ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸವಾದಿ, ವಿಚಾರವಾದಿ ಚಾರ್ಲ್ಸ್ ಡಾರ್ವಿನ್

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅವನಿಗೆ ಚಿಟ್ಟೆ ಹಿಡಿಯುವ ಹುಚ್ಚು. ಎರಡೂ ಕೈಗಳಲ್ಲಿ ಚಿಟ್ಟೆ ಹಿಡಿದು ನಿಂತಿದ್ದ. ಅಷ್ಟರಲ್ಲಿ ಎದುರಿಗೆ ಇನ್ನೊಂದು ಚಿಟ್ಟೆ ಕಾಣಿಸಿತು. ಅದನ್ನು ಹೇಗಾದರೂ ಹಿಡಿಯಬೇಕೆನಿಸಿತು. ಒಂದು ಕೈಯಲ್ಲಿದ್ದ ಚಿಟ್ಟೆಯನ್ನು ಬಾಯಲ್ಲಿ ಇರಿಸಿಕೊಂಡು ಮೂರನೆಯ ಚಿಟ್ಟೆಯನ್ನು ಹಿಡಿದ. ಬಾಯಲ್ಲಿದ್ದ ಚಿಟ್ಟೆ, ಲೋಳೆಯನ್ನು ಸುರಿಸಿ ಗಂಟಲು ಚುರುಗುಟ್ಟಿ ಪರದಾಡುವಂತಾಯಿತು. ಇಂಥ ವಿಚಿತ್ರ ನಡವಳಿಕೆಗಳಿಂದ ಶಾಲೆಯಲ್ಲಿ ಅವನನ್ನು ಶಿಕ್ಷಕರು ನೀನೊಬ್ಬ ದಡ್ಡ, ಸೋಮಾರಿ, ನಿರುಪಯುಕ್ತ ಎಂದು ಬೈಯ್ಯುತ್ತಿದ್ದರು.

ಸಾಂಪ್ರದಾಯಿಕ ಶಿಕ್ಷಣ ಅವನಿಗೆ ರುಚಿಸುತ್ತಿರಲಿಲ್ಲ. ವ್ಯಾಕರಣ, ಲಕ್ಷಣಶಾಸ್ತ್ರಗಳೆಂದರೆ ಅಲರ್ಜಿ. ತರಗತಿಗೆ ಚಕ್ಕರ್ ಹೊಡೆದು ಸಸ್ಯಗಳ, ಪ್ರಾಣಿಗಳ ಜತೆ ಆನಂದವಾಗಿದ್ದುಬಿಡುತ್ತಿದ್ದ. ಚಿಟ್ಟೆ, ಹಕ್ಕಿ, ಹೆಗ್ಗಣಗಳನ್ನು ಹುಡುಕಿ ಹೋಗುತ್ತಿದ್ದ. ಶಾಲೆಯಲ್ಲಿ ಮಂಕನಂತೆ ಕುಳಿತಿರುತ್ತಿದ್ದವನು, ಹೊಲ ತೋಟಕ್ಕೆ ಬಿದ್ದನೆಂದರೆ ಹೂ, ತರುಲತೆ, ಪ್ರಾಣಿ, ಪಕ್ಷಿ ಕೊನೆಗೆ ಕಲ್ಲಿನ ಚೂರನ್ನೂ ಹಿಡಿದು ನೀನು ಯಾರು? ಯಾಕೆ ಹೀಗಿದ್ದಿ ? ಎಂದು ಪ್ರಶ್ನಿಸುತ್ತಿದ್ದ.

ಓದಿ ಡಾಕ್ಟರಾಗು ಎಂದರೆ ಅಯ್ಯಯ್ಯೋ ಬೇಡಪ್ಪ ಮನುಷ್ಯರ ಶರೀರಾನ ಕತ್ತರಿಸೋದು ನನ್ ಕೈಲಿ ಆಗಲ್ಲ ಅನ್ನುತ್ತಿದ್ದ. ನೋಡ್ತಾ ಇರಿ, ಬಣ್ಣಬಣ್ಣದ ಹೂ ಬಿಡೋ ಸಸ್ಯಗಳನ್ನು ನಿರ್ಮಾಣ ಮಾಡ್ತೀನಿ ಎಂದು ಕನಸುಗಾರನಂತೆ ಮಾತನಾಡುತ್ತಿದ್ದ. ತಗಳಪ್ಪ, ದೇವ್ರು ಈ ದಡ್ಡನ ಮೈಮೇಲೆ ಬಂದು ಏನೆಲ್ಲಾ ಮಾತಾಡಿಸ್ತಿದ್ದಾನೆ ಎಂದು ದೊಡ್ಡವರು ಆಡಿಕೊಳ್ಳುತ್ತಿದ್ದರು. ನೀನು ಮುಂದೆ ಒಳ್ಳೆಯ ಕತೆಗಾರನಾಗ್ತೀಯ ಎನ್ನುತ್ತಿದ್ದಳು ತಂಗಿ. ಅವಳ ಮಾತು ನಿಜವಾಯ್ತು. ಮಾನವಕುಲದ ಇತಿಹಾಸವನ್ನೇ ಹೊಸದಾಗಿ ಗ್ರಹಿಸಿ ವಿಕಾಸವಾದದ ಬೃಹತ್ ಕತೆ ಬರೆದ. ಅವನು ಚಾರ್ಲ್ಸ್ ಡಾರ್ವಿನ್.

ಅನೇಕ ವಿಜ್ಞಾನಿಗಳಂತೆ, ಸಾಂಪ್ರದಾಯಿಕ ಶಿಕ್ಷಣಕ್ಕೆ ಬೆನ್ನು ಮಾಡಿ ತರಗತಿಯ ಕೋಣೆಯಿಂದಾಚೆ ಜಿಗಿದು, ನಿಸರ್ಗವನ್ನೇ ಪಠ್ಯವನ್ನಾಗಿಸಿಕೊಂಡು, ಜಗತ್ತಿನ ಆಲೋಚನೆಯ ದಿಕ್ಕನ್ನೇ ಬದಲಿಸಿದ ಮಹಾನ್ ವಿಜ್ಞಾನಿ. ಧರ್ಮಗ್ರಂಥಗಳನ್ನು ಓದಿ ಪಾದ್ರಿಯಾಗು ಎಂದರೆ, ಬೈಬಲ್‌ನ ಸಿದ್ಧಾಂತವನ್ನೇ ನಿರಾಕರಿಸಿದ. ಮಾನವನು ದೈವನಿರ್ಮಿತ ಪವಿತ್ರಾತ್ಮ ಎಂದು ಬಹುಜನರು ನಂಬಿರುವಾಗ, ಅಲ್ಲ ಅವನು ಕಪಿಯಿಂದ ವಿಕಾಸಗೊಂಡ ಉತ್ತಮ ಕಪಿ ಮಾತ್ರ ಎಂದರೆ ಚರ್ಚುಗಳಿಗೆ ಸಿಟ್ಟು ಬರುವುದಿಲ್ಲವೆ ? ಡಾರ್ವಿನ್ ತಾನು ಕಂಡ ಸತ್ಯವನ್ನು ಅಪಾರ ತಾಳ್ಮೆಯಿಂದ ಭಾವೋದ್ರೇಕಕ್ಕೊಳಗಾಗದೆ ತಣ್ಣಗೆ, ಆದರೆ ಖಚಿತವಾಗಿ ಹೇಳುತ್ತಿದ್ದ. ಡಾರ್ವಿನ್ ಸಂಶೋಧನೆಯನ್ನು ಮಕ್ಕಳಿಗೆ ಬೋಧಿಸಬಾರದೆಂದು ಕೆಲವು ರಾಷ್ಟ್ರಗಳ ಧರ್ಮನಿಷ್ಠರು ಕಟ್ಟಾಜ್ಞೆ ವಿಧಿಸಿದ್ದರು. ಬೋಧಿಸಿದ ಶಿಕ್ಷಕರನ್ನು ಉಗ್ರಶಿಕ್ಷೆಗೆ ಗುರಿಪಡಿಸುತ್ತಿದ್ದರು. ಮಂಗನಿಂದ ಮಾನವನಾದ ಎಂಬ ಡಾರ್ವಿನ್ ವಾದವನ್ನು ಒಪ್ಪದ ಕೆಲವು ಮಾನವರು, ಮಂಗಾಟದಲ್ಲಿಯೇ ತೊಡಗಿದ್ದುದು ತಮಾಷೆಯಾಗಿತ್ತು.

ಇದಕ್ಕೆ ಡಾರ್ವಿನ್ ‘ಅಲ್ರಿ... ಮನುಷ್ಯ ದೇವರಿಂದ ಕೆಳಕ್ಕಿಳಿದು ಅಧೋಗತಿಗೆ ತಲುಪಿದ ಅನ್ನುವುದಕ್ಕಿಂತ ಮಂಗಗಳಿಂದ ಮೇಲ್ಮಟ್ಟಕ್ಕೆ ಏರಿ ದೈವತ್ವದ ಕಡೆಗೆ ಹೊರಟ ಎನ್ನುವುದೇ ಉತ್ತಮ ಅಲ್ವೆ?’ ಎನ್ನುತ್ತಿದ್ದ. ಡಾರ್ವಿನ್ ಎಷ್ಟು ಮುಖ್ಯ ಎಂದರೆ ಅವನನ್ನು ನಿರಾಕರಿಸಲು ಕೂಡಾ ಅವನನ್ನು ಓದಿ, ನಂತರ ಬೇರೆಯವರ ಭಿನ್ನಾಭಿಪ್ರಾಯವನ್ನು ಓದಿ, ಮತ್ತೆ ಡಾರ್ವಿನ್‌ಗೇ ಮರಳಬೇಕು. ಅವನ ವಿಕಾಸವಾದದ ಮೂಲತತ್ತ್ವದ ಮೇಲೆಯೇ ಇಂದಿನ ಮನುಷ್ಯ ಕುಲದ ವಿಕಾಸ ವಿಜ್ಞಾನ ಬೆಳೆದು ನಿಂತಿದೆ. ಪ್ರಾಚೀನ ಕಾಲದ ಯಾವುದೋ ಒಂದು ಮಂಗ ನಮ್ಮ ಪೂರ್ವಜನೆಂದು ಕಲ್ಪಿಸಿಕೊಳ್ಳಲು ಯಾರೂ ನಾಚಿಕೊಳ್ಳಬೇಕಿಲ್ಲ. ಅದರ ಬದಲು ಈ ದಿವ್ಯಸತ್ಯವನ್ನು ಹೆಮ್ಮೆಯಿಂದ ಅರಿತು ಪೂರ್ವಜರನ್ನು ಸ್ಮರಿಸಿಕೊಳ್ಳುವುದು ಅಗತ್ಯ ಎನ್ನುತ್ತಾನೆ ಡಾರ್ವಿನ್.

ಬೀಗಲ್ ಎಂಬ ಹಡಗಿನಲ್ಲಿ ೧೮೩೧ರಿಂದ ಐದು ವರ್ಷ ವಿಶ್ವಪರ್ಯಟನೆ ಮಾಡಿ ಕ್ಷೇತ್ರ ಕಾರ್ಯ ಮಾಡಿದ ಅಪೂರ್ವ ವಿಜ್ಞಾನ ಯಾತ್ರೆ ಡಾರ್ವಿನ್‌ನ ಶೋಧನಾ ಬದುಕಿನ ಬಹುಮುಖ್ಯ ಘಟ್ಟ. ಆಗಿನ ಕಾಲಕ್ಕೆ ಫಿಟ್ಸ್‌ರಾಯ್ ಪ್ರಖ್ಯಾತ ಇಂಗ್ಲಿಷ್ ನಾವಿಕ. ಅವನಿಗೆ ಡಾರ್ವಿನ್‌ನನ್ನು ಕರೆದೊಯ್ಯಲು ಇಷ್ಟವಿಲ್ಲ. ಕಾರಣ ಅವನ ಪ್ರಕಾರ ದಪ್ಪ ಮೂಗಿನವರು ಸಾಹಸಿಗಳಲ್ಲ. ಡಾರ್ವಿನ್‌ಗಾದರೋ ಮುಖದ ತುಂಬ ಎಂಬಂತಿದ್ದ ಗೆಂಡೆ ಮೂಗು. ಮಹೋನ್ನತ ಅವಕಾಶವು ಕ್ಷುಲ್ಲಕ ಕಾರಣಕ್ಕೆ ತಪ್ಪಿ ಹೋಗದಂತೆ ನೋಡಿಕೊಂಡವರು ಗುರು ಮತ್ತು ವಿಜ್ಞಾನಿ ಹೆನ್‌ಸ್ಲೋ. ಒಲ್ಲದ ಮನಸ್ಸಿನಿಂದ ಒಳಗೆ ಬಿಟ್ಟುಕೊಂಡ ರಾಯ್ ಮುಂದೊಂದು ದಿನ ದಪ್ಪ ಮೂಗಿನ ಬಗ್ಗೆ ತನ್ನ ಪೂರ್ವಗ್ರಹ ಬದಲಿಸಿಕೊಳ್ಳಬೇಕಾಯಿತು.

ಇಪ್ಪತ್ಮೂರರ ಹರೆಯದ ಡಾರ್ವಿನ್, ಬೀಗಲ್ ಯಾತ್ರೆಯ ಉದ್ದಕ್ಕೂ ಮಾಡಿದ ಸಂಗ್ರಹ ಮತ್ತು ಸಂಶೋಧನೆ ಅಚ್ಚರಿದಾಯಕ. ಬ್ರಿಟನ್‌ನಿಂದ ಹೊರಟ ಬೀಗಲ್, ಅಟ್ಲಾಂಟಿಕ್ ಕ್ರಮಿಸಿ, ಬ್ರೆಜಿಲ್ ತೀರಗಳನ್ನು ಸ್ಪರ್ಶಿಸಿ, ಅಮೆಜಾನ್ ನದಿ ತಟಾಕಗಳನ್ನು ಶೋಧಿಸಿ, ಮಾಂಟೆಪಿಡಿಯೋದಲ್ಲಿ ನಿಂತು, ಸಾಂಟಾಫಿಯಾ, ಪೆಟಿಗೋನಿಯಾಗಳನ್ನು ದಾಟಿ ಗಾಲ್ಪೆಗೋ ದ್ವೀಪಸ್ತೋಮಕ್ಕೆ ಬಂದಾಗ ನಾಗರಿಕತೆಯ ಶೈಶವಾವಸ್ಥೆಯಲ್ಲಿದ್ದ ಅಲ್ಲಿನ ಮೂಲನಿವಾಸಿಗಳನ್ನು ಕಂಡು ಡಾರ್ವಿನ್ ಭಾವಪರವಶನಾಗುತ್ತಾನೆ.

ಮಾನವರ ಮೂಲಪುರುಷ ಮಂಗನೇ ಇರಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ. ಅಲ್ಲಿಂದ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಮಾರಿಷಸ್, ಕೇಪ್‌ಟೌನ್ ಮೂಲಕ ಬ್ರಿಟನ್‌ಗೆ ಬಂದ ಡಾರ್ವಿನ್‌ನನ್ನು ಮತ್ತೊಬ್ಬ ಕೊಲಂಬಸ್ ಎನ್ನಬಹುದು. ಅವನ ಹಡಗಿನ ಯಾತ್ರೆಯನ್ನು ನೆನೆದರೆ ಹುಟ್ಟು ಅಲೆಮಾರಿಯಾದ ನನ್ನಂಥವರಿಗೆ ಬಾಯಲ್ಲಿ ನೀರೂರುತ್ತದೆ. ನಾನು ವಿಜ್ಞಾನದ ವಿದ್ಯಾರ್ಥಿಯಲ್ಲ. ಆದರೆ ನನಗೊಂದು ಆಯ್ಕೆಯ ಅವಕಾಶ ಸಿಕ್ಕಿದ್ದರೆ ಡಾರ್ವಿನ್‌ನ ಬ್ಯಾಗು ಎತ್ತಿಕೊಂಡು ಓಡಾಡುವ ಸಹಾಯಕನಾಗಿಯಾದರೂ ಹಡಗನ್ನೇರುತ್ತಿದ್ದೆ.

ಡಾರ್ವಿನ್‌ದು ಮನರಂಜನಾ ಪ್ರವಾಸವಲ್ಲ. ಹಲವು ಜಾತಿಯ ಗೆಡ್ಡೆಗೆಣಸು, ಹೂಗಳು, ಲೋಹದ ಚೂರು, ಶಿಲೆಗಳು, ಆರ್ಕಿಡ್ಸ್, ಪಕ್ಷಿಗಳು, ಹುಳುಹುಪ್ಪಟೆಗಳು, ಪ್ರಾಚೀನ ಚತುಷ್ಪಾದಿ ಪಳೆಯುಳಿಕೆಗಳು ಎಲ್ಲವನ್ನೂ ಸಂಗ್ರಹಿಸುತ್ತಾ ಹೋಗುತ್ತಾನೆ. ಸಾಂಟಾಫಿಯಾದಲ್ಲಿ ಪ್ರಾಚೀನ ಕುದುರೆಯ ಪಳೆಯುಳಿಕೆಯೊಂದು ದೊರೆಯುತ್ತದೆ. ಈ ಸಂಶೋಧನೆಯ ದಾಹದ ನಡುವೆಯೂ ಗುಲಾಮರನ್ನು ಮಾರಾಟ ಮಾಡುತ್ತಿದ್ದ ಹೇಯವಾದ ಕೃತ್ಯಕ್ಕೆ ಮರುಗುತ್ತಾನೆ.‘If the misery of our poor be caused not by the laws of nature, but by our institutions, great is our sin’ ಎನ್ನುತ್ತಾನೆ.

ಮಹಾನ್ ಮಾನವತಾವಾದಿಯಾಗಿದ್ದನೆಂಬುದಕ್ಕೆ ಈ ಮಾತು ಸಾಕ್ಷಿ. ಒಮ್ಮೆ ರಿಯೋಡಿಜನೈರೋನಲ್ಲಿ ನದಿ ದಾಟುವಾಗ ನೀಗ್ರೋ ಒಬ್ಬನಿಗೆ ಕೈ ಎತ್ತಿ ಶುಭಕಾಮನೆ ಹೇಳಲು ಸನ್ನೆ ಮಾಡಿದರೆ ಅವನು ಹೊಡೆಯುತ್ತಾರೆಂದು ಭಯಭೀತಿಯಿಂದ ಚೀರುತ್ತಾನೆ. ಬ್ರಿಟನ್‌ಗೆ ಬಂದ ಮೇಲೆ ಗುಲಾಮ ಪದ್ಧತಿಯನ್ನು ಖಂಡಿಸಿ ಅದರ ಕರಾಳ ಸ್ವರೂಪವನ್ನು ಡಾರ್ವಿನ್ ಸಾರ್ವಜನಿಕರೆದುರು ತೆರೆದಿಡುತ್ತಾನೆ. ಆಕಸ್ಮಿಕ ಎಂಬಂತೆ ಕಪ್ಪು ಜನರ ವಿಮೋಚನೆಗೆ ಪ್ರಯತ್ನಿಸಿದ ಲಿಂಕನ್ ಮತ್ತು ಡಾರ್ವಿನ್ ಒಂದೇ ದಿನ (ಫೆಬ್ರುವರಿ 12,1809) ಜನಿಸಿದವರು. ಬೀಗಲ್ ಯಾತ್ರೆಯು ಯಾತನೆ, ರೋಚಕತೆ, ಸಾಹಸ, ಆತಂಕ, ಜೀವಭಯ, ಭಾವಪರವಶತೆ ಮುಂತಾದ ಬಗೆಬಗೆಯ ಭಾವಗಳಿಂದ ಅವನ ಅನುಭವಕೋಶವನ್ನು ತುಂಬುತ್ತದೆ.

ಭೂಕಂಪ, ಬಿರುಗಾಳಿ, ಬರ, ದಂಗೆ ಎದುರಾಗುತ್ತವೆ. ವಿಮಾನಗಳಿಲ್ಲದ ಹೊತ್ತಲ್ಲಿ ಡಾರ್ವಿನ್ ಕೈಗೊಂಡ ಈ ಯಾತ್ರೆಯ ರೋಚಕ ಅನುಭವಗಳು ವಿವರಣಾತ್ಮಕ ಟಿಪ್ಪಣಿಗಳೊಂದಿಗೆ ಆತನ ‘ನಿಸರ್ಗ ವಿಜ್ಞಾನಿಯ ಪ್ರಪಂಚಯಾತ್ರೆ’ಯಲ್ಲಿ ದಾಖಲಾಗಿವೆ. ಆನಂತರ ಸತತವಾಗಿ ಅವನ ಕೃತಿಗಳು, ಪ್ರೌಢ ಪ್ರಬಂಧಗಳು ಸಾಲುಸಾಲಾಗಿ ಹೊರಬಂದು ವಿಜ್ಞಾನಲೋಕವನ್ನು ಬೆರಗುಪಡಿಸಿದವು. ಬೀಗಲ್ ಯಾತ್ರೆಯ ಪ್ರಾಣಿಶಾಸ್ತ್ರ, ಕಿರಿಯ ವಿಜ್ಞಾನಿ ಪ್ರವಾಸಿಗರಿಗೆ ಸಲಹಾ ಪುಸ್ತಕ, ಬದುಕಿರುವ ಸಿರಿಪೀಡಿಯ, ಪ್ರಾಚೀನ ಸಿರಿಪೀಡಿಯ, ಸುರುಳಿ ಬಳ್ಳಿಗಳ ಚಲನೆ, ಮಾನವನ ಅವತರಣ, ಜೀವಜಾತಿಗಳ ಹುಟ್ಟು ಮುಂತಾದವುಗಳನ್ನು ಪ್ರಕಟಿಸಿದ.

ದೇವರು ಇಡೀ ಜೀವಪ್ರಪಂಚವನ್ನು ಒಂದು ವಾರದ ಕಾಲದಲ್ಲಿ ಸೃಷ್ಟಿಸಿ ಮುಗಿಸಿದ. ಮನುಷ್ಯನದು ಪವಿತ್ರವಾದ ಪ್ರತ್ಯೇಕವಾದ ಸೃಷ್ಟಿ. ಅವನಿಗೂ ಇತರ ಜೀವಿಗಳಿಗೂ ಯಾವ ಸಂಬಂಧವೂ ಇಲ್ಲ ಎನ್ನುತ್ತದೆ ಬೈಬಲ್. ಡಾರ್ವಿನ್‌ನ ವಿಕಾಸವಾದ ಇದನ್ನು ಪೂರ್ಣವಾಗಿ ತಿರಸ್ಕರಿಸುತ್ತದೆ. ಸೃಷ್ಟಿಯು ವಿಕಾಸಾತ್ಮಕ ಎಂಬ ಮಾತು ಡಾರ್ವಿನ್‌ಗಿಂತ ಮುಂಚೆಯೇ ಎಂಪೆಡಾಕ್ಲೀಸ್, ಲೂಕ್ರೀಷಿಯಸ್, ಹ್ಯೂಮ್, ಕ್ಯಾಂಟ್ ಲಿಯನಾರ್ಡೊ ಮುಂತಾದ ಬೇರೆ ಬೇರೆ ದೇಶದ ತಿಳಿವಳಿಕಸ್ತರು, ಕವಿಗಳು ಸೂಚಿಸಿದ್ದರೂ ಅದು ಗಟ್ಟಿಧ್ವನಿಯಾಗಿರಲಿಲ್ಲ. ಅದು ನಾಸ್ತಿಕ ದೃಷ್ಟಿಕೋನವೆಂದು ಸನಾತನಿಗಳು ಬಾಯಿ ಮುಚ್ಚಿಸಿದ್ದರು. ಪ್ರಚಾರ ಸೌಕರ್ಯಗಳೂ ಇರಲಿಲ್ಲ. ಆದರೆ ಡಾರ್ವಿನ್ ಇಪ್ಪತ್ತೆರಡು ವರ್ಷ ಬಿಡದೆಲೆ ನಿರಂತರ ಪ್ರಯೋಗ ಮತ್ತು ಫಲಿತಾಂಶಗಳನ್ನು ಧಾರೆ ಎರೆದು ನಿಸರ್ಗದ ಮಹಾವಿಕಸನವನ್ನು ಗ್ರಹಿಸಿ ‘ಜೀವಜಾತಿಗಳ ಹುಟ್ಟು’ ಗ್ರಂಥವನ್ನು ರಚಿಸಿದ.

ಅದರಲ್ಲಿ ಜೀವಕಲ್ಪಗಳು, ಉರಗಗಳ ಕಲ್ಪ, ಪ್ರಾಯೋಗಿಕ ಸಾಕ್ಷ್ಯಗಳು, ಅಂಗರಚನೆಯ ಸಾಕ್ಷ್ಯ ಎಲ್ಲವನ್ನೂ ಸೋದಾಹರಣವಾಗಿ ವಿವರಿಸುತ್ತಾನೆ. ಮೀನಿನ ಮೊದಲ ಈಜು ರೆಕ್ಕೆಗಳು, ಕಪ್ಪೆಯ ಮುಂಗಾಲುಗಳು, ಹಲ್ಲಿ, ಮೊಸಳೆ, ಆಮೆ ಮೊದಲಾದವುಗಳ ಮುಂಗಾಲುಗಳು, ಮಾನವ ಕೈಗಳು ಇವೆಲ್ಲ ಹೊರನೋಟಕ್ಕೆ ಹೋಲದಿದ್ದರೂ ಅವೆಲ್ಲವೂ ಮೀನಿನ ಮುಂದಿನ ಜೊತೆರೆಕ್ಕೆಗಳಿಂದಲೇ ವಿಕಾಸವಾದವು ಎಂದು ಡಾರ್ವಿನ್ ವಿವರಿಸುತ್ತಾನೆ. ಆಫ್ರಿಕಾದಲ್ಲಿ ಮೊದಲು ಮಾನವ ಉಗಮವಾಗಿರಬೇಕು ಎನ್ನುತ್ತಾನೆ ಡಾರ್ವಿನ್. ಅಲ್ಲಿ ಇತ್ತೀಚೆಗೆ ದೊರೆತ ಪ್ರಾಚೀನ ಶಿಲಾಯುಗದ ಮಂಗಮಾನವನ ಪಳೆಯುಳಿಕೆಗಳು ಡಾರ್ವಿನ್ ವಾದವನ್ನೇ ಪುಷ್ಟೀಕರಿಸುತ್ತವೆ. ಅವನು ಕೊಟ್ಟಿರುವ ವಿಕಾಸವಾದದ ನಕ್ಷೆ ಇಂದಿಗೂ ಒಪ್ಪಿತವಾಗಿದೆ.

ಭ್ರೂಣಶಾಸ್ತ್ರಕ್ಕೂ ಅವನ ಕೊಡುಗೆ ಅಪಾರ. ಅನುವಂಶೀಯ ಗುಣಗಳ ಅಧ್ಯಯನಕ್ಕೆ ಡಾರ್ವಿನ್ ತತ್ತ್ವಗಳೇ ತಳಪಾಯ. ‘ಜೀವಜಾತಿಗಳ ಹುಟ್ಟು’ ಕೃತಿಯನ್ನು ಜಗತ್ತಿನ ಯಾವುದೇ ಮಹಾಕಾವ್ಯದೊಂದಿಗೆ ಹೋಲಿಸಬಹುದು. ಇದು ವೈಜ್ಞಾನಿಕ ಮಹಾಕಾವ್ಯ. ಡಾರ್ವಿನ್ನನ ಆಳವಾದ ಸಂಶೋಧನೆ, ಮಾನವ ಕುಲದ ಬಗೆಗಿನ ಪ್ರೀತಿ, ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಬಗೆ ಅವನನ್ನು ದಾರ್ಶನಿಕನನ್ನಾಗಿಸುತ್ತವೆ. ದುರ್ದೈವವೆಂದರೆ ವೈಜ್ಞಾನಿಕ ಕೃತಿಗಳನ್ನು ಮಹಾಕಾವ್ಯದ ಎತ್ತರದಲ್ಲಿರಿಸಿ ಗೌರವಿಸುವ ಕ್ರಮವೇ ನಮ್ಮಲ್ಲಿ ಬಂದಿಲ್ಲ. ನ್ಯೂಟನ್, ಐನ್‌ಸ್ಟೀನ್, ಡಾರ್ವಿನ್ ಅಂಥವರು ಯಾವ ಮಹಾಕವಿಗಳಿಗೂ ಕಡಿಮೆ ಇಲ್ಲ.

ಡಾರ್ವಿನ್ ಸಂತನಂತಿದ್ದ ವಿಜ್ಞಾನಿ. ವೃದ್ಧಾಪ್ಯದಲ್ಲಿ ಎಳೆಯ ಮಕ್ಕಳನ್ನೂ ಸಾಕುಪ್ರಾಣಿಗಳನ್ನೂ ಮುಂದೆ ಬಿಟ್ಟುಕೊಂಡು ಆಟವಾಡಿಸುತ್ತಿದ್ದ. ಆಗಲೂ ಸುಮ್ಮನಿರದೆ ಅವನ ಮನಸ್ಸು ಮಕ್ಕಳ ಮತ್ತು ಪ್ರಾಣಿಗಳ ಗುಣ ಸ್ವಭಾವಗಳನ್ನು ಹೋಲಿಸುತ್ತ ಯಾವುದೋ ತರ್ಕದಲ್ಲಿ ತೊಡಗಿರುತ್ತಿತ್ತು. ವೈಜ್ಞಾನಿಕ ಸವಾಲುಗಳು ಅವನಿಗೆ ರಾತ್ರಿ ಇಡೀ ಕಾಡುತ್ತಿದ್ದುವು. ಅವನಿಗೆ ಶೇಕ್ಸ್‌ಪಿಯರ್ ನೀರಸ ಅನ್ನಿಸುತ್ತಿದ್ದ. ಹೊಳೆದ ಸತ್ಯವನ್ನೇ ಸಂಶೋಧನೆ ಎಂದು, ಅರ್ಧ ತಿಳಿವಳಿಕೆಯನ್ನು ನೆಚ್ಚಿ ಆತುರವಾಗಿ ಪ್ರಕಟಿಸದೆ, ಹತ್ತಾರು ವರ್ಷ ಆಳವಾಗಿ ಅಭ್ಯಾಸ, ಪ್ರಯೋಗ ಮಾಡಿ ಅನಂತರ ನಿರ್ಭಯವಾಗಿ ಮಂಡಿಸುತ್ತಿದ್ದ. ದುಡುಕಿನ ತತ್ತ್ವ ನಿರೂಪಣೆ ಡಾರ್ವಿನ್‌ನಲ್ಲಿ ಕಾಣಿಸದು.

ಪ್ರಕೃತಿಯು ಕಾಲಾಂತರದಿಂದ ಕೆಲವು ಪ್ರಶ್ನೆಗಳನ್ನೆಸೆಯುತ್ತಾ ಬಂದಿದೆ. ಇದಕ್ಕೆ ಧರ್ಮ ಮತ್ತು ವಿಜ್ಞಾನಗಳು ತಮ್ಮ ಶಕ್ತ್ಯಾನುಸಾರ ಉತ್ತರಿಸುತ್ತಾ ಬಂದಿವೆ. ನಂಬಿಕೆಯ ಆವರಣದೊಳಗೆ ಧರ್ಮವು ಉತ್ತರಿಸಿದರೆ ಸಂಶೋಧನೆ, ಪ್ರಯೋಗಶೀಲತೆಯಿಂದ ವಿಜ್ಞಾನವು ಉತ್ತರಿಸುತ್ತದೆ. ಡಾರ್ವಿನ್‌ನಂಥ ಶ್ರೇಷ್ಠ ವಿಜ್ಞಾನಿಗಳು ಈ ಉತ್ತರದ ಪ್ರತೀಕವಾಗಿದ್ದಾರೆ. ಹಲವು ಮನ್ನಣೆ ಗಳಿಸಿದ ಡಾರ್ವಿನ್ ೧೮೮೨ರಲ್ಲಿ ತೀರಿಕೊಳ್ಳುವ ಮುನ್ನ ಭೂಮಿಯನ್ನು ಫಲವತ್ತಾಗಿಸುವ ಉಪಯುಕ್ತ ಎರೆಹುಳುವನ್ನು ಕುರಿತು ಬರೆದ. ಆ ಕೊನೆಯ ಕೃತಿ ಕೂಡಾ ಅವನ ವ್ಯಕ್ತಿತ್ವವನ್ನು ಧ್ವನಿಪೂರ್ಣವಾಗಿ ಸಂಕೇತಿಸುತ್ತದೆ.­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT