ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತು ಕೊಡದ ಯಂತ್ರ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ
ಕೆಲ ವರ್ಷಗಳ ಹಿಂದೆ ಒಂದೆರಡು ವಾರಗಳ ಮಟ್ಟಿಗೆ ದಕ್ಷಿಣ ಆಫ್ರಿಕೆಯ ಜೋಹಾನ್ಸಬರ್ಗ್‌ನಲ್ಲಿ ಇರುವ ಪ್ರಸಂಗ ಬಂದಿತ್ತು. ಒಂದು ದಿನ ರಾತ್ರಿ ಹೋಟೆಲ್‌ಗೆ ಬಂದಾಗ ಸುಮಾರು ಹತ್ತು ಗಂಟೆಯಾಗಿತ್ತು. ಮಲಗುವ ಮೊದಲು ಹಲ್ಲು ಉಜ್ಜಲು ಬ್ರಶ್ ತೆಗೆದುಕೊಂಡು ಪೇಸ್ಟಿಗಾಗಿ ಪ್ರವಾಸೀ ಚೀಲವನ್ನು ತೆರೆದೆ. ಪೇಸ್ಟ್ ಪೂರ್ತಿ ಖಾಲಿಯಾಗಿದೆ! ಹಾಗೆಯೇ ಮಲಗಲು ಮನಸ್ಸಿಲ್ಲ.
 
ತಕ್ಷಣ ನೆನಪಾಯಿತು. ಕೆಳಗೆ ಹೋಟೆಲ್‌ನ ನೆಲಮಾಳಿಗೆಯಲ್ಲಿ ಸಾಮಾನುಗಳನ್ನು ನೀಡುವ ಯಂತ್ರಗಳಿವೆ. ಅಲ್ಲಿ ಹೋಗಿ ಯಂತ್ರದ ಹೊಟ್ಟೆಗೆ ನಾಣ್ಯಗಳನ್ನು ಹಾಕಿದರೆ ಸಾಕು, ನೀವು ಅಪೇಕ್ಷಿಸಿದ ವಸ್ತುವನ್ನು ಅದು ಹೊರಹಾಕುತ್ತದೆ. ತಕ್ಷಣ ಜೇಬುಗಳನ್ನು ತಡಕಾಡಿ ಆ ದೇಶದ ಹಣವಾದ ರ‌್ಯಾಂಡ್‌ಗಳ ನಾಣ್ಯಗಳನ್ನು ತೆಗೆದುಕೊಂಡು ಕೆಳಗೆ ಹೋದೆ. ಆಗ ನೆಲಮಾಳಿಗೆಯಲ್ಲಿ ಯಾರೂ ಇಲ್ಲ. ಯಂತ್ರದ ಮುಂದೆ ನಿಂತೆ. ಗಾಜಿನ ಪರದೆಯ ಹಿಂದೆ ಅನೇಕ ವಸ್ತುಗಳನ್ನು ಜೋಡಿಸಿ ಇಟ್ಟಿದ್ದಾರೆ. ವಸ್ತುಗಳ ಬೆಲೆಯನ್ನೂ ನಮೂದಿಸಲಾಗಿದೆ. ನಿಮಗೆ ಬೇಕಾದ ವಸ್ತುವಿನ ಹೆಸರನ್ನು ಟೈಪ್ ಮಾಡಿ ನಿರ್ಧಾರಿತವಾದ ಹಣದ ನಾಣ್ಯಗಳನ್ನು ರಂದ್ರದಲ್ಲಿ ತೂರಬೇಕು. ನಂತರ ಬಟನ್ ಒತ್ತಿದರೆ ವಸ್ತುಗಳು ಸರಕ್ಕನೇ ಕೆಳಗೆ ಸರಿದು ಬರುತ್ತವೆ.
 
ನಾನು ಪೇಸ್ಟಿನ ಹಣದ ಲೆಕ್ಕ ಹಾಕಿ ಆ ಬೆಲೆಯ ಎರಡು ನಾಣ್ಯಗಳನ್ನು ಕೈಯಲ್ಲಿ ಹಿಡಿದುಕೊಂಡು ಒಂದನ್ನು ರಂದ್ರದೊಳಗೆ ಸೇರಿಸಿದೆ.  `ಕ್ಲಿಂಗ್'  ಎಂಬ ಸಪ್ಪಳ ಬಂದ ಮೇಲೆ ಮತ್ತೊಂದನ್ನು ಹಾಕಿದೆ. ಮತ್ತೆ  ಕ್ಲಿಂಗ್  ಸದ್ದು ಕೇಳಿಸಿತು. ನಂತರ ಬಟನ್ ಒತ್ತಿದೆ. ಪೇಸ್ಟು ಕೆಳಗೆ ಸರಿದು ಬಂದೀತು ಎಂದು ನೋಡುತ್ತಿದ್ದೆ. ಪೇಸ್ಟು ಬರಲೇ ಇಲ್ಲ. ಅಲ್ಲಿ ಇನ್ನೊಂದು ಕೆಂಪು ಬಟನ್ ಇತ್ತು. ಅದು ಹಾಕಿದ ಹಣವನ್ನು ವಾಪಸ್ಸು ಮಾಡುವ ಗುಂಡಿ. ಅದನ್ನು ಒತ್ತಿದೆ.

`ಸರ್... ಸರ್... ಕಟ್' ಎಂಬ ಸದ್ದಾಗಿ ಹಾಕಿದ ಎರಡೂ ನಾಣ್ಯಗಳು ಮರಳಿ ಬಂದವು. ನಾನು ತುಂಬ ಆಶಾವಾದಿಯಾದ್ದರಿಂದ ನಿರಾಶನಾಗದೇ ಮತ್ತೊಮ್ಮೆ ನಾಣ್ಯಗಳನ್ನು ತೂರಿಸಿದೆ. ನಾಣ್ಯಗಳು ಸರಿಯಾಗಿ ಒಳಗೆ ಬಿದ್ದ ಸದ್ದಾದರೂ ಪೇಸ್ಟು ಮಾತ್ರ ಬರಲಿಲ್ಲ. ಕೆಂಪು ಗುಂಡಿ ಒತ್ತಿದಾಗ ನಾಣ್ಯಗಳು ಮಾತ್ರ ಹೊರಗೆ ಬಂದವು. ನನಗೆ ಬೇಕಾದದ್ದು ಪೇಸ್ಟು, ನಾಣ್ಯಗಳಲ್ಲ. ಏನು ಮಾಡುವುದೆಂಬುದು ತಿಳಿಯದೇ ಅಲ್ಲಿಗೆ ಬಂದ ಹೋಟೆಲ್‌ನ ಕೆಲಸದ ಹುಡುಗನನ್ನು ಸಹಾಯಕ್ಕಾಗಿ ಕೇಳಿದೆ. ಆತ ಬಂದು ನಾನು ಮಾಡಿದ್ದನ್ನೇ ಮತ್ತೊಮ್ಮೆ ಮಾಡಿದ. ಫಲಿತಾಂಶವೂ ಅದೇ. ಆತ ಮತ್ತೆ ತಂತಿ, ಸ್ವಿಚ್ ಪರೀಕ್ಷಿಸಿ ಪ್ರಯತ್ನ ಮಾಡಿದ. ಊಹುಂ, ಯಾವ ಪ್ರಯೋಜನವೂ ಆಗಲಿಲ್ಲ.
 
ಆಗ ಆ ಹುಡುಗ ಮತ್ತೆ ನಾಣ್ಯಗಳನ್ನು ಹಾಕಿ ಸರಿಯಾಗಿ ಜಾಗ ನೋಡಿ `ಠಪ್' ಎಂದು ಜೋರಾಗಿ ಯಂತ್ರಕ್ಕೆ ಕೈಯಿಂದ ಗುದ್ದಿದ. `ಸರ್... ಸರ್... ಟಿಕ್' ಎಂಬ ಸದ್ದಿನೊಡನೆ ಪೇಸ್ಟು ಹೊರಗೆ ಬಂತು. ಅವ ನಗುತ್ತ ಹೇಳಿದ,  ಈ ಯಂತ್ರಕ್ಕೆ ಇದೇ ಸರಿಯಾದ ಮದ್ದು . ನಾನೂ ನಕ್ಕೆ.
 
ಮೇಲೆ ಕೋಣೆಗೆ ಬರುವಾಗ ಈ ಘಟನೆ ಒಂದು ಚಿಂತನೆಯನ್ನು ಮೂಡಿಸಿತು. ನಾವೂ ಆ ಯಂತ್ರದಂತೆಯೇ ಅಲ್ಲವೇ? ನಮ್ಮಲ್ಲಿಯೂ ಅನೇಕ ಶಕ್ತಿಗಳಿವೆ, ವಸ್ತುಗಳಿವೆ. ದೇಹಶಕ್ತಿ ಇದೆ, ಬುದ್ಧಿ ಇದೆ, ಮನಸ್ಸು ಇದೆ. ಅಂದರೆ ನೀಡಲು ಬೇಕಾದಷ್ಟಿದೆ. ಆದರೆ ಬಹಳಷ್ಟು ಜನ ಏನನ್ನೂ ನೀಡದೇ ನಮ್ಮಲ್ಲಿಯೇ ಇಟ್ಟುಕೊಳ್ಳುತ್ತೇವೆ ಈ ಯಂತ್ರದಂತೆ. ನಾಚಿಕೆಯಿಂದ, ಜಿಪುಣತನದಿಂದ, ಹೆದರಿಕೆಯಿಂದ, ಕೀಳರಿಮೆಯಿಂದ ನಮ್ಮಲ್ಲಿದ್ದುದನ್ನು ಸಂತೋಷದಿಂದ ಕೊಡದೇ ಹಾಗೆಯೇ ಜೀವನವನ್ನು ಬಂಜೆ ಮಾಡಿ ಮರೆಯಾಗುತ್ತೇವೆ. ಒಮ್ಮಮ್ಮೆ ನಾವಾಗಿಯೇ ಸಮಾಜಕ್ಕೆ ನೀಡದೆ ಹೋದಾಗ ಭಗವಂತ, ಆ ಹೋಟೆಲ್‌ನ ಹುಡುಗನಂತೆ ನಮಗೆ ಪೆಟ್ಟು ಕೊಟ್ಟು ಕೊಡಿಸುತ್ತಾನೆ. ನಾವು ಆ ಯಂತ್ರದಂತಾಗದೇ ನಮ್ಮಲ್ಲಿರುವುದನ್ನು ಸಂತೋಷದಿಂದ ಮತ್ತೊಬ್ಬರಿಗೆ ಕೊಡುವುದನ್ನು ಕಲಿಯೋಣ. 
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT