ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತುಸ್ಥಿತಿಗೆ ಹೊರತಾದ ಬಡತನ ನಿಗದಿಯ ಮಾನದಂಡ

Last Updated 12 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ರಾಮಯ್ಯ ತನ್ನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಬೆಂಗಳೂರಿನ ಹೊರವಲಯದ ಮಾಗಡಿ ಬಳಿ ನೆಲೆಸಿದ್ದ. ದಿನನಿತ್ಯದ ಹೊಟ್ಟೆ ಹೊರೆಯುವಷ್ಟು ದುಡಿಯುವುದು ಬಿಟ್ಟರೆ ಬೇರ‌್ಯಾವುದೇ ಗುರಿ ಅವನಿಗಿರಲಿಲ್ಲ.
 
ಹೀಗಾಗಿ ಅವನ ಬದುಕು ಅತ್ಯಂತ ಸರಳವಾದ ಗತಿಯಲ್ಲಿ ಸಾಗುತ್ತಿತ್ತು. ಪ್ರತಿದಿನ ಬೆಳಿಗ್ಗೆ ಎದ್ದು ಬೆಂಗಳೂರಿಗೆ ಹೊರಡುತ್ತಿದ್ದ ಆತ ಅಲ್ಲಿ ನಡೆಯುವ ಯಾವುದಾದರೂ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ದುಡಿಯುತ್ತಿದ್ದ. ಇದಕ್ಕೆ ಅವನಿಗೆ ದಿನಗೂಲಿ ಸಿಗುತ್ತಿದ್ದುದು ಬಿಟ್ಟರೆ ಬೇರ‌್ಯಾವ ಭದ್ರತೆಯೂ ಇರಲಿಲ್ಲ.
 
15 ವರ್ಷದವನಾಗಿದ್ದ ಅವನ ಮೊದಲ ಮಗ ಶಾಲೆ ಬಿಟ್ಟು ಅಪ್ಪನೊಂದಿಗೆ ದುಡಿಮೆಗೆ ಕೈಹಚ್ಚಿದ್ದ. ಇಬ್ಬರೂ ತಿಂಗಳಿಗೆ ಕನಿಷ್ಠ 20 ದಿನಗಳಾದರೂ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರಿಂದ ದಿನಕ್ಕೆ ಏನಿಲ್ಲವೆಂದರೂ 200 ರೂಪಾಯಿ ಸಂಪಾದನೆಯಾಗುತ್ತಿತ್ತು.

ಇದರಲ್ಲಿ ಬಸ್‌ಚಾರ್ಜ್, ಊಟದಂತಹ ಖರ್ಚು ಕಳೆದು ಸುಮಾರು 100-125 ರೂಪಾಯಿಯನ್ನು ಅವರು ಮನೆಗೆ ಕೊಂಡೊಯ್ಯುತ್ತಿದ್ದರು. ರಾಮಯ್ಯನಿಗೆ ಈ ಕೆಲಸ ಬಿಟ್ಟರೆ ಭೂಮಿಯಾಗಲಿ ಅಥವಾ ಬೇರ‌್ಯಾವುದೇ ಮೂಲಗಳಾಗಲೀ ಇರಲಿಲ್ಲ.

ಅವನಿಗಿದ್ದ ಏಕೈಕ ಆಸ್ತಿಯೆಂದರೆ 20-20 ಚದರಡಿಯ ಒಂದು ನಿವೇಶನ ಮತ್ತು ಇಡೀ ಕುಟುಂಬ ಒಟ್ಟಾಗಿ ವಾಸಿಸುತ್ತಿದ್ದ ಒಂದು ಸಣ್ಣ ಗುಡಿಸಿಲು ಮಾತ್ರ.

ಓದುತ್ತಿದ್ದ ರಾಮಯ್ಯನ ಇಬ್ಬರು ಹೆಣ್ಣುಮಕ್ಕಳಿಗೆ ಶಾಲೆಯಲ್ಲಿ ಸಿಗುತ್ತಿದ್ದ ಬಿಸಿಯೂಟ ಹಸಿವಿನ ಕೊರತೆಯನ್ನು ನೀಗಿಸುತ್ತಿತ್ತು. ಅವನ ಬಳಿ ಇದ್ದ ಮೊಬೈಲ್ ಫೋನ್, ಸ್ಥಳೀಯ ಮೇಸ್ತ್ರಿ ಅವನನ್ನು ಸಂಪರ್ಕಿಸಿ ಬೆಂಗಳೂರಿನಲ್ಲಿ ಸಿಗುವ ಕೆಲಸಗಳಿಗೆ ನಿಯೋಜಿಸಲು ಸುಲಭವಾಗುವಂತೆ ಮಾಡಿತ್ತು.

ಅವನ ತಾಯಿಗೆ ವೃದ್ಧಾಪ್ಯ ವೇತನವಾಗಲೀ ವಿಧವಾ ವೇತನವಾಗಲೀ ಬರುತ್ತಿರಲಿಲ್ಲ. ಬೆಳೆದ ಮಗ ಇರುವುದರಿಂದ ಸರ್ಕಾರದ ಈ ಯೋಜನೆಗಳಿಗೆ ಆಕೆ ಅರ್ಹಳಲ್ಲ ಎಂದು ಅಧಿಕಾರಿಗಳು ಕಾರಣ ನೀಡಿದ್ದರು.

ಬಿಪಿಎಲ್ ಕಾರ್ಡ್ ಪಡೆದುಕೊಂಡರೆ ನ್ಯಾಯಬೆಲೆ ಅಂಗಡಿಯಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆದುಕೊಳ್ಳಬಹುದು ಎಂದು ರಾಮಯ್ಯನ ಸ್ನೇಹಿತನೊಬ್ಬ ಸಲಹೆ ನೀಡಿದ್ದ. ಅದರಂತೆ ರಾಮಯ್ಯ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ, ಹಲವು ದಿನ ಕೆಲಸ ಬಿಟ್ಟು ಸಾಕಷ್ಟು ಬಾರಿ ತಾಲ್ಲೂಕು ಕಚೇರಿಗೆ ಅಲೆದಾಡಿದ. ಅದಾದ ಎಷ್ಟೋ ದಿನಗಳ ನಂತರ `ಬಿಪಿಎಲ್ ಕಾರ್ಡ್ ಪಡೆಯಲು ನೀನು ಅರ್ಹನಲ್ಲ~ ಎಂಬ ಉತ್ತರ ಅವನಿಗೆ ಸಿಕ್ಕಿತು.

ಯಾಕೆಂದರೆ ಕನಿಷ್ಠ ವಾರ್ಷಿಕ ವರಮಾನ 30 ಸಾವಿರದಿಂದ 40 ಸಾವಿರ ರೂಪಾಯಿ ಎಂದು ಅರ್ಜಿಯಲ್ಲಿ ನಮೂದಿಸಿದ್ದುದೇ ರಾಮಯ್ಯನಿಗೆ ಮುಳುವಾಗಿತ್ತು. ಇಂದಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿದ್ದರೆ ಅದರ ಪರಿಣಾಮಗಳನ್ನು ಎದುರಿಸಲೂ ಸಜ್ಜಾಗಿರಬೇಕಾಗುತ್ತದೆ ಎಂಬ ಸತ್ಯ ಅವನಿಗೆ ಮನದಟ್ಟಾಗಿತ್ತು.

ಒಂದು ಕೆ.ಜಿ ಅಕ್ಕಿಗೆ ಸುಮಾರು 30 ರೂಪಾಯಿ ಆಗಿರುವ ಈಗಿನ ಬೆಲೆಯನ್ನು ಭರಿಸುವುದು ರಾಮಯ್ಯನಿಗೆ ನಿಜಕ್ಕೂ ಕಷ್ಟವೇ ಆಗಿತ್ತು. ಅವನ ಮುಖ್ಯ ಆಹಾರ ವಸ್ತುವಾಗಿದ್ದ ರಾಗಿಯ ಬೆಲೆಯೂ ಕಡಿಮೆಯೇನಿರಲಿಲ್ಲ. ಅದೂ ಕೆ.ಜಿಗೆ ಸುಮಾರು 12 ರೂಪಾಯಿಗೆ ಬಂದು ನಿಂತಿತ್ತು.

ವಿಶೇಷ ಸಂದರ್ಭಗಳಿಗೆ ಮೀಸಲಾಗಿದ್ದ ತರಕಾರಿ ಮತ್ತು ಮಾಂಸವಂತೂ ಇನ್ನೂ ಅಪರೂಪದ ವಸ್ತುಗಳೇ ಆಗತೊಡಗಿದ್ದವು. ಇದಕ್ಕೆಲ್ಲಾ ಖರ್ಚು ಹೊಂದಿಸಲು ಕಷ್ಟವಾದಾಗಲ್ಲೆಲ್ಲ ಸ್ಥಳೀಯ ಲೇವಾದೇವಿಗಾರರಿಂದ ರಾಮಯ್ಯ ಕೈಗಡ ತೆಗೆದುಕೊಳ್ಳುತ್ತಿದ್ದ.
 
ಇದಕ್ಕೆ ಆ ನಿಷ್ಕರುಣಿ ಲೇವಾದೇವಿಗಾರರು ವಿಧಿಸುತ್ತಿದ್ದ ಶೇ 120ರಷ್ಟು ಬಡ್ಡಿಯನ್ನು ಆತ ತೆರಲೇಬೇಕಾಗಿತ್ತು. ಇಂತಹ ತನ್ನ ಅಸಹಾಯಕ ಸ್ಥಿತಿಯ ಅರಿವಿದ್ದ ರಾಮಯ್ಯ ಕುಡಿತದ ದಾಸನಾಗಿ ಎಲ್ಲ ನೋವನ್ನೂ ಮರೆಯಲು ಯತ್ನಿಸುತ್ತಿದ್ದ.

ಇದು ಅವನನ್ನಷ್ಟೇ ಅಲ್ಲ, ಅವನ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡುತ್ತಿತ್ತು.
ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬಗ್ಗೆ ನಾನು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ನನಗೆ ರಾಮಯ್ಯನ ಪರಿಚಯವಾಯಿತು.
 
ಈ ವ್ಯವಸ್ಥೆಯ ಬಗ್ಗೆ ಕೇಳಿ ಬಂದಿದ್ದ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪಗಳ ತನಿಖೆ ನಡೆಸುವಂತೆ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನನ್ನನ್ನು ನಿಯೋಜಿಸಿದ್ದರು.
 
ಇದರ ಭಾಗವಾಗಿ, ಪಡಿತರ ವ್ಯವಸ್ಥೆಗೆ ನಿಜವಾಗಲೂ ಅರ್ಹರಾದ ಬಹಳಷ್ಟು ಬಡವರನ್ನು ಖುದ್ದು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಲು ನಾನು ತೀರ್ಮಾನಿಸಿದೆ.

ಬಡತನವನ್ನು ನಿರ್ಧರಿಸಲು ಸರ್ಕಾರ ನಿಗದಿ ಮಾಡಿದ್ದ ಮಾನದಂಡ ನಿಜಕ್ಕೂ ನನ್ನಲ್ಲಿ ಅಚ್ಚರಿಯನ್ನು ಉಂಟುಮಾಡಿತ್ತು. ಸರ್ಕಾರದ ಮಾರ್ಗಸೂಚಿಯ ಅನುಸಾರ, ಗ್ರಾಮೀಣ ಪ್ರದೇಶಕ್ಕೆ ನಿಗದಿಯಾಗಿದ್ದ ವಾರ್ಷಿಕ 11 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಆದಾಯ ರಾಮಯ್ಯನಿಗೆ ಇದ್ದುದರಿಂದ ಮತ್ತು ಅವನು ಮೊಬೈಲ್ ಫೋನ್ ಇಟ್ಟುಕೊಂಡಿದ್ದರಿಂದ ಬಿಪಿಎಲ್ ಕಾರ್ಡ್ ಪಡೆಯಲು ಅವನು ಅನರ್ಹನಾಗಿದ್ದ.

ಯಾರು, ಯಾವ ಆಧಾರದ ಮೇಲೆ ಈ ಮಾನದಂಡವನ್ನು ನಿಗದಿ ಮಾಡಿದರೋ ಆ ದೇವರೇ ಬಲ್ಲ. ಆದರೆ ಇದಕ್ಕಿಂತಲೂ ಹೆಚ್ಚಿನ ಆಘಾತವನ್ನು ನನಗೆ ಉಂಟು ಮಾಡಿದ್ದು ಮಾತ್ರ ಯೋಜನಾ ಆಯೋಗ ಪ್ರಮಾಣಪತ್ರದ ಮೂಲಕ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಬಡತನದ ಬಗೆಗಿನ ವ್ಯಾಖ್ಯಾನ.

ಅದರ ಪ್ರಕಾರ, ಯಾರೇ ಆಗಲಿ, ಗ್ರಾಮೀಣ ಪ್ರದೇಶಗಳಲ್ಲಿ 26 ರೂಪಾಯಿಗಿಂತ ಕಡಿಮೆ ಹಾಗೂ ನಗರಗಳಲ್ಲಿ 32 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದ್ದರೆ ಅವರು ಮಾತ್ರ ಬಡವರು.

ಈ ಅಳತೆಗೋಲಿನ ಪ್ರಕಾರ `ನೀನು ಬಡವನಲ್ಲ, ಹೀಗಾಗಿ ಇಂತಹ ಕುಟುಂಬಗಳ ಕ್ಷೇಮಾಭ್ಯುದಯಕ್ಕಾಗಿ ಸರ್ಕಾರ ರೂಪಿಸಿರುವ ಎಲ್ಲ ಸಮಾಜ ಕಲ್ಯಾಣ ಯೋಜನೆಗಳಿಗೂ ನೀನು ಅನರ್ಹ~ ಎಂಬುದನ್ನು ನಾನು ರಾಮಯ್ಯನಿಗೆ ಹೇಗೆ ವಿವರಿಸಲಿ?
 
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಶೇ 49ರಷ್ಟು ಕುಟುಂಬಗಳು ವಾಸ್ತವದಲ್ಲಿ ಅದನ್ನು ಪಡೆಯುವ ಅರ್ಹತೆ ಹೊಂದಿಲ್ಲ ಎಂಬ ನನ್ನದೇ ತನಿಖೆಯಿಂದ ಕಂಡುಕೊಂಡ ವಾಸ್ತವ ಸಂಗತಿಯನ್ನು ಅರಗಿಸಿಕೊಳ್ಳಲು ನನಗೇ ಆಗುತ್ತಿಲ್ಲ.
 
ದುರದೃಷ್ಟವಶಾತ್ ರಾಮಯ್ಯನ ಕುಟುಂಬ, ಸರ್ಕಾರದ ಅಲ್ಪದೃಷ್ಟಿಯ ನಿರ್ಧಾರಗಳಿಂದಾಗಿ ಫಲಾನುಭವಿಗಳಾಗುವುದರಿಂದ ವಂಚಿತವಾಗುವ ಹಲವಾರು ಕುಟುಂಬಗಳಲ್ಲಿ ಒಂದಾಗಿತ್ತು.

ಕರ್ನಾಟಕ ಸರ್ಕಾರ 2008- 09ರಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ `ಸ್ವಘೋಷಿತ ಬಡತನ ಪ್ರಮಾಣಪತ್ರ~ ಸಲ್ಲಿಸುವ ಯಾರೇ ಆಗಲಿ ತಾನೇತಾನಾಗಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾಗುತ್ತಾರೆ ಎಂದು ಘೋಷಿಸಿತು.
 
ಇದರ ಫಲವಾಗಿ ಇಂದು ರಾಜ್ಯದಲ್ಲಿ ಸುಮಾರು ಶೇ 80ರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನವು ಎಂದು ಪರಿಗಣಿತವಾಗಿ ವಿವಿಧ ಯೋಜನೆಗಳ ಲಾಭ ಪಡೆಯುತ್ತಿವೆ. ಆದರೆ ನಿಜವಾಗಲೂ ಇವೆಲ್ಲವನ್ನೂ ಪಡೆಯುವ ಅರ್ಹತೆಯನ್ನು ಹೊಂದಿರುವ ಶೇ 5ರಷ್ಟು ಜನ ಮಾತ್ರ ಸಂಪೂರ್ಣವಾಗಿ ಅವುಗಳಿಂದ ವಂಚಿತರಾಗಿದ್ದಾರೆ.

ದೇಶದ ಬಹುತೇಕ ಭಾಗದಲ್ಲಿ ವಸ್ತುಸ್ಥಿತಿ ಹೀಗಿರುವಾಗ, ನಮ್ಮ ಆರ್ಥಿಕ ತಜ್ಞರು ಮತ್ತು ಅಭಿವೃದ್ಧಿ ತಜ್ಞರು ಬಡತನಕ್ಕೆ ಯಾವ ಬಗೆಯ ವ್ಯಾಖ್ಯಾನ ನೀಡಬೇಕು ಎಂಬ ಬಗ್ಗೆ ನಿರಂತರ ಚರ್ಚೆಯಲ್ಲಿ ನಿರತರಾಗಿದ್ದಾರೆ.

ಹಾಗಿದ್ದರೆ ಬಡತನ ಎಂಬುದು ಒಂದು ದಿನಕ್ಕೆ ಸಿಗುವ ಒಂದರಿಂದ ಒಂದೂಕಾಲು ಡಾಲರ್‌ನಷ್ಟು ಸಂಪಾದನೆಯನ್ನೇ ಅಳತೆಗೋಲಾಗಿ ಹೊಂದಿರಬೇಕೇ? ನಿತ್ಯ 2800 ಕಿಲೊ ಕ್ಯಾಲೊರಿಯಷ್ಟು ಆಹಾರ ಸೇವನೆ ಪ್ರಮಾಣವನ್ನು ಆಧಾರವಾಗಿ ಇಟ್ಟುಕೊಳ್ಳಬೇಕೇ ಅಥವಾ ಇದಕ್ಕೂ ಮಿಗಿಲಾದ ಮಾನದಂಡ ಬೇರೇನಾದರೂ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಸಮಿತಿಯ ಮೇಲೆ ಸಮಿತಿಗಳು ರಚನೆಯಾಗಿದ್ದರೂ ಬಡತನಕ್ಕೆ ಒಂದು ಸ್ಪಷ್ಟ ವ್ಯಾಖ್ಯಾನ ಕೊಡಲು ಮಾತ್ರ ಸಾಧ್ಯವಾಗಿಲ್ಲ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಇತ್ತೀಚೆಗೆ `ಬಹು ಅಳತೆಗೋಲು ಸೂಚ್ಯಂಕ~ವೊಂದನ್ನು (ಎಂಡಿಐ) ಸಿದ್ಧಪಡಿಸಿದೆ. ಅದು ಭಾರತದಲ್ಲಿ 645 ದಶಲಕ್ಷಕ್ಕೂ ಹೆಚ್ಚು ಜನ ಬಡವರು ಇರುವುದನ್ನು ಬಹಿರಂಗಪಡಿಸಿದೆ.
 
ಇದರಿಂದ ವಿಶ್ವದ ಬಡತನದಲ್ಲಿ ಶೇ 25ರಷ್ಟು ಹೊರೆಯನ್ನು ಭಾರತವೇ ಹೊತ್ತುಕೊಂಡಿರುವುದು ತಿಳಿದುಬರುತ್ತದೆ. ಇಲ್ಲಿನ 8 ರಾಜ್ಯಗಳಲ್ಲಿ ಇರುವ ಬಡವರ ಸಂಖ್ಯೆ ಇಡೀ ಆಫ್ರಿಕಾ ಖಂಡದಲ್ಲಿರುವ ಬಡವರ ಸಂಖ್ಯೆಗಿಂತಲೂ ಅಧಿಕವಾಗಿದೆ.

ಬಡತನದಲ್ಲಿ ಕೊಳೆಸುವುದು ಅತ್ಯಂತ ಹೀನಾಯವಾದ ಹಿಂಸಾಚಾರ ಎಂಬ ಗಾಂಧೀಜಿ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಬಡತನದ ಮೂಲೋತ್ಪಾಟನೆಗಾಗಿ ನಾವು ಸಾಂಘಿಕವಾದ ದೃಷ್ಟಿಕೋನವನ್ನೇ ಹರಿಸಬೇಕಾಗುತ್ತದೆ. ನನ್ನ ಪ್ರಕಾರ ಬಡತನ ಎಂಬುದನ್ನು `ಅವಕಾಶಗಳ ನಿರಾಕರಣೆ~ ಎಂದು ಸರಳವಾಗಿ ವ್ಯಾಖ್ಯಾನಿಸಬಹುದು.

ಈವರೆಗಿನ ಬಡತನದ ವ್ಯಾಖ್ಯಾನಗಳನ್ನೇ ತೆಗೆದುಕೊಂಡರೆ, ಇವ್ಯಾವುವೂ ರಾಮಯ್ಯನಂತಹವರನ್ನು ಬಡತನದ ಬಲೆಯಿಂದ ಹೊರಗೆತ್ತಲು ಸಹಾಯ ಮಾಡುತ್ತಿಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ.

ಆಹಾರ ಹಣದುಬ್ಬರ ಶೇ 12- 14ರ ಆಸುಪಾಸಿನಲ್ಲಿ ಇರುವುದರಿಂದ ಇಂತಹ ಕುಟುಂಬಗಳಿಗೆ ಬಡತನದ ಸ್ಥಿತಿ ಬಂದೊದಗಿದೆ ಎಂಬುದು ನಿಜ. ಇದರಿಂದ ಸದುದ್ದೇಶ ಹೊಂದಿರುವ ಹಲವಾರು ಸರ್ಕಾರಿ ಯೋಜನೆಗಳು ಸಹ ಇಂತಹವರನ್ನು ತಲುಪುವುದೇ ಇಲ್ಲ.
 
ಒಂದು ವೇಳೆ ತಲುಪಿದರೂ ಬಡತನದೊಂದಿಗೆ ಹೆಣಗಾಡಲು ಅವರಿಗೆ ನೆರವಾಗುತ್ತವೆ ಹೊರತು ಅವರು ಅದರಿಂದ ಸಂಪೂರ್ಣವಾಗಿ ಮುಕ್ತರಾಗಲು ಅಗತ್ಯವಾದ ಸಹಾಯಹಸ್ತ ಚಾಚುತ್ತಿಲ್ಲ.
 
ಅಲ್ಲಿಯವರೆಗೂ, ಖಾಸಗೀಕರಣ ಮತ್ತು ಜಾಗತೀಕರಣದ ನಂತರ ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಪ್ರಗತಿಯ ನಡುವೆಯೂ ಯೋಜನಾ ಆಯೋಗ ಮತ್ತು ಸರ್ಕಾರ ಊಹಾತ್ಮಕ ವ್ಯಾಖ್ಯಾನಗಳ ಮೇಲೆ ಕೈಗೊಳ್ಳುವ ನಿರ್ಧಾರಗಳಿಂದಷ್ಟೇ ಅವರು ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

ದೇಶದ ಪ್ರಸಕ್ತ ಸ್ಥಿತಿಯಲ್ಲಿ ಸರ್ಕಾರ ಮಾತ್ರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಮತ್ತು ತನ್ನ ನಾಗರಿಕರನ್ನು ಬಡತನದ ಬೇಗೆಯಿಂದ ಹೊರಗೆತ್ತಲು ಸಾಧ್ಯ. ಇದಕ್ಕಾಗಿ ಈಗ ನಗರ ಕೇಂದ್ರಿತವಾಗಿರುವ `ಅರ್ಥ ಸಾಧನ~ದ ವ್ಯಾಪ್ತಿಗೆ ಗ್ರಾಮೀಣ ಪ್ರದೇಶಗಳೂ ಒಳಗೊಳ್ಳುವಂತೆ ಮಾಡಬೇಕಾಗಿದೆ.
 
ಅಲ್ಲದೆ ಸರ್ಕಾರಿ ವ್ಯವಸ್ಥೆಯು ಬಡವರನ್ನು, ಅವರಿಗೆ ಸಲ್ಲಬೇಕಾದ ಆತ್ಮಗೌರವ ಮತ್ತು ಘನತೆಯಿಂದಲೇ ನಡೆಸಿಕೊಳ್ಳಬೇಕಾಗುತ್ತದೆ. ಪರಾವಲಂಬಿಗಳಾಗದೆ ಉದ್ಯಮಶೀಲರಾಗಿ ದೇಶದ ಸಂಪನ್ಮೂಲದ ಜೊತೆಯಲ್ಲೇ ಅವರು ಕೆಲಸ ಮಾಡುವಂತೆ ಮಾಡಬೇಕಾಗುತ್ತದೆ.

ಭದ್ರತಾ ಜಾಲದಲ್ಲಿ ಸೇರಿಕೊಳ್ಳಲು ಏಣಿಯ ಅಗತ್ಯ ಇರುವವರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತದೆ. ಮುನ್ನೋಟದ ಸಬಲೀಕರಣ, ಸಾಮರ್ಥ್ಯ ನಿರ್ಮಾಣ, ಕೌಶಲ ಆಧಾರಿತ ಶಿಕ್ಷಣ, ಸಾಲ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗೆ ಅವಕಾಶ, ಉತ್ತಮ ಆಡಳಿತ ವ್ಯವಸ್ಥೆ ಎಲ್ಲವನ್ನೂ ಒದಗಿಸಬೇಕಾಗುತ್ತದೆ.

ಹೀಗೆ ನಾವು ಈ ವಿಷಯವನ್ನು ವಿಶಾಲ ದೃಷ್ಟಿಕೋನದಿಂದ ಅರ್ಥೈಸುವುದರ ಜೊತೆಗೆ ನಮ್ಮ ಪ್ರಯತ್ನ ಮತ್ತು ತತ್ವದಲ್ಲಿ ಬಹು ಆಯಾಮವನ್ನು ರೂಢಿಸಿಕೊಳ್ಳಬೇಕಾದ ಅಗತ್ಯ ಇದೆ. ಆದಾಯ ಪ್ರಮಾಣದ ಮೇಲೆ ಬಡತನ ನಿರೂಪಿಸುವುದಕ್ಕಿಂತಲೂ ಹೆಚ್ಚಿನದಾದ ಪ್ರಯತ್ನವನ್ನು ಮಾಡಬೇಕಾಗಿದೆ.

ಆಗ ರಾಮಯ್ಯನಂತಹ ಕುಟುಂಬಗಳು ಘನತೆಯಿಂದ ಬದುಕಲು ಸಾಧ್ಯ. ಅಲ್ಲದೆ ಕ್ಷಿಪ್ರ ಗತಿಯಲ್ಲಿ ಸಾಗುತ್ತಿರುವ ದೇಶದ ಹೊಸ ಆರ್ಥಿಕತೆಯತ್ತ ಅವರನ್ನು ಸಂಘಟಿಸಿದಂತೆಯೂ ಆಗುತ್ತದೆ.

ಅಭಿವೃದ್ಧಿ ಎಂಬುದು ಮಾನವನ ಸಾಮರ್ಥ್ಯದ ನಿರಂತರ ವಿಸ್ತರಣೆಗೆ ಪೂರಕವಾಗಿರಬೇಕು ಮತ್ತು ಸರ್ಕಾರ, ಸಮುದಾಯ, ಬೆಳೆಯುತ್ತಿರುವ ಖಾಸಗಿ ವಲಯ, ಸಾಮಾಜಿಕ ಕಳಕಳಿ ಹೊಂದಿರುವ ಸರ್ಕಾರೇತರ ಸಂಸ್ಥೆಗಳ ನಡುವಿನ ಸಮಷ್ಟಿ ಸಹಭಾಗಿತ್ವದ ಫಲಶ್ರುತಿ ಆಗಬೇಕು. ಇದು ಸಾಧ್ಯವಾಗುವುದಾದರೆ ಅಭಿವೃದ್ಧಿಯ ಲಾಭ ಎಲ್ಲರನ್ನೂ ಒಳಗೊಳ್ಳುತ್ತದೆ. ಮಾತ್ರವಲ್ಲ, ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುತ್ತದೆ.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT