬ ಕತೆ ಎಲ್ಲರಿಗೂ ಗೊತ್ತೆ ಇದೆ.

ವರ್ಗಾವಣೆಗಳು ಯಾವಾಗಲೂ ಪಾರದರ್ಶಕವಾಗಿರಬೇಕು. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗ ಮಾಡಿ ರಾತ್ರಿ ವೇಳೆಯಲ್ಲೇ ಆದೇಶಗಳು ಹೊರಬೀಳುವುದೇಕೆ ಎನ್ನುವುದು ನನಗೆ ಇನ್ನೂ ಅರ್ಥವಾಗಿಲ್ಲ. ಆದೇಶದ ಪತ್ರ ಸಿಗುವ ಮುನ್ನ ಅಧಿಕಾರಿಗಳಿಗೆ ಅಟೆಂಡರ್‌ಗಳ ಮೂಲಕ ವಿಷಯ ಗೊತ್ತಾಗಿರುತ್ತದೆ, ಆ ಮಾತು ಬೇರೆ (ವಿಧಾನಸೌಧದ ಅಟೆಂಡರ್‌ಗಳಿಗೆ ಗೊತ್ತಿರದ ವಿಷಯವೇ ಇರುವುದಿಲ್ಲ). ಕೆಲವೊಮ್ಮೆ ಆಡಳಿತಕ್ಕೆ ಸಂಬಂಧವೇ ಇಲ್ಲದಿದ್ದರೂ ಅನಗತ್ಯವಾಗಿ ವರ್ಗ ಮಾಡಲಾಗುತ್ತದೆ. ಅವು ಅಧಿಕಾರಿಗಳನ್ನು ಅಧೀರಗೊಳಿಸುವ ಯತ್ನಗಳಾಗಿರುತ್ತವೆ. ನಾನೂ ಅಂತಹ ನಾಲ್ಕು ವರ್ಗಾವಣೆ ಆದೇಶ ಪಡೆದಿದ್ದಿದೆ (ಈ ವರ್ಗಾವಣೆ ಪ್ರಕರಣಗಳ ವಿಷಯವಾಗಿ ಪ್ರತ್ಯೇಕವಾಗಿ ಬರೆಯುತ್ತೇನೆ).

ವರ್ಗಾವಣೆಗೆ ಆಡಳಿತಾತ್ಮಕವಾಗಿ ಅಗತ್ಯವೇ ಇಲ್ಲದಿದ್ದರೂ ಸಚಿವರಿಂದ ಟಿಪ್ಪಣಿ ತರಲು ಸೂಚಿಸಲಾಗುತ್ತದೆ. `ಟಿಪ್ಪಣಿ' ತರುವುದು ಎಂದರೆ `ಯಾರಿಗೋ, ಏನೋ' ಕೊಟ್ಟು ಬರುವುದು ಎಂದು ಬಿಚ್ಚಿ ಹೇಳಬೇಕಿಲ್ಲ. ವರ್ಗಾವಣೆಯಲ್ಲಿ ಜಾತಿ, ಪಕ್ಷ, ಸಂಬಂಧ, ಹಣ ಎಲ್ಲವೂ ಕೆಲಸ ಮಾಡುತ್ತವೆ. ಕೆಲವು ನೌಕರರ ಸಂಘಗಳ ಪದಾಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಎಲ್ಲ ವರ್ಗಾವಣೆಗಳ ಪಟ್ಟಿಯನ್ನೂ ಅದಕ್ಕೆ ತಕ್ಕಷ್ಟು ಕಾಣಿಕೆಯನ್ನೂ ಹೊತ್ತು ಅಧಿಕಾರಸ್ಥರನ್ನು ಭೇಟಿ ಮಾಡುತ್ತಾರೆ. ವರ್ಗಾವಣೆ ಆದೇಶ ಪತ್ರಗಳೊಂದಿಗೆ ವಾಪಸು ಹೋಗುತ್ತಾರೆ. ಇದೊಂದು ರೀತಿ ಹೋಲ್‌ಸೇಲ್ ವ್ಯಾಪಾರ.

ಈ ವರ್ಗಾವಣೆ ಏಜೆಂಟ್‌ಗಳನ್ನು ವಿಧಾನಸೌಧದ ಅಂಗಳ ಪ್ರವೇಶಿಸದಂತೆ ತಡೆಯಲು ಆಗದಿದ್ದರೆ, ಆಯಾ ಇಲಾಖೆಯಿಂದ `ಇವರು ನಮ್ಮ ಏಜೆಂಟರು' ಎಂಬ ಅಧಿಕೃತ ಗುರುತಿನ ಬಿಲ್ಲೆ ಕೊಟ್ಟು ಬಿಡಬೇಕು. ಏಜೆಂಟರೆಂಬ ಖದೀಮರಿಂದ ಬಡಪಾಯಿ ನೌಕರರು ಶೋಷಣೆಗೆ ಒಳಗಾಗುತ್ತಾರೆ.

ವರ್ಗಾವಣೆ ಹೆಸರಿನಲ್ಲಿ ನಡೆಯುವ `ಅಡ್ಜಸ್ಟ್‌ಮೆಂಟ್ ಸ್ಕೀಮ್'ಗಳಿಗೆ ಆಡಳಿತವೇ ಬಲಿಪಶು ಆಗುತ್ತದೆ. ಸರ್ಕಾರಕ್ಕೆ ಪ್ರಬಲ ಇಚ್ಛಾಶಕ್ತಿ ಇದ್ದರೆ ವರ್ಗಾವಣೆಗೆ ಸಮಗ್ರವಾದ ಮಾರ್ಗಸೂಚಿ ರೂಪಿಸಬೇಕು. ವರ್ಗಾವಣೆ ವಿಷಯವಾಗಿ ರಚನೆಗೊಂಡ ಸಮಿತಿಗಳು ನೀಡಿದ ವರದಿಗಳು ನೂರಾರು. ಹೊರಟ ಸುತ್ತೋಲೆಗಳು ಸಾವಿರಾರು. ಅದರಿಂದ ಯಾವ ಬದಲಾವಣೆಯೂ ಆಗಿಲ್ಲ. ಆದೇಶಕ್ಕೆ ಹಾಕಿದ ಸಹಿಯ ಮಸಿ ಆರುವ ಮನ್ನವೇ ಮತ್ತೊಂದು ಆದೇಶ ಹೊರಟ ಉದಾಹರಣೆಗಳು ಬೇಕಾದಷ್ಟಿವೆ. ಸರ್ಕಾರ ತಾನೇ ಹೊರಡಿಸಿದ ಆದೇಶಗಳಿಗೆ ಬೆಲೆ ನೀಡದಿದ್ದರೆ ಬೇರೆ ಯಾರು ನೀಡಬೇಕು?

ಗುಂಡೂರಾವ್, ಅಬ್ದುಲ್ ನಜೀರ್ ಸಾಬ್ ಮತ್ತು ಎಚ್.ಜಿ.ಗೋವಿಂದೇಗೌಡರು ಬಿಟ್ಟುಹೋದ ಮಾದರಿಗಳು ನಮ್ಮ ಮುಂದಿವೆ. ಸಿದ್ದರಾಮಯ್ಯ, ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ ಅವರಂತಹ ಹಿರಿಯರು, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಅವರಂತಹ ತಂತ್ರಜ್ಞಾನದಲ್ಲಿ ಪಳಗಿದ ಯುವಕರು ಸರ್ಕಾರದಲ್ಲಿ ಇದ್ದಾರೆ. ಅವರೆಲ್ಲರೂ ಒಟ್ಟಾಗಿ ಕುಳಿತು ಚರ್ಚೆ ನಡೆಸಬೇಕು.

ಅಧಿಕಾರಿಗಳಿಗೆ ವರ್ಗಾವಣೆ ಮಾಡುವಾಗ ಮೂರು ಆಯ್ಕೆಗಳನ್ನು ಕೊಡಬೇಕು. ಸರ್ಕಾರದ ಅಗತ್ಯ, ನೌಕರರ ಆದ್ಯತೆ ಎರಡನ್ನೂ ಗಮನದಲ್ಲಿ ಇಟ್ಟುಕೊಂಡು ವರ್ಗ ಮಾಡಬೇಕು. ‘right man for the right job’ ಎಂಬ ಸರಳ ನೀತಿ ಅನುಸರಿದರೆ ವರ್ಗಾವಣೆ ವಿಷಯ ಸಮಸ್ಯೆಯೇ ಅಲ್ಲ. ಸರಳ ಸೂತ್ರದ ಸುತ್ತ ಹತ್ತಾರು ಸಂಕೀರ್ಣ ವರ್ತುಲಗಳು ಬೆಳೆದಿದ್ದರಿಂದ ವರ್ಗಾವಣೆ ಎನ್ನುವುದು ಅವಾಂತರವಾಗಿದೆ. ಆಡಳಿತ ನಡೆಸುವವರ ನಿದ್ದೆಗೆಡಿಸಿರುವ ಈ ಸಮಸ್ಯೆ, ಸಾರ್ವಜನಿಕರಲ್ಲಿ ಜುಗುಪ್ಸೆ ಉಂಟುಮಾಡಿದೆ. ಒಂದು ಕಾಲಕ್ಕೆ ದೇಶದಲ್ಲೇ ಮಾದರಿಯಾಗಿದ್ದ ಕರ್ನಾಟಕ ಆಡಳಿತ ಇಂದು ಶೋಚನೀಯ ಸ್ಥಿತಿ ತಲುಪಿದೆ.

ಅಧಿಕಾರಿಗಳೂ ಅಷ್ಟೇ. ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ರಾಜಕಾರಣದಲ್ಲಿ ಆಸಕ್ತಿಯಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಆಯಾ ಪಕ್ಷದ ಸದಸ್ಯರಾಗುವುದು ಒಳಿತು. ನಮ್ಮ ರಾಜ್ಯದಲ್ಲಿ ದರಿದ್ರ ಎನ್ನುವ ಯಾವ ಪ್ರದೇಶವೂ ಇಲ್ಲ. ಎಲ್ಲಿಗೆ ವರ್ಗವಾದರೂ ಹೋಗಿ ಪ್ರೀತಿಯಿಂದ ಕೆಲಸ ಮಾಡಬೇಕು. ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು.

ವರ್ಗಾವಣೆ ಕೆಸರು ಒಂದೇ ದಿನದಲ್ಲಿ ಸ್ವಚ್ಛವಾಗುವುದಿಲ್ಲ. ಆಡಳಿತದ ಅಪಾರ ಅನುಭವ ಹಾಗೂ ಸಾಮಾಜಿಕ ನ್ಯಾಯದ ಕಾಳಜಿ ಇರುವ ಸಿದ್ದರಾಮಯ್ಯನವರಿಗೆ ಆ ಕೆಸರು ತೊಳೆಯಲು ಸ್ಪಷ್ಟ ಬಹುಮತದ ರೂಪದಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ. ಒತ್ತಡಗಳು ಇದ್ದೇ ಇರುತ್ತವೆ. ಒತ್ತಡಗಳನ್ನು ಮೀರಿ ಸಾಧನೆ ಮಾಡುವವನೇ ನಿಜವಾದ ನಾಯಕ. ಸಿದ್ದರಾಮಯ್ಯನವರಲ್ಲಿ ಅಂತಹ ನಾಯಕನನ್ನು ನಾವು ನೋಡಬಹುದೇ?

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT