ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಹಿವಾಟಿನ ದಿಕ್ಕು ಬದಲು?

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

2012ರ ಮೊದಲನೇ ವಾರವು ಹೆಚ್ಚಿನ ಉತ್ತೇಜನಕಾರಿಯಾಗಿ ಇಲ್ಲದಿದ್ದರೂ  ಆಘಾತಕಾರಿಯಾಗಿರಲಿಲ್ಲ. ವಾರದ ಆರಂಭದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಬಡ್ಡಿ ದರ ಕಡಿತದ ಕುರಿತು ಸೂಚನೆ ನೀಡಿತು. ಈ ಹಿನ್ನೆಲೆಯಲ್ಲಿ ಎರಡನೆಯ ದಿನ ಷೇರು ಪೇಟೆಯು ಹೆಚ್ಚಿನ ಜಿಗಿತದೊಂದಿಗೆ ಸಂಭ್ರಮಿಸಿತು. ಮಂಗಳವಾರ 421 ಅಂಶಗಳಷ್ಟು ಏರಿಕೆ ಕಂಡಿತು.

ವಾರದುದ್ದಕ್ಕೂ ಕಾರ್ಪೊರೇಟ್ ದಿಗ್ಗಜ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಕನ್ಸಲ್ಟನ್ಸಿ ನಡುವೆ ಬಂಡವಾಳ ಮೌಲ್ಯಕ್ಕೆ ಸಂಬಂಧಿಸಿದಂತೆ ಕಣ್ಣಾಮುಚ್ಚಾಲೆಯಾಟ ಸಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಟಿವಿ-18 ಬ್ರಾಡ್‌ಕಾಸ್ಟ್ ಕಂಪೆನಿಯಲ್ಲಿ ಭಾಗಿತ್ವ ಪಡೆಯಲು ತಮ್ಮ ಸಮೂಹ ಕಂಪೆನಿಗಳ ರೂ. 2,600 ಕೋಟಿ ಮೌಲ್ಯದ ಈ ಟಿವಿ ಸಮೂಹದ ಹೂಡಿಕೆಯನ್ನು ಟಿವಿ 18 ಬ್ರಾಡ್‌ಕಾಸ್ಟ್‌ಗೆ ನೀಡಿ ಮಾಧ್ಯಮ ವಲಯ ಪ್ರವೇಶಿಸಿದೆ.ಈ ಬೆಳವಣಿಗೆ ಟಿವಿ 18 ಬ್ರಾಡ್‌ಕಾಸ್ಟ್ ಕಂಪೆನಿಯು `ಈ ಟಿವಿ~ಯ ಹಲವಾರು ಭಾಷೆಗಳ ವಾಹಿನಿಗಳಲ್ಲಿ ಭಾಗಿತ್ವ ಪಡೆದು ಹಿಂದಿ, ರಾಜಾಸ್ತಾನಿ, ಗುಜರಾತಿ, ತೆಲುಗು ಮುಂತಾದ ಭಾಷೆಗಳತ್ತ ದಾಪುಗಾಲು ಹಾಕಿದೆ.

ಕಳೆದ ವಾರ ಒಟ್ಟಾರೆ 412 ಅಂಶಗಳಷ್ಟು ಏರಿಕೆ ಕಂಡ ಸಂವೇದಿ ಸೂಚ್ಯಂಕವು ಮಧ್ಯಮಶ್ರೇಣಿ ಸೂಚ್ಯಂಕವನ್ನು 124 ಅಂಶಗಳಷ್ಟು  ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವನ್ನು 154 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು  ಒಟ್ಟು ರೂ. 692 ಕೋಟಿ ಹೂಡಿಕೆ ಮಾಡಿದವು. ಇದಕ್ಕೆ ವಿರುದ್ಧವಾಗಿ ಸ್ಥಳೀಯ ವಿತ್ತೀಯ ಸಂಸ್ಥೆಗಳು ಒಟ್ಟು ರೂ. 280 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆಯ ಬಂಡವಾಳ ಮೌಲ್ಯವು, ಹಿಂದಿನ ವಾರದ ರೂ. 53.48 ಲಕ್ಷ ಕೋಟಿಯಿಂದ ರೂ. 55.06 ಲಕ್ಷ ಕೋಟಿಗೆ ಏರಿದೆ.

ಬಡ್ಡಿದರ ಇಳಿಕೆ ನಿರೀಕ್ಷೆ

ಕಳೆದ ಆರು ವರ್ಷಗಳಲ್ಲಿನ ಕನಿಷ್ಠ  ಮಟ್ಟಕ್ಕೆ ಆಹಾರ ಹಣದುಬ್ಬರ ದರ (ಶೇ 3.36ಕ್ಕೆ) ಕುಸಿದಿರುವುದು ಪ್ರೋತ್ಸಾಹದಾಯಕ ಸಂಗತಿ. ಈ ಕಾರಣದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಬಡ್ಡಿ ದರ ಇಳಿಸುವ ಕುರಿತು ಸೂಚನೆ ನೀಡಿದೆ. ಇದರಿಂದ ಕೈಗಾರಿಕೆ ಮತ್ತು ಹೂಡಿಕೆ ಚುಟವಟಿಕೆಗಳನ್ನು ಚುರುಕುಗೊಳಿಸಬಹುದಾಗಿದ್ದು ಷೇರುಪೇಟೆಗೆ ಉತ್ತಮ ಬೆಳವಣಿಗೆ ಎನ್ನಬಹುದಾಗಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಈರುಳ್ಳಿಯ ಬೆಲೆಯು ಶೇ 73.74 ಆಲೂಗಡ್ಡೆ ಶೇ 34.01, ತರಕಾರಿಗಳು ಶೇ 50.22 ಕಡಿಮೆಯಾಗಿವೆ.  ಹಣ್ಣುಗಳು ಶೇ 10.87, ಬೇಳೆಕಾಳುಗಳು ಶೇ 13.85 ರಷ್ಟು ಏರಿಕೆ ಕಂಡಿವೆ. ಆರ್‌ಬಿಐ. ಬಡ್ಡಿದರ ಇಳಿಸುವ ಕ್ರಮವು ಷೇರುಪೇಟೆಗಳ ದಿಶೆ ಬದಲಾವಣೆಗೆ ಕಾರಣವಾಗಬಹುದೇನೊ ಕಾದು ನೋಡೋಣ!

`ಸೆಬಿ~ ಪರ್ಯಾಯ ವ್ಯವಸ್ಥೆ

ಕಂಪೆನಿಗಳು 2013ರೊಳಗೆ ಶೇ 25 ರಷ್ಟರ ಭಾಗಿತ್ವವನ್ನು ಸಾರ್ವಜನಿಕ ವಿತರಣೆ ಮಾಡಬೇಕೆಂಬ ಲಿಸ್ಟಿಂಗ್ ನಿಯಮಾವಳಿ ಜಾರಿಗೊಳ್ಳಲಿದೆ. ಆದರೆ,  ಇದಕ್ಕೆ ಪೇಟೆಯ ವಾತಾವರಣವು ಸೂಕ್ತವಾಗಿಲ್ಲ.  ಇದುವರೆಗಿನ ಷೇರು ಪುನರ್ ವಿತರಣೆ ಕಾರ್ಯಗಳು ಸಣ್ಣ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ಸಾಧ್ಯವಾಗದ ಕಾರಣ ಷೇರು ಪೇಟೆ ನಿಯಂತ್ರಣ ಮಂಡಳಿ `ಸೆಬಿ~ ಸಾಂಸ್ಥಿಕ ವಿತರಣಾ ಕಾರ್ಯಕ್ರಮ ಗವಾಕ್ಷಿ ಮೂಲಕ (ಇನ್‌ಸ್ಟಿಟ್ಯೂಷನಲ್ ಪ್ಲೇಸ್‌ಮೆಂಟ್ ಪ್ರೋಗ್ರಾಂ) ಕಂಪೆನಿಗಳ ಪ್ರವರ್ತಕರಿಗೆ ತಮ್ಮ ಭಾಗಿತ್ವವನ್ನು ಹರಾಜು ಮೂಲಕ ಹಂಚಲು ಅನುವು ಮಾಡಿಕೊಡಲು ನಿರ್ಧರಿಸಿದೆ. ಇದು ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮಕ್ಕೆ ಪೂರಕ ಆಗಬಹುದು.

ವಹಿವಾಟಿಗೆ ಬಿಡುಗಡೆ

ಈ ಹಿಂದೆ ನೋವಾಗ್ರಾನೈಟ್ಸ್ (ಇಂಡಿಯಾ) ಲಿ. ಎಂದಿದ್ದು ಈಗ ಮಿಡ್‌ವೆಸ್ಟ್ ಗೋಲ್ಡ್ ಲಿ. ಎಂದಾಗಿರುವ ಕಂಪೆನಿಯ ಷೇರುಗಳು ಭೌತಿಕ ರೂಪದಲ್ಲಿ 6 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

*ಮೇ 2002ರಲ್ಲಿ ಅಮಾನತುಗೊಂಡಿದ್ದ ಇನರ್ಶಿಯಾ ಸ್ಟೀಲ್ ಲಿ. ಕಂಪೆನಿಯ ಮೇಲಿನ ಅಮಾನತು ತೆರವುಗೊಳಿಸಿಕೊಂಡು ಜನವರಿ 6 ರಿಂದ ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

*ವೆಲ್‌ನೆಸ್ ನೋನಿ ಲಿಮಿಟೆಡ್ ಕಂಪೆನಿಯು ಜುಲೈ 2005 ರಿಂದ ಅಮಾನತ್ತಿನಲ್ಲಿದ್ದು ಈಗ ತೆರವುಗೊಳಿಸಿಕೊಂಡು 10 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬಂಡವಾಳ ಕ್ರೋಡೀಕರಣ

ರಾಧೆ ಡೆವಲಪರ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿಯು ರೂ. 1ರ ಮುಖಬೆಲೆಯ 10 ಷೇರನ್ನು ಕ್ರೋಡೀಕರಿಸಿ ರೂ. 10ರ ಮುಖಬೆಲೆಯ 1 ಷೇರನ್ನಾಗಿಸಲಿದ್ದು ಇದಕ್ಕೆ 16ನೇ ಫೆಬ್ರುವರಿ ನಿಗದಿತ ದಿನ.  ಈಗ ಈ ಷೇರಿನ ಬೆಲೆಯು ರೂ. 1.21 ರಲ್ಲಿದೆ. (ಈ ಸಮಾಚಾರವು ಷೇರನ್ನು ಕೊಳ್ಳುವುದಕ್ಕೆ ಶಿಫಾರಸು ಅಲ್ಲವೆಂದು ಗಮನಿಸಿರಿ)

ಹಕ್ಕಿನ ಷೇರಿನ ಸಮಾಚಾರ

ನೆಟ್‌ವರ್ಕ್ 18 ಮೀಡಿಯಾ ಅಂಡ್ ಇನ್ವೆಸ್ಟ್‌ಮೆಂಟ್ಸ್ ಕಂಪೆನಿಯು ರೂ. 2,700 ಕೋಟಿ ಮೌಲ್ಯದ ಹಕ್ಕಿನ ಷೇರು ವಿತರಣೆಗೆ ನಿರ್ಧರಿಸಿದ್ದು, ಷೇರುದಾರರ ಅನುಮತಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಿದೆ. ಹಾಗೂ ಸಮೂಹ ಕಂಪೆನಿ ಟಿವಿ 18 ಬ್ರಾಡ್‌ಕಾಸ್ಟ್ ಕಂಪೆನಿ ವಿತರಿಸಲಿರುವ ಹಕ್ಕಿನ ಷೇರನ್ನು ಕೊಳ್ಳುವುದಕ್ಕೆ ಆಡಳಿತ ಮಂಡಳಿ ನಿರ್ಧರಿಸಿದೆ.

ವಿಶೇಷ ವಹಿವಾಟು

ಶನಿವಾರದ ವಿಶೇಷ ವಹಿವಾಟಿನಲ್ಲಿ ಸೀಮಿತ  ಚಟುವಟಿಕೆ ನಡೆದರೂ ಕಂಪೆನಿಗಳಾದ ಹಿಂದೂಸ್ತಾನ್ ಕಾಪರ್ ಪೆಂಟಲೂನ್ ರೀಟೇಲ್, ಚಂಬಲ್ ಫರ್ಟಿಲೈಸರ್ಸ್‌ಗಳು ಚುರುಕಾಗಿದ್ದವು. ಎಸ್‌ಕ್ಯುಎಲ್ ಸ್ಟಾರ್, ಕೋರಲ್ ಹಬ್, ಬ್ರಾಂಡ್ ಹೌಸ್ ರೀಟೆಲ್, ಭಾರತ್ ಇಮ್ಯುನಾಲಜಿ, ಕೂಟಾನ್ಸ್ ರೀಟೇಲ್, ಬುವಾಲ್ಕಾ ಸ್ಟೀಲ್ ಮುಂತಾದವು ಶೇ 15ರಿಂದ ಶೇ 20 ರವರೆಗೂ ಏರಿಕೆ ಕಂಡು ಹಿಂದಿನ ಸ್ಥಿರತೆಯ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡಿವೆ. ಒಟ್ಟಿನಲ್ಲಿ ಸೂಚ್ಯಂಕವು 19 ಅಂಶಗಳಷ್ಟು ಕುಸಿತದಿಂದ 15,848ರಲ್ಲಿ ಅಂತ್ಯಗೊಂಡಿತು.

ವಾರದ ಪ್ರಶ್ನೆ

ಷೇರುಪೇಟೆಗಳು ಅತಿಯಾದ ಕುಸಿತ ಕಂಡಿರುವ ಸಮಯದಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಸರಿಯೇ? ತಿಳಿಸಿರಿ.

ಉತ್ತರ: ಮ್ಯೂಚುವಲ್  ಫಂಡ್‌ನಲ್ಲಿ ಹೂಡಿಕೆ ಮಾಡುವುದು ಎಂದರೆ ಹೂಡಿಕೆ ತಜ್ಞರ ನಿಪುಣತೆಯ ಆಧಾರದ ಮೇಲೆ ಹೂಡಿಕೆ ಮಾಡುವುದಾಗಿದೆ. ಎಲ್ಲಕ್ಕೂ ಮಿಗಿಲಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಅನೇಕ ಉಪ ಯೋಜನೆಗಳಿರುತ್ತವೆ. ಅವುಗಳಲ್ಲಿ ಷೇರು ಆಧಾರಿತ ಮತ್ತು ಸಾಲಪತ್ರಗಳು ಆಧಾರಿತ ನಿಧಿಗಳು ಇರುತ್ತವೆ. ಷೇರು ಆಧಾರಿತ ನಿಧಿಗಳಲ್ಲಿ ವಲಯ ಆಧಾರಿತ ನಿಧಿಗಳಿರುತ್ತವೆ. ಉದಾಹರಣೆಗೆ ಫಾರ್ಮ ಫಂಡ್, ಬ್ಯಾಂಕಿಂಗ್ ವಲಯ ಆಧಾರಿತ ಫಂಡ್, ಇನ್‌ಫ್ರಾಸ್ಟ್ರಕ್ಚರ್ ಫಂಡ್, ಐ.ಟಿ. ಆಧಾರಿತ ಫಂಡ್ ಮುಂತಾದವುಗಳು. ಇವೆಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುವುದು ಅತ್ಯವಶ್ಯಕ. ಹಲವಾರು ಬಾರಿ ನಿಧಿಗಳ ಹೆಸರೇ ಬೇರೆ, ಹೂಡಿಕೆ ಮಾಡಿದ ಕಂಪೆನಿ ವಲಯವೇ ಬೇರೆ ಇರುತ್ತವೆ.

2011ರ ಅಂತ್ಯದಲ್ಲಿ ನಮ್ಮಲ್ಲಿ ಒಟ್ಟು 44 ಪಂಡ್ ಹೌಸ್‌ಗಳಿವೆ. 2011ರಲ್ಲಿ ಮ್ಯೂಚುವಲ್ ಫಂಡ್‌ಗಳ ಸಾಧನೆ ಕಳಪೆಯಾಗಿವೆ. ಕಾರಣ ಷೇರುಪೇಟೆಗಳು ನೀರಸವಾಗಿದ್ದವು. ವರ್ಷಾಂತ್ಯದಲ್ಲಿ ಎಲ್ಲ ಮ್ಯೂಚುವಲ್ ಫಂಡ್‌ಗಳು ಹೊಂದಿದ್ದ ನಿಧಿಯ ಗಾತ್ರವು ರೂ. 657,640 ಕೋಟಿಗಳಷ್ಟಾಗಿದೆ. ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ನಿಧಿಯ ಗಾತ್ರ ರೂ. 7,03,680 ಕೋಟಿಗಳಷ್ಟಿತ್ತು. ಅಂದರೆ ಡಿಸೆಂಬರ್ ಅಂತ್ಯದ ತ್ರೈಮಾಸಿಕದ ಸಮಯದಲ್ಲಿ ರೂ. 16 ಸಾವಿರ ಕೋಟಿ ಹಣವು ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣವು ಪೇಟೆಗಳು ಕುಸಿದಿರುವುದಾಗಿದೆ. ಅನಿಶ್ಚಿತತೆ ಕಾರಣ ಹೂಡಿಕೆದಾರರು ಹೊಸ ಹೂಡಿಕೆ ಮಾಡದಿರುವುದು ಮತ್ತು ಹಣವನ್ನು ಹಿಂದಕ್ಕೆ ಪಡೆದಿರುವುದೂ ಸಹ ಇದಕ್ಕೆ ಕಾರಣವಾಗಿದೆ. ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ ಮಾತ್ರ ತನ್ನ ನಿಧಿಯ ಗಾತ್ರವನ್ನು ಹೆಚ್ಚಿಸಿಕೊಂಡಿದೆ. ರಿಲಯನ್ಸ್ ಮ್ಯೂಚುವಲ್ ಫಂಡ್ ನಿಧಿಯ ಗಾತ್ರ ಒಟ್ಟು ರೂ. 17,417 ಕೋಟಿ ಕಡಿಮೆಯಾಗಿದೆ.

ಮ್ಯೂಚುವಲ್ ಫಂಡ್‌ಗಳ ಬಗ್ಗೆ ಅಧ್ಯಯನ ಮಾಡುವಷ್ಟು ಸಮಯದಲ್ಲಿ ಕಂಪೆನಿಗಳ ಬಗ್ಗೆ ತಿಳಿದು ಚಟುವಟಿಕೆ ನಡೆಸಲು ಸಾಧ್ಯವಿದ್ದರೆ ನೇರವಾಗಿ ಷೇರುಪೇಟೆಯಲ್ಲಿ ಹೂಡಿಕೆಯನ್ನು (ಬ್ರೋಕರ್‌ಗಳ ಮಾರ್ಗದರ್ಶನದಿಂದ) ಮಾಡುವುದು ಉತ್ತಮ. ಹಿಂದಿನ ವರ್ಷ ಮ್ಯೂಚುವಲ್ ಫಂಡ್‌ಗಳು ಹೆಚ್ಚಾಗಿ ಷೇರುಗಳಲ್ಲಿ ವಿನಿಯೋಗಿಸದೆ ಸಾಲ ಪತ್ರಗಳಲ್ಲಿ ತೊಡಗಿಸಿರುವ ಕಾರಣ ಹೆಚ್ಚಿನ ಲಾಭ ಗಳಿಸಿಲ್ಲ. ಷೇರುಪೇಟೆಯಲ್ಲಿ ಹೂಡಿಕೆಗೆ ಆದ್ಯತೆ ನೀಡಿದ್ದರೆ ವಹಿವಾಟು ಸಮತೋಲನ ಕಾಪಾಡಿಕೊಳ್ಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT