ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ಪ್ರವಾಸ ಎಂಬ ಆಕರ್ಷಕ ವಹಿವಾಟು

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಪ್ರಸಕ್ತ ಕಾಲಘಟ್ಟದಲ್ಲಿ ರಾಜ­ಕಾರಣ­ಕ್ಕೊಂದು ನೈತಿಕತೆಯ ಸಿಂಚನ ನೀಡುವಂತೆ ಕಂಡು ಬರುತ್ತಿರುವ ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ಆಂದೋಲನ ಒಂದು ಕಡೆ ಸುದ್ದಿಯಾ­ಗುತ್ತಿದ್ದರೆ, ಇನ್ನೊಂದು ಕಡೆ ಕರ್ನಾಟಕದ ಹದಿನಾರು ಶಾಸಕರು ಸರ್ಕಾರದ ವೆಚ್ಚ­ದಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ದಕ್ಷಿಣ ಅಮೆರಿಕ ದೇಶಗಳ ಪ್ರವಾಸ ಕಾರ್ಯಕ್ರಮವು ವಿವಾದದ ಸ್ವರೂಪ ಪಡೆದುಕೊಂಡು, ದೇಶದ ಗಮನ ಸೆಳೆ­ದಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಆ ಶಾಸಕರೆಲ್ಲಾ ಜನಸಾಮಾನ್ಯರ ತೆರಿಗೆಯ ಹಣ­ವನ್ನು ಇಂತಹದ್ದೊಂದು ಕಾರ್ಯಕ್ರಮಕ್ಕೆ ಖರ್ಚು ಮಾಡಲು ತುದಿಗಾಲಲ್ಲಿ ನಿಂತಿದ್ದರು. ಆಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ  ಮಧ್ಯ­ಪ್ರವೇಶಿಸಿ ಆ ಪ್ರವಾಸ ಕಾರ್ಯಕ್ರಮ ಸದ್ಯಕ್ಕೆ ರದ್ದಾ­ಗುವಂತೆ ನೋಡಿಕೊಂಡರು. ಈಗಾ­ಗಲೇ ದೆಹಲಿ, ರಾಜ­ಸ್ತಾನಗಳಲ್ಲಿ ಮುಖಭಂಗಕ್ಕೆ ಒಳಗಾಗಿರುವ ಕಾಂಗ್ರೆಸ್‌ಗೆ ಪುನಶ್ಚೇತನ ನೀಡುವ ಉತ್ಸಾಹ­ದಲ್ಲಿರುವ ರಾಹುಲ್‌ ಈ ನಿಲುವು ತೆಗೆದು­ಕೊಂಡಿ­ರುವುದು ಗಮನಾರ್ಹ.

ಪ್ರವಾಸ ಹೊರಟು ನಿಂತಿದ್ದ ತಂಡದಲ್ಲಿ ಕಾಂಗ್ರೆಸ್ ಪಕ್ಷದವರಷ್ಟೇ ಇರಲಿಲ್ಲ, ಬಿಜೆಪಿ­ಯವರೂ ಇದ್ದರು. ಆದರೆ ಮಾಧ್ಯಮಗಳಲ್ಲಿ ಈ ಉದ್ದೇಶಿತ ಪ್ರವಾಸ ಸುದ್ದಿಯಾಗುತ್ತಿದ್ದಂತೆ ಬಿಜೆಪಿ­ಯವರು ಹಿಂದಡಿ ಇಟ್ಟರು. ಕರ್ನಾಟಕದ ಹಲವು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇರು ವಾಗ ಮತ್ತು ಸುಮಾರು ಇನ್ನೂರಕ್ಕೂ ಹೆಚ್ಚು ರೈತರು ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿ­ಕೊಂಡಿರುವುದು ಈಗಾಗಲೇ ಸುದ್ದಿ­ಯಲ್ಲಿರುವಾಗ ಇಂತಹದ್ದೊಂದು ಪ್ರವಾಸದ ಅಗತ್ಯ­ವಿದೆಯೇ ಎಂದು ರಾಹುಲ್ ಗಾಂಧಿ  ಪ್ರಶ್ನಿಸಿದರೆನ್ನಲಾಗಿದೆ.

ಆದರೆ ಶಾಸಕರ ಐದು ವರ್ಷಗಳ ಅವಧಿ ಯಲ್ಲಿ ಎರಡು ಸಲ ವಿದೇಶ ಪ್ರವಾಸ ನಡೆಸಲು ಅವ­ಕಾಶ­ವಿದೆ ಎಂಬ ‘ಸಂಪ್ರದಾಯ’ದ ಮಾತನ್ನೇ ಪ್ರವಾಸಕ್ಕೆ ಹೊರಟಿದ್ದ ಶಾಸಕರು ಹೇಳುತ್ತಾ ತಮ್ಮನ್ನು ಸಮರ್ಥಿಸಿಕೊಂಡಿದ್ದನ್ನೂ ನಾನು ಗಮನಿಸಿದ್ದೇನೆ. ಹೌದು, ಇಂತಹ ಸಮ­ರ್ಥ­ನೆ­ಯ ‘ಮಾತು’ ಕರ್ನಾಟಕದಲ್ಲಿ ಮಾತ್ರ ಕೇಳಿ ಬರುತ್ತಿರುವುದಲ್ಲ. ಇತರ ರಾಜ್ಯಗಳಲ್ಲೂ ಇದೇ ತೆರನಾದ ‘ಅವಕಾಶ’ಗಳ ಬಗ್ಗೆ ಸುದ್ದಿ­ಗಳಾಗಿವೆ. ಆಂಧ್ರಪ್ರದೇಶದ ಶಾಸಕರೂ ಇಂತ­ಹದೇ ಪ್ರವಾಸ ಕಾರ್ಯಕ್ರಮವೊಂದಕ್ಕೆ ಸಿದ್ಧತೆ ನಡೆಸಿದ್ದ­ರೆನ್ನಲಾಗಿದೆ. ಪಂಜಾಬ್‌ನ ಅಕಾಲಿದಳ ಸರ್ಕಾರ ತನ್ನ ಶಾಸಕರನ್ನು ಸ್ಕಾಟ್ಲೆಂಡ್‌ಗೆ ಕಳುಹಿಸಿ ಅಲ್ಲಿ ಸ್ಕಾಚ್ ವಿಸ್ಕಿ ತಯಾರಿಸುವುದನ್ನು ನೋಡುವ ಅವಕಾಶ ಕಲ್ಪಿಸಿತ್ತಂತೆ!

ಇಂತಹ ಎಲ್ಲಾ ಪ್ರವಾಸಗಳಿಗೂ ಅಧ್ಯಯನದ ಲೇಪನ ನೀಡಲಾಗುತ್ತದೆ. ಆದರೆ ಇಂತಹ ಪ್ರವಾಸ ನಡೆಸಿ ಬಂದವರು ನೀಡುವ ವರದಿ ಯನ್ನು ಮಾತ್ರ ಯಾರೂ ಗಂಭೀರವಾಗಿ ಪರಿಗಣಿಸಿ­ದಂತಿಲ್ಲ, ಪ್ರಕಟಗೊಳ್ಳುವುದೂ ಇಲ್ಲ. ಇದೊಂದು ತೆರನಾಗಿ ‘ಜಾಲಿ ಟ್ರಿಪ್’ಗಳಷ್ಟೇ ಎನ್ನು­ವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹೌದು. ಇದರಲ್ಲಿ ಆಡಳಿತಗಾರರ ಸ್ವಾರ್ಥವೂ ಇರುತ್ತದೆ. ಆಡಳಿತ ಪಕ್ಷದ ಕೆಲವು ಶಾಸಕರನ್ನು ಸಂಪ್ರೀತ ರನ್ನಾಗಿರಿಸಿಕೊಳ್ಳಲು ಮತ್ತು ವಿರೋಧ ಪಕ್ಷದ ಕೆಲವು ಶಾಸಕರು ಕಿರಿಕಿರಿ ಮಾಡದಂತೆ ತಡೆಯಲು ಅವರ ಜತೆಗಿನ ಸಂಬಂಧವನ್ನು ಸೌಹಾರ್ದ­ವಾಗಿರಿಸಿಕೊಳ್ಳಲು ಸರ್ಕಾರವೇ ಇಂತಹ ಪ್ರವಾಸಗಳ ಅವಕಾಶ ಕಲ್ಪಿಸುತ್ತದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ. ಇಂತಹ ಪ್ರವಾಸ­ಗಳು ಶಾಸಕರಿಗಷ್ಟೇ ಸೀಮಿತಗೊಂಡಿದ್ದು ಎಂದು­ಕೊಳ್ಳಬೇಕಿಲ್ಲ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರ ಕೆಲವು ಉನ್ನತ ಸಮಿತಿಗಳ ಸದಸ್ಯರನ್ನೂ ಇಂತಹ ಪ್ರವಾಸಗಳಿಗೆ ಕಳುಹಿಸಿದ ನಿದರ್ಶನಗಳಿವೆ.

ನಮ್ಮ ಲೋಕಸಭಾ ಸದಸ್ಯರೂ ಇಂತಹ ಪ್ರವಾಸ­ಗಳಿಂದ ದೂರವೇನೂ ಉಳಿದಿಲ್ಲ. ಹಿಂದೆ ನಾನು ರಾಜ್ಯಸಭಾ ಸದಸ್ಯನಾಗಿದ್ದಾಗ ನನ್ನನ್ನು ಇಂತಹ ಯಾವುದೇ ಪ್ರವಾಸ ಕಾರ್ಯಕ್ರಮದಲ್ಲಿ ಸೇರಿಸಿರಲಿಲ್ಲ ಬಿಡಿ. ಏಕೆಂದರೆ ಈ ತೆರನಾದ ದುಂದುವೆಚ್ಚಗಳ ಬಗ್ಗೆ ಆಗಲೂ ಮಾಧ್ಯಮ ಎಚ್ಚರಗಣ್ಣಾಗಿತ್ತು. ರಾಜಕೀಯ ಪಕ್ಷಗಳು ಇಂತಹ ‘ಅಧ್ಯಯನ ಪ್ರವಾಸ’ಗಳನ್ನು ತಮ್ಮ ತಮ್ಮಲ್ಲೇ ಹಂಚಿಕೊಳ್ಳುತ್ತವೆ. ಇಂಗ್ಲೆಂಡ್‌, ಅಮೆರಿಕದಲ್ಲಿ ಹಿಂದಿ ಭಾಷೆಯ ಪ್ರಸಾರ ಎಷ್ಟರ­ಮಟ್ಟಿಗೆ ನಡೆದಿದೆ ಎಂಬುದನ್ನು ಪರಿಶೀಲಿಸು­ವುದ ಕ್ಕಾಗಿ ಭಾಷಾ ಸಮಿತಿ ಸದಸ್ಯರ ತಂಡವೊಂದು ಆ ದೇಶಗಳ ಪ್ರವಾಸ ನಡೆಸುತ್ತದೆ!

ಈ ತೆರನಾದ ‘ಫಾರಿನ್‌ ಟ್ರಿಪ್‌’ ಎನ್ನುವುದು ಭಾರತದಲ್ಲಿ ಪಡೆದಿರುವಷ್ಟೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿಯೂ ‘ಪ್ರಖ್ಯಾತಿ’ ಹೊಂದಿದೆ. ಇಂತಹ ಒಂದಿಲ್ಲಾ ಒಂದು ನೆಪ ಗಳೊಂದಿಗೆ ಅಲ್ಲಿನ ಜನಪ್ರತಿನಿಧಿಗಳೂ ವಿದೇಶ ಪ್ರವಾಸ ನಡೆಸುವುದು ಸಾಮಾನ್ಯ. ಇದು ಯಾವುದೇ ಯೋಚನೆ ಇಲ್ಲದೆ ಸರ್ಕಾರದ ಹಣ ಖರ್ಚು ಮಾಡುವುದಕ್ಕೆ ಒಂದು ನಿದರ್ಶನ ಅಷ್ಟೇ.  ಅದೇನೇ ಇರಲಿ, ಈ ರೀತಿಯ ವಿದೇಶ ಪ್ರವಾಸ ಎನ್ನುವುದು ಸರ್ಕಾರವೊಂದು ನೀಡುವ ದೊಡ್ಡ ಮಟ್ಟದ ‘ಲಂಚ’ವಲ್ಲದೆ ಇನ್ನೇನು?

ಪಾಶ್ಚಿಮಾತ್ಯ ದೇಶಗಳಿಗೆ ಈ ಬಗ್ಗೆ ಗೊತ್ತಿಲ್ಲ­ದೇನೂ ಇಲ್ಲ. ಇಂಗ್ಲೆಂಡ್‌ ಮತ್ತು ಅಮೆರಿಕ ದಂತಹ ದೇಶಗಳು ಇಂತಹ ಪ್ರವಾಸಿಗರಿಗೆ ರಿಯಾ­ಯಿತಿಗಳ ಪಟ್ಟಿ ಹಿಡಿದು ಕುಳಿತು­ಬಿಡುತ್ತವೆ. ಸರ್ಕಾರದ ಉನ್ನತ ಸ್ಥಾನ­ಗಳಲ್ಲಿ ರುವವರು ವಿದೇಶಗಳ ಇಂತಹ ‘ಆಕರ್ಷಕ ಆಹ್ವಾನ’­ಗಳಿಗೆ ಮರುಳಾಗಿಬಿಡುತ್ತಾರೆ.

ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಹುದ್ದೆಗಳಲ್ಲಿ­ರುವವರಲ್ಲಿ ಅದೆಷ್ಟು ಮಂದಿಯ ಮಕ್ಕಳು ವಿದೇಶದಲ್ಲಿ ವಿದ್ಯಾರ್ಥಿ ವೇತನ ಪಡೆದು  ಶಿಕ್ಷಣ ಪಡೆಯುತ್ತಿ­ದ್ದಾರೆಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ­ದರೆ ಅದೆಷ್ಟೋ ಆಶ್ಚರ್ಯಕರ ಮಾಹಿತಿ ಹೊರ­ಬೀಳಬಹುದು. ಸರ್ಕಾರದ ಉನ್ನತ ಸ್ಥಾನ ಗಳಲ್ಲಿ ಇರುವವರ ಮಕ್ಕಳಿಗೆ ವಿದೇಶಗಳಲ್ಲಿ ಉಚಿತ ವಸತಿ ಮತ್ತು ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಬಗ್ಗೆ, ಪ್ರಯಾಣ ವೆಚ್ಚದಲ್ಲಿ ಸಂಪೂರ್ಣ ರಿಯಾ ಯಿತಿ ನೀಡುವುದಕ್ಕೆ ಸಂಬಂಧಿಸಿದಂತೆ ‘ವಿದೇ ಶಾಂಗ ವ್ಯವಹಾರ’ದಲ್ಲಿರುವವರು ತಮ್ಮ ಶಕ್ತಿ ಮೀರಿ ಪ್ರಯತ್ನಿಸುವುದು ಗುಟ್ಟೇನೂ ಅಲ್ಲ. ಉನ್ನತ ಸ್ಥಾನದಲ್ಲಿರುವವರು ವಿದೇಶಗಳಿಗೆ ಹೋದಾಗ ಅವರಿಗೆ ಅಲ್ಲಿ ಉಚಿತ ಮದ್ಯದ ಹೊಳೆ­ಯನ್ನೇ ಹರಿಸುವ ವ್ಯವಸ್ಥೆ ಇರುತ್ತದೆ. ಹೀಗಾಗಿ ಇಲ್ಲಿನ ಕೆಲವು ಹಿರಿಯ ಅಧಿಕಾರಿಗಳು ಅಲ್ಲಿ ಹೋದಾಗ ಕಿರಿಯ ಅಧಿಕಾರಿಗಳು ನೀಡುವ ಇಂತಹ ಭೋಜನ ಕೂಟಗಳಲ್ಲಿ ಪಾಲ್ಗೊಳ್ಳು­ವುದನ್ನು ಕಾಣಬಹುದು. ಇದು ಭಾರತಕ್ಕೆ ಹೊಸದೇನೂ ಅಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕೆಲವು ವರ್ಷಗಳ ನಂತರ ಈ ಚಾಳಿ ಶುರುವಾಗಿದೆ.

ಇಲ್ಲಿನ ಹಿರಿಯ ಅಧಿಕಾರಿಗಳು ವಿದೇಶಕ್ಕೆ ಹೋದಾಗ ಅಲ್ಲಿನ ಕಿರಿಯ ಅಧಿಕಾರಿಗಳ ಭೋಜನ ಕೂಟಗಳಲ್ಲಿ ಪಾಲ್ಗೊಳ್ಳುವ ಸಂಗತಿ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಗೊತ್ತಾ­ದಾಗ ಅವರು ನಿಜಕ್ಕೂ ಗಾಬರಿ­ಗೊಂಡಿದ್ದರು. ಇನ್ನು ಮುಂದೆ ಈ ರೀತಿ ನಡೆಯ­ಬಾರದು ಎಂಬ ಲಿಖಿತ ಆದೇಶವನ್ನೂ ನೀಡ­ಲಾಯಿತು. ಇಲ್ಲಿಂದ ವಿದೇಶಕ್ಕೆ ಹೋಗುವ ಹಿರಿಯ ಅಧಿಕಾರಿಗಳು ತಮ್ಮ ಮಟ್ಟದ ಅಧಿ ಕಾರಿಗಳ ಜತೆ ಮಾತ್ರ ಭೋಜನ ಕೂಟದಲ್ಲಿ ಪಾಲ್ಗೊಳ್ಳ­­­ಬಹುದೆಂದು ತಿಳಿಸಲಾಗಿತ್ತು. ಆ ನಂತರ, ಆ ಆದೇಶದ ಉಲ್ಲಂಘನೆ ನಿರಂತರವಾಗಿ ನಡೆದಿದೆ ಎನ್ನುವುದೂ ನಿಜ. ಇವತ್ತು ಜನ ಪ್ರತಿನಿಧಿ­ಗಳಿಗೇ ನೇರವಾಗಿ ಆಹ್ವಾನ ಪತ್ರ ಬರು ವುದು ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೇ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಕಿವಿಮಾತು ಹೇಳಿ ಕಳಿಸಬೇಕಾದಂತಹ ಪರಿಸ್ಥಿತಿ ಇದೆ.

ಈ ನಡುವೆ ಅಮೆರಿಕದ ವಿದೇಶಾಂಗ  ಇಲಾಖೆಯ ಕೈಯಲ್ಲಿ ಭಾರತ ಅನುಭವಿಸಿದ  ಅವಮಾನವನ್ನು ನೆನಪಿಸಿಕೊಂಡಾಗ ನಿಜಕ್ಕೂ ಕಿರಿಕಿರಿ ಎನಿಸುತ್ತಿದೆ. ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿ ದೇವಯಾನಿ ಖೋಬ್ರ­ಗಡೆ ಅವರ ಕೈಗೆ ಕೋಳ ತೊಡಿಸಿ ಜೈಲಿಗೆ ಕರೆದೊಯ್ಯ­­ಲಾಯಿತಲ್ಲದೆ, ಸಾಮಾನ್ಯ ಕೈದಿಗಳ ಜತೆ­ಯಲ್ಲಿಯೇ ಇರಿಸಲಾಯಿತು. ಈ ಘಟನೆಯ ಬಗ್ಗೆ ಕ್ಷಮಾಪಣೆ ಕೇಳಲೂ ಅಲ್ಲಿನ ವಿದೇಶಾಂಗ ಖಾತೆಯ ಕಾರ್ಯದರ್ಶಿ ಜಾನ್‌ ಕೆರಿ ಮುಂದಾ ಗಲಿಲ್ಲ. ಅಮೆರಿಕ ಸರ್ಕಾರದ ಅಹಂಕಾರವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.

ಅಧ್ಯಕ್ಷ ಬರಾಕ್‌ ಒಬಾಮ ಅಧಿಕಾರಕ್ಕೆ ಏರಿದ ಆರಂಭದ ದಿನಗಳಲ್ಲಿ ಒಂದಿನಿತು ಭಿನ್ನವಾಗಿ ಕಂಡು ಬಂದರಾದರೂ, ನಂತರ ಅಲ್ಲಿನ ವ್ಯವ ಸ್ಥೆಯ ಭಾಗವಾಗಿಬಿಟ್ಟರು. ದೇವಯಾನಿ ಘಟ ನೆಗೆ ಸಂಬಂಧಿಸಿದಂತೆ ಒಬಾಮ ಅವರಿಂದಲೂ ಸಕಾ­ರಾ­ತ್ಮಕ ಪ್ರತಿಕ್ರಿಯೆ ಬರಲಿಲ್ಲ. ಒಬಾಮ ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪಶ್ಚಾತ್ತಾಪ ವ್ಯಕ್ತ ಪಡಿಸಬೇಕಿತ್ತು. ಆದರೆ ಅವರು ಆ ರೀತಿ ನಡೆದುಕೊಳ್ಳಲಿಲ್ಲ. ಇದರಿಂದ ಅಮೆರಿಕವೇ ಕಳೆದು­ಕೊಂಡಿದ್ದು ಹೆಚ್ಚು ಎನ್ನುವುದಂತೂ ನಿಜ. ಪಶ್ಚಿಮದ ಇತರ ದೇಶಗಳಿಗಿಂತ ಅಮೆರಿಕ ಭಿನ್ನ ವೇನೂ ಅಲ್ಲ ಎಂಬುದಾಗಿ ಭಾರತೀಯರ ಮನಸ್ಸು ನಂಬುವಂತಾಯಿತು.

ವಾಷಿಂಗ್ಟನ್‌ನ ಅಧಿಕಾರಸ್ಥರು ಭಾರತದ ಜತೆಗೆ ಇನ್ನು ಮುಂದೆಯೂ ಉಭಯ ದೇಶಗಳ ನಡು­ವಣ ರಾಜಕೀಯ ತಂತ್ರಗಳ ಕುರಿತು ಚರ್ಚಿ ಸಬಹುದು, ನಿಜ. ಭಾರತ ಕೂಡಾ ಅಷ್ಟೇ ಉತ್ಸಾಹ­­ದಿಂದ ಆ ಮಾತುಕತೆಯಲ್ಲಿ ಪಾಲ್ಗೊಳ್ಳ ಲೂ­ಬಹುದು. ಆದರೆ ಎಲ್ಲವೂ ಯಾಂತ್ರಿಕ­ವಾಗಿ­ರುತ್ತದೆ ಅಷ್ಟೇ. ಭಾರತೀಯರು ಮುಂದಿನ ದಿನ­ಗಳಲ್ಲಿ ಅಮೆರಿಕದ ಜತೆಗೆ ಮಾನಸಿಕವಾಗಿ ಅಂತರ­ವನ್ನು ಇರಿಸಿಕೊಳ್ಳುವುದಂತೂ ನಿಜ. ದೇವ­ಯಾನಿ ಪ್ರಕರಣ ಎಲ್ಲರ ನೆನಪಲ್ಲಿದ್ದೇ ಇರುತ್ತದೆ.

ದೇವಯಾನಿ ಅವರು ತಮ್ಮ ಮನೆಕೆಲಸ ದಾಕೆಗೆ ಅಮೆರಿಕದ ಕಾನೂನಿನ ಅನ್ವಯ ವೇತನ ಕೊಡು­ತ್ತಿರಲಿಲ್ಲ ಎಂಬ ಕಾರಣಕ್ಕೆ ಇಡೀ ವಿವಾದ ಹುಟ್ಟಿ­ಕೊಂಡಿದೆ. ಹಿಂದೆ ನಾನು ದೆಹಲಿ ಯಲ್ಲಿಯೇ ಅಮೆರಿಕದ ಯುಎಸ್‌ಐಎಸ್‌ಗೆ ಕೆಲಸ ಮಾಡುತ್ತಿದ್ದಾಗ ಅಲ್ಲಿ ಅಮೆರಿಕದವರು ಪಡೆ­ಯುತ್ತಿದ್ದಷ್ಟು ವೇತನ ನನಗೆ ಸಿಗುತ್ತಿರಲಿಲ್ಲ ಎಂಬುದು ನನಗಿನ್ನೂ ನೆನಪಿದೆ. ಅದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಭಾರತ­ದೊಳಗೆ ಅದೇ ಕಚೇರಿಯ ಮಂದಿ ಪ್ರವಾಸ ಮಾಡು­ವಾಗ ಜತೆಗಿರುತ್ತಿದ್ದ ಭಾರತೀಯ ಸಹೊದ್ಯೋಗಿಗಳಿಗಿಂತ  ಅಮೆರಿಕದವರಿಗೇ ಹೆಚ್ಚುವರಿ ಭತ್ಯೆ ಸಿಗುತ್ತಿತ್ತು. ಇದಕ್ಕೇನನ್ನುವುದು?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT