ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ತಯಾರಿಕೆ ಉದ್ದಿಮೆಯ ಪ್ರಯೋಜನಗಳು

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಬಹು ದೊಡ್ಡ ಮೇಳವೊಂದರ ಮೂಲಕವೇ ಹೊಸ ವರ್ಷಕ್ಕೆ ಚಾಲನೆ ದೊರೆತಿದೆ. ಕಳೆದ ವಾರ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ವಾಹನ ಮೇಳದ ಅವ್ಯವಸ್ಥೆ ಮತ್ತು ಯಶಸ್ಸಿನ ಬಗ್ಗೆ ಮತ್ತು ಅದು ದೇಶಿ ವಾಹನ ತಯಾರಿಕೆ ರಂಗದ ಮೇಲೆ ಭವಿಷ್ಯದಲ್ಲಿ ಬೀರಬಹುದಾದ ಪರಿಣಾಮಗಳ ಬಗ್ಗೆ  ನಾನು ಇಲ್ಲಿ ಪ್ರಸ್ತಾಪಿಸುತ್ತಿರುವೆ. ದೇಶಿ ವಾಹನ ತಯಾರಿಕಾ ರಂಗಕ್ಕೆ ಸಂಬಂಧಿಸಿದ  ಪ್ರತಿಯೊಬ್ಬರಲ್ಲಿಯೂ ಈ ಮೇಳವು ಖಂಡಿತವಾಗಿಯೂ ಉತ್ಸಾಹ ಮೂಡಿಸಿತ್ತು.  

ಸಾಂಪ್ರದಾಯಿಕ ಮದುವೆಗಳಲ್ಲಿ ಕಂಡು ಬರುವ ಗೌಜು ಗದ್ದಲ, ಗೊಂದಲ, ಅವ್ಯವಸ್ಥೆ, ನಿರೀಕ್ಷೆ ಮೀರಿದ ಜನರ ಉಪಸ್ಥಿತಿ, ಅವರ ನಿಯಂತ್ರಣಕ್ಕೆ ಸಂಬಂಧಿಕರು (ಸಂಘಟಕರು) ಹೆಣಗುವ ಪರಿ ಮುಂತಾದವುಗಳನ್ನು  ಈ ಮೇಳವು ನೆನಪಿಸುವಂತಿತ್ತು. ಸಾಗರದಂತೆ ಹರಿದು ಬಂದ ವಾಹನಪ್ರಿಯರನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ಸಂಘಟಕರು ಸಂಪೂರ್ಣ ವಿಫಲರಾಗಿದ್ದರು.

ಮೇಳದಲ್ಲಿನ ಸಾಕಷ್ಟು ಅವ್ಯವಸ್ಥೆಗಳ ಬಗ್ಗೆ ಮಾಧ್ಯಮಗಳೂ ಸಾಕಷ್ಟು ಪ್ರಚಾರ ನೀಡಿದ್ದವು. ಸಿದ್ಧತೆಗಳು ಪರಿಪೂರ್ಣವಾಗಿರಲಿಲ್ಲ. ವಿದೇಶಗಳಿಂದ ಆಗಮಿಸಿದ್ದ ಗಣ್ಯರೆಲ್ಲ ಈ ಅವ್ಯವಸ್ಥೆಗೆ ಸಾಕ್ಷಿಯಾಗಿದ್ದರು ಎನ್ನುವುದು ಇನ್ನೊಂದು  ಮುಜುಗರದ ಸಂಗತಿಯಾಗಿತ್ತು.

ದೇಶಿ ವಾಹನ ತಯಾರಿಕೆ ಉದ್ದಿಮೆಯು ಕಳೆದ ದಶಕದಿಂದ ಸ್ಫೋಟಕ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ನಮ್ಮಲ್ಲಿನ ಮೂಲಸೌಕರ್ಯಗಳ ಕೊರತೆಗಳನ್ನು ಮೇಳದ ಅವ್ಯವಸ್ಥೆ ಸಮರ್ಥವಾಗಿ ಬಿಂಬಿಸುವ ರೀತಿಯಲ್ಲಿತ್ತು ಎಂದರೆ ಅತಿಶಯೋಕ್ತಿಯಾಗಲಾರದು.

ಭಾರತವು ಸದ್ಯಕ್ಕೆ ವಿಶ್ವದಲ್ಲಿ 7ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. 2020ರ ಹೊತ್ತಿಗೆ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದ್ದು, 2030-35ರ ಹೊತ್ತಿಗೆ ವಿಶ್ವದ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿರುವ ಅಮೆರಿಕವನ್ನೂ ಹಿಂದೆ ಹಾಕುವ ಸಾಧ್ಯತೆಗಳು ಇವೆ.

ದಶಕಗಳ ಹಿಂದೆ ಟಾಟಾ ಕುಟುಂಬವು ಮುಂಬೈನಲ್ಲಿ ಮೊದಲ ಬಾರಿಗೆ ವಾಹನ ಖರೀದಿಸಿ ರಸ್ತೆಗಳಲ್ಲಿ ಓಡಿಸಿದ ನಂತರದ ವರ್ಷಗಳಲ್ಲಿ ಭಾರತೀಯರೆಲ್ಲ ವಾಹನಗಳ ಬಳಕೆಯಲ್ಲಿ ಸಾಕಷ್ಟು ದೂರ ಕ್ರಮಿಸಿದ್ದಾರೆ. ಅಲ್ಲಿಂದಾಚೆಗೆ ನಾವೆಲ್ಲ ಒಂದು ನೂರಕ್ಕಿಂತ ಹೆಚ್ಚು ವರ್ಷಗಳ ದೂರ ಕ್ರಮಿಸಿದ್ದೇವೆ. ಕಳೆದು ಹೋದ ವರ್ಷಗಳಲ್ಲಿ ದೇಶಿ ವಾಹನ ತಯಾರಿಕಾ ಉದ್ದಿಮೆಯ ಸ್ವರೂಪ ಸಂಪೂರ್ಣವಾಗಿ ಬದಲಾಗಿದೆ.

ಸುಜುಕಿಯು ದೇಶದ ವಾಹನ ಉದ್ದಿಮೆ ರಂಗದಲ್ಲಿ ಪ್ರವೇಶಿಸಿದ ನಂತರ, ವಿಶ್ವದ ಜನಪ್ರಿಯ ಬ್ರಾಂಡ್‌ನ ವಾಹನಗಳೂ ಭಾರತದ ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಸುಜುಕಿಯು ಪ್ರವೇಶ ಮಾಡುವ ಮುಂಚೆ ವಾಹನಗಳ ತಯಾರಿಕಾ ಪ್ರಮಾಣವು ವರ್ಷಕ್ಕೆ ಕೇವಲ 30 ಸಾವಿರದಷ್ಟಿತ್ತು. ಈ ಸಂಖ್ಯೆಗೆ ಹೋಲಿಸಿದರೆ, ಸದ್ಯಕ್ಕೆ ದೇಶದಲ್ಲಿ ಪ್ರತಿ ವರ್ಷ 30ಲಕ್ಷದಷ್ಟು ವಾಹನಗಳು ತಯಾರಾಗುತ್ತಿವೆ. ಇದು ದೇಶಿ ವಾಹನ ಉದ್ದಿಮೆಯ ವಿರಾಟ ಸ್ವರೂಪಕ್ಕೆ ಕನ್ನಡಿ ಹಿಡಿಯುತ್ತದೆ.

ಎಲ್ಲ ಬಗೆಯ ಅಭಿರುಚಿ ಮತ್ತು ಬೆಲೆ ಮಟ್ಟದ ವಾಹನಗಳೂ ನಮ್ಮಲ್ಲಿ ತಯಾರಾಗುತ್ತಿವೆ. ಜನಸಾಮಾನ್ಯರ `ನ್ಯಾನೊ~ದಿಂದ ಹಿಡಿದು ಉಳ್ಳವರ ವಿಲಾಸಿ ಕಾರು `ಮರ್ಸಿಡೀಸ್~ವರೆಗೆ ದುಬಾರಿ ಕಾರುಗಳಿಗೂ ದೇಶದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಭಾರತವು ಅಂತರರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆಗಳ ಅಚ್ಚುಮೆಚ್ಚಿನ ದೇಶವಾಗಿ ಗಮನ ಸೆಳೆಯುತ್ತಿದೆ.

ದೇಶಿ ಅರ್ಥ ವ್ಯವಸ್ಥೆಯು ಸಾಧಾರಣ ಮಟ್ಟದಲ್ಲಿ ನಿಧಾನವಾಗಿ ವೃದ್ಧಿ ಕಾಣುತ್ತಿದ್ದರೆ, ವಾಹನಗಳ ಮಾರುಕಟ್ಟೆಯು ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಆರೋಗ್ಯಕರ ದರದಲ್ಲಿ ಏರಿಕೆ ದಾಖಲಿಸುತ್ತಿದೆ. ವಾಹನಗಳ ತಯಾರಿಕೆ ಸಂಖ್ಯೆಗೆ ಪೂರಕವಾಗಿ ಸೂಕ್ತ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ  ನಾವು ಎಷ್ಟು ಸಿದ್ಧತೆ ಮಾಡಿಕೊಂಡಿದ್ದೇವೆ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.
 
ವಾಹನ ತಯಾರಿಕಾ ವಲಯದ ಬೆಳವಣಿಗೆಯ ಲಾಭವು ಎಲ್ಲರಿಗೂ ದೊರೆಯುವಂತೆ ಮಾಡಲು ಏನೆಲ್ಲಾ ಮಾಡಿದ್ದೇವೆ ಎನ್ನುವುದಕ್ಕೆ ಸಮಾಧಾನಕರ ಉತ್ತರ ದೊರೆಯುವುದಿಲ್ಲ.

ವಾಹನ ತಯಾರಿಕಾ ರಂಗದ ಬೆಳವಣಿಗೆಗಳು ಪೂರಕ ಸಿದ್ಧತೆಗಳನ್ನು ಮೀರಿ ನಡೆಯುತ್ತಿವೆ ಎಂದೂ ನನಗೆ ಭಾಸವಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ವಾಹನ ಮೇಳದಲ್ಲಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವಲ್ಲಿಯೂ ನಾವು ವಿಫಲವಾಗಿರುವುದು ಕೂಡ ಇಂತಹ ಅನುಮಾನಗಳನ್ನು ಪುಷ್ಟೀಕರಿಸುತ್ತವೆ.

ಆಟೊ ಉದ್ದಿಮೆಯ ಅಗಾಧತೆ, ಆಕರ್ಷಣೆ, ಹರಡಿಕೊಂಡಿರುವ ವ್ಯಾಪ್ತಿ ಮುಂತಾದವು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ತುಂಬ ಫಲವತ್ತಾದ ಭೂಮಿಯಾಗಿದೆ. ಬ್ಯಾಂಕಿಂಗ್ ವಹಿವಾಟು, ಬ್ರಾಂಡ್ ಜನಪ್ರಿಯತೆ, ಸಂಶೋಧನೆ, ತಯಾರಿಕೆ, ಮೂಲಸೌಕರ್ಯ, ನಗರ ಮತ್ತು ಪಟ್ಟಣಗಳ ಯೋಜನೆ ಮತ್ತಿತರ ವಿಷಯಗಳಲ್ಲಿಯೂ ಈ ಉದ್ದಿಮೆ ಮಹತ್ವದ ಪಾತ್ರ ನಿರ್ವಹಿಸುತ್ತವೆ.

ಜಾಗತಿಕ ಮಹಾಯುದ್ಧದ ನಂತರ ಅಮೆರಿಕದ ಅರ್ಥ ವ್ಯವಸ್ಥೆಯನ್ನು ಮೂಲತಃ ಆಟೊಮೊಬೈಲ್ ಉದ್ದಿಮೆ ಸುತ್ತಮುತ್ತಲೇ ಬೆಳೆಸಲಾಯಿತು ಎಂದೂ ನಂಬಲಾಗಿದೆ.

ಈ ಹಿನ್ನೆಲೆಯಲ್ಲಿ, ದೇಶಿ ವಾಹನ ಉದ್ದಿಮೆ ವಹಿವಾಟಿನ ಸರ್ವಾಂಗೀಣ ಪ್ರಗತಿಗೆ ಅಗತ್ಯವಾದ ಉತ್ತೇಜನಕಾರಿ ಕ್ರಮಗಳನ್ನು ಕೇಂದ್ರ ಸರ್ಕಾರವು ತೆಗೆದುಕೊಳ್ಳಬೇಕಾದ ಅಗತ್ಯವು ಈಗ ಹಿಂದಿಗಿಂತ  ಹೆಚ್ಚಾಗಿದೆ. ಉತ್ತೇಜನಾ ಕ್ರಮಗಳನ್ನೆಲ್ಲ ಸಮನ್ವಯತೆಯಿಂದ ಜಾರಿಗೊಳಿಸಿ ಸಮಷ್ಟಿ ಪರಿಣಾಮ ಬೀರುವಂತೆ ಸರ್ಕಾರ ಕಾಳಜಿ ವಹಿಸಬೇಕಾಗಿದೆ.

ದೇಶದಲ್ಲಿ ಕನಿಷ್ಠ 100 ಬಗೆಯ (ಬ್ರಾಂಡ್) ವಾಹನಗಳು ಮಾರಾಟಗೊಳ್ಳುತ್ತವೆ. ಇವುಗಳಲ್ಲಿ ಬಹುತೇಕ ವಾಹನಗಳು ವಿದೇಶಗಳಲ್ಲಿ ವಿನ್ಯಾಸಗೊಂಡು ಅಲ್ಲಿಯೇ ಪರೀಕ್ಷೆಗೆ ಒಳಪಟ್ಟು, ದೇಶಿ ರಸ್ತೆಗೆ ಇಳಿಯುತ್ತವೆ. ಈ ವಾಹನಗಳನ್ನು ದೇಶದಲ್ಲಿ ಜೋಡಿಸಲಾಗುತ್ತದೆ ಇಲ್ಲವೇ ಪೂರ್ಣ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ.

ವಾಹನಗಳ ತಯಾರಿಕೆಗೆ ಅಗತ್ಯವಾಗಿರುವ ಅತ್ಯಾಧುನಿಕ ತಂತ್ರಜ್ಞಾನವು ದೇಶದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯ ಇಲ್ಲದಿರುವುದೂ ಈ ಉದ್ದಿಮೆಯ ನಿರೀಕ್ಷಿತ ಪ್ರಗತಿಗೆ ಅಡ್ಡಿಯಾಗಿರುವುದು ಸುಳ್ಳಲ್ಲ.  ಈ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ.

ವಾಹನ ತಯಾರಿಕೆಯ ಅನೇಕ ಬಹುರಾಷ್ಟ್ರೀಯ (ಎಂಎನ್‌ಸಿ) ಸಂಸ್ಥೆಗಳು ಭಾರತ ಮತ್ತು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುವ ವಾಹನಗಳ ತಯಾರಿಕೆಗೆ ಪೂರಕವಾಗಿ ಸ್ವಂತ ವಿನ್ಯಾಸ ಮತ್ತು ಸಂಶೋಧನಾ ಕೇಂದ್ರಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲು ಇತ್ತೀಚೆಗೆ ಮುಂದಾಗಿದೆ. `ಷೆವರ್ಲೆ ಬೀಟ್, `ಫೋರ್ಡ್ ಫಿಗೊ~ಗಳನ್ನು ಭಾರತದಲ್ಲಿಯೇ ಮೊದಲು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಸ್‌ಗಳು (ಎಸ್‌ಯುವಿ) ಮತ್ತು ಟಾಟಾ ಸಂಸ್ಥೆಯ `ನ್ಯಾನೊ~ ಸಾಕಷ್ಟು ಯಶಸ್ಸು ಕಂಡಿವೆ. ವಾಹನ ತಯಾರಿಕಾ ಸಂಸ್ಥೆಗಳು ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಇಂತಹ ಪ್ರಯತ್ನಗಳಲ್ಲಿ ತೊಡಗಿಕೊಂಡಿವೆ.

ಈ ಯೋಜನೆಗಳಿಗೆ ಸರ್ಕಾರದ ಹಣಕಾಸಿನ ನೆರವು ಅಥವಾ ಇತರ ಬಗೆಯ ಸಹಾಯ ಸಹಕಾರವನ್ನೇನೂ ವಾಹನ ತಯಾರಿಕಾ ಸಂಸ್ಥೆಗಳು ಬಯಸಿಲ್ಲ. ಸರ್ಕಾರವೂ ಆ ನಿಟ್ಟಿನಲ್ಲಿ ಚಿಂತಿಸಿಲ್ಲ.

ವಾಹನ ತಯಾರಿಕಾ ರಂಗಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ರಂಗದಲ್ಲಿ ದೇಶವು ಅಗತ್ಯ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದೆಯೇ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.

ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 0.9ರಷ್ಟನ್ನು ಮಾತ್ರ ಭಾರತದಲ್ಲಿ ವಾಹನಗಳ ತಯಾರಿಕೆಗೆ ಸಂಬಂಧಿಸಿದ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಅಮೆರಿಕದಲ್ಲಿ ಇದು `ಜಿಡಿಪಿ~ಯ ಶೇ 3ರಷ್ಟು ಇದೆ.

`ಬಿತ್ತಿದ್ದನ್ನು ಬೆಳೆದುಕೊ~ ಎಂಬಂತೆ ನಮ್ಮ ಮುಂದಿರುವ ದಾರಿ ಯಾವುದು ಎನ್ನುವ ಪ್ರಶ್ನೆಗೂ ನಾವು ಈಗ ಉತ್ತರ ಕಂಡುಕೊಳ್ಳಬೇಕಾದ ಅಗತ್ಯ ಉದ್ಭವಿಸಿದೆ. ಕೇಂದ್ರ ಸರ್ಕಾರವು ಈ ಉದ್ದಿಮೆಗೆ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸಬೇಕಾಗಿದೆ. ಕೇವಲ ತೆರಿಗೆ ಉತ್ತೇಜನಾ ಕ್ರಮಗಳು, ಕಡಿಮೆ ಬಡ್ಡಿ ದರಗಳು, ತೆರಿಗೆ ರಿಯಾಯ್ತಿಗಳು ನಿರೀಕ್ಷಿತ ಫಲಿತಾಂಶ ನೀಡಲಾರವು.

ಸದ್ಯಕ್ಕೆ ದೇಶದಲ್ಲಿ ಜಾರಿಯಲ್ಲಿ ಇರುವ ಉತ್ತೇಜನಾ ಕ್ರಮಗಳು ತುಂಬ ತೊಡಕಿನಿಂದ ಕೂಡಿವೆ. ಮಧ್ಯಮ ಗಾತ್ರದ ಉದ್ದಿಮೆಗಳು ಈ ನೆರವು ಪಡೆಯಲು ಸಾಧ್ಯವಾಗುವುದೇ ಇಲ್ಲ. ಇದರಿಂದ ನಿರೀಕ್ಷಿತ ಮತ್ತು ಹಿತಕರವಾದ ಫಲಿತಾಂಶ ದೊರೆಯಲಾರದು. ಈ ವಿಷಯದಲ್ಲಿ ಸರ್ಕಾರದ ಪಾಲುದಾರಿಕೆ ಗಮನಾರ್ಹವಾಗಿ ಹೆಚ್ಚಳಗೊಳ್ಳಬೇಕಾಗಿದೆ.

ಸರ್ಕಾರ ಕೈಗೊಳ್ಳುವ ಉತ್ತೇಜನಾ ಕ್ರಮಗಳು ಹಣದ ವೆಚ್ಚ ಮತ್ತು ಅದರ ಫಲಿತಾಂಶದ ಬಗ್ಗೆ ಕಾಲಮಿತಿ ವಿಧಿಸುವಂತಾಗಬೇಕು. ವಾಹನ ತಯಾರಿಕೆಯಲ್ಲಿ ತೊಡಗಿರುವ ಎಲ್ಲ ಸಣ್ಣ, ಮಧ್ಯಮ ಮತ್ತು ಬೃಹತ್ ಸಂಸ್ಥೆಗಳು, ವಾಹನ ತಜ್ಞರು ಪರಸ್ಪರ ಸಹಕರಿಸಿ, ಚಿಂತಿಸಿ ಉದ್ದಿಮೆಯ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ವಾಹನಗಳ ಉದ್ದಿಮೆಗೆ ನಿರ್ದಿಷ್ಟ ಸ್ವರೂಪ ಕೊಟ್ಟವರೂ ಈ ಕಾರ್ಯಸಾಧನೆಯಲ್ಲಿ ಇತರರಿಗೂ ಎಲ್ಲ ಬಗೆಯ ನೆರವು ನೀಡಬೇಕಾಗಿದೆ.

ನವದೆಹಲಿಯಲ್ಲಿ ನಡೆದ ವಾಹನ ಮೇಳದಲ್ಲಿನ ವಿದ್ಯಮಾನಗಳು ಸರ್ಕಾರಿ ಪ್ರಭುಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದೇ ಪರಿಗಣಿಸೋಣ. ವಾಹನ ತಯಾರಿಕಾ ವಲಯವು ನಿಧಾನಗತಿಯ ಚೇತರಿಕೆಯಿಂದ ಹೊರ ಬಂದು ತ್ವರಿತಗತಿಯ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕಾಗಿದೆ. ವಾಹನ ತಯಾರಿಕೆಯ ಉದ್ದಿಮೆಯು  ದೇಶದ ಒಟ್ಟಾರೆ ಅರ್ಥ ವ್ಯವಸ್ಥೆಯ ಶಕ್ತಿ ಸಾಮರ್ಥ್ಯದ ಪೂರ್ಣ ಪ್ರಯೋಜನವನ್ನು ಪಡೆಯುವಂತಾಗಬೇಕಾಗಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT