ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಪ್ರಯಾಣಿಕರ ಪಾಲಿಗೆ ಒಳ್ಳೆಯ ದಿನಗಳು

Last Updated 25 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ವಿಮಾನ ಪ್ರಯಾಣ ಕೈಗೊಳ್ಳುವ­ವ­ರಿಗೆ ಬೆಂಗಳೂರಿನ ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹೊಸ ಅನುಭವ ಆಗುತ್ತಿದೆ. ಕಳೆದ ವಾರ ನಾನು ವಿದೇಶಕ್ಕೆ ತೆರಳಲು ನಿಲ್ದಾಣಕ್ಕೆ ಹೋದಾಗ ಅಲ್ಲಿನ ಹೊಸ ಸೌಲಭ್ಯಗಳನ್ನು ಕಂಡು ನನಗೆ ದಂಗುಬಡಿದಂತಾಯಿತು.

ಚೆಕ್ ಇನ್ ಔಪ­ಚಾರಿಕ ಕ್ರಮಗಳೆಲ್ಲ ಪೂರ್ಣಗೊಂಡ ನಂತರ ನಾನು ಬಿಸಿನೆಸ್ ಕ್ಲಾಸ್ ಪ್ರಯಾ­ಣಿಕರಿಗಾಗಿ ಮೀಸಲಿರುವ ವಿರಾಮ ಮೊಗಸಾಲೆಯತ್ತ (ಲಾಂಜ್) ಹೊರ­ಟಾಗ,  ಲಾಂಜ್‌ನ ಸ್ಥಳ ಬದ­ಲಾಗಿದ್ದು, ನಿಲ್ದಾಣದ ವಿಸ್ತೃತ ಭಾಗದ ಹೊಸ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಹಳೆಯ ಲಾಂಜ್ ಅನ್ನು ನವೀಕರಣಕ್ಕೆ ಮುಚ್ಚಲಾಗಿದೆ ಎಂದು ಅಲ್ಲಿದ್ದ ಸಿಬ್ಬಂದಿಯು ನನ್ನ ಗಮನಕ್ಕೆ ತಂದರು.

ದೇಶದ ಬಹುತೇಕ ವಿಮಾನ ನಿಲ್ದಾಣ­ಗಳಲ್ಲಿನ ಲಾಂಜ್‌ಗಳಲ್ಲಿ ಅನೇಕ ಬಾರಿ ಕಾಲ ಕಳೆದಿರುವ ನಾನು, ಇನ್ನೊಂದು ಮಂಕಾದ, ಪ್ರಯಾ­ಣಿಕ ಸ್ನೇಹಿ ಅಲ್ಲದ ಲಾಂಜ್ ಕಲ್ಪನೆ­ಯಲ್ಲಿ ಒಳ ಪ್ರವೇಶಿಸಿದೆ. ಒಳಗೆ ಕಾಲಿಡು­ತ್ತಿದ್ದಂತೆ ನನಗೆ ಆಶ್ಚರ್ಯ ಕಾದಿತ್ತು. ವಿಶಾಲ ಪ್ರದೇಶದಲ್ಲಿನ ಹೊಸ ಲಾಂಜ್‌ನ  ವೈಭವ ಕಂಡು ಬೆರಗಾದೆ. ಅಲ್ಲಿನ ವಿನ್ಯಾಸ, ಪ್ರಯಾ­ಣಿಕರು ಕುಳಿತು­ಕೊಳ್ಳಲು ಮಾಡಿರುವ ವ್ಯವಸ್ಥೆ, ಅಚ್ಚುಕಟ್ಟುತನ, ಒಳಾಂಗಣ ವಿನ್ಯಾಸ ಉಲ್ಲಾಸ­ಮಯವಾಗಿತ್ತು. ಕಣ್ಣಿಗೂ ಹಿತಕರವಾಗಿತ್ತು.

ಅದೊಂದು ಸಾರ್ವಜನಿಕ ಸ್ಥಳವಾ­ಗಿದ್ದರೂ ಪ್ರಯಾಣಿಕರ ಖಾಸಗಿತನಕ್ಕೆ ಸಾಕಷ್ಟು ಮಹತ್ವ ನೀಡಲಾಗಿತ್ತು. ಪಂಚತಾರಾ ಹೋಟೆಲ್‌ನಲ್ಲಿ ಮಾತ್ರ ಕಾಣಬಹುದಾದ ಬಾರ್ ಲಾಂಜ್ ಮತ್ತು ವೃತ್ತಿನಿರತರ ಸೇವೆ ಗಮನ ಸೆಳೆಯು­ವಂತಿತ್ತು. ಅನೇಕ ಪ್ರಯಾಣಿ­ಕರು ಬಾರ್ ಕೌಂಟರ್‌ನಲ್ಲಿ ಕುಳಿತು ತಮ್ಮ ದಾಹ ತಣಿಸಿ­ಕೊಳ್ಳು­­ತ್ತಿರುವುದು ಕಣ್ಣಿಗೆ ಬಿದ್ದಿತು.

ನನಗೆ ಮಾತ್ರ  ಆ ಹೊತ್ತಿಗೆ ಅಲ್ಪ ಉಪಾ­­ಹಾರದ ಅಗತ್ಯ ಇತ್ತು. ದೋಸೆ ಕೌಂಟರ್‌ನಲ್ಲಿ ಸ್ಥಳೀಯ ತಾಜಾ ತಿನಿಸುಗಳು ಲಭ್ಯ ಇದ್ದವು. ನಾಲಿಗೆಗೆ ರುಚಿಸದ ಅಷ್ಟೇನೂ ಆರೋಗ್ಯಕರ­ವಲ್ಲದ ಪಾಶ್ಚಿಮಾತ್ಯ ಆಹಾರ ಪದಾರ್ಥಗಳ ಬದಲಿಗೆ ಸ್ಥಳೀಯ ಆಹಾರವೂ ಅಲ್ಲಿ ದೊರೆ­ಯು­ವಂತೆ ಮಾಡಿರುವ ಲಾಂಜ್‌ನ ಆಹಾರ ವಿಭಾಗದ ಸಿಬ್ಬಂದಿಗೆ  ಧನ್ಯವಾದ ಹೇಳಲೇಬೇಕು.

ಬಹಳ ಸಮಯದ ನಂತರ ನನಗೆ ದೇಶಿ ವಿಮಾನ ನಿಲ್ದಾಣಗಳಲ್ಲಿನ ಬಿಸಿನೆಸ್ ಲಾಂಜ್‌ನಲ್ಲಿ ಹಿತಾನುಭವ ಆಯಿತು. ದೇಶಿ ವಿಮಾನ ನಿಲ್ದಾಣಗಳ ಲಾಂಜ್‌ಗಳನ್ನು ಅದೆಷ್ಟು ಕಳಪೆಯಾಗಿ ನಿರ್ವಹಿಸಲಾ­ಗುತ್ತಿದೆ ಎನ್ನು­ವುದಕ್ಕೆ ನನ್ನ ಬಳಿ ಸಾಕಷ್ಟು ನಿದರ್ಶನಗಳಿವೆ.

ವಿದೇಶ ಪ್ರವಾಸ ಮುಗಿಸಿ ಮರಳಿ ಬಂದಾಗಲೂ ನನಗೆ ಇನ್ನೂ ಕೆಲ ಆಶ್ಚರ್ಯಕರ ಸಂಗತಿಗಳು ಕಾದಿದ್ದವು. ವಿದೇಶಗಳಿಂದ ಬರುವ ಎಲ್ಲ ಪ್ರಯಾಣಿ­ಕರು ಕಡ್ಡಾಯವಾಗಿ ತುಂಬುವ ಉದ್ದನೆಯ ಅರ್ಜಿಯಲ್ಲಿನ ಅನೇಕ ವಿವರಗಳಿಗೆ ವಲಸೆ ಅಧಿಕಾರಿಗಳು ಕತ್ತರಿ ಹಾಕಿದ್ದರು.

ಸ್ಥಳಾಂತರಗೊಂಡ ವಲಸೆ ವಿಭಾಗ­ದಲ್ಲಿ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸ­ಲಾಗಿತ್ತು. ಆ ಸ್ಥಳಕ್ಕೆ ಹೊಸ ಮೆರುಗು ನೀಡಲಾಗಿತ್ತು. ಈ ಕೌಂಟರ್‌ಗಳ ಬಳಿ ಪ್ರಯಾಣಿಕರು ಕಾಯ­ಬೇಕಾದ ಸಮ­ಯ­­ವನ್ನು ಗಮನಾರ್ಹವಾಗಿ ತಗ್ಗಿಸಲಾ­ಗಿತ್ತು.  ಪ್ರಯಾಣದಿಂದ ಬಳಲಿದ ಪ್ರಯಾಣಿಕರಿಗೆ ಇದೊಂದು ಅತಿ ದೊಡ್ಡ ಸಮಾಧಾನ ತರುವ ಸಂಗತಿಯಾಗಿದೆ.
ವಿದೇಶಿ ಪ್ರವಾಸಿಗರಿಗೆ  ಮೊದಲ ಬಾರಿ ಇಂತಹ ಅನುಭವ ಆದಾಗ ಅದರಿಂದಾಗುವ ಪ್ರತಿಕ್ರಿಯೆ ಉತ್ತೇಜನ­ಕಾರಿಯಾಗಿರುತ್ತದೆ. ಅಷ್ಟೇ ಅಲ್ಲದೇ ಸಕಾರಾತ್ಮಕ ಪರಿಣಾಮವನ್ನೂ  ಬೀರುತ್ತದೆ.

ಭಾರತಕ್ಕೆ ಬರುವ ವಿದೇಶಿ ಪ್ರವಾಸಿ­ಗರಿಗೆ ವೀಸಾ ಪಡೆಯುವುದೇ ದೊಡ್ಡ ಕಿರಿಕಿರಿ ಉಂಟು ಮಾಡುವ ಸಂಗತಿ­ಯಾಗಿದೆ.  ವಿದೇಶಗಳಿಂದ ಬಂದಿಳಿ­ಯುತ್ತಿದ್ದಂತೆ ನಿಲ್ದಾಣದಲ್ಲಿಯೇ ನೀಡ­ಲಾಗುವ ವೀಸಾ ಸೌಲಭ್ಯವು ಬಹುತೇಕ ದೇಶ­ಗಳ ಪ್ರಜೆಗಳಿಗೆ ನೀಡುವ ಪ್ರಕ್ರಿಯೆ ನಮ್ಮಲ್ಲೂ ಜಾರಿಗೆ ಬಂದಿದೆ. ಇದು ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡಲಿದೆ.
ಸರಕು ಸರಂಜಾಮು (ಬ್ಯಾಗೇಜ್) ನಿರ್ವ­ಹಣೆಯ ಹೊಸ ವ್ಯವಸ್ಥೆಯೂ ಅಂತರ­ರಾಷ್ಟ್ರೀಯ ವಿನ್ಯಾಸ ಒಳ­ಗೊಂಡಿದೆ. ಉದ್ದನೆಯ ಬೆಲ್ಟ್‌ನಿಂದಾಗಿ ಬ್ಯಾಗೇಜ್‌ ನಿರ್ವಹಣೆಯೂ ಈಗ ಇನ್ನಷ್ಟು ಸರಳಗೊಂಡಿದೆ.

ಕಸ್ಟಮ್ಸ್ ವಿಧಿವಿಧಾನಗಳು ಮಾಮೂ­­ಲಿ­­ನಂತೆ ಸುಲಭವಾಗಿದ್ದು, ಯಾರೇ ಆಗಲಿ ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.

ವಿಮಾನ ಭೂಸ್ಪರ್ಶ ಮಾಡಿದ ನಂತರ ನಿಲ್ದಾಣದ ಟರ್ಮಿನಲ್‌ನಿಂದ ನಾನು ಹೊರ­ಬರಲು ಸರಿಯಾಗಿ 14 ನಿಮಿಷಗಳನ್ನಷ್ಟೇ ತೆಗೆದು­ಕೊಂಡೆ. ಇದಂತೂ ನಿಜಕ್ಕೂ ವಿಸ್ಮಯ ಮೂಡಿ­ಸುವಂತಹದ್ದು. ಬಿಸಿನೆಸ್ ಕ್ಲಾಸ್ ಪ್ರಯಾಣಿಕರು ಮಾತ್ರ ಇಂತಹ ವಿಶೇಷ ಸೌಲಭ್ಯ ಪಡೆಯಲು ಅರ್ಹರಾಗಿದ್ದರೆ, ಎಲ್ಲರೂ ಈ ವರ್ಗದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲವಲ್ಲ ಎಂದು ನಾನು ಮನದಲ್ಲಿಯೇ ಲೆಕ್ಕ ಹಾಕಿದ್ದೆ.  ಮರು ದಿನ ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು, ನ್ಯೂಜಿಲೆಂಡ್‌ನಿಂದ ಬಂದಿಳಿದ ನನ್ನ ಸಂಬಂಧಿಯೊಬ್ಬ  ಇಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದ್ದ. ಅವನೂ ನಿಲ್ದಾಣದಿಂದ ಹೊರ ಬರಲು 15 ನಿಮಿಷ ತೆಗೆದುಕೊಂಡಿದ್ದ.

ವರ್ಷಗಳ ಹಿಂದೆ ಎಚ್‌ಎಎಲ್ ವಿಮಾನ ನಿಲ್ದಾಣ ಕಾರ್ಯನಿರ್ವಹಿ­ಸುತ್ತಿದ್ದಾಗ ಇದ್ದ ಪರಿಸ್ಥಿತಿಗೆ ಹೋಲಿ­ಸಿದರೆ ಇದೊಂದು ಕನಸಿನಂತೆ ಭಾಸವಾ­ಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನಿಲ್ದಾಣದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಮೇಲ್ಸೇತುವೆ ಸರಾಗ ಮತ್ತು ತ್ವರಿತ ಪ್ರಯಾಣಕ್ಕೆ ನೆರವಾ­ಗುತ್ತಿದೆ. ಒಂದು ಗಂಟೆಗಿಂತ ಕಡಿಮೆ ಸಮಯದಲ್ಲಿ ನಾನು ಮನೆಯಲ್ಲಿದ್ದೆ.

ದೇಶದಲ್ಲಿ ನಡೆಯುತ್ತಿರುವ ಮೂಲ ಸೌಕರ್ಯ ಯೋಜನೆಗಳ ಪ್ರಗತಿಯ  ಫಲವಾಗಿ  ಅಪರೂಪಕ್ಕೆ  ಎಂಬಂತೆ ನಾಗರಿಕರಿಗೆ ಇಂತಹ ಅನುಭವ ಉಂಟಾ­ಗುತ್ತಿದೆ. ವಿಮಾನ ನಿಲ್ದಾಣ­ವೊಂದು ಸುಲಲಿತವಾಗಿ ಕಾರ್ಯ ನಿರ್ವಹಿಸು­ವಂತಾಗಲು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಇತರ ಹಲವು ಸಂಸ್ಥೆಗಳು ಪರಿಪೂರ್ಣ­ವಾದ ಸಮ­ನ್ವಯ­ತೆಯಿಂದ ಕಾರ್ಯ­ನಿರ್ವಹಿ­ಸು­ವುದು ಅನಿವಾರ್ಯ. ಈ ಪರೀಕ್ಷೆಯಲ್ಲಿ ಕೆಂಪೇ­ಗೌಡ ವಿಮಾನ ನಿಲ್ದಾಣವು ಪೂರ್ಣ ಅಂಕ­ಗಳೊಂದಿಗೆ ಉತ್ತೀರ್ಣ­ಗೊಂಡಿದೆ. ಅಂತರ­ರಾಷ್ಟ್ರೀಯ ನಿಲ್ದಾಣ­ಗಳಿಗೆ ಸಂಪರ್ಕ ಕೊಂಡಿ­ಯಾಗಿ ಕಾರ್ಯ ನಿರ್ವಹಿಸಲು ಈ ನಿಲ್ದಾಣವು ಈಗ ಎಲ್ಲ ಅರ್ಹತೆಗಳನ್ನು ಹೊಂದಿದಂತಾಗಿದೆ.  

ದೇಶದ ವಿಮಾನ ಪ್ರಯಾಣ ವಹಿವಾಟು ಹಠಾತ್ತಾಗಿ ಆಸಕ್ತಿದಾಯಕ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಏರ್ ಏಷ್ಯಾ ಮತ್ತು ಜೆಟ್–  ಇತಿಹಾದ್ ಜಂಟಿ ಯೋಜನೆಯು ಅಂತರರಾಷ್ಟ್ರೀಯ ವಿಮಾನ ರಂಗದಲ್ಲಿ ಹೊಸ ಸಂಸ್ಥೆಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ.

ಅಗ್ಗದ ವಿಮಾನ ಯಾನಕ್ಕೆ ಏರ್ ಏಷ್ಯಾ ಪರಿಪೂರ್ಣ ಮಾದರಿಯಾಗಿದೆ.  ಪೂರ್ವದ ದೇಶಗಳಿಗೆ ಪ್ರಯಾಣ ಮಾಡುವ ದೇಶಿ ಪ್ರಯಾ­ಣಿಕರಿಗೆ ಹೊಸ ಆಯ್ಕೆಗಳನ್ನು ಮುಂದಿಟ್ಟಿದೆ.

ಬೇಸಿಗೆ ರಜಾ ದಿನಗಳಲ್ಲಿ ಈ ಸಂಸ್ಥೆ ಕೊಡ ಮಾಡುವ ರಿಯಾಯ್ತಿಗಳು ವಿದೇಶ ವಿಮಾನ ಪ್ರಯಾಣ ರಂಗದಲ್ಲಿ ಆಮೂಲಾಗ್ರ ಬದ­ಲಾವಣೆ ತರಲಿವೆ. ಇದರಿಂದ ವಿಮಾನ ಯಾನ ರಂಗವು  ಎರಡಂಕಿಯ ಬೆಳವಣಿಗೆ ಕಾಣಲಿದೆ.
ಬೆಂಗಳೂರು ದಕ್ಷ ವಿಮಾನ ನಿಲ್ದಾಣ­ವಾಗಿ ರೂಪುಗೊಂಡಿರುವಾಗ ಏರ್ ಏಷ್ಯಾ ತನ್ನೆಲ್ಲ ಕಾರ್ಯಾಚರಣೆಗಳಿಗೆ ಚೆನ್ನೈ ಆಯ್ಕೆ ಮಾಡಿರು­ವುದು ಮಾತ್ರ ನನಗೆ ಆಶ್ಚರ್ಯ ಉಂಟು ಮಾಡಿದೆ.

ಟಾಟಾ ಸಂಸ್ಥೆಯ ಬೆಂಬಲ ಹೊಂದಿ­ರುವ ಏರ್ ಏಷ್ಯಾ, ಇತರ ವಿಮಾನ ಯಾನ ಸಂಸ್ಥೆಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ. ಇದರಿಂದ ಅಂತಿಮವಾಗಿ ಪ್ರಯಾಣಿಕರಿಗೆ ಹೆಚ್ಚು ಲಾಭ ದೊರೆಯಲಿದೆ.

ಇತಿಹಾದ್‌ ಏರ್‌ಲೈನ್ಸ್, ಜಾಗತಿಕ ವಿಮಾನ ಯಾನ ಉದ್ದಿಮೆಯಲ್ಲಿ ಹೊಸ ಅಲೆ ಸೃಷ್ಟಿಸುತ್ತಿದೆ. ಪ್ರಾದೇಶಿಕ ವಿಮಾನ ಯಾನ ಸಂಸ್ಥೆಗಳ ಜಂಟಿ ಪಾಲುದಾರಿ­ಕೆಯಡಿ ವಹಿ­ವಾಟು ವಿಸ್ತರಿಸಲು ಹೊರಟಿದೆ. ಸ್ಪರ್ಧೆ ತೀವ್ರ­ಗೊಳ್ಳುತ್ತಿದ್ದಂತೆ ಭಾರತದಿಂದ ಯೂರೋಪ್ ಮತ್ತು ಅಮೆರಿಕದ ಮಾರ್ಗದಲ್ಲಿ ಆಸಕ್ತಿದಾ­ಯಕ ಸ್ಪರ್ಧೆ ನಡೆಯಲಿದೆ.
ಇತಿಹಾದ್, ಅಬುಧಾಬಿ ಕೇಂದ್ರವಾಗಿ­ಟ್ಟು­ಕೊಂಡು ತನ್ನ ಜಾಗತಿಕ ಸೇವೆ  ವಿಸ್ತರಿಸುತ್ತಿದೆ. ಇದಕ್ಕೆ ಜೆಟ್‌ ಏರ್‌ವೇಸ್‌ನ ಭಾರತದಲ್ಲಿನ ಪೂರಕ ಸೇವೆ ನೆರವಾಗುತ್ತಿದೆ.

ಇತಿಹಾದ್ ಏರ್‌ಲೈನ್ಸ್ ತುಂಬ ಸ್ಪರ್ಧಾತ್ಮಕ­ವಾಗಿ ಮುನ್ನುಗ್ಗುತ್ತಿದ್ದು, ಅದರ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಹೊಸ ಬ್ರ್ಯಾಂಡ್‌ನ ವಿಮಾನಗಳು, ಉತ್ತಮ ಸೌಲಭ್ಯಗಳೂ ಇದಕ್ಕೆ ನೆರವಾಗುತ್ತಿವೆ.

ಈ ಎಲ್ಲ ಬದಲಾವಣೆಗಳು ದೇಶದ ಮತ್ತು ಬೆಂಗಳೂರಿನ  ವಿಮಾನ ಯಾನ ರಂಗದಲ್ಲಿ ತ್ವರಿತ­ವಾಗಿ ಬದಲಾವಣೆ ತರುತ್ತಿವೆ. ವಿಮಾನ ಯಾನ ರಂಗದಲ್ಲಿ ಪ್ರಯಾಣಿಕನೇ ದೊರೆ ಎನ್ನುವ ಭಾವನೆ ಈಗ ಇನ್ನಷ್ಟು ಗಟ್ಟಿಯಾಗುತ್ತಿದೆ.
  
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT