ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಧಿತ ವಾಸ್ತವ ಫೋನ್

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಿಥ್ಯಾವಾಸ್ತವ (virtual reality) ಮತ್ತು ವರ್ಧಿತ ವಾಸ್ತವ (augmented reality) ಪ್ರಮುಖವಾಗುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ, ಇನ್ನು ಒಂದೆರಡು ವರ್ಷ ಈ ಕ್ಷೇತ್ರವೇ ಮುಂಚೂಣಿಯಲ್ಲಿರುತ್ತದೆಂದು ಸಮೀಕ್ಷೆಗಳು ತಿಳಿಸುತ್ತಿವೆ.

ಯಾವುದಾದರೊಂದು ವಸ್ತು, ದೃಶ್ಯ ಅಥವಾ ಕೆಲಸವನ್ನು ಮೂರು ಆಯಾಮಗಳಲ್ಲಿ ಕೃತಕವಾಗಿ ಸೃಷ್ಟಿಸಿದಂತೆ ಭ್ರಮೆ ಮೂಡಿಸುವುದು ಮಿಥ್ಯಾವಾಸ್ತವ ತಂತ್ರಜ್ಞಾನದ ಪ್ರಮುಖ ಅಂಗ. ಉದಾಹರಣೆಗೆ ಕಟ್ಟಡಗಳ ಪ್ರತಿಕೃತಿ. ಮಿಥ್ಯಾವಾಸ್ತವ ವೀಕ್ಷಕವನ್ನು ಬಳಸಿ ನೋಡಿದರೆ ನೀವು ಕಟ್ಟಡದ ಒಳಗೆಲ್ಲ ಸುತ್ತಾಡಿದಂತೆ ನಿಮಗೆ ಭಾಸವಾಗುತ್ತದೆ.

ನೀವು ಕೊಳ್ಳಲಿರುವ ಅಪಾರ್ಟ್‌ಮೆಂಟಿನ ಕೋಣೆಗಳು, ಅಡುಗೆ ಮನೆ, ಹಾಲ್ ಎಲ್ಲ ಹೇಗಿವೆ ಎಂದು ನೀವು ಮನೆಯಲ್ಲೇ ಕುಳಿತು ಮೂರು ಆಯಾಮದಲ್ಲಿ ವೀಕ್ಷಣೆ ಮಾಡಬಹುದು. ನೀವು ನಿಮ್ಮ ಫೋನ್ ಕ್ಯಾಮೆರಾದ ಮೂಲಕ ನಿಮ್ಮ ಮನೆಯನ್ನೇ ವೀಕ್ಷಿಸುತ್ತಿದ್ದೀರೆಂದಿಟ್ಟುಕೊಳ್ಳಿ. ಈ ರೀತಿ ವೀಕ್ಷಿಸುತ್ತಿರುವ ದೃಶ್ಯದ ಮೇಲೆ ಗಣಕ ಸೃಷ್ಟಿಸಿದ ಪೀಠೋಪಕರಣಗಳನ್ನು ಇರಿಸಿ ನೋಡಿದರೆ ಅವು ಹೇಗಿರಬಹುದು? ಅದುವೇ ವರ್ಧಿತ ವಾಸ್ತವ. ನಿಮ್ಮ ಮನೆಯ ಮುಂದೆ ಅಥವಾ ಗ್ಯಾರೇಜಿನಲ್ಲಿ ಬಿಎಂಡಬ್ಲ್ಯು ಕಾರು ನಿಲ್ಲಿಸಿದರೆ ಹೇಗೆ ಕಾಣಬಹುದು ಎಂಬುದನ್ನೂ ಅದು ತೋರಿಸ ಬಲ್ಲುದು. ಹೀಗೆ ತೋರಿಸುವಾಗ ಅದು ಈ ದೃಶ್ಯ ವನ್ನು ಮೂರು ಆಯಾಮದಲ್ಲಿ ಸೃಷ್ಟಿಸುತ್ತದೆ.

ನೀವು ನಿಮ್ಮ ಫೋನಿನ ಕ್ಯಾಮೆರಾದಲ್ಲಿ ಮೂಡಿದ ದೃಶ್ಯವನ್ನು ನೋಡುತ್ತ ಕಾರಿಗೆ ಸುತ್ತು ಬರಬಹುದು! ಹೀಗೆ ಮಾಡಲು ಅನುವು ಮಾಡಿಕೊಡುವ ಒಂದು ಅತ್ಯಾಧುನಿಕ ಫೋನ್ ಏಸುಸ್ ಝೆನ್‌ಫೋನ್ ಎಆರ್ (Asus Zenfone AR). ಇದು ಈ ವಾರದ ಗ್ಯಾಜೆಟ್.

ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. 2.5D ಪರದೆ ಇದೆ. ಹಿಂದುಗಡೆಯ ಕವಚ ತೆಗೆಯಲು ಸಾಧ್ಯವಿಲ್ಲ. ಈ ಕವಚ ಚರ್ಮದಿಂದ ತಯಾರಿಸಿದಂತಿದೆ. ಆದರೆ ಚರ್ಮದ್ದಲ್ಲ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಮತ್ತು ಸ್ವಲ್ಪ ದೂರದಲ್ಲಿ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಇದೆ.

ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ‌ಇದರಲ್ಲಿ ಎರಡು ನ್ಯಾನೊ ಸಿಮ್ ಅಥವಾ ಒಂದು ನ್ಯಾನೊ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಇದರಲ್ಲಿ ಮೂರು ಪ್ರಾಥಮಿಕ ಕ್ಯಾಮೆರಾಗಳಿವೆ ಹಾಗೂ ಅವು ಹಿಂಭಾಗದಲ್ಲಿ ಮೇಲ್ಗಡೆ ಮಧ್ಯದಲ್ಲಿವೆ. ಪಕ್ಕದಲ್ಲಿ ಫ್ಲಾಶ್ ಇದೆ. ಮುಂಭಾಗದಲ್ಲಿ ಕೆಳಗಡೆ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ರಚನೆ ಮತ್ತು ವಿನ್ಯಾಸ ಉತ್ತಮವೇನೋ ಇದೆ ಆದರೆ ಅದ್ಭುತ ಎನ್ನುವಂತಿಲ್ಲ.

ಇದರಲ್ಲಿರುವುದು ಮೇಲ್ದರ್ಜೆಯ ಪ್ರೊಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ 156773 ಇದೆ. ಅಂದರೆ ಇದು ಅತಿ ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಆಡುವ ಅನುಭವ ಅತ್ಯುತ್ತಮವಾಗಿದೆ. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಆಡುವವರಿಗೆ ಇದು ಹೇಳಿ ಮಾಡಿಸಿದ್ದು. ಹೈಡೆಫಿನಿಶನ್ ಮತ್ತು ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೊ ವೀಕ್ಷಣೆ ಮಾಡಬಹುದು.

ಈ ಫೋನಿನ ಹೆಚ್ಚುಗಾರಿಕೆ ಇರುವುದು ಇದರ ಕ್ಯಾಮೆರಾ ಮತ್ತು ವರ್ಧಿತ ವಾಸ್ತವ ತಂತ್ರಜ್ಞಾನದ ಬಳಕೆಯಲ್ಲಿ. ಇದರ ಪ್ರಾಥಮಿಕ ಕ್ಯಾಮೆರಾ ಮೂರು ಕ್ಯಾಮೆರಾ ಲೆನ್ಸ್‌ಗಳನ್ನು ಒಳಗೊಂಡಿದೆ. ಮುಖ್ಯ ಕ್ಯಾಮೆರಾ ಸಂವೇದಕ 23 ಮೆಗಾಪಿಕ್ಸೆಲ್ ರೆಸೊಲೂಶನ್‌ನದ್ದು. ಜೊತೆಗೆ ಇನ್ನೆರಡು ಲೆನ್ಸ್‌ಗಳಿವೆ. ಒಂದು ವಸ್ತು ಎಷ್ಟು ದೂರದಲ್ಲಿ ಇದೆ ಎಂಬುದನ್ನು ಅಳೆಯುತ್ತದೆ. ಮೂರನೆಯದು ವಸ್ತುವಿನ ಚಲನೆಯನ್ನು ಗಮನಿಸುತ್ತಿರುತ್ತದೆ.

ಇವೆಲ್ಲ ವರ್ಧಿತ ವಾಸ್ತವದಲ್ಲಿ ಬಳಕೆಯಾಗುತ್ತವೆ. ಈ ಗೂಗಲ್‌ ಟ್ಯಾಂಗೊ ಮತ್ತು ಡೇಡ್ರೀಮ್ ತಂತ್ರಜ್ಞಾನಗಳನ್ನು ಬಳಸುವ ಕೆಲವೇ ಫೋನ್‌ಗಳಲ್ಲಿ ಇದು ಸೇರಿದೆ. ಆದುದರಿಂದಲೇ ಈ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಕಿರುತಂತ್ರಾಂಶಗಳ (ಆ್ಯಪ್‌) ಸಂಖ್ಯೆ ಇನ್ನೂ ತುಂಬ ಆಗಿಲ್ಲ. ಕೆಲವು ಪ್ರಮುಖ ಆ್ಯಪ್‌ಗಳೆಂದರೆ ಬಿಎಂಡಬ್ಲ್ಯು ಕಾರು, ಸ್ಲಿಂಗ್‌ಶಾಟ್ ಆಟ, ವಸ್ತುಗಳ ಗಾತ್ರವನ್ನು ಅಳತೆ ಮಾಡುವ ಆ್ಯಪ್‌, ಗೂಗಲ್‌ ಸ್ಟ್ರೀಟ್ ವ್ಯೂ, ಇತ್ಯಾದಿ.

ಮೂರು ಆಯಾಮದಲ್ಲಿ ವಸ್ತುಗಳನ್ನು ಪ್ರತ್ಯನುಕರಣೆಯ (simulation) ಮೂಲಕ ನೋಡಬೇಕಿದ್ದರೆ ನೀವು ಎರಡು ಲೆನ್ಸ್‌ಗಳಿರುವ ವಿಆರ್ ವ್ಯೂವರ್ ಸಾಧನವನ್ನು ಖರೀದಿಸಬೇಕು. ಅದು ಪ್ರತ್ಯೇಕವಾಗಿ ₹6,499ಕ್ಕೆ ಲಭ್ಯ. ಈ ಫೋನ್ ಮತ್ತು ಆ ಸಾಧನ ಒಟ್ಟು ಸೇರಿ ಬಳಸಿದರೆ ಅದ್ಭುತ ಅನುಭವ ನಿಮ್ಮದಾಗುವುದು. ಆದರೆ ವರ್ಧಿತ ವಾಸ್ತವ ತಂತ್ರಜ್ಞಾನವನ್ನು ತುಂಬ ಹೊತ್ತು ಬಳಸಿದರೆ ಫೋನ್ ಸಿಕ್ಕಾಪಟ್ಟೆ ಬಿಸಿಯಾಗುತ್ತದೆ ಮತ್ತು ಬ್ಯಾಟರಿ ಅತಿ ವೇಗವಾಗಿ ಖಾಲಿಯಾಗುತ್ತದೆ.

ಇದರ ಆಡಿಯೊ ಇಂಜಿನ್ ಅತ್ಯುತ್ತಮವಾಗಿದೆ. ಉತ್ತಮ ಗುಣಮಟ್ಟದ ಇಯರ್‌ ಫೋನ್ ನೀಡಿದ್ದಾರೆ. ಡಿಟಿಎಸ್ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಮೂರು ಆಯಾಮದ ಉತ್ತಮ ಗುಣಮಟ್ಟದ ಧ್ವನಿಯನ್ನು ಅನುಭವಿಸಬೇಕಾದರೆ ಇದು ಉತ್ತಮ ಆಯ್ಕೆ. ಸಿನಿಮಾ ನೋಡಲು ಹೇಳಿ ಮಾಡಿಸಿದ್ದು. ಬ್ಯಾಟರಿ ಬಾಳಿಕೆ ಮಾತ್ರ ಏನೇನೂ ತೃಪ್ತಿದಾಯಕವಾಗಿಲ್ಲ. ಏನೂ ಕೆಲಸ ಮಾಡದೆ ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇಟ್ಟರೂ ಬ್ಯಾಟರಿ ಒಪ್ಪುವಂತಹ ವೇಗಕ್ಕಿಂತ ಜಾಸ್ತಿ ವೇಗದಲ್ಲಿ ಖಾಲಿಯಾಗುತ್ತಿರುತ್ತದೆ.

ವಾರದ ಆ್ಯಪ್
ಭೌತವಿಜ್ಞಾನ ಬಳಸಿ ಆಟ ಆಡಿ

ವಿಜ್ಞಾನಾಧಾರಿತ ಆಟಗಳೆಂದರೆ ನನಗೆ ಇಷ್ಟ. ನನ್ನ ಹಾಗೆ ಇರುವವರು ನನ್ನ ಓದುಗ ಬಳಗದಲ್ಲೂ ಇದ್ದಾರೆಂಬ ನಂಬಿಕೆ ನನ್ನದು. ವಿಜ್ಞಾನಾಧಾರಿತ ಹಲವು ಆಟಗಳನ್ನು ಈ ಅಂಕಣದಲ್ಲಿ ಸೂಚಿಸಿದ್ದೇನೆ. ಈ ವಾರ ಅಂತಹುದೇ ಇನ್ನೊಂದು ಆಟ. ಇದರಲ್ಲಿ ಒಂದು ಟ್ರಕ್, ಒಂದು ಪೆಟ್ಟಿಗೆ ಮತ್ತು ಆ ಪೆಟ್ಟಿಗೆಯನ್ನು ತಲುಪಿಸಬೇಕಾದ ಜಾಗದ ಸೂಚನೆ ಇವೆ. ಹಲವು ಅಡಚಣೆಗಳಿವೆ. ಬೆರಳಿನಲ್ಲಿ ಗೆರೆ ಎಳೆದರೆ ಅದು ಸೇತುವೆಯಾಗುತ್ತದೆ. ಈ ಸೇತುವೆಯ ಮೇಲೆ ನೀವು ಪೆಟ್ಟಿಗೆಯನ್ನು ಇಟ್ಟುಕೊಂಡ ಟ್ರಕ್ ಅನ್ನು ಚಲಾಯಿಸಿ ಆ ಪೆಟ್ಟಿಗೆ ಯನ್ನು ಅದು ತಲುಪಬೇಕಾದ ಸ್ಥಳಕ್ಕೆ ತಲುಪಿಸಬೇಕು. ಎಲ್ಲ ಆಟಗಳಂತೆ ಇದರಲ್ಲೂ ಹಲವು ಹಂತಗಳಿವೆ. ಸ್ವಲ್ಪ ಕಿರಿಕಿರಿಯೇ ಅನ್ನಿಸುವಷ್ಟು ಜಾಹೀರಾತುಗಳಿವೆ. ಈ ಆಟ ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Brain On Physics Boxs Puzzles ಎಂದು ಹುಡುಕಬೇಕು ಅಥವಾ http://bit.ly/gadgetloka298 ಜಾಲತಾಣಕ್ಕೆ ಭೇಟಿ ನೀಡಬೇಕು.

ಗ್ಯಾಜೆಟ್ ಸುದ್ದಿ
ಬಿಲ್ ಗೇಟ್ಸ್ ಬಳಸುತ್ತಿರುವ ಫೋನ್ ಯಾವುದು?

ಬಿಲ್ ಗೇಟ್ಸ್ ಗೊತ್ತು ತಾನೆ? ಗೊತ್ತಿಲ್ಲದವರಿಗೆ ಹೇಳುತ್ತೇನೆ – ಅವರು ಮೈಕ್ರೋಸಾಫ್ಟ್ ಕಂಪೆನಿಯ ಸ್ಥಾಪಕರು. ಮೈಕ್ರೋಸಾಫ್ಟ್, ವಿಂಡೋಸ್, ವಿಂಡೋಸ್ ಫೋನ್ ಮತ್ತು ಬಿಲ್ ಗೇಟ್ಸ್ ಎಲ್ಲ ಒಂದೇ ಗುಂಪಿನಲ್ಲಿರಬೇಕು ತಾನೆ? ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಿಲ್ ಗೇಟ್ಸ್ ಅವರನ್ನು ‘ನೀವು ಉಪಯೋಗಿಸುತ್ತಿರುವ ಫೋನ್ ಯಾವುದು’ ಎಂಬ ಪ್ರಶ್ನೆ ಕೇಳಲಾಯಿತು. ಏನು ಉತ್ತರ ಬಂದಿರಬಹುದು ಊಹಿಸಿ ನೋಡೋಣ. ಸಹಜವಾಗಿಯೇ ವಿಂಡೋಸ್ ಫೋನ್ ಎನ್ನುತ್ತೀರಾ? ನಿಮ್ಮ ಊಹೆ ತಪ್ಪು. ಅತಿ ಶ್ರೀಮಂತರು ಬಳಸುವ ಐಫೋನ್ ಎನ್ನುತ್ತೀರಾ? ಅದೂ ತಪ್ಪು ಉತ್ತರ. ಬಿಲ್ ಗೇಟ್ಸ್ ಅವರು ಇತ್ತೀಚೆಗಷ್ಟೆ ವಿಂಡೋಸ್ ಫೋನಿನಿಂದ ಆ್ಯಂಡ್ರಾಯ್ಡ್ ಫೋನಿಗೆ ಬದಲಾಯಿಸಿಕೊಂಡಿದ್ದಾರೆ. ಯಾವ ಕಂಪೆನಿಯ ಯಾವ ಮಾದರಿಯ ಫೋನ್ ಎಂಬುದನ್ನು ಅವರು ತಿಳಿಸಿಲ್ಲ.

ಗ್ಯಾಜೆಟ್ ಸಲಹೆ
ಜಯಕುಮಾರ ಗುಪ್ತ ಅವರ ಪ್ರಶ್ನೆ:
ನನ್ನ ಬಳಿ Asus Eee PC 1015CX Model ನ Tablet/Laptop ಇದೆ. ಅದರಲ್ಲಿ OS Windows 7 ಅಳವಡಿಸಲಾಗಿದೆ. ನಾನು ಟ್ಯಾಬ್ಲೆಟ್ ಮೂಲಕ ಇಂಗ್ಲಿಷ್ ಕೀಬೋರ್ಡ್ ಉಪಯೋಗಿಸಿ ಕನ್ನಡ ಭಾಷೆಯನ್ನು ಟೈಪ್ ಮಾಡುವ ಆಸೆ ಇದೆ. ಗೂಗಲ್‌ ಪ್ಲೇಸ್ಟೋರಿನಲ್ಲಿ ಯಾವ ಕನ್ನಡ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಲಹೆ ಮಾಡುವಿರಿ?

ಉ: ಗೂಗಲ್‌ ಪ್ಲೇಸ್ಟೋರಿನಲ್ಲಿ ದೊರೆಯುವುದು ಆ್ಯಂಡ್ರಾಯ್ಡ್ ನಲ್ಲಿ ಕೆಲಸ ಮಾಡುವ ಆ್ಯಪ್‌ಗಳು. ನಿಮ್ಮದು ವಿಂಡೋಸ್ ಗಣಕ. ಅದರಲ್ಲೇ ಕನ್ನಡ ಕೀಬೋರ್ಡ್ ಇದೆ. ನೀವು ಅದನ್ನು ಚಾಲನೆ ಮಾಡಿಕೊಳ್ಳಬೇಕು, ಅಷ್ಟೆ. ಅದಕ್ಕಾಗಿ ನೀವು Control Panel > Region and language > Add a keyboard ಅನ್ನು ಆಯ್ಕೆ ಮಾಡಿಕೊಂಡು ನಂತರ ಕನ್ನಡದ ಕೀಬೋರ್ಡ್ ಅನ್ನು ಸೇರಿಸಿಕೊಳ್ಳಬೇಕು.

ಗ್ಯಾಜೆಟ್ ತರ್ಲೆ
ಹೊಸ ಐಫೋನ್ 10ರಲ್ಲಿ ನಿಮ್ಮ ಮುಖವೇ ಪಾಸ್‌ವರ್ಡ್. ಇದರ ಬಗ್ಗೆ ಮತ್ತೂ ಒಂದು ನಗೆಹನಿ – ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8ರಲ್ಲಿ ಮುಖವನ್ನು ಗುರುತುಹಿಡಿದು ಅದನ್ನೇ ಪಾಸ್‌ವರ್ಡ್‌ ಆಗಿ ಬಳಸುವ ಸವಲತ್ತು ಮೊದಲೇ ಇತ್ತು. ಈಗ ಅವರು ಅದಕ್ಕೆ ಒಂದು ಹೊಸ ಸೌಲಭ್ಯವನ್ನು ಸೇರಿಸಿದ್ದಾರೆ. 

ಒಂದಕ್ಕಿಂತ ಹೆಚ್ಚು ಬೆರಳಚ್ಚುಗಳನ್ನು ಮೊದಲೇ ಸಂಗ್ರಹಿಸಿಟ್ಟು ಅವುಗಳಲ್ಲಿ ಯಾವ ಬೆರಳನ್ನಾದರೂ ಪಾಸ್‌ವರ್ಡ್‌ ಆಗಿ ಬಳಸುವ ತಂತ್ರಜ್ಞಾನ ಬಳಕೆಯಲ್ಲಿರುವುದು ಗೊತ್ತು ತಾನೆ? ಈಗ ಮುಖಚಹರೆಗೂ ಅದನ್ನು ವಿಸ್ತರಿಸಲಾಗಿದೆ. ಮುಖಕ್ಕೆ ಯಾವುದೇ ಮೇಕಪ್ ಮಾಡದಿದ್ದಾಗ ಒಮ್ಮೆ, ಮೇಕಪ್ ಮಾಡಿದಾಗ ಇನ್ನೊಮ್ಮೆ ಮುಖವನ್ನು ಕ್ಯಾಮೆರಾಕ್ಕೆ ತೋರಿಸಿ ಅವರೆಡನ್ನೂ ಸಂಗ್ರಹಿಸಿಟ್ಟುಕೊಳ್ಳುವ ಸವಲತ್ತು ಬಂದಿದೆ. ಮೇಕಪ್ ಮಾಡಿದ ಮುಖವನ್ನು ತೋರಿಸಿದಾಗ ಕ್ಯಾಮೆರಾ ಕೆಲಸ ಮಾಡಲಿಲ್ಲ ಎಂದು ಚಿಂತಿಸಬೇಕಾಗಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT