ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ಸ್ಪರ್ಶವಿಲ್ಲದ ಧರ್ಮ ಕುರುಡು

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಈ ಬದುಕಿನಲ್ಲಿ ಅದೆಷ್ಟೋ ಖುಷಿ ಪಡುವ ಸಂಗತಿಗಳಿವೆ. ನಮ್ಮ ಖುಷಿಗಳಿಗೆ ಅನೇಕರು ಕಾರಣರಾಗಿರುತ್ತಾರೆ. ಈ ಖುಷಿಯ ಕಾರಂಜಿಗಳನ್ನು ಅದಾರೋ ಚಿಮ್ಮಿಸಿರುತ್ತಾರೆ. ನಮ್ಮ ಬದುಕಿನ ಕತ್ತಲೆಗೆ ಅದಾರೊ ಹಣತೆಗಳನ್ನು ಬೆಳಗಿ ದಾರಿ ತೋರಿಸಿರುತ್ತಾರೆ. ನಾವು ಸಾವಿರಾರು ವ್ಯಕ್ತಿಗಳಿಗೆ ಕೃತಜ್ಞರಾಗಿರಬೇಕು. ಜ್ಞಾತಾಜ್ಞಾತರಿಂದ ನಾವು ಪಡೆದಿದ್ದಕ್ಕೆ ಲೆಕ್ಕವೇ ಇಲ್ಲ. ಮನುಕುಲದ ನೆಮ್ಮದಿಗೆ, ಸಂತೃಪ್ತಿಗೆ ಮತ್ತು ಒಳಿತಿಗೆ ಹಗಲಿರುಳು ಶ್ರಮಿಸಿದವರೆಷ್ಟೋ ಜನ. ವಿಜ್ಞಾನಿ, ಚಿಂತಕ, ತತ್ವಜ್ಞಾನಿ, ದಾರ್ಶನಿಕ, ಕವಿ, ಕ್ರಾಂತಿಕಾರಿ, ಸಾಮಾಜಿಕ ನೇತಾರ, ಗುರು ಇವರಲ್ಲಿ ಆಗಿಹೋದವರಿದ್ದಾರೆ ಮತ್ತು ನಮ್ಮ ಕಾಲಮಾನದಲ್ಲಿಯೂ ಜೀವಂತವಾಗಿರುವವರಿದ್ದಾರೆ. ಈವತ್ತಿನ ಬದುಕಿನ ಸ್ವಾಸ್ಥ್ಯಕ್ಕಾಗಿ ದುಡಿಯುವವರಿದ್ದಾರೆ. ಬರೇ ದುಡಿದದ್ದಲ್ಲ,- ಕೆಲವರು ಪ್ರತಿಫಲವಿಲ್ಲದೆ ತೀರಿಕೊಂಡಿದ್ದಾರೆ ಕೂಡಾ.

ಚರಿತ್ರೆ ಕಂಡ ವಿಪರ್ಯಾಸಗಳಲ್ಲಿ ಮುಖ್ಯವಾದುದು ಏನೆಂದರೆ ಕೆಲವು ವ್ಯಕ್ತಿಗಳು ಈ ಲೋಕದಿಂದ ನಿರ್ಗಮಿಸಿದ ನಂತರವೇ ಅವರ ಮಹತ್ವ ಏನೆಂದು ತಿಳಿಯುವುದು. ತನ್ನ ಜೀವಿತಾವಧಿಯಲ್ಲಿ ವಿಲಕ್ಷಣನಂತೆ, ವಿದೂಷಕನಂತೆ ಮತ್ತು ನಿರುಪಯುಕ್ತನಂತೆ ಕಾಣಿಸುವವನು, ತನ್ನ ನಿರ್ಗಮನಾನಂತರ ಅತ್ಯಂತ ಮಹತ್ವದ ವ್ಯಕ್ತಿಯೆನಿಸುತ್ತಾನೆ. ಅವನ ಕೊಡುಗೆಗಳು ಹೊಸ ಅರ್ಥ ಪಡೆದು ಲೋಕಕ್ಕೆ ತೋರುಗಂಬವಾಗುತ್ತವೆ. 

ನಾವು ಕುಳಿತ ಬಸ್ಸು, ರೈಲು, ವಿಮಾನಗಳು ಯಾರದೋ ತಪಸ್ಸಿನ ಫಲ. ಭೂಮಿತಳದಿಂದ ಮೇಲೆ ಬರುವ ಬೋರ್‌ವೆಲ್‌ನ ನೀರು, ತಲೆ ಮೇಲೆ ಸುತ್ತುವ ಫ್ಯಾನು, ರಂಜಿಸುವ ಟಿ.ವಿ, ಜೀವಕ್ಕೆ ನರಳಿಕೆ ಬಂದಕೂಡಲೇ ವಾಸಿ ಮಾಡುವ ಮಾತ್ರೆ, ಅಂಗವನ್ನೇ ಬದಲಿಸಿ ರಿಪೇರಿ ಮಾಡುವ ಶಸ್ತ್ರಚಿಕಿತ್ಸೆ, ಸಾವಿರಾರು ಮೈಲಿ ಆಚೆ ಕುಳಿತ ಬಂಧುವಿಗೆ ಮಾಡುವ ಟೆಲಿಫೋನ್ ಕರೆ, ಮನಸ್ಸು ಮುದುಡಿದಾಗ ಪ್ರಸನ್ನಗೊಳಿಸುವ ಪುಟ್ಟ ಪುಸ್ತಕ, ಜೀವ ತಣಿಸುವ ಮಧುರ ಸಂಗೀತ... ಇದೆಲ್ಲವನ್ನೂ ಅದಾರೋ ಕೊಟ್ಟಿದ್ದಾರೆ ಮತ್ತು ನಾವದನ್ನು ಯಾವ ಕೃತಜ್ಞತೆಯೂ ಇಲ್ಲದೆ take it for granted ಆಗಿ ಬಳಸುತ್ತಿರುತ್ತೇವೆ.

ಈ ಬದುಕಿನ ಕೃತಜ್ಞತೆಯ ಪಟ್ಟಿ ಎಷ್ಟು ದೊಡ್ಡದು ಅಂದರೆ ಇಲ್ಲಿ ಯಾವನೂ ಅಹಂಕಾರಿಯಾಗಿರಲು ಸಾಧ್ಯವೇ ಇಲ್ಲ. ವಿನಯವಂತನಾಗಿರು ವುದು ಮನುಷ್ಯನ ಹೆಚ್ಚುಗಾರಿಕೆ ಅಲ್ಲ, ಆದ್ಯಕರ್ತವ್ಯ. ವಿನಯ ಮತ್ತು ಕೃತಜ್ಞತೆ ಎನ್ನುವುದು ಬೋಳೆತನವಲ್ಲ. ಅವು ಅಖಂಡ ಜೀವನಮೌಲ್ಯದ ಮೊದಲ ಪಾಠಗಳು. ವಿದ್ಯುತ್ ಎಂಬ ಅದ್ಭುತ ಶಕ್ತಿಯೊಂದು ಇಲ್ಲದ ಆಧುನಿಕ ಪ್ರಪಂಚವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇದನ್ನು ಕಂಡುಹಿಡಿದ ಬೆಂಜಮಿನ್ ಫ್ರಾಂಕ್ಲಿನ್‌ಗೆ ಇಡೀ ಜಗತ್ತು ಋಣಿಯಾಗಿರಬೇಕು. ಹಾದಿಯ ನಡಿಗೆಗೆ ನೆರಳು ನೀಡುವ ಮರ ನೆಟ್ಟವರಾರು? ಎಷ್ಟೊಂದು ಮರಗಳ ತೋಪು ನಮ್ಮನ್ನು ಕಾಪಾಡಿದೆ?

ವಿಜ್ಞಾನದ ವಿದ್ಯಾರ್ಥಿ ಅಲ್ಲದ ನನ್ನನ್ನು ಸದಾ ಕಾಡುವ ಅಂಥ ಒಂದು ತಂಪು ಹೊಂಗೆಯ ಮರದ ಹೆಸರು ಆಲ್ಬರ್ಟ್ ಐನ್‌ಸ್ಟೈನ್. ಕೆಲವು ಅದೃಷ್ಟವಂತರಿಗೆ ಮಾತ್ರ ತಮ್ಮ ಜೀವಿತಾವಧಿಯಲ್ಲಿ ದೊರಕಬೇಕಾದ ಮಾನ್ಯತೆ ದೊರಕಿಯೇ ಬಿಡುತ್ತದೆ. ಐನ್‌ಸ್ಟೈನ್ ಅಂಥ ಅದೃಷ್ಟವಂತ. ಆದರೂ ಆತ, ವಿಶಿಷ್ಟ ಸಾಪೇಕ್ಷ ಸಿದ್ಧಾಂತವನ್ನು ಪ್ರಕಟಿಸಿದ ನಂತರ ಒಂದು ಗುಂಪು ಆ ಸಂಶೋಧನೆಗೆ ಪ್ರಶಸ್ತಿ ಬಾರದಂತೆ ನೋಡಿಕೊಂಡಿತ್ತು. ಪ್ರಶಸ್ತಿಗಳನ್ನು ಕೊಡುವವರು, ಕೊಡಿಸುವವರು, ಪಡೆಯುವವರು ಈ ಅನೈತಿಕ ತ್ರಿಕೋನ ಸಂಬಂಧ ಇಂದಿನಂತೆಯೇ ಅಂದಿಗೂ ಇತ್ತು.

ಈ ಸಂಶೋಧನೆ ಯಲ್ಲಿ ಮನುಷ್ಯ ಕೋಟಿಗೆ ಉಪಯೋಗವಾಗುವಂಥದ್ದೇನೂ ಇಲ್ಲ ಎಂಬ ನೆಪವನ್ನು ಒಡ್ಡಿ ಸ್ವೀಡಿಷ್ ಅಕಾಡೆಮಿಯ ಸದಸ್ಯರು ವಿರೋಧಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಉಪಯೋಗವೆಂದರೆ ಮನುಷ್ಯನ ಲೌಕಿಕ ಜೀವನಕ್ಕೆ ಕೊಂಚ ಸುಖ ತರಬಲ್ಲ ಶೋಧನೆಗಳು ಮಾತ್ರ. ಐನ್‌ಸ್ಟೈನ್ ಜಗತ್ತಿಗೆ ಧಾರೆ ಎರೆದ ವಿಶಿಷ್ಟ ಸಾಪೇಕ್ಷ ಸಿದ್ಧಾಂತವು ಇಡೀ ವಿಶ್ವದ ರಚನೆಯನ್ನು ವಿವರಿಸಬಲ್ಲ, ಅನೇಕ ಹೊಸ ಸಿದ್ಧಾಂತಗಳ ಅನ್ವೇಷಣೆಗೆ ಆಧಾರ ಸೂತ್ರವಾಗಬಲ್ಲ ಅಪೂರ್ವವಾದ ಸಂಶೋಧನೆ. ಇಂಥದ್ದೊಂದು ಪ್ರಶಸ್ತಿಯನ್ನು ಸ್ಥಾಪಿಸಿದ್ದ ನೊಬೆಲ್ ಮಹಾಶಯನ ಉದ್ದೇಶವೇ ಐನ್‌ಸ್ಟೈನ್‌ರಂಥ ಅಪ್ರತಿಮ ವಿಜ್ಞಾನಿಗಳನ್ನು ಗೌರವಿಸುವುದಾಗಿತ್ತು.

ಆದರೆ ಅನರ್ಹರೂ, ಅಸೂಯಾಪರರೂ ಆದ ಅಕಾಡೆಮಿ ಸದಸ್ಯರು ಆ ಪ್ರಶಸ್ತಿಯು ಐನ್‌ಸ್ಟೈನ್‌ರಿಗೆ ಲಭಿಸದಂತೆ ನೋಡಿಕೊಳ್ಳುತ್ತಾರೆ. ಸಂಶೋಧನೆಯು ಪ್ರಕಟವಾದದ್ದು ೧೯೦೫ರಲ್ಲಿ. ಆದರೆ ಬಹುಮಾನ ಕೊಡಲು ನಿರ್ಧರಿಸಿದ್ದು ೧೯೨೨ರಲ್ಲಿ. ಶ್ರೇಷ್ಠ ವಿಜ್ಞಾನಿಯೊಬ್ಬ ತನ್ನ ಶ್ರೇಷ್ಠ ಚಿಂತನೆಗೆ ಪುರಸ್ಕಾರ ಪಡೆಯಲು ಕೇವಲ ೧೭ವರ್ಷ ಬೇಕಾಯಿತು!.

ಬಾಲ್ಯದಿಂದಲೂ ಐನ್‌ಸ್ಟೈನ್ ಅನುಭವಿಸಿದ ತಲ್ಲಣ, ತೀಕ್ಷ್ಣವಾದ ಸ್ಪರ್ಧೆ, ಪದೇ ಪದೇ ಬಂದೆರಗುತ್ತಿದ್ದ ಆಶಾಭಂಗ ಬಹು ದಾರುಣವಾಗಿದ್ದವು. ಪಾಠ ಹೇಳುವ ಕ್ರಮದಲ್ಲಿ ಹೊಸ ಪ್ರಯೋಗವನ್ನು ಮಾಡಿದರೆಂಬ ಕಾರಣಕ್ಕೆ ಸಹೋದ್ಯೋಗಿಗಳ ಚಾಡಿ ಮಾತು ಕೇಳಿ ಆಡಳಿತ ವರ್ಗ ಅವರನ್ನು ಉಪಾಧ್ಯಾಯ ವೃತ್ತಿಯಿಂದ ಕಿತ್ತುಹಾಕಿತು. ಐನ್‌ಸ್ಟೈನ್ ನಿರುದ್ಯೋಗದ ಬೆಂಕಿಯಲ್ಲಿ ಬೆಂದವರು.

ಸಂತನಂತೆ ಬದುಕ ಹೊರಟಾಗೆಲ್ಲಾ ಇವನೊಬ್ಬ ದಂಗೆಕೋರ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡ ನತದೃಷ್ಟ. ಶಾಲೆಯ ಮಕ್ಕಳೆಲ್ಲಾ ಗುಂಪು ಗುಂಪಾಗಿ ಆಟದಲ್ಲಿ ತೊಡಗಿದರೆ ಐನ್‌ಸ್ಟೈನ್ ಅಂತರ್ಮುಖಿಯಾಗಿ ಮೈದಾನದ ಮೂಲೆಯಲ್ಲಿ ಒಬ್ಬಂಟಿಯಾಗಿ ನಿಲ್ಲುತ್ತಿದ್ದರು. ತನ್ನ ಜ್ಞಾನದ ದಾಹವನ್ನು ತಣಿಸಿಕೊಳ್ಳುವುದು ಹೇಗೆ ಎಂದು ಚಿಂತಿತನಾಗಿ ನಿಂತ ಬಾಲಕ, ಹಲವರ ಕಣ್ಣಿಗೆ ಅಪಾಯಕಾರಿಯಂತೆ ಕಾಣಿಸುತ್ತಿದ್ದುದು ವಿಪರ್ಯಾಸ. ಗ್ರೀಕ್, ಲ್ಯಾಟಿನ್ ಭಾಷೆಗಳು ಅವರ ಶತ್ರುಗಳಾಗಿದ್ದವು. ಗಣಿತ, ವಿಜ್ಞಾನಗಳು ಮಿತ್ರರಾಗಿದ್ದವು. ಆದರೆ, ಅವರು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಮೊರ್ಜಾಟ್‌ನ ಸಂಯೋಜನೆಗಳೆಂದರೆ ಐನ್‌ಸ್ಟೈನ್‌ಗೆ ಬಹಳ ಇಷ್ಟ. ಭಾಷಾ ಕಲಿಕೆಯನ್ನು ಇಷ್ಟಪಡದ, ಆದರೆ ಸಂಗೀತವನ್ನು ಪ್ರೀತಿಸುವ ಮತ್ತು ಗಣಿತ-–ವಿಜ್ಞಾನಗಳನ್ನು ಧ್ಯಾನಿಸುವ ಈತ ಒಬ್ಬ ವಿಚಿತ್ರ ಬಾಲಕನಂತೆ ರೂಪುಗೊಂಡವರು.

ತನ್ನ ಯಹೂದಿ ಮತದ ಮೇಲೂ ನಾಜಿಗಳ ಸರ್ವಾಧಿಕಾರಿ ಧೋರಣೆಯ ಮೇಲೂ ಜುಗುಪ್ಸೆ ಹುಟ್ಟಿ ಅವೆರಡರಿಂದಲೂ ಐನ್‌ಸ್ಟೈನ್ ಹೊರಬಂದದ್ದು ಅವರ ಬದುಕಿನ ಬಹುಮುಖ್ಯ  ಘಟ್ಟ. ಒಂದು ಹಂತದಲ್ಲಿ ತಾನು ಇನ್ನಾವ ಮತವನ್ನೂ ಸೇರುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾರೆ. ಜರ್ಮನ್ ಪೌರತ್ವವನ್ನು ತಿರಸ್ಕರಿಸುತ್ತಾರೆ. ಆದರೆ ಒಂದಿಲ್ಲೊಂದು ದೇಶದ ಪೌರತ್ವ ಅನಿವಾರ್ಯವಾದಾಗ ಸ್ವಿಟ್ಜರ್ಲೆಂಡಿನ ಪ್ರಜೆಯಾಗಬಯಸಿ ಆ ಶುಲ್ಕ ತೆರಲಾಗದೆ ಪರದಾಡಿ ಸಾಲ ಮಾಡಿ ಪೌರತ್ವ ಗಳಿಸುತ್ತಾರೆ. ಈ ಎಲ್ಲಾ ಬಡತನ, ಬವಣೆಗಳು ಅವರನ್ನು ವಿಜ್ಞಾನಿಯ ಜೊತೆ ಜೊತೆಗೆ ತತ್ವಜ್ಞಾನಿ ಯನ್ನಾಗಿಯೂ ಮಾಡುತ್ತವೆ.

ಒಂದು ಹಂತದಲ್ಲಿ ನನ್ನ ಸಂಶೋಧನೆಗಳು ಅರ್ಥಹೀನ. ನನ್ನದು ತಪ್ಪು ದಾರಿ. ಇಂದಿಗೆ ಎಲ್ಲಾ ಸಂಶೋಧನೆಗಳನ್ನು ನಿಲ್ಲಿಸಿ ಹಾಯಾಗಿರುತ್ತೇನೆ ಎಂದು ಚೀರಿಕೊಂಡದ್ದು ಉಂಟು. ಆ ಮರುಕ್ಷಣವೇ ಯಾವುದೋ ಅಗೋಚರ ಶಕ್ತಿಯ ಚೈತನ್ಯ ಆವಾಹಿಸಿಕೊಂಡು ಉದ್ವೇಗದಿಂದ ದೃಢ ವಿಶ್ವಾಸದಿಂದ ಪ್ರಯೋಗಾಲಯಕ್ಕೆ ಮರಳುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಆ ಮನಸ್ಸು ಅನುಭವಿಸುತ್ತಿದ್ದ ವ್ಯಾಕುಲತೆ, ತೂಗುಯ್ಯಾಲೆಯ ಸಂಕಟ, ಜೀವನದ ಸಾರ್ಥಕ್ಯದ ಸವಾಲು ಅವರನ್ನು ಒಂದು ಬಗೆಯ ಮನೋರೋಗಿಯನ್ನಾಗಿಸಿ ವಾರಗಟ್ಟಲೆ ಆಸ್ಪತ್ರೆಯಲ್ಲಿರಿಸುತ್ತಿದ್ದವು.

ಐನ್‌ಸ್ಟೈನ್ ಜರ್ಮನಿಯಲ್ಲಿ ನೆಲೆಸಿದ್ದ ಕೆಲವು ದಿನಗಳಲ್ಲೇ ವಿಶ್ವದ ಮೊದಲ ಮಹಾಯುದ್ಧ ಆರಂಭವಾಯಿತು. ಮೂಲತಃ ಯುದ್ಧಪ್ರಿಯರಾದ ಜರ್ಮನ್ ಜನಾಂಗಕ್ಕೆ ಎಲ್ಲಿಲ್ಲದ ಉತ್ಸಾಹ. ವಿಶ್ವ ಭೂಪಟವನ್ನು ಹರಡಿಕೊಂಡು ಯುದ್ಧ ಮುಗಿದ ಮೇಲೆ ತಮಗೆ ಯಾವ ಯಾವ ದೇಶಗಳು ವಶವಾಗುತ್ತವೆಯೆಂದು ಗುರುತು ಹಾಕಿಕೊಳ್ಳುತ್ತಿದ್ದರು. ಆದರೆ ಐನ್‌ಸ್ಟೈನ್ ಯುದ್ಧ ವಿರೋಧಿಯಾಗಿದ್ದರು, ಶಾಂತಿಪ್ರಿಯರಾಗಿದ್ದರು. ತನ್ನ ಯುದ್ಧ ಪ್ರಯತ್ನಗಳಿಗೆ ಬೆಂಬಲವಾಗಿ ನಿಲ್ಲದ ಐನ್‌ಸ್ಟೈನ್‌ರನ್ನು ಜರ್ಮನ್ ಸರ್ಕಾರ ಅನುಮಾನದಿಂದ ನೋಡತೊಡಗಿತು.

ಯುದ್ಧದ ತವಕದಲ್ಲಿದ್ದ ಸಹವಿಜ್ಞಾನಿಗಳ ಕೋಪಕ್ಕೆ ಐನ್‌ಸ್ಟೈನ್ ಒಳಗಾದರು. ಬಾಲ್ಯದಲ್ಲಿ ಒಂದು ಬಗೆಯ ಏಕಾಕಿತನ, ದೊಡ್ಡ ವಿಜ್ಞಾನಿಯಾದ ನಂತರವೂ ಮುಂದುವರೆದ ಏಕಾಕಿತನ. ತನ್ನ ಆತ್ಮ ಒಪ್ಪುವ ಬಗೆಯಲ್ಲಿ ಬದುಕ ಬಯಸುವ ಮಹನೀಯರನ್ನು ಅವರ ಜೀವಿತಾವಧಿಯಲ್ಲಿ ಹಿಂಬಾಲಿಸುವವರು ಕಡಿಮೆ. ಹಿಂದೆ ಬರುವವರಂತೆ ಕಂಡರೂ ಅದು ಯಾವ ಮಾಯೆಯಲ್ಲೋ ಕಣ್ಮರೆಯಾಗಿರುತ್ತಾರೆ. ಸೋತು ಹಿಂದುಳಿಯುತ್ತಾರೆ. ಆದರ್ಶವಾದಿ ಕೊನೆಗೆ ಏಕಾಕಿಯಾಗಿ ಉಳಿಯುತ್ತಾನೆ. ಅವನು ಒಬ್ಬಂಟಿಯಾದಾಗ ನಡಿಗೆಯ ದಾರಿ ಇನ್ನಷ್ಟು ಕಠಿಣವಾಗುತ್ತದೆ. ಕಡಿದಾದ ಬೆಟ್ಟಗಳು ಎದುರಾಗುತ್ತವೆ. ಐನ್‌ಸ್ಟೈನ್‌ರ ಜೀವನ ಚರಿತ್ರೆಯ ಈ ಭಾಗ ಹೃದಯವನ್ನು ಕಲಕುವಂತಿದೆ.

ಇಟಲಿಯ ಸರ್ವಾಧಿಕಾರಿ ಮುಸೊಲೋನಿಯನ್ನು, ಜರ್ಮನಿಯ ನಾಜಿಗಳ ದುಷ್ಟ ನಡವಳಿಕೆಯನ್ನು ಹೇಗೆ ನಿಷ್ಠುರವಾದ ಮಾತುಗಳಿಂದ ಖಂಡಿಸಿದ್ದಾರೊ, ಅಷ್ಟೇ ನಿಷ್ಠುರವಾದ ಮಾತುಗಳಿಂದ ತನಗೆ ಆಶ್ರಯವಿತ್ತ ಅಮೆರಿಕವನ್ನೂ ಐನ್‌ಸ್ಟೈನ್ ಖಂಡಿಸಿದ್ದಾರೆ. ಒಂದು ದೇಶ ತನ್ನ ಬಗ್ಗೆ ಅಭಿಮಾನ ತೋರುತ್ತದೆಯೆಂದು ಆ ದೇಶದ ತಪ್ಪುಗಳನ್ನು ಮೆಚ್ಚಿಕೊಳ್ಳಬಾರದು. ಐನ್‌ಸ್ಟೈನ್ ಒಬ್ಬ ವಿಶ್ವ ಪ್ರೇಮಿ. ಅ

ಮೆರಿಕದಲ್ಲಿದ್ದ ವರ್ಣಭೇದ ನೀತಿಯನ್ನು ಕಂಡು ಮರುಗುತ್ತಾರೆ. ಹಣವು ಸ್ವಾರ್ಥಿಗಳಿಗೆ ಮಾತ್ರ ಸಂತೋಷವನ್ನುಂಟು ಮಾಡಿ ಲಾಲಸೆಗೆ ಪ್ರಚೋದಿಸುತ್ತದೆ. ಮಾನವ ಜನಾಂಗವನ್ನು ಸೇವೆಯಿಂದ, ತ್ಯಾಗದಿಂದ ಮಾತ್ರ ಮುನ್ನಡೆಸಲು ಸಾಧ್ಯ ಎಂಬುದು ಅವರ ಜೀವನ ವಾಖ್ಯೆ.  ಧರ್ಮದ ಸ್ಪರ್ಶವಿಲ್ಲದ ವಿಜ್ಞಾನ ಕುಂಟು; ವಿಜ್ಞಾನದ ಸ್ಪರ್ಶವಿಲ್ಲದ ಧರ್ಮ ಕುರುಡು ಎಂಬ ತಮ್ಮ ನಂಬಿಕೆಯನ್ನು ಹೀಗೆ ಹೇಳುತ್ತಾರೆ Science without religion is lame, religion without science is blind. ಇದರಿಂದ ಗಾಂಧಿ ಮತ್ತು ಐನ್‌ಸ್ಟೈನ್ ಒಂದೇ ಗುರಿಯ ಕಡೆಗೆ ಎರಡು ಬೇರೆ ಬೇರೆ ದಾರಿಗಳಲ್ಲಿ ನಡೆದ ಸಹ ಪ್ರಯಾಣಿಕರಂತೆ ಕಾಣಿಸುತ್ತಾರೆ.

ಗಾಂಧೀಜಿಯಾಗಲಿ ಐನ್‌ಸ್ಟೈನ್‌ರಾಗಲಿ ಅವತಾರಪುರುಷರಲ್ಲ, ದೇವಮಾನವರೂ ಅಲ್ಲ. ಎಲ್ಲರಂತೆ ರಕ್ತ ಮಾಂಸಗಳು ತುಂಬಿಕೊಂಡ, ರೋಗರುಜಿನಗಳನ್ನು ಉಂಡ, ಮುಪ್ಪು ಸಾವುಗಳನ್ನು ಕಂಡ ಸಾಧಾರಣ ಮನುಷ್ಯರಾಗಿದ್ದರು. ಆದರೆ ತಮ್ಮನ್ನು ತಾವು ಇಡಿಯಾಗಿ ಸತ್ಯದ ಪ್ರಯೋಗಕ್ಕೆ ಒಡ್ಡಿಕೊಂಡು ಅದರ ಫಲವನ್ನು ಜನಸಾಮಾನ್ಯರ ಉನ್ನತಿಗಾಗಿ ಅರ್ಪಿಸಿದವರು. ಕಪಟವಿಲ್ಲದೆ, ತೋರಿಕೆಯಿಲ್ಲದೆ ಮನುಕುಲದ ಕ್ಷೇಮಕ್ಕಾಗಿ ಚಿಂತಿಸಿದವರು. ಹುಚ್ಚೆದ್ದ ಜನ ಮೆರವಣಿಗೆಯಲ್ಲಿ ಕೊಂಡೊಯ್ದು ಮೆರೆಸಲು ಪ್ರಯತ್ನಿಸಿದಾಗ ಅದನ್ನು ನಯವಾಗಿ ನಿರಾಕರಿಸಿ ಬರಿಗಾಲಲ್ಲಿ ಜನರ ನಡುವೆ ನಡೆದು ಹೋದವರು.

ಮನುಷ್ಯನ ಹಸಿವು, ಅವಮಾನ, ಸಂಕಟ, ವಿದ್ರೋಹ ಇವುಗಳ ಮೂಲವನ್ನು ಗೌತಮನಂತೆ ಶೋಧಿಸಲು ಯತ್ನಿಸಿದವರು. ಐನ್‌ಸ್ಟೈನ್ ಮಹಾನ್ ವಿಜ್ಞಾನಿಯಾಗಿದ್ದಂತೆಯೇ ಚತುರೋಕ್ತಿಯ ಹಾಸ್ಯಪಟುವೂ ಆಗಿದ್ದರೆಂಬುದಕ್ಕೆ  Gravitation is not responsible for people falling in love ಎಂಬ ಅವರ ಮಾತು ಸಾಕ್ಷಿ.

ನಾನು ಇನ್ನಷ್ಟು ಕೆಲಸ ಮಾಡಬಹುದಿತ್ತು. ಸಾಮಾಜಿಕ ಋಣವನ್ನು ತೀರಿಸದೆ ಸಾಯುತ್ತಿದ್ದೇನೆ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿರುತ್ತದೆ ಎನ್ನುವ ಆಲ್ಬರ್ಟ್ ಐನ್‌ಸ್ಟೈನ್ ೧೩೫ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಬದುಕಿದ್ದ ಒಂದು ಅಚ್ಚರಿ. ಈ ಕಾಲಮಾನದಲ್ಲಿ ಇಂಥ ಒಂದಾದರೂ ಅಚ್ಚರಿಗಳಿವೆಯೇ?         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT