ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಕ್ಕೆ ಕಾರಣವಾದ ದುರ್ಗಾದೇವಿ ನಾಣ್ಯ

Last Updated 14 ಜನವರಿ 2014, 19:30 IST
ಅಕ್ಷರ ಗಾತ್ರ

‘ವಿನಾಶ ಕಾಲೇ ವಿಪರೀತ ಬುದ್ಧಿ’ ಎನ್ನುವುದು ಒಂದು ಸಂಸ್ಕೃತದ ಮಾತು. ಇದು  ಸರಳವಾಗಿ ಎಲ್ಲರಿಗೂ ಅರ್ಥ­ವಾಗುವ ಮಾತೂ ಹೌದು. ‘ವಿನಾಶ’ ಎಂದರೆ ನಾಶ, ‘ಕಾಲೇ’ ಎಂದರೆ ಸಮಯ, ‘ವಿಪರೀತ’ ಎಂದರೆ ಪ್ರಜ್ಞೆಯೇ ಇಲ್ಲದ ಹಾಗೂ ‘ಬುದ್ಧಿ’ ಎಂದರೆ ಚಿಂತನೆ ಅಥವಾ ಕ್ರಿಯೆ ಎಂದು ಅರ್ಥ. ಕೇಂದ್ರ ಸರ್ಕಾರ ಇಂತಹ ಒಂದು ಸ್ಥಿತಿಯಲ್ಲಿ ಇದೆ ಎಂದೇ ಭಾಸವಾಗುತ್ತದೆ. ಹಣಕಾಸು ಸಚಿವಾ­ಲಯ ಕೈಗೊಂಡ ನಿರ್ಧಾರ­ವನ್ನು ಇದಕ್ಕಿಂತ ಬೇರೆ ರೀತಿಯಲ್ಲಿ  ವಿವರಿಸಲು ನನ್ನಿಂದ ಸಾಧ್ಯವಿಲ್ಲ.

ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್‌­ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖ­­ಲಿ­­­­ಸ­ಲಾಗಿದೆ. ಚಲಾವಣೆಗೆ ತರಲಾದ  ನಾಣ್ಯ­­­ಗಳಲ್ಲಿ ದುರ್ಗಾದೇವಿಯ ಚಿತ್ರ ಇರುವು­ದನ್ನು ಆಕ್ಷೇಪಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಈ ನಾಣ್ಯಗಳ ಒಂದು ಬದಿಯಲ್ಲಿ ವೈಷ್ಣೋದೇವಿಯ ಚಿತ್ರ ಇದ್ದರೆ, ಇನ್ನೊಂದು ಬದಿಯಲ್ಲಿ ವೈಷ್ಣೋ­ದೇವಿ ಮಂಡಳಿಯ ಹೆಸರಿದೆ. ಸರ್ಕಾರದ ಈ ಕ್ರಮಕ್ಕೆ ಹಲವಾರು ವಿವಾದದ ರೆಕ್ಕೆ ಪುಕ್ಕಗಳು ಹುಟ್ಟಿ­ಕೊಂಡಿದ್ದು, ದೇಶದ ಉದ್ದಗಲಕ್ಕೆ ವ್ಯಾಪಕ ಚರ್ಚೆಯಾಗತೊಡಗಿದೆ.

ಪ್ರಾಚೀನ ಕಾಲದಿಂದಲೂ ನಾಣ್ಯಗಳ ಚಲಾ­ವಣೆ ಅಸ್ತಿತ್ವದಲ್ಲಿ ಇದೆ. ವ್ಯಾಪಾರ ಮೌಲ್ಯವನ್ನು ಬಿಂಬಿಸುವ ಸಾಧನವೇ ನಾಣ್ಯ ಅಥವಾ ಹಣ ಎಂದು ಅನಾದಿ ಕಾಲದಿಂದ ಅರ್ಥೈಸಲಾಗು­ತ್ತಿದೆ. ಭಾರತ ಮತ್ತು ಚೀನಾದ ನಾಣ್ಯಗಳು ಕ್ರಿಸ್ತ ಪೂರ್ವ ೬೦೦ರಿಂದ ೫೦೦ರಷ್ಟು ಹಿಂದಿನ ಇತಿಹಾಸಕ್ಕೆ ಸಾಕ್ಷಿಯಾಗುತ್ತವೆ. ಅಲ್ಲಿಂದೀಚೆಗೆ ಭಾರತದ ನಾಣ್ಯಗಳು ಹಲವಾರು ಆಕಾರದಲ್ಲಿ, ಲೋಹಗ­ಳಲ್ಲಿ, ಚಿಹ್ನೆಗಳಲ್ಲಿ, ಸಂಕೇತಗಳಲ್ಲಿ ಮತ್ತು ಬಿಂಬಗಳಲ್ಲಿ ಕಾಣಿಸಿಕೊಂಡಿವೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಉಕ್ಕಿನ ಹಲವಾರು ವೈವಿಧ್ಯ­­­­ಗಳು ಮತ್ತು ಅಲ್ಯು­ಮಿನಿಯಂನ ನಾಣ್ಯ­ಗಳು ಬಳಕೆಗೆ ಬಂದಿವೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸು­­­­ವವರೆಗೆ ಹಲವಾರು ಬಗೆಯ ನಾಣ್ಯಗಳು ಚಲಾವಣೆಯಲ್ಲಿ ಇದ್ದವು. ಜತೆಗೆ ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರದ ನಾಣ್ಯಗಳೂ ಇದ್ದವು. ಮದ್ರಾಸ್, ಬಾಂಬೆ, ಕೋಲ್ಕತ್ತ ಪ್ರೆಸಿಡೆನ್ಸಿಗಳ  ವಿವಿಧ ನಾಣ್ಯಗಳು ಸಹ ಚಾಲ್ತಿಯಲ್ದಿದ್ದವು. ಬ್ರಿಟಿಷ್ ಆಡಳಿತ ಕೊನೆಗೆ ಇವೆಲ್ಲವನ್ನೂ ರದ್ದು­ಗೊಳಿಸಿ ನಾಣ್ಯಗಳಲ್ಲಿ ಏಕರೂಪತೆ ತರುವು­ದಕ್ಕಾಗಿ ‘ರುಪಯ್ಯಾ’ವನ್ನು ಅಧಿಕೃತ ಕರೆನ್ಸಿ­ಯಾಗಿ ಘೋಷಿಸಿತು.  ಬ್ರಿಟಿಷ್ ದೊರೆಗಳ ಚಿತ್ರ­ದೊಂದಿಗೆ ಹೆಚ್ಚಿನ ನಾಣ್ಯಗಳನ್ನು ಅಚ್ಚು ಹಾಕಿಸ­ಲಾಗುತ್ತಿತ್ತು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ನಾಣ್ಯ­ಗಳನ್ನು ಅಚ್ಚು ಹಾಕಿಸಿ ಚಲಾ­ವಣೆಗೆ ತರುವ ಸಂಪೂರ್ಣ ಆಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಭಾರತೀಯ ನಾಣ್ಯ ಕಾಯ್ದೆಯ (ಕಾಯಿ­ನೇಜ್ ಆ್ಯಕ್ಟ್ ಆಫ್ ಇಂಡಿಯಾ) ಮಾರ್ಗದರ್ಶ­ನ­ದಲ್ಲೇ ನಾಣ್ಯ ಟಂಕಿಸುವ ಕಾರ್ಯ ನಡೆಯು­ತ್ತದೆ. ನಾಣ್ಯದ ವಿನ್ಯಾಸ ಮತ್ತು ಇತರ ವಿಚಾರ­ಗಳು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ನಾಣ್ಯ­ಗಳ ವಿತರಣೆ ಕಾರ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ದೇಶದಾದ್ಯಂತದ ತನ್ನ ಹಲ­ವಾರು ಶಾಖೆಗಳ ಮೂಲಕ ಮಾಡುತ್ತದೆ.

ಸ್ವಾತಂತ್ರ್ಯಾ­ನಂತರ ರೂಪಾಯಿ ಮೌಲ್ಯಕ್ಕೆ ತಕ್ಕಂತೆ ಹಲವಾರು ಬಗೆಯ ಹಾಗೂ ಹಲವು ಮುಖ­ಬೆಲೆ ಹೊಂದಿರುವ ನಾಣ್ಯಗಳನ್ನು ಟಂಕಿಸಿ ಚಲಾವ­­ಣೆಗೆ ತರಲಾಗಿದೆ. ಸಾಮಾನ್ಯ­ವಾಗಿ ನಾಣ್ಯಗಳ ಒಂದು ಬದಿಯಲ್ಲಿ ಮೂರು ತಲೆಯ ಸಿಂಹದ ಚಿತ್ರವಿದ್ದರೆ, ನಾಣ್ಯದ ಮೌಲ್ಯ ಇನ್ನೊಂದು ಬದಿಯಲ್ಲಿ ಇರುತ್ತದೆ.
ರಾಷ್ಟ್ರೀಯ ಮಹತ್ವ ನೋಡಿಕೊಂಡು ಸರ್ಕಾರ, ಸ್ಮರಣೆ ಉದ್ದೇಶದ ನಾಣ್ಯಗಳನ್ನೂ ಟಂಕಿಸುತ್ತದೆ. ಆದರೆ, ಇವುಗಳ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಇಂತಹ ನಾಣ್ಯಗಳನ್ನು ಚಲಾವಣೆಗಾಗಿ ಬಳಸಿಕೊಳ್ಳುವು­ದಿಲ್ಲ. ಈ ನಾಣ್ಯಗಳ ಮೌಲ್ಯವೂ ಸಾಮಾನ್ಯವಾಗಿ ಅಧಿಕವಾಗಿರುತ್ತದೆ.

ಮಹಾತ್ಮ ಗಾಂಧಿ, ಸುಭಾಷ­ಚಂದ್ರ ಬೋಸ್ ಅವರಂತಹ ಮಹಾ ನಾಯಕ­ರಿಗೆ ಗೌರವ ಸೂಚಕವಾಗಿ ಅವರ ಚಿತ್ರದೊಂದಿಗೆ ನಾಣ್ಯಗಳನ್ನು ಹೊರತಂದಿದ್ದೂ ಇದೆ. ಆದರೆ, ಸರ್ಕಾರ ಇದುವರೆಗೆ ಧರ್ಮಕ್ಕೆ ಸಂಬಂಧಿಸಿದ ಚಿತ್ರವನ್ನು ಒಳಗೊಂಡ ನಾಣ್ಯ­ಗಳನ್ನು ವ್ಯಾಪಕವಾಗಿ ಚಲಾವಣೆಗೆ ತಂದಿರಲಿಲ್ಲ. ಈ ವಿಚಾರ ಬಂದಾಗ ನನಗೊಂದು ವಿದ್ಯಮಾನ ನೆನಪಿಗೆ ಬರುತ್ತದೆ. ನಾಣ್ಯದ ಒಂದು ಬದಿಯಲ್ಲಿ ‘ಕೂಡಿಸು’ ಚಿಹ್ನೆ ಹಾಗೂ ಇನ್ನೊಂದು ಬದಿ­ಯಲ್ಲಿ ಮೂರು ತಲೆಯ ಸಿಂಹದ ಚಿತ್ರ ಇರುವ ನಾಣ್ಯ ಚಲಾವಣೆಗೆ ಬಂದಿತ್ತು.

ನಾಣ್ಯದಲ್ಲಿನ ಈ ಚಿಹ್ನೆ, ಕ್ರೈಸ್ತರ ಪವಿತ್ರ ಕ್ರಾಸ್ ಚಿಹ್ನೆಯನ್ನೇ ಹೋಲು­­ತ್ತಿದೆ ಎಂದು ಹೇಳಿ ಕ್ರೈಸ್ತ ಸಮುದಾಯ­ದವರು ಆಗ ತೀವ್ರ ಅಸಮಾಧಾನ ವ್ಯಕ್ತಪಡಿಸಿ­ದ್ದರು. ದೇಶದ ನಾಲ್ಕು ದಿಕ್ಕುಗಳನ್ನು ಪ್ರತಿಬಿಂಬಿ­ಸುವ ಅರ್ಥ ಈ ಚಿಹ್ನೆಯ ಹಿಂದೆ ಇದೆ ಎಂದು ಸರ್ಕಾರ ಆಗ ಹೇಳಿಕೊಂಡರೂ ಅದು ಯಾರಿಗೂ ಒಪ್ಪಿಗೆಯಾಗಲಿಲ್ಲ. ಕೊನೆಗೆ ಸರ್ಕಾರ ಸದ್ದಿ­ಲ್ಲದೇ ಇಂತಹ ನಾಣ್ಯ­ ಟಂಕಿಸುವುದನ್ನು ಸ್ಥಗಿತ­ಗೊಳಿಸಿತ್ತು.

ಭಾರತ ಜಾತ್ಯತೀತ ರಾಷ್ಟ್ರ. ಆಡಳಿತದ ಬುನಾದಿ­ಯಾಗಿರುವ ನಮ್ಮ ಸಂವಿಧಾನವು ಜಾತ್ಯ­ತೀತ, ಪ್ರಜಾಸತ್ತಾತ್ಮಕ ಗಣರಾಜ್ಯದ ತತ್ವ­ಗಳ ಆಧಾರದಲ್ಲಿ ರಚನೆಗೊಂಡಿದೆ. ಸರ್ಕಾರದ ಯಾವುದೇ ಕ್ರಿಯೆ ಅಥವಾ ನಿರ್ಧಾರ ಜಾತ್ಯತೀತ­ವಾಗಿರಬೇಕು ಹಾಗೂ ಆಡಳಿತದಲ್ಲಿ ಧರ್ಮ­ವನ್ನು ಹೊರಗಿಟ್ಟಿರಲೇಬೇಕು. ಸರ್ಕಾರದ ಯಾವುದೇ ಕಾರ್ಯವೂ ಪೂರ್ವಗ್ರಹ­ಪೀಡಿತ­ವಾಗಿ­ರಬಾರದು ಮತ್ತು ಅದರ ಕಾರ್ಯ­ಕ್ರಮ­ಗಳು ಯಾರಿಗೂ ಯಾವುದೇ ಸಂಶಯ ಬರ­ದಂತೆ ಇರಬೇಕಾಗಿರುತ್ತದೆ.

ನಾಣ್ಯಗಳನ್ನು ಟಂಕಿಸು­ವುದು ಸಹ ಸರ್ಕಾರದ ಸಹಜ ಕಾರ್ಯ­ಗಳಲ್ಲಿ ಒಂದು. ಆದರೆ ಸರ್ಕಾರದ ಇಂದಿನ ಕಾರ್ಯಗಳು ಜಾತ್ಯತೀತ ತತ್ವದಂತೆ ಇಲ್ಲ. ಇದು ಸಮಾಜದ ವಿವಿಧ ವರ್ಗಗಳ ವಿರೋಧಕ್ಕೂ ಕಾರಣವಾಗಿದೆ. ಸರ್ಕಾರದ ಉದ್ದೇಶವೇ ಇದೀಗ ಸಂಶಯಕ್ಕೆ ಎಡೆ ಮಾಡುವಂತಿದೆ. ಚುನಾವಣೆ ಸಮೀಪಿಸುತ್ತಿ­ರುವುದರಿಂದ ಒಂದು ಸಮುದಾಯ­ವನ್ನು ಸಂತುಷ್ಟಗೊಳಿಸಿ, ಲಾಭ ಗಳಿಸುವ ಉದ್ದೇಶ ಸರ್ಕಾರಕ್ಕೆ ಇರುವ ಶಂಕೆ­ಯನ್ನು ಈ ನಾಣ್ಯ ವಿದ್ಯಮಾನ ಹುಟ್ಟು­ಹಾಕಿದೆ.

ಇದು ನಿಜವೇ ಆಗಿದ್ದರೆ, ಇದೊಂದು ನಿರ್ದಿಷ್ಟ ಸಮುದಾಯದಲ್ಲಿ ಜನಪ್ರಿಯತೆ ಪಡೆ­ಯಲು ನಡೆಸಿದ ಹತಾಶ ಯತ್ನ ಎಂದೇ ಹೇಳ­ಬೇಕಾ­ಗುತ್ತದೆ. ಈಚೆಗೆ ಜನಪ್ರಿಯ ಟಿ.ವಿ. ಚಾನೆಲ್ ಒಂದರ ಚರ್ಚೆಯಲ್ಲಿ ನಾನೂ ಭಾಗಿ­ಯಾಗಿದ್ದೆ. ಅಲ್ಲಿ ಪಾಲ್ಗೊಂಡಿ­ದ್ದವರು ವಿವಿಧ ಸಾಮಾ­ಜಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿದ್ದರು. ಸರ್ಕಾರದ ನಾಣ್ಯ ಟಂಕಿಸುವ ಈ ಕ್ರಮ ಅಸಮರ್ಥನೀಯ ನಿಲುವು ಎಂಬುದು ಎಲ್ಲರ ಅಭಿಮತವಾಗಿತ್ತು.

ನಾಣ್ಯ ಟಂಕಿಸುವ ತನ್ನ ಕ್ರಮವನ್ನು ಸರ್ಕಾರ ಕಾನೂನು ಪ್ರಕಾರ ಮತ್ತು ವಿಚಾರವಾದದ ದೃಷ್ಟಿ­­ಕೋನದಿಂದ ಸಮರ್ಥಿಸಿಕೊಂಡಿರಬಹುದು, ಆದರೆ, ಸರ್ಕಾರ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲ­ವಾಗಿದೆ ಎಂದೇ ಹೇಳಬೇಕು. ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿ ಒಳಗೊಂಡ ಭಾರತದ ನಾಗರಿಕರಲ್ಲಿ ನಂಬಿಕೆ­ಗಳು, ಆಚರಣೆ­ಗಳು ಹುಟ್ಟಿನಿಂದಲೇ ಅಂತರ್ಗತ­ವಾಗಿ­ರುತ್ತವೆ. ಸರ್ಕಾರ  ಮುನ್ನಡೆಸುವ ಬುದ್ಧಿ­ವಂತ ಜನರು ಇಂತಹ ವಿಚಾರ­ಗಳನ್ನು ಅರ್ಥ ಮಾಡಿಕೊಂಡಿ­ರಬೇಕಿತ್ತು. ಇಂತಹ ನಾಣ್ಯಗಳನ್ನು ಈ ಹಿಂದಿನಂತೆ ‘ಸ್ಮರಣಾರ್ಥ ನಾಣ್ಯ’ ಎಂಬ ರೀತಿಯಲ್ಲಷ್ಟೇ ಹೊರತರಬೇಕಿತ್ತು.

ದೇಶ ಇಂದು ಹಲವಾರು ಕ್ಷೇತ್ರಗಳಲ್ಲಿ ಅಭಿವೃ­ದ್ಧಿಯ ಸವಾಲುಗಳನ್ನು ಎದುರಿ­ಸುತ್ತಿದೆ. ಆದರೆ, ಇಂತಹ ಅನಗತ್ಯ ವಿವಾದಕ್ಕೆ ಅವಕಾಶ ಮಾಡಿ­ಕೊಡುವ ಸೂಕ್ಷ್ಮ ವಿಚಾರಗಳೇ ಸರ್ಕಾರದ ಸಮಯ ಮತ್ತು ಸಂಪನ್ಮೂಲವನ್ನು  ಹರಣ ಮಾಡು­ತ್ತಿರುವುದನ್ನು ನೋಡಿದಾಗ ಇದಕ್ಕೆ ‘ವಿಪರೀತ ಬುದ್ಧಿ’ ಎಂದು ಹೇಳದೆ ಬೇರೆ ದಾರಿಯೇ ಇಲ್ಲ. ತೀರ ವಿಳಂಬವಾಗುವ ಮೊದಲೇ ಸರ್ಕಾರ ಜಾಣತನದಿಂದ ವರ್ತಿಸಿ ಸೂಕ್ತ ಪರಿಹಾರ ಕ್ರಮ­ಗಳನ್ನು ಕೈಗೊಳ್ಳಲಿ ಎಂದೇ ನಾನು ಆಶಿಸುತ್ತೇನೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT