ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಣಾನ ಪ್ರಯೋಗಾಲಯವೂ ಬದಲಾಗದ ಪೂರ್ವಗ್ರಹವೂ

Last Updated 11 ಜನವರಿ 2016, 19:54 IST
ಅಕ್ಷರ ಗಾತ್ರ

‘ಮಹಿಳಾ ವಿಜ್ಞಾನಿಗಳ ವಿರುದ್ಧದ ಪೂರ್ವಗ್ರಹಗಳು ಇದ್ದೇ ಇವೆ. ಇದರ ವಿರುದ್ಧ ಹೋರಾಡುವುದು ಮೂಲಭೂತ ಸವಾಲು’ ಎಂದು ಕೇಂದ್ರ ಮಾನವ ಸಂಪನ್ಮೂಲ  ಅಭಿವೃದ್ಧಿ  ಸಚಿವೆ ಸ್ಮೃತಿ ಇರಾನಿ ಮತ್ತೊಮ್ಮೆ ನೆನಪಿಸಿದ್ದಾರೆ. ಮೈಸೂರಿನಲ್ಲಿ ಕಳೆದ ವಾರ ಮುಕ್ತಾಯವಾದ 103ನೇ ಭಾರತೀಯ ವಿಜ್ಞಾನ ಸಮಾವೇಶದ ಭಾಗವಾಗಿ ನಡೆದ ಮಹಿಳಾ ವಿಜ್ಞಾನ ಸಮಾವೇಶದಲ್ಲಿ ಈ ಮಾತುಗಳನ್ನಾಡಿದ್ದಾರೆ ಅವರು. ‘ವಿಜ್ಞಾನ ಪೂರ್ವಗ್ರಹ ಕಲಿಸುವುದಿಲ್ಲ ಅಥವಾ ಬೋಧಿಸುವುದಿಲ್ಲ’ ಎಂಬಂತಹ ಮಾತುಗಳನ್ನು  ಅವರು ಹೇಳಿದ್ದಾರೆ. ಈ ಮಾತುಗಳನ್ನು ಹೇಳಿದ ಸಂದರ್ಭದಲ್ಲಿಯೇ ಮಹಿಳಾ ವಿಜ್ಞಾನಿಗಳ ಸಮಾವೇಶವನ್ನು  ಪ್ರತ್ಯೇಕವಾಗಿ ನಡೆಸುವುದರ  ಔಚಿತ್ಯವನ್ನು ಸಚಿವೆ ಪ್ರಶ್ನಿಸಿದ್ದಾರೆ. ಮಹಿಳಾ ವಿಜ್ಞಾನಿಗಳಿಗಾಗಿ ಪ್ರತ್ಯೇಕ ಸಮಾವೇಶ ನಡೆಸುವುದು ಆರಂಭವಾದದ್ದಾದರೂ ಎಂದು?

ಕೇವಲ ಐದು ವರ್ಷಗಳ ಹಿಂದೆ ಒಡಿಶಾದಲ್ಲಿ  ನಡೆದ  99ನೇ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಮಹಿಳಾ ವಿಜ್ಞಾನ ಸಮಾವೇಶ ದೊಡ್ಡ ಸದ್ದಿನೊಂದಿಗೆ ಆರಂಭವಾಯಿತು. ಆಗಿನಿಂದ ನಡೆದುಕೊಂಡು ಬಂದಿರುವ ಇಂತಹ ಪ್ರತ್ಯೇಕ ಸಮಾವೇಶ  ಪ್ರಸ್ತುತವೆ ಎಂಬುದು ಪ್ರಶ್ನೆ.  ಪ್ರತಿ ವರ್ಷ ಐದು ದಿನ ನಡೆಯುವ   ಸಮಾವೇಶದಲ್ಲಿ ಎರಡು ದಿನಗಳ ಕಾಲ ಪ್ರತ್ಯೇಕ  ಮಹಿಳಾ ವಿಜ್ಞಾನ ಸಮಾವೇಶದ ಅಗತ್ಯವಾದರೂ ಏಕೆ?  ಆದರೆ ಸ್ಮೃತಿಯವರೇ ಇದಕ್ಕೆ ತಮ್ಮ ಭಾಷಣದಲ್ಲಿ  ಉತ್ತರವನ್ನೂ ನೀಡಿದ್ದಾರೆ.  

‘ವಿಜ್ಞಾನ  ಎಂಬುದು ಪೊಲೊನಿಯಮ್ ಅನ್ನು  ಸಮೃದ್ಧಗೊಳಿಸಬಹುದು. ಆದರೆ ಪುರುಷರ ಹೃದಯ ಶ್ರೀಮಂತಿಕೆ ಹೆಚ್ಚಿಸುವುದಿಲ್ಲ ಎಂದಿದ್ದರು   ಭೌತ ವಿಜ್ಞಾನಿಯೊಬ್ಬರು. ಪುರುಷರ ಹೃದಯಗಳನ್ನು ವಿಜ್ಞಾನ ಶ್ರೀಮಂತಗೊಳಿಸಿದ್ದಿದ್ದಲ್ಲಿ ಪ್ರತ್ಯೇಕ ಮಹಿಳಾ ವಿಜ್ಞಾನ ಸಮಾವೇಶದ ಅಗತ್ಯವೇ ಇರುತ್ತಿರಲಿಲ್ಲ. ವಿಜ್ಞಾನ ಪೂರ್ವಗ್ರಹ ಬೋಧಿಸುವುದಿಲ್ಲ. ವೈವಿಧ್ಯವನ್ನು ಸಂಭ್ರಮಾಚರಿಸಲು ಹೇಳುತ್ತದೆ. ಹೀಗಿದ್ದೂ  ಬಾಯಿ ಮಾತಿನಲ್ಲಿ ಹೇಳದಿದ್ದರೂ  ಕಣ್ಣಿಗೆ ಕಾಣಿಸದಂತಿದ್ದರೂ  ನಾಟಕೀಯವಾಗಿ ಅಸ್ತಿತ್ವದಲ್ಲಿರುವ ಪೂರ್ವಗ್ರಹ ತೊಡೆಯುವುದು ಹೇಗೆಂಬುದು ಮೂಲಭೂತ ಸವಾಲು. ಅದು ವೈಜ್ಞಾನಿಕ ಅಸಂಗತತೆ’ ಎಂದು ಸ್ಮೃತಿ ಇರಾನಿ ಬಣ್ಣಿಸಿರುವುದು ಸರಿಯಾಗಿಯೇ ಇದೆ. 

ಐ.ಟಿ. ವಲಯದಲ್ಲಿ  ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವವರಲ್ಲಿ ಇತ್ತೀಚಿನ ವರ್ಷಗಳಲ್ಲಿ  ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದು ಸಕಾರಾತ್ಮಕ ಬೆಳವಣಿಗೆ. ಆದರೆ ಮೂಲ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್  ಹಾಗೂ ಗಣಿತದಂತಹ (STEM)  ಸಂಶೋಧನಾ ಸಂಸ್ಥೆಗಳು ಹಾಗೂ ಪ್ರಯೋಗಾಲಯಗಳಲ್ಲಿ ಮಹಿಳೆಯರ ಸಂಖ್ಯೆ ಈಗಲೂ ತೀರಾ ಕಡಿಮೆ. ಇಂತಹದೊಂದು ಅಸಮತೋಲನ ನಿವಾರಣೆಗೆ ಸರ್ಕಾರದ ವತಿಯಿಂದ ಪ್ರಯತ್ನಗಳಂತೂ  ಆರಂಭವಾಗಿವೆ. ರಾಷ್ಟ್ರದ ಎಲ್ಲಾ 16 ಐಐಟಿಗಳ ಆಡಳಿತ ಮಂಡಳಿಯಾಗಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  (ಐಐಟಿ ) ಕೌನ್ಸಿಲ್‌ಗೆ  ಟೆಸ್ಸಿ ಥಾಮಸ್ ಹಾಗೂ ವಿಜಯಲಕ್ಷ್ಮಿ ರವೀಂದ್ರನಾಥ್ ಅವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2014ರಲ್ಲಿ  ನಾಮಕರಣ ಮಾಡಿದ್ದು ಈ ನಿಟ್ಟಿನಲ್ಲಿ ಹೊಸದೊಂದು ಹೆಜ್ಜೆಯಾಗಿತ್ತು.

ಭಾರತದ ಕ್ಷಿಪಣಿ ಯೋಜನೆಯ ನೇತೃತ್ವ ವಹಿಸಿರುವ ಮೊದಲ ಮಹಿಳಾ ವಿಜ್ಞಾನಿ ಟೆಸ್ಸಿ ಥಾಮಸ್ ಹಾಗೂ  ರಾಷ್ಟ್ರೀಯ ಮಿದುಳು ಸಂಶೋಧನಾ ಕೇಂದ್ರ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಜ್ಞಾನಿ ವಿಜಯಲಕ್ಷ್ಮಿ ಅವರು ಮಂಡಳಿಗೆ ನಾಮಕರಣಗೊಂಡ ಮೊದಲ ಮಹಿಳಾ ವಿಜ್ಞಾನಿಗಳಾಗಿ ಹೊಸ ಇತಿಹಾಸ ಸೃಷ್ಟಿಸಿದರು. ಹಾಗೆಯೇ, ಕಿರಣ್  (KIRAN- Knowledge Involvement in Research Advancement through Nurturing)  ಎನ್ನುವ ಯೋಜನೆಯನ್ನು  ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು  2014ರಲ್ಲಿ ಪ್ರಕಟಿಸಿದ್ದಾರೆ.  ಇದು  ಮಹಿಳೆಯರಿಗೆ  ನಾಯಕತ್ವ ಸ್ಥಾನಗಳನ್ನು ಸೃಷ್ಟಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗ ಸಮಾನತೆ ತರಲು ಯತ್ನಿಸುತ್ತದೆ. 

ಕುಟುಂಬದ  ಒತ್ತಡಗಳಿಂದಾಗಿ ಬೇರೆ ಊರುಗಳಿಗೆ ಸ್ಥಳಾಂತರಗೊಳ್ಳಬೇಕಾದ ಮಹಿಳಾ ವಿಜ್ಞಾನಿಗಳಿಗೆ  ಸೂಕ್ತ ಸಂಶೋಧನಾ ಅನುದಾನ  ಅಥವಾ ಉದ್ಯೋಗ  ಅವಕಾಶಗಳನ್ನೂ ಒದಗಿಸಿಕೊಡಲು ಯತ್ನಿಸುವುದು ಈ ಯೋಜನೆಯ  ಉದ್ದೇಶ.  ಇದರ  ಮುಖ್ಯ ಗುರಿ,  ರಾಷ್ಟ್ರದಲ್ಲಿ ಮಹಿಳಾ ಸಂಶೋಧಕರ ಸಂಖ್ಯೆ ಹೆಚ್ಚಿಸುವುದು. ಈ ಮುಂಚೆಯೂ ಯುಪಿಎ ಸರ್ಕಾರದ ಅವಧಿಯಲ್ಲಿ ರಚಿತವಾಗಿದ್ದ ‘ಮಹಿಳಾ ವಿಜ್ಞಾನಿಗಳಿಗಾಗಿ ರಾಷ್ಟ್ರೀಯ ಕಾರ್ಯಪಡೆ’ 2008ರಲ್ಲಿ ವರದಿಯನ್ನು ನೀಡಿ  ಶಿಫಾರಸುಗಳ ಪಟ್ಟಿ ಬಿಡುಗಡೆ ಮಾಡಿತ್ತು.  ಇದರ ಅನ್ವಯ  ಕಳೆದ  ಆರು  ವರ್ಷಗಳಲ್ಲಿ  ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ  ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.  ಈಗ  ‘ಕಿರಣ್’  ಯೋಜನೆ,   ಕಾರ್ಯಪಡೆಯ  ಬಹುತೇಕ ಶಿಫಾರಸುಗಳನ್ನು ಒಳಗೊಳ್ಳುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ  ಇಲಾಖೆ ಪ್ರತಿಪಾದಿಸುತ್ತದೆ. 

2008ರ ಅಂಕಿ ಅಂಶಗಳ ಪ್ರಕಾರ,  ವಿಜ್ಞಾನರಂಗದಲ್ಲಿ ಶೇ 37ರಷ್ಟು ಭಾರತೀಯ ಮಹಿಳೆಯರು ಪಿಎಚ್.ಡಿ ಪಡೆದವರಾಗಿದ್ದರು. ಪ್ರತಿಷ್ಠಿತ ವಿಜ್ಞಾನ ಕಾಲೇಜುಗಳು ಹಾಗೂ ವಿಜ್ಞಾನ ಸಂಸ್ಥೆಗಳಲ್ಲಿ  ಪ್ರಮುಖ  ಹುದ್ದೆಗಳಲ್ಲಿರುವ ಮಹಿಳೆಯರು  ಶೇ 15ಕ್ಕಿಂತ ಕಡಿಮೆ.  ಇನ್ನು ವಿವಿಧ ವಿಜ್ಞಾನ  ಅಕಾಡೆಮಿಗಳಿಂದ ಪ್ರಶಸ್ತಿ ಹಾಗೂ ಫೆಲೊಷಿಪ್ ಪಡೆದ ಮಹಿಳೆಯರ ಸಂಖ್ಯೆ ಶೇ 4ಕ್ಕಿಂತ  ಕಡಿಮೆ ಎಂಬುದನ್ನು  ಕಾರ್ಯಪಡೆ ವರದಿ ದಾಖಲಿಸಿದೆ. ಇಂತಹ ಲಿಂಗ ಅಸಮತೋಲನ ಸರಿಪಡಿಸಲು ಸರ್ಕಾರ ಹಾಗೂ ವೈಜ್ಞಾನಿಕ  ಅಕಾಡೆಮಿಗಳು ಕ್ರಮಗಳನ್ನು ಕೈಗೊಳ್ಳುತ್ತಿವೆ.   ವಾಸ್ತವವಾಗಿ, ವಿಜ್ಞಾನ ರಂಗದಲ್ಲಿ  ವೃತ್ತಿಯನ್ನು ಮುಂದುವರಿಸಲು ಮಹಿಳೆಯರಿಗೆ ಇರುವ ಸಮಸ್ಯೆಗಳಾದರೂ ಏನು ಎಂಬುದನ್ನು ಗುರುತಿಸಬೇಕು.  ಪ್ರತಿ ವರ್ಷ,  ಎಸ್ಎಸ್ಎಲ್‌ಸಿ ಅಥವಾ ಪಿಯುಸಿ ಪರೀಕ್ಷೆಗಳ ಫಲಿತಾಂಶಗಳಲ್ಲಿ ಹೆಣ್ಣುಮಕ್ಕಳೇ ಮುಂದಿರುತ್ತಾರೆ. 

ಉನ್ನತ ಪದವಿ ಹಾಗೂ ಪಿಎಚ್.ಡಿ ಪಡೆಯುವ ಹೆಣ್ಣುಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಹೀಗಿದ್ದೂ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ನಿರ್ಧಾರ ಕೈಗೊಳ್ಳುವಂತಹ ಹಿರಿಯ ಹುದ್ದೆಗಳಲ್ಲಿ ಮಹಿಳೆಯರು ಕಾಣಿಸುವುದು ಅಪರೂಪ. ಹಾಗಿದ್ದರೆ  ಈ ಹೆಣ್ಣುಮಕ್ಕಳೆಲ್ಲಾ ಎಲ್ಲಿ ಕಾಣೆಯಾಗುತ್ತಾರೆ? ನಿಜ ಹೇಳಬೇಕೆಂದರೆ ವಿಜ್ಞಾನವನ್ನು ಕೆರಿಯರ್ ಆಗಿ ಮುಂದುವರಿಸಲು ಮಹಿಳೆಯರಿಗೆ ಅಡ್ಡಿಯಾಗುತ್ತಿರುವುದು ಮುಖ್ಯವಾಗಿ ಕುಟುಂಬದ ಸಮಸ್ಯೆಗಳೇ.  ಏಕೆಂದರೆ ವೈಜ್ಞಾನಿಕ ತರಬೇತಿ ಎಂಬುದು ಸುದೀರ್ಘ ಪ್ರಕ್ರಿಯೆ. ಡಾಕ್ಟರೇಟ್‌ಗಾಗಿಯೇ ವರ್ಷಾನುಗಟ್ಟಲೆ ಕೆಲಸ ಮಾಡಬೇಕು. ಹೆಚ್ಚಿನ ಶ್ರಮ ಬೇಡುವ ಸಂಶೋಧನಾ ಕೆರಿಯರ್‌ನಿಂದ ಹೊರಬರಲು  ಮಹಿಳೆಯರೇ ಬಯಸುವುದೂ ಉಂಟು.  ಆದರೆ ಇದನ್ನು ಸಾಮಾನ್ಯೀಕರಿಸಿ ಮಹಿಳೆಯರ ವಿರುದ್ಧದ ನಿರಂತರ ಪೂರ್ವಗ್ರಹವಾಗಿ ಬಳಸಿಕೊಳ್ಳುವ ಪ್ರವೃತ್ತಿಗೂ ಕಾರಣವಾಗುತ್ತಿರುತ್ತದೆ ಎಂಬುದು ವಿಪರ್ಯಾಸ.

ವೃತ್ತಿಪರ ಚಟುವಟಿಕೆಗಳಲ್ಲಿ ಮಹಿಳೆಯರನ್ನು ಒಳಗೊಳ್ಳುವ ಸಂದರ್ಭದಲ್ಲೆಲ್ಲಾ ಈ ಬಗೆಯ ಪೂರ್ವಗ್ರಹಗಳೇ ದೊಡ್ಡ ತಡೆಯಾಗುತ್ತಿರುತ್ತವೆ. ಕೆಲವೊಮ್ಮೆ ಅನುಗ್ರಹಪೂರ್ವಕ ದೃಷ್ಟಿಯೂ ಮೇಲುಗೈ ಸಾಧಿಸುತ್ತದೆ. ಆಗ ಅಧಿಕೃತವಾಗಿ ಘೋಷಿಸಲಾದ ನೀತಿಗಳು ಮಹಿಳೆಯರ ವಿರುದ್ಧ ಯಾವುದೇ ತಾರತಮ್ಯ ಮಾಡದಿದ್ದರೂ ಆಚರಣೆಯಲ್ಲಿ ಈ ಮನಸ್ಥಿತಿ ಮಹಿಳೆಯರನ್ನು ಅಸಮಾನ ನೆಲೆಯಲ್ಲೇ ಪರಿಗಣಿಸುತ್ತದೆ. ಈ ಗಾಜಿನ ಚಾವಣಿ ಎದ್ದು ಕಾಣಿಸದಿದ್ದರೂ ವಾಸ್ತವಿಕವಾದದ್ದು ಎಂದು ಮಹಿಳಾ ವಿಜ್ಞಾನಿಗಳು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ವೃತ್ತಿಗಳಲ್ಲಿ ಒಂದು ನಿರ್ದಿಷ್ಟ ನೆಲೆಯಾಚೆ ಮೇಲಕ್ಕೆ ನೀವು ಮುನ್ನುಗ್ಗಲಾಗದು ಎಂಬಂತಹ ಸ್ಥಿತಿ ಅದು. ವಿಜ್ಞಾನ ಕ್ಷೇತ್ರಕ್ಕೆ ಬಂದ ಮಹಿಳೆಯರು ವೈದ್ಯಕೀಯ ಕ್ಷೇತ್ರವನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಇದೆ. ಇದಕ್ಕೆ ಕೂಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರಣಗಳು ಮುಖ್ಯವಾಗುತ್ತವೆ.

ಇಂತಹ ವಾತಾವರಣದಲ್ಲಿ ಕಳೆದ ವರ್ಷ ಪ್ರಕಟಿಸಲಾದ  ಸರ್ಕಾರದ ಅಂಕಿ ಅಂಶಗಳ ಪ್ರಕಾರ,  ಸಂಶೋಧನೆ ಹಾಗೂ ಅಭಿವೃದ್ಧಿ (ಆರ್ ಅಂಡ್ ಡಿ) ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ  ಗಣನೀಯ  ಏರಿಕೆ ಕಂಡಿದೆ. ಕಳೆದ ದಶಕದಲ್ಲಿ ಶೇ 13ರಷ್ಟಿದ್ದ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಶೇ 31ಕ್ಕೆ ಏರಿದೆ ಎಂಬುದು ಮುಖ್ಯ. ಇಂತಹ ಸಂದರ್ಭದಲ್ಲೇ, ಪ್ರಯೋಗಾಲಯದಲ್ಲಿ ಮಹಿಳಾ ವಿಜ್ಞಾನಿಗಳ ಹಾಜರಾತಿ ಎಂಬುದು ಅಧ್ಯಯನ ಏಕಾಗ್ರತೆಗೆ ಭಂಗ ತರುವಂತಹದ್ದು ಎಂಬ ರೀತಿಯಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ  ಟಿಮ್ ಹಂಟ್ ಅವರು ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಕಳೆದ ವರ್ಷ ವಿಜ್ಞಾನ ಪತ್ರಕರ್ತರ ವಿಶ್ವ ಸಮ್ಮೇಳನದಲ್ಲಿ ಹೇಳಿದ್ದು ವಿವಾದವಾಗಿದ್ದನ್ನು ಸ್ಮರಿಸಬೇಕು. ವಿಜ್ಞಾನರಂಗದಲ್ಲಿ ಚಾಲ್ತಿಯಲ್ಲಿರುವ  ಪೂರ್ವಗ್ರಹಗಳಿಗೆ ಮತ್ತೊಮ್ಮೆ ಈ ಮಾತು ಸಾಕ್ಷಿಯಾಗಿತ್ತು. 

‘ಹುಡುಗಿಯರ ಬಗ್ಗೆ ನನ್ನ ಸಮಸ್ಯೆ ಹೇಳುತ್ತೇನೆ. ಅವರ ಪ್ರೀತಿಯಲ್ಲಿ ನೀವು ಸಿಲುಕುತ್ತೀರಿ. ನಿಮ್ಮ ಪ್ರೀತಿಯಲ್ಲಿ ಅವರು ಸಿಲುಕುತ್ತಾರೆ. ಅವರನ್ನು ನೀವು ಟೀಕಿಸಿದಾಗ ಅವರು ಅಳುತ್ತಾರೆ. ಹೀಗಾಗಿ ಪುರುಷರಿಗೆ ಪ್ರತ್ಯೇಕ ಲ್ಯಾಬ್ ಬೇಕು.  ಆದರೆ ನಾನೇನು  ಮಹಿಳೆ ಹಾದಿಗೆ ಅಡ್ಡವಾಗಿ  ನಿಲ್ಲಬಯಸುವುದಿಲ್ಲ’  ಎಂದೂ ಅವರು ಹೇಳಿದ್ದರು.  ಇದು ವಿವಾದವಾದಾಗ, ತಮ್ಮ ಭಾವನಾತ್ಮಕ ಸಿಕ್ಕುಗಳ ಬಗ್ಗೆ ಪ್ರಾಮಾಣಿಕ ಮಾತುಗಳನ್ನಾಡಲಷ್ಟೇ ತಾವು ಪ್ರಯತ್ನಿಸಿದ್ದು ಎಂದು ಕ್ಷಮೆ ಕೇಳಲು ಯತ್ನಿಸಿದ್ದರು. 

72 ವರ್ಷದ ಈ ಬಯೋಕೆಮಿಸ್ಟ್, ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ನಲ್ಲಿ ತಮ್ಮ ಹುದ್ದೆಗೆ  ಕಡೆಗೆ ರಾಜೀನಾಮೆ ನೀಡಬೇಕಾಯಿತು. ಹಂಟ್ ಮಾತುಗಳನ್ನು ಹಾಸ್ಯವಾಗಿ ತೆಗೆದುಕೊಳ್ಳಲು ಯಾರೂ ಸಿದ್ಧರಿರಲಿಲ್ಲ. ಏಕೆಂದರೆ ದಶಕಗಳಿಂದ ಇಂತಹ ಪೂರ್ವಗ್ರಹಗಳ ವಿರುದ್ಧ ಮಹಿಳಾ ವಿಜ್ಞಾನಿಗಳು  ಹೋರಾಡಿಕೊಂಡು ಬಂದಿದ್ದಾರೆ. ಹಾಗೆಯೇ 2005ರ  ಆರಂಭದಲ್ಲಿ ಶುದ್ಧ ವಿಜ್ಞಾನದಲ್ಲಿ ಯಶಸ್ವಿಯಾಗುವ ಸ್ವಭಾವಜನ್ಯ ಅಸಾಮರ್ಥ್ಯದಿಂದಲೇ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಮಹಿಳೆಯರು ಅಪರೂಪ ಎಂಬಂತಹ ಮಾತುಗಳನ್ನು ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷ  ಲಾರೆನ್ಸ್ ಸಮ್ಮರ್ಸ್  ಹೇಳಿದ್ದೂ ವಿವಾದವಾಗಿತ್ತು. ಕ್ಲಿಷ್ಟ ವಿಜ್ಞಾನಗಳೆಂದು ಭಾವಿಸಲಾದದ್ದನ್ನು ನಿರ್ವಹಿಸುವಂತಹ ಮಿದುಳು ಮಹಿಳೆಯರಿಗಿಲ್ಲ ಎಂಬರ್ಥವನ್ನು ಈ ಮಾತುಗಳು ಧ್ವನಿಸಿದ್ದವು.  

ಎಂದರೆ ಸಾಮಾಜಿಕ ನೆಲೆಯಲ್ಲಿ ದಟ್ಟವಾಗಿರುವ ಪೂರ್ವಗ್ರಹಗಳ ವ್ಯಾಪ್ತಿಯನ್ನು ಊಹಿಸಿಕೊಳ್ಳಬಹುದು. ‘ರಾಷ್ಟ್ರದಲ್ಲಿ ಶಾಲೆಗೆ ಹೋಗುವ ಮಗು ಒಬ್ಬರೇ ಒಬ್ಬರು ಭಾರತೀಯ ಮಹಿಳಾ ವಿಜ್ಞಾನಿಯ ಹೆಸರು ಹೇಳಲು ಶಕ್ಯವಿಲ್ಲ’  ಎಂಬುದನ್ನೂ ಸಚಿವೆ ಸ್ಮೃತಿ ಇರಾನಿ ಮೈಸೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಶಾಲಾ ಮಟ್ಟದಿಂದಲೇ ಆರಂಭವಾಗುವ  ಇಂತಹ ಪೂರ್ವಗ್ರಹಗಳನ್ನು ಮೆಟ್ಟಿ ನಿಲ್ಲಬೇಕಾದುದು ಇಂದಿನ ಅಗತ್ಯ.  ಈಗಲೂ ವಿಜ್ಞಾನಿ ಎಂದರೆ ಬಿಳಿ ಕೋಟ್ ಧರಿಸಿ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವ ಪುರುಷನ ಚಿತ್ರವೇ ಹೆಚ್ಚಿನವರ ಮನಃಪಟಲದ ಮೇಲೆ ಮೂಡಬಹುದು. ಏಕೆಂದರೆ  ಶಾಲಾ ಪಠ್ಯಗಳಲ್ಲಿರುವ ಮಹಿಳೆಯರ ಚಿತ್ರಗಳೇ ಕಡಿಮೆ.

ಇರುವ ಕೆಲವೇ ಚಿತ್ರಗಳೂ ಮನೆಯೊಳಗೆ ಅಥವಾ ಹೊರಗೆ ಜಡವಾದ ಪಾತ್ರಗಳಲ್ಲಷ್ಟೇ ಮಹಿಳೆ ತೊಡಗಿಕೊಂಡಿರುವಂತಹವು ಎಂದು ಅನೇಕ ಅಧ್ಯಯನಗಳು ಎತ್ತಿ ತೋರಿಸಿವೆ. ಕಲಿಕಾ ಸಾಮರ್ಥ್ಯಗಳಲ್ಲಿ ಲಿಂಗ ಸಂಬಂಧಿ ತಾರತಮ್ಯಗಳನ್ನು ತೊಡೆಯಲು ಶಾಲೆಯಿಂದಲೇ ಪ್ರಯತ್ನ ಮಾಡಬೇಕು ಎಂದು ‘ಭಾರತೀಯ ಮಹಿಳೆಯರಿಗೆ ವಿಜ್ಞಾನ ಕೆರಿಯರ್’ ಎಂಬ ಬಗ್ಗೆ   ಅಧ್ಯಯನ ನಡೆಸಿದ್ದ ಮುಂಬೈನ  ಎಸ್ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ  ವರದಿ ಶಿಫಾರಸು ಮಾಡಿತ್ತು. ಆದರೇನು? ಈ ಎಲ್ಲಾ ಚರ್ಚೆಗಳನ್ನು ಗಾಳಿಗೆ ತೂರುವಂತೆ ವಿಜ್ಞಾನ ಸಮಾವೇಶದ ಸಮಾರೋಪದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಹೆಣ್ಣುಮಕ್ಕಳಿಗೆ ಬುದ್ಧಿ ಹೇಳಿದರು.

ಹುಡುಗರು ಕೆಲವೊಂದು ದುರಭ್ಯಾಸಗಳನ್ನು ಬಿಡಬೇಕೆಂದು ಸಲಹೆ ನೀಡಿದ ರಾಜ್ಯಪಾಲರು ಆ ದುರಭ್ಯಾಸಗಳೇನೆಂದು ವಿವರಿಸಹೋಗಲಿಲ್ಲ. ಆದರೆ  ‘ಹೆಣ್ಣುಮಕ್ಕಳು ಫ್ಯಾಷನ್ ಬಿಡಬೇಕು.  ತೀಡಿದ ಹುಬ್ಬು, ತುಟಿ ರಂಗು ಅಥವಾ ತಲೆಗೂದಲು ಕತ್ತರಿಸುವುದು ಅಗತ್ಯವಿಲ್ಲ. ಫ್ಯಾಷನಬಲ್ ವ್ಯಕ್ತಿ ಆಕರ್ಷಕವಾಗಿರುವುದು ಸಾಧ್ಯವಿಲ್ಲ’  ಎಂಬಂತಹ  ಮಾತನ್ನು ರಾಜ್ಯಪಾಲರು  ಹೇಳಿದ್ದಾರೆ.  ಮಹಿಳೆಯರು ಆಕರ್ಷಕವಾಗಿರಬೇಕೆಂದು ಅವರು ಯಾಕೆ ಮಹಿಳೆಯರಿಗೆ ಸಲಹೆ ನೀಡುತ್ತಿದ್ದಾರೆ?  ಅರ್ಥವಾಗದ ವಿಚಾರ. ಮುಂದೆಂದಾದರೂ ‘ನಾನು ಮಹಿಳಾ ವಿಜ್ಞಾನಿ’ ಎಂದು ಹೇಳಿಕೊಳ್ಳದೇ ಇರುವ ಕಾಲ ಬರಲಿ ಎಂದಷ್ಟೇ ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT