ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಮಾ ಸಮಿತಿ ವರದಿ, ಸುಗ್ರೀವಾಜ್ಞೆ ಮತ್ತು ಮಹಿಳಾ ಸುರಕ್ಷತೆ

Last Updated 4 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ದೇಶದೆಲ್ಲೆಡೆ ಈ ಹೊತ್ತು ಚರ್ಚೆ-ಸಂವಾದಗಳಿಗೆ ಗ್ರಾಸವಾಗಿರುವಂಥ ಪ್ರಮುಖ ವಿಚಾರಗಳಲ್ಲಿ ನ್ಯಾಯಮೂರ್ತಿ ಜೆ.ಎಸ್. ವರ್ಮಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯೂ ಒಂದು. ಕಳೆದ ವರ್ಷದ ಡಿಸೆಂಬರ್ 16ರಂದು ದೆಹಲಿಯಲ್ಲಿ 23 ವರ್ಷದ ವಿದ್ಯಾರ್ಥಿನಿಯ ಮೇಲೆ ಚಲಿಸುವ ಬಸ್ಸಿನಲ್ಲಿ ನಡೆದ ಅತ್ಯಂತ ಭಯಾನಕ ಸ್ವರೂಪದ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ದುರಂತ ಸಾವು ತಂದ ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ವರ್ಮಾ ಅವರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯನ್ನು ಡಿಸೆಂಬರ್ 23ರಂದು ರಚಿಸಿತ್ತು.

ಈ ಸಮಿತಿಯ ಇತರ ಸದಸ್ಯರು ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಲೀಲಾ ಸೇಠ್ ಮತ್ತು ಭಾರತದ ಸಾಲಿಸಿಟರ್ ಜನರಲ್ ಆಗಿದ್ದ ಗೋಪಾಲ್ ಸುಬ್ರಮಣಿಯಂ ಅವರುಗಳು. ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯಗಳನ್ನೆಸಗುವವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವಂಥ, ಇಂತಹ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ತ್ವರಿತ ಗತಿಯಲ್ಲಿ ವಿಚಾರಣೆಗೆ ಒಳಪಡಿಸುವಂಥ ವ್ಯವಸ್ಥೆಯನ್ನು ಸೃಷ್ಟಿಸಲು ಅನುವು ಮಾಡಿಕೊಡುವಂಥ ರೀತಿಯಲ್ಲಿ ಅಪರಾಧ ಕಾಯಿದೆಗೆ ತಿದ್ದುಪಡಿಗಳನ್ನು ಸೂಚಿಸುವ ಸ್ಪಷ್ಟ ಅಧ್ಯಾದೇಶವನ್ನು ಈ ಸಮಿತಿ ಹೊಂದಿತ್ತು.

ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಯನ್ನು ಜನವರಿ 23ರಂದು ಸಲ್ಲಿಸಿತ್ತು. ರಚನೆಯಾದ ಒಂದು ತಿಂಗಳ ಒಳಗೆ ವರದಿ ಸಲ್ಲಿಸಿದ್ದ ಈ ಸಮಿತಿ ಆಹ್ವಾನಿಸಿದ್ದ ಸಲಹೆಗಳಿಗೆ 80,000ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಹೊರ ಹೊಮ್ಮಿದ್ದು, ದೆಹಲಿ ಘಟನೆ ಸಾರ್ವಜನಿಕ ಪ್ರಜ್ಞೆಯನ್ನು ಯಾವ ಮಟ್ಟಕ್ಕೆ ಕಲಕಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು.

ವರ್ಮಾ ಸಮಿತಿಯ ವರದಿಯ ಸಾಧಕ-ಬಾಧಕಗಳನ್ನು ಕುರಿತ ಚರ್ಚೆ-ಸಂವಾದಗಳು, ಪ್ರತಿಕ್ರಿಯೆಗಳು ಇನ್ನೂ ಮೂಡಿ ಬರುತ್ತಿರುವಾಗಲೇ ಕೇಂದ್ರ ಸಚಿವ ಸಂಪುಟ ಫೆಬ್ರುವರಿ 1 ರಂದು, ಅಪರಾಧ ಕಾಯಿದೆಗೆ ತಿದ್ದುಪಡಿಗಳನ್ನು ತರುವಂಥ ಸುಗ್ರೀವಾಜ್ಞೆಯೊಂದನ್ನು ಅನುಮೋದಿಸಿತು. ಈ ಸುಗ್ರೀವಾಜ್ಞೆಗೆ ರಾಷ್ಟ್ರಾಧ್ಯಕ್ಷರು ಈಗಾಗಲೇ ಅಂಕಿತ ಹಾಕಿದ್ದು ಅದು ತಕ್ಷಣವೇ ಕಾನೂನಿನ ರೂಪವನ್ನು ತಳೆಯಲಿದೆ. ಆರು ತಿಂಗಳ ಒಳಗೆ ಈ ಸುಗ್ರೀವಾಜ್ಞೆಗೆ ಸಂಸತ್ತಿನ ಅಂಗೀಕಾರ ದೊರೆಯಬೇಕಿದೆ.

ಫೆಬ್ರವರಿ 21ರಿಂದ ಸಂಸತ್ತಿನ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಚರ್ಚೆಗೆ ಒಳಪಟ್ಟು ಪರಿಷ್ಕೃತ ಅಪರಾಧ ಕಾಯಿದೆಯ ರೂಪವನ್ನು ತಳೆಯಬಹುದಾಗಿದ್ದ, ತನ್ನಿಂದಲೇ ನೇಮಕವಾಗಿದ್ದ ಸಮಿತಿಯೊಂದು ಸಲ್ಲಿಸಿದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸದೇ ಆತುರಾತುರವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆಯನ್ನು ಮಹಿಳಾ ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಎತ್ತಿವೆ. ವರ್ಮಾ ಸಮಿತಿಯ ಕೆಲವು ಶಿಫಾರಸುಗಳನ್ನು ಅಲಕ್ಷಿಸಿ ಅಥವಾ ತಿರುಚಿ ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರದ ಈ ಕ್ರಮದ ಬಗ್ಗೆ ಅಸಮಾಧಾನ ಹೊರಬಿದ್ದಿರುವುದು ಸಹಜವೇ ಆಗಿದೆ.

ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಇನ್ನೂ ಅನೇಕ ಪ್ರಶ್ನೆ-ಪ್ರತಿಭಟನೆಗಳಿಗೆ ಎಡೆ ಮಾಡಿಕೊಡಲಿದೆ. ಹಾಗಾದರೆ ವರ್ಮಾ ಸಮಿತಿ ನೀಡಿದ್ದ ವರದಿಯ ಶಿಫಾರಸುಗಳಿಗೂ ಸುಗ್ರೀವಾಜ್ಞೆಯಲ್ಲಿ ಮೂಡಿ ಬಂದಿರುವ ತಿದ್ದುಪಡಿಗಳಿಗೂ ನಡುವೆ ಇರುವ ವ್ಯತ್ಯಾಸಗಳೇನು ಎನ್ನುವ ಪ್ರಶ್ನೆ ಏಳುತ್ತದೆ. ಸಮಿತಿಯು ನೀಡಿದ್ದ ಶೇಕಡ 90ರಷ್ಟು ಶಿಫಾರಸುಗಳನ್ನು ಸುಗ್ರೀವಾಜ್ಞೆಯಲ್ಲಿ ಸೇರಿಸಲಾಗಿದೆ ಎಂಬ ಸ್ಪಷ್ಟೀಕರಣ ಸರ್ಕಾರಿ ವಲಯಗಳಿಂದ ಕೇಳಿ ಬರುತ್ತಿದೆ. ಆದರೆ ಮಹಿಳಾ ಸಂಘಟನೆಗಳು ಈ ಸುಗ್ರೀವಾಜ್ಞೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸುತ್ತಿರುವುದೇತಕ್ಕೆ?

ದೆಹಲಿಯ ಅತ್ಯಾಚಾರ ಪ್ರಕರಣ ವರ್ಮಾ ಸಮಿತಿಯ ರಚನೆಗೆ ಹಾಗೂ ಅಪರಾಧ ಕಾಯಿದೆಯ ಪರಿಷ್ಕರಣದ ಬೇಡಿಕೆಗೆ ಮೂಲ ಕಾರಣವಾದ್ದರಿಂದ ಅತ್ಯಾಚಾರದ ವಿಚಾರವನ್ನೇ ತೆಗೆದುಕೊಳ್ಳೋಣ. ಅತ್ಯಾಚಾರವನ್ನು ವರ್ಮಾ ಸಮಿತಿ ಒಂದು ಸೀಮಿತ ಅರ್ಥದಲ್ಲಿ ನೋಡದೆ ಎಲ್ಲ ಲೈಂಗಿಕ ಅಪರಾಧಗಳನ್ನೂ ಪುರುಷ ಪ್ರಾಧಾನ್ಯತೆಯ ಸಾಂಸ್ಥಿಕ ಚೌಕಟ್ಟಿನಲ್ಲಿ ವಿಶ್ಲೇಷಿಸಿದ್ದು ಗಮನಾರ್ಹ. ಆದರೆ ಅತ್ಯಾಚಾರ ಹೆಣ್ಣಿನ ಮೇಲೆ ನಡೆಯುವ ಲೈಂಗಿಕ ಆಕ್ರಮಣವಾದ್ದರಿಂದ ಅದನ್ನು ಲಿಂಗ ನಿರ್ದಿಷ್ಟವಾದ (ಜೆಂಡರ್ ಸ್ಪೆಸಿಫಿಕ್) ಅಪರಾಧವೆಂದು ಪರಿಗಣಿಸಬೇಕೆಂಬ ಸಮಿತಿ ಶಿಫಾರಸ್ಸನ್ನು ಸುಗ್ರೀವಾಜ್ಞೆ ತಳ್ಳಿಹಾಕಿದೆ. ಅತ್ಯಾಚಾರವನ್ನು ಲಿಂಗ ತಟಸ್ಥತೆಯ ದೃಷ್ಟಿಕೋನದಿಂದ ನೋಡಿದರೆ ಅನ್ಯಾಯವಾಗುವುದು ಮಹಿಳೆಯರಿಗೆ ಎನ್ನುವುದರಲ್ಲಿ ಸಂದೇಹವಿಲ್ಲ.

ಅತ್ಯಾಚಾರವೆನ್ನುವ ಪಿಡುಗನ್ನು ದೆಹಲಿಯಲ್ಲಿ ನಡೆದ ಪ್ರಕರಣಕ್ಕೆ ಮಾತ್ರ ಸೀಮಿತವಾಗಿಸದೆ ಇಂಥ ಪ್ರಕರಣಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವುದು ಎಷ್ಟು ಮುಖ್ಯವೋ, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜ ಮತ್ತು ಸರ್ಕಾರಗಳು ಕಾರ್ಯ ಪ್ರವೃತ್ತವಾಗಬೇಕಾದ್ದು ಕೂಡ ಅಷ್ಟೇ ಮುಖ್ಯ ಎನ್ನುವ ನಿಲುವನ್ನು ವರ್ಮಾ ಸಮಿತಿ ತಳೆದಿದೆ. ಈ ಹಿನ್ನೆಲೆಯಲ್ಲೇ ತಮ್ಮ ಕರ್ತವ್ಯದಿಂದ ವಿಮುಖರಾಗುವ ಸರ್ಕಾರಿ ವ್ಯವಸ್ಥೆಗಳ ಪ್ರತಿನಿಧಿಗಳಿಗೂ ಕಠಿಣ ಶಿಕ್ಷೆಯನ್ನು ನೀಡಬೇಕು ಎಂಬ ಶಿಫಾರಸ್ಸನ್ನು ಸಮಿತಿ ನೀಡಿತ್ತು. ಆದರೆ ಸುಗ್ರೀವಾಜ್ಞೆಯಲ್ಲಿ ಇದಕ್ಕೆ ಅವಕಾಶವಿಲ್ಲ. ದೆಹಲಿಯ ಅತ್ಯಾಚಾರ ಪ್ರಕರಣದಿಂದ ಹಿಡಿದು, ದೇಶದಾದ್ಯಂತ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ಅನೇಕ ದೌರ್ಜನ್ಯದ ಘಟನೆಗಳಲ್ಲಿ ನ್ಯಾಯ ದೊರೆಯದಿರಲು ಆಡಳಿತಾತ್ಮಕ ವ್ಯವಸ್ಥೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದ್ದು, ಇದಕ್ಕೆ ಕಾರಣರಾದವರಿಗೆ ಸೂಕ್ತ ಶಿಕ್ಷೆಯನ್ನು ನೀಡದಿದ್ದರೆ ಕಾನೂನನ್ನು ಎಷ್ಟು ಬಿಗಿ ಮಾಡಿದರೇನು ಪ್ರಯೋಜನ?

ಅತ್ಯಾಚಾರಕ್ಕೆ ವಿಧಿಸುವ ಶಿಕ್ಷೆಯ ಸ್ವರೂಪದ ಬಗ್ಗೆಯೂ ಸುಗ್ರೀವಾಜ್ಞೆಯಲ್ಲಿ ಸರ್ಕಾರ ತಳೆದಿರುವ ನಿಲುವಿಗೂ ವರ್ಮಾ ಸಮಿತಿಯ ಶಿಫಾರಸ್ಸಿಗೂ ನಡುವೆ ವ್ಯತ್ಯಾಸಗಳಿವೆ. ದೆಹಲಿಯ ಪ್ರಕರಣದಲ್ಲಿ ಭಾಗಿಯಾದ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸಬೇಕೆಂಬ ಬೇಡಿಕೆಗೆ ಭಾರಿ ಬೆಂಬಲ ದೊರೆತಿದ್ದು ನಿಜವೇ. ಏಕೆಂದರೆ ಆಗ ದೇಶದ ಮನಃಸ್ಥಿತಿ ಹಾಗಿತ್ತು. ಆದರೆ ವರ್ಮಾ ಸಮಿತಿ ಅತ್ಯಾಚಾರಕ್ಕೆ ಮರಣದಂಡನೆಯನ್ನು ನೀಡಲು ತನ್ನ ಸಹಮತವನ್ನು ವ್ಯಕ್ತಪಡಿಸಿಲ್ಲ. ಅತ್ಯಾಚಾರಿಗಳಿಗೆ 20 ವರ್ಷಗಳ ಸೆರೆಮನೆ ವಾಸ ಅಥವಾ ಆಜೀವ ಕಾರಾಗೃಹ ಶಿಕ್ಷೆಯನ್ನು ಸಮಿತಿ ಶಿಫಾರಸು ಮಾಡಿದೆ.

ಈಗ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಸುಗ್ರೀವಾಜ್ಞೆ  `ಅಪರೂಪದಲ್ಲಿ ಅಪರೂಪದ ಪ್ರಕರಣ' ಗಳಲ್ಲಿ (ಎಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ಸಾವನ್ನಪ್ಪುತ್ತಾಳೋ ಅಥವಾ ಜೀವಚ್ಛವದಂತೆ ಬದುಕುವ ಸ್ಥಿತಿಗೆ ತಲುಪುತ್ತಾಳೋ) ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸಲು ಅವಕಾಶವನ್ನು ಕಲ್ಪಿಸಿದೆ. ಈ ಸುಗ್ರೀವಾಜ್ಞೆ ಹೊರಬಿದ್ದ ಸಂದರ್ಭದಲ್ಲೇ ದೆಹಲಿಯ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರ ವಿರುದ್ಧ ಅಲ್ಲಿನ ತ್ವರಿತಗತಿ ನ್ಯಾಯಾಲಯ ಆರೋಪ ಸಿದ್ಧಪಡಿಸಿದ್ದು ಇಂದಿನನಿಂದ ಪ್ರಕರಣದ ವಿಚಾರಣೆ ಆರಂಭವಾಗಲಿದೆ, ಸುಗ್ರೀವಾಜ್ಞೆಗೆ ಸ್ವೀಕೃತಿ ದೊರೆತಿರುವುದರಿಂದ, ಈ ಪ್ರಕರಣವನ್ನು `ಅಪರೂಪದಲ್ಲಿ ಅಪರೂಪದ್ದು'  ಎಂದು ಪರಿಗಣಿಸಿ, ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸಿ ತಾನೆಷ್ಟು  ಬಿಗಿ  ಎಂಬ ಸಂದೇಶವನ್ನು ಸಾರಲು ಇದು ಸರ್ಕಾರ ನಡೆಸಿರುವ ತಯಾರಿಯೇ ಎಂಬ ಅನುಮಾನ ಕೆಲ ವಲಯಗಳಲ್ಲಿ ವ್ಯಕ್ತವಾಗುತ್ತಿದೆ.

ಸರ್ಕಾರದ ಸುಗ್ರೀವಾಜ್ಞೆಗೆ ಯುವತಿಯ ಕುಟುಂಬದಿಂದಲೂ ಮೆಚ್ಚುಗೆ ದೊರೆತಂತಿದೆ. ಮನೆಯ ಮಗಳನ್ನು ಕಳೆದುಕೊಂಡ ಕುಟುಂಬದವರಿಗೆ ಆಕೆಯನ್ನು ಹತ್ಯೆ ಮಾಡಿದವರಿಗೆ ಅತ್ಯಂತ ಘೋರ ಶಿಕ್ಷೆಯಾದರೆ ಎಲ್ಲೋ ಒಂದೆಡೆ ಭಾವನಾತ್ಮಕವಾಗಿ ಹಿತವೆನಿಸಬಹುದು. ಆದರೆ ನಮ್ಮ ಮುಂದೆ ಎದ್ದು ನಿಂತಿರುವ ದೊಡ್ಡ ಪ್ರಶ್ನೆಯೆಂದರೆ ಈ ಮರಣದಂಡನೆಯಾಗಲಿ, ಸತ್ತವರ ಕುಟುಂಬಕ್ಕೆ ಧನ ಸಹಾಯ ಅಥವಾ ಉದ್ಯೋಗದ ಆಶ್ವಾಸನೆಯಾಗಲಿ ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ನಿರಂತರವಾಗಿ ನಡೆಯುತ್ತಲೇ ಇರುವ ಲೈಂಗಿಕ ಕ್ರೌರ್ಯಕ್ಕೆ ಒಂದು ಸಮರ್ಪಕ ಉತ್ತರವನ್ನು ನೀಡಬಲ್ಲದೇ ಎನ್ನುವುದು.

ಅತ್ಯಾಚಾರವನ್ನು ಅರ್ಥೈಸುವಲ್ಲಿ ವರ್ಮಾ ಸಮಿತಿ ಇಟ್ಟಿದ್ದಂಥ ಒಂದು ಹೊಸ ಹೆಜ್ಜೆಯಿಂದಲೂ ಈ ಸುಗ್ರೀವಾಜ್ಞೆ ವಿಮುಖವಾಗಿದೆ. ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹವಾದ ಕೃತ್ಯವೆಂದು ಪರಿಗಣಿಸಲು ವರ್ಮಾ ಸಮಿತಿ ನೀಡಿದ್ದ ಶಿಫಾರಸ್ಸನ್ನು ಸಮಿತಿ ತಿರುಚಿದೆ. ಪತಿಯಿಂದ ಬೇರ್ಪಟ್ಟ ಪತ್ನಿಯ ಮೇಲೆ ಆಕೆಯ ಅನುಮತಿ ಇಲ್ಲದೆ ಲೈಂಗಿಕ ಬಲಾತ್ಕಾರ ಮಾಡಿದರೆ ಮಾತ್ರ ಆತನಿಗೆ ಏಳು ವರ್ಷದ ಸೆರೆಮನೆ ವಾಸವನ್ನು ಸುಗ್ರೀವಾಜ್ಞೆಯಲ್ಲಿ ವಿಧಿಸಲಾಗಿದೆ. ಹಾಗಾದರೆ ಪತಿ ಮತ್ತು ಪತ್ನಿ ಒಟ್ಟಿಗಿದ್ದಾಗ ಆಕೆಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಅತ್ಯಾಚಾರವಲ್ಲವೇ? ಹೆಣ್ಣು ತನ್ನ ಪತ್ನಿ ಎಂಬ ಏಕೈಕ ಕಾರಣಕ್ಕಾಗಿ ಆಕೆಯ ದೇಹದ ಮೇಲೆ ಪತಿಗೆ ಪ್ರಶ್ನಾತೀತ ಅಧಿಕಾರವಿದೆಯೇ?

ಅತ್ಯಾಚಾರಿ ತನ್ನ ಪತಿಯಾದ ಮಾತ್ರಕ್ಕೆ ಲೈಂಗಿಕ ಸಂಪರ್ಕಕ್ಕೆ ಹೆಣ್ಣು ಸಮ್ಮತಿಯನ್ನು ಸೂಚಿಸಬೇಕೆಂಬ ಧೋರಣೆಯೇ ಮೊದಲು ಪ್ರಶ್ನಾರ್ಹ. ಏಕೆಂದರೆ ಇದು ವೈವಾಹಿಕ ಸಂಬಂಧದೊಳಗೆ ಪುರುಷ ಪರಮಾಧಿಕಾರವನ್ನೂ ಸ್ತ್ರೀಯ ಪರಾಧೀನತೆಯನ್ನೂ ಎತ್ತಿ ಹಿಡಿಯುವಂಥ ಒಂದು ಮೌಲ್ಯ. ವಿವಾಹ ಎಂಬ ಸಂಸ್ಥೆಯನ್ನು ವೈಭವೀಕರಿಸುವ ಹಾಗೂ ತನ್ನ ಅತ್ಯಾಚಾರಿಯೊಡನೆಯೇ ಹೆಣ್ಣಿನ ವಿವಾಹವನ್ನು ನಡೆಸಿ ಆಕೆಯ ಸಮಸ್ಯೆ ಬಗೆಹರಿಯಿತು ಎಂಬಂತೆ ನಡೆದುಕೊಳ್ಳುವಂಥ ಈ ವ್ಯವಸ್ಥೆಯಲ್ಲಿ ಹೆಣ್ಣಿಗೆ ನ್ಯಾಯ ಒದಗಿಸಬಹುದಾಗಿದ್ದಂಥ ಒಂದು ಪ್ರಗತಿಪರ ಹೆಜ್ಜೆಯಿಂದ ಸರ್ಕಾರ ಹಿಮ್ಮೆಟ್ಟಿದೆ.

ಹೆಣ್ಣಿನ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ರೋಗಗ್ರಸ್ತ ಮನಸ್ಸುಗಳು ಹಾಗೂ ಸಂಸ್ಥೆಗಳ ಬಳುವಳಿ. ಆದ್ದರಿಂದ ಈ ಇಡೀ ವ್ಯವಸ್ಥೆಯಲ್ಲೇ ಸಮಗ್ರ ಬದಲಾವಣೆಗಳನ್ನು ತರಬೇಕೆಂಬುದು ವರ್ಮಾ ಸಮಿತಿಯ ಆಶಯವಾಗಿತ್ತು. ತಪ್ಪಿತಸ್ಥರು ಯಾರೇ ಆಗಿರಲಿ, ಅವರಿಗೆ ಕಾನೂನಿನಿಂದ ರಿಯಾಯಿತಿ ದೊರೆಯಬಾರದು, ಏಕೆಂದರೆ ಈಗಿರುವ ವ್ಯವಸ್ಥೆಯಲ್ಲಿ ಕೆಲ ವರ್ಗದ ಅಪರಾಧಿಗಳಿಗೆ ತಮ್ಮ ಹುದ್ದೆ, ಸ್ಥಾನ, ಪ್ರಭಾವ, ಹಣ ಮುಂತಾದವುಗಳನ್ನು ಉಪಯೋಗಿಸಿ ಶಿಕ್ಷೆಯಿಂದ ನುಣುಚಿಕೊಳ್ಳಲು ಸಾಧ್ಯವಿದೆ.

ಉದಾಹರಣೆಗೆ, ಸೇನಾ ಪಡೆಗಳಿಗೆ ವಿಶೇಷ ಅಧಿಕಾರಗಳನ್ನು ನೀಡುವ ಕಾಯಿದೆಯನ್ನೇ ತೆಗೆದುಕೊಳ್ಳೋಣ. ಇದನ್ನು ಬಳಸಿಕೊಂಡು ಸುರಕ್ಷತೆಯನ್ನು ಕಾಪಾಡುವ ನೆಪದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ನಡೆಸಿದಂಥ ಸಂದರ್ಭಗಳಲ್ಲಿ ಸೇನಾ ಪಡೆಗಳಿಗೆ ಕಾನೂನು ಕ್ರಮದಿಂದ ವಿನಾಯಿತಿ ದೊರೆಯುತ್ತದೆ. ಇದನ್ನು ತಪ್ಪಿಸಿ, ಅವರಿಂದ ನಡೆಯುವಂಥ ಅತ್ಯಾಚಾರಗಳನ್ನೂ ಅಪರಾಧ ಕಾಯಿದೆಯ ವ್ಯಾಪ್ತಿಯಲ್ಲಿ ತರಬೇಕೆಂದು ವರ್ಮಾ ಸಮಿತಿ ಶಿಫಾರಸು ಮಾಡಿತ್ತು. ಆದರೆ ಸುಗ್ರೀವಾಜ್ಞೆ ಇದನ್ನು ಪರಿಗಣಿಸಿಲ್ಲ. ಸಂಘರ್ಷ ಪೀಡಿತ ಪ್ರದೇಶದ ಮಹಿಳೆಯರಿಗೆ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಭರವಸೆಯನ್ನು ಮೂಡಿಸಬಹುದಾಗಿದ್ದಂಥ ಒಂದು ಅವಕಾಶ ತಪ್ಪಿದೆ.

ಹಾಗೆಯೇ ದೇಶವನ್ನಾಳುವ ಅನೇಕ ಜನಪ್ರತಿನಿಧಿಗಳು ಅಥವಾ ಚುನಾವಣೆಗಳಲ್ಲಿ ಸ್ಪರ್ಧಿಸಲಿಚ್ಛಿಸಿರುವಂಥ ವ್ಯಕ್ತಿಗಳು ಲೈಂಗಿಕ ಅಪರಾಧಗಳನ್ನೆಸಗಿದಾಗ ಅವರನ್ನು ಅನರ್ಹಗೊಳಿಸಬೇಕೆಂಬ ವರ್ಮಾ ಸಮಿತಿಯ ಶಿಫಾರಸ್ಸಿಗೂ ಸುಗ್ರೀವಾಜ್ಞೆಯಲ್ಲಿ ಸ್ಧಾನವಿಲ್ಲ. ಈಗಾಗಲೇ ಇಂಥ ವ್ಯಕ್ತಿಗಳು ಸಂಸತ್ತಿನಿಂದ ಹಿಡಿದು, ವಿಧಾನ ಮಂಡಲಗಳಲ್ಲಿ, ಪಂಚಾಯಿತಿ -ಪಾಲಿಕೆಗಳವರೆಗೆ ಎಲ್ಲ ವ್ಯವಸ್ಥೆಗಳಲ್ಲೂ ಕಂಡು ಬರುತ್ತಾರೆ. ಹೆಣ್ಣನ್ನು ಅವಮಾನ ಮಾಡುತ್ತಾ, ದೌರ್ಜನ್ಯವನ್ನು ಮೆರೆಸುತ್ತಾ, ಅನ್ಯಾಯವನ್ನು ಸ್ವತಃ ಮಾಡುವ ಅಥವಾ ಮಾಡಿದವರಿಗೆ ಬೆಂಬಲವಾಗಿ ನಿಲ್ಲುವಂಥ ವ್ಯಕ್ತಿಗಳು ಸಾರ್ವಜನಿಕ ಸಂಸ್ಥೆಗಳಲ್ಲಿ ಮುಂದುವರೆಯುವವರೆಗೂ ಕಾನೂನುಗಳನ್ನು ಎಷ್ಟು ಬಿಗಿ ಮಾಡಿದರೇನು?

ವರ್ಮಾ ಸಮಿತಿ ಅತ್ಯಾಚಾರವೇ ಅಲ್ಲದೆ, ಮಹಿಳೆಯರನ್ನು ಕದ್ದು ಹಿಂಬಾಲಿಸುವವರಿಗೆ, ಆಸಿಡ್ ದಾಳಿಕೋರರಿಗೆ, ಲೈಂಗಿಕ ದರ್ಶನದಿಂದ ವಿಲಕ್ಷಣ ಕಾಮತೃಪ್ತಿಯನ್ನು ಪಡೆಯುವವರಿಗೆ, ಲೈಂಗಿಕ ಸ್ವರೂಪದ ಭಾಷೆಯನ್ನು ಬಳಸಿ ಲೈಂಗಿಕ ಸಂಪರ್ಕಕ್ಕೆ ಮಹಿಳೆಯನ್ನು ಆಹ್ವಾನಿಸುವ ಸೂಚನೆಗಳನ್ನು ನೀಡುವವರಿಗೆ, ಮಹಿಳೆಯರನ್ನು ವಿವಸ್ತ್ರಗೊಳಿಸುವವರಿಗೆ ಕೂಡ ಕಠಿಣ ಶಿಕ್ಷೆಗಳನ್ನು ವಿಧಿಸಲು ಅಪರಾಧ ಕಾಯಿದೆಗೆ ತಿದ್ದುಪಡಿಗಳನ್ನು ಸೂಚಿಸಿತ್ತು. ಒಟ್ಟಿನಲ್ಲಿ ಎಲ್ಲ ಬಗೆಯ ಲೈಂಗಿಕ ದುರ್ವರ್ತನೆಯನ್ನೂ ಸಮಿತಿ ಗಂಭೀರವಾಗಿ ಪರಿಗಣಿಸಿತ್ತು. ಇಂಥ ವರ್ತನೆಗಳನ್ನೆಲ್ಲ ಶಿಕ್ಷೆಯ ಪರಿಧಿಯೊಳಗೆ ತರಬಲ್ಲಂಥ ಶಿಫಾರಸು ಮಹಿಳೆಯರು ಸುರಕ್ಷಿತ ಬದುಕನ್ನು ನಡೆಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು ಸುಗ್ರೀವಾಜ್ಞೆಯಲ್ಲಿ ಅದಕ್ಕೆ ಸೂಕ್ತ ಸ್ಪಂದನ ದೊರೆಯದಿರುವುದು ವಿಷಾದನೀಯ.

ದೇಶದಲ್ಲೆಗ ಲಿಂಗಸೂಕ್ಷ್ಮ ಆಡಳಿತಾತ್ಮಕ ವ್ಯವಸ್ಥೆಯ ನಿರ್ಮಾಣಕ್ಕೆ ಪೂರಕವಾದ ವಾತಾವರಣವಂತೂ ಸೃಷ್ಟಿಯಾಗಿದೆ. ಆದರೆ ಒಂದೆಡೆ ಸಮಿತಿಯನ್ನು ತಾನೇ ರಚಿಸಿ, ಮತ್ತೊಂದೆಡೆ ಅದರ ವರದಿಯನ್ನು ಭಾಗಶಃ ಪರಿಗಣಿಸಿ ತರಾತುರಿಯಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಿರುವ ಸರ್ಕಾರದ ನಡೆ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಕಾನೂನು ಪಾಲನೆಗೆ ಬಹು ವ್ಯವಸ್ಥೆಗಳನ್ನು ಸೃಷ್ಟಿಸಿ ವೈರುಧ್ಯ ಪರಿಸ್ಥಿತಿಯಲ್ಲಿ ತಾನೂ ಸಿಲುಕಿಕೊಂಡು ಜನರನ್ನೂ ಸಿಲುಕಿಸುವ ನಮ್ಮ ಆಡಳಿತಾತ್ಮಕ ವ್ಯವಸ್ಥೆಯ ನಿಜರೂಪವೇನು? ಸಧ್ಯದಲ್ಲೇ ಆರಂಭವಾಗಲಿರುವ ಸಂಸತ್ತಿನ ಅಧಿವೇಶನದಲ್ಲಾದರೂ ವರ್ಮಾ ವರದಿ ಮತ್ತು ಸುಗ್ರೀವಾಜ್ಞೆಯನ್ನು ಸಮಗ್ರ ಚರ್ಚೆಗಳಿಗೆ ಒಳಪಡಿಸಿ ಜನದನಿಗಳಿಗೆ, ಸ್ತ್ರೀ ಸಂವೇದನೆಗಳಿಗೆ ಸ್ಪಂದಿಸುವಂಥ ಕಾಯಿದೆಯೊಂದು ಹೊರಬರಲಿ ಎಂದು ಆಶಿಸೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT